ಹೊಸ ಪುಸ್ತಕ

ಬಿ.ಆರ್.ವಾಡಪ್ಪಿ
ಲಲಿತ ಪ್ರಬಂಧಗಳ ಸಂಗ್ರಹ
ಸಂಪಾದಕರು: ರಂಗನಾಥ ವಾಡಪ್ಪಿ, ಶ್ರೀನಿವಾಸ
ವಾಡಪ್ಪಿ

ಪುಟ: 372 ಬೆಲೆ: ರೂ. 400
ಮನೋಹರ ಗ್ರಂಥಮಾಲಾ
ಲಕ್ಷ್ಮೀಭವನ, ಸುಭಾಶ್ ರಸ್ತೆ, ಧಾರವಾಡ
ಪ್ರಥಮ ಮುದ್ರಣ: 2019

ಹಿರಿಯ ಸಾಹಿತಿ ಬಿ.ಆರ್.ವಾಡಪ್ಪಿ ಅವರ ಲಲಿತ ಪ್ರಬಂಧಗಳನ್ನು ಒಳಗೊಂಡ ಕೃತಿ. ಹದಿನೈದು ವರ್ಷಗಳ ಹಿಂದೆ ಅಗಲಿರುವ ವಾಡಪ್ಪಿ ಅವರ ಬರಹಗಳು ಒಟ್ಟಾಗಿ ಲಭ್ಯವಿಲ್ಲದ ಸಂದರ್ಭ, ಅವರ ಮಕ್ಕಳು ಈ ಕೃತಿಯನ್ನು ಸಂಪಾದಿಸಿದ್ದಾರೆ. ಬಿ.ಆರ್. ವಾಡಪ್ಪಿ ಅವರ ಓದುಗಬಳಗಕ್ಕೆ ವಾಡಪ್ಪಿ ಹರಟೆಯ ರುಚಿಯನ್ನು ಮತ್ತೆ ನೀಡಬಲ್ಲ ಕೃತಿಯಿದು.


ಕಾರ್ಗಿಲ್ ವೀರ
(ಮತ್ತು ಇತರ ಕಿರು ನಾಟಕಗಳು)

ಡಾ.ಉಪ್ಪಂಗಳ ರಾಮ ಭಟ್ಟ
ಪುಟ: 88, ಬೆಲೆ: ರೂ.80
ಅಕಲಂಕ ಪ್ರತಿಷ್ಠಾನ, ‘ಪರಾಶರ’ 8-1-64ಬಿ,
ಸುಧೀಂದ್ರತೀರ್ಥ ಮಾರ್ಗ,
ಕುಂಜಿಬೆಟ್ಟು, ಉಡುಪಿ- 576102
ಪ್ರಥಮ ಮುದ್ರಣ: 2019

ಈ ನಾಟಕ ಕೃತಿಯು ಕಾರ್ಗಿಲ್ ವೀರ, ಹಕ್ಕಿ ಮರಳಿತು ಗೂಡಿಗೆ, ಶಬರ ಶಂಕರ, ಹಾಗೂ ಅತಿಥಿ ವಧು ಎಂಬ ನಾಲ್ಕು ನಾಟಕಗಳನ್ನು ಒಳಗೊಂಡಿದೆ. ಕಡಿಮೆ ಅವಧಿಯಲ್ಲಿ ಪ್ರದರ್ಶನ ಮಾಡಬಹುದಾದ ಈ ನಾಟಕಗಳು ಬಹುತೇಕ ಸುಖಾಂತ್ಯವನ್ನು ಕಾಣುವ ಧನಾತ್ಮಕ ನೆಲೆಗಟ್ಟಿನಲ್ಲಿ ರೂಪಿತವಾಗಿವೆ. ಕಾರ್ಗಿಲ್ ಯೋಧನೊಬ್ಬ ಮಡಿದ ಬಳಿಕ ಅವನ ಬಸುರಿ ಪತ್ನಿಯ ಬದುಕು ತಿರುವು ಪಡೆಯುವ ಬಗೆ ಕಾರ್ಗಿಲ್ ವೀರ ನಾಟಕದಲ್ಲಿದ್ದರೆ, ಮನೆ ಬಿಟ್ಟು ಓಡಿ ಹೋದ ಹೆಣ್ಣೊಬ್ಬಳನ್ನು ಮರಳಿ ಪೋಷಕರ ಕೈಗೊಪ್ಪಿಸುವ ಕಥೆ ಹಕ್ಕಿ ಮರಳಿತು ಗೂಡಿಗೆ ಎಂಬ ನಾಟಕದಲ್ಲಿದೆ. ಶಬರ ಶಂಕರ ಮತ್ತು ಅತಿಥಿ ವಧು ಪೌರಾಣಿಕ ಕಥಾಹಂದರದಿಂದ ಸಾಮಾಜಿಕ ವ್ಯವಸ್ಥೆಯ ಕಡೆ ಇಣುಕಿ ನೋಡುವ ಪ್ರಯತ್ನ. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಪ್ರಯೋಗಕ್ಕೆ ಸಹಕಾರಿಯಾಗುವ ನಾಟಕಗಳಿವು.


ಸಾಮಾನ್ಯರ ಸ್ವಾಮೀಜಿ
ಸಂಪಾದಕರು: ಚಂದ್ರಶೇಖರ ವಸ್ತ್ರದ

ಪುಟ: 296, ಬೆಲೆ: ರೂ. 150
ಕ್ಷಮಾ ಪ್ರಕಾಶನ,

‘ಬೆಳಗು’ ಆನಂದಾಶ್ರಮ ರಸ್ತೆ, ಪಂಚಾಕ್ಷರಿ ನಗರ, 6ನೇ ಕ್ರಾಸ್, ಗದಗ- 582101

ಇದು ಗದುಗಿನ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಕುರಿತ ಬರಹಗಳ ಸಂಗ್ರಹ. ಸಿದ್ಧಲಿಂಗ ಸ್ವಾಮೀಜಿ ಪೀಠಾರೋಹಣ ರಜತೋತ್ಸವ ಸಂದರ್ಭದಲ್ಲಿ ಅವರಿಗೆ ಗೌರವ ಸಲ್ಲಿಕೆಯಾಗಿ ಈ ಕೃತಿಯನ್ನು ರಚಿಸಲಾಗಿದೆ. ಸ್ವಾಮೀಜಿಯವರ ಒಡನಾಡಿದ ಹಲವಾರು ವ್ಯಕ್ರಿಗಳು ಇಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಿದ್ದಲಿಂಗ ಸ್ವಾಮೀಜಿಯವರ ವ್ಯಕ್ತಿತ್ವಗಳನ್ನು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಕಾಣಲು ಈ ಕೃತಿ ಅನುವು ಮಾಡಿಕೊಡುತ್ತದೆ.


ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್‍ಬರ್ಗ್
ನಾಗೇಶ ಹೆಗಡೆ

ಪುಟ: 124, ಬೆಲೆ: ರೂ.120
ಭೂಮಿ ಬುಕ್ಸ್, 150, ಮೊದಲ ಮುಖ್ಯರಸ್ತೆ,
ಶೇಷಾದ್ರಿಪುರಂ,
ಬೆಂಗಳೂರು- 560020
ಪ್ರಥಮ ಮುದ್ರಣ 2019

ವಿಜ್ಞಾನದ ಪ್ರಸಿದ್ಧ ಬರಹಗಾರ ನಾಗೇಶ ಹೆಗಡೆ ಅವರ ಇತ್ತೀಚಿನ ಕೃತಿಯಿದು. ಪರಿಸರ,ಭೂಮಿಯ ನಾಳೆಗಾಗಿ ಸ್ವೀಡನ್‍ನ ಪಾರ್ಲಿಮೆಂಟಿನ ಮುಂದೆ ಮುಷ್ಕರಕ್ಕೆ ಕೂತ ಹದಿನೈದರ ಹುಡುಗಿ ಗ್ರೇತಾ ಥನ್‍ಬರ್ಗ್ ಕುರಿತ ಈ ಕೃತಿ, ಪುಟ್ಟ ಹುಡುಗಿಯೊಬ್ಬಳ ಪ್ರತಿರೋಧ ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಿದ ಬಗೆಯನ್ನು ಹಂತ ಹಂತವಾಗಿ ಪರಿಚಯಿಸುತ್ತದೆ. ನಾಗೇಶ ಹೆಗಡೆಯವರ ಸರಳ ಶೈಲಿಯಲ್ಲಿ ಈ ಕೃತಿ ಹೆಚ್ಚು ಪರಿಣಾಮಕಾರಿಯಾಗಿ ಕಾಣಿಸುತ್ತದೆ. ಕೃತಿಗೆ ದೇವನೂರ ಮಹಾದೇವ ಅವರ ಮುನ್ನುಡಿ ಇನ್ನಷ್ಟು ಹಿಡಿತ ನೀಡಿದೆ.


ಕೊನೆಗೂ ಖರೆ ನಾಟಕಕಾರ ಆಗಲೇ ಇಲ್ಲ;
ಗಿರೀಶ್ ಕಾರ್ನಾಡ್
ಎನ್.ಕೆ.ಮೋಹನ್‍ರಾಂ

ಪುಟ: 167 ಬೆಲೆ: ರೂ.160
ಶಶಿಭ ಪ್ರಕಾಶನ,
ನಂ.2, 6ನೇ ಅಡ್ಡರಸ್ತೆ, ಮಲ್ಲೇಶ್ವರಂ
ಬೆಂಗಳೂರು- 560003

ಇದು ಗಿರೀಶ್ ಕಾರ್ನಾಡರ ಕುರಿತ ಒಂದು ವಿಶೇಷ ಕೃತಿ. ನಾಟಕಕಾರನೊಬ್ಬನ ಬದುಕನ್ನು ಇನ್ನೊಬ್ಬ ನಾಟಕಕಾರ ವಿಮರ್ಶಿಸುವ ಬಗೆಯನ್ನು ಈ ಕೃತಿಯಲ್ಲಿ ಕಾಣಬಹುದು. ಮೋಹನ್‍ರಾಂ ಸ್ವತಃ ರಂಗಕರ್ಮಿಯಾಗಿ, ಕಾರ್ನಾಡರ ಬದುಕಿನ ಕುರಿತು, ಹಲವು ದಿಸೆಗಳಲ್ಲಿ, ಹಲವಾರು ಪ್ರಮುಖ ಬರಹಗಾರರು, ವಿಮರ್ಶಕರು ಬರೆದ, ಆಡಿದ ಮಾತುಗಳನ್ನು ಕೂಡಾ ಸೇರಿಸಿಕೊಂಡು ಚರ್ಚೆಗೆ ಬಹುನೆಲೆಯನ್ನು ಒದಗಿಸಿದ್ದಾರೆ. ಕಾರ್ನಾಡರ ಏಳುಬೀಳುಗಳೂ ಇಲ್ಲಿ ಚರ್ಚೆಯಾಗಿವೆ. ಕೆಲವು ಲೇಖಕರು ಕಾರ್ನಾಡರ ಕುರಿತು ಹೇಳಿದ್ದನ್ನೂ ಇಲ್ಲಿ ಲೇಖಕರು ಟೀಕಿಸುತ್ತಾರೆ. ಕಾರ್ನಾಡರ ಕುರಿತು ಇನ್ನಷ್ಟು ಅರಿಯಲು ಓದಬಹುದಾದ ಕೃತಿಯಿದು.


ಲೇಖಕರ / ಪ್ರಕಾಶಕರ ಗಮನಕ್ಕೆ
ಹೊಸಪುಸ್ತಕ ಅಂಕಣದಲ್ಲಿ ಹೊಸತಾಗಿ ಹೊರಬಂದಿರುವ ಕೃತಿಗಳ ಕಿರು ಪರಿಚಯ ಮಾಡಲಾಗುತ್ತದೆ. ಅಲ್ಲದೆ ಆಯ್ದ ಕೃತಿಗಳನ್ನು ವಿಮರ್ಶೆಗೆ ಪರಿಗಣಿಸಲಾಗುವುದು. ಪುಸ್ತಕ ಪರಿಚಯ ಬಯಸುವ ಲೇಖಕರು, ಪ್ರಕಾಶಕರು ತಮ್ಮಲ್ಲಿನ ಹೊಸ ಪುಸ್ತಕಗಳ ಎರಡು ಪ್ರತಿಗಳನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.

ಚಿಂತನಶೀಲ ಸಮಾಜಮುಖಿ
ನಂ8, ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ),
ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ,
ಬೆಂಗಳೂರು- 560020


ಟಿ.ಸುನಂದಮ್ಮ
ಸಾಹಿತ್ಯ ಸಂಪುಟ- 2
ಸಂಪಾದನೆ: ಡಾ.ವಸುಂಧರಾ ಭೂಪತಿ

ಪುಟ: 254, ಬೆಲೆ: ರೂ.250
ಟಿ.ಸುನಂದಮ್ಮ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು
ಪ್ರಥಮ ಮುದ್ರಣ: 2019

ಹಾಸ್ಯಲೇಖಕಿ ಟಿ.ಸುನಂದಮ್ಮ ಅವರ ಹಲವು ಹಾಸ್ಯಬರಹಗಳನ್ನು ಎರಡು ಸಂಪುಟಗಳಾಗಿ ಹೊರತರಲಾಗಿದ್ದು, ಇದು 2ನೇ ಸಂಪುಟವಾಗಿದೆ. ಬೆರಳೆಣಿಕೆಯ ಸಂಖ್ಯೆಯ ಹಾಸ್ಯಲೇಖಕಿಯರಲ್ಲಿ ಸುನಂದಮ್ಮ ಒಬ್ಬರು. ಅವರ ಹಾಸ್ಯಬರಹಗಳ ಮರುಓದಿಗೆ, ಅವರ ಹಲವು ಪ್ರಸಿದ್ಧ ಬರಹಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಚಂದ್ರಲೋಕದ ಅತ್ತೆ ಭೂಲೋಕದ ಅಳಿಯ, ಮಾತಿನ ಮಂಟಪ, ಪ್ರಶಸ್ತಿ ಪ್ರಕರಣ, ಗ್ರಾಮೋದ್ಧಾರ ಮುಂತಾದ ಹಲವು ಲೇಖನಗಳನ್ನು ಈ ಕೃತಿ ಒಳಗೊಂಡಿದೆ.


ಸೂರ್ಯಾಸ್ತ
ಹೊಮೆನ್ ಬೊರ್ಗೊಹೈನ್
ಅನುವಾದ: ಚಿನ್ನವ್ವ ಚಂದ್ರಶೇಖರ ವಸ್ತ್ರದ

ಪುಟ: 120 ಬೆಲೆ: ರೂ. 125
ಸಾಹಿತ್ಯ ಅಕಾದೆಮಿ, ನವದೆಹಲಿ
ಪ್ರಥಮ ಮುದ್ರಣ 2019

ಮೂಲ ಅಸ್ಸಾಮಿ ಕಾದಂಬರಿಯಾಗಿರುವ ‘ಸೂರ್ಯಾಸ್ತ’ವನ್ನು ಅಶೋಕ ಭಗವತಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಮುಪ್ಪಿನ ಕುರಿತು ಹಲವು ಚಿತ್ರಣಗಳನ್ನು
ಕಟ್ಟಿಕೊಡುವ ಈ ಕಾದಂಬರಿ, ಸಹಜವಾಗಿ ಓದುಗರನ್ನು ಕಾಡಬಲ್ಲದು. ಮುಪ್ಪಿನಲ್ಲಿ ತನ್ನ ಅಸಹಾಯಕತೆಯನ್ನು ಅರಿತು, ನಿರ್ಲಿಪ್ತ ಭಾವವನ್ನು ತನ್ನಲ್ಲಿ ಬೆಳೆಸಿಕೊಳ್ಳುವ ವೃದ್ಧ ತಂದೆಯ ಪಾತ್ರ ಇಲ್ಲಿ ಮುಖ್ಯವಾಗುತ್ತದೆ. ವಯಸ್ಸಿನ ಜತೆಗೆ ಮನಸ್ಸು ಬದಲಾಗುವ ಸ್ಥಿತಿ ಇಲ್ಲಿ ಅವ್ಯಕ್ತ ಎಂಬಂತೆ ದಾಖಲಾಗಿದೆ.


ರಕ್ತದೊತ್ತಡ
ಡಾ.ಎನ್.ಗೋಪಾಲಕೃಷ್ಣ

ಪುಟ: 8+88, ಬೆಲೆ: ರೂ.95
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು
ಪ್ರಥಮ ಮುದ್ರಣ: 2019

ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾಹಿತಿಯನ್ನು ಒದಗಿಸಬಲ್ಲ ಉಪಯುಕ್ತ ಕೃತಿಯಿದು. ಆರೋಗ್ಯಕರ ಬದುಕಿಗೆ ತಿಳುವಳಿಕೆಯ ಜತೆಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ದೃಷ್ಟಿಯಿಂದ ಈ ಕೃತಿ ಒಂದು ಕೈಪಿಡಿ. ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಯೋಗದ ಕೆಲವು ಮುಖ್ಯ ಆಸನಗಳನ್ನು ಇಲ್ಲಿ ವೈದ್ಯರು ಸೂಚಿಸಿದ್ದಾರೆ. ಉತ್ತಮ ಆರೋಗ್ಯದ ಸಲಹೆಗಳನ್ನು ಈ ಕೃತಿ ನೀಡುತ್ತದೆ.


ಒಂದಾನೊಂದು ಕಾಲದಲ್ಲಿ
ಕವಿತೆಗಳು
ಸಿ.ಮ.ಗುರುಬಸವರಾಜ

ಪುಟ: 100, ಬೆಲೆ: ರೂ.100
ಪುಸ್ತಕ ಜಗತ್ತು ಪ್ರಕಾಶನ, ಹಗರಿಬೊಮ್ಮನಹಳ್ಳಿ
ಪ್ರಥಮ ಮುದ್ರಣ: 2019

ಹಲವು ಸಂವೇದನಾಶೀಲ ಕವಿತೆಗಳ ಜತೆಗೆ ಸಾಮಾಜಿಕ ಪ್ರಜ್ಞೆಯ ಕವಿತೆಗಳನ್ನು ಒಳಗೊಂಡ ಸಂಕಲನವಿದು. 50ಕ್ಕೂ ಹೆಚ್ಚು ಕವಿತೆಗಳಲ್ಲಿ ಹೆಚ್ಚಿನವು ಸಾಮಾಜಿಕ ಕಳಕಳಿ, ಆಶಾಭಾವದಿಂದ ಕೂಡಿವೆ. ಖರೀದಿಗೆ ಸಿಗುವುದಿಲ್ಲ ಎಲ್ಲವೂ, ಕಲ್ಯಾಣದ ಜ್ಯೋತಿ, ಒಂದಾನೊಂದು ಕಾಲದಲ್ಲಿ ಮುಂತಾದ ಕವಿತೆಗಳು, ಕವಿಯ ಆಲೋಚನಾ ಕ್ರಮದ ಭಿನ್ನತೆಯನ್ನು ಬಿಂಬಿಸುತ್ತವೆ. ಜಟಿಲತೆಯಿಲ್ಲದ ಕವಿಯ ಭಾಷೆ ಸಾಮಾನ್ಯ ಓದುಗರನ್ನೂ ಸುಲಭವಾಗಿ ತಲುಪುವಂತಿದೆ.


ಮಾಡಿ ಮಡಿದ ಮಹದೇವ ಮೈಲಾರ
ಸ್ವಾತಂತ್ರ್ಯ ಯೋಧನ ವೀರಗಾಥೆ
ಪ್ರೊ.ಎ.ಬಿ.ಹಿರೇಮಠ

ಪುಟ: 64, ಬೆಲೆ: ರೂ.70
ಯಶಸ್ವಿನಿ ಪ್ರಕಾಶನ, ಬಸವಬೆಳಕು,
ಮುಂಡರಗಿ- 582118
ಪ್ರಥಮ ಮುದ್ರಣ: 2019

ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹದೇವಪ್ಪ ಅವರ ವ್ಯಕ್ತಿಚಿತ್ರ ಒದಗಿಸುವ ಕೃತಿಯಿದು. ಗಾಂಧೀ ಆದರ್ಶಗಳನ್ನು ಮೈಗೂಡಿಸಿಕೊಂಡು ಮಾಡು ಇಲ್ಲವೆ
ಮಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮಹದೇವಪ್ಪ ಬ್ರಿಟಿಷರ ಗುಂಡಿಗೆ ಬಲಿಯಾಗಿ ಹುತಾತ್ಮರೆನಿಸಿಕೊಂಡವರು. ಮೈಲಾರ ಮಹದೇವಪ್ಪರ ಬದುಕನ್ನು ಇಂದಿನ ಪೀಳಿಗೆಯ ಯುವಕರಿಗೆ ಮಾದರಿಯಾಗಿಸುವ ನಿಟ್ಟಿನಲ್ಲಿ ಈ ಕೃತಿ ಹೊರತರಲಾಗಿದೆ.


ಖುಷಿ ತರಲಿ ಕೃಷಿ

ಪುಟ: 96, ಬೆಲೆ: ರೂ.125
ಪ್ರಥಮ ಮುದ್ರಣ: 2019

ಕೃಷಿಗೆ ಸಂಬಂಧಿಸಿದ ಲೇಖನಗಳ ಕೃತಿಯಿದು. ಇಲ್ಲಿರುವ ಲೇಖನಗಳೆಲ್ಲ ಕೃಷಿಕನಿಗೆ ಸ್ಪೂರ್ತಿ ತುಂಬುವ, ಸಲಹೆ ನೀಡುವಂಥವು. ರೈತರ ಆತ್ಮಹತ್ಯೆ ಕುರಿತಂತೆ, ಸಾಲ, ಕಷ್ಟನಷ್ಟದ ಕಡೆಗೆ ನೋಟ ಬೀರುವ ಲೇಖನಗಳು, ದನ ಕರುಗಳ ಜತೆಗಿನ ಒಡನಾಟ, ಉಳುವ ಭೂಮಿಯ ಜತೆಗಿನ ಸಂಬಂಧ ಮುಂತಾದ ವಿಚಾರಗಳ ಕುರಿತು ಸುಂದರವಾದ, ಆಪ್ತಭಾವ ಮೂಡಿಸುವ ಲೇಖನಗಳಿವೆ. ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ಈ ಕೃತಿ ಸ್ಪೂರ್ತಿಯಾಗಬಹುದು.

ದಾಂಪತ್ಯ ಗೀತೆಗಳು

ಪುಟ: 94, ಬೆಲೆ: ರೂ.110
ಪ್ರಥಮ ಮುದ್ರಣ: 2020

ಪ್ರೇಮಕಾವ್ಯದ ಯುಗದಲ್ಲಿ ದಾಂಪತ್ಯದ ಕುರಿತ ಗೀತೆಗಳು ಕಡಿಮೆ ಎಂದನಿಸುವ ಹೊತ್ತಲ್ಲೇ ಈ ಸಂಕಲನ ದಾಂಪತ್ಯಗೀತೆಗಳಿಗೆ ಮರುಜೀವ ಒದಗಿಸಿದಂತಿದೆ. ಸುಂದರವಾದ ಹಲವಾರು ಗೀತೆಗಳು ಈ ಕೃತಿಯಲ್ಲಿ ಗಮನಸೆಳೆಯುತ್ತವೆ. ಗಂಡ- ಹೆಂಡತಿಯ ನಡುವಿನ ಸಂಭಾಷಣೆಯ ರೂಪದಲ್ಲಿರುವ ಈ ಪದ್ಯಗಳು, ಎಲ್ಲಿಯೂ ನಿರಾಸೆಗೊಳಿಸುವುದಿಲ್ಲ. ‘ಸ್ವಾಂತಂತ್ರ್ಯೋತ್ಸವದ ಆಚರಣೆಯ ಸಂವಾದ ಗೀತೆ’ ಎಂಬ ಪದ್ಯದಲ್ಲಿ, ಸಾಧಾರಣ ಬದುಕಿನ ಆಲೋಚನೆಯಲ್ಲಿ ದಾಂಪತ್ಯದ ಇರವನ್ನು ಪರಿಗಣಿಸಿದ ಬಗೆ ವಿಶೇಷ ಅನಿಸುತ್ತದೆ.

ಅನುವಿನು
ಕವನ ಸಂಕಲನ

ಪುಟ: 96, ಬೆಲೆ: ರೂ.110
ಪ್ರಥಮ ಮುದ್ರಣ: 2019

73 ಕವಿತೆಗಳ ಈ ಸಂಕಲನ ಒಟ್ಟು ಸಾಮಾಜಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಲ್ಲಿನ ಬಹಳಷ್ಟು ಕವಿತೆಗಳು ಸ್ತ್ರೀ ಸಂವೇದನೆಗೆ ಧ್ವನಿಗೂಡಿಸುತ್ತವೆ. ಅಲ್ಲದೆ, ಪ್ರೀತಿ ಪ್ರೇಮ ಕಾಮಗಳ ಕುರಿತೂ ಶುದ್ಧ ಮನೋಭಾವನೆಯನ್ನು ಬೆಂಬಲಿಸುವ ಕವಿತೆಗಳಿವೆ. ಮೌಢ್ಯ, ತಾರತಮ್ಯ ಮುಂತಾದ ಸಾಮಾಜಿಕ ಮನಸ್ಥಿತಿಗಳಿಗೂ ಕವಿ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ.

ಮೇಲಿನ ಮೂರು ಕೃತಿಗಳ ಲೇಖಕರು: ಜೀವರಾಜ ಹ.ಛತ್ರದ
ಪ್ರಕಾಶಕರು: ಖುಷಿ ಪ್ರಕಾಶನ, #117, ಶ್ರಾವಣಿ ಪ್ಯಾಲೇಸ್, ಹಿರೇಹಳ್ಳಿ ಅಂಚೆ,
ತುಮಕೂರು- 572168.

Leave a Reply

Your email address will not be published.