ಹೊಸ ಪುಸ್ತಕ

ಸ್ತೋಮ

ಚನ್ನಪ್ಪ ಅಂಗಡಿ

ಪುಟ: 111, ಬೆಲೆ: ರೂ.100

ನಿವೇದಿತ ಪ್ರಕಾಶನ, 9ನೇ ಅಡ್ಡರಸ್ತೆ, ಶಾಸ್ತ್ರಿ ನಗರ, 
ಬಿಎಸ್‍ಕೆ 2ನೇ ಹಂತ, ಬೆಂಗಳೂರು-28

ಪ್ರಥಮ ಮುದ್ರಣ: 2019

ಹನ್ನೆರಡು ಕಥೆಗಳನ್ನೊಳಗೊಂಡ ಕಥಾ ಸಂಕಲನವಿದು. ಲೇಖಕರು ತಮ್ಮ ಬದುಕಿನ ಅನುಭವಗಳನ್ನು ಕಥನರೂಪಕ್ಕಿಳಿಸಿ, ಆಯಾ ಕಾಲದ ಸಾಮಾಜಿಕ ಸ್ಥಿತಿಯ ಪರಿಚಯ ಮಾಡುವ ಪ್ರಯತ್ನ ಮಾಡಿದ್ದಾರೆ. ಭಿನ್ನ ರೀತಿಯ ಕಥಾವಸ್ತುಗಳನ್ನಿಟ್ಟುಕೊಂಡು, ಆಧುನಿಕ ತಂತ್ರಜ್ಞಾನಗಳ ಪರಿಣಾಮ, ಹಳೆಕಾಲದ ಜೀವನ ಶೈಲಿ ಹಾಗೂ ಭೂಮಿ- ಬದುಕಿನ ಸಂಬಂಧಗಳ ಕುರಿತು ತಮ್ಮದೇ ಒಳನೋಟಗಳನ್ನು ಇಲ್ಲಿ ಬಿತ್ತರಿಸಿದ್ದಾರೆ. ಇಲ್ಲಿನ ಬಹಳಷ್ಟು ಕಥೆಗಳು ತಮ್ಮ ಸ್ವರೂಪ, ವಸ್ತು ಹಾಗೂ ಲೇಖಕರ ನಿರೂಪಣಾ ಶೈಲಿಯಿಂದ ಮುಖ್ಯವೆನಿಸುತ್ತವೆ.


ಅಂತರಾಳದ ಅರಳು

ಶಿವಮಾನ್ಯಪ್ಪ ಗೌ.ದೇಸಾಯಿ

ಪುಟ: 98, ಬೆಲೆ: ರೂ.80

ಸ್ನೇಹಪೂರ್ಣ ಪ್ರಕಾಶನ, ಗುರುಪಾದಸ್ವಾಮಿ ಸೇವಾಶ್ರಮ ಟ್ರಸ್ಟ್, ಮೇಗಲಪೇಟೆ, ಹರಪನಹಳ್ಳಿ -583131, ಬಳ್ಳಾರಿ ಜಿಲ್ಲೆ.

ಪ್ರಥಮ ಮುದ್ರಣ: 2019

ಇದು ಕಿರುಗವನ ಅಥವಾ ಹನಿಗವಿತೆಗಳ ಸಂಕಲನ. ವಚನದ ಮಾದರಿಯಲ್ಲಿ ರೂಪುಗೊಂಡ ಈ ಕವಿತೆಗಳು ಬದುಕಿನ ಸಾಮಾನ್ಯ ಸಂಗತಿಗಳನ್ನು ಸಕಾರಾತ್ಮಕವಾಗಿ ಎದುರಿಸಬೇಕಾದ ಬಗೆಯನ್ನು ನೆನಪಿಸುತ್ತದೆ. ಎಲ್ಲವೂ ಹಳತೇ, ಅವನ್ನು ಅಭಿವ್ಯಕ್ತಿಸುವ ಬಗೆಯಷ್ಟೇ ಹೊಸತು ಎನ್ನುವಂತೆ ಇಲ್ಲಿನ ಕಿರುಗವನಗಳು ಹೊಸ ಭಾಷಾ ಶೈಲಿಯ ಓದುಗರಿಗೆ ತಲುಪುತ್ತವೆ. ಸಾರ್ವಕಾಲಿಕ ವಚನಗಳ ಹೊಸ ಶೈಲಿಯ ಮುಂದುವರಿಕೆಯ ಹಾದಿ ಹಿಡಿಯುವ ಪ್ರಯತ್ನವನ್ನು ಕವಿ ಮಾಡಿದ್ದಾರೆ. ಬದುಕಿಗೆ ಆಪ್ತವೆನಿಸುವ ಹಲವು ಕವಿತೆಗಳು ಇಲ್ಲಿವೆ.


ಯುವ ನಾಯಕ ಎಂ.ಪಿ.ರವೀಂದ್ರ

ಎಂ.ಎಂ.ಶಿವಪ್ರಕಾಶ

ಪುಟ: 10+140, ಬೆಲೆ: ರೂ.100

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್

ಹರಪನಹಳ್ಳಿ- 583131, ಬಳ್ಳಾರಿ ಜಿಲ್ಲೆ.

ಪ್ರಥಮ ಮುದ್ರಣ: 2019

ಹೆಸರಾಂತ ರಾಜಕೀಯ ನಾಯಕ ಎಂ.ಪಿ.ಪ್ರಕಾಶ್ ಅವರ ಪುತ್ರ ಎಂ.ಪಿ.ರವೀಂದ್ರ ಅವರ ರಾಜಕೀಯ, ಸಾಮಾಜಿಕ ಸೇವೆಗಳ ಕುರಿತು ಬೆಳಕು ಚೆಲ್ಲುವ ಕೃತಿಯಿದು. ವರ್ಷದ ಹಿಂದೆ ಅಕಾಲಿಕವಾಗಿ ನಿಧನರಾದ ರವೀಂದ್ರ, ಹರಪನಹಳ್ಳಿಯನ್ನು ಬಳ್ಳಾರಿ ಜಿಲ್ಲೆಗೆ ಮರುಸೇರ್ಪಡೆಗೊಳಿಸಲು ಸತತ ಪ್ರಯತ್ನ ಮಾಡಿ ಗೆದ್ದವರು. ಶಾಸಕನಾಗಿ

ಐದು ವರ್ಷಗಳಲ್ಲಿ ಹರಪನಹಳ್ಳಿಯ ಜನಸಾಮಾನ್ಯರ ಮನಸಿನಲ್ಲಿ ಎಂದಿಗೂ ಉಳಿಯುವಂತಹ ಕೆಲಸಕಾರ್ಯಗಳನ್ನು ರವೀಂದ್ರ ಮಾಡಿದ್ದಾರೆ ಎಂಬುದು ಸದ್ಯದ ರಾಜಕೀಯ ಬೆಳವಣಿಗೆಗಳ ನಡುವೆ ಗಮನಾರ್ಹ ಸಂಗತಿ. ಇಂತಹ ಹಲವಾರು ವಿಚಾರಗಳನ್ನು ಈ ಕೃತಿ ಒಳಗೊಂಡಿದ್ದು, ಮಾದರಿ ರಾಜಕಾರಣಿಯ ಬದುಕನ್ನು ಓದಿ ಅರಿಯಲು ಈ ಕೃತಿ ಸಹಕಾರಿ.


ಅಮರ ಕಾದಂಬರಿಗಳ ಅದ್ಭುತ ಕ್ಷಣಗಳು

ಅನುವಾದ: ಸಿ.ಎನ್.ಶ್ರೀನಾಥ್

ಪುಟ: 136, ಬೆಲೆ: ರೂ.100

ಶ್ರೀ ರಾಜೇಂದ್ರ ಪ್ರಿಂಟರ್ಸ್ & ಪಬ್ಲಿಷರ್ಸ್, ಶಿವರಾಂಪೇಟೆ, ಮೈಸೂರು- 570001

ಪ್ರಥಮ ಮುದ್ರಣ: 2019

ಇದೊಂದು ಭಿನ್ನ ರೀತಿಯ ಕೃತಿ. ಹಲವಾರು ಜಗತ್ಪ್ರಸಿದ್ಧ ಕಾದಂಬರಿಗಳನ್ನು ಆಯ್ದು, ಅವುಗಳ ರೋಚಕ ಘಟ್ಟದ, ಅದ್ಭುತ ಕ್ಷಣಗಳನ್ನು ಮಾತ್ರ ಇಲ್ಲಿ ದಾಖಲಿಸಲಾಗಿದೆ. ಪೂರ್ಣ ಕಾದಂಬರಿಯನ್ನು ಅನುವಾದಿಸದೆ, ಕಾದಂಬರಿಯ ಮುಖ್ಯ ಭಾಗವನ್ನು ಆಸ್ವಾದಿಸುವಂತೆ ಹಾಗೂ ಆ ಮೂಲಕ ಕೃತಿಯ ಓದಿಗೆ ಪ್ರೇರೇಪಿಸುವ ಪ್ರಯತ್ನ ಇಲ್ಲಿ ನಡೆದಿದೆ. ಹೆಮಿಂಗ್‍ವೆಯ ಪ್ರಸಿದ್ಧ ಕಾದಂಬರಿ ‘ದಿ ಓಲ್ಡ್ ಮನ್ ಆಂಡ್ ದಿ ಸೀ’, ಡಿ.ಎಚ್.ಲಾರೆನ್ಸ್‍ನ ‘ವಿಮೆನ್ ಇನ್ ಲವ್’, ವಿ.ಎಸ್.ನೈಪಾಲ್‍ರ ‘ಎ ಹೌಸ್ ಫಾರ್ ಮಿ.ಬಿಸ್ವಾಸ್’ ಮುಂತಾದ ಕೃತಿಗಳ ಆಯ್ದ ಭಾಗಗಳು ಇಲ್ಲಿವೆ. ಒಂದೇ ಕೃತಿಯ ಮೂಲಕ ಹಲವು ಪ್ರಸಿದ್ಧ ಕಾದಂಬರಿಗಳನ್ನು ಪರಿಚಯಿಸಿರುವುದು ಓದುಗರಿಗೆ ಹೆಚ್ಚು ಅನುಕೂಲವಾಗುವಂತಿದೆ.


ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ

ಪ್ರೊ.ಜಿ.ಅಬ್ದುಲ್ ಬಷೀರ್

ಪುಟ: 336, ಬೆಲೆ: ರೂ.250

ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು- 560009

ಕಾವ್ಯಮೀಮಾಂಸೆಯ ಜೊತೆಗೆ ಸಾಹಿತ್ಯದ ವಿಮರ್ಶೆಯ ಕುರಿತು ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಕೃತಿಯಿದು. ಕಾವ್ಯಮೀಮಾಂಸೆಯ ಕುರಿತು ಹೊರಬರುವ ಕೃತಿಗಳು ಸುಲಭವಾಗಿ ಓದಿಸಿಕೊಳ್ಳುವಷ್ಟು ಸರಳವಾಗಿರುವುದಿಲ್ಲ ಎಂಬ ಅನಿಸಿಕೆಗಳ ನಡುವೆಯೇ ಪ್ರೊ.ಬಷೀರ್ ಅವರ ಈ ಪುಸ್ತಕ ಅನನ್ಯವಾಗಿ ಕಾಣಿಸುತ್ತದೆ. ಎಲ್ಲಾ ವಿಷಯಗಳನ್ನೂ ಸಮಗ್ರವಾಗಿ ನೀಡುತ್ತ, ಪ್ರತಿ ಅಂಶಗಳನ್ನೂ ಸರಳೀಕರಿಸಿ ವಿವರಿಸುತ್ತ ಸಾಗುವ ಈ ಕೃತಿ, ಸಾಹಿತ್ಯದ ಕುರಿತು ಗಹನ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬಯಸುವ ವಿದ್ಯಾರ್ಥಿಗಳಿಗೆ, ಅಧ್ಯಾಪಕರು, ಸಂಶೋಧನಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಬಲ್ಲದು.


ಮರುಭೂಮಿಯ ಮಳೆ ಹನಿಗಳು

ಕವನ ಸಂಕಲನ

ಲಕ್ಷ್ಮಿ ಕೆ.

ಪುಟ: 144, ಬೆಲೆ: ರೂ.140

ಆಕೃತಿ ಆಶ್ರಯ ಪಬ್ಲಿಕೇಶನ್ಸ್,

ಲೈಟ್ ಹೌಸ್ ಹಿಲ್ ರಸ್ತೆ,

ಮಂಗಳೂರು. 575001

ನೂರು ಕವಿತೆಗಳನ್ನೊಳಗೊಂಡ ಸಂಕಲನವಿದು. ಕವತ್ರಿಯ ಬದುಕಿನ ಅನುಭವಗಳ ಜತೆಗೆ, ಸಾಮಾಜಿಕ ವ್ಯವಸ್ಥೆಯೊಳಗಿನ ವಸ್ತು ವಿಷಯಗಳು ಇಲ್ಲಿ ಕಾವ್ಯವಸ್ತುಗಳಾಗಿವೆ. ಆಸೆ, ನಿರಾಸೆ, ನೋವು, ಸಂಭ್ರಮ ಹೀಗೆ ಎಲ್ಲಾ ರೀತಿಯ ವ್ಯಕ್ತ ಭಾವಗಳನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಮಾನಸಿಕ ಸ್ಥಿತಿ, ಸಂದರ್ಭಕ್ಕೆ ಅನುಗುಣವಾಗಿ ಸಂಕಲನದ ಹಲವು ಕವಿತೆಗಳು ರಚಿತಗೊಂಡಿವೆ. ಪೌರಾಣಿಕ ಹಿನ್ನೆಲೆಯನ್ನಿಟ್ಟುಕೊಂಡು ವರ್ತಮಾನಕ್ಕೆ ಮಿಡಿದ ಕವಿತೆಗಳೂ ಇಲ್ಲಿವೆ.

Leave a Reply

Your email address will not be published.