ಹೊಸ ಪುಸ್ತಕ

ತುಸುವೆ ಕುಡಿವ ಗಂಡನ್ನ ಕೊಡು ತಾಯಿ…

ಲಲಿತ ಪ್ರಬಂಧಗಳ ಸಂಕಲನ

ಗಣೇಶ ಅಮೀನಗಡ

ಪುಟ: 168 ಬೆಲೆ: ರೂ. 150

ಪ್ರಥಮ ಮುದ್ರಣ: 2020

ಕವಿತಾ ಪ್ರಕಾಶನ

101, ಸೃಷ್ಟಿ ಸಾಲಿಗ್ರಾಮ ಅಪಾರ್ಟಮೆಂಟ್

ಜಯ ಲಕ್ಷ್ಮೀ ವಿಲಾಸ ರಸ್ತೆ, ಚಾಮರಾಜಪುರಂ

ಮೈಸೂರು-570025 ದೂ: 98801 05526

ಲೇಖಕ, ನಾಟಕಕಾರ, ಪತ್ರಕರ್ತ ಗಣೇಶ ಅಮೀನಗಡ ಅವರು ಏಳೆಂಟು ವರ್ಷಗಳಿಂದ ಬರೆದ 28 ಲಲಿತ ಪ್ರಬಂಧಗಳನ್ನು ಇಲ್ಲಿ ಸಂಕಲಿಸಿದ್ದಾರೆ. ರಾಜೀವ ತಾರಾನಾಥ ಅವರು ಮುನ್ನುಡಿಯಲ್ಲಿ ಗುರುತಿಸಿದಂತೆ, ‘ಈ ಸಂಕಲನ ನಮ್ಮೆಲ್ಲರಿಗೂ ತುಸು ನಿಂತು ಅನುಭವಿಸು, ಸಂಪೂರ್ಣ ನೋಡು ಎಂದು ಒತ್ತಾಯಿಸುತ್ತದೆ. ಬೇಜಾರು, ದುಃಖ, ಗಡಿಬಿಡಿ ಇವೆಲ್ಲದರ ಹಿಂದೆ ಇರತಕ್ಕಂತಹ ಒಂದು ಜಾಗೃತವಾದ ಹಾಗೂ ಸ್ಥಿರವಾದ ಅನುಭವ ಕೇಂದ್ರವನ್ನು ಗಮನಿಸು ಅಂತ ಹೇಳುವ ಹಾಗಿದೆ.


ಬಯಲ ಜೋಳಿಗೆ

ಅಂಕಣ ಬರಹಗಳು

ಎಚ್.ಎಸ್.ಶಿವಪ್ರಕಾಶ್

ಪುಟ: 148, ಬೆಲೆ: ರೂ.140

ಪ್ರಥಮ ಮುದ್ರಣ: 2020

ವಿದ್ವಾಂಸ ಎಚ್.ಎಸ್.ಶಿವಪ್ರಕಾಶರ ಅಂಕಣ ಬರಹಗಳನ್ನು ಒಳಗೊಂಡ ಈ ಸಂಕಲನ, ಲೇಖಕರ ಈಚಿನ ವಿಚಾರಗಳ ವಿಸ್ತಾರವನ್ನು ಓದಿಗೆ ಒದಗಿಸುತ್ತದೆ. ವೈಚಾರಿಕ ಚಿಂತನೆಗಳು, ಸಾಹಿತ್ಯದ ಬರಹಗಳು ಬೆರೆತಿರುವ ಈ ಕೃತಿಯಲ್ಲಿ ಒಟ್ಟು 34 ಲೇಖನಗಳಿವೆ. ಲಂಕೇಶರು, ಅಡಿಗರು ಹಾಗೂ ಲೇಖಕರು ಒಡನಾಡಿದ ಹಲವು ಗಣ್ಯರು ಕೃತಿಯೊಳಗೆ ಬಂದು ಹೋಗುತ್ತಾರೆ. ಜೊತೆಗೆ ಹಲವಾರು ಲಲವಿಕೆಯ ಸಂಗತಿಗಳೂ ಇಲ್ಲಿನ ಲೇಖನಗಳಲ್ಲಿವೆ.


ನಿನ್ನ ಯುಗ

ಕವಿತೆಗಳು

ಮನು ವಿ.ದೇವದೇವನ್

ಪುಟ: 128, ಬೆಲೆ: ರೂ.120

ಪ್ರಥಮ ಮುದ್ರಣ: 2020

ಕಳೆದ ಒಂದು ದಶಕದ ಅವಧಿಯಲ್ಲಿ ಈ ಕವಿ ಬರೆದ ಕವಿತೆಗಳನ್ನು ಒಟ್ಟಾಗಿಸಿ ಈ ಸಂಕಲನ ಹೊರತರಲಾಗಿದೆ. ಜೊತೆಗೆ ವಿಲಿಯಂ ಬ್ಲೇಕ್‌ನ ಎಂಟು ಜನಪ್ರಿಯ ಕವಿತೆಗಳನ್ನೂ ಕನ್ನಡೀಕರಿಸಿ ಇಲ್ಲಿ ಸೇರಿಸಿದ್ದಾರೆ. ಕಾಲದ ಗಾಳಿಗೆ ಮೈಯೊಡ್ಡಿಕೊಂಡು ಸಾಗುವ ಇಲ್ಲಿನ ಕವಿತೆಗಳು ತನ್ನದೇ ದಾರಿಯನ್ನು ಸೃಷ್ಟಿಸುತ್ತ ಮುಂದುವರಿಯುತ್ತವೆ. ಕವಿ ಕಂಡುಂಡ ಅನುಭವಗಳೂ ಕಾವ್ಯಚಿತ್ರಗಳಾಗಿವೆ. ಕನ್ನಡ ಸಾರಸ್ವತ ಲೋಕದ ವ್ಯಕ್ತಿತ್ವಗಳು ಕವಿಯನ್ನು ಪ್ರಭಾವಿಸಿದ ಬಗೆಯೂ ಕವಿತೆಗಳ ಸಾಲು, ಪದಗಳ ಮೂಲಕ ಗುರುತಿಗೆ ಸಿಗುವಷ್ಟು ಪರಿಚಿತವಾಗಿ ದಾಖಲಾಗಿರುವುದನ್ನು ಗಮನಿಸಬಹುದು.


ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು

ಕಥಾ ಸಂಕಲನ

ದಿನೇಶ್ ಮಡಗಾಂವ್ಕರ್

ಪುಟ: 80, ಬೆಲೆ: ರೂ.80

ಪ್ರಥಮ ಮುದ್ರಣ: 2020

ಎಂಟು ಕತೆಗಳಿರುವ ಈ ಸಂಕಲನದಲ್ಲಿ ಕಥನ ಕ್ರಮವೇ ಹೆಚ್ಚು ವಿಶೇಷ. ಕಥೆಗಾರ ತನ್ನದೇ ಪ್ರಯೋಗಗಳನ್ನು ಮಾಡಿರುವುದು ಇಲ್ಲಿನ ಕಥೆಗಳಲ್ಲಿ ಗಮನಿಸಬಹುದು. ‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು’ ಎಂಬ ಕಥೆಯ ಶೀರ್ಷಿಕೆಯೇ ರಾಮ ಮತ್ತು ವನವಾಸ ಎಂಬ ಪದಗಳಿಂದಾಗಿ ಕುತೂಹಲ ಹೆಚ್ಚಿಸುತ್ತದೆ. ಶುದ್ಧಿ, ಅಮ್ಮ ಎಲ್ಲಿದ್ದಾಳೆ ಎಂಬ ಕಥೆಗಳು ತನ್ನ ವಸ್ತು, ವಿಷಯ, ನಿರೂಪಣಾ ಶೈಲಿಯಿಂದಾಗಿ ಮುಖ್ಯವಾಗುತ್ತವೆ.


ಅರ್ಧ ಕಥಾನಕ

ನಿರೂಪಣೆ: ಅನುಪಮಾ ಪ್ರಸಾದ್

ಪುಟ: 136, ಬೆಲೆ: ರೂ.135

ಪ್ರಥಮ ಮುದ್ರಣ: 2020

ಇದು ಕನ್ನಡ ಸಾಹಿತ್ಯ ಕಥಾ ಲೋಕದ ಪ್ರಮುಖ ಪ್ರತಿಭೆ ಎಂ.ವ್ಯಾಸ ಅವರ ಬದುಕಿನ ಕುರಿತ ಕೃತಿಯಾಗಿದ್ದು, ವ್ಯಾಸರ ಮಗ ತೇಜಸ್ವಿ ಅವರ ಅನುಭವದ ಮಾತುಗಳನ್ನು ಕಥೆಗಾರ್ತಿ ಅನುಪಮಾ ಪ್ರಸಾದ್ ಅಕ್ಷರ ರೂಪಕ್ಕಿಳಿಸಿದ್ದಾರೆ. ವ್ಯಾಸರ ವ್ಯಕ್ತಿತ್ವವನ್ನು ಭಿನ್ನವಾಗಿ ಕಟ್ಟಿಕೊಡುವ ಈ ಕೃತಿ, ಮಗ ತೇಜಸ್ವಿಯ ಮೂಲಕ ವ್ಯಾಸರನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತದೆ. ಮುನ್ನುಡಿಯಲ್ಲಿ ಜಿ.ಪಿ.ಬಸವರಾಜು ಹೇಳಿದಂತೆ, ‘ಅರ್ಧ ಕಥಾನಕ- ಅರ್ಧ ತೇಜಸ್ವಿಯವರದು, ಅರ್ಧ ವ್ಯಾಸರದು’.


ಗಾಯಗೊಂಡಿವೆ ತುಟಿ ನಿನ್ನವೇ ಪದ ಹಾಡಿ

ದಿನೇಶ್ ಮಡಗಾಂವ್ಕರ್

ಪುಟ: 80, ಬೆಲೆ: ರೂ.80

ಪ್ರಥಮ ಮುದ್ರಣ: 2020

ಕಥೆಗಾರ ಟಿ.ಎಸ್.ಗೊರವರ ಅವರು ಈ ಸಂಕಲನದ ಮೂಲಕ ಕನ್ನಡದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಗದ್ಯ ಕವಿತೆಯ ವಿಶಿಷ್ಟ ಪ್ರಯೋಗವನ್ನು ಗಟ್ಟಿಗೊಳಿಸಿದ್ದಾರೆ. ಕಾವ್ಯಾತ್ಮಕ ಬಣ್ಣನೆಯ ಮೂಲಕ ಹರಿಯುವ ಇಲ್ಲಿನ ಪುಟ್ಟ ಬರಹಗಳು ತನ್ನ ರೂಪಕ, ಕಲ್ಪನೆಗಳಿಗಾಗಿ ಓದುಗರನ್ನು ಸೆಳೆಯುತ್ತವೆ. ಕಥೆ- ಕಾವ್ಯ ಎರಡರಲ್ಲೂ ಸಮರ್ಥರೆನಿಸಿಕೊಂಡಿರುವ ಗೊರವರ ಅವರಿಗೆ ಈ ಪ್ರಯೋಗ ಅವೆರಡಕ್ಕಿಂತಲೂ ಸುಲಲಿತವಾಗಿ ಒಲಿದಿದೆ ಎನ್ನಬಹುದು.

ಮೇಲಿನ ಐದು ಕೃತಿಗಳ ಪ್ರಕಾಶಕರು: ಸಂಗಾತ ಪುಸ್ತಕ,

ಅಂಚೆ ರಾಜೂರ, ಗಜೇಂದ್ರಗಡ ತಾಲೂಕು, ಗದಗ ಜಿಲ್ಲೆ- 582114

 


ಅಂಬೇಡ್ಕರ್ ದೃಷ್ಟಿಕೋನ

ಹೊಸ ದಲಿತ ಚಳುವಳಿಗಳು

ಅನುವಾದ: ನಾ ದಿವಾಕರ

ಪುಟ: 78, ಬೆಲೆ: ರೂ.60

ಪ್ರಥಮ ಮುದ್ರಣ: 2020

ಈ ಕೃತಿಯು ಮೂರು ಅನುವಾದಿತ ಲೇಖನಗಳನ್ನು ಒಳಗೊಂಡಿದ್ದು, ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳನ್ನು ಹಾಗೂ ದಲಿತ ಚಳವಳಿಗಳ ಹೊಸ ರೂಪವನ್ನು ಮುಂದಿಟ್ಟುಕೊಂಡು ಪ್ರಸ್ತುತ ಸಮಾಜದ ರಾಜಕೀಯ ನೆಲೆಗಟ್ಟನ್ನು ಇಲ್ಲಿನ ಎರಡು ಬರಹಗಳು ಚರ್ಚಿಸಿದರೆ, ಮೂರನೇ ಲೇಖನ ಸ್ವತಃ ಅಂಬೇಡ್ಕರ್ ಅವರ ಭಾಷಣದ ಸಾರ. ಇಲ್ಲಿನ ತೀಕ್ಷ್ಣ ಬರಹಗಳು ಓದುಗನನ್ನು ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಬಹುದು.


ಉದಾರವಾದಿ ಪ್ರಜಾತಂತ್ರ ಮತ್ತುತೀವ್ರವಾದಿ ಬಲಪಂಥ

ಅನುವಾದ: ನಾ.ದಿವಾಕರ

ಪುಟ: 74, ಬೆಲೆ: ರೂ.50

ಪ್ರಥಮ ಮುದ್ರಣ: 2020

ಈ ಕೃತಿಯೂ ಮೂರು ಅನುವಾದಿತ ಲೇಖನಗಳನ್ನು ಹೊಂದಿದ್ದು, ಬಲಪಂಥೀಯ ರಾಜಕಾರಣ ಹಾಗೂ ಅದರ ಬೇರು ಬಿಗಿಗೊಂಡ ಬಗೆಯನ್ನು ಇಲ್ಲಿನ ಲೇಖನಗಳಲ್ಲಿ ಚರ್ಚಿಸಲಾಗಿದೆ. ಪ್ರಮುಖವಾಗಿ ಪ್ರಸ್ತುತ ರಾಜಕಾರಣ ಹಾಗೂ ಸಮಾಜೋ-ಸಾಂಸ್ಕೃತಿಕ ಬೆಳವಣಿಗೆಗಳ ನಡುವೆ ತೀವ್ರವಾದಿ ಬಲಪಂಥದ ಒಳಸುಳಿಗಳು ಕೆಲಸ ಮಾಡುವ ಬಗೆ, ಹಾಗೂ ಉದಾರವಾದಿ ಪ್ರಜಾತಂತ್ರದ ಪಾತ್ರವನ್ನೂ ವಿಶ್ಲೇಷಿಸಲಾಗಿದೆ.


ಚರಿತ್ರೆ ಮನುಷ್ಯ ಮಾರ್ಕ್ಸ್ವಾದ

ಕೆ.ಬಾಲಗೋಪಾಲ್

ಅನುವಾದ: ಬಿ.ಸುಜ್ಞಾನಮೂರ್ತಿ

ಪುಟ: 106, ಬೆಲೆ: ರೂ.80

ಪ್ರಥಮ ಮುದ್ರಣ: 2020

ಈ ಕೃತಿಯ ಮೂಲಕ ಲೇಖಕರು ಮಾರ್ಕ್ಸ್ವಾದವನ್ನು ಎದುರಿಟ್ಟುಕೊಂಡು ಚರಿತ್ರೆ, ಸಮಾಜ ಹಾಗೂ ಮನುಷ್ಯರನ್ನು ಅರ್ಥಮಾಡಿಕೊಳ್ಳುವುದಕ್ಕೆ ಅನುಕೂಲಕರ ದಾರಿ ಎಂಬ ಅಂಶವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯನ್ನು ವಿರೋಧಿಸುವ ಈ ಲೇಖಕ, ಅದನ್ನು ಮರು ಆಲೋಚಿಬೇಕಾದ ಅಗತ್ಯವನ್ನು ತಿಳಿಸುತ್ತಾರೆ. ರಾಜಕೀಯ, ಅಭಿವೃದ್ಧಿ ಹಾಗೂ ಹಲವಾರು ಗಂಭೀರ ವಿಷಯಗಳನ್ನು ಇಲ್ಲಿ ಚಿಂತನೆಗೆ ಒಡ್ಡಿದ್ದಾರೆ. ಅರ್ಥ ಮಾಡಿಕೊಳ್ಳುವಲ್ಲಿ ಅಡೆಯಿಲ್ಲದಂತೆ ಸರಳವಾಗಿ ಈ ಬರಹಗಳು ಕನ್ನಡೀಕರಣಗೊಂಡಿವೆ.


ಚರಿತ್ರೆ ಎಂದರೆ ಏನು?

ಇ.ಎಚ್.ಕಾರ್

ಅನುವಾದ: ಬಿ.ಸುಜ್ಞಾನಮೂರ್ತಿ

ಪುಟ: 190, ಬೆಲೆ: ರೂ.150

ಪ್ರಥಮ ಮುದ್ರಣ: 2020

ಚರಿತ್ರೆ ಎಂಬುದು ಚಾರಿತ್ರಿಕ ಸತ್ಯಗಳ ವ್ಯಾಖ್ಯಾನವೇ ಹೊರತು ಚರೊತ್ರೆಯ ದಿನಚರಿಯನ್ನು ಒಪ್ಪಿಸುವುದಲ್ಲ ಎಂಬ ಒಟ್ಟಂದದಲ್ಲಿ ರೂಪುಗೊಂಡ ಈ ಕೃತಿ ಚರಿತ್ರೆಯ ಹಲವು ಮಗ್ಗಲುಗಳನ್ನು ಚರ್ಚಿಸುತ್ತದೆ. ಕಾಲದಿಂದ ಕಾಲಕ್ಕೆ ಚರಿತ್ರೆಯ ಗ್ರಹಿಕೆ ಬದಲಾಗುತ್ತಾ ಬಂದ ಬಗೆಯನ್ನು ಇಲ್ಲಿ ವಿವರಿಸಲಾಗಿದೆ. ಮೂಲ ಇಂಗ್ಲಿಷ್ ಪುಸ್ತಕ, ಚರಿತ್ರೆ ಬರವಣಿಗೆಗೆ ತಿರುವು ತಂದುಕೊಟ್ಟ ಮಹತ್ವದ ಕೃತಿ ಎಂದು ಈಗಾಗಲೇ ಈ ಕೃತಿ ಚರಿತ್ರೆ ಸಂಶೋಧನೆಯ ಲೋಕದಲ್ಲಿ ಗುರುತಿಸಿಕೊಂಡಿದ್ದು, ಕನ್ನಡಕ್ಕೆ ಸರಳವಾಗಿ ದಕ್ಕಿದೆ ಎನ್ನಬಹುದು.


ಕಾ ಸರೋಜ ದತ್ತ ಚಿಂತನೆಗಳ ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್

ಆಲೂರಿ ಭುಜಂಗರಾವ್

ಅನುವಾದ: ವೆಂಕಟೇಶ ಬೇವಿನಬೆಂಚಿ

ಪುಟ: 56, ಬೆಲೆ: ರೂ.40

ಪ್ರಥಮ ಮುದ್ರಣ: 2020

ಈ ಪುಟ್ಟ ಕೃತಿಯು ಮಹಾತ್ಮ ಗಾಂಧಿ ಹಾಗೂ ಸುಭಾಷ್ ಚಂದ್ರ ಬೋಸ್ ಕುರಿತ ವಿಚಾರಗಳನ್ನು ಎಂದಿಗಿಂತ ಭಿನ್ನವಾದ ಆಯಾಮದಲ್ಲಿ ಚರ್ಚಿಸುವ ಪ್ರಯತ್ನ ಮಾಡುತ್ತದೆ. ಸ್ವಾತಂತ್ರ‍್ಯ ಹೋರಾಟದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ಕಟ್ಟಿಕೊಂಡ ತನ್ನದೇ ವ್ಯಕ್ತಿತ್ವ ಹಾಗೂ ಚರಿತ್ರೆಯಲ್ಲಿ ಗಟ್ಟಿಯಾಗಿ ಪಡಿಮೂಡದ ಸುಭಾಷ್ ಚಂದ್ರ ಬೋಸ್ ಅವರ ಚಿತ್ರ ಈ ಕೃತಿಯಲ್ಲಿ ಪ್ರಮುಖ ಅನುಮಾನಗಳಾಗಿ ಮುಂದೆ ನಿಲ್ಲುತ್ತವೆ. ಗಾಂಧಿ ಚಿಂತನೆಗಳಿಂದಾಚೆ, ಸಿದ್ಧ ಚರಿತ್ರೆಯ ಗೋಡೆಯಿಂದಾಚೆ ಹೊರಳುವ ಇಲ್ಲಿನ ಬರಹಗಳು ಹೊಸ ಆಲೋಚನೆಗಳಿಗೆ ತೆರೆದುಕೊಳ್ಳುವ ಪ್ರಯತ್ನ ಮಾಡಿವೆ. ಸರೋಜದತ್ತ ಅವರ ಚಿಂತನೆಯ ಹರವು ಇಲ್ಲಿ ಪರಿಚಯವಾಗುತ್ತದೆ.


ಇತಿಹಾಸ ಹಾಗೂ ಆಧುನಿಕೋತ್ತರವಾದ ಮತ್ತು ಎಡ್ವರ್ಡ್ ಸೈದ್

ಶೆಲ್ಲಿ ವಾಲಿಯಾ

ಅನುವಾದ- ಡಾ.ರಾಮಲಿಂಗಪ್ಪ ಟಿ.ಬೇಗೂರು

ಪುಟ: 74, ಬೆಲೆ: ರೂ.50

ಎಡ್ವರ್ಡ್ ಸೈದ್ ಎಂಬ ಬಹುಮುಖೀ ವಿಮರ್ಶಕ, ಸಂಸ್ಕೃತಿ ಚಿಂತಕನ ವಿದ್ವತ್ಪೂರ್ಣ ವಿಚಾರಗಳ ಲೋಕವನ್ನು ಈ ಕೃತಿ ತೆರೆದಿಡುತ್ತದೆ. ಜಗತ್ತಿನಾದ್ಯಂತ ಬೌದ್ಧಿಕ ವಲಯದಲ್ಲಿ ಪ್ರಭಾವಿಸಿರುವ ಸೈದ್‌ನ ಚಿಂತನೆಗಳು ಸಾರ್ವಕಾಲಿಕವಾಗಿ ನಿಲ್ಲುವಂಥದ್ದು, ಇತಿಹಾಸ, ಆಧುನಿಕೋತ್ತರವಾದ ಸಾಮ್ರಾಜ್ಯವಾದ ಮುಂತಾದ ವಿಷಯಗಳು ಸೈದ್ ದೃಷ್ಟಿಕೋನದಲ್ಲಿ ರೂಪುಗೊಂಡ ರೀತಿಯನ್ನು ಇಲ್ಲಿ ಲೇಖಕರು ವಿಶ್ಲೇಷಿಸಿದ್ದಾರೆ.


ಹಾರುವ ಹಕ್ಕಿ ಮತ್ತು ಇರುವೆ

ಕತೆಗಳು

ಡಾ.ಮಿರ್ಜಾ ಬಷೀರ್

ಪುಟ: 128, ಬೆಲೆ: ರೂ.100

ಪ್ರಥಮ ಮುದ್ರಣ: 2020

ಒಟ್ಟು ಹನ್ನೊಂದು ಕತೆಗಳಿರುವ ಈ ಸಂಕಲನ, ಸಮಾಜದ ಸಹಜ ಚಿತ್ರಗಳನ್ನು ಪಾತ್ರಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದೆ. ವಾಸ್ತವಕ್ಕೆ ಹತ್ತಿರವಾದ ಸಂಗತಿಗಳನ್ನು ಮುಂದಿಡುವ ಕತೆಗಳು ಕೆಲವಿದ್ದರೆ, ಇನ್ನು ಕೆಲವು ಈಗಾಗಲೇ ಕನ್ನಡ ಕಥಾ ಲೋಕದಲ್ಲಿ ಪರಿಚಿತವೆನಿಸಿದ ಸಹಜ, ಭಾವನಾತ್ಮಕ ವಿಚಾರಗಳನ್ನೇ ಸ್ಪರ್ಶಿಸಿವೆ.


ದೂರದೇಶವೆಂಬ ಪಕ್ಕದ ಮನೆ

ಪ್ರಬಂಧಗಳು

ಕಾವ್ಯಾ ಕಡಮೆ ನಾಗರಕಟ್ಟೆ

ಪುಟ: 148, ಬೆಲೆ: ರೂ.120

ಪ್ರಥಮ ಮುದ್ರಣ: 2020

ಅಮೆರಿಕದಲ್ಲಿ ನೆಲೆಸಿರುವ ಈ ಕೃತಿಯ ಲೇಖಕಿ, ಅಲ್ಲಿನ ಜೀವನ ವ್ಯವಸ್ಥೆಯ, ಜನರ ಮನಸ್ಥಿತಿಯ ಕುರಿತ ಚಿತ್ರಣವನ್ನು ಇಲ್ಲಿನ ಪ್ರಬಂಧಗಳಲ್ಲಿ ಭಿನ್ನವಾಗಿ ಒದಗಿಸಿದ್ದಾರೆ. ಅಮೆರಿಕ ಎಂದಾಗ ಮನಸ್ಸಿನಲ್ಲಿ ಮೂಡುವ ಚಿತ್ರಗಳು ಬದಿಗೆ ನಿಂತು, ಹೊಸ, ಮತ್ತು ಭಾರತಕ್ಕಿಂತ ವಿಶೇಷವಲ್ಲದ ಕೆಲವು ಮನಸ್ಥಿತಿಯ ವಿಚಾರಗಳು ಎದುರು ಬಂದು ನಿಲ್ಲುವಂತೆ ಮಾಡುತ್ತವೆ ಇಲ್ಲಿನ ಬರಹಗಳು. ಜೊತೆಗೆ ಸ್ತ್ರೀಪರ ಚಿಂತನೆಗಳ ಮೂಲಕ ಮಹತ್ವದ ಪ್ರಶ್ನೆಗಳನ್ನೂ ಲೇಖಕಿ ಎತ್ತಿದ್ದಾರೆ. ಲವಲವಿಕೆಯಿಂದ ಕೂಡಿರುವ ಇಲ್ಲಿನ ಬರಹಗಳು ಹೆಚ್ಚು ಆಪ್ತವೆನಿಸುತ್ತವೆ.

ಮೇಲಿನ ಎಂಟು ಕೃತಿಗಳ ಪ್ರಕಾಶಕರು: ಲಡಾಯಿ ಪ್ರಕಾಶನ, #21, ಪ್ರಸಾದ್ ಹಾಸ್ಟೆಲ್, ಗದಗ- 582101

 

 

Leave a Reply

Your email address will not be published.