ಹೊಸ ಪುಸ್ತಕ

ಕುವೆಂಪು ಹನುಮದ್ದರ್ಶನ
(‘ಶ್ರೀರಾಮಾಯಣದರ್ಶನ ದರ್ಶನಂ’ – ಒಂದು ಚಿತ್ರಣ)
ಡಾ.ಜಿ.ಕೃಷ್ಣಪ್ಪ
ಪುಟ: 218, ಬೆಲೆ: ರೂ.250

ಪ್ರಥಮ ಮುದ್ರಣ: 2020
ಪ್ರಕಾಶನ: ಉದಯಭಾನು ಕಲಾಸಂಘ, ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ, ಕೆಂಪೇಗೌಡ ನಗರ, ಬೆಂಗಳೂರು-560019

ಕನ್ನಡನಾಡಿನ ಕಿಷ್ಕಿಂಧೆಯು ಹನುಮಂತನ ನಾಡೆಂದು ಗುರುತಿಸಲಾಗುತ್ತದೆ. ರಾಷ್ಟ್ರಕವಿ ಕುವೆಂಪು ಅವರಿಗೆ ಜ್ಞಾನಪೀಠ ಪುರಸ್ಕಾರ ತಂದುಕೊಟ್ಟ ‘ಶ್ರೀರಾಮಾಯಣ ದರ್ಶನಂ’ ರಚನೆಯ ಅಮೃತ ಮಹೋತ್ಸವ ವರ್ಷ (1949-2020)ದಲ್ಲಿ ಈ ಕೃತಿ ಪ್ರಕಟಗೊಂಡಿದೆ. ಋಷ್ಯಮೂಕ ಪರ್ವತವನ್ನು ವರ್ಣಿಸುವ ರಾಮನ ಮಾತು, ರಾಮ ಲಕ್ಷ್ಮಣರ ಸಮಾಗಮ, ಆಂಜನೇಯ ಸ್ವಾಮಿಯ ಸಮುದ್ರಲಂಘನ, ಸೀತಾದರ್ಶನ, ಸಂಜೀವಿನಿ, ರಾಮ-ಲಕ್ಷ್ಮಣರ ಯುದ್ಧ, ಸೀತಾರಾಮ ಅಗ್ನಿಪ್ರವೇಶ, ಭರತನಿಗೆ ಸಾಂತ್ವನ ಹೇಳುವ ಪ್ರಸಂಗ, ಇತರ ವಿಷಯಗಳು ಈ ಕೃತಿಯಲ್ಲಿ ರಸಪಾಕವಾಗಿ ಮೂಡಿಬಂದಿವೆ.

ಸು
ಕಾದಂಬರಿ

ಡಾ.ಪ್ರಸನ್ನ ಸಂತೇಕಡೂರು
ಪುಟ: 80 ಬೆಲೆ: ರೂ.75

ಪ್ರಥಮ ಮುದ್ರಣ: 2020
ಪ್ರಕಾಶನ: ಸಂವಹನ, ನಂ.12/1ಎ, ಈವ್ನಿಂಗ್ ಬಾಜಾರ್ ಹಿಂಭಾಗ, ಶಿವರಾಂ ಪೇಟೆ, ಮೈಸೂರು-570001

ಡಾ. ಪ್ರಸನ್ನ ಸಂತೇಕಡೂರು ಅವರು ಕ್ಯಾನ್ಸರ್, ಅದರ ಸಂಶೋಧನೆ, ರೋಗಿಯ ಸುಖ-ದುಃಖ, ನೋವು, ಆಘಾತ, ಗುರಿ ಸಾಧನೆ ಇತರ ವಿಷಯಗಳನ್ನು ಇಲ್ಲಿ ದಾಖಲಿಸಿದ್ದಾರೆ. ಇದು ಕ್ಯಾನ್ಸರ್ ರೋಗಿ ಮತ್ತು ಸಂಶೋಧನೆ ವಿಷಯ ಕುರಿತ ವಾಸ್ತವ ವಿಷಯಗಳನ್ನು ಆಧರಿಸಿದ ಕಾದಂಬರಿ. ‘ಈ ಕಿರುಕಾದಂಬರಿಯ ನಾಯಕ ಸು ನನ್ನ ಮುಂದೆಯೇ ಬದುಕಿದ್ದ ವ್ಯಕ್ತಿ ಅವನ ಜೊತೆ ಕೆಲಸ ಮಾಡಿದ್ದೇನೆ ಮತ್ತು ಒಡನಾಡಿದ್ದೇನೆ. ಕ್ಯಾನ್ಸರ್ ಸಂಶೋಧನೆಯಲ್ಲಿ ನಾನು ಚಿಕ್ಕ ಸಸಿಯಾದರೆ ಅವನು ದೊಡ್ಡ ಆಲದ ಮರ’ ಎನ್ನುತ್ತಾರೆ ಲೇಖಕರು.

 

 

ಅಗಣಿತ ಅಲೆಮಾರಿ
(ವೂಶಿಯನ್ ದಿ ಲ್ಯುಲಾಂಗ್ಚ)

ಪ್ರವಾಸ ಸಾಹಿತ್ಯ
ರವಿ ಹಂಜ್
ಪುಟ: 208  ಬೆಲೆ: ರೂ.180

ಪ್ರಥಮ ಮುದ್ರಣ: 2020
ಶ್ರೀ ರಾಜೇಂದ್ರ ಪಬ್ಲಿಶರ್ಸ್ 12/1, ಈವನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು-570001

ಚೀನಾದ ಯಾತ್ರಿಕ ಹುಯೆನ್ ತ್ಸಾಂಗ್ ಸಾಗಿದ ದಾರಿಯಲ್ಲಿ ಭಾರತೀಯ, ಚೀನಿ, ಅಮೆರಿಕನ್- ಮೂವರು ಯಾತ್ರಿಕರು ಪ್ರವಾಸ ಕೈಗೊಂಡು ಚೀನಾ-ಭಾರತ, ಇತಿಹಾಸ-ವರ್ತಮಾನ, ಕಮ್ಯುನಿಸ್ಟ್-ಪ್ರಜಾಪ್ರಭುತ್ವ ಮತ್ತು ಜನರ ಬದುಕಿನ ಸ್ಥಿತಿಯನ್ನು ವಿವರಿಸುವ ಕೃತಿ ಇದು. ಅನುಭವ ಮತ್ತು ಪ್ರವಾಸದ ರಸಮಯ ಕ್ಷಣಗಳು ಕೃತಿಯ ಓದನ್ನು ಸಲೀಸುಗೊಳಿಸುತ್ತವೆ. ಚೀನಾದ ಆಭಾಸಗಳು, ಭಾರತದ ವಿಪರ್ಯಾಸಗಳನ್ನು ಕೃತಿಯಲ್ಲಿ ತೆರೆದಿಡಲಾಗಿದೆ.

ಮಿಕ್ಕ ಇಂಗ್ಲಿಷ್ ಕವಿತೆಗಳು
ಕನ್ನಡಕ್ಕೆ ಸಿ.ಎನ್.ಶ್ರೀನಾಥ್

ಪುಟ: 96 ಬೆಲೆ: ರೂ.100
ಪ್ರಥಮ ಮುದ್ರಣ: 2020
ಧ್ವನ್ಯಾಲೋಕ, ಮೈಸೂರು.

ಸಿ.ಎನ್.ಶ್ರೀನಾಥ್ ಅನುವಾದಿತ ಮೊದಲ ಇಂಗ್ಲಿಷ್ ಕವಿತೆಗಳು ಕೃತಿ ಪ್ರಕಟವಾದ 17 ವರ್ಷ ಬಳಿಕ ಬಂದ ಎರಡನೇ ಸಂಕಲನವಿದು. ಇದರಲ್ಲಿ ಥಾಮಸ್ ಕ್ಯಾಂಪಿಯನ್, ವಿಲಿಯಂ ವರ್ಡ್ಸ್ವರ್ತ್, ಜಾನ್ ಕೀಟ್ಸ್, ಎಡ್ವರ್ಡ್ ಥಾಮಸ್, ಡಬ್ಲ್ಯೂ.ಎಚ್. ಆಡೆನ್, ಆ್ಯಂಡ್ರೂ ಮಾರ್ವೆಲ್ ಮತ್ತು ಇತರರ ಕವನಗಳ ಅನುವಾದವಿದೆ. ಮೂಲ ಕವಿಯ ಕವನ ಮತ್ತು ಅನುವಾದ ಎರಡನ್ನೂ ಅಕ್ಕಪಕ್ಕ ನೀಡಿರುವುದರಿಂದ ಕಾವ್ಯದ ಒಳ ಮತ್ತು ಅನುವಾದದ ರಮ್ಯತೆ, ಕನ್ನಡದ ಸೊಗಸು ಕನ್ನಡಿ ಹಿಡಿಯುತ್ತದೆ.

ಹುಲ್ಲಿಗೆ ಹುಟ್ಟಿದ ಬೀದಿ
ಕವನಸಂಕಲನ

ಸೈಫ್ ಜಾನ್ಸೆ ಕೊಟ್ಟೂರು
ಪುಟ: 124  ಬೆಲೆ: ರೂ.100

ಪ್ರಥಮ ಮುದ್ರಣ: 2018
ರೇಣುಕಾ ಪ್ರಕಾಶನ, ಬೇಲೂರು ರಸ್ತೆ, ಮಾಚೇನಹಳ್ಳಿ ಗ್ರಾ.ಪಂ., ಗುಡ್ಡೇನಹಳ್ಳಿಕೊಪ್ಪಲು, ಹಾಸನ-573201

ಸೈಫ್ ಜಾನ್ಸೆ ರಚನೆಯ 42 ಕವನಗಳನ್ನು ಹೊಂದಿರುವ ಈ ಸಂಕಲನದಲ್ಲಿ ಸಾಮಾಜಿಕ ಸಂವೇದನೆ ಎದ್ದು ಕಾಣುತ್ತದೆ. ಈ ಸ್ಪಂದನೆ ಕೆಲವೊಮ್ಮೆ ಕಲ್ಪನೆಯನ್ನು ಮೀರುತ್ತದೆ. ಬಿಸಿರಕ್ತದ ಓಘ ಇಲ್ಲಿನ ಕವನಗಳಲ್ಲಿ ಇವೆ. ಭರವಸೆಯ ಕವಿ.

 

 

ಅವರಿವರು
ವ್ಯಕ್ತಿಚಿತ್ರಗಳು

ಬಸವರಾಜು ಮೇಗಲಕೇರಿ
ಪುಟ: 244  ಬೆಲೆ: ರೂ.200

ಪ್ರಥಮ ಮುದ್ರಣ: 2019
ರೂಪ ಪ್ರಕಾಶನ, ನಂ. 2406/7 ಕೆ-1, 1ನೇ ಕ್ರಾಸ್, ಹೊಸ ಬಂಡಿಕೇರಿ, ಕೆ.ಆರ್.ಮೊಹಲ್ಲಾ, ಮೈಸೂರು-570004

ಹಳ್ಳಿ ಹಕ್ಕಿ ಅನುಸೂಯಮ್ಮ, ಮೇಲುಕೋಟೆ ಗಾಂಧಿ ಸುರೇಂದ್ರ ಕೌಲಗಿ, ಗೌರಿ ಲಂಕೇಶ್, ಮಾದರಿ ಮಹಿಳೆ ಅಕ್ಕೈ, ತಾಯಿ ತಾಳ್ಮೆಯ ರತ್ನಪ್ರಭಾ, ಬಹುರೂಪಿ ಪ್ರಸನ್ನ, ಜಯಮಾಲಾ, ನಜೀರ್ ಸಾಬ್, ಸಾವಯವ ಸಾಧಕ ನಾರಾಯಣ ರೆಡ್ಡಿ, ಸಮಾಜ ವಿಜ್ಞಾನಿ ಮನ್ಸೂರ್ ಸೇರಿದಂತೆ ನಾನಾಕ್ಷೇತ್ರಗಳ 45 ಸಾಧಕರನ್ನು ಪರಿಚಯಿಸಿರುವ ಕೃತಿ ಇದು. ಬೇರೆ ಬೇರೆ ಪತ್ರಿಕೆಗಳಿಗೆ ಬರೆದ ಲೇಖನಗಳಿವು. ಬಸವರಾಜು ಮೇಗಲಕೇರಿ ಅವರು ಸಾಧಕರನ್ನು ಪರಿಚಯಿಸುವ ರೀತಿ, ದೃಷ್ಟಿಯೂ ವಿಭಿನ್ನ. ಹೀಗಾಗಿ ಸಾಧಕರನ್ನು ವಿಭಿನ್ನವಾಗಿ ಹಾಗೂ ಅವರ ಸಾಧನೆಯನ್ನು ತಟ್ಟುವ ರೀತಿಯಲ್ಲಿ ಬರೆಯುತ್ತಾರೆ.

***

ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ ಒಂದು ಅಧ್ಯಯನ
ಡಾ.ಟಿ.ಆರ್.ಚಂದ್ರಶೇಖರ
ಪುಟ: 88 ಬೆಲೆ: ರೂ.95

ಪ್ರಥಮ ಮುದ್ರಣ: 2020

ಸಂವಿಧಾನ ಮತ್ತು ಮೀಸಲಾತಿ ಕುರಿತು ಕಳೆದ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಈ ಕೃತಿಯಲ್ಲಿ ಮೀಸಲಾತಿಯ ಅಗತ್ಯ, ಅನುಷ್ಠಾನಗೊಂಡ ಸಂದರ್ಭ, ಮೀಸಲಾತಿಗಾಗಿ ನಡೆದ ಮಾನವ ಸಮಾಜದ ವಿಕಾಸದ ಹಿನ್ನೆಲೆಯಲ್ಲಿ ಗ್ರಹಿಸಿ ರಚಿಲಾಗಿದೆ. ‘ಮಿಲ್ಲರ್ ಸಮಿತಿ’ ರಚನೆಯಾಗಿ ನೂರು ವರ್ಷ ತುಂಬಿರುವ ಸಂದರ್ಭ ಪ್ರಕಟವಾಗಿರುವ ಕೃತಿ ಇದು. ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದ ವೇಳೆ ಜಾತಿಕಾರಣದಿಂದ ಅವಕಾಶ ನಿರಾಕರಿಸಲ್ಪಟ್ಟ ಜನರಿಗಾಗಿ ರೂಪುಗೊಂಡ ‘ಮಿಲ್ಲರ್ ಸಮಿತಿ’ಯ ರಚನೆಯ ಸಂದರ್ಭ ಮತ್ತು ಪರಿಣಾಮಗಳನ್ನು ಕುರಿತು ಲೇಖಕರು ಬರೆದಿರುವರು.

ಹಿಮಾಲಯ ಶಿಖರಗಳ ಸಾನ್ನಿಧ್ಯದಲ್ಲಿ ನಡೆದಾಟ
ಪ್ರವಾಸ ಕಥನ

ಡಾ.ಇಂದಿರಾ ಹೆಗ್ಗಡೆ
ಪುಟ: 120  ಬೆಲೆ: ರೂ.140

ಪ್ರಥಮ ಮುದ್ರಣ: 2020

ಪ್ರಕೃತಿ ಸೌಂದರ್ಯದ ಅದ್ಭುತ ತಾಣ ಹಿಮಾಲಯದ ಸಾನ್ನಿಧ್ಯವನ್ನು ಲೇಖಕಿ ಈ ಕೃತಿಯಲ್ಲಿ ವಿವರಿಸಿದ್ದಾರೆ. ಆರಂಭದಲ್ಲಿ ಲೇಖಕಿ ಹೇಳಿದ ಮಾತು ಗಮನ ಸೆಳೆಯುತ್ತದೆ: “ವಾಯುಸೇನೆಯ ಕರ್ನಲ್ ಒಬ್ಬರನ್ನು ಭೇಟಿಯಾದೆ. ಅವರಲ್ಲಿ ನಾನು ಈ ದಾರಿಯಾಗಿ ಭಾರತಕ್ಕೆ ಬಂದಿರುವ ಆರ್ಯನ್‌ರು ಮತ್ತು ಯೇಸು ಸಮಾಧಿಯನ್ನು ಹುಡುಕಿ ಬಂದ ರೋಮನ್‌ರ ವಂಶವಾಹಿಗಳು ಈಗಲೂ ಇಲ್ಲಿರುವ ಬಗ್ಗೆ ಇಲ್ಲಿಯ ಜನರು ಮಾತಾಡಿಕೊಳ್ಳುವ ವಿಷಯ ಹೇಳಿದೆ. ಕರ್ನಲ್: ‘ಅಂತಹ ಹಳ್ಳಿಗಳಲ್ಲಿ ಇದ್ದು ಬಂದಿದ್ದೇನೆ ಹಾಗೂ ನೀವು ಕೇಳಿದ್ದು ವಾಸ್ತವ’ ಎಂದರು”.

ಕೆಂಪು ಮೇ ದಿನ
ನಾಟಕ

ಡಾ.ಬಿ.ಆರ್.ಮಂಜುನಾಥ್
ಪುಟ: 96 ಬೆಲೆ: ರೂ.80
ಪ್ರಥಮ ಮುದ್ರಣ: 2020

ಮೇ ದಿನದ ವಸ್ತುವುಳ್ಳ ಈ ನಾಟಕವು ಚಾರಿತ್ರಿಕ ಮಹತ್ವ ಪಡೆದಿದೆ, ಹಾಗೆಯೇ ವರ್ತಮಾನದ ಆಶಯಗಳಿಗೆ ಸ್ಪಂದಿಸಿದೆ. ಕಾರ್ಮಿಕರೊಳಗೆ ನಡೆಯುವ ಮಾತುಕತೆಗಳು ಶ್ರಮಲೋಕದ ಸ್ಥಿತಿಯನ್ನು ತೆರೆದಿಡುತ್ತವೆ. ಶಿಕಾಗೋ ಚಳವಳಿ ಕಟ್ಟಿದವರು, ನೇತಾರರ ಪರಿಚಯವೂ ನಾಟಕದ ಕೊನೆಯಲ್ಲಿ ಕಟ್ಟಿಕೊಡಲಾಗಿದೆ.

ಮೇಲಿನ ಮೂರು ಪುಸ್ತಕಗಳ ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560001

***

ಕೂರಿಗೆ
ಸಾಹಿತ್ಯ ಚಿಂತನೆಗಳು

ಡಾ. ಜಾಜಿ ದೇವೇಂದ್ರಪ್ಪ
ಪುಟ: 116  ಬೆಲೆ: ರೂ.100

ಪ್ರಥಮ ಮುದ್ರಣ: 2020

ವಿಭಿನ್ನ ವಿಷಯಗಳ ಬರಹಗಳನ್ನು ಒಳಗೊಂಡ ಕೃತಿ ಇದು. ಆಂಧ್ರಪ್ರದೇಶದ ಅಡ್ಡ ಹೆಸರುಗಳು, ಬೂದಿ ‘ಸಂಬಂಧಿತ’ ಎಡೆಗಳು, ಕನ್ನಡ ಸಾಹಿತ್ಯಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ, ತೆಲುಗು ದಲಿತ ಕಾವ್ಯದ ತಾತ್ವಿಕ ಸ್ವರೂಪ ಸೇರಿದಂತೆ 13 ಲೇಖನಗಳು ಇಲ್ಲಿವೆ. ನುಡಿಯ ಪ್ರಾಚೀನತೆ, ಪಲ್ಲಟದ ಹಾದಿ ಮತ್ತು ವರ್ತಮಾನದ ಮೇಲೆ ಬೆಳಕು ಚೆಲ್ಲುವ ಲೇಖನಗಳು ಇವೆ.

ಪಡಿ ಪದಾರ್ಥ
ಸಾಹಿತ್ಯ ಚಿಂತನೆಗಳು

ಡಾ.ಜಾಜಿ ದೇವೇಂದ್ರಪ್ಪ
ಪುಟ: 104  ಬೆಲೆ: ರೂ.90
ಪ್ರಥಮ ಮುದ್ರಣ: 2020

ಹಳಗನ್ನಡ ಕಾವ್ಯ ಓದಿನ ಫಲ, ಮುದ್ದಣ-ಮನೋರಮೆಯರ ದಾಂಪತ್ಯ, ತೆಲುಗು ಸಾಹಿತ್ಯದಲ್ಲಿ ಬಸವಣ್ಣ, ಅಲಕ್ಷಿತ ತತ್ವಪದಕಾರ ಹೊಳಲಗುಂದಿ ಸಾಹಿಬಣ್ಣ ತಾತ ಸೇರಿದಂತೆ 12 ಲೇಖನಗಳ ಕೃತಿ ಇದು. ಕನ್ನಡ ಸಾಹಿತ್ಯಪ್ರಿಯರಿಗೆ, ಅಧ್ಯಯನಶೀಲರಿಗೆ ಇಲ್ಲಿ ಹಲವು ವಿಷಯಗಳು ದಕ್ಕುತ್ತವೆ. ಕನ್ನಡ ನುಡಿಯ ಕುರಿತ ಅನೇಕ ಐತಿಹಾಸಿಕ ದಾಖಲೆಗಳು ಇಲ್ಲಿವೆ.

ಇವೆರಡೂ ಪುಸ್ತಕಗಳ ಪ್ರಕಾಶನ: ರೂಪ ಪ್ರಕಾಶನ, ನಂ.26, 11ನೇ ಬ್ಲಾಕ್, ಡಾ. ರಾಜ್‌ಕುಮಾರ್ ರಸ್ತೆ, ಜೆಎಸ್‌ಎಸ್ ಬಡಾವಣೆ, ಮೈಸೂರು-570011.

***

ಸಚಿವರೊಂದಿಗೆ ಚೂಟಿ ಅನುಭವಗಳು
ಚೂಟಿ ಚಿದಾನಂದ

ಪುಟ: 205  ಬೆಲೆ: ರೂ.175
ಪ್ರಥಮ ಮುದ್ರಣ: 2020

ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ 37 ವರ್ಷಗಳ ಸೇವೆ ಸಲ್ಲಿಸಿರುವ ಸಿ.ಯು.ಎಂ. ಚಿದಾನಂದಯ್ಯ (ಚೂಟಿ ಚಿದಾನಂದ) ಅವರು ಕೆಲವು ಸಚಿವರ ಕಚೇರಿಯಲ್ಲಿ ನಡೆದ ಪ್ರಸಂಗಗಳನ್ನು ಹಾಸ್ಯಲೇಪನದೊಂದಿಗೆ ಇಲ್ಲಿ ನೀಡಿದ್ದಾರೆ. ಹಾಸ್ಯ, ರಸಿಕತೆಗಳಿಗೆ ಹೆಸರುವಾಸಿಯಾಗಿದ್ದ ಜೆ.ಎಚ್.ಪಟೇಲ್ ಅವರ ಕುರಿತ ಪ್ರಸಂಗಗಳು ನಗೆ ಉಕ್ಕಿಸುತ್ತವೆ. ಹಾಸ್ಯದ ಜತೆಯಲ್ಲಿ ಅಧಿಕಾರಿಗಳಿಗೆ ಉಂಟಾಗುವ ಇರಿಸುಮರುಸು, ಮಜುಗರ, ಬಾಯಿ ಮುಚ್ಚಿಕೊಂಡಿರಬೇಕಾದ ಅನಿವಾರ್ಯತೆ, ಪೀಕಲಾಟ, ಸಾಂದರ್ಭಿಕ ಸುಳ್ಳು ಹೇಳಬೇಕಾದ್ದು, ಕೆಲವರ ಪೆದ್ದುತನಗಳು, ಗೊತ್ತಿದ್ದರೂ ಗೊತ್ತಿಲ್ಲದಂತೆ ನಟನೆ… ಮತ್ತಿತರ ವಿಷಯಗಳು ಇಲ್ಲಿವೆ.

ಚೂಟಿ ಚಡಪಡಿಕೆಗಳು
ಹರಟೆಗಳು

ಚೂಟಿ ಚಿದಾನಂದ
ಪುಟ: 145  ಬೆಲೆ: ರೂ.125

ಪ್ರಥಮ ಮುದ್ರಣ: 2020

ಇದು ಪುಟ್ಟ ಪುಟ್ಟ ಹರಟೆಗಳನ್ನು ಒಳಗೊಂಡ ಕೃತಿ. ಹರಟೆ ಇನ್ನಷ್ಟು ಉದ್ದವಾಗಿರಬೇಕಿತ್ತು. ಆಗ ಇನ್ನಷ್ಟು ರಸಮಯತೆ ಹರಟೆಗೆ ಒಟ್ಟಂದ ನೀಡುತ್ತದೆ. ಆದರೂ ಇಲ್ಲಿನ ಲೇಖನಗಳಲ್ಲಿ ಗಮನ ಸೆಳೆಯುವ ವೈವಿಧ್ಯಮಯ ವಿಷಯಗಳಿವೆ.

ಇವೆರಡೂ ಪುಸ್ತಕಗಳ ಮುದ್ರಣ: ಶ್ರೀ ರಾಘವೇಂದ್ರ ಪ್ರಿಂಟರ್ಸ್, ನಂ.20, 2ನೇ ಕ್ರಾಸ್, 2ನೇ ಮುಖ್ಯರಸ್ತೆ, ಶಿವನಗರ, ರಾಜಾಜಿನಗರ, ಬೆಂಗಳೂರು-560010.

Leave a Reply

Your email address will not be published.