ಹೊಸ ಪುಸ್ತಕ

ಬಯಲೆಂಬೊ ಬಯಲು

ಬಯೋಪಿಕ್ ಕಾದಂಬರಿ

ಪ್ರೊ. ಎಚ್.ಟಿ. ಪೋತೆ

ಪುಟ: 214   ಬೆಲೆ: ರೂ.200

ಪ್ರಥಮ ಮುದ್ರಣ: 2020

ಪ್ರಕಾಶನ: ಕುಟುಂಬ ಪ್ರಕಾಶನ, ಪ್ಲಾಟ್ ನಂ. 140, ಪೂಜಾ ಕಾಲೋನಿ, ಕುಸುನೂರ ರಸ್ತೆ, ಕಲಬುರಗಿ-585106

ದಮನಕ್ಕೊಳಗಾದ ತಳವರ್ಗದ ಜೀವನವನ್ನು ಚಿತ್ರಿಸುತ್ತದೆ ಈ ಕಾದಂಬರಿ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದ ರಾಮಪ್ಪ, ಸ್ವಾತಂತ್ರ್ಯ ಸಂದರ್ಭದಲ್ಲಿ ಹುಟ್ಟಿದ ತಿಪ್ಪಣ್ಣ ಮತ್ತು ಸ್ವಾತಂತ್ರ್ಯ ಬಂದ ನಂತರ 60ರ ದಶಕದಲ್ಲಿ ಹುಟ್ಟಿದ ಹನುಮಂತ ಅವರ ಈ ಕಾದಂಬರಿಯ ನಾಯಕರು. ಕಳೆದ 80 ವರ್ಷಗಳಲ್ಲಿ ಈ ಸಮುದಾಯಗಳ ಸಮ ಸಮಾಜ ನಿರ್ಮಾಣದತ್ತ ಸಾಗಿದ ದಾರಿಯನ್ನು ಈ ಕಾದಂಬರಿ ವಿವರಿಸುತ್ತದೆ.

ಶರಣ ಕ್ರಾಂತಿ

ವಿಭಿನ್ನ ಪ್ರತಿಕ್ರಿಯೆಗಳು

ಸಂದರ್ಶನ-ಪ್ರಸ್ತುತಿ: ಡಾ.ಬಸವರಾಜ ಸಾದರ

ಪುಟ: 150 ಬೆಲೆ: ರೂ. 120

ಪ್ರಥಮ ಮುದ್ರಣ: 2020

ಪ್ರಕಾಶನ: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೇಲ್, ಗದಗ-582101

ಶರಣ ಕ್ರಾಂತಿಯನ್ನು ಕುರಿತು ನಾಡಿನ ಚಿಂತಕರ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಪ್ರೊ. ಬರಗೂರು ರಾಮ ಚಂದ್ರಪ್ಪ, ಎಂ.ಎಸ್. ಆಶಾದೇವಿ, ಪ್ರೊ. ಎಚ್.ಎಸ್.ಶಿವಪ್ರಕಾಶ್, ಡಾ.ಸಿದ್ಧಲಿಂಗಯ್ಯ, ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಸೇರಿದಂತೆ 15 ಚಿಂತಕರ ಅಭಿಪ್ರಾಯಗಳನ್ನು ಪ್ರಶ್ನೆ ಮತ್ತು ಉತ್ತರ ರೂಪದಲ್ಲಿ ಇಲ್ಲಿಡಲಾಗಿದೆ. ಶರಣರು, ವಚನಗಳು, ಸಾಮಾಜಿಕ ಸ್ಪಂದನೆಯ ಜೊತೆಯಲ್ಲಿ ವರ್ತಮಾನವನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಲಾಗಿದೆ.

ಅವ್ವ ಬರಲೇ ಇಲ್ಲ

ಕವನ ಸಂಗ್ರಹ

ಬಸವರಾಜು ಕುಕ್ಕರಹಳ್ಳಿ

ಪುಟ: 108 ಬೆಲೆ: ರೂ.75

ಪ್ರಥಮ ಮುದ್ರಣ: 2020

ಫಿಂಚ್ ಪಬ್ಲಿಷರ್ಸ್, ಎಂಐಜಿ 72, ಇ ಆಂಡ್ ಎಫ್ ಬ್ಲಾಕ್, ರಾಮಕೃಷ್ಣ ನಗರ, ಮೈಸೂರು-570022

ಕಥೆಗಳ ಮೂಲಕ ಪರಿಚಿತರಾಗಿರುವ ಬಸವರಾಜು ಕುಕ್ಕರಹಳ್ಳಿ ಅವರ ಈ ಸಂಕಲನದಲ್ಲಿ 33 ಕವನಗಳಿವೆ. ಸಾಮಾನ್ಯವಾಗಿ ಗೇಯತೆ ಮೀರಿದ ಆಧುನಿಕ ಪ್ರಕಾರದ ಈ ಕವನಗಳಲ್ಲಿ ಕೆಲವು ಚಿಕ್ಕವು, ಕೆಲವು ಅವಕ್ಕಿಂತಲೂ ಸ್ವಲ್ಪ ದೀರ್ಘವಾದವು. ಸಹಜವೆಂಬಂತೆ ತೋರುವ ಇಲ್ಲಿನ ಕವನಗಳಲ್ಲಿ ಅಂತರಂಗದ ಕಿಚ್ಚಿನ ಪ್ರತಿರೂಪವಿದೆ.

ಜಿನ್ನಾ ಕೋಮುವಾದಿಯೇ?

ಬಿ.ಎಂ.ಹನೀಫ್

ಪುಟ: 106  ಬೆಲೆ: ರೂ.100

ಪ್ರಥಮ ಮುದ್ರಣ: 2020

361, 6ನೇ ಕ್ರಾಸ್, ಎಚ್‍ಎಂಟಿ ಲೇಔಟ್, ನಾಗಸಂದ್ರ ಪೋಸ್ಟ್, ಬೆಂಗಳೂರು-560073

ಲೇಖಕರೇ ಹೇಳಿದಂತೆ ಜಿನ್ನಾ ಕುರಿತು ಪರಿಪೂರ್ಣ ಮಾಹಿತಿ ಹೊಂದಿರುವ ಕೃತಿ ಅಲ್ಲವಾದರೂ ಇತಿಹಾಸದ ತುಣುಕುಗಳನ್ನು ಹೆಕ್ಕಿ ನೀಡಲಾದ ಪುಸ್ತಕವಿದು. ಜಿನ್ನಾ ಕೋಮುವಾದಿ ಎಂದು ಬ್ರ್ಯಾಂಡ್ ಆಗಿದ್ದರ, ಮುಸ್ಲಿಂ ಲೀಗ್ ಅಧ್ಯಕ್ಷರಾದ ವಿವರಗಳು ಇಲ್ಲಿವೆ. ಪ್ರಾರ್ಥನೆಗೆ ಮಸೀದಿಯತ್ತ ತಲೆ ಹಾಕದ, ಪಾನಪ್ರಿಯ, ಇಂಗ್ಲಿಷ್ ವ್ಯಾಮೋಹಿ ಜಿನ್ನಾ ನಿಜಕ್ಕೂ ಕೋಮುವಾದಿಯೇ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವೇ ಈ ಕೃತಿ.

ಕನ್ನಡ ಕಹಳೆ

ಕನ್ನಡ ಕಾವಲುಗಾರರ ರೋಚಕ ಬದುಕು

ಪರಮೇಶ್ವರಯ್ಯ ಸೊಪ್ಪಿಮಠ

ಪುಟ: 264 ಬೆಲೆ: ರೂ.250

ಪ್ರಥಮ ಮುದ್ರಣ: 2020

ಪ್ರಭುದೇವರ ಜನಕಲ್ಯಾಣ ಸಂಸ್ಥೆ, ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠ, ಸೊಂಡೂರು-583119

16 ಕನ್ನಡಯೋಧರ ಜೀವನದ ಕಥೆಗಳ ಗುಚ್ಛವಿದು. ಕಿಟೆಲ್, ಡೆಪ್ಯೂಟಿ ಚೆನ್ನಬಸಪ್ಪ, ರೈಸ್, ರಾ.ಹ.ದೇಶಪಾಂಡೆ, ಗಳಗನಾಥರು, ಹಳಕಟ್ಟಿ, ಆಲೂರು ವೆಂಕಟರಾಯರು, ಉತ್ತಂಗಿ ಚೆನ್ನಪ್ಪ, ಜಯದೇವಿತಾಯಿ ಲಿಗಾಡೆ, ತೋಂಟದ ಸಿದ್ಧಲಿಂಗಮಹಾಸ್ವಾಮಿ, ಶಿವಮೂರ್ತಿಸ್ವಾಮಿ, ರಂಜಾನ್‍ಸಾಹೇಬ್, ರಾಮಮೂರ್ತಿ, ಕೋಚೆ, ದೊಡ್ಡಮೇಟಿ ಅಂದಾನಪ್ಪ, ಪಾಪು- ಇವರು ಕನ್ನಡಕ್ಕಾಗಿ ದುಡಿದಿರುವುದನ್ನು ಕಣ್ಮುಂದೆ ಅಚ್ಚೊತ್ತಿ ನಿಲ್ಲಿಸಿದಂತೆ ಬಿಡಿಸಿಡಲಾಗಿದೆ. ಕನ್ನಡಕ್ಕಾಗಿ ನಡೆಸಿದ ಹೋರಾಟ, ದಿಟ್ಟ ಹೆಜೆ, ಎದುರಾದ ಆತಂಕಗಳಿಗೆ ಹಿಂಜರಿಯದೆ ಮುನ್ನುಗ್ಗಿರುವ ಸನ್ನಿವೇಶಗಳು ಇಲ್ಲಿವೆ.

ಜಿನ್ನಾರಿಂದ ಮೋದಿವರೆಗೆ

ನಾಯಕರು ಮತ್ತು ಸ್ಮರಣೀಯರು

ಕುಲದೀಪ್ ನಯ್ಯರ್

ಕನ್ನಡಕ್ಕೆ: ಡಾ.ಮಹಾಬಲೇಶ್ವರ ರಾವ್

ಪುಟ: 136  ಬೆಲೆ: ರೂ.140

ಪ್ರಥಮ ಮುದ್ರಣ: 2020

ನವಕರ್ನಾಟಕ ಪಬ್ಲಿಕೇಷನ್ಸ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560001

ಮಹಾತ್ಮ ಗಾಂಧಿ, ಖಾನ್ ಅಬ್ದುಲ್ ಗಫಾರ್ ಖಾನ್, ನೆಹರೂ, ಶಾಸ್ತ್ರಿ, ಇಂದಿರಾ, ಮೀನಾ ಕುಮಾರಿ ವಾಜಪೇಯಿ, ಮನಮೋಹನ್‍ಸಿಂಗ್, ನರೇಂದ್ರ ಮೋದಿ ಒಳಗೊಂಡಂತೆ 18 ನಾಯಕರ ಕುರಿತ ಬರಹಗಳನ್ನು ಒಳಗೊಂಡ ಕೃತಿ ಇದು. ಈ ನಾಯಕರ ಜೊತೆ ನೇರ ಮುಖಾಮುಖಿ ಹೊಂದಿದ್ದವರು ಕುಲದೀಪ್ ನಯ್ಯರ್. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರದ ನಾಯಕರ ನಡೆಗಳು, ವಿದೇಶ ವ್ಯವಹಾರಗಳನ್ನು ಬಲ್ಲವರು ಕುಲದೀಪ್ ನಯ್ಯರ್(1923-2018). ನಿಧನರಾಗುವ ಕೆಲ ವಾರಗಳ ಮುನ್ನ ಈ ಪುಸ್ತಕ (ಇಂಗ್ಲಿಷ್) ಸಿದ್ಧಪಡಿಸಿದ್ದರು.

ಕಾಲಯಾತ್ರೆ

ಕಾದಂಬರಿ

ಕೃಷ್ಣಮೂರ್ತಿ ಹನೂರು

ಪುಟ: 120 ಬೆಲೆ: ರೂ.120

ಪ್ರಥಮ ಮುದ್ರಣ: 2020

ಅಂಕಿತ ಪುಸ್ತಕ, ನಂ.53, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು-560004

ಕಾದಂಬರಿಗೆ ಬೆನ್ನುಡಿ ಬರೆದ ಎಚ್.ಎಸ್.ಶಿವಪ್ರಕಾಶ್ ಅವರ ಸಾಲುಗಳಿವು- “ಹನೂರರ ಹೊಸ ಕಾದಂಬರಿ ಎಲ್ಲ ರೀತಿಯಲ್ಲೂ ಹೊಸತು. ಅವರು ತಮ್ಮ ಹಳೆಯ ಯಶಸ್ವೀ ಪ್ರಯೋಗಗಳನ್ನು ಪುನರಾವರ್ತಿಸದೆ ಹೊಸ ದಾರಿ ಹಿಡಿದು ಹೊಸ ರೀತಿಯ ಅನುಭವಗಳನ್ನು ತಮ್ಮ ಅಪರೂಪದ ಕಥನಕಲೆಯ ಮೂಲಕ ನಿರೂಪಿಸಿದ್ದಾರೆ…” ಜನ ಸಾಮಾನ್ಯನ ಜೀವಯಾನದ ಈ ‘ಕಾಲಯಾತ್ರೆ’ ಕಾದಂಬರಿ ಮನಸ್ಸನ್ನು ಆದ್ರ್ರವಾಗಿಸುತ್ತದೆ ಮತ್ತು ಹಿಡಿದು ನಿಲ್ಲಿಸುತ್ತದೆ.

ಎಲ್ಲರ ಭಾರತ

ಇಂಗ್ಲಿಷ್: ಇveಡಿಥಿoಟಿe’s Iಟಿಜiಚಿ

ರಾಜಮೋಹನ ಗಾಂಧಿ

ಅನುವಾದ: ಈ.ಧನಂಜಯ ಎಲಿಯೂರು

ಪುಟ: 60 ಬೆಲೆ: ರೂ.50

ಪ್ರಥಮ ಮುದ್ರಣ: 2020

ಗಾಂಧಿ ವಿಚಾರ ಪರಿಷತ್ತು, ನೃಪತುಂಗ ಕನ್ನಡ ಶಾಲೆ, ರಾಮಕೃಷ್ಣನಗರ, ಮೈಸೂರು-570022

ಮೈಸೂರಿನಲ್ಲಿ 2019ರ ಡಿಸೆಂಬರ್‍ನಲ್ಲಿ ನಡೆದ ರಾಷ್ಟ್ರಮಟ್ಟದ ವಿಚಾರಸಂಕಿರಣವನ್ನು ಉದ್ದೇಶಿಸಿ ಮಹಾತ್ಮ ಗಾಂಧೀಜಿ ಮೊಮ್ಮಗ ರಾಜಮೋಹನ ಗಾಂಧಿ ನೀಡಿದ ಆಶಯ ಭಾಷಣದ ಇಂಗ್ಲಿಷ್ ಮತ್ತು ಕನ್ನಡದ ಅವತರಣಿಕೆ ಇಲ್ಲಿದೆ. ಜಾತಿ, ಧರ್ಮಗಳ ನಡುವೆ ಕಂದಕಗಳನ್ನು ಸೃಷ್ಟಿ ಮಾಡಿ ಸಾಮಾಜಿಕ ಹಂದರವನ್ನು ಒಡೆಯುತ್ತಿರುವ ಕುಟೀಲ ಸಂಚಿಗೆ ಪ್ರತಿಯಾಗಿ ರಾಜಮೋಹನ ಗಾಂಧಿಯವರು ಸ್ಪಷ್ಟ ಮಾನವೀಯ ಚಿಂತನೆಗಳನ್ನು ನೀಡಿದ್ದಾರೆ.

ಸಂವಾದ

ಪ್ರಸ್ತುತ ಸಮಾಜ ಪ್ರಜ್ಞೆಯ ಲೇಖನಗಳು

ಪ್ರೊ.ಸಿ.ಎನ್.ಶ್ರೀನಾಥ್

ಪುಟ: 48  ಬೆಲೆ: ರೂ.40

ಪ್ರಥಮ ಮುದ್ರಣ: 2020

ಶ್ರೀ ರಾಜೇಂದ್ರ ಪ್ರಿಂಟರ್ಸ್ ಆ್ಯಂಡ್ ಪಬ್ಲಿಷರ್ಸ್

12/1, ಈವ್ನಿಂಗ್ ಬಜಾರ್ ಹಿಂಭಾಗ, ಶಿವರಾಂಪೇಟೆ, ಮೈಸೂರು-570001

11 ಪುಟ್ಟ ಲೇಖನಗಳ ಸಂಕಲನವಿದು. ಆರೋಗ್ಯಪೂರ್ಣ ಸಮಾಜ, ಸುಸ್ಥಿರ ಬೆಳವಣಿಗೆ, ಸನ್ನಡತೆಯ ಜೀವನ ಕುರಿತು ಲೇಖನಗಳಲ್ಲಿ ತಿಳಿಸಲಾಗಿದೆ. ಪ್ರೇರಣನಾತ್ಮಕ ಮತ್ತು ಸತ್‍ಚಿಂತನೆಯುಳ್ಳ ಲೇಖನಗಳಿವು. ಬದುಕು ನೇರಗೊಳಿಸುವ ಮತ್ತು ಸ್ವಾರ್ಥರಹಿತ ಚಿಂತನೆಯನ್ನು ಬರಹಗಳು ತಿಳಿಸುತ್ತವೆ.

ಸಾಹಿತ್ಯ ಸಾಧಕರು

ಡಾ.ಬಸವರಾಜ ಸಬರದ

ಪುಟ: 284  ಬೆಲೆ: ರೂ.200

ಪ್ರಥಮ ಮುದ್ರಣ: 2019

ಪಲ್ಲವಿ ಪ್ರಕಾಶನ, ಕಲಬುರಗಿ-585106

ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ನಿರಂಜನ, ಸಿದ್ಧಯ್ಯ ಪುರಾಣಿಕ, ಜಯತೀರ್ಥ ರಾಜಪುರೋಹಿತ, ಅನಂತ ಮೂರ್ತಿ, ಗಿರೀಶ ಕಾರ್ನಾಡರ ಸಾಹಿತ್ಯಕೃತಿಗಳ ಅವಲೋಕನ ಇಲ್ಲಿದೆ. ನಿರಂಜನರ ಸಮಗ್ರ ಕೃತಿಗಳು, ಪುರಾಣಿಕರ ವಚನಗಳ ಹೊಸ ಓದು, ಜಯತೀರ್ಥರ ಬದುಕು-ಬರಹ, ಅನಂತಮೂರ್ತಿಯವರ ಸಮಗ್ರ ಸಾಹಿತ್ಯ, ಕಾರ್ನಾಡರ ನಾಟಕಗಳ ಕುರಿತ ಲೇಖನಗಳು ಇಲ್ಲಿವೆ.

ಶರಣರ ಸಾಮಾಜಿಕ ಸಿದ್ಧಾಂತಗಳು

ಡಾ.ಬಸವರಾಜ ಸಬರದ

ಪುಟ: 140   ಬೆಲೆ: ರೂ.100

ಪ್ರಥಮ ಮುದ್ರಣ: 2020

ಬಸವಧರ್ಮ ಪ್ರಸಾರ ಸಂಸ್ಥೆ, ಹಿರೇಮಠ ಸಂಸ್ಥಾನ, ಭಾಲ್ಕಿ, ಬೀದರ-585328

ಶರಣರ ಸಾಮಾಜಿಕ ಸಿದ್ಧಾಂತಗಳಾದ ಕಾಯಕ, ದಾಸೋಹ, ಸಾಮಾಜಿಕ ನ್ಯಾಯಗಳ ಬಗ್ಗೆ ಇಲ್ಲಿನ ಲೇಖನಗಳಲ್ಲಿ ವಿವರಿಸಲಾಗಿದೆ. ಬರಹಗಳ ಮೂಲಕ, ಅವುಗಳನ್ನು ಜೋಡಿಸಿಟ್ಟ ಪರಿಯ ಮೂಲಕ ಶರಣರ ಸರಳ ಸಿದ್ಧಾಂತಗಳು ಇನ್ನಷ್ಟು ಆಪ್ಯಾಯಮಾನವಾಗಿ ಮನಸ್ಸಿಗೆ ನಾಟುತ್ತವೆ. ದೇಹವನ್ನೇ ದೇವಾಲಯವನ್ನಾಗಿ ಮಾಡಿದ್ದು ಶರಣರ ಧಾರ್ಮಿಕ ಸಿದ್ಧಾಂತವಾದರೆ, ಕಾಯದಿಂದಲ್ಲೇ ಕಾಯಕವನ್ನು ಕಟ್ಟಿರುವುದು ಸಾಮಾಜಿಕ ಸಿದ್ಧಾಂತವೆಂಬ ಆರಂಭದ ವಾಕ್ಯಗಳು ಕೃತಿ ಓದಲು ಪ್ರೇರೇಪಿಸುತ್ತದೆ.

ಬಸವ ಮಾರ್ಗ

ಶರಣ ಸಾಹಿತ್ಯ ಕುರಿತ ಸಂಶೋಧನಾತ್ಮಕ ಲೇಖನಗಳು

ಡಾ.ಬಸವರಾಜ ಸಬರದ

ಪುಟ: 188 ಬೆಲೆ: ರೂ.180

ಪ್ರಥಮ ಮುದ್ರಣ: 2020

ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಎಡೆಯೂರು-ಡಂಬಳ-ಗದಗ.

ಲಿಂಗಾಯತ ನೂತನ ಸಾಹಿತ್ಯ ರತ್ನಮಾಲೆಯ 44ನೇ ಕೃತಿ ಇದು. ಶರಣ ಸಾಹಿತ್ಯ ಸಂಶೋಧನಾತ್ಮಕ ಕೃತಿಗಳನ್ನು ಅಧ್ಯಯನ ನಡೆಸಿ ಲೇಖನಗಳನ್ನು ಸಿದ್ಧಪಡಿಸಲಾಗಿದೆ. ಬಸವಣ್ಣ ಮತ್ತು ಪ್ರಸ್ತುತ ಸಂದರ್ಭ, ಬಸವಣ್ಣನ ವಚನಗಳಲ್ಲಿ ಮನೋವಿಜ್ಞಾನ, ಬಸವತತ್ವದಲ್ಲಿ ಮಾನವಸಂಪನ್ಮೂಲಗಳ ಪರಿಕಲ್ಪನೆ, ವಚನಗಳ ಪ್ರಾಯೋಗಿಕ ವಿಮರ್ಶೆ ಸೇರಿದಂತೆ 8 ಲೇಖನಗಳು ಇಲ್ಲಿ ನೀಡಲಾಗಿದೆ. ಈ ಕೃತಿ ಬಸವಣ್ಣನವರ ಜೀವನಚರಿತ್ರೆಯಾಗಿರದೆ, ನಾನು ಕಂಡುಕೊಂಡ ಬಸವಮಾರ್ಗವಾಗಿದೆ ಎಂದು ಲೇಖಕರು ಹೇಳಿದ್ದಾರೆ.

ಸಬರಮತಿ

ಕಾವ್ಯ-ಕಥನ

ಪುಟ: 88  ಬೆಲೆ: ರೂ.80

ಪ್ರಥಮ ಮುದ್ರಣ: 2020

ಸಬರಮತಿ ಪದವೇ ಗಾಂಧಿ ಚೈತನ್ಯವನ್ನು ಮನದಲ್ಲಿ ತುಂಬಿಸುತ್ತದೆ. ದಿವಿಯ ಕನಸು, ಯುಗದ ಉತ್ಸಾಹವೇ ಜೀವ ತಳೆದು, ಲಾಲಿ, ನದಿ ಮತ್ತು ನಾನು, ಹೊಳೆಯ ಮಗಳು, ತುತ್ತಿನೊಳಗೆ ಕುತ್ತು, ಕಾವ್ಯಕಾರಣ, ಇತರ ಕವನಗಳನ್ನು ಹೊಂದಿರುವ ಈ ಕಾವ್ಯ-ಕಥನ ಸಂಕಲನದಲ್ಲಿ ಬದುಕಿನ ಪ್ರತಿಬಿಂಬಗಳನ್ನು ಕಾಣಬಹುದು. ಅಬ್ಬರವಿಲ್ಲದ ಸರಳ ಪದಗಳ ಕಟ್ಟೋಣ ಎಲ್ಲರ ಮನಸ್ಸನ್ನು ತಟ್ಟುತ್ತದೆ. ಈ ಸರಳತೆಯಲ್ಲಿ ಸೂಕ್ಷ್ಮ-ಗಟ್ಟಿತನದ ಕುಸುರಿ ಒಡಮೂಡಿದೆ.

ಮುಟ್ಟು

ವಿಜ್ಞಾನ ಸಂಸ್ಕøತಿ ಮತ್ತು ಅನುಭವ

ಪುಟ: 174  ಬೆಲೆ: ರೂ.120

ಪ್ರಥಮ ಮುದ್ರಣ: 2020

ಸ್ವಂತ ವೈದ್ಯೆಯಾಗಿರುವ ಡಾ.ಎಚ್.ಎಸ್.ಅನುಪಮಾ ಅವರು ಮುಟ್ಟಿನ ಕುರಿತ ವಿಜ್ಞಾನ, ಸಂಸ್ಕøತಿ, ಅನುಭವಗಳ ಮೇಳೈಸಿ ಈ ಕೃತಿಯನ್ನು ರೂಪಿಸಿದ್ದಾರೆ. ಮುಟ್ಟು ಎಂಬ ಸಹಜಕ್ರಿಯೆ ಹೆಣ್ಣಿಗೆ ಹಲವು ಸಂಕಟಗಳನ್ನು ತರುತ್ತದೆ. ಮುಟ್ಟಿನ ವೇದನೆಗಳನ್ನು ಅನುಭವಿಸಿದವರೇ ಬಲ್ಲರು. ನಮ್ಮ ಸಮಾಜದ ಮಡಿವಂತಿಕೆಯು ಮುಟ್ಟಾದವಳನ್ನು ‘ಅಪರಾಧಿ’ ಎಂದೇ ನೋಡುವ ಪರಿಗೆ ಪೂರ್ಣವಿರಾಮ ಹಾಕಲು ಇಲ್ಲಿನ ಬರಹಗಳು ನೆರವಾಗುತ್ತವೆ. ಮಹಿಳೆಯರು ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿರುವುದು ವಿಶೇಷ.

ಹೆಣ್ಣು ಹೆಜ್ಜೆ

ಮಹಿಳಾ ಮಾದರಿ – ಮಾರ್ಗ

ಪುಟ: 270  ಬೆಲೆ: ರೂ.200

ಪ್ರಥಮ ಮುದ್ರಣ: 2020

ಈ ಪುಸ್ತಕದಲ್ಲಿ ಹೆಜ್ಜೆ ಗುರುತು ಮತ್ತು ಕಲ್ಲುಮುಳ್ಳಿನ ಹಾದಿ ಎಂದು ಎರಡು ವಿಭಾಗಗಳಲ್ಲಿ 28 ಲೇಖನಗಳನ್ನು ನೀಡಲಾಗಿದೆ. ವಿಮೆನ್ ಇನ್ ಬ್ಲ್ಯಾಕ್: ಬೀದಿಯ ಪರ್ಯಾಯ ಶಕ್ತಿ, ಅನುರಾಧಾ ಗಾಂಧಿ, ತೆಹಮಿನಾ ದುರಾನಿ, ಡಾ.ಮುತ್ತುಲಕ್ಷ್ಮಿ ರೆಡ್ಡಿ, ಕವಿತಾ ಕೃಷ್ಣನ್, ದಲಿತ ಮಹಿಳಾ ಅರಿವು, ರಾಜಸ್ಥಾನದ ರಾಣಿಯರು, ಮೀ ಟೂ, ತಲಾಖ್ ನಿಷೇಧ, ಸ್ತ್ರೀ ಬ್ರೂಣ ಹತ್ಯೆ: ಹೀಗೊಂದು ಚಿಂತನೆ, ಇತರ ಲೇಖನಗಳು ಇಲ್ಲಿವೆ. ಸ್ತ್ರೀ ಹೋರಾಟದ ಕಿರಣಗಳನ್ನು ಕೃತಿ ಪ್ರತಿನಿಧಿಸುತ್ತದೆ.

ಮೇಲಿನ ಮೂರೂ ಪುಸ್ತಕಗಳ ಲೇಖಕರು ಡಾ.ಎಚ್.ಎಸ್.ಅನುಪಮಾ, ಪ್ರಕಾಶಕರು: ಲಡಾಯಿ ಪ್ರಕಾಶನ, ನಂ.21, ಪ್ರಸಾದ್ ಹಾಸ್ಟೆಲ್, ಗದಗ-582101

Leave a Reply

Your email address will not be published.