ಹೊಸ ಪುಸ್ತಕ

ಶ್ರೀರಾಮಾಯಣ ದರ್ಶನಂ ಪಾತ್ರಗಳ ಕಥಾವಳಿ

ಡಾ.ಜಿ.ಕೃಷ್ಣಪ್ಪ

ಪುಟ: 120 ಬೆಲೆ: ರೂ.120

ಪ್ರಥಮ ಮುದ್ರಣ: 2021

ವಂಶಿ ಪ್ರಕಾಶನ, ನೆಲಮಂಗಲ

ಸಂಪರ್ಕ: 9916595916

ಕುವೆಂಪು ಅವರ ಶ್ರೀರಾಮಾಯಣ ದರ್ಶನಂಮಹಾಕಾವ್ಯದ ಪಾತ್ರಗಳನ್ನು ಬಳಸಿಕೊಂಡಿರುವ ಲೇಖಕರು, ಅಲ್ಲಿನ ಒಂಬತ್ತು ಪಾತ್ರಗಳನ್ನು ತೆಗೆದುಕೊಂಡು ಒಂದು ಕಥಾವಳಿಯನ್ನು ನಿರೂಪಿಸಿದ್ದಾರೆ. ಮೂಲ ಪುಸ್ತಕವನ್ನು ಸಂಪೂರ್ಣವಾಗಿ ಅನುಕರಿಸಿ, ಅಲ್ಲಲ್ಲಿ ಕಥೆಯ ಓಟಕ್ಕೆ ಅನುಗುಣವಾಗುವಂತೆ ಒಂದಷ್ಟು ಮಾರ್ಪಾಟುಗಳನ್ನು ಲೇಖಕರು ಮಾಡಿಕೊಂಡಿದ್ದಾರೆ. ಮಂಥರೆ, ಶಬರಿ, ವಾಲಿ, ಮಾರೀಚ, ಮಂಡೋದರಿ, ಮಹಾಪಾಶ್ರ್ವ, ಅತಿಕಾಯ, ಉರ್ಮಿಳೆ, ಅನಲೆ ಒಂಬತ್ತು ಪಾತ್ರಗಳೇ ಪುಸ್ತಕದಲ್ಲಿ ಮತ್ತೆ ಮರುಹುಟ್ಟು ಪಡೆದಿರುವುದು.


ಅಲ್ಲಮ ಪ್ರಭು

ಕಥನಕಾವ್ಯ

ಚಂದ್ರಶೇಖರ ವಸ್ತ್ರದ

ಪುಟ: 92 ಬೆಲೆ: ರೂ.25

ಪ್ರಥಮ ಮುದ್ರಣ: 2021

ಪ್ರಭು ಗ್ರಾಫಿಕ್ಸ್, ಗದಗ

ಸಂಪರ್ಕ: 9448677434

ಶರಣ, ಅನುಭವ ಮಂಟಪದ ಅಧ್ಯಕ್ಷ, ಬಸವಣ್ಣನ ಗುರು ಅಲ್ಲಮಪ್ರಭು ಬಗೆಗಿನ ಕಿರು ಕಥನಕಾವ್ಯವಿದು. ಅಕ್ಷರಗಳ ಆವರಣಕ್ಕೆ ನಿಲುಕದ, ಸೀಮಿತ ಅರ್ಥದ ಪರಿಮಿತಿಗೆ ಸಿಲುಕದ ಅಲ್ಲಮ ಒಂದು ರೀತಿಯಲ್ಲಿ ವಿಸ್ಮಯಕಾರಿ ಶರಣ. ಈಗಾಗಲೇ ಅಲ್ಲಮನ ಕುರಿತಾಗಿ ಆತನ ಚರಿತೆಯನ್ನು ಇಟ್ಟುಕೊಂಡು ಸಾಕಷ್ಟು ಕೃತಿಗಳು ಬಂದಿವೆ. ಆದರೆ ಕೃತಿಯನ್ನು ಜನ ಸಾಮಾನ್ಯನ ದೃಷ್ಟಿಯನ್ನು ಇಟ್ಟುಕೊಂಡು ರಚಿಸಲಾಗಿದೆ ಎಂದು ಬೆನ್ನುಡಿಯಲ್ಲಿ ಹೇಳಲಾಗಿದೆ. ಅಲ್ಲಮನ ಬಗೆಗೆ ಇರುವ ಪೂರ್ವ ಕಥಾನಕಗಳನ್ನು ಹೊಸ ವಿನ್ಯಾಸದಲ್ಲಿ ಇಲ್ಲಿ ನೋಡಿರುವುದು ಕೃತಿಯ ವಿಶೇಷ. ಅಲ್ಲಮನ ಮಹಿಮೆಯನ್ನು ಸರಳವಾಗಿ ನಿರೂಪಿಸಲಾಗಿದೆ. ಪುಸ್ತಕ ಓದಿದವರಿಗೆ ಕೊನೆಯಲ್ಲಿ ಉಳಿಯುವುದು ಅಲ್ಲಮನ ವ್ಯಕ್ತಿತ್ವದ ಬೆರಗು ಮಾತ್ರ.


ಅನಾಥೆ

ಕಥಾ ಸಂಕಲನ

ನೂರಜಹಾನ್ ಹೊಸಪೇಟೆ

ಪುಟ: 128 ಬೆಲೆ: ರೂ.120

ಪ್ರಥಮ ಮುದ್ರಣ: 2021

ಆಶಾ ಪ್ರಕಾಶನ, ಹೊಸಪೇಟೆ

ಒಟ್ಟು 11 ಕತೆಗಳು ಸಂಕಲನದಲ್ಲಿವೆ. ಇಲ್ಲಿರುವ `ಪಾಕೀಜಕತೆ ಇತರ ಕತೆಗಳಿಗಿಂತ ಹೆಚ್ಚು ಸೆಳೆಯುತ್ತದೆ. ಕಣ್ಣುಗಳು, ಬುರ್ಖಾ, ಕಲಿಯುಗದ ಕುಂತಿ, ಆದರ್ಶ ಪ್ರೇಮ, ಅನುಮಾನ ಎಲ್ಲಾ ಕತೆಗಳು ಗಂಡುಹೆಣ್ಣಿನ ಪ್ರೀತಿ ಹಾಗೂ ಜೀವನದ ಸಂಘರ್ಷವನ್ನು ತೆರೆದಿಡುತ್ತಾ ಹೋಗುತ್ತವೆ; ಮುಖ್ಯವಾಗಿ ಸ್ತ್ರೀ ಸಂವೇದನೆಯನ್ನು ಹೇಳುತ್ತವೆ. ಮುಸ್ಲಿಂ ಸಮುದಾಯದ ಸಂವೇದನೆಗಳನ್ನು ಇಟ್ಟುಕೊಂಡು ಸಮಕಾಲೀನ ಸಾಮಾಜಿಕ ಸಂದರ್ಭಗಳನ್ನು ಕಥನದ ವಸ್ತುವಾಗಿ ಲೇಖಕಿ ಇಲ್ಲಿ ಬಳಸಿಕೊಂಡಿದ್ದಾರೆ.


ದಿವಾನ್ ಪೂರ್ಣಯ್ಯ

ಮೈಸೂರು ರಾಜ್ಯದ ಮೊದಲ ದಿವಾನರು

ಎಂ.ಎನ್.ಸುಂದರ್ರಾಜ್

ಪುಟ: 192 ಬೆಲೆ: ರೂ.195

ಪ್ರಥಮ ಮುದ್ರಣ: 2021

ಕಡು ಬಡತನದಲ್ಲೇ ಬೆಳೆದ ಪೂರ್ಣಯ್ಯ, ಚಿಕ್ಕ ವಯಸ್ಸಿನಲ್ಲಿಯೇ ಲೆಕ್ಕ ಬರೆಯುವ ಕೆಲಸಕ್ಕೆ ಸೇರಿಕೊಂಡು, ಕೆಲಸದಲ್ಲಿ ಗಳಿಸಿದ ನೈಪುಣ್ಯ, ಚಾಲಾಕಿತನ ಬುದ್ಧಿವಂತಿಕೆಗಳು ಮೈಸೂರಿನ ದಿವಾನರ ಹಂತಕ್ಕೆ ಕರೆದೊಯ್ಯಿತು. ಹೈದರಾಲಿಯ ಕಣ್ಣಿಗೆ ಬಿದ್ದ ಪೂರ್ಣಯ್ಯ ಖಜಾನೆಯ ಗುಮಾಸ್ತರಾಗಿ ಕೆಲಸ ಆರಂಭಿಸಿದರು. ಹೈದರಾಲಿ, ಟಿಪ್ಪು, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ದಿವಾನರಾಗಿ ಸುಮಾರು 40 ವರ್ಷಗಳ ಕಾಲ ಮೈಸೂರು ಸಂಸ್ಥಾನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ವ್ಯಕ್ತಿ ಪೂರ್ಣಯ್ಯ. ಇತಿಹಾಸದ ಮೇರು ವ್ಯಕ್ತಿತ್ವದ ಬಗ್ಗೆ ಅತ್ಯಂತ ಸವಿವರವಾಗಿ ಪುಸ್ತಕದಲ್ಲಿ ದಾಖಲಿಸುತ್ತಾ ಹೋಗಲಾಗಿದೆ. ಇತಿಹಾಸವನ್ನು ಅತ್ಯಂತ ಸ್ವಾರಸ್ಯವಾಗಿ ಹೇಳುತ್ತಾ ಹೋಗಿರುವುದು ಪುಸ್ತಕದ ಪ್ರಮುಖ ಅಂಶ.


ಒಂದು ಕನಸಿನ ಪಯಣ

ಪ್ರವಾಸ ಕಥನ

ನೇಮಿಚಂದ್ರ

ಪುಟ: 344 ಬೆಲೆ: ರೂ.350

ಪ್ರಥಮ ಮುದ್ರಣ: 2021

ಲೇಖಕಿ ನೇಮಿಚಂದ್ರ ಪ್ರವಾಸ ಕಥನವನ್ನು ಅತ್ಯಂತ ರೋಚಕವಾಗಿ ಬರೆಯುವವರಲ್ಲಿ ಒಬ್ಬರು. ಸುಮಾರು ಕಾಲು ಶತಮಾನದ ಹಿಂದೆ ಮಹಿಳೆಯರಿಬ್ಬರು, ಇಂಗ್ಲೆಂಡ್ ಮತ್ತು ಯುರೋಪ್ ಅಲೆದು ಬಂದ ಕತೆಯೇ ಪುಸ್ತಕ. ಅಲ್ಪ ಹಣದಲ್ಲಿಯೇ ಸುತ್ತಾಡಿ ಅಗಾಧ ಅನುಭವಗಳನ್ನು ಇಲ್ಲಿ ದಾಖಲಿಸಿರುವ ಲೇಖಕಿ ಕನಸು ಕಂಡರೆ ಸಾಕು, ಹಾರಲಿಕ್ಕೆ ರೆಕ್ಕೆಗಳು ತೆರೆಯುತ್ತವೆಎಂದು ಹೇಳಿದ್ದಾರೆ. ಲೇಖಕಿಯ ಜರ್ನಿ ಓದುತ್ತಿದ್ದರೆ ಯುರೋಪ್ ಪ್ರವಾಸ ಮಾಡಿ ಬಂದ ಅನುಭವ ಓದುಗರಿಗಾಗುತ್ತದೆ.


ಚೆನ್ನಭೈರಾದೇವಿ

ಕರಿಮೆಣಸಿನ ರಾಣಿಯ

ಅಕಳಂಕ ಚರಿತೆ (ಕಾದಂಬರಿ)

ಡಾ. ಗಜಾನನ ಶರ್ಮ

ಪುಟ: 432 ಬೆಲೆ: ರೂ.395

ಪ್ರಥಮ ಮುದ್ರಣ: 2021

ನಮ್ಮ ದೇಶಕ್ಕೆ ಕಾಲಿಟ್ಟ ಪರಕೀಯರ ವಿರುದ್ಧ ಮೊದಮೊದಲು ದಂಗೆ ಎದ್ದಿದ್ದೆ ಸಣ್ಣಪುಟ್ಟ ಪಾಳಯಗಳು. ಅದರಂತೆ ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು ಸುಮಾರು 54 ವರ್ಷಗಳ ಕಾಲ ಆಳಿದ ಚೆನ್ನಭೈರಾದೇವಿಯ ಹೋರಾಟದ ಕಥನದ ಅಕ್ಷರ ರೂಪವೇ ಕಾದಂಬರಿ. ಜೈನಧರ್ಮಿಯರ ಸಾಹಸ ತ್ಯಾಗದ ಚಿತ್ರಣ ಸೇರಿದಂತೆ, ಮಲೆನಾಡು, ಕರಾವಳಿಯ ಜನಜೀವನದ ಜೊತೆ, ಜೊತೆಗೆ ಇತಿಹಾಸವನ್ನು ಹೇಳುತ್ತಾ ಹೋಗಲಾಗಿದೆ. ದೇವಿಯ ಬದುಕಿನ ಅಪರೂಪದ ಘಟನೆಗಳು, ರೋಮಾಂಚನಕಾರಿ ಸಂಗತಿಗಳನ್ನು ಹೇಳುತ್ತಾ ಹೋಗುತ್ತದೆ ಕಾದಂಬರಿ. ಇದು ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ.


ಕಾಲಕೋಶ

ಕಾದಂಬರಿ

ಶಶಿಧರ ಹಾಲಾಡಿ

ಪುಟ: 160 ಬೆಲೆ: ರೂ.160

ಪ್ರಥಮ ಮುದ್ರಣ: 2021

ಸುಮಾರು 10 ವರ್ಷಗಳ ಹಿಂದೆ ಬರೆದಿದ್ದ ಕಾದಂಬರಿ, ಎಡೆಬಿಡದೆ ಕಾಡಿ ಲಾಕ್ಡೌನ್ ಸಂದರ್ಭದಲ್ಲಿ ಒಪ್ಪ, ಓರಣಗೊಂಡು ಪುಸ್ತಕವಾಗಿದೆ ಎಂದು ಲೇಖಕರು ಹೇಳಿದ್ದಾರೆ. 1947 ಅಂದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ವರ್ಷ ಹಾಗೂ ಅಲ್ಲಿಂದ 1984 ತನಕದ ಕಾಲಘಟ್ಟದಲ್ಲಿ ನಡೆಯುವ ಕಥನ ಇದಾಗಿದೆ. ದೆಹಲಿಯಲ್ಲಿ ವೃತ್ತಿ ಜೀವನ ಕಂಡುಕೊಂಡಿದ್ದ ಕರ್ನಾಟಕದ ಯುವಕನಿಗೆ ಸಿಖ್ ಹಾಗೂ ಮಹರಾಷ್ಟ್ರದ ಕುಟುಂಬದ ಜೊತೆಗೆ ಆಗುವ ಮುಖಾಮುಖಿ ಮೂಲಕ ಕಾದಂಬರಿಯ ಕಥಾವಸ್ತು ಬೆಳೆಯುತ್ತಾ ಹೋಗುತ್ತದೆ. ದೇಶ ವಿಭಜನೆಯ ಸನ್ನಿವೇಶ ಪ್ರಾಸಂಗಿಕವಾಗಿ ಇಲ್ಲಿ ಬಂದು ಹೋಗುತ್ತದೆ.

ನಾಲ್ಕು ಪುಸ್ತಕಗಳ ಪ್ರಕಾಶಕರು ಅಂಕಿತ ಪುಸ್ತಕ, ಬೆಂಗಳೂರು, ಸಂಪರ್ಕ: 080- 26617755/26617100


ಹೆಣ್ಣಿನ ಸ್ಥಾನಮಾನ

ಸ್ತ್ರೀಯರ ಸ್ಥಿತಿಗತಿ ಕುರಿತು ವೈಚಾರಿಕ ಪ್ರಬಂಧ

ಮೂಲ: ಶರತ್ಚಂದ್ರ ಚಟ್ಟೋಪಾಧ್ಯಾಯ

ಕನ್ನಡಕ್ಕೆ: ಸಿದ್ಧಲಿಂಗ ಪಟ್ಟಣಶೆಟ್ಟಿ

ಪುಟ: 128 ಬೆಲೆ: ರೂ.120

ಎರಡನೇ ಮುದ್ರಣ: 2021

ಪ್ರಸಿದ್ಧ ಲೇಖಕ ಶರತ್ಚಂದ್ರ ಚಟ್ಟೋಪಾಧ್ಯಾಯ ಸ್ತ್ರೀಯರ ಸ್ಥಾನಮಾನವನ್ನು ಕುರಿತು ಬೆಂಗಾಲಿ ಭಾಷೆಯಲ್ಲಿ ಬರೆದ `ನಾರೀರ್ ಮೂಲ್ಯಕೃತಿಯ ಕನ್ನಡಾನುವಾದ ಪುಸ್ತಕ. ಭಾರತೀಯ ಸ್ತ್ರೀ ಸಮುದಾಯದ, ವಿಶೇಷವಾಗಿ ಬಂಗಾಲದ ಸಂತ್ರಸ್ತ, ದುರದೃಷ್ಟ ಮಹಿಳೆಯರ, ವಿಧವೆಯರ ಆಗಿನ ಕಾಲದ ಸ್ಥಿತಿಗತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅಪರೂಪದ, ದಾಖಲೆ ಸ್ವರೂಪದ ಬರವಣಿಗೆಯಾಗಿದೆ. ಶರತ್ಚಂದ್ರ ಅವರ ಸಂಪೂರ್ಣ ಸಾಹಿತ್ಯವನ್ನು ವಿಮರ್ಶಿಸುವ, ವಿಶ್ಲೇಷಿಸುವ, ವಿನೂತನ ಬಗೆಯ ವಿಧಾನವನ್ನು ಸಾಮಾಜಿಕ ಚಿಂತಕರಿಗೆ, ಇತಿಹಾಸಕಾರರಿಗೆ, ಸಮಾಜಶಾಸ್ತ್ರಜ್ಞರಿಗೆ ತೋರುವ ದೀಪವಾಗಿದೆ ಕೃತಿ ಎಂದು ಅನುವಾದಕರು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ. ಶರತ್ಚಂದ್ರ ಅವರ ಅಧಿಕೃತ ಕಿರು ಪರಿಚಯವನ್ನೂ ಪುಸ್ತಕದಲ್ಲಿ ಮಾಡಿಕೊಡಲಾಗಿದೆ.


ತೆಂಡುಲಕರ ಮಕ್ಕಳ ನಾಟಕಗಳು

ಕನ್ನಡಕ್ಕೆ: ಹೇಮಾ ಪಟ್ಟಣಶೆಟ್ಟಿ

ಪುಟ: 180 ಬೆಲೆ: ರೂ.170

ಪ್ರಥಮ ಮುದ್ರಣ: 2021

ದೇಶಕಂಡ ಅತ್ಯುತ್ತಮ ನಾಟಕಕಾರರಲ್ಲಿ ಒಬ್ಬರಾದ ಮರಾಠಿಯ ವಿಜಯ ತೆಂಡುಲಕರ ಅವರು ಬರೆದಿರುವ `ಐದು ನಾಟಕಗಳ ಗುಚ್ಛ ಪುಸ್ತಕ. ಭಾಷೆ ಮತ್ತು ಸಂಗತಿಗಳು ಮಕ್ಕಳಿಗೆ ತಲುಪುವಂತೆ ಸರಳ ಹಾಗೂ ನೇರವಾಗಿವೆ. ಜೀವನ ಮೌಲ್ಯಗಳನ್ನೂ ಎತ್ತಿ ಹಿಡಿಯಲಾಗಿದೆ. ಮಕ್ಕಳಿಗೆ ನೀಡುತ್ತಿರುವ ಉಪದೇಶ ಅಥವಾ ತೀರ್ಮಾನಗಳಂತೆ ಹೇರದೆ ತೆಂಡುಲಕರರು ತಾವೇ ಮಗುವಾಗಿ ನಾಟಕಗಳನ್ನು ರಚಿಸಿದ್ದಾರೆ ಎಂಬುದು ಅನುವಾದಕರ ಮಾತು. ಇಲ್ಲಿರುವ ಪ್ರತಿ ನಾಟಕದ ವಸ್ತು ಹಾಗೂ ಶೈಲಿ ಭಿನ್ನವಾಗಿದೆ. ಮಕ್ಕಳ ಮುಗ್ಧತೆ, ಕುತೂಹಲ, ಬಾಲಸ್ವಾಭಾವ, ವರ್ತನೆ, ಆಲೋಚನಾ ಕ್ರಮ, ಹಿರಿಯರನ್ನು ಅನುಕರಿಸುವುದು, ಅಪ್ಪಅಮ್ಮನ ಸಂಗ ಬಯಸುವುದು, ಸ್ನೇಹಿತರೊಂದಿಗೆ ಅವರ ಸಂಬಂಧ, ಆಟ, ಶಾಲೆಯ ಕಾಟ ಮುಂತಾದ ಸಂಗತಿಗಳು ನಾಟಕಗಳಲ್ಲಿ ಮೂಡಿಬಂದಿವೆ.


ಜಾತಿಯವನೇ ಬೇಕು

(ನಾಟಕ)

ವಿಜಯ ತೆಂಡುಲಕರ

ಕನ್ನಡಕ್ಕೆ: ಡಾ.ಹೇಮಾ ಪಟ್ಟಣಶೆಟ್ಟಿ

ಪುಟ: 148 ಬೆಲೆ: ರೂ.140

ಪ್ರಥಮ ಮುದ್ರಣ: 2021

ಮಹಿಪತ ಬಭ್ರುವಾಹನ ಕೆಳ ಜಾತಿಯಲ್ಲಿ ಹುಟ್ಟಿದ ಹಳ್ಳಿಯ ಯುವಕ. ಎಂಎ ಮಾಡಲೇ ಬೇಕು ಎನ್ನುವ ಏಕ ಮಾತ್ರ ಆಸೆ ಹೊಂದಿದ ವ್ಯಕ್ತಿ. ಥರ್ಡ್ ಕ್ಲಾಸಿನಲ್ಲಿ ಎಂ.. ಪಾಸ್ ಮಾಡುವ ಇವನು, ಇದ್ದ ಚಿಕ್ಕ ನೌಕರಿಯನ್ನೂ ಕಳೆದುಕೊಳ್ಳುತ್ತಾನೆ. ಯಾವುದೋ ಮೂಲೆಯ ಹಳ್ಳಿಯ ಕಾಲೇಜಿಗೆ ಪೆ್ರಫೆಸರ್ ಕೆಲಸಕ್ಕೆ ಹೋಗುವ ಬಭ್ರುವಾಹನ ಬೇರೆಯದೆ ಆದ ಸವಾಲುಗಳನ್ನು ಅಲ್ಲಿ ಎದುರಿಸಬೇಕಾಗುತ್ತದೆ. ಕಾಲೇಜು ಕಮಿಟಿಯ ಚೇರ್ಮನ್ ಅಣ್ಣನ ಮಗಳು, ಮೇಲು ಜಾತಿಯ ನಳಿನಿ ಅವನ ಸಹೋದ್ಯೋಗಿಯಾಗಿ ಸೇರಿಕೊಂಡಾಗ, ಅವರಿಬ್ಬರ ನಡುವೆ ಪ್ರೇಮ ಹುಟ್ಟಿ, ಅದರಿಂದ ಬಭ್ರುವಾಹನ ಮುಂದೆ ಪಡುವ ಪಾಡು, ನೌಕರಿ ಉಳಿಸಿಕೊಳ್ಳಲು ಹೂಡುವ ಆಟ, ಹೀಗೆ ಒಂದಷ್ಟು ಸನ್ನಿವೇಶಗಳನ್ನು ಹಾಸ್ಯದ ಮೂಲಕ ಹೇಳುತ್ತಾ ಹೋಗಿರುವ ವ್ಯಂಗ್ಯಭರಿತ ನಾಟಕವಿದು.


ಜೀವ ಕಾನನದಲ್ಲಿ

ಕವಿತೆಗಳು

ಸಿದ್ಧಲಿಂಗ ಪಟ್ಟಣಶೆಟ್ಟಿ

ಪುಟ: 128 ಬೆಲೆ: ರೂ.120

ಪ್ರಥಮ ಮುದ್ರಣ: 2021

ಸುಮಾರು 81 ಕವಿತೆಗಳನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಸಂಕಲನದ ಮೂಲಕ ಓದುಗರಿಗೆ ಕೊಟ್ಟಿದ್ದಾರೆ. ಇಲ್ಲಿರುವ ಕವಿತೆಗಳು ಒಂದೇ ಗುಕ್ಕಿಗೆ ಮುಗಿದಂತೆ ಅನ್ನಿಸುತ್ತವೆ. ಆದರೆ ಓದುಗರಲ್ಲಿ ಒಂದು ರೀತಿಯ ಪ್ರಸನ್ನತೆಯನ್ನು ಮೂಡಿಸುತ್ತವೆ. ಇವು ಸೌಮ್ಯವಾಗಿ ಸಮಾಜದ ಕಟುವಾಸ್ತವಗಳನ್ನು ಎದುರಿಗಿಟ್ಟು ಮಾಯಾವಾಗುತ್ತವೆ. ಹಾವಾಡಿಗರನ್ನು ಕಂಡಿದ್ದೆ/ ಈಗ/ ಊರಿನಲ್ಲಿ / ಸಾವಾಡಿಗರೂ ನೆಲಿಸಿದ್ದಾರೆ/ ಎಂದೂ ಗೊತ್ತಾಯಿತು/ ಸ್ವಲ್ಪ ಕಾಲದ ಹಿಂದೆ/ ಸಾವಾಡಿಗರು ಮಾತ್ರ ತುಂಬಿದ್ದಾರೆ/ ಎಲ್ಲ ಕಡೆ/ ಈಗ. ಇಲ್ಲಿ ರೋಷಾವೇಷವಿಲ್ಲ ತಣ್ಣನೆಯ ಪ್ರೀತಿಯ ಮೂಲಕವೇ ಕವಿ ಸುಂದರ ಸಾಲುಗಳನ್ನು ಪೆೀಣಿಸುತ್ತಾ ಹೋಗುತ್ತಾರೆ.

ನಾಲ್ಕು ಪುಸ್ತಕಗಳ ಪ್ರಕಾಶಕರು ಅನನ್ಯ ಪ್ರಕಾಶನ, ಧಾರವಾಡ ಸಂಪರ್ಕ: 9448630637

Leave a Reply

Your email address will not be published.