ಹೊಸ ಪುಸ್ತಕ

ಕಾವ್ಯ ಸಂಗಮ
ಸಂಪಾದಕ: ಮೇಟಿ ಮುದಿಯಪ್ಪ
ಪುಟ: 176, ಬೆಲೆ: ರೂ.150
ಪ್ರಕಾಶನ: ಮೇಟಿ ಪ್ರಕಾಶನ, ಬೇವಿನಹಾಳು, ಗಂಗಾವತಿ ತಾಲ್ಲೂಕು, ಕೊಪ್ಪಳ ಜಿಲ್ಲೆ. ದೂ: 9448624331

ಈ ಕೃತಿಯ ಸಂಪಾದಕ ಮೇಟಿಯವರು ಶಿಕ್ಷಣ ತಜ್ಞರಾಗಿ, ಸಾಹಿತಿಯಾಗಿ, ರಂಗಕಲಾವಿದರಾಗಿ, ಸಂಘಟಕನಾಗಿ, ಸಮಾಜಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಕೆಲಸ ಮಾಡಿದವರು. ಸ್ವತಃ ಹಲವು ಕೃತಿಗಳನ್ನು ರಚಿಸಿ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡವರು. ಪ್ರಸ್ತುತ ಕೃತಿ ‘ಕಾವ್ಯಸಂಗಮ’ದಲ್ಲಿ ಉಡುಪಿ, ಮಂಗಳೂರು, ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ಕರಾವಳಿ ಪ್ರದೇಶದ ಕವಿಗಳ ಕವನಗಳನ್ನು ಒಟ್ಟುಗೂಡಿಸಿದ್ದಾರೆ. ಮೂರು ತಲೆಮಾರಿನ ಕವಿಗಳನ್ನು ಈ ಕವನ ಸಂಕಲನದಲ್ಲಿ ಒಂದುಗೂಡಿಸಿರುವುದು ವಿಶೇಷ.

ಮೌನದೊಳಗಿನ ಮಾತು
ಡಾ.ಆರ್.ಬಿ.ಕುಮಾರ್
ಪುಟ:102, ಬೆಲೆ: ರೂ.100
ಪ್ರಕಾಶನ: ಗಂಗೋತ್ರಿ ಪ್ರಕಾಶನ, ರಾಮಸಾಗರ, ಹೊಸಪೇಟೆ ತಾಲ್ಲೂಕು, ಬಳ್ಳಾರಿ ಜಿಲ್ಲೆ. ದೂ: 08026722034

ರಾವೋಳ್ಳು ನಾಗಪ್ಪ ಅಲೆಮಾರಿ ಸಮುದಾಯಕ್ಕೆ ಸೇರಿದವರು. ಹಾದಿ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿ ಬೆಳೆದ ಅವರ ವೈವಿಧ್ಯಮಯ ಜೀವನ ಅನುಭವದ ಕಥೆಯೇ ಮೌನದೊಳಗಿನ ಮಾತು. ನಮ್ಮಲ್ಲಿ ಹಲವಾರು ಬಗೆಯ ಅಲೆಮಾರಿಗಳಿದ್ದಾರೆ. ವಿವಿಧ ವೇಷಗಳನ್ನು ಹಾಕಿಕೊಂಡು, ಹಾದಿ ಬೀದಿಗಳಲ್ಲಿ ಭಿಕ್ಷಾಟನೆ ಮಾಡುತ್ತ ತಿರುಗುವುದು, ಜನರಿಗೆ ಸಣ್ಣ-ಪುಟ್ಟ ಮನರಂಜನೆ ನೀಡುತ್ತ ಭಿಕ್ಷಾಟನೆ ಮಾಡುವುದು. ಹೀಗೆ ಹಲವು ಬಗೆಯಲ್ಲಿ ಊರೂರು ತಿರುಗುತ್ತ ಬದುಕು ಸಾಗಿಸುವ ಅಲೆಮಾರಿಗಳಿದ್ದಾರೆ. ಅವರ ಬದುಕಿಗೆ ನೆಲೆಯೆಂಬುದೇ ಇಲ್ಲ. ಇಂದಿಗೂ ನೆಲೆಯಿಲ್ಲದೆ ಅಲೆದಾಟದಲ್ಲಿ ಹೆಣಗಾಡುತ್ತಿರುವ ಅಪಾರ ಸಂಖ್ಯೆಯ ಅಲೆಮಾರಿಗಳ ಬದುಕಿಗೆ ರಾವೋಳ್ಳು ನಾಗಪ್ಪ ಅವರ ಆತ್ಮಕಥನ ಕನ್ನಡಿಯಾಗಿದೆ. ರಾವೋಳ್ಳು ನಾಗಪ್ಪ ತಮ್ಮ ಬದುಕಿನ ಅನುಭವಗಳನ್ನು ಅವರೇ ಹೇಳಿಕೊಂಡಂತೆ ಲೇಖಕರು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಇದು ಕೇವಲ ರಾವೋಳ್ಳು ನಾಗಪ್ಪ ಅವರ ಆತ್ಮಕಥನವಾಗಿರದೇ ಒಟ್ಟಾರೆ ಅಲೆಮಾರಿಗಳ ನೋವಿನ ಕಥೆಯಾಗಿದೆ.

ಬೊಗಸೆಯೊಳಗಿನ ಅಲೆ
ಡಾ.ಎಂ.ಅರ್.ಮಂದಾರವಲ್ಲಿ
ಪುಟ:152, ಬೆಲೆ: ರೂ.130

ಲೇಖಕಿ ಡಾ.ಎಂ.ಆರ್.ಮಂದಾರವಲ್ಲಿ ಅವರ ಚೊಚ್ಚಲ ಕಥಾ ಸಂಕಲನವಿದು. ಇದರಲ್ಲಿ ಹನ್ನೊಂದು ಕಥೆಗಳಿವೆ. ‘ಬೊಗಸೆಯೊಳಗಿನ ಅಲೆ’ ಕಥೆಯೂ ಅದರಲ್ಲಿ ಒಂದು. ಇಲ್ಲಿನ ಒಂದೊಂದು ಕಥೆಯೂ ಮಹಿಳೆ ತನ್ನ ಬದುಕಿನ ಹಲವು ಹಂತಗಳಲ್ಲಿ ಅನುಭವಿಸುವ ಯಾತನೆಗಳನ್ನು, ಕಷ್ಟಗಳನ್ನು ತೆರೆದಿಡುತ್ತವೆ. ಪುರುಷ ಹೆಣ್ಣಿನ ಮೇಲೆ ವಿವಿಧ ರೀತಿಯಲ್ಲಿ ಮತ್ತು ವಿವಿಧ ಹಂತಗಳಲ್ಲಿ ನಡೆಸುವ ಶೋಷಣೆಯನ್ನು ಇಲ್ಲಿನ ಕಥೆಗಳಲ್ಲಿ ಲೇಖಕಿ ಚೆನ್ನಾಗಿ ಪ್ರತಿಬಿಂಬಿಸಿದ್ದಾರೆ.

 

ತಾರಸಿ ಮಲ್ಹಾರ್
ಜಿ.ಕೆ.ರವೀಂದ್ರಕುಮಾರ್
ಪುಟ: 120, ಬೆಲೆ: ರೂ.110

ಚಿತ್ರದುರ್ಗ ಜಿಲ್ಲೆಯವರಾದ ಲೇಖಕ ಜಿ.ಕೆ.ರವೀಂದ್ರಕುಮಾರ್ ಪ್ರಸ್ತುತ ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರ. ಕಾವ್ಯ ರಚನೆ, ವಿಮರ್ಶೆ, ಅಂಕಣ ಬರಹ ಹಾಗೂ ಲಲಿತ ಪ್ರಬಂಧ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಈಗಾಗಲೇ ಹಲವು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ತಾರಸಿ ಮಲ್ಹಾರ್ ಇವರ ನೂತನ ಲಲಿತ ಪ್ರಬಂಧವಾಗಿದೆ. ಇದರಲ್ಲಿ ಹನ್ನೊಂದು ಪ್ರಬಂಧಗಳಿದ್ದು, ಲೇಖಕರ ಅಪಾರ ಓದು, ಸೂಕ್ಷ್ಮ ನೋಟ, ಸಂಗೀತದ ನಾದ-ಲಯಗಳನ್ನು ಇವುಗಳಲ್ಲಿ ಕಾಣಬಹುದಾಗಿದೆ.

ಮೇಲಿನ ಎರಡೂ ಪುಸ್ತಕಗಳ ಪ್ರಕಾಶಕರು: ಅನನ್ಯ ಪ್ರಕಾಶನ, ಫ್ಲ್ಯಾಟ್ ನಂ.105, ಗಾಯಿತ್ರೀ ಅಪಾರ್ಟ್‍ಮೆಂಟ್ಸ್, ಕಾಂತರಾಜ ಅರಸು ರಸ್ತೆ, ಲಕ್ಮೀಪುರಂ, ಮೈಸೂರು-570004, ದೂ: 9448037762

ಸೂರ್ಯ ಕಂದೀಲು ಹಿಡಿದು ಬರಲಿ
ಡಾ.ಸಿ.ಬಿ.ಚಿಲ್ಕರಾಗಿ
ಪುಟ: 68, ಬೆಲೆ: ರೂ.80
ಪ್ರಕಾಶನ: ಅಲ್ಲಮ ಪ್ರಕಾಶನ, ಕಾರಟಗಿ, ಕೊಪ್ಪಳ ಜಿಲ್ಲೆ. ದೂ: 7899404101

ಈ ಸಂಕಲನದ ಕವಿ ಡಾ.ಸಿ.ಬಿ.ಚಿಲ್ಕರಾಗಿ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಚಿಲ್ಕರಾಗಿ ಗ್ರಾಮದವರು. ಸದ್ಯ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಚಿಲ್ಕರಾಗಿಯವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ‘ಸೂರ್ಯ ಕಂದೀಲು ಹಿಡಿದು ಬರಲಿ’ ಇವರ ಎರಡನೇ ಕವನ ಸಂಕಲನ. ರಾತ್ರಿ ನೋಡಲು ಸೂರ್ಯ ಬರಲಿ. ಆದರೆ ಅವನು ಪಥಭ್ರಷ್ಟನಾದರೆ ಬೆಳಕು ಇರುವುದಿಲ್ಲ. ಪ್ರಥಭ್ರಷ್ಟರಾದವರೆಲ್ಲರಿಗೂ ತಮ್ಮ ಶಕ್ತಿಗಳು ಮಾಯವಾಗುತ್ತವೆ. ಇದಕ್ಕೆ ಸೂರ್ಯನೂ ಹೊರತಲ್ಲ. ಹಾಗಾಗಿ ಕತ್ತಲಿನ ಮನುಷ್ಯರನ್ನು ನೋಡಲು ಸೂರ್ಯ ಕಂದೀಲು ಹಿಡಿದು ಬರಬೇಕೆನ್ನುವ ಕಲ್ಪನೆ ಚಿಲ್ಕರಾಗಿಯವರದ್ದು. ಇಂಥ ವಿಚಾರಗಳನ್ನು ಪ್ರತಿಪಾದಿಸುವ ಐವತ್ತು ಕವನಗಳು ಈ ಸಂಕಲನದಲ್ಲಿವೆ.

ಹಳ್ಳಿಗಾಡಿನ ಕಥೆಗಳು
ಡಾ.ಸಿ.ಆರ್.ಪಾರ್ಥಸಾರಥಿ
ಪುಟ: 100, ಬೆಲೆ: ರೂ.200
ಪ್ರಕಾಶನ: ಡಾ. ಸಿ.ಆರ್.ಪಾರ್ಥಸಾರಥಿ, ನಂ-655, ’ಗಿರಿಪದ್ಯ’, 16ನೇ ಮೇನ್, 7ನೇ ’ಬಿ’ ಕ್ರಾಸ್, ಎಂ.ಇ.ಐ. ಲೇಔಟ್, ಹೆಸರುಘಟ್ಟ ಮುಖ್ಯರಸ್ತೆ, ಬೆಂಗಳೂರು-560073. ದೂ:9448039907

ಈ ಸಂಕಲನದಲ್ಲಿ ಒಂಬತ್ತು ಕಥೆಗಳಿವೆ. ಲೇಖಕ ಡಾ.ಸಿ.ಆರ್.ಪಾರ್ಥಸಾರಥಿ ಅವರು ವೃತ್ತಿಯಿಂದ ವೈದ್ಯರಾಗಿದ್ದು ಬರವಣಿಗೆ ಇವರ ಹವ್ಯಾಸವಾಗಿದೆ. ಬೆಂಗಳೂರು, ಮೈಸೂರುಗಳಂಥ ಮಹಾನಗರಗಳಲ್ಲೆ ವ್ಯಾಸಂಗ ಮಾಡಿ ಬೆಳೆದವರಾದರೂ ಸಾಹಿತ್ಯ ರಚನೆಗೆ ಮಾತ್ರ ಹಳ್ಳಿಗಾಡಿನ ಹಿನ್ನೆಲೆಯನ್ನೇ ಲೇಖಕರು ಆಯ್ದುಕೊಂಡು ಕೃಷಿ ಮಾಡಿದವರು. ವೈದ್ಯ ವೃತ್ತಿಯಲ್ಲಿ ತಮ್ಮ ಬಳಿ ಬರುವ ಹಳ್ಳಿ ಜನರಲ್ಲಿನ ಮುಗ್ದತೆ, ಅಸಹಾಯಕತೆಯನ್ನು ಕಂಡವರು. ಹಳ್ಳಿಗಳಲ್ಲಿ ತಾವು ಕಳೆದ ವೃತ್ತಿ ಬದುಕಿನ ಅನುಭವಗಳನ್ನೇ ಕಥೆಗಳನ್ನಾಗಿ ಇಲ್ಲಿ ನಿರೂಪಿಸಿದ್ದಾರೆ.

ವಿಜ್ಞಾನ ಮತ್ತು ಧರ್ಮ
ಡಾ.ಎಂ.ಸಿ.ಸುಬ್ಬ ರಾಮು, ಡಾ.ಸಿ.ನಿಂಗಪ್ಪ
ಪುಟ: 128, ಬೆಲೆ: ರೂ.100
ಪ್ರಕಾಶನ: ಲಿಖಿತ್ ಪ್ರಕಾಶನ, 654/2, ಮೊದಲನೇ ಮಹಡಿ, ಮೊದಲನೇ ಮುಖ್ಯರಸ್ತೆ, ಬಿ.ಬಿ.ಗಾರ್ಡನ್ ರಸ್ತೆ, ಫೋರ್ಟ್ ಮೊಹಲ್ಲಾ, ಮೈಸೂರು-570004. ದೂ:9880939952

ಡಾ.ಎಮ್.ಸಿ.ಸುಬ್ಬರಾಮು ಅವರು ಮೂಲತಃ ಮೈಸೂರಿನವರು. ಬಾಬಾ ಅಣುಶಕ್ತಿ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನೂರಾರು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ನಿವೃತ್ತರಾದರೂ ಸದಾ ಕ್ರಿಯಾಶಿಲ ವ್ಯಕ್ತಿತ್ವದ ಇವರು ಜನಪ್ರಿಯ ವಿಜ್ಞಾನ ಸಾಹಿತ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನೊಬ್ಬ ಲೇಖಕರಾದ ಡಾ.ಸಿ.ನಿಂಗಪ್ಪ ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಇಬ್ಬರು ವಿಜ್ಞಾನದ ಆಸಕ್ತರಾಗಿದ್ದು ವಿಜ್ಞಾನ ಧರ್ಮದೊಂದಿಗೆ ಹೊಂದಿರುವ ನಂಟು, ಭಿನ್ನತೆಗಳನ್ನು ಇಲ್ಲಿನ ಹಲವು ಲೇಖನಗಳ ಮೂಲಕ ವಿಶ್ಲೇಷಣೆ ಮಾಡಿದ್ದಾರೆ.

ಹೂವಿನ ಬೇಟೆ
ರಂಗನಾಥ ಕಂಟನಕುಂಟೆ
ಪುಟ: 128, ಬೆಲೆ: ರೂ.115
ಪ್ರಕಾಶನ: ನಿವೇದಿತ ಪ್ರಕಾಶನ, ನಂ.3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡ ರಸ್ತೆ, ಶಾಸ್ತ್ರೀನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560028. ದೂ: 9448733323

ಇದೊಂದು ಕವನ ಸಂಕಲನ. ಇದರಲ್ಲಿ 73 ಕವಿತೆಗಳಿವೆ. ಕವಿ ರಂಗನಾಥ ಕಂಟನಕುಂಟೆ ಒಬ್ಬ ಸೃಜನಶೀಲ ಬರಹಗಾರ. ಸಮಾಜದಲ್ಲಿ ನಡೆಯುವ ಬೆಳವಣಿಗೆಗನ್ನು ವಿಶ್ಲೇಷಿಸುವುದು, ವಿಮರ್ಶೆ ಮಾಡುವುದು ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪ್ರತಿಕ್ರಿಯಿಸುವುದು ಇವರ ಸ್ವಭಾವ. ಹೀಗೆ ಸಮಾಜದಲ್ಲಿನ ಹಲವು ವಿಷಯಗಳಿಗೆ ಪ್ರತಿಸ್ಪಂದಿಸಿದ ಮತ್ತು ವಿಮರ್ಶಾತ್ಮಕವಾಗಿ ನೋಡಿದ ಕವನಗಳು ಇಲ್ಲಿವೆ.

Leave a Reply

Your email address will not be published.