ಹೊಸ ಪುಸ್ತಕ

ಕಾಮನ ಹುಣ್ಣಿಮೆ

ನಟರಾಜ್ ಹುಳಿಯಾರ್
ಪುಟ: 218, ಬೆಲೆ: ರೂ.180

ಟೆಲಿಪೋನ್ ಸುಲಭವಾಗಿ ದಕ್ಕದ ಕಾಲದ ವಿದ್ಯಮಾನಗಳನ್ನು ಕೇಂದ್ರೀಕರಿಸಿ ಈಗಿನ ಕಾಲದ ಓದುಗರನ್ನೂ ಆವರಿಸುವಂತೆ ರಚಿಸಿದ ಕಾದಂಬರಿ ಇದಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿರುವ ಲೇಖಕ ಡಾ. ನಟರಾಜ್ ಹುಳಿಯಾರ್, ಸಾಮಾನ್ಯ ಜನ ಬಡತನ, ಬಿಕ್ಕಟ್ಟುಗಳ ನಡುವೆಯೂ ಘನತೆಯಿಂದ ಬದುಕಲೆತ್ನಿಸುವ ಜೀವನ ಹೋರಾಟವನ್ನು ಮತ್ತು ಅದರಲ್ಲಿ ಅವರು ಪಡೆಯುವ ಗೆಲುವುಗಳನ್ನು ಈ ಕಾದಂಬರಿಯಲ್ಲಿ ದಾಖಲಿಸಿದ್ದಾರೆ.

 

ಕನ್ನಡಿ

ನಟರಾಜ್ ಹುಳಿಯಾರ್
ಪುಟ: 362, ಬೆಲೆ: ರೂ.250

ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿರುವ ಡಾ. ನಟರಾಜ್ ಹುಳಿಯಾರ್ ಸಾಹಿತ್ಯ ಕ್ಷೇತ್ರವಲ್ಲದೇ ಮಾಧ್ಯಮ ಕ್ಷೇತ್ರದೊಂದಿಗೂ ಸಂಪರ್ಕ ಹೊಂದಿದವರು. ವಿವಿಧ ಅಂಕಣಗಳ ಮೂಲಕ ಸಮಕಾಲೀನ ವಿದ್ಯಮಾನಗಳ ವಿಶ್ಲೇಷಣೆ, ವಿಮರ್ಶೆ ಮಾಡುತ್ತ ಬಂದವರು. ಪ್ರಸ್ತುತ ‘ಕನ್ನಡಿ’ ಕೃತಿ ಪ್ರಜಾವಾಣಿಯಲ್ಲಿ ಪ್ರಕಟಿಸಿದ ಅಂಕಣ ಬರಹಗಳ ಗುಚ್ಚವಾಗಿದೆ. ಇಲ್ಲಿನ ಲೇಖನಗಳಲ್ಲಿ ಸವiಕಾಲೀನ ವಿದ್ಯಮಾನಗಳ ವಸ್ತುನಿಷ್ಠ ವಿಶ್ಲೇಷಣೆ, ವಿಚಾರಪರತೆ ಹಾಗೂ ಗಂಭೀರ ಬದ್ಧತೆಗಳನ್ನು ಕಾಣಬಹುದಾಗಿದೆ.

 

ಬಂಡಾಯದ ಬೋಳಬಂಡೆಪ್ಪ

ರಮೇಶ ಅರೋಲಿ
ಪುಟ: 115, ಬೆಲೆ: ರೂ.100

ರಾಯಚೂರಿನ ಹರಿಜನವಾಡದಲ್ಲಿ ಹುಟ್ಟಿ ಬೆಳೆದ ಬೋಳಬಂಡೆಪ್ಪ ಓದಿದ್ದು ಪಿಯುಸಿವರೆಗೆ. ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಕೆಲಸ ಮಾಡುವ ಜೊತೆಗೆ ಸಾಹಿತ್ಯ ಮತ್ತು ದಲಿತ ಸಂಘಟನೆಯ ಸಂಪರ್ಕ ಬೆಳೆಸಿಕೊಂಡವರು. ಎಪ್ಪತ್ತರ ದಶಕದಲ್ಲಿ ನಾಡಿನ ರಾಜಕೀಯ, ಸಾಹಿತ್ಯ ಹಾಗೂ ಸಾಂಸ್ಕøತಿಕ ಸ್ಥಿತ್ಯಂತರಗಳ ಸಂದರ್ಭದಲ್ಲಿ ರಾಯಚೂರಿನಿಂದ ಧ್ವನಿ ಎತ್ತುತ್ತಿದ್ದವರಲ್ಲಿ ಬೋಳಬಂಡೆಪ್ಪ ಒಬ್ಬರಾಗಿದ್ದರು. ಇವರ ಬದುಕು ಮತ್ತು ಹೋರಾಟಗಳನ್ನು ಲೇಖಕ ರಮೇಶ ಅರೋಲಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ.

 

ಮೂರನೇ ಕಣ್ಣು

ಚಿದಾನಂದ ಸಾಲಿ
ಪುಟ: 138, ಬೆಲೆ: ರೂ.120

ಲೇಖಕ ಚಿದಾನಂದ ಸಾಲಿ ಕವನ, ಕಥೆ, ಪ್ರಬಂಧ, ನಾಟಕ ಹಾಗೂ ಸಂಶೋಧನೆ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಪ್ರಸ್ತುತ ‘ಮೂರನೇ ಕಣ್ಣು’ ಕೃತಿ ಇವರ ಪ್ರಬಂಧಗಳ ಸಂಕಲನವಾಗಿದೆ. ಇದರಲ್ಲಿ 12 ಪ್ರಬಂಧಗಳಿವೆ. ಇತಿಹಾಸ, ಸಮಾಜಶಾಸ್ತ್ರ ಹಾಗೂ ಜಾತಿ ವ್ಯವಸ್ಥೆಗಳನ್ನು ಇಲ್ಲಿನ ಪ್ರಂಬಂಧಗಳಲ್ಲಿ ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಲಾಗಿದೆ. ಹೆಂಡತಿಯೊಂದಿಗೆ ಜಗಳವಾಡುವ ಬಗೆಯ ಸ್ವಾರಸ್ಯಕರ ವಿಷಯಗಳೂ ಇಲ್ಲಿನ ಪ್ರಬಂಧಗಳಲ್ಲಿ ವ್ಯಕ್ತವಾಗಿವೆ.

ಈ ಮೇಲಿನ ನಾಲ್ಕೂ ಕೃತಿಗಳ ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ, ವಯಾ ಎಮ್ಮಿಗನೂರು, ಬಳ್ಳಾರಿ-583113. ದೂ: 9480353507

ಗೆಜ್ಜೆಗಳು

ತೆಲುಗು: ಡಾ. ಸಮನ್ನ ಈಟೆಲ, ಕನ್ನಡಕ್ಕೆ: ಡಾ.ಗುರುಮೂರ್ತಿ ಪೆಂಡಕೂರು
ಪುಟ: 48, ಬೆಲೆ: ರೂ.50
ಪ್ರಕಾಶನ: ಸಮರ್ಥ ಪ್ರಕಾಶನ, ಆರ್.ಟಿ.ನಗರ, ಬೆಂಗಳೂರು. ದೂ: 9611213584

ತೆಲುಗಿನ ಕವಿ ಡಾ. ಸಮನ್ನ ಈಟೆಲ ಅವರ ‘ಸಿರಿಮುವ್ವಲು’ ಎಂಬ ಕವನ ಸಂಕಲನದ ಕನ್ನಡ ರೂಪವೇ ಈ ಕೃತಿ. ಸಿರಿಮುವ್ವಲು ಕವನ ಸಂಕಲನದ ಕವಿತೆಗಳು ವಿಶಿಷ್ಠ ರೂಪದವು. ಒಂದು ರೀತಿಯಲ್ಲಿ ಇವು ಮೂರು ಸಾಲಿನ ಸಮಗ್ರ ವಾಕ್ಯದಂತೆ ಇವೆ. ಆದರೆ ಈ ಕವಿತೆಗಳಲ್ಲಿ ಭಾವ ಪ್ರಾಧಾನ್ಯತೆ ಇದ್ದು, ಜೀವನ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ.

 

 

ಮನೆಯಂಗಳದ ಮಿತ್ರರು

ಪರಂಜ್ಯೋತಿ
ಪುಟ: 136, ಬೆಲೆ: ರೂ.130
ಪ್ರಕಾಶನ: ಇಂಚರ ಪ್ರಕಾಶನ, ನಂ.10, 1ನೇ ಮಹಡಿ, 21-ಬಿ ಕ್ರಾಸ್, ಶ್ರೀರಾಮುಲು ದೇವಾಲಯ ರಸ್ತೆ, ದೇವಾಲಯದ ಎದುರು, ಈಜಿಪುರ, ವಿವೇಕನಗರ ಅಂಚೆ, ಬೆಂಗಳೂರು-560047. ದೂ: 08025719036

ಮನೆಯಂಗಳದ ಮಿತ್ರರು’ ಒಂದು ಸಚಿತ್ರ ಲೇಖನಗಳ ಸಂಗ್ರಹ. ತನ್ನ ಮನೆಯ ಸುತ್ತಲಿನ ಪರಿಸರದಲ್ಲಿ ಓಡಾಡುವ ಕೀಟಗಳು, ಪ್ರಾಣಿ-ಪಕ್ಷಿಗಳು, ಸಸ್ಯಗಳು ಹಾಗೂ ಮನುಷ್ಯರು ಹೀಗೆ ಎಲ್ಲವನ್ನು ಲೇಖಕರು ಇಲ್ಲಿ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಂಡಿದ್ದಾರೆ. ಅವುಗಳ ಚಿತ್ರವನ್ನೂ ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಇಲ್ಲಿ ಪ್ರಕಟಿಸುವ ಮೂಲಕ ಬರವಣಿಗೆಗೆ ಹೊಸ ರೂಪ ನೀಡಿದ್ದಾರೆ. ಇಲ್ಲಿನ ಲೇಖನಗಳಲ್ಲಿ ಪರಿಸರ ಪ್ರಜ್ಞೆ ಎದ್ದು ಕಾಣುತ್ತದೆ. ಹಾಗೆಯೇ ಲೇಖಕರ ತಿಳಿಹಾಸ್ಯ ಬೆವಣಿಗೆಗೆ ಜೀವಂತಿಕೆಯನ್ನು ತಂದುಕೊಟ್ಟಿದೆ.

 

ನಿಗೂಢ ಟಿಬೇಟ್

ಯಡೂರ ಮಹಾಬಲ
ಪುಟ: 534, ಬೆಲೆ: ರೂ.395
ಪ್ರಕಾಶನ: ಚಿಂತನ ಚಿಲುಮೆ ಪ್ರಕಾಶನ, ಗಣೇಶ ದೇವಸ್ಥಾನ ಹಿಂಭಾಗ, 4ನೇ ಮುಖ್ಯ, 3ನೆ ಅಡ್ಡ ರಸ್ತೆ, ಚಾಮರಾಜಪೇಟೆ, ಬೆಂಗಳೂರು-560018. ದೂ:9986829657

ಸುದೀರ್ಘ ಮತ್ತು ಆಳವಾದ ಅಧ್ಯಯನದಿಂದ ಪುರಾವೆಗಳ ಸಹಿತ ಟಿಬೇಟ್‍ನ ಚರಿತ್ರೆಯ ಕುರಿತು ಸವಿಸ್ತಾರವಾಗಿ ಬರೆದಿರುವ ಪುಸ್ತಕ ಇದು. ಟಿಬೇಟ್‍ನ ಭೌಗೋಳಿಕತೆ, ವಿಶಿಷ್ಠ ಹವಾಮಾನ, ಜನಸಂಖ್ಯಾ ಸ್ಥಿತಿಗತಿಗಳು, ರಾಜಾಧಿಪತ್ಯ ಸೇರಿದಂತೆ ಆರಂಭದಿಂದ ಇದುವರೆಗಿನ ಇತಿಹಾಸವನ್ನು ಇಲ್ಲಿ ದಾಖಲಿಸಲಾಗಿದೆ. ವಿವಿಧ ಬೌದ್ಧ ಪಂಥಗಳ ನಡುವಿನ ತಿಕ್ಕಾಟ, ಚೀನಾದ ಅಧಿಪತ್ಯ ಹಾಗೂ ಲಾಮಾಧಿಪತ್ಯದ ಪತನ ಎಲ್ಲವೂ ಇಲ್ಲಿ ದಾಖಲಾಗಿವೆ.

 

 

ನಿಜ ರಾಮಾಯಣದ ಅನ್ವೇಷಣೆ

ಜಿ.ಎನ್.ನಾಗರಾಜ್
ಪುಟ: 184, ಬೆಲೆ: ರೂ.180
ಪ್ರಕಾಶನ: ಬಹುರೂಪಿ, 1, ‘ನಾಕುತಂತಿ’, ಬಸಪ್ಪ ಬಡಾವಣೆ, ಆರ್.ಎಂ.ವಿ 2ನೇ ಘಟ್ಟ, ಸಂಜಯನಗರ, ಬೆಂಗಳೂರು-560094. ದೂ:7019182729

ಎಡಪಂಥೀಯ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿರುವ ಲೇಖಕ ಜಿ.ಎನ್.ನಾಗರಾಜ್ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಹಾಗೂ ಸಂಸ್ಕøತದ ನಾಟಕಕಾರ ಭಾಸನಿಂದ ಪ್ರಭಾವಿತರಾದವರು. ನಿಜ ರಾಮಾಯಣದ ಅನ್ವೇಷಣೆಯಲ್ಲಿ ಕಳೆದ ಐದು ದಶಕಳಿಂದ ತೊಡಗಿಸಿಕೊಂಡು ವಿವಿಧ ಬಗೆಯ ರಾಮಾಯಣಗಳನ್ನು ಪತ್ತೆ ಹಚ್ಚಿದ್ದಾರೆ. ರಾಮಾಯಣ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿರದೇ ವಿಶ್ವವ್ಯಾಪಕವಾದ ಮಹಾಕಾವ್ಯ. ಹಲವರು ಹಲವು ಬಗೆಯಲ್ಲಿ ರಾಮಾಯಣವನ್ನು ಪುನರ್‍ರಚಿಸಿಕೊಂಡಿದ್ದಾರೆ. ಅಂಥದ್ದರಲ್ಲಿ ವಾಲ್ಮಿಕಿ ರಾಮಾಯಣ ಮಾತ್ರ ನಿಜವಾದುದು ಎಂದು ಹೇರುವುದನ್ನು ಲೇಖಕರು ಇಲ್ಲಿ ಪ್ರಶ್ನಿಸುತ್ತಾರೆ. ವಾಲ್ಮಿಕಿ ನಿಜ ರಾಮಾಯಣವನ್ನೂ ಮಾರ್ಪಾಡು ಮಾಡಲಾಗಿದೆ ಎಂಬುದನ್ನು ಇಲ್ಲಿ ನಿರೂಪಿಸಿದ್ದಾರೆ.

 

ನಮ್ಮ ಭೂಮಿ ನಮ್ಮ ಹೋರಾಟ

ಅನುವಾದ: ಸ. ರಘುನಾಥ
ಪುಟ: 74, ಬೆಲೆ: ರೂ.60
ಪ್ರಕಾಶನ: ಚಾಗನೂರು, ಸಿರಿವಾರ ನೀರಾವರಿ ಭೂ ರಕ್ಷಣಾ ಹೋರಾಟ ಸಮಿತಿ, ನಂ-25,ಗುತ್ತಿ ಕಾಳಪ್ಪ ಕಾಂಪೌಂಡ್, ಗಾಂಧಿನಗರ ಪೊಲೀಸ್ ಸ್ಟೇಷನ್ ಎದುರುಗಡೆ, ಅನಂತಪುರ ರೋಡ್, ಬಳ್ಳಾರಿ-583101
ದೂ: 9901380808

ರಾಜ್ಯದ ಯಶಸ್ವಿ ರೈತ ಹೋರಾಟಗಳಲ್ಲಿ ಚಾಗನೂರು ಮತ್ತು ಸಿರಿವಾರ ರೈತರ ಹೋರಾಟ ಕೂಡ ಪ್ರಮುಖವಾದುದು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟ ಎರಡೂ ಗ್ರಾಮಗಳ ಭೂಮಿ ಸಮೃದ್ದ ನೀರಾವರಿ ನೆಲ. ದಶಕದ ಹಿಂದೆ ಈ ಭೂಮಿಯಲ್ಲಿ ಆಗಿನ ಬಿಜೆಪಿ ಸರಕಾರ ವಿಮಾನ ನಿಲ್ದಾಣವನ್ನು ನಿರ್ಮಿಸಲು ಹೊರಟಾಗ ಸರಕಾರದ ವಿರುದ್ದ ಬಂಡೆದ್ದ ರೈತರು ಬೀದಿಗಿಳಿದು ಹೋರಾಟ ನಡೆಸುವ ಮೂಲಕ ತಮ್ಮ ಫಲವತ್ತಾದ ಭುಮಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಹೋರಾಟದ ಕಥೆಗಳನ್ನು ಇಲ್ಲಿ ಅಕ್ಷರ ರೂಪದಲ್ಲಿ ಸೆರೆ ಹಿಡಿಯಲಾಗಿದೆ.

 

ಮಾಧ್ಯಮ ಮಾರ್ಗ

ಪದ್ಮರಾಜ ದಂಡಾವತಿ
ಪುಟ: 209, ಬೆಲೆ: ರೂ.150
ಪ್ರಕಾಶನ: ಸಪ್ನ ಬುಕ್‍ಹೌಸ್, ನಂ.11, 3ನೇ ಮುಖ್ಯ ರಸ್ತೆ, ಗಾಂಧಿನಗರ, ಬೆಂಗಳೂರು-560009
ದೂ: 080-40114455

ಲೇಖಕ ಪದ್ಮರಾಜ ದಂಡಾವತಿ ಅವರು ಕಳೆದ ಮೂರು ದಶಕಗಳಿಗಿಂತ ಹೆಚ್ಚು ಕಾಲ ಪತ್ರಿಕೋದ್ಯಮದಲ್ಲಿ ಇದ್ದವರು. ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದವರು. ಪತ್ರಿಕೋದ್ಯಮದ ಒಳಹೊರಗನ್ನು ಚೆನ್ನಾಗಿ ಅರಿತವರು. ಎಲ್ಲ ಕ್ಷೇತ್ರಗಳಂತೆ ಪತ್ರಿಕೋದ್ಯಮ ಕೂಡ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿರುವುದನ್ನು ಗುರುತಿಸಿ ಆಗಾಗ ತಮ್ಮ ಅಂಕಣಗಳಲ್ಲಿ ಈ ಬಗ್ಗೆ ಬರೆದಿದ್ದಾರೆ. ಮಾಧ್ಯಮಗಳು ಸಾಗಬೇಕಾದ ಮಾರ್ಗದ ಕುರಿತು ಎಚ್ಚರಿಸಿದ್ದಾರೆ. ಅಂತಹ ಲೇಖನಗಳ ಸಂಗ್ರಹವೇ ಈ ಕೃತಿ.

Leave a Reply

Your email address will not be published.