ಹೊಸ ಪುಸ್ತಕ

ಅರಿವೇ ಪರಮಾಣು

ಮಹಾಂತಪ್ಪ ನಂದೂರ

ಪುಟ: 208, ಬೆಲೆ: ರೂ.200 ಪ್ರಕಾಶಕರು: ಪಟ್ಟಣ ಪ್ರಕಾಶನ, 11, ‘ಬಸವ ಆಸರೆ’, ರಣಕಪುರ ಲೇಔಟ್, ಶಾಂತಿನಗರ, ಬೆಂಗೇರಿ ವಿಸ್ತೀರ್ಣ, ಹುಬ್ಬಳ್ಳಿ-580026. ದೂ: 9242205442

ಹನ್ನೆರಡನೆ ಶತಮಾನ ಶಿವಶರಣರು ಬಾಳಿ ಬದುಕಿದ ಸುವರ್ಣ ಯುಗ. ಆ ಕಾಲಘಟ್ಟದಲ್ಲಿ ಬದುಕಿದ ಬಹುತೇಕರು ವಚನ ಸಾಹಿತ್ಯದ ಮೂಲಕ ಜೀವನದ ಅನುಭವಗಳನ್ನು ಜಗತ್ತಿನ ಜನರಿಗೆ ಉಣಬಡಿಸಿದರು. ಅಂಥವರಲ್ಲಿ ಅಕ್ಕನಾಗಮ್ಮ ಕೂಡ ಒಬ್ಬರು. ಲೇಖಕ ಮಹಾಂತಪ್ಪ ಅವರು ಅಕ್ಕ ನಾಗಮ್ಮನವರ ಜೀವನ ಚರಿತ್ರೆಯನ್ನು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ನಾಗಮ್ಮನವರ ಜಿವನ ಪರಿಚಯ ಇಲ್ಲಿ ಕಾವ್ಯರೂಪದಲ್ಲಿರುವುದು ವಿಶೇಷ

ರಾಜ ಧರ್ಮ

ರಹಮತ ತರೀಕೆರೆ

ಪುಟ: 248, ಬೆಲೆ: ರೂ.220 ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ-583276. ದೂ: 080-22372388

ಲೇಖಕ ರಹಮತ ತರೀಕೆರೆ ಅವರು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಇತಿಹಾಸ ವಿಷಯಗಳನ್ನು ವಿಶ್ಲೇಷಿಸುವಲ್ಲಿ ಸಿದ್ದಹಸ್ತರು. ಪ್ರಸ್ತುತ ಕೃತಿಯಲ್ಲಿ ಬ್ರಿಟಿಷರ ಕಾಲಘಟ್ಟದ ಪರಿಸರವನ್ನು, ಅದರ ವಿವಿಧ ಆಯಾಮಗಳನ್ನು ಸಾಹಿತ್ಯದ ಮೂಲಕ ವಿಶ್ಲೇಷಿಸಲು ಪ್ರಯತ್ನಿಸಿದ್ದಾರೆ. ಮೈಸೂರು ಸಂಸ್ಥಾನದ ಚರಿತ್ರೆಯ ಜೊತೆಗೆ ಆ ಅವಧಿಯಲ್ಲಿನ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಇಲ್ಲಿ ಶೋಧಿಸಿದ್ದಾರೆ. 

ಕಾಟಿಬೆಟ್ಟದ ಕತೆಗಳು

ಬಿ.ಆರ್.ಜೋಯಪ್ಪ

ಪುಟ:168, ಬೆಲೆ: ರೂ.160 ಪ್ರಕಾಶಕರು: ಚಿಂತನ ಚಿತ್ತಾರ, ನಂ-2, ಮೂಡಾ ಕಾಂಪ್ಲೆಕ್ಸ್, ಟಿ ಬ್ಲಾಕ್, ರಾಮಕೃಷ್ಣ ನಗರ, ಅಂದೋಲನ ವೃತ್ತದ ಹತ್ತಿರ, ಮೈಸೂರು-570022. ದೂ: 0821-2340448

ಕೊಡಗು ಅಂದರೆ ಕರ್ನಾಟಕದ ಕಾಶ್ಮೀರ ಇದ್ದಂತೆ. ಅಲ್ಲಿನ ಕಾಡು ಹಲವು ಸಾಹಿತ್ಯ ಕೃತಿಗಳಿಗೆ ಮೂಲದೃವ್ಯ. ಕಾಟಿಬೆಟ್ಟ ಎಂಬುದು ಕೊಡಗಿನ ದಟ್ಟ ಕಾಡಿನ ಪರಿಸರದ ಪ್ರದೇಶ. ಈ ಕೃತಿಯ ಲೇಖಕ ಬಿ.ಆರ್.ಜೋಯಪ್ಪ ಕಾಟಿಬೆಟ್ಟ ಪರಸರದಲ್ಲಿ ಬದುಕಿದ ಕೃಷಿಕನ ಮಗ. ತಮ್ಮ ತಂದೆ-ತಾಯಿ, ಅಕ್ಕ ಮುಂತಾದವರು ಈ ಕಾಡಿನ ಪರಿಸರದಲ್ಲಿ ಕಷ್ಟಪಟ್ಟು ಬದುಕಿದ ರೀತಿಯನ್ನು ಲೇಖಕರು ಇಲ್ಲಿ ಬಿಡಿಸಿಟ್ಟಿದ್ದಾರೆ. ಅದರೊಂದಿಗೆ ಕಾಡು ಪ್ರಾಣಿಗಳು ಮತ್ತು ಕಾಡಿನ ಬದುಕು ಹೇಗಿರುತ್ತದೆ ಎಂಬುದರ ಪರಿಚಯವೂ ಆಗಿದೆ.

ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು

ಕಾವ್ಯ ಕಡಮೆ ನಾಗರಕಟ್ಟೆ

ಪುಟ: 119, ಬೆಲೆ: ರೂ.75
ಪ್ರಕಾಶಕರು: ಬಂಡಾಯ ಪ್ರಕಾಶನ, ‘ಸಹಯಾನ ಕೆರೆಕೋಣ’, ಅರೇಅಂಗಡಿ ಅಂಚೆ, ತಾಲ್ಲೂಕು. ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ-581334 ದೂ: 9448578021

ಯುವ ಲೇಖಕಿ, ಕವಯತ್ರಿ ಕಾವ್ಯ ಕಡಮೆಯವರ ಮೊದಲ ನಾಟಕ ಸಂಕಲನ ಇದು. ಇದರಲ್ಲಿ ಎರಡು ನಾಟಕಗಳಿವೆ. ಇದರಲ್ಲಿನ ‘ಆಟದೊಳಗಾಟ’ ನಾಟಕಕ್ಕೆ ಹಸ್ತಪ್ರತಿಯಲ್ಲಿದ್ದಾಲೇ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು ವಿಶೇಷ. ಮನೆಮನೆಯ ಕತೆಯೇ ಈ ನಾಟಕದ ಕಥಾವಸ್ತು. ಇನ್ನೊಂದು ‘ಡೋರ್ ನಂಬರ್ 8’ ಹೊಸ ಕಾಲದ ಕಥಾ ವಸ್ತುವನ್ನು ಹೊಂದಿದೆ. ನಗರದ ಒಂದು ಚಾಳದಲ್ಲಿ ಆಕಸ್ಮಿಕವಾಗಿ ಭೇಟಿಯಾಗುವ ಕೃಷ್ಣ ಮತ್ತು ಅರ್ಜುನ ವೇಷಧಾರಿಗಳಿಬ್ಬರ ನಡುವಿನ ಮಾತುಕತಯೇ ನಾಟಕದ ಕಥಾ ಹಂದರವಾಗಿದೆ.

ಬಹುಜನ ಸಮಾಜ

ಡಾ.ಡಿ.ಮುನಿವೆಂಕಟಪ್ಪ

ಪುಟ: 160, ಬೆಲೆ: ರೂ.120 ಪ್ರಕಾಶಕರು: ಶರಣು ಬಿ.ಕೊನೆಕ, ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಮುಖ್ಯಬೀದಿ, ಕಲಬುರಗಿ-585101 ದೂ: 9449825431 ಲೇಖಕ ಡಾ.ಮುನಿವೆಂಕಟಪ್ಪ ದಲಿತ ಚಳವಳಿ ಮೂಲಕ ಬೆಳೆದು ಬಂದ ಚಿಂತಕರು. ಪ್ರಸ್ತುತ ಕೃತಿಯಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಸಾಮರಸ್ಯದ ಸಂದೇಶ ಸಾರಿದ ಮತ್ತು ಅದಕ್ಕಾಗಿ ದುಡಿದ ಬುದ್ದ, ಬಸವ, ಅಂಬೇಡ್ಕರ್, ಸರ್ವಜ್ಞ, ಜೋತಿಬಾ ಪುಲೆ, ಕೃಷ್ಣರಾಜ ಒಡೆಯರ್ ಹಾಗೂ ರಾಜ್ಯದ ಇತ್ತೀಚಿನ ರಾಜಕೀಯ ನಾಯಕ ದೇವರಾಜ ಅರಸು ಅವರ ವಿಚಾರಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದ್ದಾರೆ. ಈ ಕುರಿತ 16 ಲೇಖನಗಳನ್ನು ಕೃತಿ ಒಳಗೊಂಡಿದೆ.

ಶಿವಶರಣರ ವಚನಗಳ ಓದು

ಸಿ.ಪಿ.ನಾಗರಾಜ

ಪುಟ:128, ಬೆಲೆ: ರೂ.100 ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ, 75, ‘ಎ’ ಬ್ಲಾಕ್, 5ನೇ ಕ್ರಾಸ್, ಕೃಷ್ಣ ಗಾರ್ಡನ್, ಆರ್.ವಿ.ಕಾಲೇಜ ಪೋಸ್ಟ್, ಬೆಂಗಳೂರು-560059 ದೂ: 9986347521

ಹನ್ನೆರಡನೇ ಶತಮಾನ ವಚನ ಸಾಹಿತ್ಯದ ಸುವರ್ಣಯುಗ ಎಂದೇ ಹೇಳಲಾಗುತ್ತದೆ. ಬಸವ, ಅಲ್ಲಮ ಮತ್ತು ಅಕ್ಕಮಹಾದೇವಿ ಅವರೊಂದಿಗೆ ನೂರಾರು ಶರಣರು ತಮ್ಮ ಜೀವನದ ಅನುಭವಗಳನ್ನು ವಚನಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಇದರಲ್ಲಿ ಕೆಲವರು ಪ್ರಸಿದ್ಧಿಗೆ ಬಂದರೆ ಇನ್ನು ಕೆಲವರು ತೆರೆಮರೆಯಲ್ಲಿ ಉಳಿದಿದ್ದಾರೆ. ಮೌಲಿಕ ವಿಚಾರಗಳನ್ನು ಪ್ರತಿಪಾದಿಸಿದ್ದರೂ ಮರೆಯಲ್ಲಿ ಉಳಿದ ಅಂಗಸೋಂಕಿನ ಲಿಂಗತಂದೆ, ಉರಿಲಿಂಗಿ ಪೆದ್ದಿ, ಕಂಬದ ಮಾರಿತಂದೆ, ಡಕ್ಕೆಯ ಬೊಮ್ಮಣ್ಣ, ತುರುಗಾಹಿ ರಾಮಣ್ಣ, ನಗೆಯ ಮಾರಿತಂದೆ ಹೀಗೆ ಹಲವು ಶರಣರ ವಚನಗಳನ್ನು ಮತ್ತು ಅವುಗಳ ಅರ್ಥ ವಿಶ್ಲೇಷಣೆಯನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.

ನನ್ನೆದೆಯ ಹಾಡು

ಮೇಟಿ ಕೊಟ್ರಪ್ಪ

ಪುಟ: 104, ಬೆಲೆ: ರೂ.90 ಪ್ರಕಾಶಕರು: ಆಹ್ವಾನ ಪ್ರಕಾಶನ, ಬಸರ ಕೋಡು-583224, ತಾಲ್ಲೂಕು: ಹಗರಿಬೊಮ್ಮನಹಳ್ಳಿ, ಜಿಲ್ಲಾ: ಬಳ್ಳಾರಿ. ದೂ: 9686978399

ಇದೊಂದು ಕವನ ಸಂಕಲನ. ಕವಿ ಮೇಟಿ ಕೊಟ್ರಪ್ಪ ಅವರೇ ಹೇಳುವಂತೆ ಇಲ್ಲಿನ ಬಹುತೇಕ ಕವನಗಳು ಸಮಾಜದಲ್ಲಿನ ಆಗುಹೋಗುಗಳ ಕುರಿತಾದ ಸಾಂದರ್ಭಿಕ ಸೃಷ್ಟಿಯಾಗಿವೆ. ಕೆಲವೊಂದು ಹನಿಗವನಗಳು ಮತ್ತು ಚುಟುಕುಗಳು ಇಲ್ಲಿ ಸೇರಿವೆ. ಇಲ್ಲಿನ ಕವನಗಳಲ್ಲಿ ಪಾಂಡಿತ್ಯಪೂರ್ಣ ಮತ್ತು ಸಂಕೀರ್ಣ ಪದಗಳು ಇಲ್ಲದೆ, ಹೇಳಬೇಕಾದ್ದನ್ನು ನೇರವಾಗಿ ಹೇಳುವ ಪ್ರಯತ್ನವನ್ನು ಕವಿ ಮಾಡಿದ್ದಾರೆ. 

ಭಾವಚಿಂತನ

ನಾ.ಮ.ಶ್ರೀಕಂಠಯ್ಯಶಾಸ್ತ್ರಿ

ಪುಟ: 132, ಬೆಲೆ: ರೂ.120 ಪ್ರಕಾಶಕರು: ಶ್ರೀ ಶರಣ ದೊಡ್ಡಯ್ಯ ಶಾಸ್ತ್ರಿಗಳ ಪ್ರಕಾಶನ ಸಂಸ್ಥೆ, ಬೃಹನ್ಮಠ, ನಾಗರಹಾಳು, ತಾ: ಸಿರಗುಪ್ಪ, ಜಿ: ಬಳ್ಳಾರಿ.

ಇದೊಂದು ಧಾರ್ಮಿಕ ಚಿಂತನೆಯ ಕೃತಿ. ಲೇಖಕರಾದ ಶ್ರೀಕಂಠಯ್ಯ ಶಾಸ್ತ್ರಿಯವರು ಸಮಗ್ರ ವೀರಶೈವ ಲಿಂಗಾಯಿತ ಸಿದ್ಧಾಂತದಡಿ ಹೊಂದಿಸಲಾದ ನೂರೊಂದು ಪದ್ಯಗಳ ಮೂಲಕ ಭಕ್ತಿ, ಜ್ಞಾನ ಮತ್ತು ಕ್ರಿಯೆಗಳ ಅನುಭಾವಮೃತವನ್ನು ಇಲ್ಲಿ ಉಣಬಡಿಸಿದ್ದಾರೆ.

 

ಬೇರು ತೇರು

ಗೌರವ ಸಂಪಾದಕರು: ಮಂಜುನಾಥ ಡಿ.ಎಸ್.

ಸಂಪಾದಕರು: ರವಿಶಂಕರ ಎ.ಕೆ., ಅನಿತ.ಕೆ.ವಿ.

ಪುಟ: 230, ಬೆಲೆ: ರೂ.220 ಪ್ರಕಾಶಕರು: ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ), 102, ಎಸ್.ಎಲ್.ವಿ ಶೃತಿ, 7ನೇ ಅಡ್ಡ ರಸ್ತೆ, ವ್ಯಾಸರಾಯ ರಸ್ತೆ ಯಲೇನಹಳ್ಳಿ ಮೇನ್ ರೋಡ್, ಡಿ.ಎಲ್.ಎಫ್., ಅಕ್ಷಯ ನಗರ, ಬೆಂಗಳೂರು-560068 ದೂ: 9620651166

ಕನ್ನಡ ಸಾಹಿತ್ಯದಲ್ಲಿ ದ.ರಾ.ಬೇಂದ್ರೆ ಮತ್ತು ಕುವೆಂಪು ಅವರು ಎರಡು ಶ್ರೇಷ್ಠ ಶೃಂಗಗಳಿದ್ದಂತೆ. ಅವರ ಕಾವ್ಯದ ವಿಮರ್ಶೆ, ಚರ್ಚೆ, ಚಿಂತನೆಗಳು ನಡೆದಿವೆ. ಆದರೆ ಅವರ ಗದ್ಯ ಬರಹಗಳ ವಿಮರ್ಶೆ, ಸಂವಾದ ಅಷ್ಟಾಗಿ ನಡೆದಿಲ್ಲ ಎಂದು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಈ ಕೃತಿ ಹೊರತಂದಿದೆ. ಇದರಲ್ಲಿ ಕುವೆಂಪು ಮತ್ತು ಬೇಂದ್ರೆ ಅವರ ಎಲ್ಲ ಪ್ರಕಾರದ ಗದ್ಯ ಸಾಹಿತ್ಯದ 48 ಅಧ್ಯಯನ ಲೇಖನಗಳಿವೆ. ನಾಡಿನ ಹಲವು ಸಾಹಿತಿಗಳು ಕನ್ನಡ ಸಾಹಿತ್ಯದ ಮೇರು ಚೇತನಗಳ ಬರಹಗಳನ್ನು ತಮ್ಮದೇ ಮಿತಿಯಲ್ಲಿ ವಿಮರ್ಶಿಸಿದ್ದಾರೆ, ಚರ್ಚಿಸಿದ್ದಾರೆ.

ಹೆತ್ತೂರು

ಜಾಣಗೆರೆ ವೆಂಕಟರಾಮಯ್ಯ

ಪುಟ: 168, ಬೆಲೆ: ರೂ.150 ಪ್ರಕಾಶಕರು: ಜಾಣಗೆರೆ ಪತ್ರಿಕೆ ಪ್ರಕಾಶನ, #67, ಗಂಗಾಧರಪ್ಪ ಲೇಔಟ್, 5ನೇ ಕ್ರಾಸ್, ಪಾಪರೆಡ್ಡಿಪಾಳ್ಯ, ನಾಗರಬಾವಿ, 2ನೇ ಹಂತ, ಬೆಂಗಳೂರು-560072 ದೂ: 9343798078

ಲೇಖಕ ಜಾಣಗೆರೆ ವೆಂಕಟರಾಮಯ್ಯ ಸಾಹಿತಿ, ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರರು. ಕತೆ, ಕಾದಂಬರಿ, ಇತಿಹಾಸ ಕಥನ, ಪ್ರವಾಸ ಕಥನ ಸೇರಿದಂತೆ 30 ಕೃತಿಗಳನ್ನು ರಚಿಸಿದ್ದಾರೆ. 2012ರಲ್ಲಿ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಶ್ತಿಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಜಾಣಗೆರೆಯವರು ತಮ್ಮ ಬಾಲ್ಯದ ಜೀವನವನ್ನು ಅವಲೋಕಿಸಿದ್ದಾರೆ. ತುಮಕೂರು ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು ಶಿಕ್ಷಣ ಪಡೆದ ಇವರು ಸಿದ್ದಗಂಗಾ ಸ್ವಾಮಿಗಳಿಂದ ಇಂಗ್ಲಿಷ್ ಮತ್ತು ಸಂಸ್ಕೃತ ವಿಷಯಗಳ ಅಭ್ಯಾಸ ಮಾಡಿದ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published.