ಹೊಸ ಭರವಸೆ ಹುಟ್ಟಿಸಿರುವ ಸಾಮಾನ್ಯ ರಾಜಕಾರಣಿ ಬೈಡೆನ್

ಬೈಡೆನ್ ಕೆಲಸ ಮಾಡುತ್ತಿರುವ ರೀತಿಯು ಒಬ್ಬ ಸಾಮಾನ್ಯ ತಿಳಿವಳಿಕೆಯ, ವಿಜ್ಞಾನದಲ್ಲಿ ನಂಬಿಕೆಯಿರುವ ಆಡಳಿತಗಾರನ ಶೈಲಿಗೆ ಸಮೀಪವಾಗಿದೆ. ನಿಜವಾಗಿ ಬೈಡೆನ್ ಕಳೆದ ಐದು ತಿಂಗಳುಗಳಲ್ಲಿ ತೋರಿಸಿರುವುದು ಅವರ ಐದು ದಶಕಗಳ ರಾಜಕೀಯ ಜೀವನದಲ್ಲಿ ಕಾಣದ ಪ್ರಗತಿಪರ ಗುಣ ಮತ್ತು ಮಹತ್ವಾಕಾಂಕ್ಷೆಯನ್ನು. ಇದರಿಂದ ಅಮೆರಿಕಾದ ಪುನಶ್ಚೇತನಕ್ಕೆ ಅನುಕೂಲವಾಗಿದೆ.

-ಪೃಥ್ವಿದತ್ತ ಚಂದ್ರಶೋಭಿ

ಈ ಲೇಖನವನ್ನು ಬರೆಯುತ್ತಿರುವ ಮೇ ತಿಂಗಳ ಕಡೆಯ ವಾರಾಂತ್ಯವು ಅಮೆರಿಕಾದಲ್ಲಿ ಮೆಮೊರಿಯಲ್ (ಸ್ಮರಣೆಯ) ದಿನವನ್ನು ಆಚರಿಸಲಾಗುತ್ತಿದೆ. ಇದು 1861-65ರ ನಡುವಿನ ಅಂತರ್ಯುದ್ಧದ ಸಂದರ್ಭದಿಂದಲೂ ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ತಮ್ಮ ಜೀವವನ್ನು ಕಳೆದುಕೊಂಡು ಅಮೆರಿಕನ್ನರನ್ನು ನೆನಪಿಸಿಕೊಳ್ಳುವ ದಿನ. ಬೇಸಿಗೆಯ ಪ್ರಾರಂಭವನ್ನು ಮೆಮೊರಿಯಲ್ ದಿನದ ವಾರಾಂತ್ಯವು ಸೂಚಿಸುತ್ತದೆ. ಕೋಟ್ಯಂತರ ಅಮೆರಿಕನ್ನರು ಈ ರಜೆಯ ವಾರಾಂತ್ಯದಲ್ಲಿ ಪ್ರಯಾಣ ಮಾಡುತ್ತಾರೆ, ಇತರೆ ಸ್ಥಳಗಳಿಗೆ ಇಲ್ಲವೆ ತಮ್ಮ ಸ್ನೇಹಿತರು ಹಾಗೂ ನೆಂಟರಿಷ್ಟರ ಮನೆಗಳಿಗೆ ಭೇಟಿ ನೀಡುತ್ತಾರೆ.

ಕಳೆದ 18 ತಿಂಗಳುಗಳಿಂದ ಕೊರೋನಾ ವೈರಾಣುವಿನಿಂದ ನಲುಗಿರುವ ಅಮೆರಿಕನ್ನಿರಿಗೆ 2021ರ ಮೆಮೊರಿಯಲ್ ದಿನ ಮೊದಲ ಬಾರಿಗೆ ಒಂದಷ್ಟು ನೆಮ್ಮದಿಯನ್ನು ಮತ್ತು ಯಥಾಸ್ಥಿತಿಯ ಅನುಭವವನ್ನು ಕೊಡುತ್ತಿರುವಂತೆ ಗೋಚರಿಸುತ್ತಿದೆ. ಅಲ್ಲಿನ ಸೆಂಟರ್ ಪಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆಂಷನ್ (ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯ ಕೇಂದ್ರ) ವ್ಯಾಕ್ಸಿನ್ ತೆಗೆದುಕೊಂಡಿರುವ ಅಮೆರಿಕನ್ನರು ಮುಖಕ್ಕೆ ಮುಸುಕು ಹಾಕಿಕೊಳ್ಳದೆ ಹೊರಗೆ ಹೋಗಬಹುದು ಎಂದು ಶಿಪಾರಸು ಮಾಡಿದೆ. ಅಮೆರಿಕನ್ನರು ವಿಮಾನ ಪ್ರಯಾಣ ಮಾಡಲು ಮತ್ತು ಮನರಂಜನಾ ಪ್ರಯಾಣವನ್ನು ಕೈಗೊಳ್ಳಲು ಸಿದ್ಧರಾಗುತ್ತಿದ್ದಾರೆ. ಈ ವಾಸ್ತವವು ಎರಡನೆಯ ಅಲೆಯನ್ನು ಅತ್ಯಂತ ತೀವ್ರವಾಗಿ ಅನುಭವಿಸುತ್ತಿರುವ ಭಾರತದ ಜೊತೆಗೆ ಹೋಲಿಸಿದಾಗ ಬಹಳ ಭಿನ್ನವಾಗಿ ಕಾಣುತ್ತದೆ.

2020ರ ಪ್ರಾರಂಭದಿಂದ ಕೊರೋನಾದಿಂದ ಸುಮಾರು 3.32 ಕೋಟಿ ಜನರಿಗೆ ಸೋಂಕು ತಗುಲಿದೆ ಎನ್ನುವ ಅಧಿಕೃತ ಸಂಖ್ಯೆಯಿದೆ. ಆದರೆ ಸೋಂಕಿತರ ಸಂಖ್ಯೆ ಸುಮಾರು 11 ಕೋಟಿ ಇರಬಹುದು ಎನ್ನುವ ಅನಧಿಕೃತ ಆದರೆ ನಂಬಲರ್ಹ ಅಂದಾಜು ಸಹ ಇದೆ. ಈ ಅವಧಿಯಲ್ಲಿ ಸುಮಾರು ಆರು ಲಕ್ಷ ಜನರು ಸಾವಿಗೀಡಾಗಿದ್ದಾರೆ. ಅಲ್ಲಿನ ಸರಾಸರಿ ಜೀವಿತಾವಧಿಯು ಕೊರೋನಾ ನಂತರದ ಅವಧಿಯಲ್ಲಿ ಸುಮಾರು ಒಂದು ವರ್ಷದಷ್ಟು ಕಡಿಮೆಯಾಗಿದೆ. 2021ರ ಜನವರಿ 20ರ ತನಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪರಿಗೆ ಈ ಬಿಕ್ಕಟ್ಟಿನ `ಶ್ರೇಯಸ್ಸ’ನ್ನು ದಯಪಾಲಿಸಬೇಕು. ಆ ನಂತರದಲ್ಲಿ ಅಧ್ಯಕ್ಷರಾದ ಜೋ ಬೈಡೆನ್ ವ್ಯಾಕ್ಸಿನ್ ನೀಡುವುದನ್ನು ತಮ್ಮ ಕಾರ್ಯಸೂಚಿಯ ಬಹುಮುಖ್ಯ ಅಂಶವಾಗಿ ಪರಿಗಣಿಸಿದರು. ಅದರ ಲಾಭವನ್ನು ಈಗ ಅಮೆರಿಕನ್ನರು ಕಾಣುತ್ತಿದ್ದಾರೆ. ಸೋಂಕಿತರಿಂದ ಹರ್ಡ್ ಇಮ್ಯೂನಿಟಿ ಬಂದಿರಬಹುದಾದರೂ ಸಹ, ವ್ಯಾಕ್ಸಿನಿನ ಮಹತ್ವವನ್ನು ಕಡೆಗಣಿಸುವಂತಿಲ್ಲ.

2020ರ ಬೇಸಿಗೆಯ ಹೊತ್ತಿಗೆ ವ್ಯಾಕ್ಸಿನ್ ಸಂಶೋಧನೆ ತ್ವರಿತ ಗತಿಯಲ್ಲಿ ಸಾಗಿತ್ತಾದರೂ, ಅವುಗಳ ಬಳಕೆಗೆ ಅನುಮತಿ ದೊರಕಿದ್ದು 2020ರ ಡಿಸೆಂಬರಿನಲ್ಲಿ. ತುರ್ತುಪರಿಸ್ಥಿತಿಗಳಲ್ಲಿ ಬಳಸಬಹುದೆಂದು ಪ್ರ್ರೈಜರ್ (ಡಿಸೆಂಬರ್ 10, 2020ರಂದು), ಮೊಡೆರ್ನಾ (ಡಿಸೆಂಬರ್ 17, 2020) ಮತ್ತು ಜಾನ್ಸನ್ ಮತ್ತು ಜಾನ್ಸನ್ (ಫೆಬ್ರವರಿ 27, 2021) ವ್ಯಾಕ್ಸಿನುಗಳಿಗೆ ಅನುಮತಿ ನೀಡಲಾಯಿತು. ಈ ನಡುವೆ ಟ್ರಂಪ್ ಸರ್ಕಾರವು ಆಗಸ್ಟ್ 2020ರಲ್ಲಿಯೆ ವ್ಯಾಕ್ಸಿನುಗಳನ್ನು ಖರೀದಿಸುವ ವ್ಯವಸ್ಥೆಯನ್ನು ಮಾಡಿ, ಮುಂಗಡವಾಗಿಯೆ ಕೊಂಡುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಂಡಿತ್ತು.

ಬೈಡೆನ್ ಅಧಿಕಾರಕ್ಕೆ ಬಂದ ಕೂಡಲೆ ತಮ್ಮ ಮೊದಲ ನೂರು ದಿನಗಳಲ್ಲಿ ಪ್ರತಿದಿನವೂ ಹತ್ತು ಲಕ್ಷ ಜನರಿಗೆ ವ್ಯಾಕ್ಸಿನೇಷನ್ ಮಾಡುವುದಾಗಿ ಘೋಷಿಸಿದರು. ಕೆಲವೆ ದಿನಗಳಲ್ಲಿ ಈ ಗುರಿಯನ್ನು ದ್ವಿಗುಣಗೊಳಿಸಿದರು. ಈಗ ಜುಲೈ 4ರ ಹೊತ್ತಿಗೆ, ಅಂದರೆ ಅಮೆರಿಕಾದ ಸ್ವತಂತ್ರ ದಿನಾಚರಣೆಯ ವೇಳೆಗೆ, ಶೇ 70ರಷ್ಟು ಅಮೆರಿಕನ್ನರಿಗೆ ವ್ಯಾಕ್ಸಿನ್ ನೀಡುವ ಗುರಿಯನ್ನು ಹೊಂದಿದ್ದಾರೆ. ಅಂದರೆ ಬಹುತೇಕ 12ರ ವಯಸ್ಸಿನ ಮೇಲ್ಪಟ್ಟ ಎಲ್ಲ ಅಮೆರಿಕನ್ನರಿಗೂ ವ್ಯಾಕ್ಸಿನ್ ದೊರಕಿರುತ್ತದೆ.

ಬೈಡೆನ್ನರ ಗುರಿಗಳನ್ನು ಅವರ ಸರ್ಕಾರ ತಲುಪಿದೆ ಎನ್ನುವುದು ಮಾತ್ರ ಇಲ್ಲಿ ಮುಖ್ಯವಲ್ಲ. ಅಥವಾ ವಿಜ್ಞಾನ ಮತ್ತು ಪರಿಣತರ ಸಲಹೆಗಳನ್ನು ಪರಿಗಣಿಸಿ, ಸಾಮಾನ್ಯ ತಿಳಿವಳಿಕೆಯ ನೆಲೆಯ ಮೇಲೆ ಬೈಡೆನ್ ತಮ್ಮ ಕಾರ್ಯಸೂಚಿ ರೂಪಿಸಿದರು ಮತ್ತು ಅದರಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಸಹ ಅಷ್ಟು ಪ್ರಮುಖವಾದ ವಿಷಯವಲ್ಲ. ಏಕೆಂದರೆ ಕೊರೋನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲುಗಳು ತುಂಬ ಗಂಭೀರವಾದುದು ಆದರೂ ಯಾವಾಗ ಏನು ಮಾಡಬೇಕು ಎನ್ನುವುದು ಅಂತಹ ದೊಡ್ಡ ರಹಸ್ಯವೇನಲ್ಲ.

ಸಾಂಕ್ರಾಮಿಕ ರೋಗಗಳು ಬಂದಾಗ ಅವುಗಳಿಂದ ಪಾರಾಗಲು ಯೋಜನೆಗಳನ್ನು ಅಮೆರಿಕಾದಂತಹ ದೇಶಗಳಲ್ಲಿ ರೂಪಿಸಿರುತ್ತಾರೆ ಮತ್ತು ಅವುಗಳನ್ನು ಆಗಾಗ `ಅಭ್ಯಾಸ ಪಂದ್ಯ’ದ ರೂಪದಲ್ಲಿ ಅನುಷ್ಠಾನಗೊಳಿಸುತ್ತಾರೆ. ಟ್ರಂಪ್ ಸರ್ಕಾರ ಆ ನಿಟ್ಟಿನಲ್ಲಿ ಹೆಚ್ಚು ಕ್ರಿಯಾಶೀಲವಾಗಲಿಲ್ಲ. ಆಗಿದ್ದರೆ ಲಕ್ಷಾಂತರ ಜನರ ಸಾವನ್ನು ತಡೆಯಬಹುದಾಗಿತ್ತೇನೊ.

ಅದಿರಲಿ. ಕೊರೋನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ, ಬೈಡೆನ್ ಕೆಲಸ ಮಾಡುತ್ತಿರುವ ರೀತಿಯು ಒಬ್ಬ ಸಾಮಾನ್ಯ ತಿಳಿವಳಿಕೆಯ, ವಿಜ್ಞಾನದಲ್ಲಿ ನಂಬಿಕೆಯಿರುವ ಆಡಳಿತಗಾರನ ಶೈಲಿಗೆ ಸಮೀಪವಾಗಿದೆ. ಇದರಿಂದ ಅಮೆರಿಕಾದ ಪುನಶ್ಚೇತನಕ್ಕೆ ಅನುಕೂಲವಾಗಿದೆ ಎನ್ನುವುದರಲ್ಲಿ ಅನುಮಾನಗಳಿಲ್ಲ. ಇಂದು ಅಮೆರಿಕಾಕ್ಕೆ ಅಪಾಯವಿದ್ದರೆ ಅದು ವ್ಯಾಕ್ಸಿನ್ ತೆಗೆದುಕೊಳ್ಳುವುದನ್ನು ವಿರೋಧಿಸುವ ಗುಂಪಿನ ಜನರಿಂದ. ಅವರ ಸಂಖ್ಯೆಯೂ ಗಣನೀಯವಾಗಿ ಇರುವುದರಿಂದ, ಹೆಚ್ಚು ಕಡಿಮೆ ಶೇ 20ರಿಂದ 30 ರಷ್ಟು ಅಮೆರಿಕನ್ನರು ವ್ಯಾಕ್ಸಿನ್ ಪಡೆಯದಿರಬಹುದು. ಆದರೆ ಉಳಿದಂತೆ ಸಾಮಾನ್ಯ ಬದುಕು ಈ ವರ್ಷದ ಎರಡನೆಯ ಭಾಗದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳು ಎಂದಿನಂತೆ ತಮ್ಮ ಕಾರ್ಯಚಟುವಟಿಕೆಗಳನ್ನು ನಡೆಸಬಹುದು. ಹಾಗೆಯೆ ಇತರೆ ವಲಯಗಳಲ್ಲಿ ಸಹ ಯಥಾಸ್ಥಿತಿ ಪುನರ್ ನಿರ್ಮಾಣವಾಗುತ್ತದೆ.

ಇದಾವುದರಲ್ಲಿಯೂ ಬೈಡೆನ್ನರ ರ್ಯಾಡಿಕಲ್ ಸ್ವರೂಪ ಕಾಣುವುದಿಲ್ಲ. ನಿಜವಾಗಿ ಬೈಡೆನ್ ಕಳೆದ ಐದು ತಿಂಗಳುಗಳಲ್ಲಿ ತೋರಿಸಿರುವುದು ಅವರ ಐದು ದಶಕಗಳ ರಾಜಕೀಯ ಜೀವನದಲ್ಲಿ ಕಾಣದ ಪ್ರಗತಿಪರ ಗುಣ ಮತ್ತು ಮಹತ್ವಾಕಾಂಕ್ಷೆಯನ್ನು. ಕೊರೋನಾ ಬಿಕ್ಕಟ್ಟಿನಿಂದ ಹೊರಬರಬೇಕಿರುವ ಅಮೆರಿಕಾದ ಅರ್ಥವ್ಯವಸ್ಥೆಯನ್ನು ಮರುನಿರ್ಮಾಣ ಮಾಡುವ ಸವಾಲನ್ನು ಅವರು ಹವಾಮಾನ ವೈಪರೀತ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೈಗೆತ್ತಿಕೊಂಡಿದ್ದಾರೆ. ಅದಕ್ಕಾಗಿ 2.3 ಟ್ರಿಲಿಯನ್ ಡಾಲರುಗಳ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಗ್ರೀನ್ ನ್ಯೂ ಡೀಲ್ ಎಂಬ ಶೀರ್ಷಿಕೆಯಡಿಯಲ್ಲಿ ಡೆಮೊಕ್ರಾಟ್ ಪಕ್ಷದ ಪ್ರಗತಿಪರ ರಾಜಕಾರಣಿಗಳು ಪರಿಸರಮಾಲಿನ್ಯವನ್ನು ಮಾಡುವ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸುವ ಪಣತೊಟ್ಟಿದ್ದರು ಹಾಗೂ ಸಾರ್ವಜನಿಕ ನೀತಿಯನ್ನು ಇದಕ್ಕಾಗಿ ಬಳಸುವ ಹೊಸ ರಾಜಕಾರಣದ ಸಾಧ್ಯತೆಯನ್ನು ಪ್ರತಿಪಾದಿಸಿದ್ದರು. ಇದಕ್ಕೆ ಬೈಡೆನ್ ಸೇರಿದಂತೆ ಬಹುತೇಕ ರಾಜಕಾರಣಿಗಳು ತಾತ್ವಿಕವಾದ ಸಹಮತವನ್ನು ತೋರಿಸಿದ್ದರೂ, ಇದು ಅನುಷ್ಠಾನಮಾಡಲು ಸಾಧ್ಯವಾಗದ ಆಶಯವೆಂದು ಕೈಬಿಟ್ಟಿದ್ದರು. ಆಶ್ಚರ್ಯದ ವಿಷಯವೆಂದರೆ ಈಗ ಬೈಡೆನ್ ಗ್ರೀನ್ ನ್ಯೂ ಡೀಲಿನ ಆಶಯಗಳನ್ನು ತಮ್ಮದಾಗಿಸಿಕೊಂಡು ಹೊಸ ಯೋಜನೆಗಳನ್ನು ರೂಪಿಸುತ್ತಿರುವುದು.

2009ರಲ್ಲಿ ಒಬಾಮ ಅಧ್ಯಕ್ಷರಾದಾಗ ಇಂತಹುದೆ ಬಿಕ್ಕಟ್ಟನ್ನು ಎದುರಿಸಿದ್ದ ಡೆಮೊಕ್ರಾಟ್ ಪಕ್ಷವು ಒಂದು ರೀತಿಯಲ್ಲಿ ಅಂಜುಬುರುಕತನವನ್ನು, ಹೊಂದಾಣಿಕೆಯ ಮನೋಭಾವವನ್ನು ತೋರಿಸಿತ್ತು. ಈಗ ಒಬ್ಬ ಸಾಂಪ್ರದಾಯಿಕ ರಾಜಕಾರಣಿಯಾದ ಬೈಡೆನ್ ಇಡೀ ಅಮೆರಿಕಾದ ಅರ್ಥವ್ಯವಸ್ಥೆಯನ್ನೆ ಸರ್ಕಾರದ ಯೋಜನೆಗಳ ಮೂಲಕ ಮರುನಿರ್ಮಾಣ ಮಾಡುವ ಧೈರ್ಯವನ್ನು ತೋರಿಸುತ್ತಿರುವುದು. ಈ ಹಿಂದೆ 1930ರ ದಶಕದಲ್ಲಿ ನ್ಯೂಡೀಲ್ ನೀತಿಯ ಮೂಲಕ ಅಮೆರಿಕಾದ ಮೂಲಭೂತ ಸೌಕರ್ಯಗಳನ್ನು ಅಂದಿನ ಅಧ್ಯಕ್ಷ ರೂಸವೆಲ್ಟ್ ರೂಪಿಸಿದ್ದರು. ಈಗ ಹವಾಮಾನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶುದ್ಧ ಇಂಧನಮೂಲಗಳನ್ನು ಸೃಷ್ಟಿಸುವ ಮತ್ತು ಪರಿಸರಮಾಲಿನ್ಯ ಮಾಡದ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಬೈಡೆನ್ ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ.

ಬೈಡೆನ್ನರ ನಿಜವಾದ ಮಹತ್ವಾಕಾಂಕ್ಷೆ ಇರುವುದು ಅವರು ಸಾರ್ವಜನಿಕ ನೀತಿಯನ್ನು ಬಳಸಿ ಅರ್ಥವ್ಯವಸ್ಥೆಯನ್ನು ಕಟ್ಟಲು ಪ್ರಯತ್ನಿಸುತ್ತಿರುವುದರಲ್ಲಿ. ಇದು ರಾಜ್ಯ ವ್ಯವಸ್ಥೆ ಮತ್ತು ಸರ್ಕಾರಗಳ ಪಾತ್ರವನ್ನು ಮತ್ತೆ ಎತ್ತಿ ಹಿಡಿಯುವ ಪ್ರಯತ್ನ. ಟ್ರಂಪ್ ಮತ್ತು ಅವರಿಗಿಂತ ಮೊದಲಿನ ರಿಪಬ್ಲಿಕನ್ ಅಧ್ಯಕ್ಷರು 1980ರಿಂದಲೂ ಸರ್ಕಾರ ಮತ್ತು ಸಾರ್ವಜನಿಕ ನೀತಿಗಳನ್ನು ಕಡೆಗಾಣಿಸಿ, ಮಾರುಕಟ್ಟೆಯ ಶಕ್ತಿಗಳು ನಮ್ಮ ಅಗತ್ಯಗಳನ್ನು ಪೂರೈಸಬೇಕು ಎನ್ನುವ ವಾದವನ್ನು ಮುಂದಿಟ್ಟಿದ್ದರು. ಬೈಡೆನ್ ಆ ವಾದವನ್ನು ಅಲ್ಲಗಳೆಯುತ್ತ, ರಾಜ್ಯ, ಪ್ರಭುತ್ವ ಮತ್ತು ಸರ್ಕಾರಗಳ ಮಹತ್ವವನ್ನು ಮತ್ತೆ ಪ್ರತಿಪಾದಿಸುವಲ್ಲಿ ನಮ್ಮ ನಿರೀಕ್ಷೆಗಳನ್ನೂ ಮೀರಿದ್ದಾರೆ. ಜೊತೆಗೆ ಯಾವುದೆ ಸಮಾಜದಲ್ಲಿ ನೆರವಿನ ಅಗತ್ಯವಿರುವ ವರ್ಗಗಳಿಗೆ ಸರ್ಕಾರಗಳು ತಮ್ಮ ಸಂಪನ್ಮೂಲಗಳನ್ನು ಬಳಸಿ ಸಹಾಯ ಮಾಡಬೇಕು ಎನ್ನುವ ಸರಳ ಸೂತ್ರವನ್ನು ಮತ್ತೆ ಪ್ರತಿಪಾದಿಸಿದ್ದಾರೆ. ಇಂತಹ ಸಹಾಯ ಅಲ್ಪಸಂಖ್ಯಾತ ಗುಂಪಿನ ಉದ್ದಿಮೆದಾರರಿಗೆ ಸಾಲ-ಸಬ್ಸಿಡಿಗಳನ್ನು ನೀಡುವುದಾಗಬಹುದು ಅಥವಾ ಎಲ್ಲ ವರ್ಗಗಳ ಚಿಕ್ಕಮಕ್ಕಳಿಗೆ ಶಿಶುಪಾಲನಾ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಇರಬಹುದು.

ಒಬ್ಬ ಸಾಂಪ್ರದಾಯಿಕ ರಾಜಕಾರಣಿ ಉದಾರವಾದಿ ರಾಜಕೀಯ ವ್ಯವಸ್ಥೆಯಲ್ಲಿ ಹೊಸದೊಂದು ಪ್ರಯೋಗವೊಂದನ್ನು ತಮ್ಮ 78ನೆಯ ವಯಸ್ಸಿನಲ್ಲಿ ಕೈಗೆತ್ತಿಕೊಂಡಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ ವಿಷಯ. ಇದು ಇಂದಿನ ಹವಾಮಾನ ಬಿಕ್ಕಟ್ಟುಗಳ ಚರ್ಚೆಯ ಸಂದರ್ಭದಲ್ಲಿ ವಿಶೇಷ ಮಹತ್ವವನ್ನು ಪಡೆಯುತ್ತದೆ.

78ನೆಯ ವಯಸ್ಸಿನ ನಮ್ಮ ಮುಖ್ಯಮಂತ್ರಿಗಳು ಇಂತಹ ಧೀಮಂತಿಕೆಯನ್ನು, ತಮ್ಮ ಕಾಲದ ಸವಾಲುಗಳ ಗಹಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ನಿರೀಕ್ಷಿಸುವುದು ಹೆಚ್ಚಾಗಬಹುದೇನೊ

ಜೋ ಬೈಡೆನ್ ನಡೆದುಬಂದ ದಾರಿ

ಜೋ ಬೈಡೆನ್ನರನ್ನು ಅವರ ಸ್ನೇಹಿತರಾಗಲಿ ಅಥವಾ ರಾಜಕೀಯ ಎದುರಾಳಿಗಳಾಗಲಿ ಒಬ್ಬ ಜನಪ್ರಿಯ ನಾಯಕ, ವಾಗ್ಮಿ ಅಥವಾ ರಾಡಿಕಲ್ ಚಿಂತಕನೆಂದು ಗುರುತಿಸುವುದಿಲ್ಲ.

ಡೆಲಾವೇರ್ ಎಂಬ ಪೂರ್ವತೀರದಲ್ಲಿರುವ ಸಣ್ಣ ರಾಜ್ಯದ ಸೆನೆಟರ್ ಆಗಿ 1972ರಲ್ಲಿ ಕೇವಲ 29ನೆಯ ವಯಸ್ಸಿನಲ್ಲಿಯೆ ಬೈಡೆನ್ ಆಯ್ಕೆಯಾದರು. ಜನವರಿ 1973ರಲ್ಲಿ ಪ್ರಮಾಣವಚನ ಸ್ವೀಕರಿಸುವ ಹೊತ್ತಿಗೆ ಅವರಿಗೆ ಮೂವತ್ತು ವರ್ಷ ವಯಸ್ಸಾಗಿತ್ತು ಮತ್ತು ಸೆನೆಟರ್ ಆಗಲು ಅಗತ್ಯವಿದ್ದ ಕನಿಷ್ಠ ವಯೋಮಾನ ಮಿತಿಯನ್ನು ಅವರು ದಾಟಿದ್ದರು. ಆದರೆ ಆ ಸಮಯದಲ್ಲಿಯೆ ಅವರ ಪತ್ನಿ ಮತ್ತು ಮಗಳು ಅಪಘಾತವೊಂದರಲ್ಲಿ ಮಡಿದರು. ಆ ಆಘಾತದಿಂದ ಹೊರಬರಲು ಆಗದೆ, ಬೈಡೆನ್ ಪ್ರಮಾಣವಚನ ಸ್ವೀಕರಿಸುವ ಮೊದಲೆ ರಾಜಕೀಯದಿಂದ ನಿವೃತ್ತಿ ಪಡೆದು ತಮ್ಮ ಇಬ್ಬರು ಪುತ್ರರನ್ನು ನೋಡಿಕೊಳ್ಳುತ್ತ ವಕೀಲಿ ವೃತ್ತಿಗೆ ವಾಪಸಾಗುವ ಚಿಂತನೆ ಮಾಡಿದ್ದರು.

ಆದರೆ ಅವರ ಸೆನೆಟ್ ಸಹೋದ್ಯೋಗಿಗಳ ಸಲಹೆಯಂತೆ  ಕೆಲವು ಕಾಲ ಸೆನೆಟ್ ಸದಸ್ಯನಾಗಿ ಕೆಲಸ ಮಾಡಲು ತೀರ್ಮಾನಿಸಿದರು. ತಮ್ಮ ಊರಾದ ಡೆಲಾವೇರಿನ ರಾಜಧಾನಿ ವಿಲ್ಮಿಂಗ್ಟನ್ ನಗರದಲ್ಲಿಯೆ ವಾಸ ಮಾಡುತ್ತ, ಪ್ರತಿದಿನವೂ ಅಮೆರಿಕಾದ ರಾಜಧಾನಿಯಾದ ವಾಷಿಂಗ್ಟನ್ನಿಗೆ ರೈಲಿನಲ್ಲಿ ಹೋಗಿಬಂದು ಮಾಡಿದರು. ವೈಯಕ್ತಿಕ ಬದುಕಿನ ಸಣ್ಣ ವಿವರವೆನಿಸಬಹುದಾದ ಈ ಒಂದು ತೀರ್ಮಾನ ಬೈಡೆನ್ನರನ್ನು ವಿಭಿನ್ನ ರೀತಿಯ ಸೆನೆಟರ್ ಆಗಿಸಿತು. ಇತರ ಸೆನೆಟರರಂತೆ ಬೈಡೆನ್ ವಾಷಿಂಗ್ಟನ್ನಿನಲ್ಲಿ ಮನೆ ಮಾಡಲಿಲ್ಲ ಮತ್ತು ಮುಂದಿನ ಮೂರೂವರೆ ದಶಕಗಳ ಕಾಲ ವಿಲ್ಮಿಂಗ್ಟನ್ ನಗರದಲ್ಲಿಯೆ ವಾಸ ಮಾಡಿದರು. ಇಂದಿಗೂ ಅವರ ಬಗ್ಗೆ ಅಮೆರಿಕನ್ನರೆಲ್ಲರಿಗೆ ಗೊತ್ತಿರುವ ಮಾತು ಅವರ ವೈಯಕ್ತಿಕ ಬದುಕಿನ ದುರ್ಘಟನೆ ಮತ್ತು ಅದರಿಂದ ಅವರ ಬದುಕಿಗೆ ದೊರಕಿದ ತಿರುವು.  

ಬೈಡೆನ್ ಮುಂದಿನ ಮೂರೂವರೆ ದಶಕಗಳ ಕಾಲ, ಅಂದರೆ 2008ರ ತನಕ, ಸೆನೆಟ್ ಸದಸ್ಯರಾಗಿಯೆ ಉಳಿದರು. 1988 ಮತ್ತು 2008ರಲ್ಲಿ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಲಿ ಸ್ಪರ್ಧಿಸಿದರೂ, ಅವರಿಗೆ ಯಶಸ್ಸು ದೊರಕಲಿಲ್ಲ. ಸೆನೆಟ್ ಸದಸ್ಯನಾಗಿ ವಿದೇಶಾಂಗ ವ್ಯವಹಾರಗಳು ಮತ್ತು ನ್ಯಾಯಾಂಗ ವ್ಯವಸ್ಥೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚಿನ ಪರಿಣತಿ ಪಡೆದಿದ್ದರು. ಆದರೂ ಡೆಲಾವೆರಿನಂತಹ ಸಣ್ಣ ರಾಜ್ಯದ ರಾಜಕಾರಣಿಯಾದುದರಿಂದ ಬೈಡೆನ್ನರಿಗೆ ದೊಡ್ಡ ಪ್ರಮಾಣದ ರಾಜಕೀಯ ನೆಲೆಯಿರಲಿಲ್ಲ. ಜೊತೆಗೆ ದೊಡ್ಡ ರಾಜ್ಯಗಳು ಎದುರಿಸುವ ಕೃಷಿ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ಮತ್ತು ಆ ಮೂಲಕ ರಾಜಕೀಯ ನೆಲೆಯನ್ನು ಕಟ್ಟಿಕೊಳ್ಳುವ ಅವಕಾಶವೂ ಅವರಿಗೆ ದೊರಕಲಿಲ್ಲ.

ಕ್ಯಾಥೋಲಿಕ್ ಕ್ರಿಶ್ಚಿಯನ್ನರಾಗಿದ್ದರಿಂದ ಕೂಡ ಬೈಡೆನ್ ರಾಷ್ಟ್ರ ರಾಜಕಾರಣದಲ್ಲಿ ಸ್ವಲ್ಪ ಮಟ್ಟಿನ ಸವಾಲುಗಳನ್ನೂ ಎದುರಿಸಬೇಕಾಯಿತು. ಜಾನ್ ಕೆನಡಿ (1960-63) ಯ ನಂತರ ಬೈಡೆನ್ನರ ತನಕ ಮತ್ತಾವ ಕ್ಯಾಥೋಲಿಕ್ ರಾಜಕಾರಣಿಯೂ ಅಧ್ಯಕ್ಷನಾಗಿ ಅಮೆರಿಕದಲ್ಲಿ ಆಯ್ಕೆಯಾಗಿರಲಿಲ್ಲ ಎನ್ನುವುದನ್ನು ಇಲ್ಲಿ ಸ್ಮರಿಸಬಹುದು.

ಹಾಗಾಗಿ ಬೈಡೆನ್ ಒಬ್ಬ ಸಾಂಪ್ರದಾಯಿಕ ರಾಜಕಾರಣಿಯಾಗಿಯೆ ಉಳಿದರು. ಒಬಾಮರ ಉಪಾಧ್ಯಕ್ಷರಾಗಿ ಒಬ್ಬ ಅನುಭವಿ ಸಲಹೆಗಾರನ ರೂಪದಲ್ಲಿ ತಮಗಿಂತ ಸುಮಾರು ಎರಡು ದಶಕದಷ್ಟು ಚಿಕ್ಕ ವಯಸ್ಸಿನ ಅಧ್ಯಕ್ಷನ ಜೊತೆಗೆ ಬೈಡೆನ್ ಕೆಲಸ ಮಾಡಿದರು. 2016ರಲ್ಲಿ ಹಿಲರಿ ಕ್ಲಿಂಟನ್ ಅವರ ಸರದಿಯೆಂದು ಬೈಡನ್ ಅಧ್ಯಕ್ಷರಾಗಲು ಸ್ಪರ್ಧಿಸಲಿಲ್ಲ.

2020ರಲ್ಲಿ ಅವರ ರಾಜಕೀಯ ಜೀವನ ಮುಗಿದಿದೆ ಎಂದುಕೊಂಡಿದ್ದಾಗಲೆ ಮತ್ತೆ ಬೈಡೆನ್ ಚುನಾವಣಾ ರಾಜಕೀಯಕ್ಕಿಳಿದರು. 2020ರಲ್ಲಿ ಸಹ ಅವರನ್ನು ಪಕ್ಷದೊಳಗಿನ ಸಾಂಪ್ರದಾಯಿಕ ಗುಂಪುಗಳ ಅಭ್ಯರ್ಥಿಯೆಂದೆ ಗುರುತಿಸಲಾಗಿತ್ತು. ಅವರಿಂದ ಹೊಸ ಚಿಂತನೆಯ ನಿರೀಕ್ಷೆಯನ್ನು ಡೆಮೊಕ್ರಾಟಿಕ್ ಪಕ್ಷದ ಎಡಪಂಥೀಯರೆ ಮಾಡಿರಲಿಲ್ಲ. ಹಲವಾರು ಮಹಿಳಾ ಮತ್ತು ಕಪ್ಪುವರ್ಣೀಯ ಸಮರ್ಥ ಅಭ್ಯರ್ಥಿಗಳ ನಡುವೆ ಬೈಡೆನ್ ಅಮೆರಿಕಾದಲ್ಲಿ ಯಾವಾಗಲೂ ಅಧಿಕಾರದಲ್ಲಿದ್ದ ವಯಸ್ಸಾದ ಶ್ವೇತವರ್ಣೀಯ ಪುರುಷ ರಾಜಕಾರಣಿ ವರ್ಗದ ಪ್ರತಿನಿಧಿಯಂತೆಯೆ ಎಲ್ಲರಿಗೂ ಕಂಡರು. ಸ್ವಲ್ಪ ಮಟ್ಟಿಗೆ ಎಡಪಂಥೀಯರೆ ಪ್ರಾಬಲ್ಯ ಸಾಧಿಸಿದ್ದ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗುವ ಅವಕಾಶ ಅವರಿಗೆ ದೊರೆಯುತ್ತದೆಯೆ ಮತ್ತು ಹಾಗೇನಾದರೂ ದೊರೆತರೆ, ಪಕ್ಷದ ಎಲ್ಲ ವರ್ಗಗಳನ್ನೂ ಬೈಡೆನ್ ಜೊತೆಗೆ ಕೊಂಡೊಯ್ಯುವಲ್ಲಿ ಯಶಸ್ಸು ಗಳಿಸುತ್ತಾರೆಯೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.

ಇನ್ನೂ ಮುಖ್ಯವಾಗಿ, ನಮ್ಮ ಕಾಲದ ದೊಡ್ಡ ಸಮಸ್ಯೆಗಳನ್ನು ಗುರುತಿಸುವ ಮತ್ತು ಅವುಗಳಿಗೆ ಮಹತ್ವಾಕಾಂಕ್ಷಿ ಪರಿಹಾರಗಳನ್ನು ಒದಗಿಸುವ ರಾಜಕೀಯ ಧೀಮಂತಿಕೆಯನ್ನು ಅವರು ತೋರಿಸುವರೆ ಎನ್ನುವ ಅನುಮಾನವೂ ಇತ್ತು. ಅಧ್ಯಕ್ಷರಾದ ಮೇಲೆ ಅವರು ರೂಪಿಸುತ್ತಿರುವ ಯೋಜನೆಗಳಲ್ಲಿ ಕಾಣಬರುತ್ತಿರುವ ಮಹತ್ವಾಕಾಂಕ್ಷೆ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳೆರಡನ್ನೂ ಚಕಿತಗೊಳಿಸಿವೆ.

ಮೊದಲ ನೂರು ದಿನಗಳು

1932ರ ನವೆಂಬರ್ ತಿಂಗಳಿನಲ್ಲಿ ಅಮೆರಿಕದ ಅಧ್ಯಕ್ಷರಾಗಿ ಪ್ರಾಂಕ್ಲಿನ್ ರೂಸವೆಲ್ಟ್ ಆಯ್ಕೆಯಾದರು. 1929ರ ಗ್ರೇಟ್ ಡಿಪ್ರೆಶನ್ ಸಮಯದಿಂದಲೂ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದ ಅಮೆರಿಕಾದ ಅರ್ಥವ್ಯವಸ್ಥೆಯನ್ನು ನ್ಯೂಡೀಲ್ ನೀತಿಯ ಮೂಲಕ ಪುನಶ್ಚೇತನ ಒದಗಿಸುವುದಾಗಿ ರೂಸವೆಲ್ಟ್ ಅಮೆರಿಕನ್ನರಿಗೆ ಭರವಸೆ ನೀಡಿದ್ದರು. ನ್ಯೂಡೀಲ್ ನೀತಿಯು ಕೇವಲ ಹೊಸದೊಂದು ಸರ್ಕಾರದ ಯೋಜನೆ ಮಾತ್ರವಾಗಿರಲಿಲ್ಲ. ಅರ್ಥಶಾಸ್ತ್ರಕ್ಕೆ ಹೊಸ ಆಯಾಮವನ್ನು ಒದಗಿಸಿದ ಬ್ರಿಟಿಷ್ ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೇನ್ಸನ ಹೊಸ ಚಿಂತನೆಗಳನ್ನು ಅಡಿಪಾಯವಾಗಿ ನ್ಯೂಡೀಲ್ ಹೊಂದಿತ್ತು.

ಜಾಗತಿಕ ಆರ್ಥಿಕ ಮಹಾಬಿಕ್ಕಟ್ಟಿನಿಂದ ಹೊರಬರಲು ಸರ್ಕಾರಗಳು ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಇವುಗಳಿಗೆ ಖಾಸಗಿ ಬಂಡವಾಳವನ್ನು ಬಯಸುವ ಬದಲು, ಸರ್ಕಾರಗಳೆ ಹೆಚ್ಚು ಹಣವನ್ನು ಮುದ್ರಿಸಿ ಅದನ್ನು ಆರ್ಥಿಕ ಪುನಶ್ಚೇತನಕ್ಕಾಗಿ ಬಳಸಬೇಕು ಎಂದು ಕೇನ್ಸ್ ವಾದಿಸಿದನು. ಆರ್ಥಿಕ ಬಿಕ್ಕಟ್ಟುಗಳಿಂದ ಹೊರಬಂದು, ಸಂಪೂರ್ಣ ಉದ್ಯೋಗ (ಪುಲ್ ಎಂಪ್ಲಾಯಮೆಂಟ್) ಸ್ಥಿತಿಯನ್ನು ತಲುಪಲು ಸರ್ಕಾರಗಳೆ ಹೆಚ್ಚುವರಿ ಸಂಪನ್ಮೂಲಗಳನ್ನು ಅರ್ಥವ್ಯವಸ್ಥೆಯಲ್ಲಿ ಹೂಡಬೇಕು ಎನ್ನುವ ಸಲಹೆಯನ್ನು ಕೇನ್ಸ್ ನೀಡಿದನು.

1933ರ ಮಾರ್ಚಿನಲ್ಲಿ ಅಧ್ಯಕ್ಷನಾಗಿ ರೂಸವೆಲ್ಟ್ ಅಧಿಕಾರ ಸ್ವೀಕರಿಸಿದಾಗ, ಅಮೆರಿಕದ ಪರಿಸ್ಥಿತಿ ಬದಲಾಗಿರಲಿಲ್ಲ. ಅಂದಿನ ಬಿಕ್ಕಟ್ಟನ್ನು ಎದುರಿಸಲು ರೂಸವೆಲ್ಟ್ ತನ್ನ ಅಧಿಕಾರಾವಧಿಯ ಮೊದಲ ನೂರು ದಿನಗಳಲ್ಲಿ ಹೊಸ ಯೋಜನೆಗಳು ಮತ್ತು ಶಾಸನಗಳನ್ನು ಅನುಷ್ಠಾನಗೊಳಿಸುವ ತುಂಬ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯನ್ನು ರೂಪಿಸಿಕೊಂಡನು.

ಇವುಗಳ ಮುಖ್ಯ ಉದ್ದೇಶಗಳಿವು: ಬಡವರು ಮತ್ತು ನಿರುದ್ಯೋಗಿಗಳಿಗೆ ಪರಿಹಾರ, ಅರ್ಥವ್ಯವಸ್ಥೆಯ ಪುನಶ್ಚೇತನ ಮತ್ತು ಹಣಕಾಸು ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವ ಮೂಲಕ ಮತ್ತೆ ಆರ್ಥಿಕ ಕುಸಿತಗಳು ಆಗದಂತೆ ಎಚ್ಚರಿಕೆ. ಇಂಗ್ಲಿಷಿನ ಅರ್ ಅಕ್ಷರದಿಂದ ಪ್ರಾರಂಭವಾಗುವ ಮೂರು ಪದಗಳನ್ನು – ರಿಲೀಪ್, ರಿಕವರಿ ಮತ್ತು ರಿಪಾರ್ಮ್ – ಬಳಸುವ ಮೂಲಕ ರೂಸವೆಲ್ಟ್ ತನ್ನ ಹೊಸ ಕಾರ್ಯವಿಧಾನವನ್ನು ಪರಿಚಯಿಸಿದನು.

1933ರ ಜೂನ್ 11ರಂದು ತನ್ನ ಅಧ್ಯಕ್ಷತೆಯ 100ನೆಯ ದಿನದಂದು ರೂಸವೆಲ್ಟ್ ತನ್ನ ಮೊದಲ ನೂರು ದಿನಗಳ ಬಗ್ಗೆ ಮಾತನಾಡುತ್ತ, ಆ ಪರಿಕಲ್ಪನೆಯನ್ನು ಪರಿಚಯಿಸಿದನು. ಅಂದಿನಿಂದ ಯಾವುದೆ ಹೊಸ ಸರ್ಕಾರಕ್ಕೂ ಮೊದಲ ನೂರು ದಿನಗಳ ಸಾಧನೆಗಳು ಅದನ್ನು ಅಳೆಯುವ ಮಾಪನಗಳಾಗಿ ಹೊರಹೊಮ್ಮಿವೆ.

Leave a Reply

Your email address will not be published.