ಹೊಸ ಸಂಸತ್ ಕಟ್ಟಡ ನಿರ್ಮಾಣದ ಒಳಮರ್ಮವೇನು?

-ಡಾ.ಜೆ.ಎಸ್.ಪಾಟೀಲ

ಆರಂಭದಿಂದಲೂ ಮೋದಿಯವರ ಆದ್ಯತೆಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲಿಗೆ ಆಡಂಬರದ, ಭಾವನಾತ್ಮಕ ಸಂಗತಿಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಸನಾತನ ವ್ಯವಸ್ಥೆಯ ಅನುಯಾಯಿ ಪ್ರಧಾನಿ ಮೋದಿಯವರು ಬಸವಣ್ಣ ಮತ್ತು ಅನುಭವ ಮಂಟಪದ ಹೆಸರನ್ನು ಬಳಸಿದ್ದು ಮತ್ತೊಂದು ಅಸಂಗತ ನಡೆ.

ದೇಶ ಹಿಂದೆಂದೂ ಕಂಡರಿಯದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕೈಗೊಪ್ಪಿಸುವ ಕರಾಳ ಕೃಷಿ ಮಸೂದೆಯ ವಿರುದ್ಧ ಅನ್ನದಾತ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾನೆ. ನಿರುದ್ಯೋಗ ಐತಿಹಾಸಿಕ ಏರಿಕೆ ಕಂಡು ತಾಂಡವ ನೃತ್ಯವಾಡುತ್ತಿದೆ. ದೇಶದ ಜನಸಾಮಾನ್ಯರು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಿಸಿಯಿಂದ ಬೆಂದು ಬಳಲಿದ್ದಾರೆ. ದೇಶ ಭೀಕರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಆದಾಗ್ಯೂ ಪ್ರಧಾನಿ ಮೋದಿ ಸಾವಿರಾರು ಕೋಟಿ ವೆಚ್ಚದಲ್ಲಿ ಹೊಸ ಸಂಸತ್ ಭವನ ಕಟ್ಟಡಕ್ಕೆ ಡಿಸೆಂಬರ್ 10ರಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ದೇಶದ ರಾಜಧಾನಿಯಲ್ಲಿ ಸಂಸದಿಯ ಚಟುವಟಿಕೆಗಳು ನಡೆಸಲು ಯಾವುದೇ ಬಗೆಯ ಸ್ಥಳಾಭಾವ ತಲೆದೋರಿಲ್ಲ. ಆರಂಭದಿಂದಲೂ ಮೋದಿಯವರ ಆದ್ಯತೆಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲಿಗೆ ಆಡಂಬರದ ಸಂಗತಿಗಳ ಸುತ್ತ ಗಿರಕಿ ಹೊಡೆಯುತ್ತಿರುವ ಸಂಗತಿಯನ್ನು ಪ್ರಜ್ಞಾವಂತ ಜನರು ಮತ್ತು ಬೆರಳೆಣಿಕೆಯ ಜವಾಬ್ದಾರಿಯುತ ಮಾಧ್ಯಮಗಳು ಗುರುತಿಸಿವೆ. ಉಳಿದಂತೆ ಎಲ್ಲರೂ ಮೋದಿ ಭಜನೆಯಲ್ಲಿ ನಿರತರಾಗಿದ್ದಾರೆ.

ಇತಿಹಾಸ ತಿದ್ದುವುದು/ತಿರುಚುವುದು ಮತ್ತು ಹೈಜಾಕ್ ಮಾಡುವ ಚಾಳಿ ಸನಾತನ ವಿದೇಶಿ ಆರ್ಯ ಸಂಸ್ಕøತಿಯ ಭಾಗ. ಬಲಪಂಥೀಯ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಮಾಡುವ ಮೊದಲ ಕೆಲಸ ಹಿಂದಿನವರು ಮಾಡಿದ ಸಾಧನೆಗಳನ್ನು ಅಳಿಸಿ ಹಾಕುವುದು. ಸ್ವಾತಂತ್ರ್ಯಾನಂತರ ದೇಶ ಸಾಧಿಸಿದ ಕಾರ್ಯಗಳನ್ನು ಜನಮನದಿಂದ ಅಳಿಸುವ ಭಾಗವಾಗಿಯೇ ಹಿಂದಿನವರು ಕುಳಿತು ಆಡಳಿತ ಮಾಡಿದ ಸಂಸತ್ ಭವನಕ್ಕೆ ಪರ್ಯಾಯವಾಗಿ ಹೊಸ ಕಟ್ಟಡ ಕಟ್ಟುವುದು ಮೋದಿ ಅವರ ಮೊದಲ ಆದ್ಯತೆಯಾಗಿರುವುದು ಆಶ್ಚರ್ಯದ ಸಂಗತಿಯೇನಲ್ಲ.

ನಿಯೋಜಿತ ಹೊಸ ಸಂಸತ್ ಭವನದಲ್ಲಿ 888 ಸದಸ್ಯರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ ಎನ್ನುತ್ತವೆ ಮೂಲಗಳು. ಪ್ರಸ್ತುತ ನಮ್ಮ ಸಂಸತ್ತಿನ ಕೆಳಮನೆಯ ಸದಸ್ಯರ ಸಂಖ್ಯೆ 543 ಮತ್ತು ಮೇಲ್ಮನೆಯ ಸದಸ್ಯರ ಸಂಖ್ಯೆ 245. ಉಭಯ ಸದನಗಳ ಒಟ್ಟು ಸದಸ್ಯರ ಸಂಖ್ಯೆ ಎಂಟುನೂರು ಮೀರುವುದಿಲ್ಲ. ಹಾಗಿದ್ದೂ ನಿಯೋಜಿತ ಸಂಸತ್ ಭವನದಲ್ಲಿ 888 ಸದಸ್ಯರ ಆಸನ ವ್ಯವಸ್ಥೆ ಮಾಡಿರುವುದು ಜನರಲ್ಲಿ ಬಹುದೊಡ್ಡ ಕುತೂಹಲ ಹಾಗು ಪ್ರಶ್ನೆಯನ್ನು ಹುಟ್ಟುಹಾಕಿದೆ.

ವಿಶೇಷ ಸಂದರ್ಭಗಳಲ್ಲಿ ಸಂಸತ್ತಿನ ಜಂಟಿ ಅಧಿವೇಶನ ಮಾಡಲು ಮತ್ತು ವಿದೇಶಿ ಗಣ್ಯರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲು ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ 888 ಸದಸ್ಯ ಬಲದ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎನ್ನುವ ಸಮಜಾಯಿಸಿ ಕೇಳಿಬರುತ್ತಿದೆ. ಆದರೆ ನಿಯೋಜಿತ ಸಂಸತ್ ಭವನದ ಆಸನಗಳ ಸಂಖ್ಯೆ ವಿಸ್ತರಣೆಯ ಹಿಂದೆ ಅಡಿಗಿರುವ ರಾಜಕೀಯದ ವಾಸನೆ ಬೇರೆಯದೆ ಕತೆಯನ್ನು ಹೇಳುತ್ತಿದೆ.

ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಸಂಖ್ಯೆ ಆಧಾರದಲ್ಲಿ ಪ್ರತಿ ಸಂಸದೀಯ ಕ್ಷೇತ್ರಗಳು ಪುನರ್ ರಚನೆಯಾಗಬೇಕು ಎನ್ನುವುದು ಮತ್ತು ಪ್ರತಿ ಸಂಸದೀಯ ಕ್ಷೇತ್ರವು ಹೆಚ್ಚು ಕಡಿಮೆ ಸಮಾನ ಸಂಖ್ಯೆಯ ಮತದಾರರನ್ನು ಹೊಂದಿರಬೇಕು ಎನ್ನುವುದು ಚುನಾವಣಾ ಆಯೋಗದ ನಿಯಮ. ಆದರೆ ಪ್ರಸ್ತುತ ತಮಿಳುನಾಡಿನ ಪ್ರತಿ ಸಂಸದೀಯ ಕ್ಷೇತ್ರದ ಮತದಾರರ ಸಂಖ್ಯೆ 1.8 ಮಿಲಿಯನ್ ಇದ್ದರೆ ಅದೇ ಉತ್ತರ ಪ್ರದೇಶದ ಪ್ರತಿ ಸಂಸದೀಯ ಕ್ಷೇತ್ರದ ಮತದಾರರ ಸಂಖ್ಯೆ 3 ಮಿಲಿಯನ್.

1976ರಲ್ಲಿ ಈ ಅಸಮಾನತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದ್ದ ಕಾರಣ ಅದನ್ನು ಸರಿಪಡಿಸುವ ಬೇಡಿಕೆ ಹೆಚ್ಚಿದಾಗ ಅದನ್ನು 2001ರ ಜನಗಣತಿಯ ಆಧಾರದಲ್ಲಿ ಸರಿಪಡಿಸಲು ನಿರ್ಧರಿಸಿ ಮುಂದೂಡಲಾಗಿತ್ತು. 2002ರಲ್ಲಿ ಮತ್ತೆ ಅದನ್ನು 2011ರ ಜನಗಣತಿಯ ಆಧಾರದಲ್ಲಿ ಮಾಡಬಹುದೆಂದು ಮುಂದೂಡಲಾಗಿತ್ತು. ಈಗ 2021ರ ಜನಗಣತಿ ನಂತರ ಆ ಕೆಲಸವನ್ನು ಮಾಡಲು ಬಿಜೆಪಿ ನೇತೃತ್ವದ ಸರಕಾರ ಯೋಜನೆ ರೂಪಿಸುತ್ತಿದೆ ಎನ್ನುತ್ತವೆ ಮೂಲಗಳು. ಹಾಗೆ ಮಾಡುವ ಮೂಲಕ ಬಿಜೆಪಿ ಪ್ರಾಬಲ್ಯವಿರುವ ಉತ್ತರ ಭಾರತದ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹೊಂಚು ಹಾಕುತ್ತಿದೆ ಎನ್ನುವ ಸುದ್ದಿ ಹರಿಡಾಡುತ್ತಿದೆ.

ಹಾಗೊಂದು ವೇಳೆ ಪ್ರತಿ ಸಂಸತ್ ಕ್ಷೇತ್ರವು ಸರಾಸರಿ ಸಮ ಸಂಖ್ಯೆಯ ಮತದಾರರು ಹೊಂದುವಂತೆ ಪುನರ್ ರಚನೆ ಮಾಡಿದರೆ ಆಗ ಉತ್ತರ ಭಾರತದ ನಾಲ್ಕು ರಾಜ್ಯಗಳ (ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಾಸ್ಥಾನ) ಸಂಸತ್ ಸದಸ್ಯರ ಸಂಖ್ಯೆ ಹೆಚ್ಚುವರಿಯಾಗಿ 22 ಸದಸ್ಯರನ್ನು ಹೊಂದಲಿದೆ. ಅದೇ ಸಮಯದಲ್ಲಿ ಕರ್ನಾಟಕ ಹೊರತು ಪಡಿಸಿ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು (ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು) ಒಟ್ಚು 18 ಸಂಸತ್ ಸದಸ್ಯ ಸ್ಥಾನಗಳನ್ನು ಕಳೆದುಕೊಳ್ಳಲಿವೆ.

ರಾಷ್ಟ್ರೀಯ ಪಕ್ಷಗಳು ಎಲ್ಲ ಕಾಲಕ್ಕೂ ದಕ್ಷಿಣ ಭಾರತವನ್ನು ತುಳಿಯುವ ಕೆಲಸವನ್ನು ನಿರಂತರ ಮಾಡಿಕೊಂಡೇ ಬಂದಿವೆ. ಉತ್ತರಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಜನಸಾಂದ್ರತೆ ಕಡಿಮೆ. ಸಂಪನ್ಮೂಲಗಳು, ಸಾಕ್ಷರತೆ ಅಧಿಕ ಮತ್ತು ತೆರಿಗೆ ಸಂಗ್ರಹವೂ ಗಣನೀಯವಾಗಿ ಅಧಿಕವಾಗಿದೆ. ಹಾಗಿದ್ದೂ ಕೂಡ ಕೇಂದ್ರದಲ್ಲಿ ಗದ್ದುಗೆ ಹಿಡಿಯುವ ಪಕ್ಷಗಳು ದಕ್ಷಿಣದವರ ಹಿತಾಸಕ್ತಿಯನ್ನು ಕಡೆಗಣಿಸುವ ಮೂಲಕ ಪ್ರಾದೇಶಿಕ ಅಸಮಾನತೆಗೆ ಇಂಬುಕೊಡುತ್ತ ಬಂದಿವೆ. ಅದು ಹಿಂದಿ, ಹಿಂದೂ, ಒಂದೇ ದೇಶ, ಒಂದೇ ತೆರಿಗೆ… ಇತ್ಯಾದಿ ಘೋಷಣೆಗಳ ಮೂಲಕ ಬಿಜೆಪಿ ಪಕ್ಷದ ಆಡಳಿತದಿಂದ ದಕ್ಷಿಣ ಭಾರತೀಯರನ್ನು ವಂಚಿಸುವ ಕೆಲಸ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ.

ಅದರ ಮುಂದುವರೆದ ಭಾಗವೇ ಈಗ ದಕ್ಷಿಣದ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸುವುದಾಗಿದೆ. ಬದಲಿಗೆ ಉತ್ತರ ಭಾರತದ ರಾಜ್ಯಗಳ ಸಂಸತ್ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವ ಮೂಲಕ ದಕ್ಷಿಣ ರಾಜ್ಯಗಳ ಮೇಲೆ ಉತ್ತರದವರ ಯಜಮಾನಿಕೆಯನ್ನು ಗಟ್ಟಿಗೊಳಿಸುವ ಕೆಲಸ ಮೋದಿ ನೇತೃತ್ವದ ಸರಕಾರ ಮಾಡುತ್ತಿದೆ ಎನ್ನುವುದು ದಕ್ಷಿಣದ ಜನರ ಅಭಿಪ್ರಾಯವಾಗಿದೆ. ಈಗಿರುವ ಸಂಸತ್ ಸದಸ್ಯರ (ಎರಡೂ ಸದನಗಳು ಸೇರಿ) ಸಂಖ್ಯೆಯನ್ನು 888ಕ್ಕೆ ಹೆಚ್ಚಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಸ್ಪಷ್ಟ ಸೂಚನೆಗಳು ನಿಯೋಜಿತ ಹೊಸ ಸಂಸತ್ ಭವನದ ಆಸನಗಳ ಸಂಖ್ಯೆಯಲ್ಲಿನ ಏರಿಕೆಯ ಮೂಲಕ ಗೋಚರಿಸುತ್ತಿವೆ.

ಇದಕ್ಕಿಂತ ಕುತೂಹಲಕಾರಿ ಸಂಗತಿ ಏನೆಂದರೆ ಈ ಹೊಸ ಸಂಸತ್ ಭವನದ ವಿನ್ಯಾಸ ಮತ್ತು ವಾಸ್ತುಶಿಲ್ಪ. ನಿಯೋಜಿತ ಸಂಸತ್ ಭವನವು ಮಧ್ಯಭಾಗದಲ್ಲಿ ಮೇಲ್ಛಾವಣಿರಹಿತ ಸಾವಿರ ವರ್ಷಗಳಷ್ಟು ಹಳೆಯ ಸನಾತನ ವಾಸ್ತುಶಿಲ್ಪಕ್ಕೆ ಸೇರಿದ ಯೋಗಿಣಿ ಕಳಶ ಮಾದರಿ ಎನ್ನುವುದು. ನಮ್ಮ ದೇಶದ ಸಂವಿಧಾನ ಜಾತ್ಯಾತೀತ ವ್ಯವಸ್ಥೆಯನ್ನು ಹೊಂದಿದೆ. ಜಾತ್ಯತೀತ ದೇಶದ ಶಕ್ತಿ ಕೇಂದ್ರವಾಗಿರುವ ಸಂಸತ್ ಭವನವು ನಿರ್ದಿಷ್ಟ ಸನಾತನ ವೈದಿಕ ಪರಂಪರೆಯ ಯೋಗಿಣಿ ಮಾದರಿ ವಾಸ್ತುಶಿಲ್ಪ ಹೊಂದುವುದರ ಹಿಂದಿನ ಹುನ್ನಾರವು ಪ್ರಶ್ನಾರ್ಹವಷ್ಟೇ ಅಲ್ಲದೆ ಸಂವಿಧಾನ ವಿರೋಧಿಯೂ ಆಗಿದೆ.

ನೂತನ ಸಂಸತ್ ಭವನದ ಶಂಕುಸ್ಥಾಪನೆಯು ಸಂವಿಧಾನ ಪಠಣದ ಮೂಲಕ ನೆರವೇರಿಸುವುದು ಸೂಕ್ತವಾದ ಆಯ್ಕೆಯಾಗಿತ್ತು. ಆದರೆ ಜಾತ್ಯತೀತ ರಾಷ್ಟ್ರದ ಸಂಸತ್ ಭವನವು ಒಂದು ನಿರ್ದಿಷ್ಟ ಸನಾತನ ವೈದಿಕ ಪರಂಪರೆಯ ಹೋಮ ಹವನಗಳ ಮೂಲಕ ನೆರವೇರಿದ್ದು ಕೂಡ ಅಸಂಗತ ಮತ್ತು ಸಂವಿಧಾನವಿರೋಧಿ ಕೃತ್ಯವಾಗಿದೆ. ಶಂಕುಸ್ಥಾಪನೆಯನ್ನು ಎಲ್ಲ ಧರ್ಮಗಳ ಪೂಜಾ ಆಚರಣೆಗಳ ಮೂಲಕ ಮಾಡಲಾಗಿದೆ ಎಂದು ಮೋದಿ ಸಮರ್ಥಕರು ವಾದಿಸುತ್ತಿದ್ದಾರೆ. ಸಮ್ಮ ಸಂವಿಧಾನವೇ ಜಾತ್ಯತೀತವಾಗಿರುವಾಗ ಧರ್ಮನಿರಪೇಕ್ಷ ಮಾದರಿಯಾದ ಸಂವಿಧಾನ ಪಠಣವೇ ಸಾಕಿತ್ತು ಎನ್ನುವುದು ಅನೇಕ ಪ್ರಾಜ್ಞರ ಅಭಿಪ್ರಾಯವಾಗಿದೆ.

ಹೊಸ ಸಂಸತ್ ಭವನದ ಶಂಕು ಸ್ಥಾಪನೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಬಸವಣ್ಣನವರು ಮತ್ತು ಅನುಭವ ಮಂಟಪದ ಪ್ರಸ್ತಾವನೆ ಮಾಡಿದ್ದು ಇನ್ನೂ ಹಾಸ್ಯಾಸ್ಪದ ಮತ್ತು ಕುಚೋದ್ಯದ ಸಂಗತಿಯಾಗಿದೆ. ಕರಾಳ ವೈದಿಕ ವ್ಯವಸ್ಥೆಯನ್ನು ಧಿಕ್ಕರಿಸಿದ ಬಸವಣ್ಣನವರು ವರ್ಗ-ವರ್ಣ-ಲಿಂಗ ತಾರತಮ್ಯ ರಹಿತ ಅನುಭವ ಮಂಟವನ್ನು ಸ್ಥಾಪಿಸಿದ್ದರು. ಅದೇ ಸನಾತನ ವ್ಯವಸ್ಥೆಯ ಅನುಯಾಯಿಯಾಗಿರುವ ಪ್ರಧಾನಿ ಮೋದಿಯವರು ಬಸವಣ್ಣ ಮತ್ತು ಅನುಭವ ಮಂಟಪದ ಹೆಸರನ್ನು ಬಳಸಿದ್ದು ಮತ್ತೊಂದು ಅಸಂಗತ ನಡೆಯಾಗಿದೆ.

ಒಂದು ಕಡೆ ಹಿಂದಿನ ಸರಕಾರ ಆಡಳಿತ ನಡೆಸಿದ ಸಂಸತ್ ಭವನವನ್ನು ಜನಮಾನಸದಿಂದ ಮರೆಮಾಚುವುದು, ಮತ್ತೊಂದು ಕಡೆ ಸನಾತನ ವೈದಿಕ ಪರಂಪರೆಯ ಯೋಗಿಣಿ ವಾಸ್ತುಶಿಲ್ಪ ಮಾದರಿಯ ಸಂಸತ್ ಭವನವನ್ನು ನಿರ್ಮಿಸುವುದು ಅವರ ಉದ್ದೇಶ. ಅದಕ್ಕೆ ಬಸವಣ್ಣನವರ ಅನುಭವ ಮಂಟಪದ ಹೋಲಿಕೆ ಮಾಡುವ ಮೂಲಕ ರಾಜಕೀಯ ಲಾಭನಷ್ಟದ ಲೆಕ್ಕಾಚಾರ ಹಾಕಿವೆ ಮೋದಿ ಸರಕಾರ ಮತ್ತು ಬಿಜೆಪಿ ಪಕ್ಷ. ಉತ್ತರ ಭಾರತದ ಸಂಸತ್ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ಹುನ್ನಾರ ಮಾಡುತ್ತಿರುವುದು ಒಕ್ಕೂಟ ವ್ಯವಸ್ಥೆ, ಸಂವಿಧಾನ, ಜಾತ್ಯತೀತ ತತ್ವಗಳಿಗೆ ಬಗೆಯುತ್ತಿರುವ ದ್ರೋಹವಾಗಿದೆ. ಈ ಲೆಕ್ಕಾಚಾರಗಳ ಅಡಿಯಲ್ಲಿ ದಕ್ಷಿಣ ಭಾರತದ ಸಂಸತ್ ಸದಸ್ಯರ ಸಂಖ್ಯೆ ಕಡಿತಗೊಳಿಸುವ ಮೂಲಕ ದಕ್ಷಿಣದವರ ಮೇಲೆ ಉತ್ತರದವರ ಯಜಮಾನಿಕೆ ಗಟ್ಟಿಗೊಳಿಸುವ ನಡೆ ಪ್ರಾದೇಶಿಕ ಅಸಮಾನತೆಯನ್ನು ಇನ್ನಷ್ಟು ವಿಸ್ತರಿಸುವುದಾಗಿದೆ.

ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಮೂಲಕ ಅಲ್ಪ ಚಿಂತನೆಯಾದ ಹಿಂದುತ್ವ ಹೇರಿಕೆ, ಅಪೂರ್ಣ ಭಾಷೆಯಾದ ಹಿಂದಿ ಹೇರಿಕೆ, ಹಾಗೂ ಜನತಂತ್ರ, ಸಂವಿಧಾನ, ಜಾತ್ಯತೀತತೆ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದಂತಾಗಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸುವ ಮತ್ತು ದೇಶದ ಬಹುತ್ವವನ್ನು ಫ್ಯಾಸಿಸ್ಟ್ ಗಿಡುಗಗಳ ಕೈಯಿಂದ ರಕ್ಷಿಸುವ ಕೆಲಸ ಜನತಂತ್ರವಾದಿ ಸಂವಿಧಾನಪ್ರಿಯ ಜನರಿಂದ ಆಗಬೇಕಿದೆÉ. ಇಲ್ಲದಿದ್ದರೆ ಮಧ್ಯ ಏಷಿಯಾದ ಮುಸ್ಲಿಂ ರಾಷ್ಟ್ರಗಳು ಅಲ್ಲಿನ ಇಸ್ಲಾಂ ಮೂಲಭೂತವಾದಿಗಳ ಕೈಯಲ್ಲಿ ಸಿಲುಕಿ ನಾಶದತ್ತ ಸಾಗುತ್ತಿರುವಂತೆ ಭಾರತವೂ ಕೂಡ ಭವಿಷತ್ತಿನಲ್ಲಿ ಸರ್ವನಾಶದತ್ತ ಜಾರುವ ದಟ್ಟ ಮುನ್ಸೂಚನೆಗಳು ಗೋಚರಿಸುತ್ತಿವೆ.

*ಲೇಖಕರು ವಿಜಯಪುರದ ಫಾರ್ಮಸಿ ಕಾಲೇಜಿನ ಪ್ರಾಚಾರ್ಯರು ಮತ್ತು ಪ್ರಾಧ್ಯಾಪಕರು.

Leave a Reply

Your email address will not be published.