ಹೊಸ ಸಾಧ್ಯತೆಗಳ ಮಹಾಪೂರ

-ಡಾ.ಪ್ರಕಾಶ ಭಟ್

2021ನೇ ಇಸವಿ ಸಾಂಕ್ರಾಮಿಕ ಪಿಡುಗಿನಿಂದ ಮುಕ್ತಿ ಕೊಡಬಲ್ಲುದೆ? ಊಹಿಸುವುದು ಸುಲಭವಲ್ಲ, ಅಸಾಧ್ಯವೂ ಅಲ್ಲ. ಈವರೆಗಿನ ಮಹಾಸಾಂಕ್ರಾಮಿಕಗಳನ್ನು ಪರಾಮರ್ಶಿಸಿದರೆ ಕಾಣುವುದು:

ಶತಮಾನಗಳ ಕಾಲ ಕಾಡಿದ ರೋಗಗಳಿವೆ, ಕೆಲವೇ ವರ್ಷಗಳಲ್ಲಿ ಹತೋಟಿಗೆ ಬಂದವುಗಳಿವೆ, ಭೂಮಿಯ ಮೇಲಿಂದಲೇ ನಿರ್ನಾಮವಾದ ಮೈಲಿಬೇನೆಯಿದೆ. ಹಾಗಾಗಿ ಕೋವಿಡ್ ಎಷ್ಟು ಕಾಲ ನಮ್ಮನ್ನು ಸತಾಯಿಸಬಹುದೆಂಬುದು ಸುಲಭಗ್ರಾಹ್ಯವಲ್ಲ. ಇನ್ನೇನು ವ್ಯಾಕ್ಸಿನ್ ಬರಲಿದೆ.  ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದು ಇನ್ನಷ್ಟೇ ಗೊತ್ತಾಗಬೇಕಾದ್ದು.  ಹಲವು ವಿಭಿನ್ನ ಸಾಧ್ಯತೆಗಳು ನಮ್ಮ ಮುಂದಿವೆ. ಲಸಿಕೆ ಸುರಕ್ಷಿತವೊ ಪರಿಣಾಮಕಾರಿಯೊ ಅಲ್ಲ ಅಂತಾದರೆ ಮತ್ತೆ ಲಸಿಕೆಯ ಹುಡುಕಾಟ ಮುಂದುವರಿಯಬೇಕಾಗುತ್ತದೆ. ಏಡ್ಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಸಿದ್ಧಡಿಸುವಲ್ಲಿಯ ವೈಫಲ್ಯ ಇನ್ನೂ ಜೀವಂತವಾಗಿದೆ. ಹತ್ತಿರ ಹತ್ತಿರ ನಾಲ್ಕು ದಶಕಗಳ ಕಾಲದ ಹುಡುಕಾಟದ ನಂತರವೂ ಲಸಿಕೆ ಲಭ್ಯವಾಗಿಲ್ಲ ಈಗಲೂ ಹಾಗಾದಲ್ಲಿ ಕೋವಿಡ್ ಪದೇಪದೇ ನಮ್ಮನ್ನು ಕಾಡಬಹುದು. ಈ ವೈರಸ್‍ಗಳು ಪದೇಪದೇ ರೂಪÀ ಬದಲಿಸಬಲ್ಲವು. ಹೊಸಹೊಸ ಸೀರೋಟೈಪ್‍ಗಳಾಗಿ ಕಾಣಿಸಿಕೊಳ್ಳಬಲ್ಲವು.  ಕೋವಿಡ್-19 ವೈರಸ್ (SARCOV-2) ಒಂದು ಆರ್.ಎನ್.ಎ. ವೈರಸ್. ಇದು ಡಿ.ಎನ್.ಎ. ವೈರಸ್‍ಗಿಂತ ವೇಗವಾಗಿ ಬದಲಾಗಬಲ್ಲುದು. ಹೊಸ ಸೀರೋಟೈಪ್ ಗಳು ಬಂದಮೇಲೂ ಹಳೆಯ ಸೀರೋಟೈಪ್‍ಗಳು ಸಹ ಜಾಗೃತವಾಗಿರುವುದು ಸಾಧ್ಯ. ಹಾಗಾಗಿ ಒಂದೇ ಸಮಯದಲ್ಲಿ ಹಲವು ಸೀರೋಟೈಪ್‍ಗಳು ಇರುವುದು ಅಪರೂಪವಲ್ಲ. ಲಸಿಕೆ ತಯಾರಿಸುವಾಗ ಇಮ್ಮುನೈಸೇಶನ್ ಕಾರ್ಯದಲ್ಲಿ ಇದು ಸಮಸ್ಯೆಯಾಗುತ್ತದೆ.

ಪರಿಣಾಮಕಾರಿ, ಸುರಕ್ಷಿತ ಲಸಿಕೆ ದೊರಕಿದೆ ಎಂದಾದಲ್ಲಿ ಸಮಸ್ಯೆ ಲಸಿಕೆಯನ್ನು ನೀಡುವ ಕಾರ್ಯಕ್ರಮದ ನಿರ್ವಹಣೆಯ ಕ್ಷೇತ್ರಕ್ಕೆ ವರ್ಗಾಯಿತವಾಗುತ್ತದೆ. ಭಾರತದಂತಲ್ಲಿ, ಸಾಮಾಜಿಕ ತಾರತಮ್ಯ ಗಂಭೀರವಾಗಿರುವಲ್ಲಿ ಹಾಗೂ ಆಡಳಿತಾತ್ಮಕ ಸಮಸ್ಯೆ ಇರುವಲ್ಲಿ ಇದು ದೊಡ್ದ ತೊಡಕಾಗಬಹುದು. ಯಾರಿಗೆ ಯಾವಾಗ ಲಸಿಕೆ ಎಂಬ ಆದ್ಯತೆಯ ಪಟ್ಟಿ ಕಾಗದದಲ್ಲಷ್ಟೇ. ಅಧಿಕಾರಕ್ಕ್ಕೆ ಹತ್ತಿರದಲ್ಲಿರುವವರಿಗೆ, ಹಣವಂತರಿಗೆ ಲಸಿಕೆ ಮೊದಲು ಕೊಡಲ್ಪಡಬಹುದು. ಭ್ರಷ್ಟಚಾರ, ಲಸಿಕೆಯನ್ನು ಕಾಪಿಡುವಲ್ಲಿ ತಂಪು ಸರಪಳಿಯ ವೈಫಲ್ಯ ಇವೆಲ್ಲಾ ಸಂಭವಿಸಬಹುದು. ಸಾರ್ವಜನಿಕ ಕ್ಷೇತ್ರ ಆರೋಪ-ಪ್ರತ್ಯಾರೋಪಗಳ ಗೂಡಾಗಬಹುದು.

ನಮ್ಮ ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಇದು ಯೋಗ್ಯ ಸಮಯ. ಆರೋಗ್ಯ ಸೆಕ್ಟರಿಗೆ ಬೇಕಾದ ಮಾನವ ಸಂಪನ್ಮೂಲ, ಮೂಲಸೌಕರ್ಯಗಳನ್ನು ತಕ್ಷಣ ಹೊಂದಿಸಿಕೊಳ್ಳಬೇಕು. ಇದು ಸಮರೋಪಾದಿಯಲ್ಲಿ ಸಂಘಟಿತವಾಗಬೇಕು. ಕೊರೊನಾಕ್ಕೆ ಸಂಬಂಧಪಟ್ಟ ಸಂಶೋಧನೆ ನಮ್ಮಲ್ಲಿ ಈಗಾಗಲೇ ಪ್ರಾರಂಭವಾಗಿದೆಯೊ ಇಲ್ಲವೊ ಎನ್ನುವುದು ಸ್ಪಷ್ಡವಿಲ್ಲ. ಇಲ್ಲಿಯವರೆಗಿನ ನನ್ನ ಹುಡುಕಾಟದಲ್ಲಿ ಭಾರತದಲ್ಲಾದ ಯಾವ ಸಂಶೋಧನ ಫಲಿತಾಂಶವೂ ನನಗೆ ಕಾಣಲಿಲ್ಲ. ಪ್ರತಿಯೊಂದು ದೇಶದ ಜನತೆ ರೊಗಕ್ಕೆ ಪ್ರತಿಕ್ರಿಯಿಸುವ ರೀತಿ ವಿಭಿನ್ನ.  ರೋಗನಿರೋಧಕತೆ, ಸಾವಿನ ಪ್ರಮಾಣ, ರೋಗ ಪಸರದಂತೆ ತಡೆಗಟ್ಟುವ ನಡತೆ -ಈ ಎಲ್ಲವುಗಳಲ್ಲೂ ದೇಶದೇಶಗಳ ನಡುವೆ ಭಿನ್ನತೆ ಇರುವ ಸಾಧ್ಯತೆ ಇದೆ. ಹಾಗಾಗಿ ನಮ್ಮ ಸಂದರ್ಭ ಕುರಿತ ಸಂಶೋಧನೆ ನಮ್ಮಲ್ಲಿಯೇ ಆಗಬೇಕು. ಫಲಿತಾಂಶಗಳನ್ನು ಉಪಯೋಗಿಸಿ ಮುಂದಿನ ನಡೆ ನಿರ್ಧರಿತವಾಗಬೇಕು.

ಶತಮಾನಕ್ಕೊಮ್ಮೆ ಕಾಣ ಬಹುದಾದ ಮಹಾ ಸಾಂಕ್ರಾಮಿಕ ಸಾಮಾಜಿಕ ಹಾಗೂ ಆರ್ಥಿಕ ಮರು ಹೊಂದಾಣಿಕೆಗೆ ಒಂದು ಅವಕಾಶ. ಸರಿಯಾಗಿ ಬಳಸಿಕೊಂಡಲ್ಲಿ ನಾಟಕೀಯ ಬದಲಾವಣೆಗೆ ಕಾರಣವಾಗಬಹುದು. ಇದನ್ನು ಅರ್ಥಮಾಡಿಕೊಳ್ಳಬಲ್ಲ ಸೂಕ್ಷ್ಮತೆ, ಚುರುಕುತನ ನಮ್ಮ ರಾಜಕಾರಣಿಗಳಲ್ಲಿ ಇದೆಯೇ ಎಂಬುದು ಮುಖ್ಯ ಪ್ರಶ್ನೆ. ಈಗ ಸದ್ಯ ನಡೆಯುತ್ತಿರುವ ರೈತ ಚಳವಳಿಯನ್ನು ಗಮನಿಸಿ ಹೇಳುವುದಾದರೆ ಕಳೆದ ಸುಮಾರು ಎಂಟು-ಹತ್ತು ತಿಂಗಳುಗಳಲ್ಲಿ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಮರುಹೊಂದಾಣಿಕೆ ಅಲ್ಲಲ್ಲಿ ಕಂಡಿದೆ. ಲಾಕ್ ಡೌನ್ ಸಮಯದಲ್ಲಿ ಸ್ಥಳೀಯ ಯುವಕರು ಸ್ಥಳೀಯ ಉತ್ಪನ್ನಗಳನ್ನು ಕೊಂಡು ಶಹರಗಳಲ್ಲಿ ಮಾರಾಟ ಮಾಡಿದ್ದು ಉಳಿದ ಸಮಸ್ಯೆಗಳ ನಡುವೆ ಗಮನಿಸದೆ ಹೋದ ವಿಷಯ.

ಇದನ್ನು ಸಾಧ್ಯವಾಗಿಸಿದರೆÀ ಅಲ್ಲಲ್ಲಿ ಸ್ಥಳೀಯ ಮಾರುಕಟ್ಟೆಯ ಸಂಪರ್ಕಗಳನ್ನು ಹುಡುಕಿಕೊಳ್ಳಬಹುದು. ಅದು ಸ್ಥಳೀಯ ಯುವಕ ಯುವತಿಯರ ಜೀವನೋಪಾಯಕ್ಕೆ ಒದಗಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಅವಕಾಶ ಕಲ್ಪಿಸಬಲ್ಲದು. ಶಹರಗಳಿಂದ ಹಳ್ಳಿಗಳಿಗೆ ತಿರುಗಿ ಬಂದ ಯುವಕ-ಯುವತಿಯರ ದಂಡೇ ಇದೆ. ಅವÀರಲ್ಲಿ ಸಾಕಷ್ಟು ಜನ ಹೊಸ ದಾರಿಯ ಹುಡುಕಾಟದಲ್ಲಿರುವ ಹಾಗೆ ಕಾಣುತ್ತಾರೆ. ಇವÀರಲ್ಲಿ ಹಣ ಹಾಗೂ ಐಡಿಯಾ ಎರಡೂ ಇರುವವರು ಇದ್ದಾರೆ. ಅಂಥವರು ಹಳ್ಳಿಗಳಲ್ಲಿಯ ಮಿಸ್ಸಿಂಗ್ ಲಿಂಕ್‍ಗಳನ್ನು ತುಂಬಲು ಸಮರ್ಥರು. ಹಳ್ಳಿಗಳಿಗೆ ಹೊಸವಿಚಾರಗಳನ್ನು ತರಬಲ್ಲರು. 

ಅವರಲ್ಲಿ ಹಲವರು ಸಾಫ್ಟ್‍ವೇರ್ ಕ್ಷೇತ್ರದಲ್ಲಿದ್ದಾರೆ, ವಿಕೇಂದ್ರೀಕೃತ ಆನ್ ಲೈನ್ ರಿಟೇಲ್ ಮಾರುಕಟ್ಟೆಯ ಸಂಯೋಜನೆ ಅವÀರಿಂದ ಸಾಧ್ಯ. ಇದು ಸ್ಥಳೀಯ ಉತ್ಪನ್ನಗಳನ್ನು ಅವುಗಳ ವೈಶಿಷ್ಟ್ಯಗಳೊಡನೆ ವಿಶಾಲ ಮಾರುಕಟ್ಟೆಗೆ ಪರಿಚಯಿಸಿ ಮಾರಲು ವ್ಯವಸ್ಥೆ ಕಲ್ಪಿಸಬಹುದು. ಡಿಜಿಟಲ್ ಮಾರುಕಟ್ಟೆಯ ಈ ಸಾಧ್ಯತೆಗಳನ್ನು ಟೆಕ್‍ಜಾಯಿಂಟ್‍ಗಳು ತಮ್ಮದಾಗಿಸಿಕೊಳ್ಳುವ ಮೊದಲು ವಿಕೇಂದ್ರೀಕೃತ ಡಿಜಿಟಲ್ ವ್ಯವಸ್ಥೆ ಸಕ್ರಿಯವಾದರೆ ಕೃಷಿ ಮಾರುಕಟ್ಟೆಗೆ ಹೊಸ, ಜೀವಂತ ಆಯಾಮವೊಂದು ದಕ್ಕುತ್ತದೆ. 

ಬರುವ ವರ್ಷಗಳಲ್ಲಿ ವಸ್ತುಗಳು ದೇಶದ ಗಡಿಗಳನ್ನು ದಾಟಿ ಹರಿದಾಡುತ್ತವೆಯಾದರೂ ಇನ್ನೂ ಕೆಲವು ವರ್ಷ ವ್ಯಕ್ತಿಗಳ ಓಡಾಟ ಕಡಿಮೆ ಇರುತ್ತದೆ. ಕೆಲಸಕ್ಕಾಗಿ ವಿದೇಶಕ್ಕೆ ಹೋಗುವವರೂ ಕಡಿಮೆಯಾಗುತ್ತಾರೆ. ಈ ಎಲ್ಲರನ್ನೂ ಸ್ಥಳೀಯವಾದ ಅವಕಾಶಗಳನ್ನು ಉಪಯೋಗಿಸುವಲ್ಲಿ ದುಡಿಸಬಹುದು. ಸದ್ಯದ ಸ್ಥಿತಿಯಲ್ಲಿ ಜೀವನದ ನಶ್ವರತೆಯ ಕಲ್ಪನೆ ಮನುಷ್ಯನಲ್ಲಿ ಜಾಗೃತವಾಗಿದೆ. ಇದು ಮನುಷ್ಯನನ್ನು ಎರಡು ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ -ಅಂದರೆ ಒಳಿತಿನೆಡೆ ಅಥವಾ ಕೆಡುಕಿನೆಡೆ- ನಡೆಸಬಲ್ಲ ಸಾಧ್ಯತೆಯನ್ನು ಹೊಂದಿದೆ. ಮನುಷ್ಯ ಸರಳವಾದ, ಸಾಮಾಜಿಕವಾಗಿ ಉಪಯುಕ್ತವಾದ ಬದುಕಿನೆಡೆಗೆ ಹೋಗುವಂತಾಗಬಹುದು.

ಈಗಿರುವ ಸ್ಪರ್ಧಾತ್ಮಕತೆಯಿಂದ ತಪ್ಪಿಸಿಕೊಂಡು ಪರಸ್ಪರಾವಲಂಬನೆಯ  ದಾರಿ ಹಿಡಿಯಲು ನಮ್ಮನ್ನು ಈ ಸ್ಥಿತಿ ಪ್ರೇರೇಪಿಸಬಹುದು. ಹಾಗಾಗುವುದು ಅಪೇಕ್ಷಣೀಯವಾದ್ದರಿಂದ ಈ ರೀತಿಯ ಚಿಂತನೆ ನಡವಳಿಕೆ ಸಮಾಜದಲ್ಲಿ ಬರುವಂತೆ ಶ್ರಮಿಸಬೇಕು. ಇದಕ್ಕೆ ವಿರುದ್ಧವಾಗಿ ಜನ ಅನಿಶ್ಚಿತ ದಿನಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ಸುಖಪಡೋಣ, ಹಣಗಳಿಸೋಣ ಎಂಬ ಹೆಡೊನಿಸಮ್‍ಗೆ ಬಲಿಯಾದರೆ ಅದು ನಮ್ಮನ್ನು ಬಾಣಲೆಯಿಂದ ಬೆಂಕಿಗೆ ಹಾಕಿ ತತ್ವರಹಿತ ಸಂಘರ್ಷಗಳಿಗೆ ದಾರಿ ಮಾಡಿ ಸಮಾಜದ ಸ್ವಾಸ್ಥ್ಯ, ನೆಮ್ಮದಿಗೆ ಎರವಾದೀತು!

ಪ್ರತಿ ಗಂಡಾಂತರವೂ ಸಾಮಾನ್ಯವಾಗಿ ಬಡವ-ಬಲ್ಲಿದರ ನಡುವಿನ ಕಂದಕ ಹೆಚ್ಚಿಸುವುದು ನಮ್ಮ ಗಮನದಲ್ಲಿರಬೇಕು. 2021ರÀ ಕೊನೆಯೊಳಗೆ ಕನಿಷ್ಠ 15 ಕೋಟಿ ಜನ ಕಡುದಾರಿದ್ರ್ಯಕ್ಕೀಡಾಗಬಹುದು. ಇದರಲ್ಲಿ ಭಾರತೀಯರ ಪಾಲು ದೊಡ್ಡದಾಗಿರುತ್ತದೆ. ಹೊಸ ವರ್ಷ ಸಮಸ್ಯೆಗಳನ್ನು ಸಾಧ್ಯತೆಗಳಾಗಿ ಪರಿವರ್ತಿಸಲು ಬೇಕಾದ ಸಾಮುದಾಯಿಕ ಬದ್ಧತೆ ತೋರಿದಲ್ಲಿ ಅದು ನಮ್ಮನ್ನು ಹೊಸ ಎತ್ತರಕ್ಕೊಯ್ಯಬಹುದು.

Leave a Reply

Your email address will not be published.