ಹ್ಯೂಯೆನ್ ತ್ಸಾಂಗನ ಮಹಾಪಯಣ

-ಕೆ.ಪುಟ್ಟಸ್ವಾಮಿ

ಹುಯೆನ್ ತ್ಸಾಂಗ್‍ನ ಜೀವನವನ್ನು ಅರಿಯಲು ಆತನ ಬಗ್ಗೆ ಲಭ್ಯವಿರುವ ಸಂಶೋಧನೆಗಳು, ಪುಸ್ತಕಗಳನ್ನು ಬೆನ್ನುಹತ್ತುವ ಲೇಖಕರು ಕಡು ವ್ಯಾಮೋಹದಿಂದ ಅಧ್ಯಯನ ನಡೆಸಿದ ಫಲವೇ ಈ ಕೃತಿ. ತ್ಸಾಂಗನ ಬದುಕು, ಯಾತ್ರೆ ಮತ್ತು ಸಾಧನೆಗಳನ್ನು ದಾಖಲಿಸಿ ಆ ಮೂಲಕ ಭಾರತದ ಚರಿತ್ರೆ ಮತ್ತು ಚೀನಾ-ಭಾರತದ ನಡುವಿನ ಸಂಸ್ಕೃತಿಕ ಸಂಬಂಧಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ತನ್ನ ನೆಲೆಯಿಂದ ಆಚೆಗಿನ ಹುಡುಕಾಟ, ಸಾಹಸ ಸ್ವಭಾವ ನಾಗರಿಕ ಮನುಷ್ಯನಿಗೆ ಆರಂಭದಿಂದಲೂ ಸಹಜ ಹವ್ಯಾಸವಾಗಿತ್ತೆಂದು ಕಾಣುತ್ತದೆ, ತನ್ನ ಊರಿಂದ ಆಚೆಗೆ, ತನ್ನ ನದಿಯ ಆಚೆಗೆ, ತನ್ನ ಪ್ರದೇಶದ ಸುತ್ತ ಗೋಡೆಗಳಂತೆ ಎದ್ದ ಬೆಟ್ಟ ಗುಡ್ಡಗಳ ಸಾಲಿನಿಂದ ಹೊರಗೆ, ದಡಕಾಣದ ಶರಧಿಯಿಂದಾಚೆಗೆ ಏನಿರಬಹುದೆಂಬ ಕುತೂಹಲ ಮತ್ತು ಅದಕ್ಕಾಗಿ ಕೈಗೊಳ್ಳುವ ಸಾಹಸಯಾತ್ರೆಗಳಿಂದ ಜಗತ್ತಿನ ತಿಳಿವಳಿಕೆ ಹೆಚ್ಚಿದೆ. ಇದೇ ಕುತೂಹಲ ಅವನನ್ನು ಈ ಗ್ರಹದಿಂದ ಆಚೆಗೆ ಇರುವ ಸಂಗತಿಗಳನ್ನು ಅರಿಯಲು ಪ್ರೇರೇಪಿಸಿದೆ. ಅಂಥ ಪ್ರೇರೇಪಣೆಯೇ ಕೊನೆಗೆ ವ್ಯಾಪಾರದ ಮಾರ್ಗಗಳನ್ನು ಕಂಡುಹಿಡಿಯಲು, ಅನ್ಯ ದೇಶಗಳ ಸಂಪತ್ತನ್ನು ಕೊಳ್ಳೆ ಹೊಡೆಯಲು, ಸಾಮ್ರಾಜ್ಯವನ್ನು ವಿಸ್ತ ರಿಸಲು, ಧರ್ಮವನ್ನು ಪ್ರಸಾರ ಮಾಡಲು, ಗುಲಾಮ ಪದ್ಧತಿಯನ್ನು ವಾಣಿಜ್ಯೋದ್ಯಮವಾಗಿಸಲು ಸಹಕಾರಿಯಾದದ್ದು ಸಹ ಸತ್ಯ. ಜಗತ್ತು ತಾನಿದ್ದ ರೀತಿಯಿಂದ ಪಲ್ಲಟವಾಗಲು, ಹೊಸ ಸ್ವರೂಪ ಪಡೆಯಲು ಈ ಹುಡುಕಾಟದ ಸಾಹಸಗಳು ವಹಿಸಿರುವ ಪಾತ್ರ ನಿರ್ಣಾಯಕವಾದದ್ದು; ಚಾರಿತ್ರಿಕ ಮಹತ್ವ ಪಡೆದಂಥಾದ್ದು.

ಆದರೆ ಈ ಅನ್ವೇಷಣೆ ಕುತೂಹಲವನ್ನು ತಣಿಸುವ ಉದ್ದೇಶವನ್ನು ಮೀರಿ ಸಾಮಾಜಿಕ ವ್ಯವಸ್ಥೆಯನ್ನು ಪಲ್ಲಟಗೊಳಿಸುವ ಪೂರ್ವದಲ್ಲಿ ಚೀನೀ ಯಾತ್ರಿಕರು ಭಾರತಕ್ಕೆ ನೀಡಿದ ಭೇಟಿ ಸಾಂಸ್ಕøತಿಕ ಆಯಾಮವನ್ನು ಪಡೆದುಕೊಂಡದ್ದು ಹುಡುಕಾಟದ ಚರಿತ್ರೆಯಲ್ಲಿ ವಿಶಿಷ್ಟ ಅಧ್ಯಾಯ. ಅಶೋಕನಿಂದ ಬೌದ್ಧ ಧರ್ಮ ಚೀನಾ ದೇಶಕ್ಕೆ ಪರಿಚಯವಾಗಿ ಹಬ್ಬಿದ ನಂತರ ಚೀನೀ ಯಾತ್ರಿಕರು ಭಾರತಕ್ಕೆ ಬರಲಾರಂಭಿಸಿದರು. ಈ ಯಾತ್ರೆಯ ಮುಖ್ಯ ಉದ್ದೇಶ- ಬುದ್ಧನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ
ನೀಡುವುದು, ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ, ಬೌದ್ಧಮತಕ್ಕೆ ಸಂಬಂಧಿಸಿದ ಹಸ್ತಪ್ರತಿಗಳು, ಬುದ್ಧನ ಪ್ರತಿಮೆಗಳು ಅವನ ಜೀವನಕ್ಕೆ ಸಂಬಂಧಿಸಿದ ಅವಶೇಷಗಳು ಮತ್ತು ಗ್ರಂಥಗಳನ್ನು ಸಂಗ್ರಹಿಸಿ ತಮ್ಮ ದೇಶಗಳಿಗೆ ಒಯ್ಯುವುದು. ಹೀಗೆ ಬಂದ ಚೀನಾದ ಯಾತ್ರಿಕರಲ್ಲಿ ಫಾಹಿಯಾನ್ (ಐದನೆಯ ಶತಮಾನ), ಹ್ಯೂಯನ್ ತ್ಸಾಂಗ್ (ಏಳನೆಯ ಶತಮಾನ) ಮತ್ತು ಇ-ತ್ಸಿಂಗ್ (ಏಳು-ಎಂಟನೆಯ ಶತಮಾನ) ಬಹು ಮುಖ್ಯರಾದವರು.

ನಮ್ಮ ಚರಿತ್ರೆಯ ಪುಸ್ತಕಗಳಲ್ಲಿ ಉಲ್ಲೇಖಗಳಾಗಿ ಬರುವ ಈ ಪ್ರವಾಸಿಗರ ಕಥನಗಳು, ಭಾರತದ ಚರಿತ್ರೆಯನ್ನು ಹೇಳುವ ಆಕರಗಳಾಗಿ ಮಹತ್ವ ಪಡೆದಿವೆ. ಜೊತೆಗೆ ಈ ಪ್ರವಾಸಿಗರ ಯಾತ್ರೆಗಳಿಗೆ ಮಧ್ಯಪ್ರಾಚ್ಯದಿಂದ ಬಂದ ಆಕ್ರಮಣಕಾರರಂತೆ ಭಾರತದ ಸಂಪತ್ತನ್ನು ದೋಚುವ ಉದ್ದೇಶವಿರಲಿಲ್ಲ. ಅಥವಾ ಯೂರೋಪ್‍ನ ಅನ್ವೇಷಕರಂತೆ ವ್ಯಾಪಾರದ ಮಾರ್ಗವನ್ನು ಹುಡುಕುವ, ಇಲ್ಲವೇ ಮತ ಪ್ರಸಾರವನ್ನು ಮಾಡುವ ಅಥವಾ ವಸಾಹತು ನಿರ್ಮಿಸುವ, ಸಾಮ್ರಾಜ್ಯ ವಿಸ್ತರಿಸುವ ಇರಾದೆಗಳ ಯಾತ್ರೆಗಳಲ್ಲ. ಚೀನೀ ಯಾತ್ರಿಕರ ಸಂಕಲ್ಪವಿದ್ದದ್ದು, ಬೌದ್ಧ ಧರ್ಮ ಜನಿಸಿದ ಭಾರತ ದೇಶದಲ್ಲಿನ ತಿಳಿವು ಮತ್ತು ಸಂಸ್ಕೃತಿಯನ್ನು ಅರಿಯುವ ಸಾಹಸೀ ಪ್ರಯತ್ನಗಳಲ್ಲಿ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುವ, ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕೃತಿಗಳು, ಹಸ್ತಪ್ರತಿಗಳು, ಬುದ್ಧನ ಜೀವನಕ್ಕೆ ಸಂಬಂಧಿಸಿದ ಅವಶೇಷಗಳು ಮತ್ತು ಪ್ರತಿಮೆಗಳನ್ನು ಸಂಗ್ರಹಿಸಿ ತಮ್ಮ ದೇಶಗಳಿಗೆ ಒಯ್ಯುವ ಆಧ್ಯಾತ್ಮಿಕ ಹಂಬಲದ ಯಾತ್ರೆಗಳಾಗಿದ್ದವು. ಹಾಗೆ ಕೊಂಡೊಯ್ದ ಹಸ್ತಪ್ರತಿ ಮತ್ತು ಗ್ರಂಥಗಳನ್ನು ಚೀನೀ ಭಾಷೆಗೆ ಅನುವಾದಿಸಿ ಭಾರತ ಮೂಲದ ಬೌದ್ಧ ಸಂಸ್ಕೃತಿಯನ್ನು ಚೀನೀಯರಿಗೆ ಪರಿಚಯಿಸುವ ಮತ್ತು ಪ್ರವಾಸ ಕಥನಗಳ ಮೂಲಕ ಭಾರತದ ಅಂದಿನ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಗಳನ್ನು ದಾಖಲಿಸುವ ಮಹತ್ವದ ಪ್ರಯತ್ನಗಳಾಗಿದ್ದವು. ಇದೊಂದು ಕಟ್ಟುವ ಕಾರ್ಯವಾಗಿತ್ತೇ ಹೊರತು ಕೆಡುಹುವ ಕಾರ್ಯವಾಗಿರಲಿಲ್ಲ.

ಆದರೆ ಅನೇಕ ಚಾರಿತ್ರಿಕ ಕಾರಣಗಳಿಂದಾಗಿ ಇಂಥ ಸಂಸ್ಕೃತಿಕ ರಾಯಭಾರಿಗಳ ಬಗ್ಗೆ ಭಾರತೀಯರಿಗೆ ತಿಳಿದಿರುವುದು ಕಡಿಮೆ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಅಮೆರಿಕದಲ್ಲಿ ನೆಲೆಸಿರುವ ಲೇಖಕ ರವಿ ಹಂಜ್ ಅವರು ರಚಿಸಿರುವ ‘ಹುಯೆನ್ ತ್ಸಾಂಗನ ಮಹಾಪಯಣ’ ವಿಶಿಷ್ಟ ಪ್ರಯತ್ನವಾಗಿದೆ.

ಅಮೆರಿಕಾದಲ್ಲಿ ತಮ್ಮ ಚೀನೀ ಸಹುದ್ಯೋಗಿಗಳೊಡನೆ ಹರಟುವಾಗ ಕ್ವಚಿತ್ತಾಗಿ ನೆನಪಾದ ಹುಯೆನ್ ತ್ಸಾಂಗ್‍ನ ಹೆಸರು ಮುಂದೆ ಈ ಕೃತಿ ರಚನೆಯ ಪ್ರೇರಣೆಯಾಗಿದೆ. ಹುಯೆನ್ ತ್ಸಾಂಗ್‍ನ ಜೀವನವನ್ನು ಅರಿಯಲು ಆತನ ಬಗ್ಗೆ ಲಭ್ಯವಿರುವ ಸಂಶೋಧನೆಗಳು, ಪುಸ್ತಕಗಳನ್ನು ಬೆನ್ನುಹತ್ತುವ ಲೇಖಕರು ಕಡು ವ್ಯಾಮೋಹದಿಂದ ಅಧ್ಯಯನ ನಡೆಸಿದ ಫಲವೇ ಈ ಕೃತಿ. ತ್ಸಾಂಗನ ಬದುಕು, ಯಾತ್ರೆ ಮತ್ತು ಸಾಧನೆಗಳನ್ನು ದಾಖಲಿಸಿ ಆ ಮೂಲಕ ಭಾರತದ ಚರಿತ್ರೆ ಮತ್ತು ಚೀನಾ-ಭಾರತದ ನಡುವಿನ ಸಂಸ್ಕೃತಿಕ ಸಂಬಂಧಗಳನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ಮುನ್ನುಡಿಯಲ್ಲಿ ವಿದ್ವಾಂಸರಾದ ಡಾ.ರಹಮತ್ ತರೀಕೆರೆ ಅವರು ವಿವರಿಸಿರುವಂತೆ ಇದೊಂದು ಆಳವಾದ ಅಧ್ಯಯನ ಮತ್ತು ವ್ಯಾಮೋಹದಿಂದ ರಚಿತನಾಗಿರುವ ಕೃತಿ. ಅಲ್ಲದೆ ಜೀವನ ಚರಿತ್ರೆ, ಸಾಹಸಯಾತ್ರೆ, ಪ್ರವಾಸ ಕಥನ, ಇತಿಹಾಸ ಮತ್ತು ಸಾಂಸ್ಕೃತಿಕ ಪಠ್ಯಹೀಗೆ ಎಲ್ಲವೂ ಆಗಿರುವ ಮತ್ತು ಯಾವುದೇ ವರ್ಗೀಕರಣವನ್ನು
ನಿರಾಕರಿಸುವ ಕೃತಿ.

ವಿದೇಶಯಾತ್ರೆಗೆ ಚಕ್ರವರ್ತಿಯು ನಿಷೇಧ ಹೇರಿದ್ದ ಕಾಲದಲ್ಲಿ ಆಧ್ಯಾತ್ಮಿಕ ಹಸಿವಿನಿಂದ ಬಳಲುತ್ತಿದ್ದ ತ್ಸಾಂಗ್ ರಾಜಾದೇಶವನ್ನು ಉಲ್ಲಂಘಿಸಿ ಮಧ್ಯರಾತ್ರಿಯಲ್ಲಿ ಕಳ್ಳನಂತೆ ಯಾತ್ರೆ ಕೈಗೊಳ್ಳುವ ಸಾಹಸ ಅನೇಕ ರೋಚಕ ಅನುಭವಗಳಿಗೆ ಎದುರಾಗುತ್ತದೆ. ಯಾತ್ರೆಯುದ್ಧಕ್ಕೂ ಸಂಧಿಸುವ ಅನೇಕ ಸಮುದಾಯಗಳ, ಸಾಮಂತರ, ಆಚಾರ ವಿಚಾರಗಳು, ವಿಶಿಷ್ಟ ವರ್ತನೆಗಳನ್ನು ತ್ಸಾಂಗ್ ಕಾಣುತ್ತಾನೆ. ಬೇರೆಬೇರೆ ಸಮುದಾಯಗಳ ಕೃಷಿ, ವಾಣಿಜ್ಯ ಚಟುವಟಿಕೆ, ಮದುವೆ, ಮರಣ, ವಿಕೃತಿಗಳನ್ನು ನೋಡುತ್ತಾ, ದುರ್ಗಮವಾದ ನೈಸರ್ಗಿಕ ಪರಿಸ್ಥಿತಿಗಳು, ದರೋಡೆಕೋರರ ಆಕ್ರಮಣಗಳನ್ನು ಎದುರಿಸಿ, ಖೈಬರ್ ಕಣಿವೆಯನ್ನು ಇಳಿದು, ಸಿಂಧೂ ನದಿಯನ್ನು ದಾಟಿ ಭಾರತವನ್ನು ಪ್ರವೇಶಿಸುವ ತ್ಸಾಂಗ್‍ನ ಯಾತ್ರೆ ಒಂದು ರೋಮಾಂಚಕ ಅನುಭವ ನೀಡುತ್ತದೆ. ಭಾರತದ ಉದ್ದಗಲಕ್ಕೂ ಸಂಚರಿಸುವ ತ್ಸಾಂಗ್ ತನ್ನ ಯಾತ್ರೆಯನ್ನು ನೇಪಾಳ, ಸಿಂಹಳದವರೆಗೂ ವಿಸ್ತರಿಸುತ್ತಾನೆ. ಬೌದ್ಧಮತವನ್ನು ಮೂಲದಲ್ಲಿಯೇ ಅರಿಯಲು ವಿಸ್ತಾರವಾದ ತಿರುಗಾಟದ ಜೊತೆಗೆ ಐದು ವರ್ಷ ನಲಂದಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ನ್ಯಾಯಶಾಸ್ತ್ರ, ತರ್ಕಶಾಸ್ತ್ರ, ವ್ಯಾಕರಣ ಸೂತ್ರ ಮುಂತಾದವುಗಳಲ್ಲಿ ಪಾಂಡಿತ್ಯ ಪಡೆಯುತ್ತಾನೆ. ಅಸ್ಸಾಮಿನ ರಾಜ, ಉತ್ತರ ಪಥೇಶ್ವರ ಹರ್ಷವರ್ಧನ ಮತ್ತು ದಕ್ಷಿಣ ಪಥೇಶ್ವರ ಪುಲಿಕೇಶಿಯನ್ನು ಭೇಟಿ ಮಾಡಿ, ಸನ್ಮಾನಿತನಾಗುವ ತ್ಸಾಂಗ್, ಆಗ ಬೌದ್ಧಮತ-ಹಿಂದೂ ಮತವು ಜೊತೆಯಾಗಿ ಆಚರಣೆಯಲ್ಲಿರುವ ಮತ್ತು ಎರಡೂ ಮತಗಳು ಹಾದುಹೋಗುತ್ತಿರುವ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗುತ್ತಾನೆ. ಕನ್ಯಾಕುಬ್ಜದಲ್ಲಿ ನಡೆಯುವ ಧರ್ಮಚರ್ಚೆಯ ಮಹಾನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ವಿಜಯಿಯಾಗಿ, ಹರ್ಷವರ್ಧನ ಏರ್ಪಡಿಸಿದ ಮೋಕ್ಷ ಪರಿಷತ್ತಿನಲ್ಲಿ ಪಾಲ್ಗೊಂಡು, ಆಧ್ಯಾತ್ಮಿಕ ಹಸಿವನ್ನು ತಣಿಸಿಕೊಂಡ ತ್ಸಾಂಗ್ ಅಪಾರ ಜ್ಞಾನ ನಿಧಿಯನ್ನು ಹರ್ಷನ ನೆರವಿನಿಂದ ತನ್ನ ದೇಶಕ್ಕೆ ಸಾಗಿಸುತ್ತಾನೆ.

ಹೀಗೆ ಕಳ್ಳನಂತೆ ಊರು ತೊರೆದು ಹದಿನಾರು ವರ್ಷಗಳ ಕಾಲ ಪರ್ಯಟನೆಯನ್ನು ಮಾಡಿ ಮರಳಿದ ತ್ಸಾಂಗ್ ಈಗ ರಾಷ್ಟ್ರೀಯ ಕಣ್ಮಣಿ. ದೇಶಕ್ಕೆ ಮರಳಿದ ನಂತರ ಇಪ್ಪತ್ತೊಂದು ವರ್ಷ ಕಾಲ ಶಾಸ್ತ್ರ, ಸೂತ್ರಗಳಿಗೆ ಸಂಬಂಧಿಸಿದ 74 ಸಂಸ್ಕೃತ ಗ್ರಂಥಗಳನ್ನು ಚೀನೀ ಭಾಷೆಗೆ ಅನುವಾದಿಸುತ್ತಾನೆ. ಮಹಾಯಾನ ಪಂಥದ ಮಹತ್ವದ ಕೃತಿ ಪರಿಪೂರ್ಣ ಜ್ಞಾನ ಸೂತ್ರದ ಅನುವಾದವನ್ನೂ ಪೂರ್ಣಗೊಳಿಸುತ್ತಾನೆ. ಭಾರತದ ಸಂಸ್ಕೃತಿ, ಇತಿಹಾಸ ಮತ್ತು ಜನಜೀವನದ ಮೇಲೆ ಬೆಳಕು ಚೆಲ್ಲುವ ಪ್ರವಾಸ ಕಥನವನ್ನೂ ರಚಿಸುತ್ತಾನೆ. ಆತನ ಯಾತ್ರೆಯ ನಂತರವೇ ಬೌದ್ಧ ಧರ್ಮ ಚೀನಾದಲ್ಲಿ ಅರ್ಥಪೂರ್ಣವಾಗಿ ಬೆಳೆಯಿತು. ತ್ಸಾಂಗ್‍ನ ಪ್ರಯತ್ನದ ಫಲವಾಗಿ ಭಾರತ-ಚೀನಾ ನಡುವಿನ ಮೈತ್ರಿ ವೃದ್ಧಿಸಿತು.

ಹೀಗೆ ಭಾರತ-ಚೀನಾ ನಡುವಿನ ಮಹತ್ವದ ರಾಯಭಾರಿಯೊಬ್ಬನ ಬದುಕು-ಸಾಧನೆಯನ್ನು ಸಂಶೋಧನೆಗಳನ್ನು ಆಧರಿಸಿ ಕಥನವಾಗಿಸಿರುವ ರವಿ ಹಂಜ್ ಅವರ ನಿರೂಪಣೆಯ ಕ್ರಮವು ಒಂದು ಸಾಹಸ ಯಾತ್ರೆಯ ಎಲ್ಲ ಏರಿಳಿತಗಳನ್ನು ಮೈಗೂಡಿಸಿಕೊಂಡ ಕೃತಿಯಾಗಿದೆ. ಒಂದು ದೇಶದ ಒಂದು ಕಾಲಘಟ್ಟದ ಚರಿತ್ರೆಯಾಗಿ ದಾಖಲಾಗಿದೆ. ಡಾ.ರಹಮತ್ ತರೀಕೆರೆ ಅವರು ಮುನ್ನುಡಿಯಲ್ಲಿ ಅಭಿಪ್ರಾಯಪಟ್ಟಂತೆ ‘ಇಲ್ಲಿ ಸಂಶೋಧನೆಯಿದೆ. ಅದಮ್ಯ ಕುತೂಹಲವಿದೆ. ನಿರ್ಭಿಡೆಯ ಅಭಿಪ್ರಾಯಗಳಿವೆ. ಕನ್ನಡಿಗರಿಗೆ ಹೊಸ ಲೋಕಜ್ಞಾನ ಹಾಯಿಸುವ ಶ್ರದ್ಧೆಯಿದೆ’. ಇಂಥ ವಿಶಿಷ್ಟ ಕ್ರಮದ ಕೃತಿ ರಚನೆಗಾಗಿ ರವಿ ಹಂಜ್ ಮೆಚ್ಚುಗೆಗೆ ಪಾತ್ರರಾಗುತ್ತಾರೆ.

ಹುಯೆನ್ ತ್ಸಾಂಗನ
ಮಹಾಪಯಣ
-ರವಿ ಹಂಜ್
ಪುಟ: 160, ಬೆಲೆ: ರೂ.120

ಸಮಾಜಮುಖಿ ಪ್ರಕಾಶನ: ನಂ.೧೧೧, 4ನೇ ಮಹಡಿ, ಕೃಷ್ಣಪ್ಪ ಕಂಪೌಂಡ್,
ಲಾಲ್‍ಬಾಗ್ ರಸ್ತೆ, ಬೆಂಗಳೂರು 560027.

Leave a Reply

Your email address will not be published.