1904ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಕಂಡ ಕಪ್ಪು ಪ್ಲೇಗ್

ಅದು ಭಯಂಕರ ರಾತ್ರಿಯಾಗಿತ್ತು. ಗಾಂಧೀಜಿಗೆ ರೋಗಿಗಳ ಸೇವೆ ಹೊಸದಾಗಿರಲಿಲ್ಲ. ಆದರೆ ಕಪ್ಪು ಪ್ಲೇಗ್ ತಗಲಿದವರ ಶುಶ್ರೂಷೆ ಇದೇ ಮೊದಲಿನದಾಗಿತ್ತು…

ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ವಸಾಹತುಶಾಹಿಗಳ ಕೃಷಿಭೂಮಿಯಲ್ಲಿ ಕೆಲಸ ಮಾಡಲು ಭಾರತದಿಂದ ಬಡ ಕೃಷಿಕಾರ್ಮಿಕರನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಇವರು ನಿರ್ದಿಷ್ಟ ಅವಧಿಯವರೆಗೆ ಬಿಳಿಯ ಯಜಮಾನರ ಕೈಕೆಳಗೆ ಕರಾರು ಕೂಲಿಗಳಾಗಿರುತ್ತಿದ್ದರು. ಆದ್ದರಿಂದ ಇವರನ್ನು ಗಿರಿಮಿಟಿಯಗಳೆಂದು ಕರೆಯಲಾಗುತ್ತಿತ್ತು. ಬಿಹಾರಿಗಳು, ತೆಲುಗರು, ತಮಿಳರು, ಗುಜರಾತಿಗಳು ಈ ವಲಸೆ ಕಾರ್ಮಿಕರ ಗುಂಪಿನಲ್ಲಿದ್ದರು.

ಇವರು ವಾಸಮಾಡುವ ಸ್ಥಳಗಳನ್ನು ಕೂಲಿಲೊಕೇಷನ್’, ‘ಕೂಲಿಕೇರಿ’, ‘ಘೆಟ್ಟೊಎಂದು ಕರೆಯಲಾಗುತ್ತಿತ್ತು. ಜೋಹಾನ್ಸ್ಬರ್ಗ್ನಲ್ಲಿ ಒಂದು ಕೂಲಿಲೊಕೇಷನ್ ಇತ್ತು. ಕರಾರು ಕೂಲಿಗಳಿಗೆ ಖಾಯಂ ಒಕ್ಕಲುತನದ ಹಕ್ಕು ಇರಲಿಲ್ಲ. ಹಾಗಾಗಿ ಲೊಕೇಷನ್ನಿನ ಜಾಗವನ್ನು 99 ವರ್ಷಗಳಿಗೆ ಗೇಣಿ ತೆಗೆದುಕೊಂಡಿದ್ದರು. ಪುರಸಭೆಯವರ ಅಕ್ಷಮ್ಯ ಉದಾಸೀನ ಮತ್ತು ಅಲ್ಲಿ ವಾಸಮಾಡುತ್ತಿದ್ದ ಭಾರತೀಯರ ಅಜ್ಞಾನದಿಂದಾಗಿ ಕೇರಿ ರೋಗಕ್ಕೆ ಆಹ್ವಾನ ನೀಡುವಂತಿತ್ತು. ಪುರಸಭೆಯವರು ಈ ಕೇರಿಯನ್ನೇ ನಾಶಪಡಿಸಲು ನಿಶ್ಚಯಿಸಿ ಅಲ್ಲಿ ವಾಸವಿದ್ದ ಭಾರತೀಯ ಕೂಲಿಕಾರರನ್ನು ಓಡಿಸಲು ಶಾಸನ ಸಭೆಯಿಂದ ಅನುಮತಿ ಪಡೆದಿದ್ದರು.

ಕೂಲಿಕಾರರಿಗೆ ಆ ಜಾಗದ 99 ವರ್ಷದ ಗೇಣಿ ಹಕ್ಕು ಇದ್ದುದರಿಂದ ಸ್ವಾಭಾವಿಕವಾಗಿ ಪರಿಹಾರ ದೊರಕಬೇಕಾಗಿತ್ತು. ಜಮೀನು ಸ್ವಾಧೀನದ ವ್ಯಾಜ್ಯವನ್ನು ತೀರ್ಮಾನ ಮಾಡಲು ಒಂದು ವಿಶೇಷ ನ್ಯಾಯಸ್ಥಾನವನ್ನು ಸ್ಥಾಪಿಸಲಾಗಿತ್ತು.

ಗಾಂಧೀಜಿ ಆಗ ಜೋಹಾನ್ಸ್ ಬರ್ಗ್ ನಲ್ಲಿದ್ದರು. ಕೂಲಿಕಾರರಲ್ಲಿ ಬಹಳ ಜನ ಗಾಂಧೀಜಿಯನ್ನು ತಮ್ಮ ವಕೀಲರಾಗಿ ನೇಮಿಸಿಕೊಂಡರು. ಗಾಂಧೀಜಿಗೆ ಆ ಮೊಕದ್ದಮೆಯಿಂದ ಹಣಸಂಪಾದಿಸುವ ಉದ್ದೇಶವಿರಲಿಲ್ಲ. ಎಪ್ಪತ್ತು ದಾವಾಗಳ ಪೈಕಿ 69ನ್ನು ಗೆದ್ದು, ಒಂದನ್ನು ಸೋತರಂತೆ. ಈ ಮೊಕದ್ದಮೆಗಳ ಕಾರಣದಿಂದ ಗಾಂಧೀಜಿಗೆ ದಕ್ಷಿಣ ಆಫ್ರಿಕಾದಲ್ಲಿ ನೆಲಸಿದ್ದ ಅಸಂಖ್ಯಾತ ಭಾರತೀಯ ಕೂಲಿಕಾರರ ಪರಿಚಯವಾಯಿತು. ಮೊಕದ್ದಮೆ ಇತ್ಯರ್ಥವಾಗುತ್ತಿದ್ದಂತೆ ಕೂಲಿಕಾರರು ಲೊಕೇಷನ್ತೆರವು ಮಾಡಬೇಕಾಗಿತ್ತು. ಪುರಸಭೆಯವರು ಬೇರೆ ವಾಸಸ್ಥಾನವನ್ನು ಒದಗಿಸುವ ತನಕ ಕೊಳಕು ಸ್ಥಳದಲ್ಲೇ ಪುರಸಭೆಗೆ ಬಾಡಿಗೆ ನೀಡಿ ವಾಸಮಾಡುವುದು ಅನಿವಾರ್ಯವಾಗಿತ್ತು.

ಇದ್ದಕ್ಕಿದ್ದಂತೆ ಅಲ್ಲಿ ಕಪ್ಪು ಪ್ಲೇಗ್ ಕಾಣಿಸಿಕೊಂಡಿತ್ತು. ಇದು ನ್ಯುಮೋನಿಯ ಅಥವಾ ಶ್ವಾಸಕೋಶದ ಬ್ಯುಬೋನಿಕ್ (ಗಂಟು) ಪ್ಲೇಗಿಗಿಂತ ಭಯಂಕರವೂ ಪ್ರಾಣಹಾನಿಕಾರಕವೂ ಆದ ಕಾಯಿಲೆಯಾಗಿತ್ತು.

ಜೋಹಾನ್ಸ್ಬರ್ಗ್ನ ಸಮೀಪದ ಚಿನ್ನದ ಗಣಿಗಳಲ್ಲಿ ಬಹುಪಾಲು ನೀಗ್ರೋಗಳು ಕೆಲಸ ಮಾಡುತ್ತಿದ್ದರು. ಇವರ ಜತೆಗೆ ಕೆಲವು ಭಾರತೀಯ ಕೂಲಿಕಾರರೂ ಇದ್ದರು. ಇವರಲ್ಲಿ ಇಪ್ಪತ್ತಮೂರು ಜನಕ್ಕೆ ಇದ್ದಕ್ಕಿದ್ದಂತೆ ಪ್ಲೇಗು ತಗುಲಿ ನರಳುತ್ತ ಲೋಕೇಷನ್ನಿನಲ್ಲಿದ್ದ ತಮ್ಮ ಮನೆಗಳಿಗೆ ಬಂದು ಸೇರಿದ್ದರು. ಇಂಡಿಯನ್ ಒಪಿನಿಯನ್ಪತ್ರಿಕೆಗೆ ಹೊಸ ಚಂದಾದಾರರನ್ನು ಹುಡುಕಲು, ಚಂದಾವಸೂಲಿ ಮಾಡಲು ಮದನಜಿತ್ ಅದೇ ಸಂದರ್ಭದಲ್ಲಿ ಲೊಕೇಷನ್ನಿಗೆ ಹೋಗಿದ್ದರಂತೆ. ಆತ ಪ್ಲೇಗ್ ರೋಗಿಗಳನ್ನು ಕಂಡು ಗಾಂಧೀಜಿಗೆ ಸೀಸದ ಕಡ್ಡಿಯಲ್ಲಿ ಒಂದು ಚೀಟಿ ಬರೆದು ಬೇಗ ಬರುವಂತೆ ತಿಳಿಸಿದ್ದ. ಗಾಂಧೀಜಿ ಕೂಡಲೆ ಸೈಕಲ್‌ನಲ್ಲಿ ಸ್ಥಳಕ್ಕೆ ಧಾವಿಸಿ ಬಂದರು. ವಿಷಯ ತಿಳಿದ ಜೋಹಾನ್ಸ್ಬರ್ಗ್ನಲ್ಲಿದ್ದ ವೈದ್ಯ ವಿಲಿಯಂ ಗಾಡ್‌ಫ್ರೇ ಲೊಕೇಷನ್ನಿಗೆ ಬಂದು ವೈದ್ಯರೂ ದಾದಿಯೂ ಆದರೆಂದು ಗಾಂಧೀಜಿ ಬರೆಯುತ್ತಾರೆ.

ನೈತಿಕತೆ, ಹೃದಯ ಪರಿಶುದ್ಧತೆಯ ಬಗೆಗೆ ಸದಾ ಎಚ್ಚರದಿಂದಿರುವ ಗಾಂಧಿ ಸಂಕಟಕಾಲದಲ್ಲಿ ಅದನ್ನು ಎದುರಿಸಲು ಮನುಷ್ಯರೂ ಸೌಕರ್ಯಗಳೂ ತಾನಾಗಿಯೇ ಒದಗಿಬರುತ್ತವೆ ಎಂಬುದು ನನ್ನ ಅನುಭವ ಎನ್ನುತ್ತಾರೆ. ಅವರ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಭಾರತೀಯರು ನೀವಿದ್ದಲ್ಲಿ ನಾವುಎಂದು ಗಾಂಧೀಜಿಯೊಂದಿಗೆ ಸೇವಾ ಕೈಂಕರ್ಯಕ್ಕೆ ಸಿದ್ಧರಾದರು.

ಅದು ಭಯಂಕರ ರಾತ್ರಿಯಾಗಿತ್ತು. ಗಾಂಧೀಜಿಗೆ ರೋಗಿಗಳ ಸೇವೆ ಹೊಸದಾಗಿರಲಿಲ್ಲ. ಆದರೆ ಕಪ್ಪು ಪ್ಲೇಗ್ ತಗಲಿದವರ ಶುಶ್ರೂಷೆ ಇದೇ ಮೊದಲಿನದಾಗಿತ್ತು.

ಲೊಕೇಷನ್ನಿನಲ್ಲಿ ಬರಿದಾಗಿದ್ದ ಮನೆಯ ಬೀಗವನ್ನು ಒಡೆದು ಮದನ್‌ಜಿತ್ ರೋಗಿಗಳನ್ನು ಅಲ್ಲಿಗೆ ಸಾಗಿಸಿದರು. 23 ರೋಗಿಗಳಿಗೆ ಆ ಮನೆ ಸಾಲುತ್ತಿರಲಿಲ್ಲ. ಗಾಂಧೀಜಿಯ ಕೋರಿಕೆಯ ಮೇರೆಗೆ ಪುರಸಭೆ ಒಂದು ಗಡಂಗನ್ನು ಅವರಿಗೆ ನೀಡಿತು. ಆ ಕಟ್ಟಡದ ತುಂಬ ಕಸತುಂಬಿತ್ತು. ಗಾಂಧೀಜಿ ಮುಂದೆ ನಿಂತು ಅದನ್ನೆಲ್ಲ ಸ್ವಚ್ಛ ಮಾಡಿದರು. ನಂತರ ಭಾರತೀಯರ ಸಹಾಯದಿಂದ ಹಾಸಿಗೆಗಳನ್ನು ಇತರ ಆವಶ್ಯಕ ವಸ್ತುಗಳನ್ನು ಪಡೆದು ತಾತ್ಕಾಲಿಕ ವೈದ್ಯಶಾಲೆಯನ್ನು ನಿರ್ಮಿಸಿಕೊಂಡರು.

ಪುರಸಭೆ ಒಬ್ಬ ದಾದಿಯನ್ನೂ ಬ್ರಾಂದಿ ಮತ್ತು ಇತರ ವೈದ್ಯಕೀಯ ಸಲಕರಣೆಗಳೊಂದಿಗೆ ಕಳುಹಿಸಿತು. ಡಾಕ್ಟರ್ ಗಾಡ್‌ಫ್ರೇ ಎಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಸೇವಾಮನೋಭಾವದ ದಾದಿ ರೋಗಿಗಳ ಶುಶ್ರೂಷೆ ಮಾಡಲು ಸಿದ್ಧಳಿದ್ದರೂ ಆಕೆಗೆ ಪ್ಲೇಗ್ ತಗಲಬಹುದೆಂದು ಭಯದಿಂದ ಅವಳು ರೋಗಿಗಳನ್ನು ಮುಟ್ಟಲು ತಾವು ಬಿಡಲಿಲ್ಲ ಎಂದು ಗಾಂಧೀಜಿ ಬರೆಯುತ್ತಾರೆ. ರೋಗಿಗಳಿಗೆ ಪದೇ ಪದೇ ಬ್ರಾಂದಿ ಕೊಡಿ ಮತ್ತು ಶುಶ್ರೂಷೆ ಮಾಡುತ್ತಿರುವವರೆಲ್ಲ ಬ್ರಾಂದಿ ಕುಡಿಯಿರೆಂದು ದಾದಿ ಒತ್ತಾಯಿಸುತ್ತಾಳೆ. ಗಾಂಧೀಜಿ ಮತ್ತವರ ತಂಡ ಬ್ರಾಂದಿಯನ್ನು ಮುಟ್ಟಲಿಲ್ಲ. ಹಾಗೆಯೇ ಮೂವರು ರೋಗಿಗಳೂ ಬ್ರಾಂದಿಯನ್ನು ನಿರಾಕರಿಸಿದರು. ಡಾಕ್ಟರ್ ಗಾಡ್‌ಫ್ರೇ ಅವರ ಅನುಮತಿ ಪಡೆದು ಗಾಂಧೀಜಿ ಬ್ರಾಂದಿ ಒಲ್ಲದ ಮೂವರಿಗೂ ತಲೆ ಮತ್ತು ಎದೆಗೆ ಒದ್ದೆ ಮಣ್ಣಿನ ಪಟ್ಟಿಯನ್ನು ಹಾಕಿದರು. ಆ ಮೂವರಲ್ಲಿ ಇಬ್ಬರು ಬದುಕುಳಿದರು. ಇನ್ನುಳಿದ ಇಪ್ಪತ್ತೊಂದು ಮಂದಿ ಸತ್ತುಹೋದರು. ಜೋಹಾನ್ಸ್ ಬರ್ಗ್ ನಿಂದ ಏಳು ಮೈಲಿ ದೂರದಲ್ಲಿ ಸಾಂಕ್ರಾಮಿಕ ರೋಗಿಗಳಿಗೆ ಇದ್ದ ಶುಶ್ರೂಷಾಭವನದ ಬಳಿ ಹಾಕಿದ್ದ ಡೇರೆಗೆ ಬದುಕಿ ಉಳಿದಿದ್ದ ಇಬ್ಬರನ್ನು ಕಳುಹಿಸಲಾಯ್ತು.

ಕೆಲವು ದಿನಗಳೊಳಗಾಗಿ ಆ ದಾದಿ ಸೋಂಕು ತಾಗಿ ತಕ್ಷಣವೇ ಮಡಿದಳಂತೆ. ಇಬ್ಬರು ರೋಗಿಗಳು ಗುಣವಾದುದು ಹೇಗೆ? ರೋಗಿಗಳೊಂದಿಗೆ ಹಗಲಿರುಳು ಶ್ರಮಿಸಿದ ಗಾಂಧೀಜಿ ಹಾಗೂ ಅವರ ಜತೆಯವರು ಸೋಂಕು ತಾಗದೆ ಉಳಿದದ್ದು ಹೇಗೆ? ಎಂದು ಗಾಂಧೀಜಿ ಪ್ರಶ್ನಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅವರು ಪ್ರಯೋಗಿಸಿದ್ದ ಮಣ್ಣಿನ ಚಿಕಿತ್ಸೆಯಲ್ಲಿ ಅವರಿಗೆ ನಂಬಿಕೆ ಹೆಚ್ಚಾಗುತ್ತದೆ.

ಪ್ಲೇಗು ಹರಡಲು ಪುರಸಭೆಯ ನಿರ್ಲಕ್ಷ್ಯವೇ ಕಾರಣವೆಂದು ಗಾಂಧೀಜಿ ಸ್ಥಳೀಯ ಪತ್ರಿಕೆಗೆ ತೀಕ್ಷ್ಣವಾದ ಕಾಗದ ಬರೆದರಂತೆ. ಇದನ್ನು ಓದಿ ಮೆಚ್ಚಿ ಮಿ. ಹೆನ್ರಿ ಪೊಲಾಕ್ಗಾಂಧೀಜಿ ಸ್ನೇಹ ಬಯಸಿ ಬಂದರು. ಮುಂದೆ ಅವರ ಜೀವದ ಗೆಳೆಯರಾದರು. ಹಾಗೆ ರೆವರೆಂಡ್ ಜೋಸಫ್ ಡೋಕರ ಸ್ನೇಹಕ್ಕೂ ಈ ಪತ್ರ ಕಾರಣವಾಯಿತೆಂದು ಗಾಂಧಿ ದಾಖಲಿಸುತ್ತಾರೆ. ಡೋಕ್ ಗಾಂಧೀಜಿಯ ಜೀವನ ಚರಿತ್ರೆಯನ್ನು ಮೊದಲು ಬರೆದವರು.

ಪುರಸಭೆಯವರು ಕೆಲವು ನಿಯಮಗಳನ್ನು ರೂಪಿಸಿ ಅದರಂತೆ ನಡೆದುಕೊಳ್ಳುವಂತೆ ಲೊಕೇಷನ್ನಿನ ಜನರಿಗೆ ಸೂಚಿಸಿತು. ಕೂಲಿಕಾರ್ಮಿಕರಿಗೆ ಈ ನಡಾವಳಿಗಳನ್ನು ಪಾಲಿಸುವುದು ಸುಲಭವಾಗಿರಲಿಲ್ಲ. ಪ್ರತಿನಿತ್ಯ ಗಾಂಧೀಜಿ ಆ ಜನರ ಮಧ್ಯೆಯಿದ್ದು ಮಾರ್ಗದರ್ಶನ ಮಾಡಿದ್ದು ಅವರ ಶಿಸ್ತಿನಿಂದಿರಲು ಸಹಾಯವಾಯಿತು. ಲೊಕೇಷನ್ನಿಗೆ ಬಲವಾದ ಕಾವಲನ್ನು ಹಾಕಲಾಯಿತು. ಅನುಮತಿಯಿಲ್ಲದೆ ಯಾರೂ ಲೊಕೇಷನ್ನು ಪ್ರವೇಶಿಸುವಂತಿರಲಿಲ್ಲ. ಗಾಂಧೀಜಿ ಮತ್ತು ಅವರ ಸಹಚರರಿಗೆ ಅನುಮತಿ ಪತ್ರಗಳನ್ನು ನೀಡಲಾಗಿತ್ತು.

ಇಪ್ಪತ್ತೊಂದು ಸಾವುಗಳನ್ನೂ ಕಂಡಿದ್ದ ಜನ ತುಂಬ ಹೆದರಿದ್ದರಂತೆ. ಗಾಂಧೀಜಿ ಅಲ್ಲೇ ಇದ್ದು ಧೈರ್ಯ ತುಂಬುತ್ತಿದ್ದರು. ಕೂಲಿ ಕಾರ್ಮಿಕರು ಲೊಕೇಷನ್ ಅನ್ನು ಬಿಡುತ್ತಿದ್ದಂತೆ ಇಡೀ ಪ್ರದೇಶಕ್ಕೆ ಬೆಂಕಿ ಹಾಕುವ ನಿರ್ಧಾರ ಪುರಸಭೆಯದಾಗಿತ್ತು. ಕೂಲಿಕಾರ್ಮಿಕರು ತಮ್ಮ ಉಳಿತಾಯದ ಹಣವನ್ನು ನೆಲದಲ್ಲಿ ಹೂತಿಟ್ಟಿದ್ದರಂತೆ. ಗಾಂಧೀಜಿ ಬ್ಯಾಂಕ್ ಮ್ಯಾನೇಜರ್ ಅವರನ್ನು ಕಂಡು ಹಣವನ್ನು ಬ್ಯಾಂಕಿನಲ್ಲಿಡಲು ವ್ಯವಸ್ಥೆ ಮಾಡಿದರು. ಪ್ಲೇಗ್ ಸೋಂಕಿತ ಪ್ರದೇಶದಿಂದ ಬಂದ ಜನರ ಹಣವನ್ನು ಮುಟ್ಟಲು ಬ್ಯಾಂಕ್ ಸಿಬ್ಬಂದಿ ಹಿಂಜರಿದರು. ಗಾಂಧಿ ಬೆಳ್ಳಿ, ತಾಮ್ರದ ನಾಣ್ಯಗಳನ್ನು, ಹಣವನ್ನು ಕ್ರಿಮಿನಾಶಕದಿಂದ ತೊಳಿಸಿದರಂತೆ. ಸುಮಾರು ಅರವತ್ತು ಸಾವಿರ ಪೌಂಡ್ ಹಣವನ್ನು ಬ್ಯಾಂಕಿಗೆ ಜಮಾ ಮಾಡಲಾಯಿತೆಂದು ಗಾಂಧಿ ನೆನಪುಮಾಡಿಕೊಳ್ಳುತ್ತಾರೆ. ಹೆಚ್ಚು ಹಣವಿದ್ದವರು ನಿಶ್ಚಿತ ಠೇವಣಿಯಿಡುವಂತೆ ಗಾಂಧೀಜಿ ಕೂಲಿಕಾರರ ಮನವೊಲಿಸಿದರು. ಹೀಗೆ ಕಾರ್ಮಿಕರಿಗೆ ಬ್ಯಾಂಕ್‌ನಲ್ಲಿ ವ್ಯವಹರಿಸುವುದು ಅಭ್ಯಾಸವಾಯ್ತು.

ಜೋಹಾನ್ಸ್ಬರ್ಗ್ನ ಸಮೀಪದಲ್ಲಿದ್ದ ಕ್ಲಿಪ್‌ಸ್ಫುಟ ಫಾರಂಎಂಬ ಪ್ರದೇಶಕ್ಕೆ ಲೊಕೇಷನ್ ನಿವಾಸಿಗಳನ್ನು ವಿಶೇಷ ರೈಲಿನಲ್ಲಿ ಕಳುಹಿಸಿಕೊಡಲಾಯ್ತು. ಅವರಿಗೆಲ್ಲ ಸರ್ಕಾರದ ವೆಚ್ಚದಲ್ಲಿ ಪುರಸಭೆಯವರು ಆಹಾರ ಪದಾರ್ಥಗಳನ್ನು ಒದಗಿಸಿದರು. ಈ ಶಿಬಿರ ಜೀವನ ಕೂಲಿಕಾರ್ಮಿಕರಿಗೆ ಪ್ರಾರಂಭದಲ್ಲಿ ಬೇಸರ ಆಶ್ಚರ್ಯ ಎರಡನ್ನೂ ಉಂಟುಮಾಡಿತ್ತಂತೆ. ಗಾಂಧೀಜಿ ಪ್ರತಿನಿತ್ಯ ಅವರಿದ್ದಲ್ಲಿಗೆ ಸೈಕಲ್ಲಿನಲ್ಲಿ ಹೋಗುತ್ತಿದ್ದರಂತೆ. ಬಹಳ ಬೇಗ ಅವರು ಆ ಪರಿಸರಕ್ಕೆ ಹೊಂದಿಕೊಂಡು ಹಾಡುತ್ತ ಆನಂದ ವಿನೋದಗಳಲ್ಲಿದ್ದುದನ್ನು ತಾವು ಹೋದಾಗಲೆಲ್ಲ ಗಾಂಧೀಜಿ ಕಂಡುದಾಗಿ ಬರೆಯುತ್ತಾರೆ. ಮೂರು ವಾರ ಬಯಲಿನಲ್ಲಿ ವಾಸಮಾಡಿದ್ದರಿಂದ ಅವರ ಆರೋಗ್ಯ ಸಹಜವಾಗಿಯೇ ಸುಧಾರಿಸಿತಂತೆ.

ಲೊಕೇಷನ್ನಿನಿಂದ ಕೂಲಿಕಾರ್ಮಿಕರು ಹೊರಹೋದ ಮಾರನೆ ದಿನವೇ ಇಡೀ ಆವರಣಕ್ಕೆ ಬೆಂಕಿ ಹಚ್ಚಿದರಂತೆ. ಜೋಹಾನ್ಸ್ಬರ್ಗ್ನಲ್ಲಿದ್ದ ಸುಮಾರು ಹತ್ತು ಸಾವಿರ ಪೌಂಡ್ ಬೆಲೆ ಬಾಳುವ ಮರವನ್ನು ಅಗ್ನಿಗೆ ಆಹುತಿ ಮಾಡಿದರಂತೆ ಕಾರಣ ಅಲ್ಲೆಲ್ಲ ಇಲಿಗಳು ಓಡಾಡಿದ್ದವಂತೆ.

ಗಾಂಧೀಜಿ ಕಪ್ಪುಪ್ಲೇಗಿನ ಅನುಭವವನ್ನು ತಮ್ಮ ಆತ್ಮಕಥೆಯಲ್ಲಿ ದೀರ್ಘವಾಗಿ ಬರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಾಣದ ಹಂಗುತೊರೆದು ಸಾಂಕ್ರಾಮಿಕ ರೋಗಿಗಳ ನಡುವೆ ಕೆಲಸ ಮಾಡಿದ್ದು, ತನ್ನ ಸಹಚರರನ್ನು ಸೇವಾಕೈಂಕರ್ಯಕ್ಕೆ ಪ್ರೇರೇಪಿಸಿದ್ದು, ವೃತ್ತಿಯಲ್ಲಿ ನೈತಿಕತೆ ಮೆರೆದದ್ದು, ನೊಂದವರ ಕಣ್ಣೀರೊರಸಿದ್ದು, ಸರ್ಕಾರದೊಂದಿಗೆ ನಡೆಸಿದ ಅನುಸಂಧಾನ ಎಲ್ಲವೂ ವಿವರವಾಗಿ ದಾಖಲಾಗಿ ಮಹಾತ್ಮನ ಹೆಜ್ಜೆಗುರುತುಗಳು ಪಡಿಮೂಡುತ್ತಿರುವುದನ್ನು ಗಮನಿಸಬಹುದಾಗಿದೆ. ಕೊರೊನಾದ ಈ ಸಂಕಷ್ಟಕಾಲದಲ್ಲಿ ಮಹಾತ್ಮನಿದ್ದಿದ್ದರೆ ಎಂದು ಮನಸ್ಸು ಹಂಬಲಿಸುತ್ತದೆ.

(ಗಾಂಧೀಜಿ ಆತ್ಮಕಥೆ ನನ್ನ ಸತ್ಯಾನ್ವೇಷಣೆಯಿಂದ)

 

Leave a Reply

Your email address will not be published.