1918ರ ವಿಷಮಶೀತ ಜ್ವರ: ಮರೆಯಲಾಗದ ಮಹಾಮಾರಿ!

ಮೊದಲನೆಯ ಮಹಾಯುದ್ಧ ಮುಗಿಯುತ್ತಿದ್ದ ದಿನಗಳಲ್ಲಿ ಪ್ರಾರಂಭವಾದ ವಿಷಮಶೀತ ಜ್ವರ ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಐದು ಕೋಟಿ ಜನರ ಸಾವಿಗೆ ಕಾರಣವಾಯಿತು. ಇದು ಬಹುಶಃ ಎರಡು ಮಹಾಯುದ್ಧಗಳಲ್ಲಿ ಆದ ಜೀವಹಾನಿಗಿಂತ ಹೆಚ್ಚಿನದಾಗಿತ್ತು. ಸಾವುಗಳ ಹೆಚ್ಚಿನ ಭಾಗವು ಭಾರತದಲ್ಲಿ ಸಂಭವಿಸಿತು! ಮಿಗಿಲಾಗಿ 20ನೆಯ ಶತಮಾನದ ಹಲವಾರು ಘಟನೆಗಳ ಮೇಲೆ ಸ್ಪಾನಿಷ್ ಫ್ಲೂ ಪರಿಣಾಮ ಬೀರಿತು. ಸೋಂಕು ಏಕಕಾಲದಲ್ಲಿ ಜೀವಶಾಸ್ತಿಮತ್ತು ಸಾಮಾಜಿಕವಾದ ವಿದ್ಯಮಾನ. ಇದರ ಪರಿಣಾಮಗಳು ಜೀವಶಾಸ್ತ್ರೀಯ ಮತ್ತು ಸಾಮಾಜಿಕ ಎರಡೂ ಆಗಿರುತ್ತವೆ. ಇವುಗಳಲ್ಲಿ ಯಾವುದೊಂದನ್ನು ನಿರ್ಲಕ್ಷಿಸಿದರೂ ಗಂಡಾಂತರ ತಪ್ಪಿದ್ದಲ್ಲ.

ಈ ಸಂಚಿಕೆಯು ನಿಮ್ಮನ್ನು ತಲುಪುವ ಹೊತ್ತಿಗೆ ಕೊರೊನಾ ವೈರಸ್ ಬಗ್ಗೆ ಮತ್ತು ಅದರ ಪರಿಣಾಮಗಳ ಬಗ್ಗೆ ನಾವು ಹೇಳಬಹುದಾದ ಎಲ್ಲ ವಿಷಯಗಳು ಸಹ ಗತಕಾಲದ ಅರ್ಥಹೀನ ಮಾತುಗಳಾಗುವ ಸಾಧ್ಯತೆಯೆ ಹೆಚ್ಚಿದೆ. ಎರಡನೆಯ ಮಹಾಯುದ್ಧದ ನಂತರದ ಕಾಲದಲ್ಲಿ ಜಾಗತಿಕವಾಗಿ ಮನುಷ್ಯರೆಲ್ಲರ ಪ್ರತಿನಿತ್ಯದ ಬದುಕನ್ನು ಬದಲಾಯಿಸಬಲ್ಲ ಇಂತಹ ವಿದ್ಯಮಾನವೊಂದು ಜರುಗಿಲ್ಲ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬಹುದು? ಇದಕ್ಕೆ ಸಂವಾದಿಯಾಗಿ ಇತಿಹಾಸದಲ್ಲಿ ಏನಾದರೂ ದೊರಕುತ್ತದೆಯೆ?

ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ನನಗೆ ಅನ್ನಿಸಿದ್ದು 1918ರಲ್ಲಿ ಜಗತ್ತನ್ನು ಅಲುಗಿಸಿಬಿಟ್ಟ ಸ್ಪಾನಿಷ್ ಫ್ಲೂ ಬಗ್ಗೆ ನಮ್ಮ ಓದುಗರಿಗೆ ತಿಳಿಸಬೇಕು ಎಂದು. ಮೊದಲನೆಯ ಮಹಾಯುದ್ಧವು ಮುಗಿಯುತ್ತಿದ್ದ ದಿನಗಳಲ್ಲಿ ಪ್ರಾರಂಭವಾದ ಈ ವಿಷಮಶೀತ ಜ್ವರವು ಮುಂದಿನ ಎರಡು ವರ್ಷಗಳಲ್ಲಿ ಸುಮಾರು ಐದು ಕೋಟಿ ಜನರ ಸಾವಿಗೆ ಕಾರಣವಾಯಿತು ಎನ್ನುವ ಅಂದಾಜನ್ನು ಇತಿಹಾಸಕಾರರು ಮುಂದಿಡುತ್ತಾರೆ. ಮಿಗಿಲಾಗಿ 20ನೆಯ ಶತಮಾನದ ಹಲವಾರು ಘಟನೆಗಳ ಮೇಲೆ ಸ್ಪಾನಿಷ್ ಫ್ಲೂ ಪರಿಣಾಮ ಬೀರಿತು ಎಂದು ಇತ್ತೀಚಿನ ಇತಿಹಾಸದ ಬರವಣಿಗೆಗಳಲ್ಲಿ ತಿಳಿದುಬರುತ್ತಿದೆ. ಉದಾಹರಣೆಗೆ, ಮೊದಲನೆಯ ಮಹಾಯುದ್ಧದಲ್ಲಿ ಜರ್ಮನಿಯ ಸೋಲಿಗೆ ಈ ಜ್ವರದ ಸೋಂಕು ಅಲ್ಲಿನ ಸೇನೆಯಲ್ಲಿ ಹರಡಿದ್ದು ಕಾರಣವಾಗಿರಬಹುದು ಎನ್ನುವ ಹೊಸ ಒಳನೋಟವನ್ನು ಈಗ ಮಿಲಿಟರಿ ಇತಿಹಾಸಕಾರರು ಒದಗಿಸುತ್ತಿದ್ದಾರೆ. ಅಲ್ಲದೆ ಎರಡನೆಯ ಮಹಾಯುದ್ಧಕ್ಕೂ ಸಹ ಇದು ದಾರಿ ಮಾಡಿಕೊಟ್ಟಿತು ಎನ್ನಲಾಗುತ್ತಿದೆ.

ಭಾರತದ ಇತಿಹಾಸದ ಮೇಲೆ ಸಹ ಸ್ಪಾನಿಷ್ ಫ್ಲೂ ಪ್ರಭಾವ ದೊಡ್ಡ ಪ್ರಮಾಣದಲ್ಲಿ ಆಯಿತು. ಮೊದಲನೆಯ ಮಹಾಯುದ್ಧದಿಂದ ವಾಪಸು ಬಂದ ಲಕ್ಷಾಂತರ ಭಾರತೀಯ ಸೈನಿಕರು ಜ್ವರದ ಸೋಂಕನ್ನು ಭಾರತಕ್ಕೆ ತಂದರು. ಈ ಸೋಂಕಿನಿಂದ ಭಾರತದಲ್ಲಿ ಸುಮಾರು 2 ಕೋಟಿಗಳಷ್ಟು ಜನರು ಸಾವಿಗೀಡಾಗಿರಬಹುದು ಎನ್ನುವ ಅಂದಾಜಿದೆ. ಕೆಲವೆ ವರ್ಷಗಳ ಹಿಂದೆ ಭಾರತಕ್ಕೆ ಹಿಂದಿರುಗಿದ್ದ ಗಾಂಧೀಜಿಗೂ ಈ ಸೋಂಕು ತಗುಲಿತು ಮತ್ತು ಹಲವಾರು ತಿಂಗಳುಗಳ ಕಾಲ ಅವರು ವಿಷಮಶೀತ ಜ್ವರದಿಂದ ನರಳಿದರು. ಆದರೆ ಅವರು ಭಾರತೀಯ ರಾಜಕಾರಣದ ಕೇಂದ್ರಕ್ಕೆ ಬರಲು ಈ ಜ್ವರ ಮತ್ತು ಅದರಿಂದ ಶುರುವಾದ ಬೆಳವಣಿಗೆಗಳು ಕಾರಣವಾದವು ಎಂದು ಇತಿಹಾಸಕಾರರು ವಿಶ್ಲೇಷಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸ್ಪಾನಿಷ್ ಫ್ಲೂ ಬಗ್ಗೆ ಬರೆದಿರುವವರ ಪೈಕಿ ವಿಜ್ಞಾನ ಬರಹಗಾರ್ತಿ ಲೌರಾ ಸ್ಪಿನ್ನಿ ಪ್ರಮುಖರು. 2017ರಲ್ಲಿ ಪ್ರಕಟವಾದ ಅವರ ‘ಪೇಲ್ ರೈಡರ್’ ಕೃತಿಯು ಈ ಸಾಂಕ್ರಾಮಿಕ ರೋಗವು ಪ್ರಪಂಚದ ಇತಿಹಾಸವನ್ನು ಬದಲಿಸಿದ ಬಗೆಯನ್ನು ಚಿತ್ರಿಸುತ್ತದೆ. ಸ್ಪಿನ್ನಿ ಇತ್ತೀಚೆಗೆ ಕ್ಯಾರವಾನ್ ನಿಯತಕಾಲಿಕದಲ್ಲಿ ಭಾರತದಲ್ಲಿ ಸ್ಪಾನಿಷ್ ಫ್ಲೂ ಸಂಬಂಧಿತ ಬೆಳವಣಿಗೆಗಳನ್ನು ಬಣ್ಣಿಸುವ ಒಂದು ಲೇಖನವನ್ನು ಬರೆದರು. ಅದರ ಆಯ್ದ ಭಾಗಗಳನ್ನು ಇಲ್ಲಿ ಕನ್ನಡದ ಓದುಗರಿಗೆ ನೀಡುತ್ತಿದ್ದೇವೆ.

1918ಸ್ಪಾನಿಷ್ ಫ್ಲೂ ಭಾರತವನ್ನು ಹೇಗೆ ಬದಲಿಸಿತು?

1918ರಲ್ಲಿ ನಿರಾಲ ಎಂದೆ ಪ್ರಖ್ಯಾತರಾಗಿದ್ದ 22 ವರ್ಷ ವಯಸ್ಸಿನ ಕವಿ ಸೂರ್ಯಕಾಂತ ತ್ರಿಪಾಠಿಯವರ ಬದುಕಿನಲ್ಲಿ ದುರ್ದೈವ ಸಂಭವಿಸಿತು. ತಮ್ಮ ಆತ್ಮಕಥೆಯಲ್ಲಿ ಅವರು ಬರೆಯುತ್ತಾರೆ: “ದಲ್ಮೌವಿನಲ್ಲಿ ನದಿದಂಡೆಗೆ ತೆರಳಿ ಕಾಯುತ್ತಿದ್ದೆ. ಗಂಗಾ ನದಿಯು ಮೃತದೇಹಗಳಿಂದ ತುಂಬಿತ್ತು. ನನ್ನ ಮಾವನ ಮನೆಯಲ್ಲಿ ನನ್ನ ಪತ್ನಿಯ ದೇಹಾಂತ್ಯವಾದುದು ತಿಳಿಯಿತು.”

ನಿರಾಲರ ಕುಟುಂಬದ ಹಲವು ಇತರ ಸದಸ್ಯರು ಸಹ ತೀರಿಕೊಂಡಿದ್ದರು. ಅವರ ಶವಸಂಸ್ಕಾರಕ್ಕೆ ಬೇಕಾದಷ್ಟು ಕಟ್ಟಿಗೆ ಇರಲಿಲ್ಲ. ಈ ದಿನಗಳನ್ನು ನಂತರದಲ್ಲಿ ನೆನಪಿಸಿಕೊಳ್ಳುತ್ತ ಅವರು ಬರೆದರು: “ಇದು ನನ್ನ ಬದುಕಿನಲ್ಲಿಯೆ ವಿಚಿತ್ರದ ಕಾಲವಾಗಿತ್ತು. ನನ್ನ ಕುಟುಂಬವು ಕಣ್ಣು ರೆಪ್ಪೆ ಬಡಿಯುವುದರೊಳಗೆ ಮರೆಯಾಗಿತ್ತು. ನಮ್ಮ ಎಲ್ಲ ರೈತರು ಮತ್ತು ಕೆಲಸಗಾರರು ತೀರಿಕೊಂಡರು. ಇವರಲ್ಲಿ ನಾಲ್ವರು ನನ್ನ ದಾಯಾದಿಗೂ ಮತ್ತು ಇಬ್ಬರು ನನಗೂ ಕೆಲಸ ಮಾಡುತ್ತಿದ್ದವರು. ನನ್ನ ದಾಯಾದಿಯ ಹದಿನೈದು ವರ್ಷ ವಯಸ್ಸಿನ ಹಿರಿಯ ಮಗ ಮತ್ತು ನನ್ನ ಒಂದು ವರ್ಷ ವಯಸ್ಸಿನ ಮಗಳು ಮೃತರಾದರು. ಯಾವ ದಿಕ್ಕಿಗೆ ತಿರುಗಿದರೂ ನನಗೆ ಕಂಡದ್ದು ಕತ್ತಲೆ ಮಾತ್ರ”.

ಈ ಸಾವುಗಳು ಕವಿಯ ಬದುಕಿನಲ್ಲಿ ಮಾತ್ರ ಕಂಡುಬರುವ ಕಾಕತಾಳೀಯ ಖಾಸಗಿ ದುರಂತಗಳಲ್ಲ. ಬದಲಿಗೆ ಅವು ದೊಡ್ಡ ಐತಿಹಾಸಿಕ ಘಟನೆಗೆ ಸಂಬಂಧಿಸಿದವು. ನಿರಾಲ ಬರೆದರು: “ವೃತ್ತಪತ್ರಿಕೆಗಳು ದೊಡ್ಡ ಸಾಂಕ್ರಾಮಿಕ ಸೋಂಕು ರೋಗದ ಹಾವಳಿಗಳ ಮಾಹಿತಿ ನೀಡಿದವು”.

ವಾಸ್ತವದಲ್ಲಿ ಈ ಸಾಂಕ್ರಾಮಿಕ ರೋಗವು ಕೇವಲ ಭಾರತ ಉಪಖಂಡವನ್ನು ಮಾತ್ರವಲ್ಲ ಬದಲಿಗೆ ಇಡೀ ಭೂಮಿಯ ಮೇಲೆ ಪರಿಣಾಮ ಬೀರಿದ ಸೋಂಕು ಆಗಿತ್ತು. ಇನ್ ಫ್ಲುಯೆಂಜಾ ಅಥವಾ ವಿಷಮಶೀತ ಜ್ವರವು ಸುಮಾರು 5ರಿಂದ 10 ಕೋಟಿ ಜೀವಗಳನ್ನು ಪ್ರಪಂಚದಾದ್ಯಂತ ಬಲಿಯಾಗಿಸಿತು. ಇದು ಬಹುಶಃ ಎರಡು ಮಹಾಯುದ್ಧಗಳಲ್ಲಿ ಆದ ಜೀವಹಾನಿಗಿಂತ ಹೆಚ್ಚಿನದಾಗಿತ್ತು. ಈ ಸಾವುಗಳಲ್ಲಿ ಹೆಚ್ಚಿನ ಭಾಗವು ಭಾರತದಲ್ಲಿ ಸಂಭವಿಸಿತು. ಕೆಲವು ಇತರೆ ದೇಶಗಳಲ್ಲಿ ಅವುಗಳ ಜನಸಂಖ್ಯೆಗೆ ಅನುಗುಣವಾದ ಪ್ರಮಾಣದಲ್ಲಿ ಜೀವಹಾನಿಯಾಯಿತು.

ಉದಾಹರಣೆಗೆ ಈಗಿನ ಸಮೋವ ದೇಶವು ತನ್ನ ಜನಸಂಖ್ಯೆಯ 22% ಭಾಗವನ್ನು ಕಳೆದುಕೊಂಡಿತು. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಆದ ಜೀವಹಾನಿ ಶೇ 6ರಷ್ಟು ಮಾತ್ರ. ಆದರೆ ಭಾರತದ ಜನಸಂಖ್ಯೆಯ ಅಗಾಧ ಪ್ರಮಾಣವನ್ನು ನೋಡಿದಾಗ, ಶೇ 6 ಎನ್ನುವುದು ಬಹುದೊಡ್ಡ ಸಂಖ್ಯೆಯಾಗಿ ಪರಿಣಮಿಸುತ್ತದೆ. 1918 ಮತ್ತು 1920ರ ನಡುವೆ, ವಿಷಮಶೀತ ಜ್ವರಕ್ಕೆ ಭಾರತದಲ್ಲಿ ಬಲಿಯಾದವರ ಸಂಖ್ಯೆ ಸುಮಾರು 1.8 ಕೋಟಿಗಳಷ್ಟು ಎಂದು ಅಂದಾಜು ಮಾಡಲಾಗುತ್ತಿದೆ. ಮರಣಪ್ರಮಾಣವನ್ನೆ ಗಮನಿಸುವುದಾದರೆ, ಭಾರತವೆ ಈ ದುರಂತದ ಕೇಂದ್ರಬಿಂದುವಾಗಿ ಕಾಣುತ್ತದೆ.

ಒಟ್ಟಾರೆಯಾಗಿ ಏಷ್ಯಾ ಖಂಡವು ಆ ದಿನಗಳಲ್ಲಿ ಅತಿಹೆಚ್ಚಿನ ಜ್ವರ ಸಂಬಂಧಿ ಸಾವಿನ ಪ್ರಮಾಣವನ್ನು ಕಂಡಿತು. ಆದರೂ ಸಹ ಈ ವಿಷಮಶೀತ ಜ್ವರವು ಈ ಖಂಡವನ್ನು ಹೇಗೆ ಪಾಳುಗೆಡವಿತು ಎನ್ನುವ ಕಥನವು ಇಂದಿಗೂ ಸರಿಯಾಗಿ ತಿಳಿದಿಲ್ಲ. 1918ರ ಈ ಸಾಂಕ್ರಾಮಿಕ ಜ್ವರವನ್ನು ‘ಮರೆತುಹೋಗಿರುವ’ ಸೋಂಕುರೋಗ ಎಂದೆ ಕರೆಯಲಾಗುತ್ತಿದೆ. ವಿಪರ್ಯಾಸವೆಂದರೆ ಯಾವ ಖಂಡವು ಇದರ ಪರಿಣಾಮವನ್ನು ಬಹುಮಟ್ಟಿಗೆ ಅನುಭವಿಸಿತೊ ಆ ಖಂಡವೆ ಈ ಕಥನವನ್ನು ಮರೆತಿದೆ.

ಸ್ಟಾಲಿನ್ ಒಮ್ಮೆ ಹೀಗೆ ಹೇಳಿದರಂತೆ: ಒಂದು ಸಾವು ದುರಂತವಾದರೆ, ಒಂದು ಮಿಲಿಯನ್ ಸಾವುಗಳು ಅಂಕಿಅಂಶ ಮಾತ್ರ. ಬಹುಶಃ ಅದಕ್ಕಾಗಿಯೆ ಆ ಭಯಾನಕ ಸಂದರ್ಭದ ಬದುಕಿನ ಅನುಭವ ಹೇಗಿತ್ತು ಎನ್ನುವುದನ್ನು ನಮಗೆ ತಿಳಿಸಲು ಮತ್ತು ಬರಡು ಅಂಕಿಅಂಶಗಳನ್ನು ಮನುಷ್ಯರ ಅನುಭವಗಳಾಗಿ ಅನುವಾದಿಸಲು ನಾವು  ಒಬ್ಬ ಕವಿಯತ್ತ ತಿರುಗುತ್ತೇವೆ. ನಿರಾಲರನ್ನು ಈಗ ಆಧುನಿಕ ಹಿಂದಿ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬರೆಂದು ಗುರುತಿಸಲಾಗುತ್ತಿದೆ. 1918ರ ಸೋಂಕು ಜ್ವರವು ಅಂದಿನ ಇತರ ಭಾರತೀಯರಂತೆ ಅವರ ಮೇಲೆ ಆಳವಾದ ಚಾಪನ್ನು ಮೂಡಿಸಿತು ಎನ್ನುವುದರಲ್ಲಿ ಅನುಮಾನವಿಲ್ಲ. ವಾಸ್ತವದಲ್ಲಿ, ಸ್ಪಾನಿಷ್ ಫ್ಲೂ ಬಗೆಗಿನ ನನ್ನ ಪುಸ್ತಕದಲ್ಲಿ ನಾನು ವಾದಿಸುವಂತೆ ಈ ರೋಗವು ಉಂಟುಮಾಡಿದ ವಿನಾಶವು ಭಾರತದಲ್ಲಿನ ಸಾಮಾಜಿಕ ಉದ್ವಿಗ್ನತೆಗಳನ್ನು ತೀವ್ರಗೊಳಿಸಿತು. ಇದರಿಂದ ಸಂಭವಿಸಿದ ಹಿಂಸೆಯು ಭಾರತದ ಸ್ವಾತಂತ್ರ÷್ಯ ಚಳವಳಿಗೆ ಚೈತನ್ಯ ತುಂಬಿತು. ಇದನ್ನು ಅರಿಯಲು, ಸಾಂಕ್ರಾಮಿಕ ಜ್ವರಗಳ (ಅದರಲ್ಲಿಯೂ 1918ರ ಸೋಂಕು ಜ್ವರದ) ಸ್ವರೂಪವನ್ನು ಅರಿಯುವುದು ಅತ್ಯಗತ್ಯ.

ವಿಷಮಶೀತ ಜ್ವರದ ವೈರಸ್ಸಿನ ಸೋಂಕು ಮನುಷ್ಯರಲ್ಲದೆ ಹಲವು ಪ್ರಾಣಿಗಳಿಗೆ ಸಹ ತಗುಲುತ್ತದೆ. ಈ ವೈರಸ್ ಸುಲಭವಾಗಿ ರೂಪಾಂತರಗೊಳ್ಳುವುದಕ್ಕೆ ಕುಖ್ಯಾತವಾಗಿದೆ. ಹೀಗೆ ರೂಪಾಂತರಗೊಂಡ ಹೊಸ ತಳಿಯೊಂದು ಪ್ರಾಣಿಯೊಂದರಿಂದ (ಸಾಮಾನ್ಯವಾಗಿ ಪಕ್ಷಿಗಳಿಂದ) ಮನುಷ್ಯರಿಗೆ ತಲುಪುತ್ತದೆ. ಆ ತಳಿಯು ಮತ್ತೊಂದು ರೂಪಾಂತರದಿಂದ ಮನುಷ್ಯರ ನಡುವೆ ಹರಡುವ ಸಾಮರ್ಥ್ಯವನ್ನು ಪಡೆದುಕೊಂಡರೆ, ಆಗ ಒಂದು ಸಾಂಕ್ರಾಮಿಕ ಸೋಂಕಿನ ಪಿಡುಗಿಗೆ ದಾರಿಮಾಡಿಕೊಡುತ್ತದೆ. ಇದು ಏಕೆಂದರೆ ಬದುಕಿರುವ ಯಾವ ಮನುಷ್ಯನಿಗೂ ಇಂತಹ ವೈರಸ್ ಸೋಂಕು ತಾಗಿಲ್ಲದ ಕಾರಣವಾಗಿ ಇಡೀ ಮನುಕುಲಕ್ಕೆ ಬಹಳ ಕಡಿಮೆ ರೋಗನಿರೋಧಕ ಶಕ್ತಿ ಇರುತ್ತದೆ.

ಕಾಲಾನುಕ್ರಮದಲ್ಲಿ ವೈರಸ್ಸಿನ ಈ ಹೊಸ ತಳಿಯು ತನ್ನ ಉಗ್ರತೆಯನ್ನು ಕಡಿಮೆ ಮಾಡಿಕೊಂಡು ತನ್ನ ಮಾನವ ಆಶ್ರಯದಾತನ ಜೊತೆಗೆ ಒಂದು ಸಾಮರಸ್ಯದ ಸಮತೋಲನವನ್ನು ಸಾಧಿಸಿಕೊಳ್ಳುತ್ತದೆ. ಈ ಸಮತೋಲನವು ವೈರಸ್ಸಿನ ಪ್ರಜ್ಞಾಪೂರ್ವಕಯಾಗಿ ಜರುಗುವುದಿಲ್ಲ, ಬದಲಿಗೆ ನೈಸರ್ಗಿಕ ಆಯ್ಕೆಯ ಪ್ರಕ್ರಿಯೆಯ ಅಂಗವಾಗಿ ಆಗುತ್ತದೆ. ಏಕೆಂದರೆ ವೈರಸ್ಸಿನಲ್ಲಿ ಆಗುವ ರೂಪಾಂತರಗಳು ಆಶ್ರಯದಾತನನ್ನು ಹೆಚ್ಚು ಕಾಲ ಬದುಕುವ ಅವಕಾಶ ಮಾಡಿಕೊಡುತ್ತವೆ ಮತ್ತು ಇದರಿಂದ ಆಶ್ರಯದಾತ ಮನುಷ್ಯನು ಚಲಿಸುತ್ತ ಇತರ ಮನುಷ್ಯರಿಗೆ ಸೋಂಕನ್ನು ಕೊಡುವ ಸಾಧ್ಯತೆಯೂ ಮೂಡುತ್ತದೆ. ಇದರಿಂದ ವೈರಸ್ ತನ್ನ ಮರುಹುಟ್ಟನ್ನು ಮಾಡಿಕೊಳ್ಳುತ್ತ, ತನ್ನ ಪ್ರತಿಗಳನ್ನು ಮತ್ತಷ್ಟು ಉತ್ಪಾದಿಸಲು ಅನುವು ಮಾಡಿಕೊಳ್ಳುತ್ತದೆ. ಉಗ್ರ ಸೋಂಕು ಕಡಿಮೆಯಾಗುತ್ತದೆ ಆದರೆ ಸೋಂಕಿಗೆ ಕಾರಣವಾದ ತಳಿಯು ಮನುಷ್ಯರಲ್ಲಿ ಋತುಸಹಜ ಜ್ವರವಾಗಿ ಪ್ರಸರಿಸಲಾರಂಭಿಸುತ್ತದೆ.

ಆದುದರಿಂದ ನಮಗೆ ಇಷ್ಟವಿದೆಯೊ ಇಲ್ಲವೊ, ಸಾಂಕ್ರಾಮಿಕ ಜ್ವರದ ಸೋಂಕು ಆಗಾಗ ಸಂಭವಿಸುತ್ತದೆ ಮತ್ತು ಕಳೆದ ಐದು ಶತಮಾನಗಳಲ್ಲಿ ಸುಮಾರು ಹದಿನೈದು ಇಂತಹ ಸೋಂಕಿನ ಪ್ರಕರಣಗಳು ಆಗಿರುವ ಅಂದಾಜಿದೆ. ಸಂಶೋಧಕರು ಕಂಡುಕೊಂಡಿರುವ ಮತ್ತೊಂದು ಅಂಶವೆಂದರೆ ಈ ಪ್ರಕರಣಗಳ ಸೋಂಕಿನ ತೀವ್ರತೆಯು ನಿರ್ಧಾರವಾಗುವುದು ಇದು ಯಾವ ಸಮುದಾಯದಲ್ಲಿ ಪ್ರಾರಂಭವಾಗುತ್ತದೆ ಎನ್ನುವುದರಿಂದ. ಉದಾಹರಣೆಗೆ 1890ರ ನಂತರದಲ್ಲಿ ಮನುಕುಲವು ಅನುಭವಿಸಿರುವ ಐದು ಸಾಂಕ್ರಾಮಿಕ ಸೋಂಕುಗಳಲ್ಲಿ 1918ರ ಪ್ರಕರಣವನ್ನು ಹೊರತುಪಡಿಸಿ, ಮತ್ತಾವ ಸೋಂಕು ಸಹ ಎರಡು ಕೋಟಿಗಿಂತ ಹೆಚ್ಚು ಜನರ ಸಾವಿಗೆ ಕಾರಣವಾಗಿಲ್ಲ. ಹಾಗಾಗಿ 1918ರ ಸೋಂಕನ್ನು ಅಪವಾದವೆಂದೇ ಹೇಳಬೇಕು. ಇದಕ್ಕೆ ವಿವರಣೆಯಾಗಿ ಮೊದಲನೆಯ ಮಹಾಯುದ್ಧದ ನಂತರದ ಪರಿಸ್ಥಿತಿಯನ್ನೆ ಸಂಶೋಧಕರು ನೀಡುತ್ತಾರೆ.

1918 ಮೊದಲನೆಯ ಮಹಾಯುದ್ಧದ ಕಡೆಯ ವರ್ಷ. ಈ ಯುದ್ಧ ನಡೆದದ್ದು ಯೂರೋಪ್ ಮತ್ತು ಮಧ್ಯಪ್ರಾಚ್ಯದ ಸೀಮಿತ ಪ್ರದೇಶಗಳಲ್ಲಾದರೂ ಸಹ, ಅದರ ಪರಿಣಾಮವು ಜಗತ್ತಿನ ಇತರ ಭಾಗಗಳಲ್ಲಿಯೂ ಕಾಣಿಸಿತು. ಉದಾಹರಣೆಗೆ, ಭಾರತದ ಸೈನಿಕರು ಬ್ರಿಟಿಷ್ ಸೈನ್ಯದಲ್ಲಿ ಭರ್ತಿಯಾಗಿದ್ದರು ಮತ್ತು ಭಾರತದಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಬ್ರಿಟನ್ನಿನ ಯುದ್ಧ ಸಿದ್ಧತೆಯಲ್ಲಿ ಯಥೇಚ್ಛವಾಗಿ ಬಳಸಲಾಯಿತು. ಈ ಅಂಶಗಳು ಸಾಂಕ್ರಾಮಿಕ ಪಿಡುಗನ್ನು ಮತ್ತು ಭಾರತೀಯರು ಅದನ್ನು ಅನುಭವಿಸದ ಬಗೆಯನ್ನು ರೂಪಿಸಿದವು. ಭಾರತದ ಅಂದಿನ ಆರ್ಥಿಕ ದುಸ್ಥಿತಿ ಮತ್ತು ಸ್ವಾತಂತ್ರ÷್ಯ ಹೋರಾಟಗಳು ಸಹ ಈ ಪಿಡುಗಿನ ಪ್ರಭಾವದಿಂದ ಹೊರತಾಗಿರಲಿಲ್ಲ.

ಹಸಿವು ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. 1918ರಲ್ಲಿ ಹಸಿವು ಜಗತ್ತಿನ ಹಲವಾರು ಭಾಗಗಳಲ್ಲಿ ಸಾಮಾನ್ಯವಾಗಿಬಿಟ್ಟಿತ್ತು. ಇದಕ್ಕೆ ಒಂದು ಕಾರಣವೆಂದರೆ ಸಾಮಾನು ಪೂರೈಕೆ ವ್ಯವಸ್ಥೆಗಳು ಯುದ್ಧದ ಸಮಯದಲ್ಲಿ ಮುರಿದುಬಿದ್ದದ್ದು. ಕ್ಷಯ ಮತ್ತು ಟೈಫಾಯಡುಗಳಂತಹ ಸಾಂಕ್ರಾಮಿಕ ರೋಗಗಳು ಆಗಲೆ ಮಾನವ ಸಮುದಾಯಗಳನ್ನು ಪ್ರವೇಶಿಸಿದ್ದವು. ಯುದ್ಧಕಾಲದ ಸಮಸ್ಯೆಗಳು ಈ ರೋಗಗಳ ಹರಡುವಿಕೆಗೆ ಸಹಕಾರಿಯಾಗಿದ್ದವು. ಮಿಗಿಲಾಗಿ ಈ ರೋಗಗಳು ಬಂದಿದ್ದವರು ದುರ್ಬಲರಾಗಿದ್ದರು ಮತ್ತು ಅಂತಹವರಲ್ಲಿ ಹೊಸದೊಂದು ಉಸಿರಾಟದ ಸೋಂಕು ತಗುಲುವ ಅಪಾಯ ಹೆಚ್ಚಿತ್ತು. ಅಪಾರ ಸಂಖ್ಯೆಯಲ್ಲಿ ಜನರು, ಅದರಲ್ಲಿಯೂ ಸೈನಿಕರು ಮತ್ತು ನಿರಾಶ್ರಿತರು, ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುತ್ತಿದ್ದರು. ಹೀಗಾಗಿ, ಸೋಂಕು ಹರಡಲು ಅನುಕೂಲಕರವಾದ ಪರಿಸ್ಥಿತಿಯೂ ಉಗಮಿಸಿತ್ತು.

ಈ ಮಧ್ಯೆ 1918ರಲ್ಲಿ ಒಂದು ಗುಂಪು ಎಲ್ಲಿಯೂ ಹೋಗಲು ಸಾಧ್ಯವಿಲ್ಲದೆ ಇದ್ದದ್ದು ಕೂಡ ಒಂದು ಮಾರಕವಾದ ಸೂಕ್ಷ್ಮಾಣು ಪಸರಿಸಲು ಮತ್ತು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಲು ಸಹಕಾರಿಯಾಗಿರಬಹುದು. ಈ ಸೂಕ್ಷ್ಮಾಣು ವೆಸ್ಟರ್ನ್ ಫ್ರಂಟ್ ಎಂದೆ ಪ್ರಖ್ಯಾತವಾಗಿರುವ ಯುದ್ಧಭೂಮಿಯನ್ನು ತಲುಪಿದಾಗ, ಅಲ್ಲಿದ್ದ ಲಕ್ಷಾಂತರ ಯುವಸೈನಿಕರು ವಾರಗಳು ಮತ್ತು ತಿಂಗಳುಗಳ ಕಾಲ ಎಲ್ಲಿಯೂ ಹೋಗಲಿಲ್ಲ. ವೆಸ್ಟರ್ನ್ ಫ್ರಂಟ್ ಎಂದರೆ ಯೂರೋಪಿನಲ್ಲಿ ಬೆಲ್ಜಿಯಮ್‌ನಿಂದ ಸ್ವಿಟ್ಝರಲ್ಯಾಂಡವರೆಗಿದ್ದ ಫ್ರಾನ್ಸ್ ಮತ್ತು ಜರ್ಮನಿಗಳ ನಡುವಿನ ಹದಿನಾರು ಕಿಲೊಮೀಟರ್ ಅಗಲವಿದ್ದ ಕಂದರಗಳ ಜಾಲವ್ಯವಸ್ಥೆ. ಇಂತಹ ಅಪರೂಪದ ಪರಿಸ್ಥಿತಿಯಲ್ಲಿ ವೈರಸ್ ತನ್ನ ಉಗ್ರತೆಯನ್ನು ಕಡಿಮೆಮಾಡಿಕೊಳ್ಳುವಂತೆ ಸಾಮಾನ್ಯವಾಗಿ ಇರುವ ವಿಕಸನ ವ್ಯವಸ್ಥೆಯ ಒತ್ತಡವು ಕಡಿಮೆಯಾಗಿರಬಹುದು ಎಂದು ಜೀವಶಾಸ್ತçಜ್ಞರು ವಾದಿಸುತ್ತಾರೆ. ವೈರಸ್ಸಿನ ಸೋಂಕು ಕಂದರಗಳ ಮೂಲಕ ಚಲಿಸುತ್ತ, ಸೈನಿಕರ ಸಾವಿಗೆ ಕಾರಣವಾಗುತ್ತ ಹರಡಿತು.

ಜ್ವರದ ಸೋಂಕಿಗೆ ಒಂದು ಲಾಕ್ಷಣಿಕ ಸ್ವರೂಪವಿದ್ದು, ಜಗತ್ತನ್ನು ಅವು ಹಲವು ಅಲೆಗಳಲ್ಲಿ ಆವರಿಸಿಕೊಳ್ಳುತ್ತವೆ. ಹರಿಕಾರ (ಹೆರಾಲ್ಡ್) ಅಲೆಯೆಂದೆ ಕರೆಯಲ್ಪಡುವ ಮೊದಲ ಅಲೆಯು ಸಾಧಾರಣವಾಗಿ ಸಾಮಾನ್ಯ ಜ್ವರದಂತೆಯೆ ಕಾಣುವ ಸೌಮ್ಯವಾದ ಸೋಂಕಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಮತ್ತಷ್ಟು ತೀವ್ರವಾದ ಎರಡನೆಯ ಅಲೆಯು ಹಿಂಬಾಲಿಸುತ್ತದೆ ಮತ್ತು ಹಲವು ಸಂದರ್ಭಗಳಲ್ಲಿ, ವಿಭಿನ್ನ ತೀವ್ರತೆಯನ್ನು ಹೊಂದಿರುವ ತದನಂತರದ ಅಲೆಗಳು ಮರುಕಳಿಸಬಹುದು. 1918ರ ಫ್ಲೂ ಸೋಂಕು, ಹೆಚ್ಚು ವಿಷಪೂರಿತವಾಗಿದ್ದರೂ ಸಹ, ಈ ಮಾದರಿಗೆ ಹೊರತಾಗಿರಲಿಲ್ಲ. 1918ರ ವಸಂತದಲ್ಲಿ ಯೂರೋಪಿನಲ್ಲಿ ಸೌಮ್ಯವಾದ ಹರಿಕಾರ ಅಲೆಯು ಕಾಣಿಸಿಕೊಂಡಿತು. ಆ ವರ್ಷದ ಎರಡನೆಯ ಭಾಗದಲ್ಲಿ ಹೆಚ್ಚು ತೀವ್ರ ಮತ್ತು ಅಪಾಯಕರವಾದ ಎರಡನೆಯ ಅಲೆಯು ಸಂಭವಿಸಿತು. 1919ರ ಪ್ರಾರಂಭದ ತಿಂಗಳುಗಳಲ್ಲಿ ಮರುಕಳಿಸಿದ ಮೂರನೆಯ ಮತ್ತು ಅಂತಿಮ ಅಲೆಯು ತೀವ್ರತೆಯಲ್ಲಿ ಈ ಎರಡರ ಮಧ್ಯದಲ್ಲಿತ್ತು.

1918ರ ಫ್ಲೂ ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು ಜೂನ್ ತಿಂಗಳಿನಲ್ಲಿ. ಸೋಂಕಿನ ಪ್ರವೇಶವಾಗಿದ್ದು ಬಾಂಬೆ ನಗರದ ಮೂಲಕ. ಅಲ್ಲಿಂದ ಅದು ಪಂಜಾಬ್ ಮತ್ತು ಸಂಯುಕ್ತ ಸಂಸ್ಥಾನ (ಇಂದಿನ ಉತ್ತರ ಪ್ರದೇಶ)ಗಳಿಗೆ ಜುಲೈ ಮತ್ತು ಆಗಸ್ಟ್ ಗಳಲ್ಲಿ ಹರಡಿತು. ನಂತರ ಅದರ ಪ್ರಭಾವ ತಗ್ಗಿತ್ತು. ಸೆಪ್ಟಂಬರ್ ಅಂತ್ಯದಲ್ಲಿ ಸೋಂಕಿನ ಎರಡನೆಯ ಅಲೆಯು ಮತ್ತೆ ಕಾಣಿಸಿಕೊಂಡಾಗ, ಈ ಫ್ಲೂವನ್ನು ಅದೆ ರೋಗವೆಂದು ಗುರುತಿಸಲು ಸಹ ಕಷ್ಟವಾಗಿತ್ತು. ವಸಂತ ಮತ್ತು ಬೇಸಿಗೆಗಳ ನಡುವೆ ಈ ವೈರಸ್ ಒಂದು ನಿರ್ಣಾಯಕವಾದ ರೂಪಾಂತರವನ್ನು ಹೊಂದಿತು ಎಂದು ಸಂಶೋಧಕರು ನಂಬುತ್ತಾರೆ. ಈ ರೂಪಾಂತರವು ವೆಸ್ಟರ್ನ್ ಫ್ರಂಟಿನ ಕಂದರಗಳಲ್ಲಿ ಆಗಿರಬಹುದು ಎನ್ನಲಾಗುತ್ತದೆ.

ಅದೇನೆ ಇರಲಿ, ವೈರಸ್ ಅಂತೂ ಅತ್ಯಂತ ಅಪಾಯಕಾರಿಯಾಯಿತು. ಈ ಅಲೆಯು ಅಕ್ಟೋಬರಿನಲ್ಲಿ ತನ್ನ ಉತ್ತುಂಗವನ್ನು ತಲುಪಿ, ಡಿಸೆಂಬರಿನಲ್ಲಿ ಕಡಿಮೆಯಾಯಿತು. 1919ರ ಪ್ರಾರಂಭದಲ್ಲಿ ಅದು ಮತ್ತೊಮ್ಮೆ ಕಾಣಿಸಿಕೊಂಡಿತು. ಆರೋಗ್ಯ ಇತಿಹಾಸವನ್ನು ಅಭ್ಯಸಿಸುವ ಮೃದುಲಾ ರಾಮಣ್ಣ ಅವರು 1998ರಲ್ಲಿ ಆಗ ನಮಗೆ ತಿಳಿದಿದ್ದ ಮಾಹಿತಿಯನ್ನು ಆಧರಿಸಿ ಭಾರತೀಯ ಫ್ಲೂ ಅನುಭವವನ್ನು ಹೀಗೆ ಸಂಕ್ಷಿಪ್ತವಾಗಿ ಹೇಳಿದರು: “ಶಿಮ್ಲಾದ ಬೆಟ್ಟಪ್ರದೇಶವಾಗಲಿ, ಬಾಂಬೆಯಂತಹ ಆಧುನಿಕ ನಗರಗಳಲ್ಲಿದ್ದ ಶುಭ್ರ, ನಿರ್ಮಲ ಬಡಾವಣೆಗಳಿರಲಿ, ಅಹಮದಾಬಾದಿನ ಕೊಳೆಗೇರಿಗಳಿರಲಿ ಅಥವಾ ಒಂಟಿ ಹಳ್ಳಿಗಳಿರಲಿ, ದೇಶದ ಯಾವ ಭಾಗವೂ ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ”. ನಂತರದ ಎರಡು ದಶಕಗಳಲ್ಲಿ ನಾವು ಅರಿತಿರುವುದು ಏನೆಂದರೆ ದೇಶದ ಎಲ್ಲ ಭಾಗಗಳನ್ನೂ ಒಂದೇ ರೀತಿಯಲ್ಲಿ, ಸಮಾನವಾಗಿ ಈ ಸೋಂಕು ಪೀಡಿಸಲಿಲ್ಲ.

2008ರ ಸರಿಸುಮಾರಿನಲ್ಲಿ, ಭಾರತೀಯ ಸಂಜಾತ ಆರೋಗ್ಯ ಅರ್ಥಶಾಸ್ತ್ರಜ್ಞ ಸಿದ್ಧಾರ್ಥ ಚಂದ್ರ ಮಿಶಿಗನ್ ರಾಜ್ಯ ವಿಶ್ವವಿದ್ಯಾನಿಲಯದ ಏಷ್ಯನ್ ಅಧ್ಯಾಯನ ಕೇಂದ್ರದ ನಿರ್ದೇಶಕರಾದರು. ಅಲ್ಲಿಯ ತನಕ ಅವರು 1918ರ ಫ್ಲೂ ಸೋಂಕಿನ ಬಗ್ಗೆ ಹೆಚ್ಚು ಗಮನ ನೀಡಿರಲಿಲ್ಲ. ಅವರ ಆಸಕ್ತಿಯಿದ್ದುದು ಮತ್ತೊಂದು ಪ್ರಶ್ನೆಯಲ್ಲಿ: ಸರ್ಕಾರಗಳು ಅಫೀಮು ಇತ್ಯಾದಿ ಮಾದಕ ವಸ್ತುಗಳನ್ನು ಸೀಮಿತವಾಗಿ ಸರಬರಾಜು ಮಾಡಿ, ಹೆಚ್ಚಿನ ವರಮಾನವನ್ನು ಹೇಗೆ ಗಳಿಸುತ್ತಿದ್ದವು? ಇದಕ್ಕೆ ಉತ್ತರ ಹುಡುಕುತ್ತ, ಅವರು ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಡಚ್ಚರ ಅಧೀನದಲ್ಲಿದ್ದ ಇಂಡೋನೇಷ್ಯವನ್ನು ಅಧ್ಯಯನ ಮಾಡುತ್ತಿದ್ದರು. ಇದೇ ಕಾಲದಲ್ಲಿ ಭಾರತದಲ್ಲಿನ ಜನಸಂಖ್ಯಾಗಣತಿಯ ಅಂಕಿಅಂಶಗಳು ಉತ್ತಮ ಗುಣಮಟ್ಟದವು ಎಂದು ಅರಿತು, ತಮ್ಮ ಸಂಶೋಧನೆಯನ್ನು ಭಾರತದತ್ತ ಬದಲಿಸಿದರು. ಕೂಡಲೆ ಅವರು ಒಂದು ವಿಚಿತ್ರ ವಿದ್ಯಮಾನವನ್ನು ಗಮನಿಸಿದರು. 1911 ಮತ್ತು 1921ರ ನಡುವೆ ವಸಾಹತುಶಾಹಿ ಸರ್ಕಾರವು ನಡೆಸಿದ ಜನಗಣತಿಯಲ್ಲಿ ಭಾರತದ ಜನಸಂಖ್ಯೆಯು ನಿರೀಕ್ಷಿತ ಗತಿಯಲ್ಲಿ ಬೆಳೆದಿರಲಿಲ್ಲ. ಇದಕ್ಕೆ ಕಾರಣವು 1918ರ ಫ್ಲೂ ಇರಬೇಕು ಎಂದು ಚಂದ್ರ ಸಂಶಯಪಟ್ಟರು.

“ಇಂದು ಜಗತ್ತಿನ ಶೇ 60ರಷ್ಟು ಜನರು ಏಷ್ಯಾದಲ್ಲಿಯೆ ವಾಸಿಸುತ್ತಾರೆ. ಆದರೂ 2008ಲ್ಲಿ ಸಹ ಅಲ್ಲಿ 1918ರ ಫ್ಲೂ ಮಾಡಿದ ಪರಿಣಾಮದ ಬಗ್ಗೆ ಹೆಚ್ಚು ಸಂಶೋಧನೆ ನಡೆದಿರಲಿಲ್ಲ. ಶ್ರೀಮಂತ ದೇಶಗಳಲ್ಲಿ ಏನಾಯಿತು ಎನ್ನುವುದರ ಬಗ್ಗೆ ಆ ದೇಶಗಳಲ್ಲಿಯೆ ಸಂಶೋಧನೆ ನಡೆದಿತ್ತು” ಎಂದು ಸಿದ್ಧಾರ್ಥ ಚಂದ್ರ ನನಗೆ ತಿಳಿಸಿದರು. ಇದನ್ನು ಸರಿಪಡಿಸಲು ಅವರು ನಿರ್ಧರಿಸಿದರು. ಅವರ ಮೊದಲ ಕೆಲಸವೆಂದರೆ ಭಾರತದ ಆರೋಗ್ಯ ಮತ್ತು ನೈರ್ಮಲ್ಯದ ಕಮೀಷನರ್ ಅವರ 1918ರ ವಾರ್ಷಿಕ ವರದಿಯನ್ನು ತರಿಸಿ ಓದುವುದು ಆಗಿತ್ತು. “ಅದೊಂದು ತುಂಬ ಕುತೂಹಲಕಾರಿ ಕೃತಿಯಾಗಿತ್ತು. ನಾನು ಒಂದು ಇಡೀ ರಾತ್ರಿ ಕುಳಿತು ಅದನ್ನು ಮೊದಲಿನಿಂದ ಕಡೆಯ ತನಕ ಓದಿ ಮುಗಿಸಿದೆ” ಎಂದರು ಚಂದ್ರ. ಕೇವಲ ಗಂಗಾ ನದಿ ಮಾತ್ರವಲ್ಲ, ಭಾರತದ ಎಲ್ಲ ನದಿಗಳೂ ಸಹ ಶವಗಳಿಂದ ತುಂಬಿಬಿಟ್ಟಿದ್ದವು ಎಂದು ಅವರು ಕಂಡುಕೊಂಡರು. ಅಲ್ಲಿನ ಕಥನಗಳು ಕಣ್ಣಿಗೆ ಕಟ್ಟುವಂತೆ ಮತ್ತು ಭಯಾನಕವಾಗಿದ್ದವು. ಈ ವಿವರಣೆಗಳ ನಡುವೆ ಕೆಲವು ಖಚಿತವಾದ ಮತ್ತು ನಂಬಲರ್ಹವಾದ ಅಂಕಿಅಂಶಗಳು ಇದ್ದವು.

2012ರಲ್ಲಿ ಪ್ರಕಟವಾದ ಸಂಶೋಧನೆಯಲ್ಲಿ ಚಂದ್ರ ಮತ್ತು ಅವರ ಸಹೋದ್ಯೋಗಿಗಳು ಸುಮಾರು 1.8 ಕೋಟಿ ಭಾರತೀಯರು 1918ರ ಫ್ಲೂಗೆ ಬಲಿಯಾಗಿರಬಹುದು ಎಂದು ಅಂದಾಜು ಮಾಡಿದರು. ಈ ಸಂಖ್ಯೆಯು ಅಂದಿನ ಭಾರತದ ಜನಸಂಖ್ಯೆಯ ಶೇ 6ರಷ್ಟು ಆಗಿತ್ತು. ಇದಕ್ಕಿಂತ ಹೆಚ್ಚಿನ ಸಾವಿನ ಪ್ರಮಾಣ ಕೆಲವು ಸಣ್ಣ ದೇಶಗಳಲ್ಲಿ ಕಂಡುಬಂದರೂ, ಹಲವಾರು ಶ್ರೀಮಂತ, ಮುಂದುವರಿದ ದೇಶಗಳಲ್ಲಿ ಸಾವಿನ ಪ್ರಮಾಣವು ಸುಮಾರು ಶೇ 1ರಷ್ಟು ಮಾತ್ರ ಇತ್ತು.

ಚಂದ್ರ ಮತ್ತು ಅವರ ತಂಡವು ಫ್ಲೂ ಸೋಂಕು ಭಾರತದಲ್ಲಿ ಹೇಗೆ ಹರಡಿತು ಎನ್ನುವುದನ್ನು ಭೂಪಟದ ಮೇಲೆ ತೋರಿಸುವತ್ತ ಗಮನ ಹರಿಸಿದರು. ಆಗ ಅವರು ಕುತೂಹಲಕರವಾದ ಅಂಶವನ್ನು ಕಂಡುಕೊಂಡರು. 1918ರ ಸೆಪ್ಟಂಬರಿನಲ್ಲಿ ಬಾಂಬೆಯಲ್ಲಿ ಫ್ಲೂನ ಎರಡನೆಯ ಅಲೆಯು ಆಗಮಿಸಿತು. ಆಗ ಸೋಂಕನ್ನು ಭಾರತಕ್ಕೆ ತಂದವರು ಯೂರೋಪಿನಿಂದ ಆಗ ತಾನೆ ವಾಪಸಾಗುತ್ತಿದ್ದ ಸೋಂಕು ತಗುಲಿದ್ದ ಸೈನಿಕರು. ಆ ಸಂದರ್ಭದಲ್ಲಿ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದನ್ನು ಅಂಕಿಅಂಶಗಳು ತೋರಿಸುತ್ತವೆ. ಇದರಿಂದ ನಮಗೆ ತಿಳಿಯುವುದಿಷ್ಟೆ: ಸೋಂಕು ಈ ಪಶ್ಚಿಮ ಪ್ರಾಂತ್ಯದ ಮೂಲಕ ಶೀಘ್ರವಾಗಿ ಮತ್ತು ಮಾರಕವಾಗಿ ಚಲಿಸಿತು. ಅದರೆ ಉತ್ತರ ಮತ್ತು ಪೂರ್ವಕ್ಕೆ ಹೋದಂತೆ, ಸೋಂಕು ನಿಧಾನವಾಗಿ ಚಲಿಸಿತು ಮತ್ತು ಸೋಂಕಿತರನ್ನು ಬಲಿ ಪಡೆಯುವ ಪ್ರಮಾಣವೂ ಕಡಿಮೆಯಾಯಿತು. ಕಲ್ಕತ್ತವನ್ನು ತಲುಪುವ ವೇಳೆಗೆ ಬಾಂಬೆಗೆ ಹೋಲಿಸಿದರೆ ಅದಕ್ಕಿದ್ದ ಕೆಡುಕನ್ನು ಉಂಟುಮಾಡುವ ಶಕ್ತಿಯು ಕಡಿಮೆಯಾಗಿತ್ತು.

ಈ ವಿದ್ಯಮಾನವನ್ನು ವಿವರಿಸಲು ಪ್ರಸ್ತುತದಲ್ಲಿರುವ ಮೂರು ಸಿದ್ಧಾಂತಗಳನ್ನು ಸಿದ್ಧಾರ್ಥ ಚಂದ್ರ ಮುಂದಿಡುತ್ತಾರೆ. ಮೊದಲಿಗೆ, ದೇಶದ ವಿವಿಧ ಭಾಗಗಳಲ್ಲಿನ ಭಿನ್ನವಾದ ಹವಾಮಾನ ಪರಿಸ್ಥಿತಿಗಳು ಈ ಸೋಂಕು ಪಿಡುಗನ್ನು ರೂಪಿಸಿದವು. ಎರಡನೆಯದಾಗಿ, ಸೋಂಕು ಬರುತ್ತಿರುವುದನ್ನು ಕಂಡ ಪೂರ್ವದ ಜನರು ತಮ್ಮ ನಡವಳಿಕೆಗಳನ್ನು ಬದಲಿಸಿಕೊಂಡು ತಮ್ಮ ರಕ್ಷಣೆ ಮಾಡಿಕೊಂಡಿರಬಹುದು. ಉದಾಹರಣೆಗೆ, ಮನೆಯೊಳಗೆ ಇರುವುದು. ಇಂತಹ ನಡವಳಿಕೆಗಳನ್ನು ಸೋಂಕು ಮೊದಲು ಪ್ರವೇಶಿಸಿದ ಪಶ್ಚಿಮದ ಜನರು ಅನುಸರಿಸಿರಲಿಲ್ಲ. ಚಂದ್ರರಿಗೆ ವೈಯಕ್ತಿಕವಾಗಿ ಒಲವು ಇರುವುದು ಮೂರನೆಯ ವಿವರಣೆಯ ಕಡೆಗೆ: “ಸೋಂಕು ದೇಶವನ್ನು ಆವರಿಸುತ್ತಿದ್ದಂತೆ, ನಾವು ವೈರಸ್ ವಿಕಾಸಗೊಳ್ಳುತ್ತಿರುವುದನ್ನು, (ತನ್ನ ಉಗ್ರತೆಯನ್ನು ಕಳೆದುಕೊಂಡು) ಮಿತವಾಗುತ್ತಿರುವುದನ್ನು ಕಾಣಬಹುದು”

ಈ ಅಂಕಿಅಂಶಗಳಿಗಿಂತ ಭಿನ್ನವಾದ ಚಿತ್ರವನ್ನು ಕಟ್ಟಿಕೊಡುವ ಇನ್ನಿತರ ಮಾದರಿಗಳು ಸಹ ಇವೆ. ಉದಾಹರಣೆಗೆ, ಎರಡನೆಯ ಅಲೆಯು ಉತ್ತರದ ಮುಖ್ಯವಾದ ಸೈನ್ಯತಾಣವಾದ ಬಾಂಬೆಯಲ್ಲಿ ಮೊದಲು ಉಗಮಿಸಿತು. ಆದರೆ ಸ್ವಲ್ಪವೆ ಸಮಯದಲ್ಲಿ ಅಲ್ಲಿಂದ ದಕ್ಷಿಣಪೂರ್ವದಲ್ಲಿರುವ ಮದ್ರಾಸಿನಲ್ಲಿ ಕಾಣಿಸಿಕೊಂಡಿತು. ಮದ್ರಾಸ್ ಸಹ ಒಂದು ದಂಡಿನ ಪಟ್ಟಣ. ಅಲ್ಲಿಗೆ ಸೋಂಕು ಬಾಂಬೆಯ ಮೂಲಕ ರೈಲುಗಳ ಮೂಲಕ ಬಂದಿತೊ ಅಥವಾ ನೇರವಾಗಿ ಮತ್ತೊಂದು ಸೈನಿಕರನ್ನು ತಂದ ಹಡಿಗಿನಿಂದ ಹರಡಿತೊ ಎನ್ನುವುದು ನಿರ್ದಿಷ್ಟವಾಗಿ ತಿಳಿದಿಲ್ಲ. ಹಾಗೆಯೆ, ಪೂರ್ವತೀರದಲ್ಲಿರುವ ಹಿಂದು ಪುಣ್ಯಕ್ಷೇತ್ರವಾದ ಪುರಿಯಲ್ಲಿ ಸಹ ಸೋಂಕು ಕಾಣಿಸಿಕೊಂಡಿತು. ಇದನ್ನು ಪಶ್ಚಿಮದಿಂದ ಬಂದ ತೀರ್ಥಯಾತ್ರಿಗಳೆ ತಂದಿರಬೇಕು. ಇಂದಿನಂತೆ ಅಂದು ಸಹ ಭಾರತದಲ್ಲಿಯೆ ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದ ಉತ್ತರಪ್ರದೇಶವು ಸುಮಾರು ಮೂವತ್ತು ಲಕ್ಷಕ್ಕಿಂತ ಹೆಚ್ಚು ಜನರನ್ನು ಕಳೆದುಕೊಂಡಿತು.

ಆಗ ನಿರಾಲ ಮತ್ತು ಮುನ್ಷಿ ಪ್ರೇಮಚಂದ್ ಇಬ್ಬರೂ ವಾಸಿಸುತ್ತಿದ್ದ ಈ ರಾಜ್ಯವನ್ನು ಗಂಗಾ ನದಿಯು ಇಬ್ಬಾಗಿಸುತ್ತಿತ್ತು. ಚಂದ್ರ ಅವರು ಹೇಳುವಂತೆ: “ನದಿಯ ಉತ್ತರಕ್ಕೆ ಮತ್ತು ಪರ್ವತಗಳಿಗೆ ಹತ್ತಿರದಲ್ಲಿದ್ದ ಭಾಗಗಳಿಗೆ ಸೋಂಕು ತಡವಾಗಿ ತಲುಪಿದರೆ, ಎಲ್ಲ ಮುಖ್ಯ ರೈಲ್ವೆ ಮಾರ್ಗಗಳಿಗೆ ಹತ್ತಿರದಲ್ಲಿದ್ದ ದಕ್ಷಿಣದಲ್ಲಿ ಸೋಂಕು ಮೊದಲಿಗೆ ಆಗಮಿಸಿತು”.

ಹೀಗೆ ಭೂಪ್ರದೇಶ ಮತ್ತು ಮನುಷ್ಯರು ಈ ಪ್ರದೇಶಗಳನ್ನು ಹೇಗೆ ಮಾರ್ಪಡಿಸಿಕೊಂಡಿದ್ದರು ಎನ್ನುವುದು ಸೋಂಕಿನ ಹರಡುವಿಕೆಯನ್ನು ಪ್ರಭಾವಿಸಿತು. ರೈಲ್ವೆ ಮಾರ್ಗಗಳು ವೈರಸ್ ಪರಿಣಾಮಕರವಾಗಿ ಹಬ್ಬುವಂತೆ ಮಾಡಿದವು. ಇಂತಹ ರೈಲ್ವೆ ಮಾರ್ಗಗಳಿಂದ ಸಂಪರ್ಕಿತವಾಗಿದ್ದ ಮತ್ತು ಜನದಟ್ಟಣೆಯನ್ನು ಹೊಂದಿದ್ದ ನಗರಗಳು ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಿನ ಸೋಂಕನ್ನು ಕಂಡವು. ಅಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳು ಸಹ ತಮ್ಮ ಪ್ರಭಾವವನ್ನು ಬೀರಿದವು. ವಸಾಹತುಶಾಹಿ ಸರ್ಕಾರವು ಸಿದ್ಧಪಡಿಸಿದ್ದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಅಷ್ಟೇನು ಉತ್ತಮವಾದುದು ಆಗಿರಲಿಲ್ಲ. ಹಲವಾರು ವೈದ್ಯರು ಸಹ ಯುದ್ಧದಲ್ಲಿ ಭಾಗವಹಿಸಲು ತೆರಳಿದ್ದರು. ಮಿಗಿಲಾಗಿ 1918ರಲ್ಲಿ ಪಾಶ್ಚಿಮಾತ್ಯ ವೈದ್ಯಶಾಸ್ತ್ರವು ತೀವ್ರತರವಾದ ವಿಷಮಶೀತ ಜ್ವರವನ್ನು ಎದುರಿಸಲು ಅಷ್ಟೇನು ಸಿದ್ಧವಾಗಿರಲಿಲ್ಲ.

ವೈರಸ್ ಆಗ ಇನ್ನೂ ಹೊಸದಾದ ಪರಿಕಲ್ಪನೆಯಾಗಿತ್ತು. ಹಲವಾರು ವೈದ್ಯರು ಈ ಜ್ವರವನ್ನು ಬ್ಯಾಕ್ಟೀರಿಯಾಗಳಿಂದ ಬಂದಿರುವುದು ಎಂದು ಭಾವಿಸಿದ್ದರು. ಮುಂದುವರಿದ ಶ್ರೀಮಂತ ದೇಶಗಳಲ್ಲಿಯೂ ವ್ಯಾಕ್ಸೀನುಗಳು ಮತ್ತು ರೋಗನಿರೋಧಕ ಔಷಧಿಗಳು ಇರಲಿಲ್ಲ. ಸಾಮಾನ್ಯವಾಗಿ ಅವರು ಆಗ ಅದ್ಭುತ ಔಷಧಿಯೆಂದೆ ಪ್ರಖ್ಯಾತವಾಗಿದ್ದ ಆಸ್ಪರಿನ್ ಅನ್ನು ಲಭ್ಯವಿದ್ದರೆ ಕೊಡುತ್ತಿದ್ದರು. ಇಲ್ಲದಿದ್ದರೆ ಮತ್ತಷ್ಟು ನಂಬಲರ್ಹವಾಗದ ಔಷಧಿಗಳನ್ನು ನೀಡುತ್ತಿದ್ದರು. ಭಾರತದಲ್ಲಿಯಂತೂ ಪಾಶ್ಚಿಮಾತ್ಯ ವೈದ್ಯಶಾಸ್ತವನ್ನು ಹೆಚ್ಚಿನ ಜನರು ಒಪ್ಪಿರಲಿಲ್ಲ ಮತ್ತು ಸಾಮಾನ್ಯವಾಗಿ ಆಯುರ್ವೇದವನ್ನೆ ಬಳಸುತ್ತಿದ್ದರು. ಇವುಗಳೆರಡರಲ್ಲಿ ಫ್ಲೂ ವಿರುದ್ಧ ಯಾವುದು ಹೆಚ್ಚು ಪರಿಣಾಮಕಾರಿ ಎನ್ನುವುದು ಸ್ಪಷ್ಟವಿರಲಿಲ್ಲ. ಕೆಲವೊಮ್ಮೆ ಎರಡೂ ಪದ್ಧತಿಯ ಔಷಧಿಗಳಿಂದ ದುಷ್ಪರಿಣಾಮವಾದದ್ದು ಇದೆ. ಸಾವು ಮತ್ತು ಬದುಕುಗಳ ನಡುವೆ ಸ್ಪಷ್ಟವಾದ ಮತ್ತು ಗುರುತಿಸಲು ಸಾಧ್ಯವಾಗುವ ವ್ಯತ್ಯಾಸವನ್ನು ಮಾಡಿದ್ದು ಕೇವಲ ನರ್ಸಿಂಗ್ ಸೇವೆ ಮಾತ್ರ. ಆದರೆ 1918ರಲ್ಲಿ ನರ್ಸಿಂಗ್ ಇನ್ನೂ ಶೈಶವಾವಸ್ಥೆಯಲ್ಲಿತ್ತು.

“ಸೋಂಕು ಭಾರತದಲ್ಲಿ ಹರಡಿದಾಗ ಅದನ್ನು ಎದುರಿಸಲು ದೇಶವು ಮಾಡಿಕೊಂಡಿದ್ದ ತಯಾರಿ ಕನಿಷ್ಟಪ್ರಮಾಣದ್ದಾಗಿತ್ತು,” ಎಂದು ಮೃದುಲಾ ರಾಮಣ್ಣ ಗುರುತಿಸುತ್ತಾರೆ. ಇತಿಹಾಸಕಾರ ಶೇಖರ್ ಬಂಡೋಪಾಧ್ಯಾಯ ಹೇಳುವಂತೆ 20ನೆಯ ಶತಮಾನದ ಪ್ರಾರಂಭದಲ್ಲಿ ದೇಶದ ಹಲವೆಡೆ ಕ್ಷಾಮದ ಪರಿಸ್ಥಿತಿಯಿತ್ತು ಮತ್ತು ಈ ಕೆಟ್ಟ ಪರಿಸ್ಥಿತಿಯನ್ನು 1918ರ ಮಾನ್ಸೂನ್ ವೈಫಲ್ಯವು ಮತ್ತಷ್ಟು ಕೆಡಿಸಿತು. 1918ರ ಸೆಪ್ಟಂಬರಿನಲ್ಲಿ ಸೋಂಕಿನ ಎರಡನೆಯ ಅಲೆಯು ಪ್ರಾರಂಭವಾದಾಗ, ದೇಶವು ತೀವ್ರ ಬರವನ್ನು ಅನುಭವಿಸುತ್ತಿತ್ತು. ಅಮೆರಿಕಾದ ಕ್ರೈಸ್ತ ಪಾದ್ರಿಯೊಬ್ಬರು ವರದಿ ಮಾಡುತ್ತಾರೆ: “ಜನರು ನೀರನ್ನು ಬೇಡುತ್ತಿದ್ದರು. ನೀರಿಗಾಗಿ ಹೊಡೆದಾಡಿದರು. ನೀರನ್ನು ಕದ್ದರು”.

ವರ್ಷದ ಮೊದಲನೆಯ ಬೆಳೆಯನ್ನು ಕಟಾವು ಮಾಡಬೇಕಿತ್ತು ಮತ್ತು ಎರಡನೆಯ ಬೆಳೆಯ ಬಿತ್ತನೆಯಾಗಬೇಕಿತ್ತು. ಆದರೆ ಅಪಾರ ಸೋಂಕಿತರ ನಡುವೆ ಈ ಕೆಲಸಗಳನ್ನು ಮಾಡಲು ಅಗತ್ಯವಿದ್ದ ಕೆಲಸಗಾರರು ಲಭ್ಯವಿರಲಿಲ್ಲ. ವಸಾಹತುಶಾಹಿ ವ್ಯವಸ್ಥೆಯು ದೇಶದೊಳಗಿನ ಬಿಕ್ಕಟ್ಟುಗಳಿಗೆ ಯಾವುದೆ ಪರಿಹಾರ ಒದಗಿಸಲಿಲ್ಲ, ಗೋಧಿ ಮತ್ತು ಅಕ್ಕಿಗಳನ್ನು ಚಳಿಗಾರದವರೆಗೂ ಸೈನಿಕರಿಗೆ ಒದಗಿಸಲೆಂದು ದೇಶದಾಚೆಗೆ ಕಳುಹಿಸಿತು. ಹಣದುಬ್ಬರ, ಅದರಲ್ಲಿಯೂ ಆಹಾರ ಪದಾರ್ಥಗಳ ಬೆಲೆಗಳು, ಹೆಚ್ಚಿತು ಎಂದು ಇತಿಹಾಸಕಾರ ಬಂಡೋಪಾಧ್ಯಾಯ ವಿವರಿಸುತ್ತಾರೆ. ಅಕ್ಟೋಬರ್ 1918ರಲ್ಲಿ ಸೋಂಕಿನ ಎರಡನೆಯ ಅಲೆಯು ತನ್ನ ಉತ್ತುಂಗವನ್ನು ತಲುಪುವ ಹೊತ್ತಿಗೆ, ಜನರು ಚಲಿಸುತ್ತಿದ್ದ ರೈಲುಗಳನ್ನು ಪ್ರವೇಶಿಸಿ ಆಹಾರ ಪದಾರ್ಥಗಳನ್ನು ಕದಿಯುತ್ತಿದ್ದರು ಮತ್ತು ಹಸಿದ ನಿರಾಶ್ರಿತರು ಬಾಂಬೆಯನ್ನು ಪ್ರವಾಹೋಪಾದಿಯಲ್ಲಿ ಪ್ರವೇಶಿಸಿದರು.

“ಈ ಕಾಲದಲ್ಲಿ ಎಲ್ಲ ವಲಯಗಳಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಅಸಮಾಧಾನ ಹಬ್ಬಿತು,” ಎಂದು ಬಂಡೋಪಾಧ್ಯಾಯ ಹೇಳುತ್ತಾರೆ. ಅಸಮಾಧಾನ ಎಲ್ಲೆಡೆ ಇದ್ದರೂ, ಕೆಲವು ಭಾಗಗಳಲ್ಲಿ ಜ್ವರವು ದೊಡ್ಡ ಹೊಡೆತ ನೀಡಿತು. ಪ್ರಪಂಚದಾದ್ಯಂತ, ಈ ಫ್ಲೂ ಕೇವಲ ಹಿರಿಯರು ಮತ್ತು ಮಕ್ಕಳನ್ನು ಮಾತ್ರವಲ್ಲ, 20ರಿಂದ 40ರ ವಯಸ್ಸಿನ ಪುರುಷರನ್ನೂ ಗುರಿಮಾಡಿಕೊಂಡಿತು. ಇನ್ನೂ ನಮಗೆ ಸ್ಪಷ್ಟವಾಗಿ ಅರ್ಥವಾಗಿಲ್ಲದ ಕಾರಣಗಳಿಗೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಮತ್ತು ಅದರ ಪರಿಣಾಮವಾಗಿ ಬಲಿಯಾಗಲಿಲ್ಲ. ಇದಕ್ಕೆ ಒಂದು ಅಪವಾದವೆಂದರೆ ಗರ್ಭಿಣಿಯರು. ಅವರ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಪಾತ ಮತ್ತು ಸಾವನ್ನು ಕಾಣಬಹುದು. ಆದರೆ ಭಾರತದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಪುರುಷರಿಗಿಂತಲೂ ಹೆಚ್ಚು ದುರ್ಬಲರಾಗಿದ್ದರು. ಪುರುಷರಿಗೆ ಕುಟುಂಬದ ಸಂಪನ್ಮೂಲಗಳು ಹೆಚ್ಚು ದೊರಕುತ್ತಿದ್ದುದು ಒಂದು ಕಾರಣವಾಗಿದ್ದರೆ ಮತ್ತೊಂದೆಡೆ ಮಹಿಳೆಯರು ಸೋಂಕಿತರ ಶುಶ್ರೂಷೆ ಮಾಡುತ್ತಿದ್ದುದು ಮತ್ತೊಂದು ಕಾರಣವಿರಬಹುದು.

ಮತ್ತೊಂದು ಜಾಗತಿಕ ಮಾದರಿ ನಮಗೆ ಕಂಡುಬರುತ್ತದೆ. ಅದೇನೆಂದರೆ ಬಡವರು ಮತ್ತು ಕೆಲಸಗಾರರು ಅನುಕೂಲಸ್ಥರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ಬಲಿಯಾದರು. ಇದಕ್ಕೆ ಕಾರಣಗಳು ಹೀಗಿರಬಹುದು. ಬಡವರಿಗೆ ಉತ್ತಮ ಗುಣಮಟ್ಟದ ಆಹಾರವು ದೊರಕದೆ ಇರುವುದು, ದಟ್ಟಣೆಯ ಮತ್ತು ಅನಾರೋಗ್ಯ ವಾತಾವರಣಗಳಲ್ಲಿ ವಾಸ ಮಾಡುತ್ತಿದ್ದುದು ಹಾಗೂ ಆರೋಗ್ಯಸೇವೆಗಳು ಲಭ್ಯವಿಲ್ಲದೆ ಇದ್ದುದು. ಸಾಮಾಜಿಕ ಬಹಿಷ್ಕಾರವು ಸಹ ತನ್ನ ಪಾತ್ರವನ್ನು ವಹಿಸಿತು. ಗುಜರಾತಿನ ಕಾಡುಗಳಲ್ಲಿ ವಾಸಿಸುತ್ತಿದ್ದ ಡಾಂಗ್ ಬುಡಕಟ್ಟುಗಳ ಜನರು ತಮ್ಮ ಸಂಖ್ಯೆಯ ಹೆಚ್ಚಿನ ಭಾಗವನ್ನು ಕಳೆದುಕೊಂಡರು ಎಂದು ಇತಿಹಾಸಕಾರ ಡೇವಿಡ್ ಹಾರ್ಡಿಮನ್ ಹೇಳುತ್ತಾರೆ.

ಸೋಂಕಿನ ಬಿಕ್ಕಟ್ಟು ಮುಗಿಯುವ ಸಮಯದಲ್ಲಿ, ಭಾರತದ ಸ್ಯಾನಿಟರಿ ಕಮೀಷನರ್ ಇದೊಂದು ‘ರಾಷ್ಟ್ರೀಯ ಬಿಕ್ಕಟ್ಟು’ ಎಂದು ಗುರುತಿಸಿದರು. ಆದರೆ ಅದು ಉತ್ತುಂಗದಲ್ಲಿದ್ದಾಗಲೆ, ಸರ್ಕಾರವು ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ತಿಳಿದು, ಸಹಾಯವನ್ನು ಕೋರಿತು. ಇಂತಹ ಸಹಾಯವು ಬಂದದ್ದು ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಸಂಘಟನೆಗಳಿಂದ. ಉದಾಹರಣೆಗೆ, ಗುಜರಾತ್ ಸಭಾ. ಇಂತಹ ಸಂಘಟನೆಗಳು ಸಾಮಾಜಿಕ ಸುಧಾರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದವು. ಆ ಮೂಲಕ ಸ್ಥಳೀಯವಾದ ಜಾತಿ ಮತ್ತು ಸಮುದಾಯದ ಸಂಘಟನೆಗಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಜ್ಜುಗೊಳಿಸುತ್ತಿದ್ದವು. ಗುಜರಾತಿನ ಸೂರತ್ ಜಿಲ್ಲೆಯಲ್ಲಿ ಕಲ್ಯಾಣಜಿ ಮತ್ತು ಕುನ್ವರಜಿ ಮೆಹ್ತಾ ಸಹೋದರರು ನಡೆಸಿದ ಫ್ಲೂ ಸಂಬಂಧಿತ ಕಾರ್ಯಕ್ರಮಗಳ ಮೂಲಕ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಸಹಾಯ ಮಾಡಿದರು ಎಂದು ಅಂದಾಜಿಸಲಾಗಿದೆ.

1918ರ ಹೊತ್ತಿಗೆ, ಗಾಂಧೀಜಿಯನ್ನು ಭಾರತದ ಬೌದ್ಧಿಕ ವಲಯಗಳಲ್ಲಿ ದೇಶದ ಭವಿಷ್ಯದ ನಾಯಕ ಎಂದು ಗುರುತಿಸಲಾಗಿತ್ತು. ಆದರೆ ಅವರಿಗೆ ತಳಮಟ್ಟದ ಬೆಂಬಲ್ ಇನ್ನೂ ದೊರಕಿರಲಿಲ್ಲ. 1918ರ ವಸಂತದಲ್ಲಿ, ಅವರು ತಮ್ಮ ಮೊದಲ ಎರಡು ಸತ್ಯಾಗ್ರಹಗಳನ್ನು ಅವರು ತಮ್ಮ ತವರು ರಾಜ್ಯವಾದ ಗುಜರಾತಿನಲ್ಲಿ ನಡೆಸಿದ್ದರು. ಆದರೆ ಇವು ಹಲವು ಸಾವಿರ ಜನರನ್ನು ಒಳಗೊಂಡಿದ್ದವು, ನೂರಾರು ಸಾವಿರ ಜನರನ್ನು ಅಲ್ಲ. 1918ರ ಸೆಪ್ಟಂಬರಿನಲ್ಲಿ ಫ್ಲೂ ಮರುಕಳಿಸಿದಾಗ, ಅವರಿಗೂ ಸೋಂಕು ತಗುಲಿತು. ಜೊತೆಗೆ ಅವರ ಆಶ್ರಮದ ಹಲವಾರು ಹಿರಿಯ ಸದಸ್ಯರು ಸಹ ಸೋಂಕಿಗೊಳಗಾದರು. ಸ್ವತಃ ಗಾಂಧೀಜಿಗೆ ಓದಲು ಮತ್ತು ಬರೆಯಲು ಆಗದಷ್ಟು ಜ್ವರವಿತ್ತು. ಅವರು ತಮ್ಮ ಆತ್ಮಚರಿತ್ರೆಯಲ್ಲಿ ಮುಂದೆ ಬರೆಯುವಂತೆ, “ಬದುಕಿನಲ್ಲಿ ಎಲ್ಲ ಆಸಕ್ತಿಯೂ ಮುಗಿದಿತ್ತು.”

ನವೆಂಬರಿನಲ್ಲಿ ಮೊದಲನೆಯ ಮಹಾಯುದ್ಧವು ಮುಗಿದಾಗ, ಗಾಂಧೀಜಿ ಇನ್ನೂ ಚೇತರಿಸಿಕೊಂಡಿರಲಿಲ್ಲ. ಅವರಲ್ಲಿ ಸುಧಾರಣೆ ಕಾಣದಿರುವುದಕ್ಕೆ ಕಾರಣವೆಂದರೆ ಬಹುಶಃ ಅವರಿಗೆ ನ್ಯುಮೋನಿಯ ಬಂದಿದ್ದಿರಬಹುದು. ಕದನವಿರಾಮದ ಹಿಂದೆಯೆ ರೌಲಟ್ ವರದಿ ಪ್ರಕಟವಾಯಿತು. ಆ ವರದಿಯಲ್ಲಿ ನ್ಯಾಯಮೂರ್ತಿ ಸಿಡ್ನಿ ರೌಲಟ್ ಮಾರ್ಷಲ್ ಲಾ (ಸಮರಕಾಲದ ಕಾನೂನು) ಅನ್ನು ಮುಂದುವರೆಸಲು ಶಿಫಾರಸು ಮಾಡಿದರು. ಯುದ್ಧಕಾಲದಲ್ಲಿ, ನಾಗರಿಕ ಹಕ್ಕುಗಳನ್ನು ಅಮಾನತು ಮಾಡಲಾಗಿತ್ತು. ಇದರ ಪರಿಣಾಮವೆಂದರೆ ಭಾರತೀಯರನ್ನು ಯಾವುದೆ ನ್ಯಾಯಾಲಯದ ಪ್ರಕ್ರಿಯೆಗೆ ಒಳಗೊಡಿಸದೆ ಬಂಧನದಲ್ಲಿ ಇರಿಸಬಹುದಿತ್ತು. ಯುದ್ಧದ ನಂತರ ಭಾರತೀಯರು ಹೆಚ್ಚಿನ ಸ್ವಾತಂತ್ರ÷್ಯವನ್ನು ನಿರೀಕ್ಷಿಸಿದರೆ, ಅವರಿಗೆ ಹೆಚ್ಚು ದಬ್ಬಾಳಿಕೆ ದೊರಕಿತು. ಬಂಡೋಪಾಧ್ಯಾಯ ಹೇಳುತ್ತಾರೆ: “1918ರಿಂದ ಭಾರತದಾದ್ಯಂತ ಸಾಮಾಜಿಕ ಮತ್ತು ರಾಜಕೀಯ ಅಶಾಂತಿ ಇತ್ತು ಮತ್ತು ಇದರ ಸಾಮಾಜಿಕ ಹಿನ್ನೆಲೆಯೆಂದರೆ ಸೋಂಕು ಮತ್ತು ಬರ.”

1919ರ ಫೆಬ್ರವರಿಯಲ್ಲಿ ರೌಲಟರ ಬಿಲ್ ಶಾಸನವಾಯಿತು. ಗಾಂಧೀಜಿ ಇನ್ನೂ ದುರ್ಬಲರಾಗಿದ್ದರು: “ನಾನು ಆ ಸಮಯದಲ್ಲಿ ಸಭೆಗಳಲ್ಲಿ ದನಿಯೆತ್ತರಿಸಿ ಮಾತನಾಡಲು ಸಾಧ್ಯವಿರಲಿಲ್ಲ. ನನ್ನ ಇಡೀ ಶರೀರವು ನಡುಕುತ್ತಿತ್ತು ಮತ್ತು ಮಾತನಾಡಲು ಪ್ರಯತ್ನಿಸುತ್ತಿದ್ದಂತೆ ತೀವ್ರ ನಡುಕ ಶುರುವಾಗುತ್ತಿತ್ತು.” ಆದರೆ ಈ ಐತಿಹಾಸಿಕ ಸವಾಲನ್ನು ಎದುರಿಸದೆ ಇರುವ ಪ್ರಶ್ನೆಯೆ ಇರಲಿಲ್ಲ. ರೌಲಟ್ ಶಾಸನದ ವಿರುದ್ಧ ಪ್ರತಿಭಟಿಸಲು ಗಾಂಧೀಜಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು.

ರೌಲಟ್ ಕಾಯಿದೆಯ ವಿರುದ್ಧದ ಸತ್ಯಾಗ್ರಹವು ಅಂತಿಮ ಘಟ್ಟವನ್ನು ತಲುಪಿದ್ದು 1919ರ ಏಪ್ರಿಲ್ 13ರಂದು, ಜನರಲ್ ಡಯರ್ ಅಮೃತಸರದ ಜಲಿಯನವಾಲಾಬಾಗಿನಲ್ಲಿ ಭಾರತೀಯರ ಗುಂಪಿನ ಮೇಲೆ ಗುಂಡು ಹಾರಿಸಲು ಆಜ್ಞೆ ಮಾಡಿದಾಗ. ಅ ದುರಂತ ಘಟನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರ ಹತ್ಯೆಯಾಯಿತು. 1920ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ವಿಶೇಷ ಅಧಿವೇಶನವನ್ನು ನಡೆಸಲಾಯಿತು. ಕಾಂಗ್ರೆಸ್ ದೇಶಾದ್ಯಂತ ಸತ್ಯಾಗ್ರಹವನ್ನು ಒಂದು ವರ್ಷ ಕಾಲ ನಡೆಸಿದರೆ ಸ್ವರಾಜ್ ಗಳಿಸಿಕೊಡುವುದಾಗಿ ಗಾಂಧೀಜಿ ಭರವಸೆ ನೀಡಿದರು. 1921ರಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಸತ್ಯಾಗ್ರಹದಲ್ಲಿ ಭಾಗವಹಿಸಿದರು ಎಂದು ಅಂದಾಜು ಮಾಡಲಾಗಿದೆ. ಗಾಂಧೀಜಿಯ ಭರವಸೆಯು ಪೂರ್ಣವಾಗದಿದ್ದರೂ ಅವರು ತಳಮಟ್ಟದ ಬೆಂಬಲವನ್ನು ಹೊಂದಿದ್ದ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದರು.

ಅಮೃತಸರದ ದುರಂತ ಘಟನೆಗಳು ನಡೆದ ಹತ್ತು ದಿನಗಳ ನಂತರದಲ್ಲಿ ‘ಯಂಗ್ ಇಂಡಿಯಾ’ ನಿಯತಕಾಲಿಕದಲ್ಲಿ ಒಂದು ಸಂಪಾದಕೀಯವು ಪ್ರಕಟವಾಯಿತು. ದೇಶದ ಅಂದಿನ ಹತಾಶ ಮನಸ್ಥಿತಿಯನ್ನು ಪ್ರತಿಫಲಿಸುತ್ತಿದ್ದ ‘ಸಾರ್ವಜನಿಕ ಆರೋಗ್ಯ’ ಎಂಬ ಶೀರ್ಷಿಕೆಯ ಈ ಸಂಪಾದಕೀಯದಲ್ಲಿ ಸರ್ಕಾರವು ದೇಶದಲ್ಲಿ ಅರವತ್ತು ಲಕ್ಷ ಜನರನ್ನು (ಇವು ಅಂದಿನ ಅಂದಾಜು ಅಂಕಿಅಂಶಗಳು) ವಿಷಮಶೀತ ಜ್ವರಕ್ಕೆ ಬಲಿಯಾಗಲು ಬಿಟ್ಟಿತು. ಹೀಗಿರುವಾಗ, ಇನ್ನು ಕೆಲವರು ಬುಲೆಟಿಗೆ ಬಲಿಯಾದರೆ ನಾವು ಖೇದಿಸಬೇಕಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಲಾಯಿತು. 1921ರಲ್ಲಿ ಈ ಹತಾಶ ಭಾವನೆಗೆ ನಿರಾಲ ತಮ್ಮದೆ ಆದ ರೀತಿಯಲ್ಲಿ ಅಭಿವ್ಯಕ್ತಿ ನೀಡಿದರು. ‘ಭಿಕ್ಷುಕ’ ಎಂಬ ಶೀರ್ಷಿಕೆಯ ಕವನವೊಂದರಲ್ಲಿ ಈ ಕೆಳಗಿನ ಸಾಲುಗಳನ್ನು ಅವರು ಬರೆದರು:

ಅವರ ತುಟಿಗಳು ಹಸಿವಿನಿಂದ ಸುರುಟಿದಂತೆ

ಏನು ಪರಿಹಾರ

ವಿಧಿಯ ಉದಾರಿ ಪ್ರಭುವಿನಿಂದ?

ಸರಿ, ಅವರು ತಮ್ಮ ಕಣ್ಣೀರನ್ನೆ ಕುಡಿಯಬಹುದು.

ಪ್ರಪಂಚವು ಕ್ರೂರಿ ಮತ್ತು ಅದರಲ್ಲಿ ಭಾವನಾತ್ಮಕತೆಗೆ ಯಾವುದೆ ಸ್ಥಳವಿಲ್ಲ ಎಂದು ನಿರಾಲ ತಿಳಿದಿದ್ದರು. ಅವರ ಕಾಲದ ಮತ್ತೊಬ್ಬ ಶ್ರೇಷ್ಠ ಸಾಹಿತಿ ಮತ್ತು ಸೋಂಕಿನಿಂದ ಬದುಕುಳಿದಿದ್ದ ಮುನ್ಷಿ ಪ್ರೇಮಚಂದ್ ಸಾಮಾನ್ಯ ಜನರ ಬದುಕಿನ ವಾಸ್ತವವನ್ನು ಚಿತ್ರಿಸುತ್ತಲೆ ತಮ್ಮ ಹೆಸರನ್ನು ಗಳಿಸಿದರು. ಸರಿಪಡಿಸದ ಮತ್ತು ಕೆಲವೊಮ್ಮೆ ಗಮನಕ್ಕೂ ಬರದ ಅನ್ಯಾಯಗಳ ಚಿತ್ರಣವು ಅವರ ಕಥೆಗಳಲ್ಲಿ ಯಥೇಚ್ಛವಾಗಿದೆ. 1918ರ ಸುಮಾರಿನಲ್ಲಿ ಉತ್ತರಪ್ರದೇಶವನ್ನು ಫ್ಲೂ ಆವರಿಸಿದ್ದಾಗ, ‘ಗ್ರಾಮೀಣ ಬದುಕಿನ ಚಿತ್ರಗಾರ’ನಾಗುವ ತೀರ್ಮಾನವನ್ನು ಪ್ರೇಮಚಂದ್ ಮಾಡಿದರು.

ರಾಜಕೀಯ ಮತ್ತು ಕಲಾ ಕ್ಷೇತ್ರಗಳೆರಡರಲ್ಲಿಯೂ, ಈ ಸೋಂಕು ತನ್ನ ಗುರುತನ್ನು ಬಿಟ್ಟಿತಲ್ಲದೆ, ಭಾರತವನ್ನೂ ಗಾಢವಾಗಿ ಪ್ರಭಾವಿಸಿತು. ಎಷ್ಟು ಮಂದಿ ಭಾರತೀಯರು 1918ರ ಫ್ಲೂಗೆ ಬಲಿಯಾದರು ಎಂದು ಲೆಕ್ಕ ಹಾಕುವಾಗ, ಸಿದ್ಧಾರ್ಥ ಚಂದ್ರ ಪತ್ತೆ ಹಚ್ಚಿದ್ದು ಮತ್ತೊಂದು ಗುಟ್ಟನ್ನು: ಜನಸಂಖ್ಯೆಯು ತದನಂತರದ ದಿನಗಳಲ್ಲಿ ಹಿಂದಿಗಿಂತ ಹೆಚ್ಚು ವೇಗದಲ್ಲಿ ವರ್ಧಿಸಿತು. 1919ರಲ್ಲಿ ಸುಮಾರು ಶೇ 30ರಷ್ಟು ಪ್ರಮಾಣದಲ್ಲಿ ಜನನವು ಕಡಿಮೆಯಾಯಿತು. 1920ರಲ್ಲಿ ಜನನದ ಪ್ರಮಾಣವು ಹೆಚ್ಚಾಗತೊಡಗಿತು. ಇದನ್ನು ಜಗತ್ತಿನ ಎಲ್ಲೆಡೆ ನಾವು ಕಾಣುತ್ತೇವೆ. ಈ ವಿದ್ಯಮಾನವನ್ನು ವಿವರಿಸಲು ಹೊಸದೊಂದು ಸಿದ್ಧಾಂತವನ್ನು ಸಂಶೋಧಕರು ಮುಂದಿಡುತ್ತಿದ್ದಾರೆ. ಅದೇನೆಂದರೆ ದುರ್ಬಲರಾಗಿದ್ದವರನ್ನು ಬಲಿತೆಗೆದುಕೊಂಡ ಜ್ವರವು ಕಡಿಮೆ ಸಂಖ್ಯೆಯಲ್ಲಿದ್ದರೂ ಗಟ್ಟಿಯಾಗಿದ್ದ ಮತ್ತು ಒಳ್ಳೆಯ ಆರೋಗ್ಯವನ್ನು ಹೊಂದಿದ್ದ ಜನರನ್ನು ಉಳಿಸಿತು. 1920ರ ದಶಕದಲ್ಲಿ ಭಾರತದಲ್ಲಿ ನಾವು ಕಾಣುವ ಜನಸಂಖ್ಯಾ ಹೆಚ್ಚಳಕ್ಕೆ ಇದು ಕಾರಣವಿರಬಹುದು.

ಹೀಗೆ ವೈಯಕ್ತಿಕ ದುರಂತಗಳು ಮತ್ತು ಸಾಮೂಹಿಕ ಚೈತನ್ಯ, ದೃಢತೆಗಳು ಆ ದಿನಗಳ ಭಾರತದ ಕಥೆಯನ್ನು ರೂಪಿಸಿದವು. ಆದರೆ 1918ರ ವಿಷಮಶೀತ ಜ್ವರದ ಸೋಂಕು ನಮಗೆ ಹಲವು ಇತರೆ ಪಾಠಗಳನ್ನು ಸಹ ಕಲಿಸಿತು. ಇಂತಹ ಸಾಂಕ್ರಾಮಿಕ ರೋಗಗಳನ್ನು ಹರಡುವ ಸೂಕ್ಷಾ÷್ಮಣುಗಳ ಮುಂದೆ ಯಾವುದೆ ರಾಷ್ಟವು ಸಹ ಒಂದು ದ್ವೀಪವಲ್ಲ. ಮತ್ತೊಂದು ಸಾಂಕ್ರಾಮಿಕ ಪಿಡುಗು ಅನಿವಾರ್ಯ ಮತ್ತು ಸನ್ನಿಹಿತ ಎನ್ನುವುದು ನಮಗೆ ಗೊತ್ತು. ವಿಜ್ಞಾನಿಗಳು ಮತ್ತು ಸಾರ್ವಜನಿಕ ಆರೋಗ್ಯಗಳ ಪರಿಣತರು ಇದಕ್ಕೆ ನಮ್ಮನ್ನು ಸಿದ್ಧಪಡಿಸುತ್ತಿದ್ದಾರೆ ಸಹ. ಆದರೆ ಅವರು ಸಹ ಇದು ಯಾವಾಗ, ಎಲ್ಲಿ ಮತ್ತು ಹೇಗೆ ಉಗಮವಾಗಬಹುದು, ಇದು ಎಷ್ಟು ಕೆಟ್ಟದಿರಬಹುದು ಎನ್ನುವುದನ್ನು ತಿಳಿಸಲು ಆಗುತ್ತಿಲ್ಲ.

ಬಹುಶಃ 1918ರ ಬಹುಮುಖ್ಯ ಪಾಠವೆಂದರೆ ಸೋಂಕು ಏಕಕಾಲದಲ್ಲಿ ಜೀವಶಾಸ್ತ್ರೀಯ ಮತ್ತು ಸಾಮಾಜಿಕವಾದ ವಿದ್ಯಮಾನ. ಇದರ ಪರಿಣಾಮಗಳು ಜೀವಶಾಸ್ತ್ರೀಯ ಮತ್ತು ಸಾಮಾಜಿಕ ಎರಡೂ ಆಗಿರುತ್ತವೆ. ಇವುಗಳಲ್ಲಿ ಯಾವುದೆ ಒಂದನ್ನು ನಾವು ನಿರ್ಲಕ್ಷಿಸಿದರೂ ಸಹ, ನಮಗೆ ಗಂಡಾಂತರ ತಪ್ಪಿದ್ದಲ್ಲ.

Leave a Reply

Your email address will not be published.