1947 ರ ವಜ್ರಮಹೋತ್ಸವ: ದೇಶದ ಆರ್ಥಿಕತೆಯೆಲ್ಲೆಡೆ ಸಾಗಿದೆ..?

ಮೋಹನದಾಸ್

ಒಕ್ಕೂಟ ಸರ್ಕಾರದ ಸ್ವದೇಶಿ ನೀತಿ, ಆತ್ಮನಿರ್ಭರ್ ನೀತಿ, ಆಮದು ಪರ್ಯಾಯ ಹುಡುಕುವ ನೀತಿ ಹಾಗೂ ಹಣಕಾಸು ನೀತಿಗಳು 1991 ರಿಂದ ಇಲ್ಲಿಯವರೆಗೆ ನಡೆದುಬಂದ ಆರ್ಥಿಕ ಸುಧಾರಣೆಯ ಹಾದಿಗೆ ವಿರುದ್ಧವಾಗಿವೆ. ಆದರೆ ನರೇಂದ್ರ ಮೋದಿ ಸರ್ಕಾರಕ್ಕೆ ತನ್ನ ತಪ್ಪುಗಳನ್ನು ಅರಿಯುವ ಸಾಮಥ್ರ್ಯವಿದೆ. ತಪ್ಪುಗಳನ್ನು ತಿದ್ದಿಕೊಳ್ಳುವ ಸಾಮಥ್ರ್ಯವೂ ಇದೆ. ಆದಕಾರಣ ಮುಂದಿನ ಮೂರು ವರ್ಷಗಳಲ್ಲಿ ಆರ್ಥಿಕ ಸುಧಾರಣೆಯ ಮತ್ತು ಮುಕ್ತ ಸ್ಪರ್ಧಾತ್ಮಕ ಆರ್ಥಿಕತೆಯ ರಾಜಹಾದಿಗೆ ಮರಳುವ ಸಾಧ್ಯತೆಯಲ್ಲಿ ದೇಶದ ಪ್ರಗತಿ ನಿರ್ಭರವಾಗಲಿದೆ.

1700 ನೇ ಇಸವಿಯಲ್ಲಿ ವಿಶ್ವದ ಒಟ್ಟು ಜಿಡಿಪಿಯಲ್ಲಿ ಭಾರತದ ಪಾಲು ಸುಮಾರು 22.6% ಇತ್ತಂತೆ. ಇದು ಬ್ರಿಟಿಷ್ ಆಡಳಿತದಲ್ಲಿ ಕುಗ್ಗುತ್ತಾ ಕಡಿಮೆಯಾಗುತ್ತಾ ಬಂದು 1952 ರಲ್ಲಿ ವಿಶ್ವದ ಜಿಡಿಪಿಯ ಶೇಕಡ 3.8% ಆಗಿತ್ತಂತೆ. ಸಂಪದ್ಭರಿತ ಕೃಷಿ ಮತ್ತು ಗುಡಿಕೈಗಾರಿಕೆಗಳಿಂದ 20 ನೆಯ ಶತಮಾನದವರೆಗೂ ಭಾರತದ ಆರ್ಥಿಕತೆ ಬೇರೆಲ್ಲಾ ದೇಶಗಳಿಗಿಂತ ಸಮೃದ್ಧವಾಗಿತ್ತು. ಬ್ರಿಟಿಷರು ಭಾರತವನ್ನು ಕೇವಲ ಕಚ್ಚಾ ಪದಾರ್ಥ ಸರಬರಾಜು ಮಾಡುವ ದೇಶ ಎಂದು ಪರಿಗಣಿಸಿದ ಹಾಗೂ 20 ನೆಯ ಶತಮಾನದ ಮೊದಲರ್ಧದಲ್ಲಿ ಭಾರತದ ಕೈಗಾರಿಕಾ ಕ್ರಾಂತಿಯನ್ನು ನಿರ್ಲಕ್ಷಿಸಿದ ಕಾರಣಗಳಿಂದ ಉಳಿದ ದೇಶಗಳ ಉತ್ಪಾದಕತೆ ಹತ್ತಿಪ್ಪತ್ತು ಪಟ್ಟು ಹೆಚ್ಚಾದ ಸಮಯದಲ್ಲಿ ಭಾರತದ ಉತ್ಪಾದಕತೆ ನಿಂತ ನೀರಾಗಿತ್ತು. ಹೀಗೆ 20 ನೆಯ ಶತಮಾನದ ಮಧ್ಯಭಾಗದ ಸಮಯಕ್ಕೆ ಭಾರತ ಅತ್ಯಂತ ಕಡಿಮೆ ತಲಾ ಆದಾಯ ಗಳಿಸುವ ಏಷ್ಯಾಆಫ್ರಿಕಾ ದೇಶಗಳಲ್ಲಿ ಒಂದಾಗಿತ್ತು.

ಎರಡನೇ ಮಹಾಯುದ್ಧ ದೇಶೀಯ ಉತ್ಪಾದಕತೆಗೆ ತುಸುವಾದರೂ ಪೂರಕ ವಾತಾವರಣ ಮೂಡಿಸಿದ್ದರೂ ಒಟ್ಟಾರೆಯ ಆರ್ಥಿಕತೆಯಿನ್ನೂ ಕೃಷಿ ಪ್ರಧಾನವಾಗಿಯೇ ಉಳಿದಿತ್ತು. ಸಂದರ್ಭದಲ್ಲಿ ಗಾಂಧಿ ಹತ್ಯೆ, ಪಟೇಲ್ ನಿಧನ ಮತ್ತು ಅಂಬೇಡ್ಕರ್ರವರ ಕಾಂಗ್ರೆಸ್ ವಿರೋಧಿ ನಿಲುವು ಅಂದಿನ ಪ್ರಧಾನಿ ಜವಹರಲಾಲ್ ನೆಹರೂರವರಿಗೆ ದೇಶದ ಆರ್ಥಿಕತೆ ರೂಪಿಸುವ ಪ್ರಶ್ನಾತೀತ ಸ್ಥಾನ ನೀಡಿದ್ದವು. ನೆಹರೂರವರ ವ್ಯಕ್ತಿತ್ವ ಹಾಗೂ ಅರ್ಹತೆಗಳು ಅಂದಿನಸಾಮಾನ್ಯರಟೀಕೆಗಳಿಂದ ಅವರನ್ನು ಪ್ರತ್ಯೇಕಿಸಿದ್ದವು. ನೆಹರೂ ನಡೆದ ದಾರಿಯೇ ಹೆದ್ದಾರಿ, ನೆಹರೂ ಉವಾಚವೇ ಅಂತಿಮ ಹಾಗೂ ನೆಹರೂ ಗ್ರಹಿಕೆಯೇ ಪರಮಸತ್ಯ ಎಂಬ ವಾತಾವರಣದಲ್ಲಿನೆಹರೂ ಸಮಾಜವಾದವನ್ನು ಸುಲಭವಾಗಿ ಟೀಕಿಸುವ ದಾಷ್ರ್ಟತೆ ಬೇರಾರಿಗೂ ಬರಲಿಲ್ಲ.

ಭಾರತಕ್ಕೆ ನೆಹರೂ ಸಮಾಜವಾದದ ಹೇರಿಕೆ:

1940 ಮತ್ತು 50 ದಶಕಗಳಲ್ಲಿ ವಿಶ್ವದಾದ್ಯಂತ ಕಮ್ಯುನಿಸಮ್ ಮತ್ತು ಸಮಾಜವಾದದ ಚರ್ಚೆಗಳೇ ನಡೆದಿದ್ದವು. ವಿಶ್ವದಾದ್ಯಂತ ಕಮ್ಯುನಿಸ್ಟ್ ಸರ್ಕಾರಗಳು ಉಗಮವಾಗುವುದು ಸಾರ್ವತ್ರಿಕ ಸತ್ಯ ಹಾಗೂ ಅನಿವಾರ್ಯವೆನ್ನುವ ಸಮಯದಲ್ಲಿ ನೆಹರೂ ಪ್ರತಿಪಾದಿಸಿದ ಸಮಾಜವಾದ ಅತ್ಯಂತ ಮೃದು ಪ್ರಮಾಣದ ಸಮತಾವಾದ ಎಂದೇ ಹೇಳಬೇಕು. ನೆಹರೂ ಸಮಾಜವಾದದ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡೋಣ.

  • 1950 ರಲ್ಲಿ ಸ್ಥಾಪಿತವಾದ ಯೋಜನಾ ಆಯೋಗದ ಅಡಿಯಲ್ಲಿ ಇಡೀ ದೇಶದ ಆರ್ಥಿಕ ಪ್ರಗತಿಗೆ ಪಂಚವಾರ್ಷಿಕ ಯೋಜನೆಗಳ ಗುರಿ. ಇದರಂತೆ ಎಲ್ಲ ಅಭಿವೃದ್ಧಿ ಸಾಧನಗಳು ಹಾಗೂ ಮಾಪಕಗಳು ಪಂಚವಾರ್ಷಿಕ ಯೋಜನೆಯಡಿ ಅಡಕ.

  • ನೀರಾವರಿಗಾಗಿ ಭಾಕ್ರಾನಂಗಲ್ನಂತಹಾ ಭಾರಿ ಯೋಜನೆಗಳು ಹಾಗೂ ಉಕ್ಕಿಗಾಗಿ ಭಿಲಾಯಿದುರ್ಗಾಪುರದಂತಹಾ ಯೋಜನೆಗಳು ಸಾರ್ವಜನಿಕ ಕ್ಷೇತ್ರದಲ್ಲಿ ಸ್ಥಾಪನೆ. ಸಾರ್ವಜನಿಕ ಉದ್ದಿಮೆಗಳಿಗೆ ದೇಶದ ಆರ್ಥಿಕತೆಯಲ್ಲಿ ಅತಿಪ್ರಮುಖ ಪಾತ್ರ.

  • 1956 ಕೈಗಾರಿಕಾ ನೀತಿಯಂತೆ ಮೂಲಭೂತ ಮತ್ತು ಸೂಕ್ಷ್ಮ ಕೈಗಾರಿಕೆಗಳೆಲ್ಲವೂ ಸಾರ್ವಜನಿಕ ಉದ್ದಿಮೆ ಕ್ಷೇತ್ರದಲ್ಲಿ ಮಾತ್ರ. ಬೇರೆ ಸಾಮಾನ್ಯ ಕೈಗಾರಿಕೆಗಳು ಆದಷ್ಟು ಸಾರ್ವಜನಿಕ ವಲಯದಲ್ಲಾದರೆ ಕೇವಲ ದಿನಬಳಕೆ ವಸ್ತುಗಳ ಉತ್ಪಾದನೆ ಖಾಸಗಿ ವಲಯದಲ್ಲಿ. ಖಾಸಗಿ ವಲಯ ಕೂಡಾ ಪರವಾನಗಿಕೋಟಾ ಪದ್ಧತಿಗೆ ಬದ್ಧ. ಇದರಂತೆ ಒಟ್ಟಾರೆ ಕೈಗಾರಿಕಾ ಕ್ಷೇತ್ರವೆಲ್ಲವೂ ಸಾರ್ವಜನಿಕ / ಸರ್ಕಾರಿ ವಲಯದಲ್ಲಿಯೇ.

ನೆಹರೂ ಸಮಾಜವಾದದ ಟೀಕಾಕಾರರು:

1952 ರಿಂದ 1964 ರವರೆಗೆ ದೇಶದ ಆರ್ಥಿಕತೆಯ ಬೆಳವಣಿಗೆ ಸುಮಾರು ಶೇಕಡಾ 3.6 ರಷ್ಟಿರುವುದನ್ನು ಹಲವು ಅರ್ಥಶಾಸ್ತ್ರಜ್ಞರು ಟೀಕಿಸಿದ್ದರು. ಚಕ್ರವರ್ತಿ ರಾಜಗೋಪಾಲಾಚಾರಿ ಹಾಗೂ ಬಿ.ಆರ್.ಶೆಣಾಯ್ ಇವರಲ್ಲಿ ಪ್ರಮುಖರು. ಶತಮಾನಗಳಿಂದ ಭಾರತವೆಂದೂ ಸಮಾಜವಾದದ ತತ್ವಗಳಿಗೆ ಒಳಪಟ್ಟಿರಲಿಲ್ಲ. ಇದಕ್ಕೆ ಬದಲಿಗೆ ಬಂಡವಾಳಶಾಹಿ ತತ್ವವಿಧಾನಗಳೆಲ್ಲವೂ ಭಾರತದಲ್ಲಿ ಶತಮಾನಗಳ ಕಾಲ ಉಪಯೋಗದಲ್ಲಿದ್ದವು. ಭಾರತೀಯ ಬ್ಯಾಂಕ್ ಪದ್ಧತಿ ಹಾಗೂ ಉದ್ಯಮಶೀಲತೆ ಅತ್ಯಂತ ಪಕ್ವ ಹಾಗೂ ನುರಿತ ಕಲೆಯಾಗಿತ್ತು. ಇಂತಹಾ ದೇಶದಲ್ಲಿ ವಿದೇಶದಿಂದ ಆಮದಾದ ಸಮಾಜವಾದಿ ಸಿದ್ಧಾಂತಗಳನ್ನು ಹೇರಿದ ನೆಹರೂರವರನ್ನು ಇವರು ಟೀಕಿಸಿದ್ದರು. ಆದರೆ ನೆಹರೂ ವ್ಯಕ್ತಿತ್ವದ ಆಕರ್ಷಣೆಯಲ್ಲಿ ಟೀಕೆಗಳು ಗೌಣವಾಗಿದ್ದವು. ಹೀಗೆ ದೇಶದಲ್ಲಿ ಸಾವಾಜನಿಕ ವಲಯ, ಲೈಸೆನ್ಸ್ ಪರ್ಮಿಟ್ ರಾಜ್ ಹಾಗೂ ಸರ್ಕಾರಿ ಯೋಜನೆಗಳ ಮುಖಾಂತರ ಪ್ರಗತಿ ಸಾಧಿಸುವ ತಪ್ಪು ದಾರಿಯನ್ನು ದೇಶ ಒಪ್ಪಿಕೊಂಡಿತ್ತು. ಇದರ ಜೊತೆಗೆ ಆಮದು ಪದಾರ್ಥಗಳಿಗೆ ಪರ್ಯಾಯ ಹುಡುಕುವಿಕೆಯ ಮನಸ್ಥಿತಿಯಲ್ಲಿ ಅದುವರೆಗಿನ ರಫ್ತು ನಿರ್ಭರ ಆರ್ಥಿಕತೆ ಇನ್ನಷ್ಟು ಅಂತರ್ಮುಖಿಯಾಗಿತ್ತು.

ಲಾಲ್ ಬಹಾದೂರ್ ಶಾಸ್ತ್ರಿ ಮತ್ತು ಹಸಿರು ಕ್ರಾಂತಿ:

1960 ಬರ ಪರಿಸ್ಥಿತಿ ಮತ್ತು 1962 ಚೀನಾದೊಡನೆಯ ಯುದ್ಧ ನೆಹರೂರವರ ರಾಜಕೀಯಆರ್ಥಿಕ ನೀತಿಗಳ ಸೀಮಿತತೆಯನ್ನು ಎತ್ತಿ ಹಿಡಿದಿತ್ತು. 1964 ರಲ್ಲಿ ಅಧಿಕಾರಕ್ಕೆ ಬಂದ ಲಾಲ್ ಬಹಾದೂರ್ ಶಾಸ್ತ್ರಿ ಸಾರ್ವಜನಿಕ ಸ್ವಾಮ್ಯದ ಹಾಗೂ ಯೋಜನಾಬದ್ಧ ಆರ್ಥಿಕತೆಯನ್ನು ಬಿಟ್ಟು ಮುಕ್ತ ಆರ್ಥಿಕತೆಯನ್ನು ಆರಿಸಿಕೊಳ್ಳಲು ಬಯಸಿದ್ದರು. ಇದೇ ಸಂದರ್ಭದಲ್ಲಿ ಶುರುವಾದಹಸಿರು ಕ್ರಾಂತಿಮತ್ತು ಹಾಲಿನ ಹೊಳೆಯಬಿಳಿ ಕ್ರಾಂತಿಗಳು ದೇಶದಲ್ಲಿ ಹಸಿವನ್ನು ನಿವಾರಿಸುವಲ್ಲಿ ಸಹಕಾರಿಯಾಗಿದ್ದವು. 1964 ರಿಂದ 1969 ರವರೆಗಿನ ಐದು ವರ್ಷಗಳಲ್ಲಿ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯವರ ಕಾಲದಲ್ಲಿ ಸಮಾಜವಾದದಿಂದ ಹಿಂದೆ ಸರಿದು ಮುಕ್ತ ಸ್ಪರ್ಧಾತ್ಮಕ ಆರ್ಥಿಕತೆಯನ್ನು ಒಪ್ಪಿಕೊಳ್ಳುವ ದಿಸೆಯಲ್ಲಿ ಚರ್ಚೆ ಆರಂಭವಾಗಿತ್ತು. ಕೈಗಾರಿಕೆಗಳಿಗೆ ಸಿಕ್ಕ ಮಹತ್ವ ಕೃಷಿ ಕ್ಷೇತ್ರಕ್ಕೆ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಕೂಡಾ ಸಿಗಬೇಕೆನ್ನುವ ಮಾತು ಕೇಳಿಬರುತ್ತಿತ್ತು. ಕಾಂಗ್ರೆಸ್ ಪಕ್ಷದ ನೀತಿಯನ್ನು ಪ್ರಭಾವಿಸುತ್ತಿದ್ದ ಕಾಮರಾಜ್, ಮೊರಾರ್ಜಿ ದೇಸಾಯಿ, ಚಿಮನ್ ಭಾಯಿ ಪಟೇಲ್, ವೀರೇಂದ್ರ ಪಾಟೀಲ್ ಮುಂತಾದವರು ದೇಶದ ಆರ್ಥಿಕತೆಗೆ ಜಡಿದಿದ್ದ ಸಂಕೋಲೆಗಳನ್ನು ಕಳಚಿ ಹಾಕಬಯಸಿದ್ದರು. ಆದರೆ ಆಶಾವಾದ ಬಹುಕಾಲ ಉಳಿಯಲಿಲ್ಲ. ಪ್ರಧಾನಿ ಇಂದಿರಾಗಾಂಧಿ ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಮತ್ತೆ ಸಮಾಜವಾದದ ಆರ್ಥಿಕತೆಯನ್ನು ಬಯಸಿದ್ದರು.

ಇಂದಿರಾ ಗಾಂಧಿಯವರ ಮೊದಲ ವರ್ಷಗಳು:

ಕೃಷಿ ಕ್ಷೇತ್ರಕ್ಕೆ ಮತ್ತು ಆದ್ಯತೆಯ ವಲಯಗಳಿಗೆ ಸೂಕ್ತ ಸಾಲಸೋಲ ಸಿಗುತ್ತಿಲ್ಲವೆಂಬ ಕಾರಣ ನೀಡಿ ಇಂದಿರಾಗಾಂಧಿಯವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರು. ಇದರ ಜೊತೆಗೆ ರೂಪಾಯಿಯನ್ನು ಅಪಮೌಲ್ಯೀಕರಣ ಕೂಡಾ ಮಾಡಿದ್ದರು. ಇದರಿಂದ 1964 ರಿಂದ ಮುಕ್ತ ಆರ್ಥಿಕತೆಗೆ ಇಂಬು ಕೊಡಬೇಕೆನ್ನುವ ಮಾತಿಗೆ ವಿರುದ್ಧವಾಗಿ ಮತ್ತೆ ಲೈಸೆನ್ಸ್ಪರ್ಮಿಟ್ ವ್ಯವಸ್ಥೆಯ ಸಮಾಜವಾದ ಮುನ್ನೆಲೆಗೆ ಬಂತು. ಇದೇ ಸಮಯದಲ್ಲಿ ಅತಿಯಾದ ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಪ್ರಚಾರಕ್ಕೆ ಬಂದು ದೇಶದಾದ್ಯಂತ ಆರಾಜಕ ವಾತಾವರಣವೂ ಮೂಡಿತ್ತು. ದೇಶದ ಅಧಿಕಾರಿಶಾಹಿ ಹಾಗೂ ರಾಜಕೀಯ ನಾಯಕರ ನಿಯಂತ್ರಣದಲ್ಲಿ ಆರ್ಥಿಕತೆ ಸೊರಗಿತ್ತು. ಹಿಂದೂ ಆರ್ಥಿಕ ಬೆಳವಣಿಗೆಯ (3.6%) ಅನುಪಾತ ರಾಜಕೀಯ ಆರಾಜಕತೆಯನ್ನು ನಿವಾರಿಸಲು ಅಶಕ್ತವಾಗಿತ್ತು. ಆರ್ಥಿಕ ಸಮಸ್ಯೆಗಳು ಮುಂದೆ ರಾಜಕೀಯ ಬಣ್ಣ ಪಡೆದುಕೊಂಡು ದೇಶಾದ್ಯಂತ ಪ್ರತಿಭಟನೆ ಹಾಗೂ ಇದಕ್ಕೆ ಪ್ರತ್ಯುತ್ತರವಾಗಿ ಸರ್ಕಾರದಿಂದ ತುರ್ತು ಪರಿಸ್ಥಿತಿ ಹೇರಿಕೆಗೆ ಕಾರಣವಾಗಿತ್ತು. ಎಮರ್ಜೆನ್ಸಿಯ ಕರಾಳತೆಗೆ ಬಡತನ ಮತ್ತು ನಿರುದ್ಯೋಗಗಳು ಬೆಚ್ಚಿಬೀಳಿಸುವ ಸ್ವಪ್ನಗಳಾಗಿದ್ದವು.

ಜನತಾ ಎಂಬ ಪ್ರಹಸನ:

1977 ರಲ್ಲಿ ಅಧಿಕಾರಕ್ಕೆ ಬಂದ ಜನತಾಪಕ್ಷ ಎಡಪಂಥೀಯ ಸಮಾಜವಾದಿ ಪಕ್ಷಗಳು ಮತ್ತು ಬಲಪಂಥೀಯ ಜನಸಂಘಗಳೆರಡನ್ನೂ ಒಳಗೊಂಡಿತ್ತು. ಇಂದಿರಾಗಾಂಧಿಯವರು ಮಾಡಿದ ಅನವಶ್ಯಕ ಬ್ಯಾಂಕ್ ರಾಷ್ಟ್ರೀಕರಣ ಹಾಗೂ ಸಮಾಜವಾದಿ ಅಜೆಂಡಾಗಳನ್ನು ಬದಲಾಯಿಸುವ ಅಪೇಕ್ಷೆಯಿತ್ತು. ಆದರೆ ಸರ್ಕಾರದಲ್ಲಿ ಶಾಮೀಲಾದ ಜಾರ್ಜ್ ಫರ್ನಾಂಡೀಸ್ ತಮ್ಮ ಬಹುರಾಷ್ಟ್ರೀಯ ಕಂಪನಿ ವಿರೋಧಿ ನಿಲುವಿನಿಂದಾಗಿ ಐಬಿಎಮ್ ಮತ್ತು ಕೋಕಾಕೋಲಾ ಕಂಪನಿಗಳನ್ನು ದೇಶದಿಂದಲೇ ಹೊರಗೆ ಅಟ್ಟಿದ್ದರು. ಬಡತನ ನಿವಾರಣೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ಸಿಕ್ಕರೂ ಯೋಜನಾ ಆಯೋಗ ಹಾಗೂ ಸರ್ಕಾರಿ ಸ್ವಾಮ್ಯದ ಕೈಗಾರೀಕರಣ ಇನ್ನಷ್ಟು ಬಲಗೊಂಡಿತ್ತು. ಒಟ್ಟಾರೆಯಾಗಿ ಜನತಾ ಪಕ್ಷ ದೇಶದ ಆರ್ಥಿಕ ನೀತಿಯಲ್ಲಿ ಯಾವುದೇ ಬದಲಾವಣೆ ತರಲು ವಿಫಲವಾಗಿತ್ತು. ಜೊತೆಗೆ ಮೊರಾರ್ಜಿ ದೇಸಾಯಿ ನೋಟು ಅಮಾನ್ಯೀಕರಣ ಹಾಗೂ ಕಾರ್ಮಿಕರ ಯೂನಿಯನ್ ಹಕ್ಕು ಮತ್ತೆ ಜಾರಿಗೊಳಿಸಿ ಹೂಡಿಕೆ ವಾತಾವರಣ ಇನ್ನಷ್ಟು ಗೋಜಲಾಗಿಸಿದ್ದರು.

ಮತ್ತೆ ಬಂದ ಇಂದಿರಾ:

1980 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿ ಎಂದಿನಂತೆ ತಮ್ಮ ಸರ್ಕಾರೀಕರಣದ ನೀತಿಯನ್ನೇ ಮುಂದುವರೆಸಿದ್ದರು. ವಿತ್ತಮಂತ್ರಿ ಪ್ರಣಬ್ ಮುಖರ್ಜಿ ಚಮಚಾ ಬಂಡವಾಳಶಾಹಿ (ಕ್ರೋನಿ ಕ್ಯಾಪಿಟಲಿಸಮ್) ನೀತಿಯನ್ನು ಪ್ರಚ್ಛನ್ನವಾಗಿ ಮೂದುವರೆಸಿ ದೇಶಕ್ಕೆ ದೀರೂಭಾಯಿ ಅಂಬಾನಿಯವರನ್ನು ಕೊಡುಗೆಯಿತ್ತರು. ಆದರೂ ಸಮಯದಲ್ಲಿ ಇಂದಿರಾಗಾಂಧಿ ಮೊದಲ ಬಾರಿಗೆ ಐಎಮ್ಎಫ್ ಜೊತೆ ಮಾತುಕತೆ ಪ್ರಾರಂಭಿಸಿ ಆರ್ಥಿಕ ಸುಧಾರಣೆಯ ಮಾತನ್ನು ಆಡಲಾರಂಭಿಸಿದ್ದರು. ಸ್ಪರ್ಧಾತ್ಮಕತೆ ಹೆಚ್ಚಿಸುವ, ಬೆಲೆ ನಿರ್ಧಾರ ತೆಗೆಯುವ, ತೆರಿಗೆ ಸುಧಾರಣೆಯ, ಆಮದು ಶುಲ್ಕ ಇಳಿಸುವ, ಕೈಗಾರಿಕೆಗಳಿಗೆ ಪರವಾನಗಿ ಬೇಡವೆನ್ನುವ ಹಾಗೂ ಸಾರ್ವಜನಿಕ ವಲಯವನ್ನು ಪುನರ್ರಚಿಸುವ ಮಾತುಗಳು ಸಮಯದಲ್ಲಿ ಆರಂಭವಾಗಿದ್ದವು. ಮೂಲಭೂತ ಬದಲಾವಣೆಗಳೇನೂ ಆಗದಿದ್ದರೂ ನಾಲ್ಕು ವರ್ಷಗಳಲ್ಲಿ ನಡೆದ ಚರ್ಚೆವಿವಾದಗಳು ಮುಂದಿನ ವರ್ಷಗಳಲ್ಲಿ ಆಗಬೇಕಾದ ಕೆಲಸಗಳಿಗೆ ಮುನ್ಸೂಚನೆ ನೀಡಿದ್ದವು.

ರಾಜೀವ್ ಎಂಬ ಹೊಸಬೆಳಕು:

1984 ರಲ್ಲಿ ಸಿಖ್ ಹಂತಕರಿಂದ ಹತ್ಯೆಗೊಳಗಾದ ಇಂದಿರಾಗಾಂಧಿಯ ಬದಲಿಗೆ ಅಭೂತಪೂರ್ವ ಚುನಾವಣಾ ಜಯದೊಡನೆ ರಾಜೀವ್ ಗಾಂಧಿ ಪ್ರಧಾನಿಯಾದರು. ದೇಶದಲ್ಲಿ ಹೊಸಗಾಳಿಹೊಸಬೆಳಕು ಮೂಡುವ ಸಾಧ್ಯತೆಗಳು ಕಂಡಿದ್ದವು. ವಿತ್ತಮಂತ್ರಿಯಾಗಿ ವಿ.ಪಿ.ಸಿಂಗ್, ತಾಂತ್ರಿಕ ಸಲಹೆಗಾರನಾಗಿ ಸ್ಯಾಮ್ ಪಿಟ್ರೋಡಾ ಹಾಗೂ ಆರ್ಥಿಕ ಸಲಹೆಗಾರನಾಗಿ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಆರ್ಥಿಕ ಬದಲಾವಣೆಗೆ ಕಾರಣರಾದರು. ನವಭಾರತದ ನವಪೀಳಿಗೆಯ ಅಪೇಕ್ಷೆಗಳಿಗೆ ರಾಜೀವ್ ಗಾಂಧಿ ಸ್ಪಂದಿಸುವರು ಎಂಬ ನಿರೀಕ್ಷೆ ಮೂಡಿತ್ತು. 1986 ನಂತರದಲ್ಲಿ ಅಪೇಕ್ಷೆಗಳು ಹುಸಿಯಾಗತೊಡಗಿದ್ದವು. ರಾಜೀವ್ ಗಾಂಧಿಯ ಅನನುಭವ ಹಾಗೂ ಬೋಫೋರ್ಸ್ ಹಗರಣಗಳು ಆರ್ಥಿಕ ಸುಧಾರಣೆಗೆ ಅಡ್ಡಿಯಾದವು. 1984 ರಲ್ಲಿ ಸಿಕ್ಕಿದ್ದ ಅಭೂತಪೂರ್ವ ಬಹುಮತದ ಜನಾದೇಶವನ್ನು ರಾಜೀವ ಗಾಂಧಿ ಕಳೆದಿದ್ದರು.

ವಿ.ಪಿ.ಸಿಂಗ್ ಹಾಗೂ ಚಂದ್ರಶೇಖರ್ ಪಥ ಸಂಚಲನ:

1989ರಲ್ಲಿ ವಿ.ಪಿಸಿಂಗ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ತೃತೀಯ ರಂಗ ಭಾರತೀಯ ಜನತಾ ಪಕ್ಷದ ಬೆಂಬಲ ಅವಲಂಬಿಸಿತ್ತು. ತೃತೀಯ ರಂಗ ಹಾಗೂ ಬಿಜೆಪಿ ಪಕ್ಷಗಳ ನಡುವೆ ಸೈದ್ಧಾಂತಿಕವಾಗಿ ಆರ್ಥಿಕ ನೀತಿಯಲ್ಲಿ ಅಷ್ಟೇನೂ ಮನಸ್ತಾಪವಿಲ್ಲದಿದ್ದರೂ ಮುಕ್ತ ಆರ್ಥಿಕತೆಗೆ ಯಾವುದೇ ಒತ್ತಾಸೆ ದೊರಕಲಿಲ್ಲ. ಹಳೆಯ ಸಮಾಜವಾದಿ ಘೋಷಣೆಗಳೇ ಮುಂದುವರೆದಿದ್ದವು. ನೀತಿಗಳು ಹಾಗೂ ರಾಜಕೀಯ ಅಸ್ಥಿರತೆ ದೇಶದ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ ಪರಿಸ್ಥಿತಿಯನ್ನು ಬಿಗಡಾಯಿಸಿದ್ದವು. ದೇಶದ ಅತ್ಯಾವಶ್ಯಕ ಆಮದಿಗೆ ಅಗತ್ಯ ವಿದೇಶಿ ವಿನಿಮಯ ಪಡೆಯಲು ದೇಶದ ಚಿನ್ನದ ದಾಸ್ತಾನನ್ನು ಮುಂಬಯಿಯ ಭಾರತೀಯ ರಿಸರ್ವ ಬ್ಯಾಂಕಿನಿಂದ ಲಂಡನ್ನಿನ ಬ್ಯಾಂಕ್ ಆಫ್ ಇಂಗ್ಲೆಂಡ್ ಲಾಕರಿಗೆ ವರ್ಗಾಯಿಸಲಾಗಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಹಿಂದೆಂದೂ ಇಷ್ಟು ಹೀನಾಯ ಗತಿಗೆ ಬಂದಿರಲಿಲ್ಲ.

ನರಸಿಂಹರಾವ್ ಮನಮೋಹನ್ ಸಿಂಗ್ ಜುಗಲ್ ಬಂದಿ:

ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ 1991 ರಲ್ಲಿ ಕಾಂಗ್ರೆಸ್ ಪಕ್ಷದ ನರಸಿಂಹರಾವ್ ಪ್ರಧಾನಿಯಾಗುವ ಅನಿವಾರ್ಯ ಒದಗಿತ್ತು. ದೇಶ ಕಂಡ ಅತೀವ ಸಂದಿಗ್ಧದ ಸನ್ನಿವೇಶದಲ್ಲಿ ಆರ್ಥಿಕತೆಯನ್ನು ಮತ್ತೆ ಹಳಿಗೆ ತಂದ ಕೀರ್ತಿ ಅಂದಿನ ವಿತ್ತಮಂತ್ರಿ ಮನಮೋಹನ್ ಸಿಂಗ್, ಆರ್ಥಿಕ ಸಲಹೆಗಾರ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಹಾಗೂ ವಾಣಿಜ್ಯ ಮಂತ್ರಿ ಪಿ.ಚಿದಂಬರಮ್ ಅವರಿಗೆ ಸಲ್ಲುತ್ತದೆ. 1991 ಜೂನ್ 21 ಕ್ಕೆ ಅಧಿಕಾರಕ್ಕೆ ಬಂದ ನರಸಿಂಹರಾವ್ ಸರ್ಕಾರ ಜುಲೈ ಮೊದಲ ವಾರದಲ್ಲಿ ಡಾಲರ್ಗೆ ರೂಪಾಯಿಯ ಮೌಲ್ಯವನ್ನು ಶೇಕಡಾ ಇಪ್ಪತ್ತರಷ್ಟು ಇಳಿಸಿತ್ತು. ಮುಂದಿನ ತಿಂಗಳುಗಳಲ್ಲಿ ಲೈಸೆನ್ಸ್ಪರ್ಮಿಟ್ ರಾಜ್ ಕಳಚಿಬಿತ್ತು. ಮುಕ್ತ ಆರ್ಥಿಕತೆ, ತೆರಿಗೆ ಸುಧಾರಣೆ, ಆರ್ಬಿಐ ಸುಧಾರಣೆ ಹಾಗೂ ಹೊಸ ಕೈಗಾರಿಕೆ ಮತ್ತು ವಾಣಿಜ್ಯ ನೀತಿಗಳು ಹೊಸ ಆರ್ಥಿಕ ಯುಗವೊಂದಕ್ಕೆ ನಾಂದಿ ಹಾಡಿದ್ದವು. 1983 ರಲ್ಲಿ ಶುರುವಾಗಿದ್ದ ಮಾರುತಿ ಕಾರಿನಂತಹಾ ಹಲವು ಕಾರು ಸ್ಕೂಟರ್ ಕಂಪನಿಗಳು ದೇಶೀಯ ಮಾರುಕಟ್ಟೆಗೆ ಲಗ್ಗೆಯಿಟ್ಟವು. 1991 ರಿಂದ 1996 ರವರೆಗೆ ಮತ್ತು ನಂತರದಲ್ಲಿ 1996 ರಿಂದ 98 ರವರೆಗೆ ತೃತೀಯ ರಂಗದ ಹೆಚ್.ಡಿ.ದೇವೇಗೌಡ ಮತ್ತು .ಕೆ ಗುಜ್ರಾಲ್ ಸರ್ಕಾರಗಳು ಆರ್ಥಿಕೆ ಸುಧಾರಣೆ ಮುಂದುವರೆಸಿದ್ದವು. ಸರ್ಕಾರಿ ಸ್ವಾಮ್ಯದ ಕೈಗಾರಿಕೆ ಹಾಗೂ ನಿರ್ಬಂಧ ಹೇರುವ ವಾಣಿಜ್ಯ ನೀತಿಗಳೂ ಇತಿಹಾಸವಾದವು.

ನರಸಿಂಹರಾವ್ ಮನಮೋಹನ್ ಚಿದಂಬರಮ್ ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ದೇಶದಲ್ಲಿ ಹೊಸ ಡಿಜಿಟಲ್ ಕ್ರಾಂತಿಯೊಂದಕ್ಕೆ ನಾಂದಿ ಹಾಡಿದ್ದವು. ಇನ್ಫೋಸಿಸ್ ಮತ್ತು ವಿಪ್ರೋನಂತಹ ಕಂಪನಿಗಳು ಹಾಗೂ ಹಲವಾರು ಎಂಎನ್ಸಿ ಕಂಪನಿಗಳು ದೇಶದ ಮಾನವ ಸಂಪನ್ಮೂಲ ಉಪಯೋಗಿಸಿಕೊಳ್ಳಲು ಮುಂದೆ ಬಂದವು. ಕ್ರಮೇಣ ಮಾಹಿತಿ ತಂತ್ರಜ್ಞಾನ ಮತ್ತು ಹೊರಗುತ್ತಿಗೆ ಸೇವೆಗಳ ಕಂಪನಿಗಳು ದೇಶಕ್ಕೆ ಅಪಾರ ಪ್ರಮಾಣದಲ್ಲಿ ವಿದೇಶಿ ವಿನಿಮಯ ಗಳಿಸಲಾರಂಭಿಸಿದ್ದವು. ಹಿಂದಿನ ಬ್ಯಾಲೆನ್ಸ್ ಆಫ್ ಪೇಮೆಂಟ್ಸ್ ಪರಿಸ್ಥಿತಿ ಮುಗಿದ ಅಧ್ಯಾಯವಾಗಿತ್ತು. ದೇಶದಲ್ಲಿ ಹಲವಾರು ವಾಹನ ತಯಾರಿಕೆ ಕಂಪನಿಗಳು, ಸಂವಹನ ಮೊಬೈಲ್ ಕಂಪನಿಗಳು ಸೇವೆ ಆರಂಭಿಸಿದ್ದವು. 90 ದಶಕದ ಅಂತ್ಯದೊಳಗೆ ಬದಲಾವಣೆಗಳು ದೇಶದಲ್ಲಿ ಆರ್ಥಿಕ ಕ್ರಾಂತಿಯ ವಾತಾವರಣವನ್ನೇ ಸೃಷ್ಟಿಸಿದ್ದವು.

1997 ಕನಸಿನ ಬಜೆಟ್:

ಕಳೆದ 75 ವರ್ಷಗಳ ಆರ್ಥಿಕ ನೀತಿಯಲ್ಲಿ 1991 ಒಂದು ಮೈಲಿಗಲ್ಲಾದರೆ 1997 ದೇವೇಗೌಡಚಿದಂಬರಮ್ ಮುಂಗಡಪತ್ರ ಇನ್ನೊಂದು ಮೈಲಿಗಲ್ಲಾಗಿತ್ತು. ತೆರಿಗೆ ದರವನ್ನು ಮೂರನೇ ಒಂದರಷ್ಟು ಮತ್ತು ಆರ್ಥಿಕ ಸುಧಾರಣೆಯನ್ನು ಮುಂಗಡಪತ್ರದಲ್ಲಿನ ಮುಖ್ಯ ಸಾಧನೆಯಾಗಿ ಮಾಡಿದ 1997 ಡ್ರೀಮ್ ಬಜೆಟ್ದೇಶದ ಇತಿಹಾಸದಲ್ಲಿ ಮರೆಯಲಾಗದ ತಿರುವಾಗಿತ್ತು. 1997 ರಿಂದ ಇಲ್ಲಿಯವರೆಗೆ ಪ್ರತಿಯೊಂದು ಮುಂಗಡಪತ್ರದಲ್ಲಿಯೂ ಕೂಡಾ ಹಣಕಾಸು ಸಚಿವರುಗಳು ಆರ್ಥಿಕ ಮತ್ತು ತೆರಿಗೆ ಸುಧಾರಣೆಯ ಅಗತ್ಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ವೈಟುಕೆ ಮತ್ತು ವಾಜಪೇಯಿ ಸರ್ಕಾರ:

1999 ರಲ್ಲಿ ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಬರುವ ಹೊತ್ತಿಗೆ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ರಾಂತಿ ಉಚ್ಛ್ರಾಯವಾಗಿತ್ತು. ವೈಟುಕೆ ಕಾರಣದಿಂದ ಇಡೀ ದೇಶದ ಪ್ರತಿಯೊಬ್ಬ ಎಂಜಿನಿಯರ್ ಕೂಡಾ ಸಾಫ್ಟ್ವೇರ್ ಎಂಜಿನಿಯರ್ ಆಗುವ ಅವಕಾಶಗಳು ದೊರಕಿತ್ತು. ದೇಶಕ್ಕೆ ಸುಲಭವಾಗಿ ವಿದೇಶಿ ವಿನಿಮಯ ಗಳಿಸುವ ಆತ್ಮವಿಶ್ವಾಸ ಮತ್ತು ನಾವು ಯಾರಿಗೂ ಕಡಿಮೆಯಿಲ್ಲವೆಂಬ ನಂಬಿಕೆ ದೃಢವಾಗಿತ್ತು. ಇದೇ ಸಮಯಕ್ಕೆ ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಎಲ್ಲರನ್ನೂ ಒಳಗೊಂಡು ರಚಿಸಿದ ಆಡಳಿತ ರಾಷ್ಟ್ರೀಯ ಸರ್ಕಾರದಂತೆಯೇ ಕಾರ್ಯ ನಿರ್ವಹಿಸಲು ಅಣಿಯಾಗಿತ್ತು. 99 ರಿಂದ 2004 ರವರೆಗಿನ ಸಮಯದಲ್ಲಿ ಯಾವುದೇ ಹೊಸ ಆರ್ಥಿಕ ನೀತಿ ಇಲ್ಲದೇ ಹೋದರೂ ಮುಕ್ತ ಮತ್ತು ಸ್ಫರ್ಧಾತ್ಮಕ ವಾತಾವರಣದ ಸನ್ನಿವೇಶ ದೇಶದ ಆರ್ಥಿಕತೆ ಶೇಕಡಾ 8 ಕ್ಕೂ ಮಿಗಿಲಾದ ಜಿಡಿಪಿ ಬೆಳವಣಿಗೆ ಸಾಧಿಸಲು ಸಹಕಾರಿಯಾಗಿತ್ತು. ವಾಜಪೇಯಿ ಸರ್ಕಾರದ ಡಿಸ್ಇನ್ವೆಸ್ಟ್ಮೆಂಟ್ ಕಾರ್ಯಕ್ರಮ 75 ವರ್ಷಗಳಲ್ಲಿ ನಡೆದ ಅತ್ಯಂತ ಪರಿಣಾಮಕಾರಿ ಮತ್ತು ಅಗತ್ಯ ಸರ್ಕಾರಿ ಹೂಡಿಕೆಯ ಹಿಂದೆಗೆತದ ಕಾರ್ಯಕ್ರಮವಾಗಿತ್ತು.

ಆರ್ಬಿಐ ಮತ್ತು ಮಾನೆಟರಿ ಪಾಲಿಸಿ:

21 ನೇ ಶತಮಾನದವರೆಗೂ ತಟಸ್ಥ ಮತ್ತು ಕಾದುನೋಡುವ ನೀತಿಯನ್ನು ಅನುಸರಿಸುತ್ತಿದ್ದ ಆರ್ಬಿಐ ಬಿಮಲ್ ಜಲಾನ್ ಅವರು ಆರ್ಬಿಐ ಗವರ್ನರ್ ಆದ ಸಮಯದಿಂದಲೂ ಹಣಕಾಸು ನೀತಿಗೆ ಪೂರಕ ಬ್ಯಾಂಕಿಂಗ್ ಮತ್ತು ಮಾನೆಟರಿ ನೀತಿಯನ್ನು ಅಳವಡಿಸಿಕೊಂಡಿದೆ. ನೀತಿಗಳಿಂದ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುವುದರ ಜೊತೆಗೆ ಸಾಲಬಡ್ಡಿ ದರಗಳನ್ನು ಆಕರ್ಷಕ ಮಾಡಲು ಕೂಡಾ ಸಾಧ್ಯವಾಗಿದೆ. ಕಳೆದ ಎರಡು ದಶಕಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಕೆಟ್ಟ ಸಾಲ (ಎನ್ಪಿಐ) ಇಳಿಕೆಯಾಗುವಂತೆ, ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ಉತ್ತಮವಾಗುವಂತೆ ಮತ್ತು ಎರಡುಮೂರು ಬ್ಯಾಂಕುಗಳು ಒಂದುಗೂಡಿ ಸಶಕ್ತ ಬ್ಯಾಂಕೊಂದನ್ನು ಕಟ್ಟಲು ಅನುವಾಗುವಂತೆ ಮಾಡಿದೆ. ಇದಕ್ಕೆ ಬಿಮಲ್ ಜಲಾನ್, ವೈ.ವಿ.ರೆಡ್ಡಿ, ಡಿ.ಸುಬ್ಬರಾವ್ ಮತ್ತು ರಘುರಾಮ್ ರಾಜನ್ರವರಂತಹ ಉತ್ತಮ ಆರ್ಬಿಐ ಗವರ್ನರ್ಗಳು ಹಾಗೂ ಗವರ್ನರ್ಗಳನ್ನು ನೇಮಿಸಿ ಅಗತ್ಯ ಸ್ವಾಯತ್ತತೆ ನೀಡಿದ ಪ್ರಧಾನಿವಿತ್ತಮಂತ್ರಿ ಕಾರಣರಾಗಿದ್ದಾರೆ. ಅಂತೆಯೇ ಮುಂಬಯಿಯ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ಗಳು ದೇಶದ ಕಂಪನಿಗಳಲ್ಲಿನ ಹೂಡಿಕೆಗೆ ಸೂಕ್ತ ರಾಚನಿಕ ಸೌಲಭ್ಯವನ್ನು ಒದಗಿಸಿವೆ.

ಮನಮೋಹನ್ ಸಿಂಗ್ ಚಿದಂಬರಮ್ ಜೋಡಿಯ ಜುಗಲ್ ಬಂದಿ:

2004 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಮಿಶ್ರ ಸರ್ಕಾರಗಳು ಮುಂದಿನ ಹತ್ತು ವರ್ಷಗಳಲ್ಲಿ ದೇಶದ ಆರ್ಥಿಕ ವಿಕಸನಕ್ಕೆ ಇನ್ನಿಲ್ದದ ಇಂಬು ನೀಡಿದ್ದವು. ತೆರಿಗೆ ನೀತಿ, ಬ್ಯಾಂಕಿಂಗ್ ಸುಧಾರಣೆ, ಕಾರ್ಮಿಕ ನೀತಿಯ ಸುಧಾರಣೆ, ದಿವಾಳಿ ನೀತಿ, ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಶೇರು ಮಾರಾಟ, ವಿದೇಶಿ ಹಣಹೂಡಿಕೆ ನೀತಿ ಮತ್ತು ಹಲವಾರು ವಲಯ ಕೇಂದ್ರಿತ ಕೈಗಾರಿಕೆ ನೀತಿಗಳು ಆರ್ಥಿಕ ಸುಧಾರಣೆಯನ್ನು ಇನ್ನಷ್ಟು ಮುನ್ನೆಲೆಗೆ ತಂದಿದ್ದವು. 2008 ರಿಂದ 11 ರವರೆಗಿನ ಎರಡು ಮೂರು ವರ್ಷಗಳಲ್ಲಿ ಪ್ರಣಬ್ ಮುಖರ್ಜಿ ವಿತ್ತಮಂತ್ರಿಯಾಗಿದ್ದ ಸಮಯ ಹೊರತುಪಡಿಸಿದರೆ ಉಳಿದೆಲ್ಲಾ ಸಂದರ್ಭಗಳಲ್ಲಿ ಶೇಕಡಾ 8 ಕ್ಕೂ ಹೆಚ್ಚಿನ ಜಿಡಿಪಿ ಪ್ರಗತಿ ಸಾಧಿಸಿದ್ದು ಹಾಗು ಹಲವಾರು ವಲಯಗಳಲ್ಲಿ ಸಾಧಿಸಿದ ಅಭಿವೃದ್ಧಿ ಶ್ಲಾಘನೀಯವಾಗಿತ್ತು.

2014 ರಿಂದ ಇತ್ತೀಚೆಗಿನ ಘಟನೆಗಳು:

2014 ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರದ ಮೊದಲೆರೆಡು ವರ್ಷ ಹಿಂದಿನ ಆರ್ಥಿಕ ಬೆಳವಣಿಗೆಯ ವೇಗಕ್ಕೆ ಸಹಕಾರಿಯಾಗಿತ್ತು. ಸಂದರ್ಭದಲ್ಲಿ ವಿತ್ತಮಂತ್ರಿ ಅರುಣ್ ಜೇಟ್ಲಿ ಜಿಎಸ್ಟಿ ಸುಧಾರಣೆಗೆ ತಮ್ಮೆಲ್ಲಾ ಶಕ್ತಿ ವ್ಯಯ ಮಾಡಿದ್ದರು. ಸಂದರ್ಭದಲ್ಲಿಯೂ ಕೂಡಾ ಶೇಕಡಾ 8 ಕ್ಕೆ ಮೀರಿದ ಜಿಡಿಪಿ ಬೆಳವಣಿಗೆ ಸಾಧ್ಯವಾಗಿತ್ತು. ಆದರೆ 2016 ರಿಂದ ಆರ್ಥಿಕ ಇಲಾಖೆಯನ್ನು ಪ್ರಧಾನ ಮಂತ್ರಿ ಕಾರ್ಯಾಲಯ ರಿಮೋಟ್ ಕಂಟ್ರೋಲ್ ಮೂಲಕ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ನೋಟು ಅಮಾನ್ಯೀಕರಣ, ಆರ್ಥಿಕ ಸಂಸ್ಥೆಗಳ ನಾಯಕತ್ವ ಕಡೆಗಣನೆ, ವಿವೇಕಹೀನ ಅಧಿಕಾರಿಗಳ ಮಾತಿಗೆ ಮನ್ನಣೆ ನೀಡುವ ಮೂಲಕ ಪಿಎಮ್ ಕಳೆದ ನಾಲ್ಕು ವರ್ಷಗಳಲ್ಲಿ ಆರ್ಥಿಕ ಹಿನ್ನೆಡೆಗೆ ಕಾರಣರಾಗಿದೆ. ಅಧಿಕಾರಶಾಹಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರೂ ಇಲ್ಲವಾದ ಸಂದರ್ಭದಲ್ಲಿ ದೇಶದ ಆರ್ಥಿಕತೆ 2016 ರಿಂದ ಕೆಳಕ್ಕೆ ಇಳಿಯುತ್ತಾ ಬಂದಿದೆ.

ಕೋವಿಡ್ ಮತ್ತು ನಂತರದ ಆರ್ಥಿಕತೆ:

2020 ಮಾರ್ಚ್ನಲ್ಲಿ ಶುರುವಾದ ಕೋವಿಡ್ ಸಂಕಟ ದೇಶದ ಆರ್ಥಿಕತೆಯನ್ನು ಹೇಗಿದ್ದರೂ ಹಾಳು ಮಾಡುವುದಿತ್ತು. ಇಷ್ಟು ದಶಕಗಳ ಬೆಳವಣಿಗೆ ಇದೀಗ ಆರ್ಥಿಕ ಹಿಂಜರಿಕೆಗೆ ಕಾಲಿಡಲೇಬೇಕಿತ್ತು. ಆದರೆ 2020 ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೇಂದ್ರ ಸಕಾರದ ಲಾಕ್ಡೌನ್ ನೀತಿ ಮತ್ತು ಅನಂತರದ ಲಸಿಕೆ ನೀತಿಗಳು 2020-21 ರಲ್ಲಿ ದೇಶ ಸುಮಾರು ಶೇಕಡಾ 8 ರಷ್ಟು ಜಿಡಿಪಿ ಹಿಂಜರಿಕೆಗೆ ಕಾರಣವಾಗಿವೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರ ವಿವೇಕದಿಂದ ವರ್ತಿಸಿದ್ದರೆ ಹಿಂಜರಿಕೆಯನ್ನು ಶೇಕಡಾ 2 ರಿಂದ 3 ಕ್ಕೆ ಸೀಮಿತಗೊಳಿಸಬಹುದಾಗಿತ್ತು.

ಇದೀಗ ಕೋವಿಡ್ ನಂತರದ ಸಮಯದಲ್ಲಿ ಆರ್ಥಿಕ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಲು ಸರ್ಕಾರಗಳು ಹೆಣಗಾಡುತ್ತಿವೆ. 2021-22 ನೇ ವರ್ಷದಲ್ಲಿ ಹಿಂದಿನ ವರ್ಷಕ್ಕೆ ಹೋಲಿಕೆಯಲ್ಲಿ ಗುಣಾತ್ಮಕ ಅಭಿವೃದ್ಧಿ ಸಾಧ್ಯವಾದರೂ ಅಭಿವೃದ್ಧಿ 20-21 ಹಿಂಜರಿಕೆಯನ್ನು ಅಳಿಸುವಷ್ಟು ಪ್ರಬಲವಾಗಿ ಇರಬೇಕಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಸರ್ಕಾರದ ಸ್ವದೇಶಿ ನೀತಿ, ಆತ್ಮನಿರ್ಭರ್ ನೀತಿ, ಆಮದು ಪರ್ಯಾಯ ಹುಡುಕುವ ನೀತಿ ಹಾಗೂ ಹಣಕಾಸು ನೀತಿಗಳು 1991 ರಿಂದ ಇಲ್ಲಿಯವರೆಗೆ ನಡೆದುಬಂದ ಆರ್ಥಿಕ ಸುಧಾರಣೆಯ ಹಾದಿಗೆ ವಿರುದ್ಧವಾಗಿವೆ. ಆದರೆ ನರೇಂದ್ರ ಮೋದಿ ಸರ್ಕಾರಕ್ಕೆ ತನ್ನ ತಪ್ಪುಗಳನ್ನು ಅರಿಯುವ ಸಾಮಥ್ರ್ಯವಿದೆ. ತಪ್ಪುಗಳನ್ನು ತಿದ್ದಿಕೊಳ್ಳುವ ಸಾಮಥ್ರ್ಯವೂ ಇದೆ. ಆದಕಾರಣ ಮುಂದಿನ ಮೂರು ವರ್ಷಗಳಲ್ಲಿ ಆರ್ಥಿಕ ಸುಧಾರಣೆಯ ಮತ್ತು ಮುಕ್ತ ಸ್ಪರ್ಧಾತ್ಮಕ ಆರ್ಥಿಕತೆಯ ರಾಜಹಾದಿಗೆ ಮರಳುವ ಸಾಧ್ಯತೆಯಲ್ಲಿ ದೇಶದ ಪ್ರಗತಿ ನಿರ್ಭರವಾಗಲಿದೆ.

Leave a Reply

Your email address will not be published.