2ನೇ ಶೀತಲ ಸಮರ

ಅಮೆರಿಕಾ-ಚೀನಾ ಸುಂಕಯುದ್ಧದಲ್ಲಿ 21ನೇ ಶತಮಾನದ ಶೀತಲ ಸಮರ ಪ್ರಾರಂಭವಾಗಿದೆಯೇ? 20ನೇ ಶತಮಾನದ ಅಮೆರಿಕಾ-ರಷ್ಯಾಗಳ ನಡುವಿನ ಶೀತಲ ಸಮರಕ್ಕೂ ಈಗಿನ ಅಮೆರಿಕಾ-ಚೀನಾ ಶೀತಲ ಸಮರಕ್ಕೂ ಇರುವ ವ್ಯತ್ಯಾಸಗಳೇನು?

ಚೀನಾದ ಏಕಪಕ್ಷೀಯ ರಫ್ತು ಆರ್ಥಿಕತೆಯ ಮೇಲೆ ಅಮೆರಿಕ ಸೆಟೆದು ನಿಂತಿದೆ. ಅಧ್ಯಕ್ಷ ಡಾನಲ್ಡ್ ಟ್ರಂಪ್‍ರವರ ಮುಚ್ಚುಮರೆಯಿಲ್ಲದ ಕೊಂಕು ನುಡಿಗಳಲ್ಲಿ ಅಮೆರಿಕವು ದಶಕಗಳ ಕಾಲ ಚೀನಾದ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಆಗಿರುವ ನಷ್ಟದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಟ್ರಂಪ್‍ರವರ ಹೇಳಿಕೆಯಂತೆ,“ಪ್ರತಿವರ್ಷ ನಮಗೆ ಈಗಾಗಲೇ $500 ಬಿಲಿಯನ್‍ಗಳಷ್ಟು ರಫ್ತು-ಆಮದು ಕೊರತೆಯಿದ್ದರೆ, ಚೀನಾದ ಕಂಪನಿಗಳಿಂದ $300 ಬಿಲಿಯನ್ ಮೌಲ್ಯದಷ್ಟು ಬೌದ್ಧಿಕ ಆಸ್ತಿ ಹಕ್ಕುಗಳ ಕಳ್ಳತನವಾಗುತ್ತಿದೆ’’.

ಟ್ರಂಪ್‍ರವರ ಮಾತಿನಲ್ಲಿತಪ್ಪಿಲ್ಲ. 2018ರಲ್ಲಿ ಚೀನಾದರಫ್ತು-ಆಮದು ನಿವ್ವಳ ಮೊತ್ತ $323 ಬಿಲಿಯನ್‍ ಇದ್ದರೆ ಅದೇ ಅವಧಿಯಲ್ಲಿ ಅಮೆರಿಕದ ರಫ್ತು-ಆಮದು ಕೊರತೆ $621 ಬಿಲಿಯನ್‍ಗಳಷ್ಟಿತ್ತು. ಅಮೆರಿಕದ ಈ ರಫ್ತು-ಆಮದು ಕೊರತೆಯ ಬಹುಪಾಲು ಚೀನದೊಡನೆಯ ವ್ಯಾಪಾರಿ ಸಂಬಂಧದ ಕಾರಣದಿಂದಾಗಿದೆ. 2001ರಲ್ಲಿ ವಿಶ್ವವಾಣಿಜ್ಯ ಒಕ್ಕೂಟ (ಡಬ್ಲುಟಿಓ) ಸೇರಿದ ಚೀನಾ ಅಮೆರಿಕದಲ್ಲಿ ಯಾವುದೇ ಕಸ್ಟಮ್ಸ್ ಸುಂಕ ತೆರದೆ ಸ್ಥಳೀಯ ಮಾರುಕಟ್ಟೆಯನ್ನು ಆಕ್ರಮಿಸಿತ್ತು. ಕಳೆದ ಎರಡು ದಶಕಗಳಲ್ಲಿ ಚೀನಾ ನಿರ್ಮಿತ ವಸ್ತುಗಳು ಅಮೆರಿಕದಕೈಗಾರಿಕಾ ವಲಯವನ್ನೇ ಬುಡಮೇಲು ಮಾಡಿ ಇದೀಗ ಅಮೆರಿಕ ಯಾವುದೇ ಪದಾರ್ಥಗಳನ್ನು ಉತ್ಪಾದಿಸುವ ಕ್ಷಮತೆಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಚೀನಾದ ಬಗ್ಗೆ ಅಮೆರಿಕ ಆಡಳಿತದ ಕೆಲವು ಮುಖ್ಯ ಆರೋಪಗಳನ್ನು ಪಟ್ಟಿ ಮಾಡೋಣ:

ಚೀನಾ ತನ್ನಕೈಗಾರಿಕಾ ವಲಯಕ್ಕೆ ವಿದ್ಯುತ್, ಬಂಡವಾಳ, ಕೈಗಾರಿಕಾ ಜಮೀನು ಮತ್ತಿತರ ಹಲವಾರು ಸಬ್ಸಿಡಿಗಳನ್ನು ನೀಡುವುದರ ಮೂಲಕ ಪದಾರ್ಥಗಳ ಉತ್ಪಾದನಾ ದರವನ್ನು ಗಣನೀಯವಾಗಿ ಇಳಿಸಿದೆ. ವ್ಯಾಟ್ ಮತ್ತಿತರ ಯಾವುದೇ ತೆರಿಗೆ ಹಾಕದೆ ಕೇವಲ ರಫ್ತು ಉತ್ತೇಜನಕ್ಕೆ ಪೂರಕವಾಗಿ ತನ್ನ ಆರ್ಥಿಕತೆಯನ್ನೇ ಬಗ್ಗಿಸಿಕೊಂಡಿದೆ. ಇದರಿಂದ ಸಹಜವಾಗಿ ಚೀನಾದಲ್ಲಿ ಉತ್ಪಾದಿತ ಪದಾರ್ಥಗಳು ಯಾವುದೇ ಮುಂದುವರಿದ ರಾಷ್ಟ್ರಗಳ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಬೆಲೆಯುಳ್ಳದ್ದಾಗಿವೆ.

 ಅಮೆರಿಕದ ಕಂಪನಿಗಳು ಚೀನಾದಲ್ಲಿ ಉತ್ಪಾದನೆ ಮಾಡಹೊರಟಾಗ ಅನೇಕ ರೀತಿಯ ತೊಂದರೆಗೆ ಒಳಪಟ್ಟಿವೆ. ಕಡ್ಡಾಯವಾಗಿ ಸ್ಥಳೀಯ ಪಾಲುದಾರ ಸಂಸ್ಥೆಯೊಂದರೊಡನೆ ಒಡಂಬಡಿಕೆ ಮಾಡಿಕೊಳ್ಳಬೇಕಾದ ನಿಬಂಧನೆಯೊಂದಿಗೆ ಚೀನಾ ವಿದೇಶಿ ಕಂಪನಿಯ ಲಾಭಕ್ಕೆ ಕೈಹಾಕಿದೆ. ಮೇಲಾಗಿ ಈ ಸ್ಥಳೀಯ ಪಾಲುದಾರ ಸಂಸ್ಥೆಯು ಅಮೆರಿಕ ಕಂಪನಿಯ ತಂತ್ರಜ್ಞಾನ ಮತ್ತುಉತ್ಪಾದನಾ ಕೌಶಲ್ಯವನ್ನು ಸಾರಾಸಗಟಾಗಿ ಕದ್ದು ಬೇರೆಚೀನಿ ಕಂಪನಿಗಳಿಗೆ ರವಾನೆ ಮಾಡಿದೆ. ಈ ತೆರನಾಗಿ ಚೀನಿ ನೆಲದ ಮೇಲೆ ಕಾಲಿಟ್ಟ ಅಮೆರಿಕದ ಕಂಪನಿಗಳು ತಮ್ಮಜುಟ್ಟು-ಜನಿವಾರಗಳನ್ನು ಚೀನಾದ ಸರ್ಕಾರಕ್ಕೆ ಅಡ ಇಟ್ಟಂತಾಗಿದೆ.

ಇಂಟೆಲೆಕ್ಚುಯಲ್‍ ಪ್ರಾಪರ್ಟಿ ರೈಟ್ಸ್ (ಐಪಿಆರ್) ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಚೀನಾದ ಆಡಳಿತ ದಿವ್ಯ ನಿರ್ಲಕ್ಷ್ಯ ಹೊಂದಿದೆ. ಚೀನಾದ ಯಾವುದೇ ಕಂಪನಿಯು ಅಮೆರಿಕಾದ ಅಥವಾ ವಿಶ್ವದ ಮತ್ತಾವುದೇ ದೇಶದ ತಂತ್ರಜ್ಞಾನವನ್ನು ಹಾಡುಹಗಲೇ ದರೋಡೆ ಮಾಡಿ ಪ್ರಯೋಗಿಸಬಹುದಾಗಿದೆ. ಹಲವಾರು ವರ್ಷಗಳ ದೂರುಗಳ ನಡುವೆಯೂ ಚೀನಾ ಈ ಐಪಿಆರ್ ನಿಯಂತ್ರಣವನ್ನು ಕೇವಲ ಕಾಗದದ ಮೇಲೆ ಮಾಡಿದೆಯೇ ಹೊರತು ನೈಜವಾಗಲ್ಲ.

ಚೀನಾದ ಆರ್ಥಿಕತೆಯಲ್ಲಿ ಮುಕ್ತ ಮಾರುಕಟ್ಟೆಯ ಯಾವುದೇ ನಿಯಮಗಳ ಪಾಲನೆಯಿಲ್ಲ. ಬಂಡವಾಳ ಹೂಡಿದ ಪಾಲುದಾರನ ಪಾಲನ್ನು ರಾತ್ರಾನುರಾತ್ರಿ  ಕಮ್ಯೂನಿಸ್ಟ್ ಸರ್ಕಾರವು ಬೇರೆಯವರಿಗೆ ನೀಡಬಹುದಾಗಿದೆ.ಯಾವುದೇ ಖಾಸಗಿ ಕಂಪನಿಯ ಆಡಳಿತ ಮಂಡಳಿಯ ಸದಸ್ಯರನ್ನು ಹೇಳಕೇಳದೆ ವಜಾ ಮಾಡಿತನ್ನ ಪ್ರತಿನಿಧಿಗಳನ್ನು ನೇಮಕ ಮಾಡಬಹುದಾಗಿದೆ. ಹೀಗೆ ಖಾಸಗಿ ಆಸ್ತಿ ಹಕ್ಕು ಕೇವಲ ಕಾಗದದ ಹುಲಿಯಾಗಿದೆ.  ಕಮ್ಯೂನಿಸ್ಟ್ ಸರ್ವಾಧಿಕಾರಿ ಸರ್ಕಾರದ ನಿಯಂತ್ರಣದ ಹೆದರಿಕೆಯಲ್ಲಿ ಯಾವುದೇ ಕಂಪನಿಗಳು ಅಮೆರಿಕೆಯ ಕಂಪನಿಗಳೊಂದಿಗೆ ಮುಕ್ತವಾಗಿ ಪಾಲುದಾರನಾಗುವಂತಿಲ್ಲ.

ಚೀನಾ ತನ್ನ ವಿನಿಮಯದರವನ್ನು ಇದುವರೆಗೆ ಸರ್ಕಾರಿ ನಿಯಂತ್ರಣದಲ್ಲಿಯೇ ಇರಿಸಿದೆ. ಕಳೆದ ಕೆಲವಾರು ವರ್ಷಗಳಲ್ಲಿ ರೆನ್‍ಮಿನ್‍ಬಿ ದರವು ಬಹುತೇಕ ಸ್ಥಿರವಾಗಿಯೇ ಇದೆ. ಒಂದುಯುವಾನ್‍ಗೆ 10 ರೂಪಾಯಿಗಳ ವಿನಿಮಯದರ ಕಳೆದ ಐದು ವರ್ಷಗಳಿಂದಲೂ ಹಾಗೆಯೇ ಇದೆ. ಈ ಕೃತಕ ವಿನಿಮಯದರ ನಿರ್ಣಯದಿಂದ ಚೀನಾ ತನ್ನ ರಫ್ತು-ಆಮದು ಪದಾರ್ಥಗಳ ಮೌಲ್ಯವನ್ನು ಹೇಗೆ ಬೇಕಾದರೂ ಹಾಗೆ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಾಗಿದೆ.

ಚೀನಾತನ್ನ ಆಮದಿನ ಮೇಲೆ ಅತೀವ ನಿರ್ಬಂಧ ಹೇರಿದೆ. ಹಲವಾರು ವಲಯಗಳಲ್ಲಿ ಆಮದು ಒಪ್ಪಿರುವ ಕೆಲ ಕ್ಷೇತ್ರಗಳಲ್ಲಿ ಅಮೆರಿಕೆಯ ಕಂಪನಿಗಳು ಕಡ್ಡಾಯವಾಗಿ ಸ್ಥಳೀಯ ಕಂಪನಿಗೆ ಸೀಮಿತ ಸಮಯದಲ್ಲಿ ತಂತ್ರಜ್ಞಾನ ವರ್ಗಾವಣೆ ಮಾಡಲೇಬೇಕಾದ ಕಾನೂನಿದೆ.

ಈ ಎಲ್ಲಾ ಕಾರಣಗಳಿಗಾಗಿ ಅಮೆರಿಕದ ಆಡಳಿತ ಚೀನಾದ ಮೇಲೆ ಇದೀಗ ಸಿಡಿದೆದ್ದು ನಿಂತಿದೆ. ಕಳೆದ ಕೆಲವಾರು ತಿಂಗಳಿನಲ್ಲಿಯೇ ಚೀನಾದಿಂದ ಆಮದಾಗುವ $500 ಬಿಲಿಯನ್ ಪದಾರ್ಥಗಳ ಮೇಲೆ ಟ್ರಂಪ್ ಸರ್ಕಾರ ಶೇಕಡಾ 25ರ ಸುಂಕ ಹೇರಿದೆ. ಇದಕ್ಕೆ ಪ್ರತೀಕಾರವಾಗಿ $300 ಬಿಲಿಯನ್ ಮೌಲ್ಯದ ಅಮೆರಿಕದ ವಸ್ತುಗಳ ಮೇಲೆ ಸುಂಕ ಹೇರುವುದಾಗಿ ಚೀನಾ ಹೇಳಿಕೊಂಡಿದೆ. ಅಮೆರಿಕಾ ಮತ್ತು ಚೀನಾ ನಡುವಿನ ಈ ಸುಂಕ ಸಮರದ ನೆರಳಿನಲ್ಲಿ ವಿಶ್ವದ ಆರ್ಥಿಕತೆ ವಿಚಲಿತಗೊಂಡಂತೆ ಕಾಣುತ್ತಿದೆ. ಏಟಿಗೆ ಎದಿರೇಟು ನೀಡುವ ಈ ಸ್ಪರ್ಧೆಯಲ್ಲಿ ಮುಕ್ತ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಕುಸಿಯುತ್ತಿದೆ. ಅಮೆರಿಕಾದ ಸ್ಪರ್ಧಾತ್ಮಕರಾಜಕೀಯ ಪಕ್ಷಗಳ ಕೆಸರೆರೆಚಾಟದಲ್ಲಿ ಈ ತಿಕ್ಕಾಟ ಮತ್ತಷ್ಟು ಗೋಜಲಾಗಿದೆ.

ಅಮೆರಿಕಾ ಮತ್ತು ಚೀನಾ ನಡುವಣ ಈ ಸುಂಕ ಯುದ್ಧ ನಿಧಾನವಾಗಿಯಾದರೂ ಎರಡು ವಿಶ್ವಶಕ್ತಿಗಳ ನಡುವಿನ ಶೀತಲ ಸಮರದ ಶುರುವಾತಿನಂತೆ ಕಾಣುತ್ತಿದೆ.ಅಮೆರಿಕವು ಇದಕ್ಕೆ ಚೀನಾವನ್ನು ದೂಷಿಸುತ್ತಿದೆ. 2001ರಲ್ಲಿ ಡಬ್ಲುಟಿಓ ಸೇರಿದಾಗಿನಿಂದ ಜಾಗತಿಕ ವ್ಯಾಪಾರದ ಲಾಭವನ್ನು ಪಡೆದಚೀನಾ ಬೇರೆ ದೇಶಗಳಿಗೆ ತನ್ನ ನೆಲದಲ್ಲಿ ಮುಕ್ತ ಮಾರುಕಟ್ಟೆಯ ಅವಕಾಶವನ್ನು ನಿರಾಕರಿಸಿದೆ. ಆದರೆ ಈ ದೂಷಣೆಗೆ ಚೀನಾದ ಆಕ್ಷೇಪವಿದೆ. 21ನೇ ಶತಮಾನದಲ್ಲಿ ಜಾಗತಿಕವಾಗಿ ಚೀನಾದ ಬೆಳವಣಿಗೆಯನ್ನು ಸಹಿಸದ ಅಮೆರಿಕಾ ಇಲ್ಲಸಲ್ಲದ ತಡೆಯೊಡ್ಡುತ್ತಿದೆ; ಪ್ರಪಂಚದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾದ ಚೀನಾ ಸಹಜವಾಗಿ ತನ್ನ ಪ್ರಭಾವಲಯವನ್ನು ಹಿಗ್ಗಿಸಿಕೊಳ್ಳುತ್ತಿದೆ;ಇದನ್ನು ಸಹಿಸದ ಅಮೆರಿಕಾ ಚೀನಾದ ಆರ್ಥಿಕತೆ ತನ್ನ 1.4 ಬಿಲಿಯನ್‍ ಜನಸಂಖ್ಯೆಯ ಸುಧಾರಿತ ಕಲ್ಯಾಣವನ್ನು ಕೇವಲವಾಗಿ ಕಾಣುತ್ತಿದೆ ಹಾಗೂ ನಗಣ್ಯವಾಗಿ ಬಿಂಬಿಸುತ್ತಿದೆ ಎಂದು ಹೇಳುತ್ತಿದೆ.

ಎರಡು ರಾಷ್ಟ್ರಗಳ ನಡುವೆ ಸುಂಕ ಸಮರವಾಗಿ ಶುರುವಾದ ಈ ವಿವಾದ ನಿಧಾನವಾಗಿಯಾದರೂ ಸ್ಪಷ್ಟವಾಗಿ ವಿಶ್ವದ ಎರಡು ಶಕ್ತಿಗಳ ನಡುವಣ ಶೀತಲ ಸಮರವಾಗಿ ಕಂಡುಬರುತ್ತಿದೆ. ಇದರ ಮುಂದುವರಿದ ಭಾಗವಾಗಿ ಅಮೆರಿಕವು ತನ್ನ ಸೂಕ್ಷ್ಮ ವಲಯಗಳಲ್ಲಿ ಚೀನಾದ ಬಂಡವಾಳ ಹೂಡಿಕೆಯನ್ನು ತಡೆಯುತ್ತಿದೆ. ಕೃತಕ ಬುದ್ಧಿಮತ್ತೆ ಹಾಗೂ ಐದನೇ ಪೀಳಿಗೆಯ ತಂತ್ರಜ್ಞಾನದ ಆಧುನಿಕ ಕ್ಷೇತ್ರಗಳಲ್ಲಿ ಚೀನಾವನ್ನು ಹೊರಗಟ್ಟಿದೆ. ಚೀನಾದ ಬೆಲ್ಟ್ ಮತ್ತು ರೋಡ್ ಇನಿಷಿಯೇಟಿವ್ ಹಾಗೂ ಚೀನಾದ ವಿದೇಶಿ ಬಂಡವಾಳ ಹೂಡಿಕೆಗೆ ರಸ್ತೆ ಮುಚ್ಚಿದೆ. ಚೀನಾ ಸಮೀಪದ ಸಮುದ್ರಗಳಲ್ಲಿ ಅಮೆರಿಕಾತನ್ನ ಯುದ್ಧನೌಕೆಗಳ ಅಭ್ಯಾಸ ಮುಂದುವರಿಸಿ ದೈನಂದಿನ ಎಚ್ಚರಿಕೆ ನೀಡುತ್ತಿದೆ.

20ನೇ ಶತಮಾನದಲ್ಲಿ ಅಮೆರಿಕಾ-ರಷ್ಯಾಗಳ ನಡುವಿನ ಶೀತಲ ಸಮರಕ್ಕೂ ಹಾಗೂ 21ನೇ ಶತಮಾನದ ಅಮೆರಿಕಾ-ಚೀನಾ ಶೀತಲ ಸಮರಕ್ಕೂ ಪ್ರಮುಖ ವ್ಯತ್ಯಾಸಗಳಿವೆ. ಈ ಎರಡೂ ಶೀತಲ ಸಮರಗಳಲ್ಲಿ ಮುಕ್ತ ಮಾರುಕಟ್ಟೆಯ ಜಾಪ್ರಭುತ್ವ ಹಾಗೂ ಕೇಂದ್ರ ನಿಯಂತ್ರಣದ ಆರ್ಥಿಕತೆಯ ಸರ್ವಾಧಿಕಾರಿ ಆಡಳಿತಗಳಿದ್ದರೂ ಸಾಮ್ಯಇಲ್ಲಿಗೇ ನಿಲ್ಲುತ್ತದೆ. 20ನೇ ಶತಮಾನದಲ್ಲಿಯೇ ರಷ್ಯಾ ಒಂದು ಸೋಲುತ್ತಿರುವ ಹಾಗೂ ಸಣ್ಣ ಪ್ರಮಾಣದ ಶಕ್ತಿಯಾಗಿತ್ತು. ರಷ್ಯಾದ ಸೋಲು ಮತ್ತು ಪತನ ನಿಶ್ಚಿತವಾಗಿತ್ತು. ಆದರೆ ಚೀನಾ ಆರ್ಥಿಕವಾಗಿ ಪ್ರಬಲವಾಗುತ್ತಿರುವ ಬೃಹತ್ ಶಕ್ತಿ. ಮುಂದಿನ ದಶಕಗಳಲ್ಲಿ ಚೀನಾ ಅಮೆರಿಕದ ಸರಿಸಮಾನ ಆರ್ಥಿಕ ಶಕ್ತಿಯಾಗುವ ಸಾಮರ್ಥ್ಯ ಹೊಂದಿದೆ. ಮೇಲಾಗಿ ಚೀನಾ ಜಾಗತಿಕ ಆರ್ಥಿಕತೆಯಲ್ಲಿ ಸಂಪೂರ್ಣ ತನ್ನನ್ನು ತೊಡಗಿಸಿಕೊಂಡಿದೆ ಹಾಗೂ ವಿಶ್ವದಾದ್ಯಂತ ತನ್ನ ಕಬಂಧಬಾಹುಗಳನ್ನು ಹರಡಿದೆ.

ಯೂರೋಪಿನ ಮುಖ್ಯ ರಾಷ್ಟ್ರಗಳು, ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತಿತರ ದೇಶಗಳು ಅಮೆರಿಕಾದ ಬೆಂಬಲಕ್ಕೆ ನಿಲ್ಲಬಹುದು. ಯೂರೋಪಿನ ಕೆಲ ಬಡರಾಷ್ಟ್ರಗಳು, ರಷ್ಯಾ, ಪಾಕಿಸ್ತಾನ ಮತ್ತಿತರ ಏಷ್ಯಾ-ಆಫ್ರಿಕಾ ರಾಷ್ಟ್ರಗಳು ಚೀನಾದ ಪ್ರಭಾವಕ್ಕೆ ಮಣಿಯಬಹುದು. ಈ ಶೀತಲ ಸಮರದ ಮೊದಲ ಪರಿಣಾಮ ವಿಶ್ವದ ಮುಕ್ತ ಜಾಗತಿಕ ವ್ಯಾಪಾರದ ಮೇಲೆಯೇ ಬೀಳಲಿದೆ.

ಈ ಎರಡೂ ಶಕ್ತಿಗಳ ನಡುವೆ ಮಿಲಿಟರಿ ಯುದ್ಧದ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ. ಆದರೆ ಇವುಗಳ ನಡುವಿನ ಶಾಡೋ ಬಾಕ್ಸಿಂಗ್ (ನೆರಳು ಮುಷ್ಟಿಯುದ್ಧ) ಈಗಾಗಲೇ ಕಾಣಸಿಗುತ್ತಿದೆ.ಅಮೆರಿಕವು ಚೀನೀ ಕಂಪನಿಗಳಾದ ಹ್ವಾವೇ ಮತ್ತು ಝಡ್‍ಟಿಇ ಗಳ ಮೇಲೆ ಬೌದ್ಧಿಕ ಹಕ್ಕು ಮತ್ತು ತಂತ್ರಜ್ಞಾನ ಚೌರ್ಯದ ಗಂಭೀರ ಆಪಾದನೆ ಹೊರಿಸಿದೆ. ಈ ಕಂಪನಿಗಳನ್ನು ತನ್ನಕಪ್ಪು ಪಟ್ಟಿಗೆ ಸೇರಿಸಿ ಆ ಕಂಪನಿಗಳ ನಿರ್ದೇಶಕರ ಮೇಲೆ ಕ್ರಿಮಿನಲ್‍ ಆರೋಪ ಪಟ್ಟಿ ಹಾಕಿದೆ. ಇದಕ್ಕೆ ಪ್ರತೀಕಾರವಾಗಿ ಚೀನಾ ಒಳಗುದ್ದುಗಳನ್ನು ನೀಡುವ ಕಾಯಕದಲ್ಲಿ ನಿರತವಾಗಿದೆ.

ಮುಂದಿನ ವರ್ಷಗಳ ಈ ಶೀತಲ ಸಮರದಲ್ಲಿ ಬೇರೆಲ್ಲಾ ರಾಷ್ಟ್ರಗಳು ಒಂದಲ್ಲಾ ಒಂದು ಪಕ್ಷವನ್ನು ಸೇರಬೇಕಾದ ಅನಿವಾರ್ಯತೆ ಬರಬಹುದು. ಯೂರೋಪಿನ ಮುಖ್ಯ ರಾಷ್ಟ್ರಗಳು, ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತಿತರ ದೇಶಗಳು ಅಮೆರಿಕಾದ ಬೆಂಬಲಕ್ಕೆ ನಿಲ್ಲಬಹುದು. ಯೂರೋಪಿನ ಕೆಲ ಬಡರಾಷ್ಟ್ರಗಳು, ರಷ್ಯಾ, ಪಾಕಿಸ್ತಾನ ಮತ್ತಿತರ ಏಷ್ಯಾ-ಆಫ್ರಿಕಾ ರಾಷ್ಟ್ರಗಳು ಚೀನಾದ ಪ್ರಭಾವಕ್ಕೆ ಮಣಿಯಬಹುದು. ಈ ಶೀತಲ ಸಮರದ ಮೊದಲ ಪರಿಣಾಮ ವಿಶ್ವದ ಮುಕ್ತ ಜಾಗತಿಕ ವ್ಯಾಪಾರದ ಮೇಲೆಯೇ ಬೀಳಲಿದೆ. ಜಾಗತೀಕರಣದ ಹಿಂದೆಗೆತ ಹಾಗೂ ಕಸ್ಟಮ್ಸ್ ಯುದ್ಧಗಳು ಸಾಮಾನ್ಯವಾಗಬಹುದು. ಅನವಶ್ಯಕವಾಗಿಯಾದರೂ ರಕ್ಷಣೆಯ ಮೇಲೆ ಮಾಡುವ ವೆಚ್ಚ ಬೆಳೆಯುತ್ತಾ ಹೋಗಬಹುದು. ಒಮ್ಮೆಯ ಮಿಲಿಟರಿ ಯುದ್ಧದ ಹಾನಿಗಿಂತ ದಶಕಗಳ ಕಾಲದ ಈ ಎರಡನೇ ಶೀತಲ ಸಮರವು ಮಾಡುವ ಹಾನಿ ವಿಶ್ವದ ಆರ್ಥಿಕತೆಯ ಮೇಲೆ ತನ್ನ ಕರಿನೆರಳು ಚಾಚಬಹುದು.

Leave a Reply

Your email address will not be published.