2019ರ ನೊಬೆಲ್ ಪ್ರಶಸ್ತಿಗಳು

ವಿಜ್ಞಾನಿ ಆಲ್ಫ್ರೇಡ್ ನೊಬೆಲ್ ಉಯಿಲಿನ ಪ್ರಕಾರ ವ್ಯಕ್ತಿಗಳ, ಸಂಘಸಂಸ್ಥೆಗಳ ಜನೋಪಕಾರಿ ಸಂಶೋಧನೆ, ಆವಿಷ್ಕಾರ, ಕಾರ್ಯಸಾಧನೆಗಳನ್ನು ಗಮನದಲ್ಲಿರಿಸಿಕೊಂಡು, ಪ್ರತೀ ವರ್ಷ ಡಿಸೆಂಬರ್ 10ರಂದು ಆರು ಕ್ಷೇತ್ರಗಳ ಸಾಧಕರಿಗೆ ನೊಬೆಲ್ ಪ್ರಶಸ್ತಿ ಕೊಡಲಾಗುತ್ತಿದೆ. 2019ರ ಸಾಲಿನಲ್ಲಿ ಈ ಪುರಸ್ಕಾರಕ್ಕೆ ಭಾಜನರಾದವರ ವಿವರಗಳು ಇಲ್ಲಿವೆ.

ವೈದ್ಯ ವಿಜ್ಞಾನ ಹಾಗೂ ಔಷಧಿ ವಿಜ್ಞಾನ ವಿಭಾಗ

ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಬಲ್ಲ ವಿಶಿಷ್ಟ ಸಂಶೋಧನೆಗಾಗಿ ಈ ಸಾರಿ ಮೂವರು ಸಂಶೋಧಕರಿಗೆ ನೊಬೆಲ್ ಪ್ರಶಸ್ತಿ ಸಂದಿದೆ. ಅಮೆರಿಕದ ಇಬ್ಬರು ಮತ್ತು ಓರ್ವ ಬ್ರಿಟಿಷ್ ವಿಜ್ಞಾನಿ ಒಟ್ಟಿಗೆ 9,18,000 ಡಾಲರ್ ನಗದು ಬಹುಮಾನ ಹಂಚಿಕೊಳ್ಳುವರು.

ವಿಲಿಯಂ ಕಾಲಿನ್ (61): ಅಮೆರಿಕದ ಹಾರ್ವರ್ಡ್ ಹ್ಯೂಸ್ ಮೆಡಿಕಲ್ ಇನ್ಸ್‍ಟಿಟ್ಯೂಟ್ ನಲ್ಲಿ ಸಂಶೋಧಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗ್ರೆಗ್ ಸೆಮೆಂಜಾ (63): ಅಮೆರಿಕದ ಜಾನ್ ಹಾಪ್ ಕಿನ್ಸ್ ಇನ್ಸ್‍ಟಿಟ್ಯೂಟ್ ಫಾರ್ ಸೆಲ್ ಇಂಜಿನಿಯರಿಂಗ್ ಸಂಸ್ಥೆಯ ರಿಸರ್ಚ್ ಪ್ರೋಗ್ರಾಮ್ ನಿರ್ದೇಶಕರಾಗಿದ್ದಾರೆ.

ಪೀಟರ್ ರಟ್ ಕ್ಲಿಫ್ (65): ಲಂಡನ್‍ನ ಫ್ರಾನ್ಸಿಸ್ ಕ್ರಿಕ್ ಇನ್ಸ್‍ಟಿಟ್ಯೂಟ್‍ನಲ್ಲಿ ಕ್ಲಿನಿಕಲ್ ರಿಸರ್ಚ್ ನಿರ್ದೇಶಕರಾಗಿದ್ದಾರೆ.

ಮನುಷ್ಯದ ದೇಹದಲ್ಲಿನ ಜೀವಕೋಶಗಳು, ದೇಹದಲ್ಲಿ ಆಮ್ಲಜನಕ ಪ್ರಮಾಣವನ್ನು ಹೇಗೆ ಗ್ರಹಿಸುತ್ತವೆ ಮತ್ತು ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತವೆ, ಅಲ್ಲದೆ ದೇಹದ ಚಯಾಪಚಯ ಕ್ರಿಯೆಯ ಮೇಲೆ ಆಮ್ಲಜನಕ ಹೇಗೆ ಪ್ರಭಾವ ಬೀರಬಲ್ಲದು ಎಂಬುದನ್ನು ಪತ್ತೆ ಹಚ್ಚಿದ್ದಕ್ಕಾಗಿ ಈ ಮೂವರಿಗೆ 2019ನೇ ಸಾಲಿನ ನೊಬೆಲ್ ಪ್ರಶಸ್ತಿ ಸಂದಿದೆ. ಈ ಸಂಶೋಧನೆಗಳು ಕೆಂಪು ರಕ್ತಕಣಗಳು, ಹೊಸ ರಕ್ತನಾಳಗಳು ಮತ್ತು ಜೀವರಕ್ಷಕ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಅನುವು ಮಾಡಿಕೊಟ್ಟಿತ್ತು. ಜತೆಗೆ ಕ್ಯಾನ್ಸರ್, ಅನಿಮಿಯಾ ಮೊದಲಾದ ರೋಗಗಳಿಗೆ ಚಿಕಿತ್ಸೆ ನೀಡಲು ನೆರವಾಗಿತ್ತು. ದೇಹದಲ್ಲಿನ ಆಮ್ಲಜನಕ ವ್ಯವಸ್ಥೆಯನ್ನು ಈ ರೋಗಗಳ ಸಂದರ್ಭದಲ್ಲಿ ಸರಿಪಡಿಸಲು ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುವ ಹೊಸ ಔಷಧಗಳನ್ನು ಕಂಡುಹಿಡಿಯಲು ಇವರ ಸಂಶೋಧನೆ ನೆರವಾಯಿತು.

ಭೌತಶಾಸ್ತ್ರ ವಿಭಾಗ

ಬ್ರಹ್ಮಾಂಡದಲ್ಲಿ ನಮ್ಮ ಸ್ಥಳದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವ ಮೂಲಕ, ಅದರ ಕುರಿತ ಅರಿವನ್ನು ಹೆಚ್ಚಿಸಲು ನೆರವಾದ ಮೂವರು ವಿಜ್ಞಾನಿಗಳಿಗೆ ಈ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪುರಸ್ಕಾರ ಸಿಕ್ಕಿದೆ. ‘ಬಿಗ್ ಬ್ಯಾಂಗ್ (ಮಹಾಸ್ಫೋಟ) ನಂತರ ನಮ್ಮ ಜಗತ್ತು ಹೇಗೆ ರೂಪುಗೊಂಡಿತು ಎಂಬ ಬಗ್ಗೆ ಜನರು ಅರ್ಥೈಸಿಕೊಳ್ಳಲು ಪೀಬಲ್ಸ್ ನಡೆಸಿದ ಸಂಶೋಧನೆ ನೆರವಾಗಿದೆ. ಇನ್ನು ಸೌರವ್ಯವಸ್ಥೆಯ ಹೊರಗಡೆ ಇರುವ ಗ್ರಹವೊಂದನ್ನು 1995ರಲ್ಲಿ ಮೇಯರ್ ಹಾಗೂ ಕ್ಯೂಲೊಜ್ ಸಂಶೋಧಿಸಿದರು. ಇದು ಸೌರಮಾದರಿ ನಕ್ಷತ್ರವೊಂದನ್ನು ಕ್ಷೀರಪಥದಲ್ಲಿ ಪರಿಭ್ರಮಿಸುತ್ತಿತ್ತು. ಈ ಕಾರಣಕ್ಕೆ ಇವರಿಗೆ ಪ್ರಶಸ್ತಿ ನೀಡಲಾಗಿದೆ.

84ರ ಹರೆಯದ ವಿಶ್ವವಿಜ್ಞಾನ ತಂತ್ರಜ್ಞ ಜೇಮ್ಸ್ ಪೀಬಲ್ಸ್ ಮೂಲತಃ ಕೆನಡಾದವರಾಗಿದ್ದರೂ ಅಮೆರಿಕದ ಪ್ರಿನ್ಸಟನ್ ವಿವಿಯಲ್ಲಿ ಸಂಶೋಧಕರಾಗಿದ್ದಾರೆ. 77 ವರ್ಷದ ಸ್ವಿಜರ್ಲೆಂಡ್‍ನ ಲೌಸೇನ್‍ನ ಖಗೋಳಶಾಸ್ತ್ರಜ್ಞರಾದ ಮೈಕೆಲ್ ಮೇಯರ್ ಅವರು ಜಿನೆವಾ ವಿವಿಯಲ್ಲಿ ಸಂಶೋಧಕರಾಗಿದ್ದಾರೆ ಹಾಗೂ ಡಿಡಿಯರ್ ಕ್ವೆಲೋಜ್ ಸ್ವಿಜರ್ಲೆಂಡಿನವರಾಗಿದ್ದು ಅಮೆರಿಕದ ಕೇಂಬ್ರಿಡ್ಜ್ ವಿವಿಯಲ್ಲಿ ವಿಜ್ಞಾನಿಯಾಗಿದ್ದಾರೆ. ಸದ್ಯ, ಈ ಮೂವರಿಗೆ ನೊಬೆಲ್ ಗೌರವ ದಕ್ಕಿದೆ. ಇವರ ಸಂಶೋಧನೆಗಳು ವಿಶ್ವದ ಪರಿಕಲ್ಪನೆಯನ್ನೇ ಬದಲಿಸಿದವು ಎಂದೂ ಸಹ ಸಮಿತಿ ಹೊಗಳಿದೆ. ಪ್ರಶಸ್ತಿಯ ಮೊತ್ತ 9.14 ಲಕ್ಷ ಡಾಲರ್, ಒಂದು ಚಿನ್ನದ ಪದಕವನ್ನು ಒಳಗೊಂಡಿದೆ.

ರಾಸಾಯನ ಶಾಸ್ತ್ರ ವಿಭಾಗ

ಮೊಬೈಲ್ ಫೋನ್, ಲ್ಯಾಪ್ ಟಾಪ್ ಹಾಗು ಇಲೆಕ್ಟ್ರಿಕ್ ಕಾರುಗಳ ಅಭಿವೃದ್ಧಿಗೆ ನೆರವಾಗಬಲ್ಲ ಲೀಥಿಯಂ-ಅಯಾನ್ ಬ್ಯಾಟರಿ ಆವಿಷ್ಕರಿಸಿದ ಮೂವರು ವಿಜ್ಞಾನಿಗಳಿಗೆ 2019ನೇ ಸಾಲಿನ ರಾಸಾಯನಶಾಸ್ತ್ರದ ನೊಬೆಲ್ ದೊರೆತಿದೆ: ಅಮೆರಿಕದ ಜಾನ್ ಗುಡ್ ಎನಫ್, ಬ್ರಿಟನ್‍ನ ಸ್ಟ್ಯಾನ್ಲೀ ವಿಟ್ಟಿಂಗ್ ಹ್ಯಾಂ ಹಾಗೂ ಜಪಾನ್‍ನ ಅಕೀರಾ ಯೊಶಿನೊ. 97 ವರ್ಷದ ಜಾನ್ ಗುಡ್ ಎನಫ್ ಅವರು ನೊಬೆಲ್ ಇತಿಹಾಸದಲ್ಲಿಯೇ ಈ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಹಗುರವಾಗಿರುವ, ಪುನಃ ಭರ್ತಿ ಮಾಡಬಲ್ಲ ಶಕ್ತಿಶಾಲಿ ಲೀಥಿಯಂ ಬ್ಯಾಟರಿಗಳು ಇಂದು ಜೀವನದ ಹಾಸುಹೊಕ್ಕಾಗಿವೆ. ಮೊಬೈಲ್, ಲ್ಯಾಪಟಾಪ್, ಇಲೆಕ್ಟ್ರಿಕ್ ವಾಹನಗಳು ಹೀಗೆ ಎಲ್ಲದರಲ್ಲೂ ಬಳಕೆಯಾಗುತ್ತಿವೆ. ಸೌರಶಕ್ತಿ ಚಾಲಿತ, ಪವನಶಕ್ತಿ ಚಾಲಿತ ವಿದ್ಯುತ್ ಶೇಖರಣೆಯಲ್ಲೂ ಇದು ಮಹತ್ವದ ಪಾತ್ರವಹಿಸಿದೆ. ಪಳೆಯುಳಿಕೆ ಇಂಧನ ಮುಕ್ತ ಸಮಾಜ ನಿರ್ಮಾಣಕ್ಕೆ ದೊಡ್ಡ ಕೊಡುಗೆ ಸಲ್ಲಿಸಿವೆ. ಲೀಥಿಯಂ ಬ್ಯಾಟರಿ ಆವಿಷ್ಕಾರಕ್ಕಾಗಿ ಮೂವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಬಹುಮಾನದ ಮೊತ್ತ ರೂ.65.1 ಕೋಟಿ ಡಾಲರ್ ನಗದು ರೂಪದಲ್ಲಿದ್ದು ಪಾರಿತೋಷಕವನ್ನು ಹೊಂದಿದೆ.

1970ರಲ್ಲಿ ತೈಲ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಪರ್ಯಾಯ ಇಂಧನಮೂಲಕ್ಕೆ ಸಂಶೋಧನಾ ಮಾರ್ಗಗಳು ತೀರ್ವಗೊಂಡಿದ್ದವು. ವಿಟ್ಟಿಂಗ್ ಹ್ಯಾಮ್ ಅವರು ನೀರಿನಲ್ಲೂ ತೇಲಬಹುದಾದಷ್ಟು ಹಗುರವಾಗಿರುವ ಲೀಥಿಯಂ ಲೋಹದ ಮೂಲಕ ಬ್ಯಾಟರಿ ತಯಾರಿಸಿ ಅಗಾಧ ವಿದ್ಯುತ್ ಶೇಖರಿಸಿಡಬಹುದು ಎಂಬುದನ್ನು ಅನ್ವೇಷಿಸಿದರು. ಈ ಮೊದಲು ಬ್ಯಾಟರಿಗಳಲ್ಲಿ ವಿದ್ಯುತ್ ಸಂಗ್ರಹಕ್ಕೆ ಲೆಡ್ ಆಸಿಡ್ ಕೋಶಗಳನ್ನು ಬಳಸಲಾಗುತ್ತಿತ್ತು. ಆದರೆ ಇವೆಲ್ಲಕ್ಕಿಂತ ಹೆಚ್ಚಿನ ಪ್ರಮಾಣದ ವಿದ್ಯುತ್ ಸಂಗ್ರಹಿಸಿಟ್ಟುಕೊಳ್ಳುವ ಸಾಮಥ್ರ್ಯ ಈ ಲೀಥಿಯಂಗಿದೆ ಎಂಬುದನ್ನು ಅವರು ತೋರಿಸಿಕೊಟ್ಟರು. ಆದರೆ ಈ ಬ್ಯಾಟರಿ ಬಳಕೆ ಸ್ಥಿರವಾಗಿರಲಿಲ್ಲ. ಇದಕ್ಕೆ ನಂತರದಲ್ಲಿ ಗುಡ್ ಎನಫ್ ಅವರು ಬ್ಯಾಟರಿ ಸಾಮಥ್ರ್ಯವನ್ನು ನಾಲ್ಕು ವ್ಯಾಟ್ ಗಳಿಗೆ ಹೆಚ್ಚಿಸುವಲ್ಲಿ ನೆರವಾದರು. 1985ರಲ್ಲಿ ಯಶಿನೊ ಅವರು ಲೀಥಿಯಂ ಅಯಾನ್ ಗಳನ್ನು ಶೇಖರಿಸಬಲ್ಲ ಕಾರ್ಬನ್ ಆಧಾರಿತ ವಸ್ತುವಿನ ಮೂಲಕ ವಾಣಿಜ್ಯ ಬಳಕೆಗೆ ಅನುವಾಗುವ ರೀತಿಯಲ್ಲಿ ಬ್ಯಾಟರಿ ಅಭಿವೃದ್ಧಿಪಡಿಸಿದರು. 1991ರಿಂದ ಲೀಥಿಯಂ ಅಯಾನ್ ಬ್ಯಾಟರಿಗಳ ಬಳಕೆ ಆರಂಭವಾಗಿ ಇಂಧನ ಕ್ಷೇತ್ರದಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿವೆ.

ಸಾಹಿತ್ಯ ವಿಭಾಗ

ಸಾಹಿತ್ಯ ಕ್ಷೇತ್ರದಲ್ಲಿ 2019ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಆಷ್ಟ್ರಿಯಾ ಕಾದಂಬರಿಕಾರ, ನಾಟಕಕಾರ ಪೀಟರ್ ಹಾಂಡ್ಕೆಗೆ ನೀಡಲಾಗಿದೆ. ಇದರ ಜತೆಗೆ 2018ನೇ ಸಾಲಿನ ಸಾಹಿತ್ಯ ನೊಬೆಲ್ ಅನ್ನು ಪೋಲೆಂಡ್ ಲೇಖಕಿ ಓಲ್ಗಾ ತೊಕಾರ್ಚುಕ್ ಗೆ ನೀಡಲಾಗಿದೆ. ಕಳೆದ ಬಾರಿ ಪ್ರಶಸ್ತಿ ಪ್ರಕಟಿಸುವ ಸಂದರ್ಭಕ್ಕೆ ಮುಂಚಿತವಾಗಿ ಆಯ್ಕೆ ಮಂಡಳಿ ಸದಸ್ಯರಾಗಿದ್ದ ಕಟಾರಿನಾ ಫ್ರೊಸ್ಟೆನ್ಸನ್ ಪತಿ ಜೀನ್ ಕ್ಲಾಡ್ ಅರ್ನಾಲ್ಟ್ ಪ್ರಶಸ್ತಿ ವಿಜೇತರ ವಿವರ ಬಹಿರಂಗ ಮಾಡಿದ ಮತ್ತು ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿದ್ದ ಹಿನ್ನೆಲೆಯಲ್ಲಿ ಪ್ರಶಸ್ತಿ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಈ ಸಾರಿ ಎರಡೂ ವರ್ಷಗಳ ವಿಜೇತರಿಗೆ ಒಟ್ಟಿಗೆ ಪ್ರಶಸ್ತಿ ಕೊಡಲಾಗಿದೆ.

1901 ರಿಂದ ಇದುವರೆಗಿನ ಸಾಹಿತ್ಯ ಕ್ಷೇತ್ರಕ್ಕೆ ಸಂದ 116 ನೊಬೆಲ್ ಪುರಸ್ಕಾರಗಳ ಪೈಕಿ ಓಲ್ಗಾ ತೊಕಾರ್ಚುಕ್ 15ನೇ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಯುವ ಜನಾಂಗಕ್ಕೆ ತೀರ ಹತ್ತಿರ ಎನಿಸುವ ಮಾದರಿಯ ನಿರೂಪಣೆಯನ್ನು ಯಶಸ್ವಿಯಾಗಿ ಕಟ್ಟಿಕೊಡುವಲ್ಲಿ ಪೋಲೆಂಡ್ ನ ಈ ಲೇಖಕಿ ಪರಿಣತಿ ಹೊಂದಿದ್ದಾರೆ. ಈ ಮೂಲಕ ಅವರಿಗೆ ತಮ್ಮ ದೇಶದ ಗಡಿಯನ್ನು ದಾಟಿ ವಿದೇಶಿ ಓದುಗರನ್ನು ಕೂಡ ಹೊಂದಲು ಸಾಧ್ಯವಾಗಿದೆ.

ಇನ್ನೋರ್ವ ಪುರಸ್ಕೃತ ಹ್ಯಾಂಡ್ಕೆ ಅವರ ಕುರಿತು ಅಕಾಡೆಮಿ, ‘ಎರಡನೇ ಮಹಾಯುದ್ಧ ಬಳಿಕ ಯುರೋಪ್ ನ ಪ್ರಭಾವಿ ಲೇಖಕರ ಸಾಲಿನಲ್ಲಿ ಪೀಟರ್ ಅವರು ಗುರುತಿಸಿಕೊಂಡಿದ್ದಾರೆ. ಆವಿಷ್ಕಾರಕ ಗುಣ ಹೊಂದಿರುವ ಅವರ ಬರಹಗಳು ಓದುಗರನ್ನು ಕೂಡ ತಮ್ಮತ್ತ ಸೆಳೆಯುತ್ತವೆ’ ಎಂದಿದೆ. ಆಸ್ಟ್ರಿಯಾ ಬರಹಗಾರ ಹ್ಯಾಂಡ್ಕೆ ಅವರು ಒಮ್ಮೆ ನೊಬೆಲ್ ಸಾಹಿತ್ಯ ಪ್ರಶಸ್ತಿಯ ಮಾನದಂಡ ಪ್ರಶ್ನಿಸಿ ಅದನ್ನು ರದ್ದು ಮಾಡಬೇಕೆಂದು ಆಗ್ರಹಿಸಿದ್ದರು. 1929ರ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ, ಜರ್ಮನಿಯ ಥಾಮಸ್ ಮ್ಯಾನ್ ಒಬ್ಬ ಭಯಾನಕ ಲೇಖಕ. ಅಂಥವರಿಗೆ ಈ ಪ್ರಶಸ್ತಿ ಬಂದಿದ್ದು ಹೇಗೆ? ಎಂದು ಹ್ಯಾಂಡ್ಕೆ ಪ್ರಶ್ನಿಸಿ, ನೊಬೆಲ್ ಸಾಹಿತ್ಯ ಪ್ರಶಸ್ತಿಯೇ ಇರಕೂಡದು ಎಂದಿದ್ದರು. ಅವರಿಗೇ ಈಗ ನೊಬೆಲ್ ಬಂದಿದ್ದು ಅಚ್ಚರಿ ಮೂಡಿಸಿದೆ. ಈ ಇಬ್ಬರಿಗೂ ತಲಾ 6.48 ಕೋಟಿ ನೀಡಲಾಗಿದೆ.

ಅತ್ಯಂತ ಹಿರಿಯ ಸಂಶೋಧಕ ಜಾನ್ ಗುಡ್ ಎನಫ್

2019ರ ರಾಸಾಯನಶಾಸ್ತ್ರ ವಿಭಾಗದ ನೋಬೆಲ್ ಪ್ರಶಸ್ತಿಗೆ ಭಾಜನರಾದ 97ರ ಹರೆಯದ ಈ ಜಾನ್ ಬಿ ಗುಡ್ ಎನಫ್ ಇದುವರೆಗಿನ ನೊಬೆಲ್ ಪ್ರಶಸ್ತಿ ಪಡೆದ ವ್ಯಕ್ತಿಗಳಲ್ಲೇ ಅತ್ಯಂತ ಹಿರಿಯರು. 2018ರಲ್ಲಿ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಪಡೆದ 96 ವರ್ಷದ ಆರ್ಥರ್ ಆಷ್ಕಿನ್ ಹಿರಿಯ ವ್ಯಕ್ತಿ ಎನಿಸಿದ್ದರು. ಈ ದಾಖಲೆಯನ್ನು ಜಾನ್ ಗುಡ್ ಎನಫ್ ಈಗ ಮುರಿದಿದ್ದಾರೆ.

ಜಾನ್ ಗುಡ್ ಎನಫ್ ಜರ್ಮನಿಯ ಜಿನಿವಾದಲ್ಲಿ 1922ರಲ್ಲಿ ಜನಿಸಿದರು. ತಂದೆ ಹಾರ್ವರ್ಡ್ ವಿವಿಯಲ್ಲಿ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅಮೆರಿಕದ ಮೆಸ್ಯಾಚುಯೆಟ್ಸ್ ಸಮೀಪದ ಗ್ರೋಟನ್ ವಸತಿ ಶಾಲೆಯಲ್ಲಿ ತಮ್ಮ ಸಹೋದರನೊಂದಿಗೆ ಅಧ್ಯಯನ ಮಾಡಿದ ಜಾನ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಚುರುಕಾಗಿದ್ದರು. 1944ರಲ್ಲಿ ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ಕೆಲಕಾಲ ಯುಎಸ್ ಆರ್ಮಿಯ ಹವಾಮಾನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಜಾನ್, ಶಿಕಾಗೋ ವಿವಿಯಿಂದ 1952ರಲ್ಲಿ ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ. ಪಡೆದುಕೊಂಡರು. ಮೆಸ್ಯಾಚುಯೆಟ್ಸ್ ಯುನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನಿಯಾಗಿ ವೃತ್ತಿ ಆರಂಭಿಸಿದ ಜಾನ್, ಸಾಧನಾ ಪಥದಲ್ಲಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ.

ಆಕ್ಸ್‍ಫರ್ಡ್ ವಿವಿಯ ಇನ್‍ಆಗ್ರ್ಯನಿಕ್ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಜಾನ್, ಲೀಥಿಯಾನ್ ರೀಚಾರ್ಜಬಲ್ ಬ್ಯಾಟರಿ ಸಂಶೋಧನೆಗಾಗಿ 10 ವರ್ಷಗಳ ಕಾಲ ಅವಿರತ ಪರಿಶ್ರಮ ಹಾಕಿದ್ದಾರೆ. ಜಪಾನಿನ ಸೋನಿ ಕಾರ್ಪೋರೇಷನ್ ಇವರು ಕಂಡುಹಿಡಿದ ಬ್ಯಾಟರಿಗೆ ಮಾರುಕಟ್ಟೆ ಒದಗಿಸಲು ಮುಂದೆ ಬಂದಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಜಪಾನ್ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಜಪಾನ್ ಪ್ರೈಜ್ ಕೂಡ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಶಾಂತಿ ವಿಭಾಗ

ಇಥಿಯೋಪಿಯಾದ ಪ್ರಧಾನಿ ಅಬಿಯ್ ಅಹ್ಮದ್ ಅಲಿಗೆ 2019ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಗಿದೆ. 1976 ಆಗಸ್ಟ್ 15ರಂದು ಜನಿಸಿದ ಅಬಿ ತಂದೆಗೆ ನಾಲ್ವರು ಪತ್ನಿಯರು. ಕುಟುಂಬದಲ್ಲಿ ಈತ 13ನೆಯವನು. ತಾಯಿಗೆ ಆರನೇ ಹಾಗೂ ಕೊನೆಯ ಮಗ. ಬಾಲ್ಯದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತನಾಗಿದ್ದ ಅಬಿ, ಇತರರೂ ಕಲಿಯಲು ಪ್ರೋತ್ಸಾಹಿಸುತ್ತಿದ್ದ.

ಇಥಿಯೋಪಿಯಾದ ರಾಷ್ಟ್ರೀಯ ಸುರಕ್ಷತಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಲೇ ಅಡಿಸ್ ಅಬಾಬಾದ ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದರು. ಇಷ್ಟಕ್ಕೇ ಸುಮ್ಮನಿರದ ಅಬಿ, ಸಾಂಪ್ರದಾಯಿಕ ಸಂಘರ್ಷ ಪರಿಹಾರದಲ್ಲಿ ಸಾಮಾಜಿಕ ಬಂಡವಾಳ ಮತ್ತದರ ಪಾತ್ರ ಕುರಿತ ವಿಷಯದಲ್ಲಿ ಡಾಕ್ಟರೇಟ್ ಗಳಿಸಿದರು. ಇವರ ಪತ್ನಿ ಕೂಡ ಸೇನಾಧಿಕಾರಿ. ಬಹುಭಾಷಾ ಚತುರ ಅಬಿ ರಾಜಕೀಯ ಪ್ರವೇಶಕ್ಕೂ ಮುನ್ನ ಸೇನಾ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರಧಾನಿಯಾದ ಬಳಿಕ ಮೊದಲ 100 ದಿನ ದೇಶದಲ್ಲಿದ್ದ ತುರ್ತು ಪರಿಸ್ಥಿತಿ ತೆರವು, ರಾಜಕೀಯ ಕೈದಿಗಳ ಬಿಡುಗಡೆ, ಮಾಧ್ಯಮಗಳ ಮೇಲಿದ್ದ ನಿರ್ಬಂಧ ತೆರವು ಹಾಗೂ ಭ್ರಷ್ಟಾಚಾರ ಆರೋಪದ ಅಧಿಕಾರಿಗಳನ್ನು ವಜಾಗೊಳಿಸುವುದರಲ್ಲಿ ಅಬಿ ಕಳೆದಿದ್ದರು. ಶಾಂತಿ, ಅಂತರಾಷ್ಟ್ರೀಯ ಸಹಕಾರ ಹಾಗೂ ನೆರೆ ರಾಷ್ಟ್ರವಾದ ಎರಿಟ್ರಿಯಾ ಜತೆಗಿನ ಗಡಿ ತಂಟೆ ಪರಿಹರಿಸುವಲ್ಲಿ ಕೈಗೊಂಡ ಕ್ರಮಗಳಿಗೆ ಈ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಬಿಯವರಿಗೆ ಕೊಡಲಾಗಿದೆ. 2018ರಲ್ಲಿ ಅಬಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಗಡಿ ವಿವಾದ ಪರಿಹಾರಕ್ಕಾಗಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದರು. ಜತೆಗೆ ಗಡಿ ವಿವಾದವಿದ್ದ ಪ್ರದೇಶದಲ್ಲಿ 2002ರ ಅಂತರಾಷ್ಟ್ರೀಯ ಗಡಿ ಮಂಡಳಿಯ ಪ್ರಸ್ತಾಪವನ್ನು ಬೇಷರತ್ತಾಗಿ ಒಪ್ಪಿಕೊಂಡರು. ಇದಕ್ಕೆ ಎರಿಟ್ರಿಯಾ ರಾಷ್ಟ್ರಾಧ್ಯಕ್ಷ ಅಫ್ವೆಕ್ರಿ ಕೂಡ ಧನಾತ್ಮಕವಾಗಿ ಸ್ಪಂದಿಸಿದರು.

ಚುಟುಕು ಸಂದರ್ಶನ

ಜಾನ್, ಇಂದು ನಿಮ್ಮನ್ನು ರಾಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಿಮಗೆ ಹೇಗನಿಸುತ್ತಿದೆ?

ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕೆ ಹೆಮ್ಮೆ ಅನಿಸುತ್ತಿದೆ. ಆದರೆ ನಾನು ಈ ಮೊದಲು ಹೇಗಿದ್ದೆನೋ ಈಗಲೂ ಹಾಗೇ ಇದ್ದೇ ನೆ…(ನಗು).
ಇಂದು ಮುಂಜಾನೆ ಪ್ರಶಸ್ತಿಗೆ ಆಯ್ಕೆಯಾದ ಬಗ್ಗೆ ತಿಳಿಸಲು ನೊಬೆಲ್ ಆಯ್ಕೆ ಸಮಿತಿಯವರು ಕರೆ ಮಾಡಿದಾಗ ನೀವು ಸಂಪರ್ಕಕ್ಕೆ ಸಿಗಲಿಲ್ಲವಂತೆ…? ನಂತರ

ಸಮಿತಿಯವರು ಯಾವಾಗ ನಿಮಗೆ ವಿಷಯ ತಿಳಿಸಿದರು?

ಹೌದು ಅವರಿಗೆ ನನ್ನನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಮುಂಜಾನೆ ಹಲ್ಲುಜ್ಜುವಾಗ ಯಾರೋ ಒಬ್ಬರು ನನ್ನ ಮೊಬೈಲ್‍ಗೆ ಕರೆ ಮಾಡಿ ವಿಷಯ ತಿಳಿಸಿದರು.

ಆ ಸಂದರ್ಭದಲ್ಲಿ, ನೀವು ಹಲ್ಲುಜ್ಜಿ ಮುಗಿಸಿದ ನಂತರ ಏನನ್ನಿಸಿತು?

ನನ್ನ ಈ ಇಳಿವಯಸ್ಸಿನಲ್ಲಿ ಅಂತಹ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ವಿಷಯ ತಿಳಿದು ಖುಷಿಯ ಜತೆಗೆ ಆಶ್ಚರ್ಯವೂ ಆಯಿತು. ಬೈಬಲ್‍ನಲ್ಲಿ ಹೇಳಿದಂತೆ ಕಟ್ಟಿಗೆ, ಒಣಹುಲ್ಲು, ದಂಟು ಎಲ್ಲವೂ ಕಾಲನ ಅಗ್ನಿಪರೀಕ್ಷೆಗೆ ಒಳಪಡಲೇಬೇಕು. ಈ ರೀತಿಯ ಮನಸ್ಥಿತಿ ಉಂಟಾಯಿತು (ನಗು).

97 ವಯಸ್ಸಿನ ನೀವು, ಇದುವರೆಗೂ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದ ಮಹನೀಯರಲ್ಲೇ ಅತ್ಯಂತ ಹಿರಿಯರು. ಇಂತಹ ದಿನವೂ ಬರುತ್ತದೆಂದು ನಿಮಗೆ ಅನಿಸಿತ್ತೇ?

ಇಲ್ಲ, ನನಗೆ ಬಹಳ ವಯಸ್ಸಾಗಿದೆ ಎಂಬುದನ್ನು ನಾನು ಕಲ್ಪಿಸಿಕೊಳ್ಳಬೇಕಷ್ಟೇ…! …ಹ ಹಾ ಹಾ…!

ಇಂದಿಗೂ ನೀವು ಪ್ರತಿದಿನ ಪ್ರಯೋಗಶಾಲೆಯಲ್ಲಿರುತ್ತೀರಿ, ಸದಾ ಸಂಶೋಧನೆಯಲ್ಲಿ ತೊಡಗಿರುತ್ತೀರಿ, ನಿರಂತರವಾಗಿ ಕೆಲಸದಲ್ಲಿರುತ್ತೀರಂತೆ, ಹೌದೇ?

ಹೌದು, ಪ್ರತಿದಿನ ಪ್ರಯೋಗಶಾಲೆಯಲ್ಲಿರುತ್ತೇನೆ, ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತೇನೆ. ಇನ್ನೇನು ಮಾಡಲಿ? ಈಗ ತಾನೇ ನಿವೃತ್ತಿ ಹೊಂದಿರುವೆ. ಸಾವಿಗಾಗಿ ಕಾಯಲೇ? ಇಲ್ಲ, ನಾನೆಂದೂ ಹಾಗೆ ಯೋಚಿಸಿದವನೇ ಅಲ್ಲ (ನಗು).

ಕೊನೆಯದಾಗಿ, ನಿಮಗೀಗ ಹೇಗನಿಸುತ್ತಿದೆ?

ಜನರನ್ನು ಒಗ್ಗೂಡಿಸುವ ಮತ್ತು ಸಮಾಜಕ್ಕೆ ಉಪಯೋಗವಾಗುವ ಈ ಕಾರ್ಯ ನನಗೆ ಸಂತಸ ತಂದಿದೆ. ಆದರೆ ನಮ್ಮ ಅನ್ವೇಷಣೆಗಳು ಮೌಲಿಕವಾಗಿ ತಟಸ್ಥವಾಗಿರುತ್ತವೆ. ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದು ನಮ್ಮ ವಿವೇಚನೆಗೆ ಬಿಟ್ಟಿದ್ದು. ಲೀಥಿಯಂ-ಅಯಾನ್ ಬ್ಯಾಟರಿಯನ್ನು ಜನ ಬಳಸುತ್ತಿರುವುದು ನನಗೆ ಸಂತಸ ತಂದಿದೆ.

ಅರ್ಥಶಾಸ್ತ್ರ ವಿಭಾಗ

ಭಾರತೀಯ-ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡುಫ್ಲೋ ಮತ್ತು ಮೈಕಲ್ ಕ್ರೆಮರ್ 2019ನೇ ಸಾಲಿನ ನೊಬೆಲ್ ಅರ್ಥಶಾಸ್ತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಜಾಗತಿಕ ಬಡತನವನ್ನು ನಿವಾರಿಸುವಲ್ಲಿ ಪ್ರಾಯೋಗಿಕ ಪ್ರಯತ್ನಗಳಿಗಾಗಿ ಈ ಮೂವರನ್ನು ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸ್ವೀಡಿಶ್ ಅಕಾಡಮಿ ತಿಳಿಸಿದೆ.

ಅಭಿಜಿತ್ ಬ್ಯಾನರ್ಜಿ ಭಾರತೀಯ ಸಂಜಾತ ಎನ್ನುವುದು ಭಾರತೀಯರಾದ ನಮಗೆಲ್ಲಾ ಹೆಮ್ಮೆಯ ವಿಚಾರ. ಅವರು ಸದ್ಯ ಅಮೆರಿಕಾ ಪೌರತ್ವವನ್ನು ಹೊಂದಿ ಅಲ್ಲಿಯೇ ವಾಸವಾಗಿದ್ದಾರೆ. ಅಭಿಜಿತ್ ಮಹಾರಾಷ್ಟ್ರದಲ್ಲಿ ಜನಿಸಿದರೂ ಅವರ ಶಿಕ್ಷಣವೆಲ್ಲಾ ಕೊಲ್ಕೊತ್ತಾದಲ್ಲೇ ನಡೆಯಿತು. ಸೌತ್ ಪಾಯಿಂಟ್ ಸ್ಕೂಲ್ ಮತ್ತು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದ ಅಭಿಜಿತ್ 1981ರಲ್ಲಿ ಅರ್ಥಶಾಸ್ತ್ರದಲ್ಲಿ ಬಿ.ಎಸ್. ಪದವಿಯನ್ನು ಪಡೆದುಕೊಂಡರು. ಬಳಿಕ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಿಂದ 1983ರಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪೂರ್ತಿಗೊಳಿಸಿದರು. ಅರ್ಥಶಾಸ್ತ್ರದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆಯಲು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಕ್ಕೆ ತೆರಳಿದ ಅಭಿಜಿತ್ ಅಲ್ಲಿ 1988ರಲ್ಲಿ `ಮಾಹಿತಿ ಅರ್ಥಶಾಸ್ತ್ರದ ಕುರಿತಾಗಿರುವ ಪ್ರಬಂಧಗಳು’ ಎಂಬ ವಿಷಯದ ಮೇಲೆ ಡಾಕ್ಟರೇಟ್ ಪದವಿಯನ್ನು ಪಡೆಯುವಲ್ಲಿ ಸಫಲರಾಗುತ್ತಾರೆ.

ಅರ್ಥಶಾಸ್ತ್ರದಲ್ಲಿನ ಸಾಮಾನ್ಯ ಸಂಬಂಧಗಳನ್ನು ಕಂಡುಕೊಳ್ಳಲು ಫೀಲ್ಡ್ ಎಕ್ಸ್‍ಪೆರಿಮೆಂಟ್ ವಿಧಾನಕ್ಕೆ ಅಭಿಜಿತ್ ಅವರು ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಅಭಿವೃದ್ಧಿ ಅರ್ಥಶಾಸ್ತ್ರವು ಅಭಿಜಿತ್ ಅವರ ಪ್ರಮುಖ ಅಧ್ಯಯನ ಮತ್ತು ಸಂಶೋಧನಾ ವಿಷಯವಾಗಿದೆ. ಈ ವಿಚಾರದಲ್ಲಿ ಅಭಿಜಿತ್ ಅವರು ತಮ್ಮ ಪತ್ನಿ ಎಸ್ತರ್ ಡಫ್ಲೋ, ಮಿಶೆಲ್ ಕ್ರೆಮೆರ್, ಜಾನ್ ಎ. ಲಿಸ್ಟ್ ಮತ್ತು ಸೆಂಥಿಲ್ ಮುಳ್ಳಯ್ಯನಾಥನ್ ಜೊತೆಯಲ್ಲಿ ಕಳೆದ ಹಲವಾರು ದಶಕಗಳಿಂದ ಕಾರ್ಯನಿರತರಾಗಿದ್ದಾರೆ. ಅರ್ಥಶಾಸ್ತ್ರದಲ್ಲಿ ಅಭಿಜಿತ್ ಅವರ ಸಾಧನೆ ಸಂಶೋಧನೆಗಳಿಗೆ 2004ರಲ್ಲಿ ಅಮೆರಿಕನ್ ಅಕಾಡೆಮಿ ಆಫ್ ಆಟ್ರ್ಸ್ ಆಂಡ್ ಸೈನ್ಸ್ ಫೆಲೋಶಿಪ್ ಲಭಿಸಿದೆ. 2009ರಲ್ಲಿ ಅರ್ಥಶಾಸ್ತ್ರದಲ್ಲಿನ ಸಾಮಾಜಿಕ ವಿಜ್ಞಾನಕ್ಕಾಗಿ ಇನ್ಫೋಸಿಸ್ ಪುರಸ್ಕಾರ ಲಭಿಸಿದೆ. 2012ರಲ್ಲಿ `ಪೂರ್ ಎಕನಾಮಿಕ್ಸ್’ ಪುಸ್ತಕಕ್ಕಾಗಿ ಜೆರಾಲ್ಡ್ ಲೋಬ್ ಪ್ರಶಸ್ತಿಯನ್ನು ಸಹಲೇಖಕಿ ಎಸ್ತರ್ ಡಫ್ಲೋ ಅವರ ಜೊತೆ ಹಂಚಿಕೊಂಡಿದ್ದಾರೆ.

ಶತಮಾನದ ಅಭಿವೃದ್ಧಿ ಗುರಿಗಳಿಗಾಗಿ ಎಕ್ಸ್‍ಪರ್ಟ್ ಪ್ಯಾನೆಲ್‍ನಲ್ಲಿ ಅಭಿಜಿತ್ ಅವರನ್ನು ವಿಶ್ವಸಂಸ್ಥೆಯ ಅಂದಿನ ಅಧ್ಯಕ್ಷ ಬಾನ್ ಕಿ ಮೂನ್ ಅವರು ನಾಮನಿರ್ದೇಶನ ಮಾಡಿದ್ದರು. ಅಭಿಜಿತ್ ಅವರು ಸಾಹಿತ್ಯ ವಿಷಯದಲ್ಲಿ ಪ್ರಾಚಾರ್ಯರಾಗಿರುವ ತನ್ನ ಬಾಲ್ಯಕಾಲದ ಗೆಳತಿ ಡಾ.ಅರುಂಧತಿ ತುಲಿ ಬ್ಯಾನರ್ಜಿ ಅವರನ್ನು ಮದುವೆಯಾಗಿದ್ದರು. ಬಳಿಕ ಅರುಂಧತಿ ಅವರಿಗೆ ವಿಚ್ಛೇದನ ನೀಡಿದ ಬಳಿಕ ಅಭಿಜಿತ್ ಅವರು ಬಡತನ ನಿವಾರಣೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದಲ್ಲೇ ಪ್ರಾಚಾರ್ಯೆಯಾಗಿರುವ ತನ್ನ ದೀರ್ಘಕಾಲೀನ ಗೆಳತಿ ಎಸ್ತರ್ ಅವರನ್ನು 2015ರಲ್ಲಿ ಮದುವೆಯಾಗಿದ್ದರು. ಇದೀಗ ಪತಿ ಮತ್ತು ಪತ್ನಿ ಇಬ್ಬರಿಗೂ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ಲಭಿಸಿದೆ.

ಅಭಿಜಿತ್ ಅವರ ತಾಯಿ ನಿರ್ಮಲಾ ಬ್ಯಾನರ್ಜಿ ಅವರು ಕೊಲ್ಕತ್ತಾದ ಸೆಂಟರ್ ಫಾರ್ ಸ್ಟಡೀಸ್ ಇನ್ ಸೋಷಿಯಲ್ ಸ್ಟಡೀಸ್ ನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರು. ಇನ್ನು ಅಭಿಜಿತ್ ತಂದೆ ದೀಪಕ್ ಬ್ಯಾನರ್ಜಿ ಅವರು ಕೊಲ್ಕೊತ್ತಾದಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಹಾಗೂ ವಿಭಾಗ ಮುಖ್ಯಸ್ಥರಾಗಿದ್ದರು. ಹೀಗೆ ಅರ್ಥಶಾಸ್ತ್ರ ಹಿನ್ನೆಲೆಯ ತಂದೆ-ತಾಯಿಗಳ ಮಗ ತಾನೂ ಒಬ್ಬ ಅರ್ಥಶಾಸ್ತ್ರಜ್ಞನಾಗಿ ಇದೀಗ ವಿಶ್ವದ ಬಹುದೊಡ್ಡ ಗೌರವವಾಗಿರುವ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Leave a Reply

Your email address will not be published.