ಕವಿತೆ

ಬೀದಿಯಲ್ಲಿ ಒಬ್ಬ ಮನುಷ್ಯ

ಹೊರಟಿದ್ದಾನೆ
ಕಾಲೆಳೆದುಕೊಂಡು ಬೀದಿಯಲ್ಲಿ
ಜೇಬಿನಿಂದ ತೆಗೆದ ಬೀಡಿಯನ್ನು ಹೊತ್ತಿಸಿಕೊಂಡು
ಕಡು ಬಿಸಿಲಲ್ಲಿ
ಇತಿಹಾಸದ ಕಾರ್ಗತ್ತಲು
ಹಕ್ಕಿಗಳ ಕಲರವ
ಹಸಿರು ಹೊದ್ದ ಮರಗಳತ್ತಲೂ ಧ್ಯಾಸವಿಲ್ಲ
ಅವನಿಗೆತಂತಿಯ ಮೇಲೆ ತೂಗುವ ಹಕ್ಕಿ
ಅವನನ್ನು ಕಂಡಿತೋ ಇಲ್ಲವೋ ಹೇಳಲಾಗದು
ಆದರೆ ಗಾಳಿ ಅವನ ಬೀಡಿಯ ಧೂಮವನು
ಹೊತ್ತೊಯ್ಯುತಿದೆ ತಾ ಸಾಗುವ ಎಲ್ಲೆಯವರೆಗೂಅವನು
ಬೀದಿಯಲ್ಲಿ ಹೊರಟಿದ್ದಾನೆ
ಹೆಗಲಿಗೆ ಸುಖ ದುಃಖದ ಮೂಟೆ ಹೊತ್ತು
ಒಟ್ಟಿನಲ್ಲಿ
ಅವನ ಹೋಗುವಿಕೆಯಿಂದ
ಯಾರಿಗೂ ಏನೂ ಆಗಬೇಕಿಲ್ಲ
ಅವನತ್ತ ಯಾರ ಗಮನವೂ ಇಲ್ಲ
ದೇವತೆಗಳಿಗೂ, ಆಕಾಶಕ್ಕೂ ಮತ್ತೆ
ಲೋಕದ ಚಿಂತೆಯಲಿ ಮುಳುಗಿದವರಿಗೂ
ಅವನ ಬಗ್ಗೆ
ಯಾವ ಕುತೂಹಲವೂ ಇಲ್ಲ..
 

ಅವನು ಹೊರಟಿದ್ದಾನೆ
ಶಬ್ದಕೋಶದಿಂದ
ಒಂದು ಶಬ್ದ ಹೊರಟಂತೆ
ಹೊರಟಿದ್ದಾನೆ ಲೋಪದ ಕಡೆಗೆ
ಈ ಕವಿತೆಯೂ ಅವನ ಹೋಗುವಿಕೆಯನ್ನಾಗಲಿ,
ಹೀಗೆ ಹೇಳಹೆಸರಿಲ್ಲದಂತೆ ಅವನ
ಕಳೆದು ಹೋಗುವಿಕೆಯನ್ನಾಗಲಿ ತಪ್ಪಿಸಲಾಗದು

 

ನಾಳೆ ಶಬ್ದವು ಇಲ್ಲವಾದಾಗ
ಆ ಮನುಷ್ಯನೂ ಇಲ್ಲವಾದಾಗ
ಶೂನ್ಯದಂತಹ
ಸಣ್ಣ ಬಿರುಕೊಂದು ಉಳಿವುದು
ಇಷ್ಟೇ ಇಷ್ಟು ಕಣ್ಣಿಗೆ ಕಾಣದ
ಅಣುವಿನಷ್ಟು
ಮತ್ಯಾರೋ ಒಬ್ಬ ಬಂದು
ಅದನ್ನು ಒರೆದುಕೊಂಡು ನಡೆದುಬಿಡುವನು…

 

ಹಿಂದಿ ಮೂಲ: ಅಶೋಕ್ ವಾಜಪೇಯಿ     ಕನ್ನಡಕ್ಕೆ: ರೇಣುಕಾ ನಿಡಗುಂದಿ

 

ಸೂಜಿಗವನ

ನನ್ನ ದೇಹ ಅಂಗಾಂಗಗಳಲ್ಲಿ
ಅವನಿಗೆ
ಅತಿಪ್ರಿಯ ಅಂಗ
ಯಾವುದೆಂದು ತಿಳಿಯುವ
ಬಯಕೆಯ ತುಡಿತದಲ್ಲಿ
ಚರಮಸ್ಥಿತಿ ತಲುಪಿವೆ
ನನ್ನ ಅಂಗಗಳು ಅವನ
ಬಯಕೆಯ ತುಡಿತದಲ್ಲಿ

-ಸೂಜಿ

 

ಅಲ್ಲೊಂದು ಲೋಕವಂತೆ

ಹಸಿವೆಯ ಗೊಡವೆಯಿಲ್ಲ
ರೋಗದ ನರಳಾಟವಿಲ್ಲ
ನಿದಿರೆಗೆ ಭಂಗವಿಲ್ಲ
ಕನಸು ಕನವರಿಕೆಗಳಿಲ್ಲ
ಬಯಕೆಗಳ ನಿರಾಸೆಯಿಲ್ಲ
ಚಿಂತೆ ವ್ಯಸನಗಳಿಲ್ಲ
ಕೆಲಸದ ರೇಜಿಗೆಯಿಲ್ಲ
ಬದುಕ ಬವಣೆಯಿಲ್ಲ
ಆದರೂ ಯಾರೂ ಅಲ್ಲಿಗೆ
ಹೋಗಲು ಸಿದ್ಧರಿಲ್ಲ!

ಹೋಗಲು ನನ್ನದೂ ತಕರಾರೇನಿಲ್ಲ;
ಮುಂದೆ ಹೋದವರ ಬಳಿ
ಮಾತು ಮುಂದುವರೆಸಬೇಕಿದೆ
ಆದರಿಲ್ಲಿ ಸ್ವಯಂ ಷರತ್ತೊಂದಿದೆ
ಬಾಕಿ ಜವಾಬ್ದಾರಿಗಳ ಮಾಡಿ
ಮುಗಿಸಲೇಬೇಕಿದೆ
ಆ ಲೋಕದ ಯಜಮಾನನಿಗೊಂದು
ಮನವಿ ಸಲ್ಲಿಸಲಾಗಿದೆ;
ನಿನ್ನ ಲೋಕದ ನಿಶ್ಚಿತ ಕರೆಯೋಲೆಗೆ
ನನ್ನ ವಿಳಾಸ ಈಗಲೇ ದೊರೆಯದಿರಲಿ.

-ಕೆ.ಎಂ.ವೀರಮ್ಮ

Leave a Reply

Your email address will not be published.