ಅಂತರ್ಗತ ಮೌಢ್ಯಕ್ಕೆ ಕಾನೂನು ಮದ್ದಲ್ಲ

ವರ್ಷಕ್ಕೊಮ್ಮೆ ದೇವರಿಗೆ ಹರಕೆ ಹೊತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಜನಸಮುದಾಯಗಳು ಈಗ ಹೊಸ ಪೂಜಾ ವಿಧಾನಗಳು, ವ್ರತಾಚರಣೆಗಳು ಮತ್ತು ಹೋಮಗಳಲ್ಲಿ ಸಾಂತ್ವನ ಕಾಣುತ್ತಿವೆ. ಹಾಗಾಗಿಯೇ ವಾಸ್ತುಹೋಮ, ಗಣಹೋಮ, ಸತ್ಯನಾರಾಯಣ ಪೂಜೆಯಂತಹ ಮೌಢ್ಯಾಚರಣೆಯ ಸಾಧನಗಳು ಗ್ರಾಮ ಗ್ರಾಮಕ್ಕೂ ವ್ಯಾಪಿಸುತ್ತಿವೆ.

ನಾ ದಿವಾಕರ

ಇತಿಹಾಸ ಕಾಲದಿಂದಲೂ ಮಾನವ ಸಮಾಜದಲ್ಲಿ ಮೌಢ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಂಡೇ ಬಂದಿದೆ. ಮೂಲತಃ ಮನುಷ್ಯ ತನ್ನ ಬದುಕಿನಲ್ಲಿ ತಾನು ಸ್ವಾನುಭವದಿಂದ ಅಥವಾ ಅನುಭಾವದಿಂದ ಕಂಡುಕೊಳ್ಳಲಾಗದ ವಿದ್ಯಮಾನಗಳನ್ನು ಅತೀತ ಶಕ್ತಿಗಳಲ್ಲಿ ಕಾಣಲು ಪ್ರಯತ್ನಿಸುತ್ತಾನೆ. ಹಾಗೆಯೇ ತನ್ನ ನಿತ್ಯ ಜೀವನದಲ್ಲಿ ಎದುರಾಗುವ ಜಟಿಲ ಸಮಸ್ಯೆಗಳನ್ನು ಪರಿಹರಿಸಲಾಗದಿದ್ದಾಗ ಈ ಅತೀತ ಶಕ್ತಿಗಳದ್ದೇ ಮತ್ತೊಂದು ರೂಪ ಎನ್ನಬಹುದಾದ ಅತಿಮಾನುóಷ ಶಕ್ತಿಗಳನ್ನು ಆಶ್ರಯಿಸುತ್ತಾನೆ. ಈ ಎರಡೂ ಪ್ರಕ್ರಿಯೆಗಳು ಮನುಷ್ಯನಿಗೆ ನಿತ್ಯ ಬದುಕಿನ ಜಂಜಾಟಗಳಿಂದ ಪಾರಾಗುವ ಸುಲಭ ಸಾಧನವಾಗಿರುತ್ತವೆ. ಮೊದಲನೆಯದನ್ನು ನಾವು ದೇವರು ಅಥವಾ ದೈವಶಕ್ತಿ ಎನ್ನಬಹುದಾದರೆ ಎರಡನೆಯದನ್ನು ದೈವತ್ವದಿಂದ ಹೊರತಾದ ಕೆಲವು ಶಕ್ತಿಗಳ ರೂಪದಲ್ಲಿ, ಉದಾಹರಣೆಗೆ ಗ್ರಹಗಳಲ್ಲಿ ಕಾಣಬಹುದು.

ಮನುಷ್ಯ ಸದಾ ಸಾಂತ್ವನದ ಶೋಧದಲ್ಲೇ ತನ್ನ ಬದುಕು ಸವೆಸಲಿಚ್ಛಿಸುತ್ತಾನೆ. ಬದುಕು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತನ್ನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದೆ ಹೋದಾಗ ಈ ಸಾಂತ್ವನದ ನೆಲೆಗಳೇ ಅವನಿಗೆ ಸಮಾಧಾನದ ತಾಣಗಳಾಗುತ್ತದೆ. ಒಂದು ಸಾಮಾಜಿಕ ಮತ್ತು ಸಾಂಸ್ಕøತಿಕ ಪರಿಸರದಲ್ಲೇ ಬದುಕು ಸವೆಸುವ ಜನಸಾಮಾನ್ಯರಿಗೆ, ವಿಶೇಷವಾಗಿ ದುಡಿಯುವ ವರ್ಗಗಳಿಗೆ ಈ ಸಮಾಧಾನದ ತಾಣಗಳು ಕೆಲವೊಮ್ಮೆ ತಮ್ಮ ದೈಹಿಕ ದಣಿವು ಮತ್ತು ಮಾನಸಿಕ ಕ್ಷೋಭೆಯನ್ನು ಕಡಿಮೆ ಮಾಡಿಕೊಳ್ಳುವ ಸ್ಥಳಗಳಾಗಿ ಕಾಣುತ್ತವೆ. ಹಣವುಳ್ಳವರಿಗೆ ಇವು ಸಮಯ ಕಳೆಯುವ ಮನರಂಜನೆಯ ಅಥವಾ ಸುಧಾರಿಸಿಕೊಳ್ಳುವ ತಾಣಗಳಾಗುತ್ತವೆ. ಸಾಂಪ್ರದಾಯಿಕ ಸಮಾಜಗಳಲ್ಲಿ ಮತ್ತು ಭಾರತದಂತಹ ಪ್ರಾಚೀನ ಪರಂಪರೆಗಳನ್ನೇ ಉಳಿಸಿಕೊಂಡು ಬಂದಿರುವ ಸಮಾಜಗಳಲ್ಲಿ ಇಂತಹ ತಾಣಗಳು ಆಳುವವರ ಭಾಷೆಯಾದಾಗ, ಸಮಾಜದ ಮೂಲ ಸ್ಥಾವರದಂತೆ ಬಿಂಬಿಸಲ್ಪಟ್ಟಾಗ, ಸಹಜವಾಗಿಯೇ ಬಹುಸಂಖ್ಯೆಯ ಜನರು ಇಂತಹವುಗಳ ಆಶ್ರಯಕ್ಕೆ ಹಾತೊರೆಯುತ್ತಾರೆ.

ಭಾರತದ ಸಂದರ್ಭದಲ್ಲಿ ಇದನ್ನು ನಾವು ಶ್ರೇಣೀಕೃತ ಜಾತಿ ವ್ಯವಸ್ಥೆ, ಮೇಲ್ಜಾತಿಗಳ ಪಾರಮ್ಯ ಮತ್ತು ಶ್ರೇಷ್ಠತೆಯ ಅಹಮಿಕೆ ಹಾಗೂ ಜಾತಿ ಶ್ರೇಣೀಕರಣದ ತಾರತಮ್ಯಗಳು ಇಂತಹ ತಾಣಗಳನ್ನು, ಅವಕಾಶಗಳನ್ನು ಅಧಿಕೃತವಾಗಿ ಅಧಿಕಾರ ನಡೆಸುವ ವರ್ಗಗಳೇ ಆಕ್ರಮಿಸುತ್ತವೆ. ಶಿಕ್ಷಣದಿಂದ ಹಿಡಿದು ಆಧ್ಯಾತ್ಮದವರೆಗೆ ಮನುಷ್ಯನ ಎಲ್ಲ ಪ್ರಾಥಮಿಕ ಅವಶ್ಯಕತೆಗಳನ್ನೂ ನಿಯಂತ್ರಿಸುವ ಮೂಲಕ ಮೇಲ್ಜಾತಿಗಳು ಮತ್ತು ಇತರ ಅನುಕೂಲಸ್ಥ ಜಾತಿಗಳ ಮೇಲ್ಪದರದ ಜನರು, ಬಡಜನತೆಯ ಜೀವನದ ಮೇಲೆ ತಮ್ಮ ಹಿಡಿತವನ್ನು ಸಾಧಿಸಲು ಮತಕೇಂದ್ರಗಳನ್ನು, ಅಧ್ಯಾತ್ಮ ಕೇಂದ್ರಗಳನ್ನು ಮತ್ತು ಮಠಮಾನ್ಯಗಳನ್ನು ವ್ಯವಸ್ಥಿತವಾಗಿ ಆಕ್ರಮಿಸತೊಡಗುತ್ತಾರೆ. ಹಾಗಾಗಿಯೇ ಭಾರತದಲ್ಲಿ ಮೌಢ್ಯ ಎನ್ನುವುದು ಅಧಿಕೃತವಾಗಿ ಸ್ವೀಕೃತವಾದ ಒಂದು ವಿದ್ಯಮಾನವಾಗಿದೆ.

ಬಂಡವಾಳ ವ್ಯವಸ್ಥೆಯ ಮುನ್ನಡೆಗೆ ಇಂತಹ ಸಾಂಪ್ರದಾಯಿಕ ಸಮಾಜಗಳು ಆಪ್ಯಾಯಮಾನವಾಗಿ ಕಾಣುತ್ತವೆ. ಬಂಡವಾಳಶಾಹಿ ಆರ್ಥಿಕ ನೀತಿಗಳು ಮತ್ತು ಈಗಿನ ನವ ಉದಾರವಾದಿ ಮಾರುಕಟ್ಟೆ ಆರ್ಥಿಕ ನೀತಿಗಳ ಫಲಾನುಭವಿಗಳು ಸಹಜವಾಗಿ ಈ ಮೇಲ್ಪದರದ ವರ್ಗಗಳೇ ಆಗಿರುವುದರಿಂದ, ಕೆಳಸ್ತರದ ಸಮುದಾಯಗಳು, ಅವಕಾಶವಂಚಿತರು, ಬಂಡವಾಳದ ಪರಿಧಿಯಿಂದ ದೂರವೇ ಉಳಿಯುವ ಕೆಳ ಮಧ್ಯಮ ವರ್ಗಗಳು ಮತ್ತು ದುಡಿಯುವ ವರ್ಗಗಳು ತಮ್ಮ ಶೋಷಣೆಯಿಂದ ಮುಕ್ತರಾಗಲು ಹೋರಾಡುತ್ತಲೇ ತಕ್ಷಣದ ಸಂಕಷ್ಟಗಳ ನಿವಾರಣೆಗಾಗಿ, ಸವಾಲುಗಳನ್ನು ಎದುರಿಸುವ ಸಲುವಾಗಿ, ನಿತ್ಯ ಜೀವನದ ಜಂಜಾಟಗಳಿಂದ ಮುಕ್ತರಾಗಿ ನೆಮ್ಮದಿಯ ಬದುಕನ್ನು ಅರಸುವ ಹಾದಿಯಲ್ಲಿ ಮತಕೇಂದ್ರಿತ ಮಠಗಳು, ಆಧ್ಯಾತ್ಮ ಕೇಂದ್ರಗಳು, ದೇವಸ್ಥಾನಗಳು ಮತ್ತು ಅತೀತಅತಿಮಾನುಷ ಶಕ್ತಿಗಳನ್ನು ಪರಿಚಯಿಸುವ ಜ್ಯೋತಿಷ್ಯ ಮುಂತಾದ ಅವೈಚಾರಿಕ ಕೇಂದ್ರಗಳನ್ನು ತಮ್ಮ ಸಾಂತ್ವನ ಕೇಂದ್ರಗಳಾಗಿ ಪರಿಗಣಿಸುತ್ತಾರೆ.

ಈ ಜಾತಿಮತಪಂಥ ಮತ್ತು ಅಧ್ಯಾತ್ಮ ಕೇಂದ್ರಗಳು ಮತ್ತು ಅವೈಚಾರಿಕ ನಂಬಿಕೆಯ ಕೇಂದ್ರಗಳು ಬಂಡವಾಳ ಮತ್ತು ಮಾರುಕಟ್ಟೆಯ ಹಿಡಿತಕ್ಕೆ ಸಿಲುಕಿದಾಗ ಸ್ವಾಭಾವಿಕವಾಗಿಯೇ ಈ ಕೇಂದ್ರಗಳಿಂದ ಪ್ರವಹಿಸುವ ಅವೈಜ್ಞಾನಿಕ ಆಚರಣೆಗಳು, ಆಡಂಬರದ ಉತ್ಸವಗಳು, ಸಾಮಾನ್ಯ ಮನುಷ್ಯರ ಗ್ರಹಿಕೆಗೆ ನಿಲುಕದ ವಿಚಾರಗಳು ಮತ್ತು ಈ ವಿಚಾರಗಳಿಂದಲೇ ಉಗಮಿಸುವ ನಂಬಿಕೆಗಳು ಮಾರುಕಟ್ಟೆಯ ಸರಕುಗಳಾಗುತ್ತವೆ. ಕೆಲವೊಮ್ಮೆ ಮಾರುಕಟ್ಟೆಯ ಕಚ್ಚಾವಸ್ತುಗಳೂ ಆಗಿಬಿಡುತ್ತವೆ. ಶ್ರೀಮಂತರನ್ನು ಓಲೈಸುತ್ತಾ ಬಡ ಜನತೆಯನ್ನು ಭ್ರಮಾಲೋಕದಲ್ಲಿ ವಿಹರಿಸುವಂತೆ ಮಾಡುವ ಮೂಲಕ ಬಂಡವಾಳ ವ್ಯವಸ್ಥೆ ಮೌಢ್ಯವನ್ನು, ಮೂಢ ನಂಬಿಕೆಗಳನ್ನು ಮತ್ತು ಮತ ಕೇಂದ್ರಿತ ಆಚರಣೆಗಳನ್ನು ವಾಣಿಜ್ಯೀಕರಣಗೊಳಿಸುವುದರಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಹಾಗಾಗಿಯೇ ಇಂದು ಭಾರತದಲ್ಲಿ ಪ್ರಾಥಮಿಕ ಶಿಕ್ಷಣ ಕೇಂದ್ರದಿಂದ ಹಿಡಿದು ಅತ್ಯುನ್ನತ ವ್ಯಾಸಂಗದ ಅಧ್ಯಯನ ಸಂಸ್ಥೆಗಳವರೆಗೂ, ಸ್ಥಳೀಯ ಪತ್ರಿಕೆವಾಹಿನಿಗಳಿಂದ ಹಿಡಿದು ದೇಶವ್ಯಾಪಿ ವಿದ್ಯುನ್ಮಾನ ಮಾಧ್ಯಮಪತ್ರಿಕಾ ಮಾಧ್ಯಮದವರೆಗೂ ಈ ಆಚರಣೆಗಳು ಅಧಿಕೃತತೆ ಪಡೆದುಕೊಂಡಿವೆ. ಇದನ್ನು ಪ್ರಶ್ನಿಸಬೇಕಾದ ಅಥವಾ ಪ್ರಶ್ನಿಸಬಹುದಾದ ಪ್ರಜ್ಞಾವಂತ ಮನಸುಗಳು ಅಥವಾ ಬೌದ್ಧಿಕ ಚಿಂತನಾ ವಾಹಿನಿಗಳು ಮಾರುಕಟ್ಟೆಯ ಒತ್ತಡಗಳಿಗೆ ಮಣಿದು ಹೊಂದಾಣಿಕೆಯತ್ತ ಹೊರಳುತ್ತವೆ. ಮೌಢ್ಯ ಮತ್ತು ಮೂಢ ನಂಬಿಕೆಗಳನ್ನು ನಿರಂತರವಾಗಿ ಯಾವುದೇ ಅಡೆತಡೆ ಇಲ್ಲದೆ ಪ್ರಸಾರ/ಪ್ರಚಾರ ಮಾಡುತ್ತಿರುವ ಭಾರತದ ವಿದ್ಯುನ್ಮಾನ ಮಾಧ್ಯಮಗಳು ಮತ್ತು ಬಹುಪಾಲು ಮುದ್ರಣ ಮಾಧ್ಯಮಗಳು ತಮ್ಮ ಬೌದ್ಧಿಕ ತಳಹದಿಗಿಂತಲೂ, ಮಾರುಕಟ್ಟೆಯ ಅಗತ್ಯಗಳ ಬಗ್ಗೆಯೇ ಹೆಚ್ಚು ಯೋಚಿಸುತ್ತವೆ. ಏಕೆಂದರೆ ಸ್ಥಾಪಿತ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಶಕ್ತಿಗಳ ಪರಮಾಧಿಕಾರ ಸರ್ವವ್ಯಾಪಿಯಾಗಿದೆ.

ಈಗ ಸರ್ಕಾರಗಳು ಜಾರಿಗೊಳಿಸಲಿರುವ ಮೌಢ್ಯ ನಿಷೇಧ ಕಾಯ್ದೆಗಳು ಮತ್ತು ಶಾಸನಗಳು ಮೂಲತಃ ತಳಸಮುದಾಯದ ಪಾರಂಪರಿಕ ನಂಬಿಕೆಗಳನ್ನು ಆಧರಿಸಿ ಸಮಾಜದಲ್ಲಿ ಬೇರೂರಿರುವ ಕೆಲವು ಆಚರಣೆಗಳನ್ನು ಮಾತ್ರ ಗುರಿಯಾಗಿಸಿರುತ್ತದೆ. ಬೆತ್ತಲೆಸೇವೆಯಂತಹ ಮೌಢ್ಯವನ್ನು ಅಳಿಸಿಹಾಕುವುದಕ್ಕೇ ನಮ್ಮ ಸಮಾಜಕ್ಕೆ ಶತಮಾನಗಳ ಪ್ರಯತ್ನ ಬೇಕಾಯಿತು. ಮಡೆಸ್ನಾನದಂತಹ ಅಮಾನುಷ ಪದ್ಧತಿಗಳನ್ನು ಇಂದಿಗೂ ಸಹ ಕೊನೆಗೊಳಿಸಲಾಗಿಲ್ಲ. ಈ ನಂಬಿಕೆಗಳ ಮೂಲ ಇರುವುದು ನಮ್ಮ ಸಮಾಜದ ಅಂತರ್ಗತ ಬೌದ್ಧಿಕ ಚಿಂತನಾ ವಾಹಿನಿಗಳಲ್ಲಿ. ಅತೀತ ಮತ್ತು ಅತಿಮಾನುಷ ಶಕ್ತಿಗಳಲ್ಲಿನ ಜನಸಾಮಾನ್ಯರ ನಂಬಿಕೆಗಳಿಗೆ ಒಂದು ಸಾಮುದಾಯಿಕ ಅಸ್ತಿತ್ವವನ್ನು ಕಲ್ಪಿಸುವಲ್ಲಿ ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಸಾಂಸ್ಕøತಿಕ ಪರಿಸರವೇ ಸಜ್ಜಾಗಿರುತ್ತದೆ.

ಈ ಪ್ರಕ್ರಿಯೆಯನ್ನು ಮಠಮಾನ್ಯಗಳಲ್ಲಿ, ಅಧ್ಯಾತ್ಮ ಕೇಂದ್ರಗಳಲ್ಲಿ, ದೇವಾಲಯಗಳಲ್ಲಿ ಅನುಸರಿಸಲಾಗುವ ವಿಭಿನ್ನ ಪೂಜೆ, ವ್ರತ, ಉತ್ಸವ ಮತ್ತು ಆಚರಣೆಗಳಲ್ಲಿ ಗುರುತಿಸಬಹುದು. ಜನಸಾಮಾನ್ಯರ ಆತಂಕಗಳನ್ನು ಮತ್ತು ಭೀತಿಯನ್ನು ಹೋಗಲಾಡಿಸುವ ಅವೈಜ್ಞಾನಿಕ ಆಚರಣೆಗಳನ್ನು ಈ ಮತ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತದೆ. ವಿಶೇಷವಾಗಿ ಗ್ರಹಣಗಳ ಸಂದರ್ಭಗಳಲ್ಲಿ ಮತ್ತು ಹಬ್ಬ ಹರಿದಿನಗಳ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ಪೂಜಾ ವಿಧಾನಗಳನ್ನು ಈ ಕಾರಣಕ್ಕಾಗಿಯೇ ರೂಪಿಸಲಾಗುತ್ತದೆ. ಇದನ್ನು ಅನುಸರಿಸಲು ಹಿಂಜರಿಯುವ ಜನರಲ್ಲಿ ಅವರ ಸುತ್ತಲಿನ ವಾತಾವರಣವೇ ಭೀತಿಯನ್ನು ಹೆಚ್ಚಿಸುವಂತಿರುತ್ತದೆ. ಶನಿದೇವರ ದೇವಾಲಯಗಳು ಗಲ್ಲಿಗೊಂದು ಇರುವುದು, ತಿಂಗಳಿಗೆ ಎರಡು ಬಾರಿ ಗಣಪತಿ ದೇವಾಲಯಗಳಲ್ಲಿ ಸಂಕಷ್ಟ ಪೂಜೆ ನೆರವೇರಿಸುವುದು ಮತ್ತು ಹೊಸದಾಗಿ ಆವಿಷ್ಕಾರವಾಗಿರುವ ಪ್ರದೋಷ ಪೂಜೆಗಳು ಸರ್ವರೋಗದ ಮದ್ದು ಎಂದು ಪ್ರಚಾರ ಮಾಡುವುದು ಇವೆಲ್ಲವೂ ಈ ಮೌಢ್ಯಾಚರಣೆಯ ಕೇಂದ್ರ ಬಿಂದು ಎನ್ನಬಹುದು.

ಈ ಪೂಜಾ ವಿಧಾನ ಮತ್ತು ಆಚರಣೆಗಳನ್ನು ಜನಸಾಮಾನ್ಯರ ನಡುವೆ ಜನಪ್ರಿಯಗೊಳಿಸುವಂತಹ ಒಂದು ಬೃಹತ್ ಪಡೆಯನ್ನೇ ವಾಸ್ತುಜ್ಯೋತಿಷ್ಯ ಲೋಕ ಸೃಷ್ಟಿಮಾಡಿದೆ. ಇಂದು ಗೃಹವಾಸ್ತು, ಸರಳವಾಸ್ತು, ವಾಣಿಜ್ಯವಾಸ್ತು ಮುಂತಾದ ಪ್ರಕಾರಗಳು ಮಾರುಕಟ್ಟೆಯ ವ್ಯವಹಾರದ ಮೇಲೆಯೂ ಪ್ರಭಾವ ಬೀರುವಷ್ಟು ಮಟ್ಟಿಗೆ ವ್ಯಾಪಿಸಿದೆ. ನೆಲದ ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುವ ಬೃಹತ್ ಗೃಹ ಸಮುಚ್ಚಯಗಳಲ್ಲಿ ಮನೆ ಖರೀದಿಸುವವರು, ಕಾನೂನುರೀತ್ಯಾ ಅಗತ್ಯವಾದ ಕಾಗದ ಪತ್ರಗಳಿಗಿಂತಲೂ ಹೆಚ್ಚಿನ ಪ್ರಾಮುಖ್ಯವನ್ನು ವಾಸ್ತು ನಿಯಮಗಳಿಗೆ ನೀಡುವುದು ನಗರಗಳಲ್ಲಿ ಕಂಡುಬರುವ ವಿದ್ಯಮಾನ. ಸುಶಿಕ್ಷಿತ, ಮೇಲ್ವರ್ಗದ ಜನರೂ ಈ ಮೌಢ್ಯಗಳಿಗೆ ಬಲಿಯಾಗುತ್ತಿದ್ದಾರೆ. ಇದರೊಂದಿಗೇ ತಮ್ಮ ಅಕ್ರಮ ಸಂಪಾದನೆಯನ್ನು ಸಂರಕ್ಷಿಸಿಕೊಳ್ಳಲು ವಿಭಿನ್ನ ಮಾರ್ಗಗಳನ್ನು ಶೋಧಿಸುವ ಶ್ರೀಮಂತ ವರ್ಗಕ್ಕೆ ಜ್ಯೋತಿಷ್ಯ ಲೋಕ ಒಂದು ಭರವಸೆಯ ಬೆಳಕನ್ನು ಸೃಷ್ಟಿಸುತ್ತದೆ.

ಈ ಮೌಢ್ಯ ಲೋಕದಿಂದಾಚೆಗೆ ನಾವು ನೋಡಬೇಕಿರುವುದು ಅರೆ ಶಿಕ್ಷಿತ ಜನಸಮುದಾಯಗಳತ್ತ ಮತ್ತು ಅನಕ್ಷರಸ್ತ ಗ್ರಾಮೀಣ ಸಮುದಾಯಗಳತ್ತ. ಇವರಲ್ಲಿ ಪಾರಂಪಾರಿಕವಾಗಿ ಬೆಳೆದುಬಂದಿರುವ ಮೌಢ್ಯಾಚರಣೆಗಳನ್ನು ಹೋಗಲಾಡಿಸಬೇಕಾದ ಸುಶಿಕ್ಷಿತ ಆಧುನಿಕ ಸಮಾಜ, ಈ ಜನ ಸಮುದಾಯಗಳ ಮೇಲೆ ಹೊಸ ರೀತಿಯ ಮೌಢ್ಯಗಳನ್ನು ಜ್ಯೋತಿಷ್ಯ ಮತ್ತು ವಾಸ್ತುಗಳ ಮೂಲಕ ಹೇರುತ್ತಲೇ ಇದೆ. ವರ್ಷಕ್ಕೊಮ್ಮೆ ದೇವರಿಗೆ ಹರಕೆ ಹೊತ್ತು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದ್ದ ಈ ಜನಸಮುದಾಯಗಳು ಈಗ ಹೊಸ ಪೂಜಾ ವಿಧಾನಗಳು, ವ್ರತಾಚರಣೆಗಳು ಮತ್ತು ಹೋಮಗಳಲ್ಲಿ ಸಾಂತ್ವನ ಕಾಣುತ್ತಿವೆ. ಹಾಗಾಗಿಯೇ ವಾಸ್ತುಹೋಮ, ಗಣಹೋಮ, ಸತ್ಯನಾರಾಯಣ ಪೂಜೆಯಂತಹ ಮೌಢ್ಯಾಚರಣೆಯ ಸಾಧನಗಳು ಗ್ರಾಮ ಗ್ರಾಮಕ್ಕೂ ವ್ಯಾಪಿಸುತ್ತಿದೆ.

ಈ ಮೌಢ್ಯವನ್ನು ಮತ್ತು ಇದರೊಟ್ಟಿಗಿನ ಮೂಢ ನಂಬಿಕೆಗಳನ್ನು, ಆಚರಣೆಗಳನ್ನು ಕೊನೆಗೊಳಿಸಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ವೈಚಾರಿಕತೆಯನ್ನು ಬೋಧಿಸುವಂತಾಗಬೇಕು. ದೇವರ ಅಥವಾ ಅತೀತ ಶಕ್ತಿಯೊಂದರ ಅಸ್ತಿತ್ವವನ್ನು ಅಲ್ಲಗಳೆಯದೆಯೇ, ಜನರ ಮೂಲಭೂತ ನಂಬಿಕೆಗಳಿಗೆ ಚ್ಯುತಿ ಬಾರದಂತೆಯೇ, ಜನರ ನಡುವೆ ವೈಚಾರಿಕ ಪ್ರಜ್ಞೆಯನ್ನು ಬೆಳಸುವ ಪ್ರಯತ್ನಗಳನ್ನು ಮಾಡಬೇಕಿದೆ. ಈ ನಂಬಿಕೆಗಳನ್ನು ಸಂಪೂರ್ಣ ಅಳಿಸಹಾಕುವ ಮಾರ್ಗದಲ್ಲಿ, ಮೌಢ್ಯಾಚರಣೆಗಳ ವಿರುದ್ಧ ಅರಿವು ಮೂಡಿಸುವುದು ಪ್ರಥಮ ಹೆಜ್ಜೆಯಾಗುತ್ತದೆ. ಇದನ್ನು ಕಾನೂನು, ಶಾಸನಗಳ ಮುಖಾಂತರ ಮಾಡಲಾಗುವುದಿಲ್ಲ. ಇದು ಒಂದು ಸಾರ್ವಜನಿಕ ಕ್ರಿಯೆ ಆಗಬೇಕು. ಪ್ರಜ್ಞಾವಂತ ಸಮಾಜದ ಆದ್ಯತೆಯಾಗಬೇಕು.

ಭೌತಿಕ ಪ್ರಪಂಚದ ವೈಜ್ಞಾನಿಕ ವಾಸ್ತವಗಳನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ಹೇಳುವ ಪ್ರಯತ್ನಗಳು ಆದ್ಯತೆ ಪಡೆಯಬೇಕು. ಗ್ರಹಗಳ ಬಗ್ಗೆ ಮತ್ತು ಈ ಗ್ರಹಗಳಿಂದ ಮಾನವನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸಬೇಕು. ದೈವತ್ವದ ಅತೀತತೆಯನ್ನು ಪ್ರಶ್ನಿಸದೆಯೇ ಮನುಷ್ಯನ ಪ್ರಾಮಾಣಿಕ ಪ್ರಯತ್ನಗಳು ಮಾತ್ರವೇ ಬದುಕು ರೂಪಿಸಲು ಸಾಧ್ಯ ಎನ್ನುವ ವಾಸ್ತವವನ್ನು ದುಡಿಯುವ ವರ್ಗಗಳಿಗೆ ಮನದಟ್ಟು ಮಾಡಬೇಕು. ಪ್ರಸ್ತುತ ಸಂದರ್ಭದಲ್ಲಿ ಸ್ಥಾಪಿತ ವ್ಯವಸ್ಥೆಯ ಪ್ರಾತಿನಿಧಿಕ ಶಕ್ತಿಗಳು, ಅರ್ಥಾತ್ ಮಾಧ್ಯಮಗಳು ಮತ್ತು ಸರ್ಕಾರಿ ಏಜೆನ್ಸಿಗಳು ಈ ಚಟುವಟಿಕೆಗೆ ಮುಂದಾಗುವುದಿಲ್ಲ. ಇದು ನಾಗರಿಕ ಸಮಾಜದ ಕರ್ತವ್ಯ ಮತ್ತು ಆದ್ಯತೆಯಾಗಬೇಕು. ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವವೇ ಮೌಢ್ಯವನ್ನು ಹೋಗಲಾಡಿಸಬಲ್ಲ ಸಮರ್ಥ ಅಸ್ತ್ರವಾಗಲು ಸಾಧ್ಯ.

*ಲೇಖಕರು ಕೋಲಾರ ಜಿಲ್ಲೆಯ ಬಂಗಾರಪೇಟೆಯವರು; ಕೆನರಾಬ್ಯಾಂಕ್ ನಿವೃತ್ತ ಉದ್ಯೋಗಿ, ಮಾಕ್ರ್ಸ್‍ವಾದಿ ಚಿಂತಕ, ಚಳವಳಿಗಳಲ್ಲಿ ಭಾಗಿ. 20ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಎಲ್.ಬಸವರಾಜು ದತ್ತಿ ಪ್ರಶಸ್ತಿ ಪುರಸ್ಕøತರು. ಹಾಲಿ ಮೈಸೂರಿನಲ್ಲಿ ವಾಸ.

Leave a Reply

Your email address will not be published.