ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…

ಇದೀಗ ಐದನೇ ವರ್ಷದ ಮೊದಲ ಸಂಚಿಕೆಯನ್ನು ನಿಮ್ಮ ಕೈಯಲ್ಲಿ ಇರಿಸಿದ ಪುಳಕ ನನ್ನೊಳಗೆ ತೊನೆದಾಡುತ್ತಿದೆ. ಜೊತೆಗೆ ತೇಲಿಬರುವ ನೆನಪಿನ ದೋಣಿಯಲ್ಲಿ ದೂರತೀರ ತಲುಪುವ ತವಕ.

ಜಗತ್ತನ್ನು ಸಾಕಷ್ಟು ಸಮೀಪದಿಂದ ದಿಟ್ಟಿಸುವ ನಮ್ಮ ಬಳಗದ ಗೆಳೆಯರೊಬ್ಬರಿಗೆ ನಾಲ್ಕು ವರ್ಷಗಳ ಹಿಂದೆ ಬಿತ್ತೊಂದು ಕನಸು; ಆ ಕನಸಿನಲ್ಲಿ ಕಂಡದ್ದು ಬೀಗಬಿದ್ದ ಕನ್ನಡಿಗರ ಮನಸು. ಬೆಚ್ಚಿಬಿದ್ದ ಅವರು ಕಳೆದುಹೋದ ಬೀಗದಕೈ ಹುಡುಕುವ ಹುಚ್ಚು ಹಿಡಿಸಿಕೊಂಡರು. ಹೇಗಾದರೂ ಮಾಡಿ ಕನ್ನಡಿಗರ ಮನಕ್ಕೆ ಬಿದ್ದ ಬೀಗ ಬಿಚ್ಚುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾಂಭಿಸುವ ಹಠ ಅವರದು. ರೆಕ್ಕೆಯೊಳಗೆ ಮರಿಗಳನ್ನು ಅವುಚಿಕೊಳ್ಳುವ ತಾಯಿಕೋಳಿಯಂತಹ ಅವರ ಸ್ವಭಾವ ವಿವಿಧ ಹಿನ್ನೆಲೆಯ ಸ್ನೇಹಿತರನ್ನು ಬೆಸೆಯಿತು. ‘ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ…’ ಎಂದು ಉಲಿಯುತ್ತಾ ನೆನಪಿಸಿದರು ಬೀಗದ ಕೈ ಹುಡುಕುವ ಕರ್ತವ್ಯ. ಸಮಾಜದ ಒಳಿತಿಗೆ ಒಂದಿಷ್ಟು ಸಮಯ ಹೊಂದಿಸಬೇಕೆA, ತ್ಯಾಗಕ್ಕೆ ಸ್ಪಂದಿಸಬೇಕೆAಬ ಸಹಜ ಆಲೋಚನೆಯ ಗೆಳೆಯರ ತಂಡ ಅಂದು ಆರಂಭಿಸಿದ ಕಾಯಕವೇ ಸಮಾಜಮುಖಿ ಪತ್ರಿಕೆ.

ಹೀಗೆ ಹುಡುಕಾಟ ಶುರುಮಾಡಿಸಿದ ಒಂದು ಕನಸನ್ನು ನನಸಾಗಿಸಲು ಕೇವಲ ನಾಲ್ಕು ವರ್ಷಗಳಲ್ಲಿ ಬಂದು ಸೇರಿದ್ದು ಸಾವಿರಾರು ನದಿಗಳು. ಓದುಗರಾಗಿ, ಲೇಖಕರಾಗಿ, ಚಿಂತಕರಾಗಿ, ಹಿತೈಷಿಗಳಾಗಿ ಈ ನದಿಗಳಿಗೆ ಒದಗಿಬಂದ ಸೆಳೆವು ದಂಡೆಯಲ್ಲಿ ಅನುಮಾನಿಸುತ್ತಾ ನಿಂತವರಲ್ಲಿ ಸೋಜಿಗ ಹುಟ್ಟಿಸಿದ್ದು ಸುಳ್ಳಲ್ಲ. ಒಂದು ಕನಸಿನಲ್ಲಿ ಸಾವಿರಾರು ಮನಸುಗಳು ಬೆರೆತು, ಪ್ರತಿಯೊಂದು ಕಣ್ಣಿನಲ್ಲಿ ಕನಸು ಮೊಳೆಯಿಸಿದ, ವ್ಯಕ್ತಿಗತ ಕನಸು ಸಮಷ್ಟಿರೂಪ ಪಡೆದ ವಿಶೇಷ ಪ್ರಸಂಗವಿದು. ಇಂದು ನೀವೆಲ್ಲಾ ಸಮಾಜಮುಖಿ ಕನಸಿನ ಭಾಗವಾಗಿಯೇ ಸೇರಿರುವುದರಿಂದ ನಿಮಗೆ ಧನ್ಯವಾದ ಹೇಳಿದರೆ ಕೃತಕವೆನಿಸೀತು ಎಂಬ ಅಳುಕು ನನ್ನದು.

*

ಈ ಸಂಚಿಕೆಯ ಮುಖ್ಯಚರ್ಚೆ ರೂಪಿಸುವಾಗ ಎಂದಿನAತೆ ನನಗೆ ಎದುರಾದ ಸವಾಲೆಂದರೆ ಆಡಳಿತ ನಡೆಸುವವರು, ಅವರ ಪಕ್ಷದವರು ಅಥವಾ ಅವರ ವಕ್ತಾರರು ತಮ್ಮ ಬದಿಯ ವಾದ ಮಂಡಿಸಲು ಮುಂದಾಗದಿರುವುದು. ನಿಜವಾಗಿಯೂ ನಿಷ್ಪಕ್ಷಪಾತ ವಿಶ್ಲೇಷಣೆ, ಬಹುಮುಖೀ ನೋಟ, ಮುಕ್ತ ಅಭಿವ್ಯಕ್ತಿಯ ಅವಕಾಶದಲ್ಲಿ ನಂಬಿಕೆ ಇರಿಸಿದ ನಮಗೆ ಇದೇ ಕಾರಣದಿಂದ ಅನೇಕ ಬಾರಿ ಸಮತೋಲನ ಕಾಪಾಡಲು ಸಾಧ್ಯವಾಗುವುದಿಲ್ಲ. ಸಿದ್ಧಾಂತಗಳನ್ನು ಮೀರಿದ ವೈಚಾರಿಕತೆ ಪ್ರತಿಪಾದಿಸುವ ನಿಮ್ಮ ಸಮಾಜಮುಖಿ ಕೂಡಾ ಹಲವೊಮ್ಮೆ ‘ಏಕಮುಖಿ’ ಆರೋಪ ಅರಗಿಸಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಚರ್ಚೆಯಲ್ಲಿ ಭಾಗವಹಿಸಲು ವಿರೋಧ ಪಕ್ಷದವರಷ್ಟು ಉತ್ಸಾಹವನ್ನು ಆಡಳಿತ ಪಕ್ಷದವರು ತೋರಲಾರರು. ನಾನು ನನ್ನ ಮೂರು ದಶಕಗಳ ಪತ್ರಿಕಾರಂಗದ ಅನುಭವದಲ್ಲಿ ಕಂಡುಕೊAAತೆ ಎಡಪಂಥೀಯರAತೆ ಬಲಪಂಥೀಯರು ಶಿಸ್ತುಬದ್ಧ ಮುಕ್ತ ಚಿಂತನೆಚರ್ಚೆಗೆ ಒಡ್ಡಿಕೊಳ್ಳುವುದು ವಿರಳ; ಭಾಷಣದಲ್ಲಿ ಆರ್ಭಟಿಸುವವರು ಬರವಣಿಗೆಗೆ ಮಾತ್ರ ಬೆನ್ನು ತೋರಿಸುವುದು ಅಚ್ಚರಿಯ ವಿಷಯ. ಇಂಥ ಹಲವು ಸವಾಲು, ಕೆಲವು ಇತಿಮಿತಿಗಳ ನಡುವೆಯೂ ಪತ್ರಿಕೆಯನ್ನು ವೃತ್ತಿನಿಷ್ಠೆಯಿಂದ ಸಮಗ್ರವಾಗಿ ಹೊರತರಲು ಶಕ್ತಿಮೀರಿ ಶ್ರಮಿಸುತ್ತಿದ್ದೇವೆ.

ಹಾಸನದ ಹಿರಿಯ ಪತ್ರಕರ್ತ ಆರ್.ಪಿ.ವೆಂಕಟೇಶಮೂರ್ತಿ, ಆಮ್ ಆದ್ಮಿ ಪಕ್ಷದ ದರ್ಶನ್ ಜೈನ್, ಕಾಂಗ್ರೆಸ್ಸಿನ ಬಿ.ಎಲ್.ಶಂಕರ್, ಅಪರೂಪದ ರಾಜಕಾರಣಿ ರಮೇಶ್ ಬಾಬು, ಪತ್ರಕರ್ತ ಸದಾನಂದ ಗಂಗನಬೀಡು ಮುಖ್ಯಚರ್ಚೆಗೆ ಕಸುವು ಕಲ್ಪಿಸಿದ್ದಾರೆ. ಟಿ.ಎಸ್.ಗೊರವರ ಸಂದರ್ಶನದಲ್ಲಿ ಎಸ್.ಆರ್.ಹಿರೇಮಠ ಅವರ ಕಿಡಿನುಡಿಗಳು ಇವೆ. ಅಗಲಿದ ಗೆಳತಿ ರಾಜೇಶ್ವರಿ ತೇಜಸ್ವಿ ಅವರ ಒಡನಾಟವನ್ನು ಪದ್ಮಾ ಶ್ರೀರಾಮ ನೆನೆದಿದ್ದಾರೆ. ಸೌಂದರ್ಯ ಸ್ಪರ್ಧೆಯ ಒಳಮರ್ಮ ಕುರಿತು ಕಾವ್ಯಶ್ರೀ ಬರೆದರೆ ಕೇರಳದ ಸಾಧನೆಯನ್ನು ಟಿ.ಆರ್.ಚಂದ್ರಶೇಖರ ಗುರುತಿಸಿದ್ದಾರೆ. ಪುಸ್ತಕ ಪ್ರಪಂಚದಲ್ಲಿ ಹೆಚ್.ಡಿ.ದೇವೇಗೌಡ, ಹಂ..ನಾಗರಾಜಯ್ಯ, ಎಚ್.ಎಸ್.ಶಿವಪ್ರಕಾಶ ಅವರನ್ನು ಕಾಣಬಹುದು; ಬುದ್ಧಿಜೀವಿ ಮತ್ತು ಸಾಕ್ಷಿಪ್ರಜ್ಞೆ ಪದಗಳ ವ್ಯಾಖ್ಯಾನವೂ ಇದೆ. ಮುಂದುವರಿದ ಚರ್ಚೆಯಲ್ಲಿ ಎನ್.ಬೋರಲಿಂಗಯ್ಯ ಅವರ ತಲಸ್ಪರ್ಶಿ ನೋಟ.

ಇನ್ನೂ ಎನೇನೆಲ್ಲಾ ಅಡಗಿ ಕುಳಿತಿವೆ ಒಳಪುಟಗಳಲ್ಲಿಓದುವುದೊಂದೇ ಬಾಕಿ.

ಸಂಪಾದಕ

Leave a Reply

Your email address will not be published.