ಅಗಲಿದ ಗೆಳತಿಯ ಅಳಿಯದ ನೆನಪುಗಳು

ಇತ್ತೀಚೆಗೆ ನಮ್ಮನ್ನು ಅಗಲಿದ ಪ್ರಿಯ ಗೆಳತಿ ಶ್ರೀಮತಿ ರಾಜೇಶ್ವರಿ ತೇಜಸ್ವಿ ಅವರೊಂದಿಗಿನ ನನ್ನ ನೆನಪುಗಳು ಅರ್ಧ ಶತಮಾನಕ್ಕೂ ಹಿಂದಕ್ಕೆ ಸರಿಯುತ್ತವೆ. ನೆನಪಿನಾಳದಿಂದ ಮೂಡಿ ಬರುವ ಸ್ಮøತಿ ಚಿತ್ರಗಳಲ್ಲಿ ಅಗತ್ಯವಾಗಿ ತೇಜಸ್ವಿಯವರೂ ಕಾಣಿಸಿಕೊಳ್ಳುತ್ತಾರೆ.

ಪದ್ಮಾ ಶ್ರೀರಾಮ

ನನ್ನ ಪತಿ ಪ್ರೊ.ಬಿ.ಎನ್.ಶ್ರೀರಾಮ ಮತ್ತು ತೇಜಸ್ವಿಯವರ ಸ್ನೇಹ ಸಂಬಂಧಕ್ಕೆ, ನಮ್ಮ ಮದುವೆಯ ನಂತರ ನಾನೂ ಸೇರ್ಪಡೆಯಾದೆ. ನಮ್ಮ ಮೊದಲ ಭೇಟಿ ಎಂದರೆ ಐವತ್ತು ವರ್ಷಗಳ ಹಿಂದಿನ ಕಾಲಮಾನದ ಜನಜೀವನದ ಒಂದು ಜಲಕ್ ಎನ್ನಬಹುದು.

ಒಂದು ದಿನ ನಾವಿಬ್ಬರೂ ಮೈಸೂರಿಂದ ಹೊರಟು ಜನ್ನಾಪುರ ಎಂಬಲ್ಲಿ ತಲುಪಿ ಒಂದೆರಡು ಕಿ.ಮೀ. ಕಾಡಿನ ಮಧ್ಯದ ಈಚಲು ಹರದ ಮೈದಾನದ ಕಾಲುದಾರಿಯಲ್ಲಿ ನಡೆದು ತೇಜಸ್ವಿಯವರ ಕಾಫಿತೋಟ ‘ಚಿತ್ರಕೂಟ’ಕ್ಕೆ ಬಂದೆವು. ಅವರ ಮನೆ ಮುಂದೆ ನಿಂತಿದ್ದ ಜೀಪಿನ ತಳದಿಂದ ತೆವಳಿಕೊಂಡು ಹೊರಬಂದ ತೇಜಸ್ವಿ ನಮ್ಮನ್ನು ತಮ್ಮ ಎಂದಿನ ಧಾಟಿಯಲ್ಲಿ ಸ್ವಾಗತಿಸಿದಾಗ, ನಮ್ಮೆಲ್ಲರ ಮಾತುಕತೆಯ ಸದ್ದನ್ನು ಕೇಳಿ ಹೊರಬಂದ ನಗುಮುಖದ ರಾಜೇಶ್ವರಿ ತೇಜಸ್ವಿಯವರು ಅಂದಿನಿಂದ ಇಂದಿನವರೆಗೆ ನಮಗೆಲ್ಲರಿಗೂ ಆತ್ಮೀಯ, ಪ್ರೀತಿಯ ಗೆಳತಿಯಾಗಿದ್ದರು.

ಆ ದಿನಗಳಲ್ಲಿ ತೇಜಸ್ವಿ ಮತ್ತು ಅವರ ಗೆಳೆಯರೆಲ್ಲರೂ ಒಂದಲ್ಲಾ ಒಂದು ಚಳವಳಿಗಳಲ್ಲಿ ಭಾಗವಹಿಸುತ್ತಿದ್ದುದರಿಂದ ಸಹಜವಾಗಿ ನಾನು ರಾಜೇಶ್ವರಿಯವರ ಜೊತೆಯಾಗಿ ಚಿತ್ರಕೂಟದಲ್ಲಿ ಇರುತ್ತಿದ್ದೆ. ಇಂದು ಕಾಡೇ ನಾಡಾಗುತ್ತಿರುವ ಸಂದರ್ಭದಲ್ಲಿ ಐದು ದಶಕಗಳ ಹಿಂದಿನ ಕಾಫಿ ತೋಟದ ಮನೆ ಹೇಗಿತ್ತೆಂದರೆ, ಮನೆ ಮುಂದೆ ಕಾಫಿ ತೋಟ, ಮನೆ ಹಿಂದೆ ‘ಗಭೊ’ ಎನ್ನುವ ಕಾಡು! ತೋಟದ ಕೆಲಸಗಾರರಿಗೆ ದೂರದಲ್ಲಿ ಲೈನ್‍ಮನೆ. ಕೆಲಸವಿದ್ದಾಗ ಮಾತ್ರ ಅವರು ಮನೆ ಹತ್ರ ಬರುತ್ತಿದ್ದರು. ನೀರವ ಮೌನದ ವಾತಾವರಣದಲ್ಲಿ ನಾವಿಬ್ಬರೇ.

ಆತ್ಮೀಯ ಸ್ನೇಹಿತರೆಲ್ಲರಿಗೂ ಸದಾ ಕಾದಿರುತ್ತಿದ್ದ ಬಿಸಿ ನೀರಿನ ಸ್ನಾನ, ರುಚಿಕಟ್ಟಾದ ಊಟ ತಿಂಡಿ ಇವನ್ನೆಲ್ಲಾ ಒದಗಿಸುತ್ತಿದ್ದ ರಾಜೇಶ್ವರಿಯವರ ಅಂದಿನ ಗೃಹಕೃತ್ಯ ಹೇಗಿತ್ತು? ಆಗಿನ ದಿನಗಳಲ್ಲಿ ಗ್ಯಾಸ್ ಒಲೆ, ಮಿಕ್ಸರ್, ಗ್ರೈಂಡರ್, ಪ್ರೆಷರ್ ಕುಕ್ಕರ್‍ಗಳು ಏನೆಂದು ನಮಗೆ ಗೊತ್ತಿರಲಿಲ್ಲ! ಅಂತಹದರಲ್ಲಿ “ಹೈದ್ರಾಬಾದಿ ಚೂಲಾ” ಎಂಬ ವಿಶಿಷ್ಟ ಸೌದೆ ಒಲೆಯನ್ನು ಅವರ ಅಡಿಗೆಮನೆಯಲ್ಲಿ ಹಾಕಿಸಿದ್ದರು. ಸೌದೆ ಇಟ್ಟು, ಹತ್ತಿಸಿದರೆ ಮೂರು ಒಲೆಗಳಲ್ಲಿ ಉರಿ ಬರುತ್ತಿತ್ತು. ಆಗಿನ ದಿನಗಳಲ್ಲಿ ರೂಢಿಯಲ್ಲಿದ್ದ ಅನ್ನಪೂರ್ಣ ಕುಕ್ಕರ್ ಎಂಬ ಅಲ್ಯೂಮಿನಿಯಂ ಕುಕ್ಕರ್‍ನಲ್ಲಿ ಬೇಳೆ, ಅಕ್ಕಿ, ತರಕಾರಿಗಳನ್ನು ಬೇರೆ ಬೇರೆ ಪಾತ್ರೆಗಳಲ್ಲಿಟ್ಟು ಉರಿಯುವ ಒಲೆ ಮೇಲಿಟ್ಟರೆ ಅವು ಬೇಯುತ್ತಿದ್ದವು.

ಅನಂತರ ತರಕಾರಿ, ಬೇಳೆ ಕೂಡಿಸಿ ಹುಳಿ ತಯಾರಿಸುವುದು, ಇನ್ನೊಂದು ಒಲೆಯಲ್ಲಿ ಹಾಲು ಕಾಯಿಸುವುದು, ಮತ್ತೊಂದರಲ್ಲಿ ಪಲ್ಯ ತಯಾರಿ ನಡೆಯುವುದು. ಒಂದೇ ಒಲೆ “ಂಟಟ iಟಿ oಟಿe” ಆಗಿತ್ತು. ಆದರೆ ತೇಜಸ್ವಿ ಮತ್ತು ಸಂಗಡಿಗರು ತರುವ ಮೀನು, ಮಾಂಸಗಳಿಗೆ ಮಸಾಲೆ ಅರೆಯುವುದು ಹೇಗೆ? ಅದಕ್ಕಾಗಿ ಅಡುಗೆ ಮನೆ ಮೂಲೆಯಲ್ಲಿ ರುಬ್ಬುವ ಕಲ್ಲು! ನಾನು ಹೋದಾಗ ರುಬ್ಬುವ ಕಲ್ಲಿನ ಡ್ಯೂಟಿ ವಹಿಸಿಕೊಳ್ಳುತ್ತಿದ್ದೆ. ಹೊರಗಿನ ಕೆಲಸಕ್ಕೆ ನೀಲೂ ಎಂಬ ಹೆಂಗಸಿದ್ದರೂ, ಒಳಗಿನ ಕೆಲಸ ಗುಡಿಸು, ಸಾರಿಸು, ಅಡಿಗೆ ಮಾಡು, ಬಡಿಸು, ಒಲೆ ಬೂದಿ ತೆಗೆಯುವುದು ಇತ್ಯಾದಿ ರಾಜೇಶ್ವರಿಯವರೇ ಮಾಡುತ್ತಿದ್ದರು.

ಚಿತ್ರಕೂಟ ಮನೆಯ ಫರ್ನಿಚರ್ ಏನೆಂದರೆ ವೆರಾಂಡದಲ್ಲಿ ಒಂದು ಬೆಂಚು, ಒಳಗೆ ನಾಲ್ಕೈದು ಬೆತ್ತದ ಖುರ್ಚಿಗಳು ಮತ್ತು ಊಟಕ್ಕೆ ಡೈನಿಂಗ್ ಟೇಬಲ್, ಮನೆ ಒಡೆಯ, ಒಡತಿಯಿಂದ ಹಿಡಿದು ಸ್ನೇಹಿತರು ಯಾರಿಗೂ ಮಂಚವಿಲ್ಲ! ನೆಲದ ಮೇಲೆ ಹಾಸಿಗೆ ಹಾಸಿ ಮಲಗಬೇಕು! ಇವೆಲ್ಲಕ್ಕೂ ಕಳಶವಿಟ್ಟಂತೆ ಕರೆಂಟ್ ಇಲ್ಲ, ಸೀಮೆಯೆಣ್ಣೆ ಲ್ಯಾಂಪ್‍ಗಳು! ರಾತ್ರಿಯನ್ನು ಬೆಳಗಿಸಬೇಕು. ಇಂಥ ಅನೇಕಾನೇಕ ಕೆಲಸಗಳ ಜೀವನ ವಿಧಾನವನ್ನು ರಾಜೇಶ್ವರಿಯವರು ಸಮರ್ಥವಾಗಿ, ಸಂತೋಷದಿಂದ ನಿಭಾಯಿಸಿದರು. ಮತ್ತು ತೇಜಸ್ವಿಯವರು ಇಂಥದೇ ವಾತಾವರಣದಲ್ಲಿ “ನಿಗೂಢ ಮನುಷ್ಯರು” “ಸ್ವರೂಪ” “ಕರ್ವಾಲೊ” ಕೃತಿಗಳನ್ನು ರಚಿಸಿದರು.

ತೇಜಸ್ವಿಯವರಂತಹ ‘ಕ್ಷಣ ಚಿತ್ತ, ಕ್ಷಣ ಪಿತ್ತ’ ಎಂಬಂತಹ ಶೀಘ್ರಕೋಪಿ ಮನುಷ್ಯನ ಜತೆ ಏಗುವುದು ಸಾಮಾನ್ಯ ಮಾತಲ್ಲ. ಒಂದು ದಿನ ರಾಜೇಶ್ವರಿ ತೇಜಸ್ವಿಯವರ ಪ್ರೀತಿಯ ನಾಯಿ ಕಿವಿಗೆ ಸ್ನಾನ ಮಾಡಿಸಿ ಕಟ್ಟಿ ಹಾಕಿದ್ದರು. ತೇಜಸ್ವಿ ಹೊರಗಿನಿಂದ ಬಂದು ನೋಡಿದವರೇ ಕಿವಿಗೆ ಜ್ವರ ಬಂದಿದೆ. ನೀನ್ಯಾಕೆ ಸ್ನಾನ ಮಾಡಿಸಿದೆ ಎಂದು ಪತ್ನಿಯ ಮೇಲೆ ಸಿಕ್ಕಾಪಟ್ಟೆ ಕೂಗಾಡಿದರು. ಇಂಥ ಸಂದರ್ಭದಲ್ಲಿ ನಮಗೆ ಮುಜುಗರವಾದರೂ, ಸುಮ್ಮನೆ ಕಂಡರೂ ಕಾಣದಂತೆ ಇರಬೇಕಾಗಿತ್ತು. ಸ್ವಲ್ಪ ಹೊತ್ತಿನ ನಂತರ ತೇಜಸ್ವಿ ರಾಜೇಶ್ವರಿಯವರ ಭುಜ ಹಿಡಿದು ಸಮಾಧಾನಿಸುತ್ತ ಮಾತನಾಡಿಸುತ್ತಿದ್ದುದನ್ನು ಕಂಡೆ.

ಪ್ರಯೋಗಶೀಲರಾಗಿದ್ದ ತೇಜಸ್ವಿ ಒಮ್ಮೆ ಚಿತ್ರಕೂಟದಲ್ಲಿ ಕಾಫಿ ಅಲ್ಲದೆ ಶುಂಠಿಯನ್ನು ಬೆಳೆದು ನೋಡಿದರು. ನೀರಿನ ಆಸರೆಯಿದ್ದ ಜಾಗದಲ್ಲಿ ಭತ್ತ ಬೆಳೆದರು. ಆಗ ರಾಜೇಶ್ವರಿ ಭತ್ತ ತೂರುವುದು, ಒಕ್ಕಣೆ ಇವೆಲ್ಲವನ್ನೂ ಮಾಡಿದರು. ಯಾವ ಕೆಲಸಕ್ಕೂ ಹಿಂಜರಿಯದೆ ಅವರು ಕುವೆಂಪುರವರಿಗಾಗಿ ಡ್ರೈವಿಂಗ್ ಕಲಿತರು. ಪುಸ್ತಕ ಪ್ರಕಾಶನದ ಕೆಲಸಗಳಲ್ಲೂ ಭಾಗಿಯಾಗಿದರು. ಇವೆಲ್ಲವೂ ರಾಜೇಶ್ವರಿಯವರು ಪ್ರೀತಿಯಿಂದ ಆರಿಸಿಕೊಂಡ ಜೀವನದ ಒಂದು ಭಾಗವೇ ಆಗಿತ್ತು.

ರಾಜೇಶ್ವರಿಯವರ ವ್ಯಕ್ತಿತ್ವದ ಗಟ್ಟಿತನ ಅವರಿಗೆ ಸಂದಿಗ್ಧ ಸನ್ನಿವೇಶಗಳನ್ನು ನಿಭಾಯಿಸುವ ಸ್ಥೈರ್ಯವನ್ನು ಕೊಟ್ಟಿತೆನ್ನುವುದು ನನ್ನ ದೃಢವಾದ ನಂಬಿಕೆ. ಒಮ್ಮೆ ತೇಜಸ್ವಿ, ರಾಜೇಶ್ವರಿಯವರ ಜತೆ ನಾವು ಸ್ನೇಹಿತರು ದಾಂಡೇಲಿಗೆ ಎರಡು ಕಾರುಗಳಲ್ಲಿ ಹೊರಟೆವು. ತೇಜಸ್ವಿ ಅತ್ಯಂತ ದೀರ್ಘಮಾರ್ಗ ಹಿಡಿದರು. ನಾವು ಆಗುಂಬೆ ಘಾಟ್ ದಾಟಿದ ಮೇಲೆ ಮುಂದಿನ ಕಾರಿನಲ್ಲಿದ್ದ ತೇಜಸ್ವಿ ವೇಗವಾಗಿ ಸಾಗಿ ಮಾಯವಾದರು. ನಮ್ಮ ಕಾರಿನಲ್ಲಿ ರಾಜೇಶ್ವರಿ, ರಘು ಮತ್ತು ಅವರ ಪತ್ನಿ ನಾನು ಇದ್ದೆವು. ಸುಮ್ಮನೆ ಮುಂದೆ ಸಾಗಿ ಸಂಜೆ ಒಂದು ಊರನ್ನು ತಲುಪಿದಾಗ ರಘು ಈ ಅಪರಿಚಿತ ಪ್ರದೇಶದಲ್ಲಿ ರಾತ್ರಿ ಪ್ರಯಾಣ ಬೇಡ, ಇಲ್ಲೇ ಹೋಟೆಲ್‍ನಲ್ಲಿ ಉಳಿಯುವಾ ಎಂದರು. ಆದರೆ ರಾಜೇಶ್ವರಿ ಗಟ್ಟಿ ಮನಸ್ಸಿನಿಂದ ನಾವು ದಾರಿ ಕೇಳಿಕೊಂಡು ಮುಂದುವರಿಯೋಣ ಎಂದು ಹೊರಡಿಸಿಯೇ ಬಿಟ್ಟರು.

ನಾವು ದಾಂಡೇಲಿಯ ಅರಣ್ಯ ಇಲಾಖೆಯ ಗೆಸ್ಟ್‍ಹೌಸ್ ತಲುಪಬೇಕಿತ್ತು. ಅಪರಿಚಿತ ದಾರಿ, ಕಗ್ಗತ್ತಲೆ, ಹೇಗೊ ಮುಂದುವರಿಯುತ್ತ ಒಂದು ಪುಟ್ಟ ಸೇತುವೆಯತ್ತ ನಮ್ಮ ಕಾರು ನಿಂತಿತು. ದೂರದಲ್ಲಿ ಮಿನುಗುತ್ತಿರುವ ದೀಪಗಳ ಸಾಲು ಕೆರೆಯ ನೀರಿನಲ್ಲಿ ಪ್ರತಿಬಿಂಬವಾಗಿದೆ. ಆ ಕಡು ಕತ್ತಲೆಯಲ್ಲಿ ಯಾವುದೊ ಅನೂಹ್ಯ ಲೋಕ ಮುಂದೆ ಕಾಣಿಸುತ್ತಿದೆ. ಸೇತುವೆ ದಾಟಿ ಮುಂದೆ ಹೇಗೆ ಹೊರಳುವುದು? ಅದೃಷ್ಟಕ್ಕೆ ಒಬ್ಬ ಟಾರ್ಚ್ ಹಿಡಿದ ಮನುಷ್ಯ ಬಂದವನು ನಮ್ಮ ಪಾಡನ್ನು ನೋಡಿ, ನಾವು ಹೋಗಬೇಕಾದ ರಸ್ತೆ ಬಗ್ಗೆ ವಿವರ ಕೊಟ್ಟ. ಅದರಂತೆ ಮುಂದೆ ಸಾಗಿದಾಗ ಎತ್ತರದಲ್ಲಿ ಒಂದು ದೊಡ್ಡ ಕಟ್ಟಡ ಕಾಡಿನ ಮಧ್ಯದ ಅರಮನೆಯಂತೆ ದೀಪಗಳಿಂದ ಮಿನುಗುತ್ತದೆ. ಆ ಭವ್ಯ ಕಟ್ಟಡದ ಮುಂದೆ ತೇಜಸ್ವಿ ನಿಂತಿದ್ದಾರೆ! ನಮ್ಮನ್ನ ಏನೂ ಪ್ರಶ್ನಿಸಲಿಲ್ಲ. ತಾನು ಏಕೆ ನಮಗಾಗಿ ಕಾಯದೆ ಬಿಟ್ಟು ಬಂದದ್ದರ ಬಗ್ಗೆ ಹೇಳಲೂ ಇಲ್ಲ! ಇಂಥ ಸನ್ನಿವೇಶದಲ್ಲಿ ರಾಜೇಶ್ವರಿಯವರ ಗಟ್ಟಿ ನಿಶ್ಚಯ ನಮ್ಮನ್ನೂ, ತೇಜಸ್ವಿಯವರನ್ನೂ ಒಂದು ದುರ್ಭರ ಸನ್ನಿವೇಶದಿಂದ ಪಾರು ಮಾಡಿತ್ತು.

ಕೊನೆಯದಾಗಿ ಹೇಳುವುದಾದರೆ ರಾಜೇಶ್ವರಿಯವರು ಕುವೆಂಪುರವರನ್ನು ನೋಡಿಕೊಂಡ ರೀತಿ ಅನುಪಮವಾದದ್ದು. ಕುವೆಂಪು ಅವರ ಪತ್ನಿ ಕಾಲವಶವಾದಾಗ, ಅವರ ಪುತ್ರಿ ತಾರಿಣಿಯವರು ವಿದೇಶದಲ್ಲಿದ್ದರು. ಹೇಮಾವತಿಯವರು ಕಾಲವಾದ ಮಾರನೆ ದಿನ ರಾಜೇಶ್ವರಿ ಕುವೆಂಪು ಅವರನ್ನು ಕಾಫಿ ಕೊಡಲೇ ಎಂದು ಕೇಳಿದಾಗ ಕುವೆಂಪುರವರು “ಇನ್ಮೇಲೆ ನೀನೇ ಅಲ್ವಾ ಅಕ್ಕಾ” ಎಂದು ಹೇಳಿದ ಮಾತಿಗೆ ಚ್ಯುತಿ ಬಾರದಂತೆ ತಮ್ಮ ಮನೆ, ತೋಟ, ತೇಜಸ್ವಿ ಇವೆಲ್ಲವನ್ನು ಬದಿಗಿಟ್ಟು ಮೈಸೂರಿಗೆ ಬಂದು ಕುವೆಂಪುರವರನ್ನು ನೋಡಿಕೊಂಡು ಮಾಡಿದ ಸೇವೆ ಅಷ್ಟಿಷ್ಟಲ್ಲ. ಆ ಸಂದರ್ಭದಲ್ಲೇ ತೇಜಸ್ವಿಯವರು ಸ್ವತಃ ಅಡುಗೆ ಮಾಡಿಕೊಂಡು ಪಾಕಕ್ರಾಂತಿ ಎಂಬ ಕೃತಿ ಬರೆದದ್ದು.

ರಾಜೇಶ್ವರಿಯವರು ತಮ್ಮ ಪ್ರಿಯ ಪತಿ, ಮಕ್ಕಳೊಂದಿಗೆ, ಕುವೆಂಪುರವರನ್ನ ಪ್ರೀತಿ, ಗೌರವಗಳಿಂದ ನೋಡಿಕೊಂಡದ್ದು, ಎಲ್ಲ ಸ್ನೇಹಿತರನ್ನು ನಗುಮುಖ, ಪ್ರೀತಿ ವಿಶ್ವಾಸಗಳಿಂದ ಆಧರಿಸಿದ್ದು ಎಲ್ಲವೂ ಅವರ ಸಾರ್ಥಕ ಜೀವನಕ್ಕೆ ಒಂದು ಚಿನ್ನದ ಮೆರುಗನ್ನು ಕೊಟ್ಟಿದೆ.

Leave a Reply

Your email address will not be published.