ಅನಿಷ್ಟಗಳ ಮೂಲಬೇರು ಚುನಾವಣಾ ಭ್ರಷ್ಟಾಚಾರದಲ್ಲಿ!

????????????????????????????????????

ಆಯಾ ಕಾಲಕ್ಕೆ ಆಯಾ ದಿನಗಳ ಮರ್ಜಿಗೆ ಅನುಗುಣವಾಗಿ ಸರ್ಕಾರಗಳು ಒಂದಲ್ಲ ಒಂದು ಲಾಬಿಯ ಕಪಿಮುಷ್ಟಿಯಲ್ಲಿ ನರಳಿದ, ತಲೆದಂಡವಾದ ಪ್ರಕರಣಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಎಲ್ಲಾ ತರದ ಲಾಬಿಗಳಲ್ಲಿ ಕೈಯಾಡಿಸಿದ್ದು ರಾಜಕಾರಣಿಅಧಿಕಾರಿಗುತ್ತಿಗೆದಾರರ ವಿಷವರ್ತುಲವೇ ಎಂಬುದು ಸಾರ್ವಕಾಲಿಕ ಸತ್ಯ!

ಡಾ.ಬಿ.ಎಲ್.ಶಂಕರ್

ಕರ್ನಾಟಕ ಸರ್ಕಾರ ಗುತ್ತಿಗೆದಾರರ ಹಿಡಿತದಲ್ಲಿದೆಯೇ…? ಹತ್ತಿಪ್ಪತ್ತು ಗುತ್ತಿಗೆದಾರರು ಬಯಸಿದ ಕೆಲಸಗಳನ್ನಷ್ಟೇ ಟೆಂಡರ್ ಮಾಡುವ ಸ್ಥಿತಿಗೆ ತಲುಪಿದೆಯೇ…?

ರಾಜಕಾರಣಿಗಳು ಭಾರತದಲ್ಲಿರಲಿ, ಅಮೆರಿಕಾದಲ್ಲಿರಲಿ, ಯಾವುದೇ ಪಕ್ಷದಲ್ಲಿರಲಿ, ಅವರೆಲ್ಲರ ಮೂಲಸ್ವಭಾವ ಒಂದೇ ರೀತಿಯಲ್ಲಿರುತ್ತದೆ. ತಮ್ಮ ನಾಗರಿಕರಿಗೆ ಅಥವಾ ಮಾನವಕುಲಕ್ಕೆ ಸಂಬಂಧಿಸಿದ ವ್ಯಾಪಕ ಸಂಗತಿಗಳಿಗಿಂತ ಹೆಚ್ಚಾಗಿ ತಮ್ಮ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕರಿಸಿಕೊಂಡಿರುತ್ತಾರೆಂಬ ದಟ್ಟವಾದ ಭಾವನೆ ಇಂದು ಜನತೆಯಲ್ಲಿದೆ. ಜನಸಾಮಾನ್ಯರಲ್ಲಿ ಚಡಪಡಿಕೆ ಹೆಚ್ಚಾಗುತ್ತಿದ್ದು, ಉತ್ತರದಾಯಿತ್ವ ಮತ್ತು ಪಾರದರ್ಶಕತೆ ವ್ಯವಸ್ಥೆಗಾಗಿ ದನಿ ಎತ್ತುತ್ತಿದ್ದಾರೆ. ಪ್ರಜಾಪ್ರಭುತ್ವವನ್ನು ‘ಶ್ರೀಮಂತರು ಮತ್ತು ಬಲಿಷ್ಠರಿಂದ’ ‘ಶ್ರೀಮಂತರು ಮತ್ತು ಬಲಿಷ್ಠರಿಗಾಗಿಯೇ’ ಇರುವ ಆಡಳಿತ ಪ್ರಕ್ರಿಯೆಯ ಮಟ್ಟಕ್ಕೆ ಇಳಿಸಿಬಿಟ್ಟಿದ್ದೇವೆಂಬ ಆರೋಪವಿದೆ. ಈ ಪರಿಸ್ಥಿತಿಗೆ ಮೂಲಕಾರಣ ಭ್ರಷ್ಟಾಚಾರ ಮತ್ತು ಸ್ವಹಿತಾಸಕ್ತಿಗಳು.

ಆಯಾ ಕಾಲಕ್ಕೆ ಆಯಾ ದಿನಗಳ ಮರ್ಜಿಗೆ ಅನುಗುಣವಾಗಿ ಸರ್ಕಾರಗಳು ಒಂದಲ್ಲ ಒಂದು ಲಾಬಿಯ ಕಪಿಮುಷ್ಟಿಯಲ್ಲಿ ನರಳಿದ, ತಲೆದಂಡವಾದ ಪ್ರಕರಣಗಳು ಇತಿಹಾಸದಲ್ಲಿ ದಾಖಲಾಗಿವೆ. ಆದರೆ ಎಲ್ಲಾ ತರದ ಲಾಬಿಗಳಲ್ಲಿ ಕೈಯಾಡಿಸಿದ್ದು ರಾಜಕಾರಣಿಅಧಿಕಾರಿಗುತ್ತಿಗೆದಾರರ ವಿಷವರ್ತುಲವೇ ಎಂಬುದು ಸಾರ್ವಕಾಲಿಕ ಸತ್ಯ! ಇತ್ತೀಚಿನ ವರ್ಷಗಳಲ್ಲಂತೂ ಸರ್ಕಾರದ ಯಾವುದೇ ಇಲಾಖೆಯಲ್ಲಿ ನೋಡಿದರೂ ಕಾಯಂನೌಕರರಿಗಿಂತ (ಹಲವಾರು ವರ್ಷಗಳಿಂದ ಸರ್ಕಾರಿ ಮಟ್ಟದಲ್ಲಿ ನೇಮಕಾತಿ ಪ್ರಕ್ರಿಯೆಯಂತೂ ಬಹುತೇಕ ಸ್ಥಗಿತಗೊಂಡಿದೆ!) ಗುತ್ತಿಗೆ ನೌಕರರಿಗೇ ಮಣೆಹಾಕುವ ಪ್ರವೃತ್ತಿ ಒಂದುರೀತಿಯಲ್ಲಿ “ಸರ್ವಮಾನ್ಯ” ಎಂಬಂತಾಗಿದೆ. ಸಂವಿಧಾನದತ್ತವಾದ ಹಕ್ಕುಗಳಿಗೆ ಮಾತ್ರ ಹೋರಾಟ ಮಾಡುತ್ತಿರುವ ಅದೇ ಮಂದಿ ಅದೇ ಸಂವಿಧಾನ ವಿಧಿಸಿದ ಕರ್ತವ್ಯಗಳನ್ನು ಮಾತ್ರ ತಮಗೇನೂ ಸಂಬಂಧವಿಲ್ಲ ಎಂಬಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದು, ಈ ಮನೋಭಾವನೆಯೇ ಈಗ ನಡೆಯುತ್ತಿರುವ ಸರ್ವಾಂಗ ಭ್ರಷ್ಟಾಚಾರವನ್ನು ನಿರ್ಮೂಲಗೊಳಿಸುವಲ್ಲಿ ತೊಡಕಾಗಿರುವುದು!

ಸರ್ಕಾರದ ಕೆಲಸಗಳು ಸುಗಮವಾಗಿ ನೆರವೇರಲು ಅಧಿಕಾರಿಶಾಹಿಯ ಉನ್ನತ ಹಂತದಿಂದ ಹಿಡಿದು ಕೆಳಹಂತದವರೆಗೂ ಅಗತ್ಯ ಪ್ರಮಾಣದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ಅವಶ್ಯಕತೆಯನ್ನು ವಿವರಿಸಬೇಕಿಲ್ಲ. ಸರ್ಕಾರಿ ಸೇವೆಗಳು, ಕೆಲಸಕಾರ್ಯಗಳು ಜನಸಾಮಾನ್ಯರನ್ನು ತಲುಪಲು ಪಾರದರ್ಶಕತೆ, ಉತ್ತರದಾಯಿತ್ವ, ಬದ್ಧತೆಗಳು ಅಗತ್ಯ. ನಿಯಮಗಳ ಅಂಕುಶವಿಲ್ಲದೆ (ನಿಯಮಗಳೇನಿದ್ದರೂ ಬಡಪಾಯಿ ಪ್ರಜೆಗಳಿಗಷ್ಟೇ) ಸೃಷ್ಟಿಸುವ ಬಡ್ತಿಮುಂಬಡ್ತಿಗಳು; ಇಲಾಖಾ ನೇಮಕಾತಿಗಳು ಸರ್ಕಾರದ ಬೊಕ್ಕಸದ ಮೇಲೆ ನೀಡುವ ಪ್ರಹಾರಗಳ ಅರಿವಿದ್ದೂ ಬೇಕಾಬಿಟ್ಟಿಯಾಗಿ ಮುಂದುವರಿದುಕೊಂಡು ಬರುತ್ತಿರುವ ಈ ಕಾಲಮಾನದಲ್ಲಿ ಯಾರನ್ನು ಯಾರು ಪ್ರಶ್ನಿಸುವುದು, ನಿಯಂತ್ರಿಸುವುದು?

ಆಗಾಗ ಕೇಳಿಬರುವ ವೆಚ್ಚಕಡಿತ, ಆಡಳಿತ ಸುಧಾರಣೆ, ಭ್ರಷ್ಟಾಚಾರ ನಿಗ್ರಹದ ಮಾತುಗಳು ಜಗಿದೂ ಜಗಿದೂ ರಸಹೀನವಾದ ಕವಳದಂತಾಗಿದೆ. “ಯಾರೇ ಪ್ರಭಾವಿಗಳಿರಲಿ, ಯಾವುದೇ ಕಾರಣಕ್ಕೂ ಭ್ರಷ್ಟರನ್ನು ರಕ್ಷಿಸುವುದಿಲ್ಲ” ಎಂಬ ಘೋಷಣೆಯಂತೂ ಕಾಲಕಾಲಕ್ಕೆ ಸುದ್ದಿಮಾಡುತ್ತಿರುವುದು ಬಿಟ್ಟರೆ ಭ್ರಷ್ಟಾಚಾರ ನಿಗ್ರಹ ದಳ ನಡೆಸುವ ದಾಳಿಗಳಲ್ಲಿ ಸಿಕ್ಕಿಬಿದ್ದಿರುವ ತಿಮಿಂಗಲಗಳಿಗೆ ಎಷ್ಟು ಮಂದಿಗೆ ಯಾವ ಪ್ರಮಾಣದಲ್ಲಿ ಶಿಕ್ಷೆಯಾಗಿದೆ ಎಂಬುದನ್ನು ಗಮನಿಸಿದರೆ ಅರ್ಥವಾದೀತು ಅಧಿಕಾರ ಸ್ಥಾನದಲ್ಲಿರುವವರ ಪ್ರಾಮಾಣಿಕತೆಯ ಬಂಡವಾಳ.

30-40% ಕಮಿಷನ್ ಕಾರಣದಿಂದ ಹಾಗೂ ರಾಜಕಾರಣಿಅಧಿಕಾರಿ ಕಿರುಕುಳದಿಂದ ಬೇಸತ್ತು ಗುಣಮಟ್ಟದ ಗುತ್ತಿಗೆದಾರರೆಲ್ಲಾ ರಾಜ್ಯಸರ್ಕಾರದ ಗುತ್ತಿಗೆ ಬಿಟ್ಟು ದೂರ ಸರಿದಿದ್ದಾರೆಯೇ…?

ಪ್ರಥಮವಾಗಿ ಇಂಥ ಒಂದು ವ್ಯವಸ್ಥೆ ಈ ಮಟ್ಟದಲ್ಲಿ ಉಸಿರಾಡುತ್ತಿರುವುದನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಬಿಗಿಕ್ರಮಗಳನ್ನು ಕೈಗೊಳ್ಳುತ್ತಿರುವ ಪ್ರಧಾನಮಂತ್ರಿಯವರಿಗೇ ನೇರವಾಗಿ ಅಹವಾಲು ಸಲ್ಲಿಕೆಯಾಗಿರುವುದನ್ನು ಪ್ರಶಂಸಿಸಲೇಬೇಕು. ಅಷ್ಟರಮಟ್ಟಿನ ಎದೆಗಾರಿಕೆ ಮೆರೆದ ಸಂಬಂಧಪಟ್ಟವರಿಗೆ ಅಭಿನಂದನೆಗಳು. ರಾಜ್ಯದಲ್ಲಿ ಭ್ರಷ್ಟಾಚಾರ ಈ ಪರಿಗೆ ತಲುಪಲು ಕಾರಣವಾಗಿರುವ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಿನೋಡಿದರೆ ಸಾರ್ವಜನಿಕ ಆಡಳಿತ ವ್ಯವಸ್ಥೆಯ ಅಂಗಗಳಾದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆಂದೇ ಪರಿಗಣಿತವಾದ ಮಾಧ್ಯಮಗಳ ಪಾಲೂ ಕಂಡುಬಂದರೆ ಆಶ್ಚರ್ಯವೇನಿಲ್ಲ. ಇಷ್ಟೆಲ್ಲಾ ಅಪಸವ್ಯಗಳ ಮಧ್ಯೆಯೂ ಗುಣಮಟ್ಟದ ಕಾಮಗಾರಿಗಳನ್ನು ಸಕಾಲದಲ್ಲಿ ನಿರ್ವಹಿಸಿದ, ಪೂರ್ಣಗೊಳಿಸಿದ ಸಂಸ್ಥೆಗಳನ್ನಾಗಲೀ, ಸಂಬಂಧಪಟ್ಟ ವ್ಯಕ್ತಿಗಳನ್ನಾಗಲೀ ಗುರುತಿಸಿ ಪ್ರಶಂಸಿಸುವ; ಸಾರ್ವಜನಿಕ ಬೆಳಕಿಗೆ ಪ್ರಕಟಪಡಿಸುವ ಕಾರ್ಯವನ್ನು ಪತ್ರಿಕಾರಂಗವಾಗಲೀ, ಸುದ್ದಿಮಾಧ್ಯಮಗಳಾಗಲೀ ಮಾಡಿದ್ದಿದ್ದರೆ ಭ್ರಷ್ಟಾಚಾರದ ನೆರಳಲ್ಲಿ ವಿಹರಿಸುತ್ತಿದ್ದವರು ಸ್ವಲ್ಪಮಟ್ಟಿಗಾದರೂ ಆತ್ಮವಿಮರ್ಶೆ ಮಾಡಿಕೊಳ್ಳುವ ಪ್ರಮೇಯ ಒದಗುತ್ತಿತ್ತೇನೋ

ಕ್ಲಿಷ್ಟಬಹು ಇಲಾಖೆಯ ಸಮನ್ವಯದ ಗುತ್ತಿಗೆ ಕಾಮಗಾರಿ ನಿರ್ವಹಣೆ ಮಾಡುವವರಿಲ್ಲದೆ ನಮ್ಮ ಸರ್ಕಾರಗಳು ಬೀದಿಬದಿಯ ಚಪ್ಪಡಿಕಲ್ಲನ್ನು ಬದಲಿಸಿ ಹಣವ್ಯಯಹಂಚಿಕೆಗಳಿಕೆ ಮಾಡಲು ನಿಂತ ಹಾಗಿದೆಯೇ…?

ಪೌರಕಾರ್ಮಿಕರಿಂದ ಹಿಡಿದು ವಿಧಾನಸೌಧದಲ್ಲಿ ಪ್ರತಿಷ್ಠಾಪಿತರಾದವರವರೆಗೆ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಸದ್ದುಮಾಡುತ್ತಿರುವ ವಿಚಾರ “ಸರ್ಕಾರಿ ಕಾಮಗಾರಿಗಳ ಗುತ್ತಿಗೆ”. ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ, ಒಳಚರಂಡಿಗಳ ನಿರ್ವಹಣೆ, ರಾಜಾಕಾಲುವೆಗಳ ನಿರ್ವಹಣೆ, ಉದ್ಯಾನವನಗಳ ನಿರ್ಮಾಣ ಮತ್ತು ನಿರ್ವಹಣೆ, ಪಾದಚಾರಿ ರಸ್ತೆಗಳ ನಿರ್ವಹಣೆ ಹೀಗೆ ಸಾಲು ಸಾಲು ಕಾಮಗಾರಿಗಳ ಹೆಸರಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೋಟಿ ಕೋಟಿ ಲೂಟಿಯ (ಸಂಪಾದನೆ) ಕಥೆಯೊಂದೇ ಸಾಕು ಇಡೀ ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯನ್ನು ಅಳೆಯಲು; ಬೀದಿಬದಿಯ ಚಪ್ಪಡಿಕಲ್ಲುಗಳಿಂದಲೂ ಸಹ ಹಣಸಂಪಾದನೆ ಮಾಡಬಹುದು ಎಂಬುದನ್ನು ನಿರೂಪಿಸಲು!

ಬೆಂಗಳೂರು ಮಹಾನಗರದ ಮಟ್ಟಿಗಂತೂ ಬಿಬಿಎಂಪಿ, ಬಿಡಿಎ ಸೇರಿದಂತೆ ಎಲ್ಲಾ ಸ್ಥಳೀಯಾಡಳಿತಗಳು, ಇಲಾಖೆಗಳು ನೂರಕ್ಕೆ ನೂರು ಪ್ರತಿಶತದಷ್ಟು ಗುತ್ತಿಗೆದಾರರ ಜಾಲದಲ್ಲಿಯೇ ಉಸಿರಾಡುತ್ತಿವೆ; ಕೊಸರಾಡುತ್ತಿವೆ. ಅಂತಿಮವಾಗಿ ತೆರಿಗೆದಾರರಿಗಾಗಲೀ, ಸಾರ್ವಜನಿಕರಿಗಾಗಲೀ ಸರ್ಕಾರದ ಕಡೆಯಿಂದಲಾಗಲೀ, ಜನಪ್ರತಿನಿಧಿಗಳಿಂದಲಾಗಲೀ, ಅಧಿಕಾರಿ ವರ್ಗದಿಂದಲಾಗಲೀ ಉತ್ತರದಾಯಿತ್ವವೆಂಬುದು ಗಗನಕುಸುಮವೇ. ಮನುಷ್ಯನನ್ನು ಇಂದು ಬಹುವಾಗಿ ಕಾಡುತ್ತಿರುವ ಕ್ಯಾನ್ಸರಿನಂತೆಯೇ ಭ್ರಷ್ಟಾಚಾರ, ಸ್ವಜನ ಹಿತಾಸಕ್ತಿಗಳು ಇಡೀ ವ್ಯವಸ್ಥೆಯ ಯಾವ ಭಾಗವನ್ನೂ ಬಿಡದ ಕ್ಯಾನ್ಸರಿನಂತೆ ವಿಸ್ತಾರವಾಗಿ ಹರಡಿಕೊಂಡಿದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಎಲ್ಲಾ ಅನಿಷ್ಟಗಳ ಮೂಲಬೇರು ಇರುವುದು ಚುನಾವಣಾ ಭ್ರಷ್ಟಾಚಾರದಲ್ಲಿ ಎಂದರೆ ಆಶ್ಚರ್ಯವಾದೀತು. ಭ್ರಷ್ಟಾಚಾರವನ್ನು ‘ಸರ್ವಮಾನ್ಯ’ವಾಗಿಸುವ ಪ್ರಕ್ರಿಯೇ ನಡೆಯುವುದು ಇಲ್ಲೇ. ಈಗ ಮತದಾರ ಕೇವಲ ಚುನಾವಣಾ ಸಂದರ್ಭದ ಸರಕು ಮಾತ್ರವೇ ಆಗಿ ಉಳಿದಿಲ್ಲ; ಬದಲಿಗೆ ಮುಂದಿನ ಚುನಾವಣೆವರೆಗೆ ಈ ಎಲ್ಲಾ ಭ್ರಷ್ಟಾಚಾರವನ್ನು ಅಪರೋಕ್ಷವಾಗಿ ಅನುಮೋದಿಸುವ, ಉಣ್ಣುವ, ಜೀರ್ಣಿಸಿಕೊಳ್ಳುವ ವ್ಯವಸ್ಥೆಯ ಭಾಗವಾಗಿದ್ದೇ ಇಂದು ನಾವು ಕಾಣುತ್ತಿರುವ ಭ್ರಷ್ಟಾಚಾರದ ವಿರಾಟ್ ಸ್ವರೂಪ! ಬಂಡವಾಳ ಹೂಡಿದವನು ಬಂಡವಾಳವನ್ನು ವಾಪಾಸು ಪಡೆಯುವ ಜೊತೆಗೆ ಲಾಭವನ್ನೂ ಮಾಡಿಕೊಳ್ಳಬೇಕಿರುವುದು ಸಹಜ ತಾನೇ?

ಕೊನೆಯಲ್ಲಿ ಉಳಿಯುವುದು ಜನರ ನಂಬಿಕೆಗೆ ದ್ರೋಹ ಮಾತ್ರವೇ. ಭ್ರಷ್ಟಾಚಾರ ಯಾವ ಇಲಾಖೆಯಲ್ಲಿಲ್ಲ ಎಂಬ ಮಾತೇ ಸತ್ಯವಾಗುತ್ತಿರುವುದಂತೂ ದುರ್ದೈವದ ಸಂಗತಿ. ಸ್ವಂತ ನಿವೇಶನ/ಮನೆ ಹೊಂದಬೇಕೆಂದು ಕನಸು ಕಟ್ಟಿಕೊಂಡು ಜೀವಮಾನವಿಡೀ ಕಷ್ಟಪಟ್ಟು ದುಡಿದ ಗಳಿಕೆಯಲ್ಲಿ ಒಂದಷ್ಟು ಉಳಿಸಿ ನಿವೇಶನಕ್ಕಾಗಿ ಬಕಪಕ್ಷಿಯಂತೆ ಕಾದುಕುಳಿತ ಲಕ್ಷಾಂತರ ಮಂದಿಯ ಹಣವನ್ನೂ ಬಿಡದೆ ನುಂಗಿ ನೀರುಕುಡಿದ ಸರಣಿ ಪ್ರಕರಣಗಳ ಉದಾಹರಣೆ ಒಂದೇ ಸಾಕು ನಮ್ಮ ರಾಜ್ಯ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿಯಲು! ತಂತ್ರಜ್ಞಾನ ಅಳವಡಿಕೆಯೂ ಈ ಕಬಂಧಬಾಹುಗಳನ್ನು ಭೇದಿಸಲು ಸಾಧ್ಯವಾಗಿಲ್ಲ ಎಂದರೆ ಅರ್ಥವಾದೀತು ಭ್ರಷ್ಟಾಚಾರದ ಆಳಅಗಲದ ವ್ಯಾಪ್ತಿ.

ಬೆರಳೆಣಿಕೆಯಷ್ಟು ಗುತ್ತಿಗೆದಾರರ ಕಬಂಧಬಾಹುವಿನಲ್ಲಿ ಸಿಲುಕಿರುವ ಘನ ಕರ್ನಾಟಕ ಸರ್ಕಾರವೇ ಗುತ್ತಿಗೆಗೆ ಲಭ್ಯವಿದೆಯೆಂಬ ಮಾತು ಅತಿಶಯೋಕ್ತಿ ಎಂದು ಅನ್ನಿಸದಾಗಿದೆ. ಇದು ನಮ್ಮ ಜನರಿಗೆ ಅರಿವಿದೆಯೇ..?

ಜನರಿಗೆ ಅರಿವಿಲ್ಲದೇನಿಲ್ಲ; ಅದೂ ಸಾಮಾಜಿಕ ಜಾಲತಾಣಗಳು ಇಷ್ಟೊಂದು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವ ಈ ಕಾಲಮಾನದಲ್ಲಿ. ಸಮಸ್ಯೆ ಅದಲ್ಲ. ಚುನಾವಣಾ ಸಂದರ್ಭದಲ್ಲಿ ‘ಮತದಾರ’ ತನ್ನ ಮತವನ್ನು ಚುನಾವಣಾ ಅಭ್ಯರ್ಥಿಗೆ ಯಾವಾಗ ಮಾರಿಕೊಂಡರೋ ಆ ಘಳಿಗೆಯಿಂದಲೇ ಆತ ಕೂಡಾ ಈ ಒಟ್ಟಾರೆ ವಿಷವರ್ತುಲದ ಭಾಗವೇ ಆಗಿಹೋಗಿದ್ದಾನೆ. ಪ್ರಶ್ನಿಸಬೇಕಾದ ಮತದಾರರೇ ಈ ರೀತಿಯಲ್ಲಿ ಕಲುಷಿತಗೊಂಡರೆ ಚುನಾವಣಾ ಭ್ರಷ್ಟಾಚಾರಕ್ಕೆ ಮೂಲಕಾರಣನಾಗುವ ಅಭ್ಯರ್ಥಿಯಿಂದಾಲೀ, ಅಭ್ಯರ್ಥಿಯನ್ನಾಗಿ ಆರಿಸಿದ ರಾಜಕೀಯ ಪಕ್ಷದಿಂದಾಗಲೀ ಆದರ್ಶ ರಾಜಕಾರಣವನ್ನು ನಿರೀಕ್ಷಿಸುವುದಾದರೂ ಹೇಗೆ?

ರಾಜಕಾರಣಕ್ಕೂ ತತ್ತ್ವಶಾಸ್ತ್ರಕ್ಕೂ; ಸಾಹಿತ್ಯಸಂಸ್ಕøತಿಗಳ ಜ್ಞಾನಕ್ಕೂ ಗಾಢವಾದ ಒಳಸಂಬಂಧ ಇದ್ದವರೇ ಜಗತ್ತಿನಲ್ಲಿ ಶ್ರೇಷ್ಠ ನಾಯಕರೆನಿಸಿದ್ದಾರೆ. ಆ ಬಗೆಯ ಸಮಗ್ರತೆಗಾಗಿ ಅಧ್ಯಯನಶೀಲತೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಅವಶ್ಯಕ ಎಂಬುದನ್ನು ಲೋಹಿಯಾ ಪ್ರತಿಪಾದಿಸಿದ್ದರು.

ಸನ್ನಿವೇಶ ಮತ್ತು ಆಶಯಗಳು ಸೃಷ್ಟಿಸುವ ನಾಯಕತ್ವ ಸರ್ವಕಾಲಕ್ಕೂ ಅನುಕರಣೀಯವಾಗಿರುತ್ತದೆ; ಪ್ರಭಾವ ಸುದೀರ್ಘವಾಗಿರುತ್ತದೆ. 12ನೇ ಶತಮಾನದಲ್ಲಿ ಅಸ್ಪøಶ್ಯತೆ ಹಾಗೂ ಸಾಮಾಜಿಕ ಅಸಮಾನತೆಯ ವಿರುದ್ಧ ಅಕ್ಕ, ಬಸವಾದಿ ಶರಣರ ನೇತೃತ್ವದಲ್ಲಿ ನಡೆದ ಶರಣ ಚಳವಳಿ; ಬ್ರಿಟಿಷರ ಗುಲಾಮಗಿರಿಯಿಂದ ವಿಮುಕ್ತಿಗಾಗಿ ನಡೆದ ಸ್ವಾತಂತ್ರ್ಯ ಆಂದೋಲನ ವಿವೇಕಾನಂದ, ಗಾಂಧಿ, ಸುಭಾಷ್, ತಿಲಕ್, ಲಜಪತರಾಯ್, ಭಗತ್ ಸಿಂಗ್, ಆಜಾದ್, ನೆಹರೂ, ಅಂಬೇಡ್ಕರ್, ಲೋಹಿಯಾ ಮೊದಲಾದ ಸಹಸ್ರಾರು ನಾಯಕರುಗಳನ್ನು ಸೃಷ್ಟಿಸಿತ್ತು. ಇವರೆಲ್ಲರಲ್ಲೂ ಇದ್ದಂತಹ ನಾಯಕತ್ವದ ಹಲವಾರು ಗುಣವಿಶೇಷಗಳು ಆಯಾಯ ಸಂದರ್ಭ, ಸನ್ನಿವೇಶಗಳಲ್ಲಿ ಸ್ವೀಕಾರಾರ್ಹವಾಗಿದ್ದವು.

ರಾಮಕೃಷ್ಣ ಹೆಗಡೆಅಬ್ದುಲ್ ನಜೀರ್‍ಸಾಬ್ ಮುಂದಾಳತ್ವದಲ್ಲಿನ ಅಧಿಕಾರ ವಿಕೇಂದ್ರೀಕರಣ ಹಾಗೂ ಪಂಚಾಯಿತಿರಾಜ್ ವ್ಯವಸ್ಥೆ ಕೂಡಾ ಗಾಂಧಿ ವಿಚಾರಧಾರೆಗಳಿಂದ ಪ್ರಭಾವಿತವಾಗಿತ್ತು. ಲೋಕನಾಯಕ ಜಯಪ್ರಕಾಶ ನಾರಾಯಣರ ‘ಸಂಪೂರ್ಣಕ್ರಾಂತಿ’ಯಲ್ಲಿ ಭ್ರಷ್ಟ ಶಾಸಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು; ರಾಜ್ಯವ್ಯವಸ್ಥೆಯ ವಿಕೇಂದ್ರೀಕರಣ ಈ ಎಲ್ಲಾ ದೃಷ್ಟಾಂತಗಳಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ; ಈ ‘ನಾಯಕರು’ ಹಾಗೂ ಇವರ ‘ನಾಯಕತ್ವ’ ಇವೆರಡೂ ಆದರ್ಶ, ಅನುಕರಣಾಯೋಗ್ಯವಾಗಿದ್ದವು! ಅಂತರ್ಗತವಾಗಿದ್ದ ಸಂವೇದನಾಶೀಲತೆಗೆ ಸಾಣೆಹಿಡಿಯುವ ಸಾಮಾಜಿಕ ಸನ್ನಿವೇಶಗಳು ಸೃಷ್ಟಿಯಾದಾಗ ಬುದ್ಧ, ಮಹಾವೀರ, ಬಸವ, ಗಾಂಧಿ, ವಿನೋಬಾಭಾವೆ, ಜಯಪ್ರಕಾಶ ನಾರಾಯಣ, ಅಂಬೇಡ್ಕರ್, ನೆಹರೂ, ಲೋಹಿಯಾರಂತಹ ನಾಯಕತ್ವ ಉದಯಿಸುತ್ತವೆ.

ಯಾವ ಸರ್ಕಾರ ಅತ್ಯಂತ ಕಡಿಮೆ ಆಳುತ್ತದೆಯೋ, ಅಂತಹ ಸರ್ಕಾರ ಅತ್ಯುತ್ತಮವಾಗಿ ಆಳುತ್ತದೆ. ಉತ್ತಮ ಆಳ್ವಿಕೆಯೆಂದರೆ ಗಲಾಟೆಯಿಲ್ಲದ ಗುಪ್ತಗಾಮಿನಿ. ಕಡಿಮೆ ಆಳುವುದು ಎಂದರೆ ಇದೇ. ಆಳಿದ್ದು ಗೊತ್ತಾಗದೆ, ಆದ ಬದಲಾವಣೆ ಮಾತ್ರ ಗ್ರಹಿಕೆಗೆ ಬರುವಂತೆ ಆಡಳಿತ ನಿರ್ವಹಿಸುವುದು.

ಚುನಾವಣಾ ಸುಧಾರಣೆಗೆ ಕೆಲವು ಸಲಹೆ

ಸಂಸತ್ತು, ರಾಜ್ಯ ಶಾಸನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು; ಸಾಂವಿಧಾನಿಕ ಹುದ್ದೆಗಳಾದ ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಮಂತ್ರಿಗಳು, ರಾಜ್ಯಪಾಲರು, ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮಂತ್ರಿಗಳು, ಮೇಲ್ಮನೆ ಸದಸ್ಯರುಗಳಿಗೆ ಗರಿಷ್ಠ 2 ಅವಧಿ ಅಥವಾ 10 ವರ್ಷಗಳ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸುವುದು; ಆರಿಸಿಬಂದ ಶಾಸಕ/ಸಂಸದ ತನ್ನ ಪಕ್ಷಕ್ಕೆ ರಾಜೀನಾಮೆ ನೀಡಿ, ಇನ್ನೊಂದು ಪಕ್ಷದಲ್ಲಿ ಸೇರ್ಪಡೆಯಾದರೆ ಅಂಥವರನ್ನು ಅದೇ ಕ್ಷೇತ್ರಕ್ಕೆ ನಡೆಯುವ ಮರುಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರುವುದು; ಯಾವುದೇ ಶಾಸಕನ ರಾಜೀನಾಮೆ, ಅನರ್ಹತೆ ಅಥವಾ ಸಾವಿನಿಂದ ಸ್ಥಾನ ತೆರವಾದಾಗ ಉಪಚುನಾವಣೆ ನಡೆಸದೆ, ಹಿಂದಿನ ಚುನಾವಣೆಯಲ್ಲಿ ಜನರ ಎರಡನೇ ಆಯ್ಕೆಯ ಅಭ್ಯರ್ಥಿಯನ್ನು ಉಳಿದ ಅವಧಿಗೆ ವಿಧಾನಸಭಾ/ಲೋಕಸಭಾ ಸದಸ್ಯನೆಂದು ಚುನಾವಣಾ ಆಯೋಗ ಘೋಷಿಸುವುದು.

ಎರಡು ವರ್ಷಗಳಿಗೂ ಮೇಲ್ಪಟ್ಟು ಶಿಕ್ಷೆಗೆ ಒಳಗಾಗುವಂಥ ಕ್ರಿಮಿನಲ್ ಮೊಕದ್ದಮೆಗಳನ್ನು ಹೊತ್ತಿರುವ ಮಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿರುವುದು; ವೃತ್ತಿಪರ ಅಪರಾಧಿಗಳನ್ನು ಚುನಾವಣಾ ಪ್ರಕ್ರಿಯೆಯಿಂದ ದೂರವಿರಿಸುವುದು; ಒಬ್ಬನೇ ಅಭ್ಯರ್ಥಿ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸುವುದನ್ನು ಕಡ್ಡಾಯವಾಗಿ ನಿಷೇಧಿಸುವುದು; ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ತರುವುದು; ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವ ಹಾಗೂ ಚುನಾವಣಾ ಪ್ರಚಾರವನ್ನು ಚುನಾವಣಾ ಆಯೋಗವೇ ನಿರ್ವಹಿಸುವಂಥ ವ್ಯವಸ್ಥೆ ಜಾರಿಗೆ ತರುವುದು; ಉದ್ಯಮಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ರಾಜೀನಾಮೆ ನೀಡಿದ ಅಥವಾ ನಿವೃತ್ತಿಯಾದ ತಕ್ಷಣ ರಾಜಕೀಯ ಪ್ರವೇಶ ಮಾಡುವುದನ್ನು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಕನಿಷ್ಠ ಐದು ವರ್ಷ ನಿರ್ಬಂಧಿಸುವುದು ಇತ್ಯಾದಿ.

ಚುನಾವಣಾ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಬೇಕಿರುವುದೇ ಈಗಿನ ತುರ್ತು ಅವಶ್ಯಕತೆ. ಪ್ರಜಾಪ್ರಭುತ್ವದ ಆಶಂಗಳು ಚುನಾವಣೆಯಿಂದ ಚುನಾವಣೆಗೆ ಅರ್ಥಕಳೆದುಕೊಳ್ಳುತ್ತಿದ್ದು ನಿರ್ದಿಷ್ಟ ರಾಜಕೀಯ ಸಿದ್ಧಾಂತದ ನೆಲೆಯಲ್ಲಿ ಸ್ಥಾಪನೆಗೊಂಡ ಅನೇಕ ಪ್ರಾದೇಶಿಕ ಪಕ್ಷಗಳು ಈಗ ವ್ಯಕ್ತಿಕೇಂದ್ರಿತ ಇಲ್ಲವೇ ಕುಟುಂಬ ಕೇಂದ್ರಿತ ರಾಜಕೀಯ ಪಕ್ಷಗಳಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಪರಿಣಮಿಸುತ್ತಿರುವುದು ಸುಳ್ಳಲ್ಲ. ಪಕ್ಷಾಂತರಗಳು, ಪಂಚಾಯತು ಮಟ್ಟದಲ್ಲೂ ಚುನಾವಣೆ ನಡೆಯುವುದು, ಅಭಿವೃದ್ಧಿಪರ ಕಾರ್ಯಗಳಿಗೆ ವಿನಿಯೋಗಿಸಬೇಕಾದ ಸರ್ಕಾರದ ಅಮೂಲ್ಯ ಸಮಯ, ಸಂಪನ್ಮೂಲಗಳು ಚುನಾವಣಾ ಕಸರತ್ತುಗಳಲ್ಲೇ ಕಳೆದುಹೋಗುವುದು ರಾಷ್ಟ್ರದ ಒಟ್ಟಾರೆ ಹಿತದೃಷ್ಟಿಯಲ್ಲಿ ಒಳ್ಳೆಯದಲ್ಲ. ಚುನಾವಣಾ ಭ್ರಷ್ಟಾಚಾರಗಳಿಗೆ ಮೂಲ ವೇದಿಕೆಯೇ ರಾಜಕೀಯ ಪಕ್ಷಗಳೆಂದರೆ ತಪ್ಪಲ್ಲ. ಏಕೆಂದರೆ; ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆ ನಡೆಯುವುದು ಇಲ್ಲೇ ತಾನೇ? ಅಭ್ಯರ್ಥಿಯ ವೈಯಕ್ತಿಕ ಹಿನ್ನೆಲೆ, ಶೈಕ್ಷಣಿಕ ಹಿನ್ನೆಲೆ, ಸಾಮಾಜಿಕ ಮನ್ನಣೆ, ಹೋರಾಟದ ಹಿನ್ನೆಲೆ, ಅರ್ಹತೆ ಇವಾವುದೂ ಪರಿಗಣನೆಗೆ ಬಾರದೆ ಕೇವಲ ಹೇಗಾದರೂ ಸರಿ ಒಟ್ಟಿನಲ್ಲಿ ಗೆಲ್ಲುವಸಾಮಥ್ರ್ಯವನ್ನೇ ಮಾನದಂಡವಾಗಿಸುವ ಪಕ್ಷದ ನೀತಿನಿರ್ಧಾರಗಳೇ ಮುಂದಿನೆಲ್ಲಾ ಭ್ರಷ್ಟಾಚಾರ, ವಾಮಮಾರ್ಗದಲ್ಲಿ ಸಂಪಾದನೆಗೆ ದಿಕ್ಸೂಚಿ!

ರಾಜಕೀಯ ಪ್ರಕ್ರಿಯೆಗಳ ಬಗೆಗಿನ ಅರಿವು, ಜಾಗೃತಿ, ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆಯನ್ನು ಪ್ರದರ್ಶಿಸದ ಮತದಾರನಾಗಲೀ, ಸಮುದಾಯವಾಗಲೀ, ತನ್ನ ರಾಜಕೀಯ ಪ್ರತಿನಿಧಿಯ ಮೇಲಿನ ನೈತಿಕ ನಿಯಂತ್ರಣ ಕಳಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ; ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ನೈತಿಕತೆಯ ಪ್ರತಿರೂಪವಾಗಿ ಮೂಡಿಬಂದ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲ್; ಪಂಜಾಬಿನಲ್ಲಿ ನಡೆದ ಚುನಾವಣೆಗಳಲ್ಲಿ ತಮ್ಮ ಭಾಷಣದಲ್ಲಿ “ಉಳಿದೆರಡೂ ಪಕ್ಷಗಳ ಅಭ್ಯರ್ಥಿಗಳು ಕೊಡುವ ದುಡ್ಡು ತೆಗೆದುಕೊಳ್ಳಿ, ಆದರೆ ಓಟು ಮಾತ್ರ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗೇ ನೀಡಿ” ಎಂಬುದಾಗಿ ನೀಡಿದ ಮಾನರಹಿತ ಹೇಳಿಕೆ ನೈತಿಕತೆಯ ನೆತ್ತಿಗೇ ಹೊಡೆದ ಏಟಿನಂತಿಲ್ಲವೇ?

ನೀವು ಅನೇಕ ಮತಕ್ಷೇತ್ರಗಳನ್ನು ನೋಡಿ. ಆ ಮತದಾರರು ಸಹ ಮಾನಸಿಕವಾಗಿ ತಮ್ಮ ನಾಯಕನ ಜೊತೆ ಮಿಳಿತಗೊಂಡಿರುತ್ತಾರೆ. ಆ ನಾಯಕನ ಮಕ್ಕಳು ವಿದ್ಯಾವಂತರು ಹಾಗೂ ಅರ್ಹತೆಯಿಲ್ಲದವರು ಆಗಿದ್ದರೂ ಅವರನ್ನೇ ಆಯ್ಕೆಮಾಡುತ್ತಾರೆ. ಪ್ರಬಲವಾದ ಮಾನಸಿಕ ಪರಿವರ್ತನೆ ಅಗತ್ಯ. ಇದು ಸಮಾಜದ ಆಳದಿಂದ ಬರಬೇಕು. ಮಾಧ್ಯಮದವರು ಸಹ ಯಾವುದೇ ಕ್ಷೇತ್ರದ ಸಮೀಕ್ಷೆಮಾಡುವಾಗ ಅಭ್ಯರ್ಥಿ ಯೋಗ್ಯತೆಯ ಮೌಲ್ಯಮಾಪನ ಮಾಡುವುದಿಲ್ಲ. ಅವನು ಯಾವ ಜಾತಿ ಹಾಗೂ ಯಾರ ಮಗ ಎಂಬುದನ್ನು `ಹೈಲೈಟ್ಮಾಡುತ್ತಾರೆ. ಅಂದರೆ; ಪ್ರಜ್ಞಾವಂತ ಜನ ಸಹ ಜಾತಿ ಮತ್ತು ವಂಶವನ್ನು ಬಿಟ್ಟು ಯೋಚಿಸುವುದಿಲ್ಲ.

ಯಾವುದೇ ಸಮಸ್ಯೆಯ ಪರಿಹಾರಮಾರ್ಗದಲ್ಲಿ ಅತ್ಯಂತ ಕ್ಲಿಷ್ಟಭಾಗವೆಂದರೆ, ಆ ಸಮಸ್ಯೆಯ ಗ್ರಹಿಕೆ ಮತ್ತು ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿನ ಮೊದಲ ಕೆಲವು ಹೆಜ್ಜೆಗಳು. ಹಾಗೆಂದು ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರಗಳೇ ಪರಿಹರಿಸುತ್ತವೆ ಎಂದು ನಂಬಿ ಕೂರುವಷ್ಟು ಮುಗ್ಧರೂ, ಮೂಢರೂ ನಾವಾಗಬಾರದು. ನಮ್ಮದು ನಿಜವಾದ ಅರ್ಥದ ಪ್ರಜಾಫ್ರಭುತ್ವ. ನಮ್ಮ ಅನೇಕ ಸಮಸ್ಯೆಗಳ ಜವಾಬ್ದಾರಿಯನ್ನು ನಾವೇ ಹೊತ್ತು ಪರಿಹಾರ ಕಂಡುಕೊಂಡಿದ್ದೇವೆ; ಮುಂದೆಯೂ ಕಂಡುಕೊಳ್ಳಬೇಕು.

*ಲೇಖಕರು ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು.

Leave a Reply

Your email address will not be published.