ಅಪ್ಪನ ಹಾದಿಯಲ್ಲಿ ಮುಕ್ತಾ ದಾಭೋಳ್ಕರ್

ಖ್ಯಾತ ವಿಚಾರವಾದಿ ಡಾ.ನರೇಂದ್ರ ದಾಭೋಳ್ಕರ್ ಅವರ ಪುತ್ರಿ ಮುಕ್ತಾ ದಾಭೋಳ್ಕರ್ ಕೂಡಾ ತಂದೆಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಾ ಮೌಢ್ಯ ವಿರೋಧಿ ಆಂದೋಲನ ನಡೆಸುತ್ತಿದ್ದಾರೆ. ಮೂಢನಂಬಿಕೆಗಳನ್ನು ತೊಲಗಿಸಲು ಕಾನೂನಿನ ಬೆಂಬಲ ಅತ್ಯಗತ್ಯ ಎಂಬುದು ಅವರ ಖಚಿತ ಅಭಿಮತ. ಮುಕ್ತಾ ಅವರು ಈ ಹಿಂದೆ ಬೆಂಗಳೂರಿಗೆ ಬಂದಾಗ ವ್ಯಕ್ತಪಡಿಸಿದ ಕೆಲವು ಅಭಿಪ್ರಾಯಗಳು ಹೀಗಿವೆ:

ನಮ್ಮ ಮನೆಯಲ್ಲಿದ್ದ ವಾತಾವರಣವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ನನಗೆ ಪ್ರೇರೇಪಣೆ ನೀಡಿತು. ಕಾಲೇಜು ಶಿಕ್ಷಣ ಮುಗಿಸಿದ ನಂತರ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿವಿಧ ತರಬೇತಿ ಕಾರ್ಯಕ್ರಮ ನೀಡುತ್ತಾ ಬಂದೆ. ಸಾವಿತ್ರಿಬಾಯಿ ಪುಲೆ ಅವರ ಚಿಂತನೆಗಳಿಂದ ಪ್ರೇರೇಪಿತಗೊಂಡ ನಾನು ಮಹಿಳಾ ಸಮಾನತೆ ಪರ ಹೋರಾಟಗಳಲ್ಲಿ ಭಾಗಿಯಾಗುತ್ತಿದ್ದೆ. ಈಗ ನಮ್ಮ ತಂದೆ ಸ್ಥಾಪಿಸಿರುವ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ.

ಮಹಾರಾಷ್ಟ್ರದಲ್ಲಿ ಈಗ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ 220ಕ್ಕೂ ಹೆಚ್ಚು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ತಂದೆಯವರು ಸಮಿತಿಗೆ ವ್ಯವಸ್ಥಿತ ಸ್ವರೂಪ ನೀಡಿದ್ದರು. ಪ್ರತಿ ಸಮಿತಿಗೂ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಮೌಢ್ಯ ಚಟುವಟಿಕೆಗಳ ಕುರಿತು ನಿಗಾ ಇಡುವ ಈ ಪದಾಧಿಕಾರಿಗಳು ಈವರೆಗೆ ನೂರಕ್ಕೂ ಹೆಚ್ಚು ನಕಲಿ ಬಾಬಾಗಳ ಬಣ್ಣ ಬಯಲು ಮಾಡಿದ್ದಾರೆ. ನೂರಾರು ನರಬಲಿ ತಡೆದಿದ್ದಾರೆ. ಸದ್ಯ ಈ ಸಮಿತಿಯ ಅಧ್ಯಕ್ಷರಾಗಿ ಅವಿನಾಶ್ ಪಾಟೀಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಮಿತಿ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮೌಢ್ಯಾಚರಣೆ ತಡೆಯುವ ಕೆಲಸದಲ್ಲಿ ನಿರತವಾಗಿದೆ.

ಬೇರೆ ರಾಜ್ಯಗಳಲ್ಲೂ ಇಂಥ ಆಂದೋಲನ ರೂಪಿಸಬೇಕು ಎನ್ನುವ ಒತ್ತಡ ನಮ್ಮ ಮೇಲಿದೆ. ಕರ್ನಾಟಕ ಅಂತೂ ಈ ವಿಚಾರದಲ್ಲಿ `ಫಲವತ್ತಾದ ನೆಲ‘. ಆದರೆ, ಸಂಘಟನೆ ರೂಪಿಸುವ ಅಲೋಚನೆ ಸದ್ಯಕ್ಕಿಲ್ಲ. ಮಹಾರಾಷ್ಟ್ರ ಮಾದರಿಯಲ್ಲಿ ಇಲ್ಲೂ ಮೌಢ್ಯ ವಿರೋಧಿ ಶಾಸನ ರೂಪಿಸಬೇಕೆನ್ನುವ ಒತ್ತಡ ವ್ಯಕ್ತವಾಗಿದ್ದು ಸಂತೋಷದ ವಿಚಾರ. ನಮ್ಮ ತಂದೆಯವರು ಬರೆದ ‘ಅಂಧಶ್ರದ್ಧಾ’ ಮತ್ತು ‘ಕತ್ತಲಿನಿಂದ ಬೆಳಕಿನೆಡೆಗೆ’ ಕೃತಿಗಳು ಇತ್ತೀಚೆಗೆ ಕನ್ನಡಕ್ಕೆ ಅನುವಾದಗೊಂಡಿವೆ.

ಮಹಾರಾಷ್ಟ್ರದಲ್ಲಿ ಮೌಢ್ಯ ವಿರೋಧಿ ಕಾಯ್ದೆ-2013 ಉತ್ತಮ ರೀತಿಯಲ್ಲಿ ಜಾರಿಗೆ ಬಂದಿದೆ. ಆರಂಭದ ಒಂದು ವರ್ಷದ ಅವಧಿಯಲ್ಲಿ 60 ಪ್ರಕರಣಗಳು ದಾಖಲಾಗಿವೆ, ಮೂರು ನರಬಲಿಗಳನ್ನು ನಿಲ್ಲಿಸಲಾಗಿದೆ. ಕಾನೂನು ಮೂಲಕವೇ ಮೌಢ್ಯ ನಿರ್ಮೂಲನೆ ಸಾಧ್ಯವಿಲ್ಲ. ಕಾನೂನು ಇಲ್ಲದೆಯೂ ಮೌಢ್ಯ ನಿವಾರಣೆ ಅಸಾಧ್ಯ ಅನ್ನುವುದನ್ನೂ ಮರೆಯಲಾದು. ಜನರ ಮನಃಸ್ಥಿತಿ ಬದಲಾಗಬೇಕು. ಎಲ್ಲ ಸ್ತರಗಳಲ್ಲಿ ಸಾಮಾಜಿಕ ಬದಲಾವಣೆಯಾಗಬೇಕು ಎಂಬುದು ನಮ್ಮ ತಂದೆಯವರ ಪ್ರತಿಪಾದನೆಯಾಗಿತ್ತು. ಜನಜಾಗೃತಿ ಬಹಳ ಮುಖ್ಯ.

ಈಗಿನ ಶಿಕ್ಷಣ ತಂತ್ರಜ್ಞಾನವನ್ನು ಹೆಚ್ಚಾಗಿ ಆಧರಿಸಿದೆ. ನಮಗೆ ಬೇಕಿರುವುದು ಇಂಥ ಶಿಕ್ಷಣವಲ್ಲ. ಸಮಾಜದ ಪ್ರಗತಿಗೆ ವಿಜ್ಞಾನದ ದೃಷ್ಟಿ ಬೇಕೇ ಹೊರತು ಕೇವಲ ವಿಜ್ಞಾನದ ಸೃಷ್ಟಿ ಅಲ್ಲ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಮೂಲಭೂತ ಬದಲಾವಣೆಯಾಗಬೇಕು. ಇಂದು ಸಮಾಜದಲ್ಲಿ ಅಭದ್ರತಾ ಭಾವನೆ ಹೆಚ್ಚುತ್ತಿದೆ. ಸ್ವಾರ್ಥಸ್ಪರ್ಧೆ ಹೆಚ್ಚುತ್ತಿದೆ. ಈ ಕಾರಣಗಳಿಂದ ಮೌಢ್ಯ ಬಲವಾಗುತ್ತದೆ. ವಿದ್ಯಾವಂತರೂ ತಕ್ಷಣದ ಪರಿಹಾರಕ್ಕಾಗಿ ಯಾವುದಾದರೂ ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ. ಸಮಸ್ಯೆಗಳಿಂದ ಬಿಡುಗಡೆಯಾಗುವ ದಾರಿಯನ್ನು ಇಂದಿನ ಶಿಕ್ಷಣ ತೋರಿಸುತ್ತಿಲ್ಲ. ಸುಸಜ್ಜಿತ ಆಸ್ಪತ್ರೆಗಳಿದ್ದರೆ ನಕಲಿ ಔಷಧಿ, ಬಾಬಾಗಳ ಹಾವಳಿ ಇರುತ್ತಿರಲಿಲ್ಲ ಎಂಬ ಅಭಿಪ್ರಾಯವಿದೆ. ಒಟ್ಟಾರೆ ಜನರ ಮನಃಸ್ಥಿತಿ ಬದಲಾಗಬೇಕು.

ಶೈಕ್ಷಣಿಕ ವ್ಯವಸ್ಥೆ ಹೆಚ್ಚೆಚ್ಚು ವಿಚಾರಪೂರ್ಣ ಆಗಬೇಕು. ಮೂಢನಂಬಿಕೆ ನಿವಾರಣೆ ವಿಷಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು ಅಗತ್ಯ. ಜತೆಗೆ ನಾವು ಮಕ್ಕಳನ್ನು ಬೆಳೆಸುವ ವಿಧಾನದಲ್ಲೂ ಬದಲಾವಣೆ ಆಗಬೇಕಿದೆ. ಮಕ್ಕಳು ಪ್ರಶ್ನೆ ಕೇಳಿದಾಗ, ಸರಿಯಾದ ಉತ್ತರ ಕೊಡದೆ ಬಾಯಿ ಮುಚ್ಚಿಸುವ ಕ್ರಮ ಸರಿಯಲ್ಲ. ವಿಷಯ ತಿಳಿದುಕೊಂಡು ಅವರಿಗೆ ಮನವರಿಕೆ ಮಾಡಿಕೊಡಬೇಕು. ನಂಬಿಕೆ ಮತ್ತು ಮೂಢನಂಬಿಕೆಗಳ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ಮನವರಿಕೆ ಮಾಡಬೇಕಾಗಿದೆ. ನಮ್ಮ ಹೋರಾಟ ಯಾವುದೇ ಶ್ರದ್ಧೆ ವಿರುದ್ಧ ಆಗಿರಕೂಡದು. ಅದು ಅಂಧಶ್ರದ್ಧೆ ವಿರುದ್ಧ ನಡೆಯಬೇಕು.

ಮೂಢನಂಬಿಕೆ ಬಗ್ಗೆ ಮಾತನಾಡಿದಾಗಲೆಲ್ಲ ಇದು ಹಿಂದೂ ಧರ್ಮದ ವಿರೋಧಿ ಎನ್ನುವ ಅಪಪ್ರಚಾರ ಹೆಚ್ಚುತ್ತಿದೆ. ವಾಸ್ತವವಾಗಿ, ಮೌಢ್ಯ ಅನ್ನೋದು ಎಲ್ಲ ಧರ್ಮಗಳಲ್ಲೂ ಇರುವ ಮಾನವ ವಿರೋಧಿ ಕೃತ್ಯ. ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ವಿರೋಧಿ ಕಾಯ್ದೆ ಜಾರಿಗೆ ಬಂದ ನಂತರ ದಾಖಲಾದ ಪ್ರಕರಣಗಳು ಕೇವಲ ಹಿಂದೂ ಧರ್ಮವೊಂದಕ್ಕೆ ಸೀಮಿತವಾಗಿಲ್ಲ. ಎಲ್ಲ ಧರ್ಮಗಳಲ್ಲಿನ ಮೌಢ್ಯಗಳೂ ಇವುಗಳಲ್ಲಿ ಸೇರಿವೆ. ಆದ್ದರಿಂದ ನಮ್ಮ ಹೋರಾಟ ಯಾವುದೇ ಒಂದು ಧರ್ಮಕ್ಕೆ ಸೀಮಿತ ಎನ್ನುವುದರಲ್ಲಿ ಹುರುಳಿಲ್ಲ.

Leave a Reply

Your email address will not be published.