ಅಭಿವೃದ್ಧಿಯಲ್ಲಿ ಕೇರಳ ಏಕೆ ಮುಂದಿರುತ್ತದೆ?

ಈಗ ನಮ್ಮ ಮುಂದೆ ಸ್ಪಷ್ಟವಾದ ಆಯ್ಕೆಯಿದೆ. ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಗತ್ಯವಾಗಿರುವುದು ಕೇರಳ ಅಭಿವೃದ್ಧಿ ಮಾದರಿಯೇ ವಿನಾ ಗುಜರಾತ್ ಅಥವಾ ಉತ್ತರ ಪ್ರದೇಶ ಮಾದರಿಯಲ್ಲ!

ಡಾ.ಟಿ.ಆರ್.ಚಂದ್ರಶೇಖರ

ಒಕ್ಕೂಟ ಸರ್ಕಾರವಾಗಲಿ ಅಥವಾ ಅದರ ಅಧೀನದ ಯಾವುದೇ ಸಂಸ್ಥೆಯಾಗಲಿ ಪ್ರಕಟಿಸುವ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿ ಸೂಚಿ/ಸೂಚ್ಯಂಕದಲ್ಲಿ ಕೇರಳ ಏಕೆ ಮೊದಲ ಸ್ಥಾನದಲ್ಲಿರುತ್ತದೆ? ಅಭಿವೃದ್ಧಿ ಸೂಚಿಗಳಲ್ಲಿ ಮೊದಲ ಸ್ಥಾನ; ದುಸ್ಥಿತಿ ಸೂಚಿಗಳಲ್ಲಿ ಕಡೆಯ ಸ್ಥಾನ. ಏನಿದರ ರಹಸ್ಯ? ಇಂದು ಗುಜರಾತ್ ಅಭಿವೃದ್ಧಿ ಮಾದರಿಯನ್ನು ರಾಷ್ಟ್ರಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು ಎಂಬ ಒತ್ತಾಯ ಮಾಡಲಾಗುತ್ತದೆ. ಆದರೆ ಅದಕ್ಕೆ ಯಾವ ರೀತಿಯಲ್ಲಿಯೂ ಕೇರಳವನ್ನು ಮೀರಿಸುವುದು ಸಾಧ್ಯವಾಗಿಲ್ಲ.

ಎಡಪಂಥೀಯರನ್ನು ಮತ್ತು ಮಾಕ್ರ್ಸ್‍ವಾದಿಗಳನ್ನು ಹೀಯಾಳಿಸುವ, ತುಚ್ಛವಾಗಿ ಕಾಣುವ ಜನರು ಕೇರಳದ ಸಿದ್ಧಿಸಾಧನೆಯನ್ನು ಏಕೆ ಪರಿಗಣಿಸುವುದಿಲ್ಲ? ಕೇರಳದ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಒಕ್ಕೂಟ ಸರ್ಕಾರಕ್ಕೆ ಒಂದು ರೀತಿ ವ್ಯಸನವಾಗಿದೆ. ಅದರಲ್ಲೂ ಇಂದಿನ ಆಳುವ ಪಕ್ಷಕ್ಕೆ ಅದರ ಬಗ್ಗೆ ನಖಶಿಖಾಂತ ಕೋಪವಿದೆ. ಕೇರಳದ ಶಿಶು ಮರಣ ಪ್ರಮಾಣವನ್ನು ಒಮ್ಮೆ ನಮ್ಮ ಪ್ರಧಾನಮಂತ್ರಿ ಸೋಮಾಲಿಯಾಕ್ಕೆ ಹೋಲಿಸಿದ್ದರು. ಕೇರಳದಲ್ಲಿನ ಶಿಶು ಮರಣ ಪ್ರಮಾಣ 2018ರಲ್ಲಿ ಪ್ರತಿ ಸಾವಿರÀ ಜನನಗಳಿಗೆ 07 ರಷ್ಟಾದರೆ ಗುಜರಾತಿನಲ್ಲಿ ಇದು 28 ಮತ್ತು ಉತ್ತರ ಪ್ರದೇಶದಲ್ಲಿ 43.

ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಆರೋಗ್ಯ ಮಾದರಿಯನ್ನು ಕೇರಳ ಅನುಸರಿಸಬೇಕು ಎಂದಿದ್ದರು. ನಮ್ಮದೇ ರಾಜ್ಯದ ಕೆಲವು ಮಂತ್ರಿಗಳು ಉತ್ತರ ಪ್ರದೇಶದ ಜನಸಂಖ್ಯಾ ನಿಯಂತ್ರಣ ನೀತಿಯನ್ನು ರಾಜ್ಯ ಅಳವಡಿಸಿಕೊಳ್ಳಬೇಕು ಎಂದಿದ್ದರು. ದಶಕವಾರು ಜನಸಂಖ್ಯಾ ಬೆಳವಣಿಗೆ ಪ್ರಮಾಣ ಗುಜರಾತಿಲ್ಲಿ ಶೇ. 19.28 ರಷ್ಟಿದ್ದರೆ ಉತ್ತರ ಪ್ರದೇಶದಲ್ಲಿ ಇದು ಶೇ. 20.23. ಕೇರಳದಲ್ಲಿ ಇದು ಶೇ. 4.91 (2011ರ ಜನಗಣತಿ). ಕೇರಳದಲ್ಲಿ ಜನರ ಜೀವನಾಯುಷ್ಯ (2014-2018) 75.3 ವರ್ಷಗಾದರೆ ಗುಜರಾತಿನಲ್ಲಿ ದು 69 ವರ್ಷಗಳು ಮತ್ತು ಉತ್ತರ ಪ್ರದೇಶದಲ್ಲಿ ಇದು 65.3 ವರ್ಷಗಳು. ಅಂದರೆ ಕೇರಳವನ್ನು ಸಾಮಾಜಿಕ, ಆರ್ಥಿಕ ಮತ್ತು ಮಹಿಳಾ ಅಭಿವೃದ್ಧಿಯಲ್ಲಿ ಮೀರಿಸುವುದು ಗುಜರಾತ್ ಅಭಿವೃದ್ಧಿ ಮಾದರಿಗೆ ಸಾಧ್ಯವಾಗಿಲ್ಲ.

ಅಭಿವೃದ್ಧಿಯಲ್ಲಿ, ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ, ಲಿಂಗ ಸಮಾನತೆಯಲ್ಲಿ ಕೇರಳವು 1970ರಿಂದಲೂ ದೇಶದಲ್ಲಿ ಮುಂಚೂಣಿಯಲ್ಲಿದೆ. ಇದರ ರಾಜ್ಯ ನಿವ್ವಳ ತಲಾ ವರಮಾನ 2019-20ರಲ್ಲಿ ರೂ.2.21 ಲಕ್ಷವಾಗಿದ್ದರೆ ಗುಜರಾತಿನಲ್ಲಿ ಇದು ರೂ. 2.14 ಲಕ್ಷ ಮತ್ತು ಉತ್ತರ ಪ್ರದೇಶದಲ್ಲಿ ತಲಾ ವರಮಾನ ರೂ. 65704. ಅಭಿವೃದ್ಧಿಯಲ್ಲಿ ಮೊದಲ ಸ್ಥಾನ: ದುಸ್ಥಿತಿಯಲ್ಲಿ ಕಡೆಯ ಸ್ಥಾನ ಸಾಧಿಸಿಕೊಂಡಿರುವ ಕೇರಳದ ಸಾಧನೆಯನ್ನು ಸೂಚಿಸುವ ಒಕ್ಕೂಟ ಸರ್ಕಾರದ ಅಧೀನದಲ್ಲಿರುವ ಎರಡು ಸಂಸ್ಥೆಗಳು ಇತ್ತೀಚಿಗೆ ಪ್ರಕಟಿಸಿರುವ ಅಧಿಕೃತ ವರದಿಗಳ ಎರಡು ಮಾಹಿತಿಯನ್ನು ಇಲ್ಲಿ ಚರ್ಚಿಸಲಾಗಿದೆ.

ಕಾರ್ಮಿಕರ ದಿನಗೂಲಿ

ಭಾರತೀಯ ರಿಸರ್ವ್ ಬ್ಯಾಂಕು 2021ರಲ್ಲಿ ಪ್ರಕಟಿಸಿರುವ ‘ಹ್ಯಾಂಡ್‍ಬುಕ್ ಆಫ್ ಸ್ಟಾಟಿಸ್ಟಿಕ್ಸ್ ಆನ್ ಇಂಡಿಯನ್ ಸ್ಟೇಟ್ಸ್’ ಎಂಬ ವರದಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿನ ಪುರುಷರ ಸರಾಸರಿ ದಿನಗೂಲಿ ವಿವರಗಳನ್ನು ಪ್ರಕಟಿಸಲಾಗಿದೆ.

1. ನಿರ್ಮಾಣ ಕ್ಷೇತ್ರದಲ್ಲಿನ ದಿನಗೂಲಿ

ಕೇರಳದಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ಸರಾಸರಿ ದಿನಗೂಲಿ ಚಾಲ್ತಿ ಬೆಲೆಗಳಲ್ಲಿ ರೂ. 829. ತಮಿಳುನಾಡಿನಲ್ಲಿ ಇದು ರೂ. 468. ಉತ್ತರ ಪ್ರದೇಶದಲ್ಲಿ ಇದು ರೂ. 313ರಷ್ಟಿದ್ದರೆ ಮಧ್ಯಪ್ರದೇಶದಲ್ಲಿ ಇದು ರೂ. 263. ಗುಜರಾತಿನಲ್ಲಿ ಇದು ರೂ. 285. ಕೇರಳದಲ್ಲಿನ ದಿನಗೂಲಿಯು ಗುಜರಾತಿನಲ್ಲಿರುವುದಕ್ಕಿಂತ ಸುಮಾರು ಮೂರು ಪಟ್ಟು ಅಧಿಕವಾಗಿದೆ. ಕರ್ನಾಟಕದಲ್ಲಿ ಇದು ರೂ. 365. ರಾಷ್ಟ್ರೀಯ ಸರಾಸರಿ ರೂ. 362.

2. ಭೂರಹಿತ ಕೃಷಿಕೂಲಿಗಾರರ ದಿನಗೂಲಿ

ಕೇರಳದಲ್ಲಿ ಭೂರಹಿತ ಕೃಷಿ ದುಡಿಮೆಗಾರರÀ ಸರಾಸರಿ ದಿನಗೂಲಿ ರೂ. 706. ತಮಿಳುನಾಡಿನಲ್ಲಿ ಇದು ರೂ. 434. ಉತ್ತರ ಪ್ರದೇಶದಲ್ಲಿ ಇದು ರೂ. 274ರಷ್ಟಿದ್ದರೆ ಮಧ್ಯಪ್ರದೇಶದಲ್ಲಿ ಇದು ರೂ. 217. ಬಿಹಾರದಲ್ಲಿ ರೂ. 212. ಕರ್ನಾಟಕದಲ್ಲಿ ಇದು ರೂ. 312. ಕೇರಳ ಮಾದರಿಗೆ ಎದುರಾಗಿ ನಿಲ್ಲಲು ಪ್ರಯತ್ನಿಸಿದ ಗುಜರಾತಿನಲ್ಲಿ ಇದು ರೂ. 213. ಕೇರಳದಲ್ಲಿನ ದಿನಗೂಲಿ ಗುಜರಾತಿನಲ್ಲಿ ದಿನಗೂಲಿಗಿಂತ ಮೂರು ಪಟ್ಟಿಗೂ ಅಧಿಕವಾಗಿದೆ. ರಾಷ್ಟ್ರೀಯ ಸರಾಸರಿ ರೂ. 309.

3. ಕೃಷಿಯೇತರ ವಲಯದ ದಿನಗೂಲಿ

ಕೃಷಿಯನ್ನು ಮತ್ತು ನಿರ್ಮಾಣ ಕ್ಷೇತ್ರಗಳನ್ನು ಬಿಟ್ಟು ಉಳಿದ ವಲಯದಲ್ಲಿನ ಸರಾಸರಿ ದಿನಗೂಲಿ ಕೇರಳದಲ್ಲಿ ರೂ. 677. ತಮಿಳುನಾಡಿನಲ್ಲಿ ಇದು ರೂ. 449. ಆದರೆ ಉತ್ತರ ಪ್ರದೇಶದಲ್ಲಿ ಇದು ರೂ. 286 ರಷ್ಟಿದ್ದರೆ ಮಧ್ಯಪ್ರದೇಶದಲ್ಲಿ ಇದು ರೂ. 232 ಮತ್ತು ಬಿಹಾರದಲ್ಲಿ ರೂ. 289. ಕರ್ನಾಟಕದಲ್ಲಿನ ಕೃಷಿಯೇತರ ವಲಯದಲ್ಲಿನ ದಿನಗೂಲಿ ರೂ.279. ಗುಜರಾತಿನಲ್ಲಿ ಕೃಷಿಯೇತರ ವಲಯದಲ್ಲಿನ ಪುರುಷರ ದಿನಗೂಲಿ ರೂ. 239. ಕೇರಳದ ದಿನಗೂಲಿಯು ಗುಜರಾತಿನ ದಿನಗೂಲಿಗಿಂತ ಎರಡೂವರೆ ಪಟ್ಟು ಅಧಿಕವಾಗಿದೆ. ರಾಷ್ಟ್ರೀಯ ಸರಾಸರಿ ಕೂಲಿ ರೂ. 316.

ಒಟ್ಟಾರೆ ದಿನಗೂಲಿಯು ದೇಶದಲ್ಲಿನ ಉಳಿದ ರಾಜ್ಯಗಳಲ್ಲಿನ ಸರಾಸರಿ ದಿನಗೂಲಿಗಿಂತ ಕೇರಳದಲ್ಲಿ ಎರಡುಎರಡೂವರೆ ಪಟ್ಟು ಅಧಿಕವಾಗಿದೆ. ಕೇರಳದ ನಂತರದ ಸ್ಥಾನದಲ್ಲಿ ತಮಿಳುನಾಡಿದೆ. ಒಟ್ಟಾರೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ದಿನಗೂಲಿಯು ಉತ್ತರ ಭಾರತದ ರಾಜ್ಯಗಳಲ್ಲಿ ಇರುವುದಕ್ಕಿಂತ ಅಧಿಕವಾಗಿದೆ.

ಇಲ್ಲಿನ ಅಂಕಿಅಂಶಗಳು ಯಾರೋ ಬುದ್ಧಿಜೀವಿಗಳುಎಡಪಂಥೀಯರು ನಡೆಸಿದ ಸಮೀಕ್ಷೆಯ ಫಲಿತಗಳಲ್ಲ. ಇದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿರುವ ಹ್ಯಾಂಡ್‍ಬುಕ್ ಆಫ್ ಸ್ಟಾಟಿಸ್ಟಿಕ್ಸ್ ಆನ್ ಇಂಡಿಯನ್ ಸ್ಟೇಟ್ಸ್(2021)ಲ್ಲಿನ ಅಂಕಿಸಂಖ್ಯೆಗಳಾಗಿವೆ.

ಬಹುಮುಖಿ ಬಡತನ ಸೂಚ್ಯಂಕ

ಕೇರಳ ರಾಜ್ಯ ಎಲ್ಲದರಲ್ಲಿಯೂ ಮುಂದಿದೆ ಎನ್ನುವುದಕ್ಕೆ ಮತ್ತೊಂದು ಸೂಚಿಯೆಂದರೆ ಬಡತನದ ಸ್ಥಿತಿಗತಿ. ಇದರ ಬಗ್ಗೆ ಯುಎನ್‍ಡಿಪಿ 2010ರಲ್ಲಿ ಮಾನವ ಅಭಿವೃದ್ಧಿ ವರದಿಯಲ್ಲಿ ತಾನು ರೂಪಿಸಿರುವ ಬಹುಮುಖಿ ಬಡತನ ಸೂಚ್ಯಂಕ ಎಂಬ ಬಡತನವನ್ನು ಅಳೆಯುವ ಸಾಧನವನ್ನು ಬಳಸಿದೆ. ಇದನ್ನು ಆಧಾರವಾಗಿಟ್ಟುಕೊಂಡು ನಮ್ಮ ನೀತಿ ಆಯೋಗವು ಭಾರತದ ಎಲ್ಲ ರಾಜ್ಯಗಳ ಮತ್ತು ಅವುಗಳ ಜಿಲ್ಲೆಗಳ ಬಹುಮುಖಿ ಬಡತನದ ಪ್ರಮಾಣವನ್ನು ಲೆಕ್ಕ ಹಾಕಿ ವರದಿಯನ್ನು ಪ್ರಕಟಿಸಿದೆ. ಬಹುಮುಖಿ ಬಡತನ ಎಂದರೇನು? ಬಡತನವನ್ನು ವರಮಾನದ ಕೊರತೆಗೆ ಮಾತ್ರ ಸೀಮಿತಗೊಳಿಸುವುದು ಸರಿಯಲ್ಲ. ಬಡತನವು ಬಹುರೂಪಿಯಾದ ಒಂದು ಸ್ಥಿತಿ. ಬಡತನವನ್ನು ಬಹು ಆಯಾಮಗಳಲ್ಲಿ, ಅಂದರೆ ಶಿಕ್ಷಣ, ಆರೋಗ್ಯ, ಜೀವನಮಟ್ಟ ಮುಂತಾದ ಆಯಾಮಗಳಲ್ಲಿನ ಕೊರತೆಯ ಮೂಲಕ ಗುರುತಿಸುವ ಕ್ರಮವೇ ಬಹುಮುಖಿ ಬಡತನ.

ಈ ಮಾಪನದಲ್ಲಿ ಮೂರು ಕ್ಷೇತ್ರಗಳಿರುತ್ತವೆ. ಅವು: ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ. ನೀತಿ ಆಯೋಗವು ಒಟ್ಟು 12 ಸೂಚಿಗಳನ್ನು ಬಳಸಿ ಬಡತನವನ್ನು ಮಾಪನ ಮಾಡಿದೆ. ಆರೋಗ್ಯ ಕ್ಷೇತ್ರದಲ್ಲಿ: ಪೌಷ್ಟಿಕತೆ, ಹದಿಹರೆಯದ ಯುವಕರ ಮತ್ತು ಮಕ್ಕಳ ಮರಣ ಪ್ರಮಾಣ ಮತ್ತು ತಾಯಂದಿರ ಆರೋಗ್ಯ, ಶಿಕ್ಷಣ ಕ್ಷೇತ್ರ: ಪೂರೈಸಿದ ಶಾಲಾ ವರ್ಷಗಳು ಮತ್ತು ಶಾಲಾ ಹಾಜರಾತಿ. ಜೀವನಮಟ್ಟ: ಅಡುಗೆ ಇಂಧನ, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ವಸತಿ, ಆಸ್ತಿ ಮತ್ತು ಬ್ಯಾಂಕ್ ಖಾತೆಯಿರುವವರ ಪ್ರಮಾಣ. ಹೀಗೆ 12 ಸೂಚಿಗಳಲ್ಲಿ ದುಸ್ಥಿತಿ/ಕೊರತೆಯನ್ನು ಪರಿಗಣಿಸಿ ಬಡತನವನ್ನು ಮಾಪನ ಮಾಡಲಾಗಿದೆ.

ಇದರ ಪ್ರಕಾರ ಕೇರಳದ ಒಟ್ಟು ಜನಸಂಖ್ಯೆಯಲ್ಲಿ ಬಹುಮುಖಿ ಬಡತನವನ್ನು ಅನುಭವಿಸುತ್ತಿರುವ ಜನರ ಪ್ರಮಾಣ ಶೇ. 0.71 ರಷ್ಟಿದ್ದರೆ ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಬಹುಮುಖಿ ಬಡತನದಲ್ಲಿರುವವರ ಪ್ರಮಾಣ ಶೇ. 51.91. ಇವೆರಡರ ನಡುವಿನ ಅಂತರ ಅಜಗಜಾಂತರವಾಗಿದೆ. ಕರ್ನಾಟಕದಲ್ಲಿ ಇದರ ಪ್ರಮಾಣ ಶೇ. 13.16. ಆದರೆ ಗುಜರಾತಿನಲ್ಲಿ ಬಹುಮುಖಿ ಬಡವರ ಪ್ರಮಾಣ ಶೇ. 18.6. ಕೇರಳಕ್ಕೆ ಹೋಲಿಸಿದರೆ ಗುಜರಾತಿನಲ್ಲಿನ ಬಹುಮುಖಿ ಬಡತನದ ಪ್ರಮಾಣ ಅದೆಷ್ಟೋ ಪಟ್ಟು ಅಧಿಕವಾಗಿದೆ.

ರಾಷ್ಟ್ರೀಯ ಸರಾಸರಿ ಬಹುಮುಖಿ ಬಡತನದ ಪ್ರಮಾಣ ಶೇ. 25.61. ದೇಶದ ಒಟ್ಟು 28 ರಾಜ್ಯಗಳ ಪೈಕಿ 11 ರಲ್ಲಿ ಬಹುಮುಖಿ ಬಡತನದ ಪ್ರಮಾಣವು ರಾಷ್ಟ್ರೀಯ ಸರಾಸರಿಗಿಂತ(ಶೇ.25.1) ಅಧಿಕವಾಗಿದ್ದರೆ 8 ರಲ್ಲಿ ಇದು ಶೇ. 15 ಕ್ಕಿಂತ ಕಡಿಮೆಯಿದೆ. ನಾಲ್ಕು ರಾಜ್ಯಗಳಲ್ಲಿ ಇದು ಶೇ. 5 ಕ್ಕಿಂತ ಕಡಿಮೆಯಿದೆ. ಉಳಿದ ಐದು ರಾಜ್ಯಗಳಲ್ಲಿ ಇದು ಮಧ್ಯಮಮಟ್ಟದಲ್ಲಿದೆ. ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿಯೂ ಈ ಬಡತನವು ರಾಷ್ಟ್ರೀಯ ಸರಾಸರಿಗಿಂತ ಕೆಳಮಟ್ಟದಲ್ಲಿದೆ.

ಯಾವ ಸೂಚಿಯ ಕಾಣಿಕೆ ಹೆಚ್ಚು?

ಎಲ್ಲ ರಾಜ್ಯಗಳಲ್ಲಿಯೂ ಬಹುಮುಖಿ ಬಡತನಕ್ಕೆ ಅತಿ ಹೆಚ್ಚಿನ ಕೊಡುಗೆ ಪೌಷ್ಟಿಕತೆಯಲ್ಲಿನ ಕೊರತೆ ಮತ್ತು ತಾಯಂದಿರ ಆರೋಗ್ಯದಲ್ಲಿನ ಸಮಸ್ಯೆಗಳಿಂದ ಪ್ರಾಪ್ತವಾಗಿದೆ. ಬಹುಮುಖಿ ಬಡತನಕ್ಕೆ ಆರೋಗ್ಯ ಕ್ಷೇತ್ರದಲ್ಲಿನ ಕೊರತೆಯ ಕಾಣಿಕೆಯು ಸರಾಸರಿ ಶೇ. 40 ಕ್ಕಿಂತ ಅಧಿಕವಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಕಾಣಿಕೆಯನ್ನು ಕೂಡಿಸಿದರೆ ಇದು ಶೇ. 60ಕ್ಕಿಂತ ಅಧಿಕವಾಗುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷ್ಷೆ 5 ಪ್ರಕಾರ ಗುಜರಾತಿನಲ್ಲಿ 6 ರಿಂದ 59 ತಿಂಗಳು ವಯೋಮಾನದ ಒಟ್ಟು ಮಕ್ಕಳಲ್ಲಿ ಅನಿಮಿಯ(ರಕ್ತಹೀನತೆ)ಎದುರಿಸುತ್ತಿರುವ ಮಕ್ಕಳ ಪ್ರಮಾಣ 2019-2020ರಲ್ಲಿ ಶೇ. 79.7 ರಷ್ಟಿದ್ದರೆ ಕೇರಳದಲ್ಲಿ ಇದು ಶೇ. 39.4. ಇದೇ ರೀತಿಯಲ್ಲಿ 15 ರಿಂದ 49 ವರ್ಷಗಳ ವಯೋಮಾನದ ಒಟ್ಟು ಮಹಿಳೆಯರಲ್ಲಿ ಅನಿಮಿಯ ಎದುರಿಸುತ್ತಿರುವ ಮಹಿಳೆಯರ ಪ್ರಮಾಣ ಗುಜರಾತಿನಲ್ಲಿ ಶೇ. 69 ರಷ್ಟಿದ್ದರೆ ಕೇರಳದಲ್ಲಿ ಇದು ಶೇ. 32.5.

ಅಂದರೆ ಒಟ್ಟಾರೆ ಯಾವುದೆ ಅಭಿವೃದ್ಧಿ ಸೂಚಿ ತೆಗೆದುಕೊಂಡರೂ ಕೇರಳ ರಾಜ್ಯವು ಗುಜರಾತ್, ಉತ್ತರ ಪ್ರದೇಶ ಅಥವಾ ಮಧ್ಯಪ್ರದೇಶ ರಾಜ್ಯಗಳಿಗಿಂತ ಅದೆಷ್ಟೋ ಪಟ್ಟು ಮುಂದಿದೆ. ಅಭಿವೃದ್ಧಿಯಲ್ಲಿ ಕೇರಳವು ಏಕೆ ಮುಂದಿರುತ್ತದೆ ಎಂಬುದಕ್ಕೆ ಅನೇಕ ಕಾರಣಗಳನ್ನು ನೀಡಬಹುದು. ಲಾಗಾಯ್ತಿನಿಂದ ಅಲ್ಲಿನ ಸರ್ಕಾರದ ನೀತಿಗಳು ಸಾಮಾಜಿಕಆರ್ಥಿಕ ‘ಸಮಾನತೆ’ಗೆ ಮತ್ತು ‘ತಾರತಮ್ಯರಹಿತ’ ನೀತಿಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾ ಬಂದಿರುವುದು ಒಂದು ಕಾರಣವಾದರೆ ಮಹಿಳೆಯರಿಗೆ ಆರೋಗ್ಯ ಶಿಕ್ಷಣ, ಉದ್ಯೋಗ, ಆಸ್ತಿ ಹಕ್ಕು ಮುಂತಾದವುಗಳಲ್ಲಿ ಸಮಾನ ಅವಕಾಶಗಳನ್ನು ನೀಡಿರುವುದು ಮತ್ತೊಂದು ಕಾರಣ.

ಉದಾ: ಮಹಿಳೆಯರ ಸಾಕ್ಷರತೆಯು ಪುರುಷರ ಸಾಕ್ಷರತೆಗಿಂತ ಗುಜರಾತಿನಲ್ಲಿ ಶೇ. 16.50 ಅಂಶಗಳಷ್ಟು ಕಡಿಮೆಯಿದ್ದರೆ ಕೇರಳದಲ್ಲಿ ಇದು ಕೇವಲ ಶೇ. 6.62 ಅಂಶಗ¼ಷ್ಟು ಕಡಿಮೆಯಿದೆ. ಲಿಂಗ ಅನುಪಾತವು ಗುಜರಾತಿನಲ್ಲಿ 919ರಷ್ಟಿದ್ದರೆ ಕೇರಳದಲ್ಲಿ ಇದು 1084ರಷ್ಟಿದೆ. ಕೇರಳವು ಮಹಿಳಾಸ್ನೇಹಿ ರಾಜ್ಯವಾಗಿದೆ. ಕೇರಳವು ಮೊದಲಿನಿಂದಲೂ ವರಮಾನ, ಉತ್ಪಾದನೆ, ಬಂಡವಾಳ ಮುಂತಾದ ಆರ್ಥಿಕ ಸಂಗತಿಗಳಿಗಿಂತ ಶಿಕ್ಷಣ ಮತ್ತು ಆರೋಗ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿರುವುದು ಇನ್ನೊಂದು ಮುಖ್ಯ ಕಾರಣವಾಗಿದೆ.

ಮತ್ತೊಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ಸಂಗತಿಯೆಂದರೆ ಕೇರಳದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರ ಪ್ರಮಾಣ ಶೇ. 43.71(ಜನಗಣತಿ 2011). ಆದರೆ ಗುಜರಾತಿನಲ್ಲಿನ ಅಲ್ಪಸಂಖ್ಯಾತರ ಪ್ರಮಾಣ ಕೇವಲ ಶೇ. 12.10. ಅಲ್ಪಸಂಖ್ಯಾತರ ಪ್ರಮಾಣ ಅಧಿಕವಾಗಿದ್ದರೆ ಅದು ಅಭಿವೃದ್ಧಿಗೆ ಕಂಟಕ ಎಂಬ ತಪ್ಪು ಭಾವನೆ ಅನೇಕರಲ್ಲಿದೆ. ಇದಕ್ಕೆ ಅಪವಾದವಾಗಿ ಕೇರಳ ರಾಜ್ಯವಿದೆ.

ಈಗ ನಮ್ಮ ಮುಂದೆ ಸ್ಪಷ್ಟವಾದ ಆಯ್ಕೆಯಿದೆ. ಕರ್ನಾಟಕಕ್ಕೆ ಮತ್ತು ದೇಶಕ್ಕೆ ಅಗತ್ಯವಾಗಿರುವುದು ಕೇರಳ ಅಭಿವೃದ್ಧಿ ಮಾದರಿಯೇ ವಿನಾ ಗುಜರಾತ್ ಅಥವಾ ಉತ್ತರ ಪ್ರದೇಶ ಮಾದರಿಯಲ್ಲ. ಇದನ್ನು ಒಕ್ಕೂಟ ಸರ್ಕಾರವು ಕಾಲಕಾಲಕ್ಕೆ ಪ್ರಕಟಿಸುತ್ತಿರುವ ವರದಿಗಳಲ್ಲಿನ ವಿವರಗಳು ಸಾಕ್ಷಿಯಾಗಿವೆ. ಇನ್ನಾದರೂ ಕೇರಳದ ಸಾಧನೆಯನ್ನು ಹೀಯಾಳಿಸುವುದನ್ನು ನಮ್ಮ ಆಳುವ ಪಕ್ಷ ನಿಲ್ಲಿಸಬೇಕು. ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕಬಾರದು. ಕೇರಳದ್ದು ಪರಿಪೂರ್ಣ ಅಭಿವೃದ್ಧಿ ಮಾದರಿ ಎಂದು ನಾನು ಹೇಳುತ್ತಿಲ್ಲ. ಆದರೆ ಅದರ ಸಾಧನೆಯು ಅನುಕರಣೀಯವಾಗಿದೆ ಎಂಬುದು ಇಲ್ಲಿನ ಪ್ರತಿಪಾದನೆ.

*ಲೇಖಕರು ಸಮಾಜ ವಿಜ್ಞಾನಿ; ಮಾನವ ಅಭಿವೃದ್ಧಿ, ಬಜೆಟ್ ಅಧ್ಯಯನ, ಲಿಂಗ ಸಂಬಂಧಗಳು ಮತ್ತು ವಚನ ಸಂಸ್ಕøತಿ ಕುರಿತಂತೆ ಸಂಶೋಧನೆ ನಡೆಸಿದ್ದಾರೆ. ನಿವೃತ್ತಿ ನಂತರ ನಾಲ್ಕನೇ ರಾಜ್ಯ ಹಣಕಾಸು ಆಯೋಗದಲ್ಲಿ ಸಮಾಲೋಚಕರಾಗಿದ್ದರು.

Leave a Reply

Your email address will not be published.