ಅಮರಸಿಂಹನ ಅಮರಕೋಶ

ಅಮರಸಿಂಹನ ಅಮರಕೋಶ ಎಂಬ ನಾಮಲಿಂಗಾನುಶಾಸನ ಕೃತಿ ಒಂದು ನಿಘಂಟು. ಸುಮಾರು ಹನ್ನೆರಡು ಸಾವಿರ ಶಬ್ದಗಳಿರುವ ಈ ಅಮರಕೋಶವು ಸಾಮಾನ್ಯಜನರ ಪರಿಮಿತಿಯನ್ನು ದಾಟಿ ವಿದ್ವತ್ ಪ್ರತಿಭಾಪೂರ್ಣ ವಾಗಿರುವುದರಿಂದ ಸಾಮಾನ್ಯ ವ್ಯವಹಾರಗಳಿಗೆ ಬದಲಾಗಿ ಬೌದ್ಧಿಕ ಬೆಳವಣಿಗೆಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ಇದು ನಿಲುಕದು.

ಡಾ.ಮೋಹನ್ ಚಂದ್ರಗುತ್ತಿ

ಭಾಷೆ ಎಂಬುದು ನಿಂತ ನೀರಲ್ಲ, ಅದು ಪ್ರದೇಶದಿಂದ ಪ್ರದೇಶಕ್ಕೆ, ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಪ್ರಪಂಚದಾದ್ಯಂತ ಸಾವಿರಾರು ಭಾಷೆಗಳು ಹುಟ್ಟಿದುದು ಇದೇ ಕಾರಣಕ್ಕೆ. ವಿಷಯ ಒಂದೇ ಇರಬಹುದು, ಅಥವಾ ವಸ್ತು ಒಂದೇ ಇರಬಹುದು. ಆದರೆ ಪ್ರಾದೇಶಿಕ ಅರ್ಥಗಳು ಭಿನ್ನವಾಗಿರುತ್ತವೆ. ಪ್ರತಿ ಇಪ್ಪತೈದು ಮೂವತೈದು ಕಿಮಿಗಳಿಗೆ ಭಾಷೆ ಬದಲಾಗಿರುವುದನ್ನು ಈಗಲೂ ಕಾಣುತ್ತೇವೆ. ಆಧುನಿಕತೆಯ ಪ್ರಭಾವದ ನಂತರವೂ ಕೆಲ ಸಮುದಾಯಗಳಲ್ಲಿ, ವರ್ಗಗಳಲ್ಲಿ ತಮ್ಮ ಭಾಷಿಕ ವ್ಯವಸ್ಥೆಯನ್ನು ಅನನ್ಯತೆಯ ಕಾರಣಕ್ಕೆ ಉಳಿಸಿಕೊಳ್ಳುತ್ತಾರೆ. ಹಾಗಾಗಿ ಎಷ್ಟೋ ವೈಶಿಷ್ಟ್ಯಪೂರ್ಣ ಶಬ್ದಗಳು ಇನ್ನೂ ಚಾಲ್ತಿಯಲ್ಲಿವೆ.

ಭಾಷೆಯೊಂದರ ಪದಗಳನ್ನು ಅವು ತನ್ನ ಸ್ವಂತ ಹಾಗೂ ಭಿನ್ನ ಭಾಷೆಯಲ್ಲಿ ಹೊಂದಿರುವ ಭಿನ್ನಾರ್ಥಗಳ ಸಂಗ್ರಹವನ್ನು ನಿಘಂಟು ಎನ್ನುತ್ತಾರೆ. ಜಾನ್ ಗಾರ್ಲೆಂಡ್ ಎಂಬುವವನು 1225ರಲ್ಲಿ ಮೊದಲ ಕೋಶವನ್ನು ಲ್ಯಾಟಿನ್ ಭಾಷೆಯಲ್ಲಿ ಸಂಗ್ರಹಿಸಿ ನಿಘಂಟು ಎಂದು ಹೆಸರಿಡುತ್ತಾನೆ. ಒಂದೆ ಭಾಷೆಯನ್ನು ಆಡುವ ಜನ ವ್ಯಾವಹಾರಿಕ ಮತ್ತು ಆಧುನಿಕತೆಯ ಕಾರಣಕ್ಕೆ ದೂರ ದೂರ ಸರಿದಂತೆಲ್ಲ ಪ್ರಾದೇಶಿಕ ಕಾರಣದಿಂದ ಅಲ್ಪ ಸ್ವಲ್ಪ ಬದಲಾವಣೆಯನ್ನು ಭಾಷೆಯಲ್ಲಿ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಆಗ ತಮ್ಮದೆ ಭಾಷೆಯ ಶಬ್ದವು ತಮ್ಮ ಭಾಷಿಕರಿಗೆ ಅರ್ಥವಾಗದೆ ಹೋಗುವ ಸಂಭವವಿದೆ ಎನ್ನುವ ಕಾರಣಕ್ಕೆ ಕೋಶಗಳು ಅಥವಾ ನಿಘಂಟು ಚಾಲ್ತಿಗೆ ಬಂದಿರಬೇಕು.

ಭಾರತದಲ್ಲಿ ದೊರೆತ ಪ್ರಾಚೀನ ಕೃತಿ ಎಂದರೆ ವೈದಿಕ ನಿಘಂಟು. ಸುಮಾರು ಕ್ರಿ.ಪೂ. 7ನೇ ಶತಮಾನ ಇರಬಹುದಾದರೂ ಇದಕ್ಕೆ ಮೊದಲೆ ನಿಘಂಟು ಇದ್ದ ಬಗ್ಗೆ ಮಾಹಿತಿಗಳು ಸಿಗುತ್ತವೆ. ವೇದಗಳನ್ನು ಸಮರ್ಪಕವಾಗಿ ಅರ್ಥ ಮಾಡಿಕೊಳ್ಳಲು ಇಂತಹ ನಿರುಕ್ತಗಳ ಅನಿವಾರ್ಯತೆ ಇದ್ದುದ್ದರಿಂದಲೆ ಸಾಕಷ್ಟು ಕೋಶಗಳು ಹುಟ್ಟಿದವು. ಎಂದೋ, ಯಾವುದೋ ಸಂದರ್ಭದಲ್ಲಿ ಉದ್ಧರಿಸಲ್ಪಟ್ಟ, ಸ್ತುತಿಸಲ್ಪಟ್ಟ ವಾಕ್ಯಗಳನ್ನು ಆಯಾ ಕಾಲಕ್ಕೆ ತಕ್ಕ ಹಾಗೆ ಚರ್ಚಿಸಿರಬಹುದಾಗಿದೆ. ಪ್ರಾದೇಶಿಕವಾಗಿ ಅವುಗಳ ಉಚ್ಚಾರಣೆಯಲ್ಲಿಯೆ ಭಿನ್ನಾಂತರಗಳು ಸಂಭವಿಸಿರುವ ಸಾಧ್ಯತೆಗಳಿವೆ. ಈ ಎಲ್ಲಾ ಕಾರಣದಿಂದ ನಿಘಂಟುವಿನ ಆವಶ್ಯಕತೆ ಮೂಡಿರಬಹುದಾಗಿದೆ.

ಕಿಟೆಲ್ಲನ ಶಬ್ದಕೋಶ ಕನ್ನಡದ ಅಪರೂಪದ ನಿಘಂಟು. ಅದರ ಮೊದಲ ಪುಟದಲ್ಲಿ ಅಮರಕೋಶದ ಪ್ರಸ್ತಾಪ ಬರುತ್ತದೆ. ಅ ಎನ್ನುವ ಶಬ್ದಕ್ಕೆ “ಅ ಆ ಬಾರದಿದ್ದರೆ ಅಮರವಾದರೂ ಹೇಳು! ಎಂಬಂತೆ” ಎಂಬ ಹೇಳಿಕೆಯೊಂದನ್ನು ನೀಡಲಾಗಿದೆ. ಕುತೂಹಲವಿದ್ದರೆ ಮಾತ್ರ ಅಮರ ಎಂದರೆ ಅಮರಕೋಶ ಎಂಬ ಅರ್ಥ ಸಿಗುತ್ತದೆ. ಇಲ್ಲದಿದ್ದರೆ ಬೇರೆ ಅರ್ಥಗಳನ್ನು ಕೊಡಬಹುದು.

ಅಮರಶಿಂಹನ ಅಮರಕೋಶ ಎಂಬ ನಾಮಲಿಂಗಾನುಶಾಸನ ಕೃತಿ ಒಂದು ನಿಘಂಟು. ಇದು ಅವನ ಪೂರ್ಣ ಸ್ವಂತ ಕೃತಿಯಲ್ಲ. ಆ ಹೊತ್ತಿಗಾಗಲೆ ಬಂದಿರುವ ಬೇರೆಬೇರೆ ಕೋಶಗಳನ್ನು ನೋಡಿ, ಅಧ್ಯಯಿನಿಸಿ ತನ್ನ ಕೋಶವನ್ನು ತಯಾರಿಸಿದ್ದಾನಾದರೂ ಅದರಲ್ಲಿ ತನ್ನ ಸ್ವಂತಿಕೆಯನ್ನು ಮೆರೆಯಲು ಪ್ರಯತ್ನಿಸಿದ್ದಾನೆ. ಅಮರಶಿಂಹನು ವಿಕ್ರಮಾಧಿತ್ಯನ ಆಸ್ಥಾನದಲ್ಲಿದ್ದನೆಂದು ಹೇಳಲಾಗಿದೆ. ಭಾರತದ ಚರಿತ್ರೆಯಲ್ಲಿ ಐತಿಹ್ಯ ಪುರುಷನಾಗಿರುವ ವಿಕ್ರಮಾಧಿತ್ಯನನ್ನು ಚಂದ್ರಗುಪ್ತ ವಿಕ್ರಮಾಧಿತ್ಯನೆಂದೆ ನಂಬಲಾಗಿದೆ. ಇವನ ಕಾಲ ನಾಲ್ಕನೇ ಶತಮಾನ. ಬೇರೆ ಬೇರೆ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಅಮರಶಿಂಹನ ಕಾಲವನ್ನು ಕ್ರಿ.450 ಎನ್ನಬಹುದು. ಇವನು ಬೌದ್ಧ ಮತಕ್ಕೆ ಸೇರಿದವನು. ಇವನ ಬಗ್ಗೆ ಕೂಡಾ ಬಹಳಷ್ಟು ದಂತಕಥೆಗಳಿವೆ. ಇವನು ರಚಿಸಿರುವ ಈ ಕೃತಿಯನ್ನು ಅಮರಕೋಶ ಎಂದೆ ಕರೆದರೂ ಪ್ರಶಿದ್ಧವಾಗಿದ್ದದ್ದು ನಾಮಲಿಂಗಾನುಶಾಸನವೆಂತಲೆ. ಇದು ಮೂರು ಕಾಂಡಗಳಲ್ಲಿ ಹಾಗೂ 80 ವರ್ಗಗಳಲ್ಲಿ ವಿಭಾಗಗೊಂಡಿದೆ.

ಅಮರಶಿಂಹ ತನ್ನ ನಾಮಲಿಂಗಾನುಶಾಸನವನ್ನು ವೈಜ್ಞಾನಿಕವಾಗಿಯೇ ವಿವರಿದ್ದಾನೆ. ಬೇರೆ ಬೇರೆ ವಿದ್ವಾಂಸರ ವ್ಯಾಖ್ಯಾನಗಳನ್ನು ತೆಗೆದುಕೊಂಡಿದ್ದಾನೆ. ಹಾಗಂತ ಎಲ್ಲವನ್ನೂ ತೆಗೆದುಕೊಳ್ಳದೆ ಮುಖ್ಯವಾದ ಕೆಲವನ್ನು ಮಾತ್ರವೇ ಉಳಿಸಿಕೊಳ್ಳುತ್ತಾನೆ. ಅಂತಹ ಆರಿಸಿಕೊಂಡ ಶಬ್ದಗಳಲ್ಲಿಯೇ ಅಗತ್ಯವಾದವುಗಳನ್ನು ಮಾತ್ರ ತೆಗೆದುಕೊಳ್ಳುತ್ತಾನೆ. ಇದರ ನಂತರ ಅವುಗಳನ್ನು ವರ್ಗಗಳಾಗಿ ಸ್ಪಷ್ಟವಾಗಿ ವರ್ಗೀಕರಿಸಿಕೊಳ್ಳುತ್ತಾನೆ. ಇದಕ್ಕೆ ಅನುಗುಣವಾಗಿ ಲಿಂಗ, ವಚನ, ನಾಮಗಳನ್ನು ತನ್ನ ಬುದ್ಧಿಮತ್ತೆಯಿಂದ ಖಚಿತ ನಿರೂಪಣೆ ಮಾಡಿದ್ದಾನೆ. ಈ ಕಾರಣದಿಂದ ಅಮರಕೋಶವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ.

ಸುಮಾರು ಹನ್ನೆರಡು ಸಾವಿರ ಶಬ್ದಗಳಿರುವ ಈ ಅಮರಕೋಶವು ಸಾಮಾನ್ಯಜನರ ಪರಿಮಿತಿಯನ್ನು ದಾಟಿ ವಿದ್ವತ್ ಪ್ರತಿಭಾಪೂರ್ಣವಾಗಿರುವುದರಿಂದ ಸಾಮಾನ್ಯ ವ್ಯವಹಾರಗಳಿಗೆ ಬದಲಾಗಿ ಬೌದ್ಧಿಕ ಬೆಳವಣಿಗೆಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಹಾಗಾಗಿ ಜನಸಾಮಾನ್ಯರಿಗೆ ಇದು ನಿಲುಕದು. ಲೂಯಿ ರೈಸ್ ಮೊದಲ ಬಾರಿಗೆ ಇಂಗ್ಲೀಷ್‍ನಲ್ಲಿ 1873ರಲ್ಲಿ ಪ್ರಕಟಿಸಿದರು. ನಂತರ ಇದನ್ನು ಪರಿಷ್ಕರಿಸಿ ಎನ್.ಬಾಲಸುಬ್ರಮಣ್ಯರವರು ಹೊಸ ಆವೃತ್ತಿಯನ್ನು 1970 ರಲ್ಲಿ ಪ್ರಕಟಿಸಿದರು

ಅಮರಶಿಂಹನ ಈ ಕೋಶವು ಎಷ್ಟು ಬೇಗ ಜನಪ್ರಿಯವಾಗಿ ಅವನನ್ನು ಎತ್ತರಕ್ಕೇರಿಸಿತೋ ಹಾಗೆಯೇ ಅವನ ಕೃತಿಯ ಮೇಲೆ ಟೀಕೆಗಳ ಸುರಿಮಳೆಯೆ ಸುರಿಯಿತು. ಸಾವಿರದ ಮುನ್ನೂರು ವರ್ಷಗಳ ನಂತರ (ಹದಿನೆಂಟನೇ ಶತಮಾನದಲ್ಲಿ) ಶ್ರೀಹರ್ಷ ಎಂಬುವನು ಅಮರಕೋಶವನ್ನು ಸಮಗ್ರವಾಗಿ ಖಂಡಿಸಲು ಅಮರಖಂಡನ ಎಂಬ ಕೃತಿಯನ್ನೆ ರಚಿಸುತ್ತಾನೆ. ಅಮರಖಂಡನಕ್ಕೆ ವಿರುದ್ಧವಾಗಿ ಅದಾದ ನಂತರ ಸುಮಾರು ಅದೇ ಕಾಲದಲ್ಲಿ ಕೃಷ್ಣ ಸೂರಿ ಎಂಬಾತ ಅಮರಮಂಡನ ಎಂಬ ಕೃತಿಯನ್ನು ಬರೆದಿದ್ದಾನೆ. ಹಾಗೆಂದು ಈ ಕೃತಿಯ ವೈಶಿಷ್ಟ್ಯಕ್ಕಾಗಲಿ, ಮಹತ್ವಕ್ಕಾಗಲಿ ಕುಂದುಂಟಾಗಲಿಲ್ಲ.

ಅಮರಕೋಶವು ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಹಿಂದಿ, ಲಡಾಖಿ, ಮರಾಠಿ, ತೆಲುಗು, ಬಂಗಾಳಿ ಭಾಷೆಗೆ ಅನುವಾದಗೊಂಡಿರುವುದನ್ನು ಗಮನಿಸಿದರೆ ಇದರ ಜನಪ್ರಿಯತೆಯನ್ನು ಗಮನಿಸಬೇಕು. 1965ರಲ್ಲಿ ಕನ್ನಡ ಅನುವಾದದ ಕೃತಿಯೂ ಪ್ರಕಟಗೊಂಡಿದೆ. ಅಷ್ಟೆ ಅಲ್ಲ ಇತ್ತೀಚಿನವರೆಗೂ ಅದನ್ನು ಮಕ್ಕಳಿಗೆ ಬಾಯಿಪಾಠ ಮಾಡಲು ಬಳಸಲಾಗುತ್ತಿತ್ತು. ಇದನ್ನು ಮೊದಲು ಸಂಗ್ರಹಿಸಿದ ರೈಸ್ ಅವರು, ಈ ಕೃತಿ ಕೇವಲ ಸಂಸ್ಕøತ ವಿದ್ಯಾರ್ಥಿಗಳಿಗೆ ಮಾತ್ರ ಉಪಯೋಗವಾಗುತ್ತಿದ್ದರಿಂದ ಹೆಚ್ಚು ಜನಪ್ರಿಯವಾಗಲಿಲ್ಲ, ಅದನ್ನು ತಾನು ಸರಳಗೊಳಿಸಿ ಹೇಳಿದ್ದೇನೆ ಎನ್ನುತ್ತಾನೆ.

ಮೊದಲ ವರ್ಗದಲ್ಲಿ ದೇವರುಗಳನ್ನು ಗುರುತಿಸುವಾಗ ಬುದ್ಧನನ್ನು ಸುಮಾರು ನಲವತ್ತಕ್ಕೂ ಹೆಚ್ಚು ಶಬ್ದಗಳಿಂದ ಗುರುತಿಸುತ್ತಾನೆ. ಅದರ ಜೊತೆ ಗುರುತಿಸುವ ಇತರ ದೇವರುಗಳೆಂದರೆ ಬ್ರಹ್ಮ, ವಿಷ್ಣು, ಶಿವ, ಮನ್ಮಥ, ಲಕ್ಷ್ಮಿ, ಪಾರ್ವತಿ, ಅನಿರುದ್ಧಸಪ್ತಮಾತೃಕೆಯರು ಗಣಪತಿ, ಕುಮಾರಸ್ವಾಮಿ, ನಂದಿಗಳನ್ನು ಗುರುತಿಸುತ್ತಾನೆ. ಇತ್ತೀಚಿಗೆ ಮನುಷ್ಯಕುಲ ವಿಸ್ತಾರವಾದಂತೆ ದೇವರುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಕಾಲವನ್ನು ಎಷ್ಟು ಚನ್ನಾಗಿ ವಿಭಜಿಸುತ್ತಾನೆಂದರೆ ಒಂದು ತಿಂಗಳನ್ನು ಎರಡು ಪಕ್ಷಗಳಾಗಿ ಹದಿನೈದು ದಿನಕ್ಕೊಮ್ಮೆ ವಿಭಜಿಸುತ್ತಾನೆ. ಒಂದು ಕೃಷ್ಣಪಕ್ಷ, ಇನ್ನೊಂದು ಶುಕ್ಲಪಕ್ಷ. ಹದಿನೈದು ಅಹೋರಾತ್ರಿಗಳನ್ನು ಒಂದು ಪಕ್ಷ ಎನ್ನಲಾಗುತ್ತದೆ. ಒಂದು ಅಹೋರಾತ್ರಿಯನ್ನು ಮೂವತ್ತು ಮಹೂರ್ತಗಳನ್ನಾಗಿ (24 ಗಂಟೆಗಳು) ವಿಭಾಗಿಸಿಕೊಳ್ಳುತ್ತಾನೆ. ಒಂದು ಮಹೂರ್ತವೆಂದರೆ ಹನ್ನೆರಡು ಕ್ಷಣಗಳು. ಒಂದು ಕ್ಷಣವೆಂದರೆ ಮೂವತ್ತು ಕಲೆಗಳು. ಒಂದು ಕಲೆ ಎಂದರೆ ಮೂವತ್ತು ಹೊತ್ತು. ಒಂದು ಹೊತ್ತು ಎಂದರೆ ಮೂವತ್ತು ಕಾಷ್ಠಗಳು. ಒಂದು ಕಾಷ್ಠ ಎಂದರೆ ಹದಿನೆಂಟು ರೆಪ್ಪೆಗಳನ್ನು ಆಡಿಸುವಷ್ಟು ಹೊತ್ತು. ಇದು ಅಮರನು ಮಾಡುವ ಕಾಲದ ವಿಭಜನೆ. ಇಂದಿನ ಕಾಲ ನಿರ್ವಹಣೆಗಿಂತ ಸೂಕ್ಷ್ಮವಾಗುತ್ತಾ ಹೋಗುತ್ತದೆ.

ಅಮರಶಿಂಹನು ಗುರುತಿಸುವ ಕೆಲವು ವಾದ್ಯಗಳು: ವೀಣೆ, ಮದ್ದಳೆ, ಪಿಳ್ಳಗೋವಿ, ತಾಳ, ಡವಣೆ, ಭೇರಿ, ಮೃದಂಗ, ತಮ್ಮಟೆ, ಬುಡುಬುಡಕೆ, ಡಿಮಕಿ, ಢಿಕ್ಕಿ, ಗೋಮುಖ ಮುಂತಾದ ಆ ಕಾಲದಲ್ಲಿ ಬಳಕೆಯಾಗುತ್ತಿದ್ದ ವಾದ್ಯಗಳಾಗಿವೆ. ಇದರಲ್ಲಿ ನಾವು ಮೂರು ವಿಧಗಳನ್ನು ಮಾಡಬಹುದು. 1. ಯುದ್ಧಕ್ಕೆ ಸಂಬಂಧಿತ ವಾದ್ಯಗಳು. 2. ಅರಮನೆಯ ನೃತ್ಯಗಳಲ್ಲಿ ಭಾಗಿಯಾಗುವ ವಾದ್ಯಗಳು. 3. ಜನಸಾಮಾನ್ಯರು ನುಡಿಸುವ ವಾದ್ಯಗಳು. ಇವುಗಳನ್ನು ಬಿಟ್ಟರೆ ಹೆಚ್ಚು ವಾದ್ಯಗಳು ಇರಲಿಲ್ಲವೇನೋ ಎನಿಸುತ್ತದೆ.

ಅಮರಶಿಂಹನು ಕಾವ್ಯಕ್ಕೆ ಉತ್ತೇಜನ ಕೊಡುವ ರಸಗಳನ್ನು ಹೇಳುತ್ತಾನಾದರೂ ಎಂಟೇ ರಸಗಳನ್ನು ಗುರುತಿಸುತ್ತಾನೆ. ಶಾಂತರಸದ ಬಗ್ಗೆ ಪ್ರಸ್ತಾಪವನ್ನೆ ಮಾಡುವುದಿಲ್ಲ. ಬುದ್ಧನ ಬಗ್ಗೆ ಅತೀವವಾದ ಗೌರವ ಇಟ್ಟುಕೊಂಡಿದ್ದ ಅಮರನು ಅವನ ತಾಧ್ಯಾತ್ಮಕತೆಯನ್ನು ಶಾಂತವಾಗಿ ಗುರುತಿಸಬಹುದಿತ್ತು. ಆ ಹೊತ್ತಿಗೆ ಶಾಂತರಸದ ಅನಿವಾರ್ಯತೆ ಇರಲಿಲ್ಲವೆಂದೆನುಸುತ್ತದೆ.

ಅಮರಶಿಂಹನು ಗುರುತಿಸುವ ಭಾರತದ ಕೆಲ ನದಿಗಳು ಹೀಗಿವೆ. ಗಂಗಾ, ಯಮುನಾ, ನರ್ಮದಾ, ಕರತೋಯ, ಬಾಹುದಾ, ಶತದ್ರು, ವಿಪಾಶಾ, ಶೋಲಾ, ಶರಾವತಿ, ನೇತ್ರಾವತಿ, ಚಂದ್ರಭಾಗ, ಸರಸ್ವತಿ, ಗೋದಾವರಿ, ಭೀಮಾ, ಕೃಷ್ಣ, ಗೌತಮಿ, ಕಾವೇರಿ ಮುಂತಾದವು. ಅದರಲ್ಲೂ ಕರ್ನಾಟಕದ ಕಾವೇರಿ, ಕೃಷ್ಣವೇಣಿ, ಭೀಮಾರಥಿ, ಶರಾವತಿ ಮುಂತಾದ ನದಿಗಳನ್ನು ಗುರುತಿಸಿರುವುದನ್ನು ಗಮನಿಸಿದರೆ ಕನ್ನಡ ನಾಡಿನ ಪರಿಚಯ ಅವನಿಗೆ ಸಾಕಷ್ಟಿರಬೇಕು, ಇಲ್ಲವೆ ಯಾವುದೋ ಕೃತಿಯಲ್ಲಿ ಈ ನದಿಗಳು ಉಲ್ಲೇಖವಾಗಿರಬೇಕು. ಇದರ ಜೊತೆ ನೀರಿನಲ್ಲಿರುವ ಇತರ ಜೀವಜಾಲವನ್ನು ಗಮನಿಸಿದ್ದಾನೆ. ಕನೈದಿಲೆ, ಬಿಳಿನೈದಿಲೆ. ಕೆಂಪುನೈದಿಲೆ, ಎಳೆಗೆಂಪು ನೈದಿಲೆ, ಬಿಳಿ ಮತ್ತು ಕೆಂಪುತಾವರೆ, ಸೌಗಂಧಿಕ ಗಡ್ಡೆ, ತಾವರೆಗಡ್ಡೆ ಇವೆಲ್ಲವೂ ಉಲ್ಲೇಖಿತವಾಗಿವೆ. ಸಾಮಾನ್ಯವಾಗಿ ತಾವರೆ, ನೈದಿಲೆ ಹೀಗೆ ಮುಂತಾದವು ಕಾವ್ಯಗಳಲ್ಲಿ ಉಲ್ಲೇಖಿತಗೊಳ್ಳುವುದು ಸಹಜವಾದರೂ ತಾವರೆ ಗಡ್ಡೆಗಳನ್ನು ಅಮರನು ಗಮನಿಸಿರುವುದು ವಿಶೇಷವಾದುದು.

ಭೂಮಿಯನ್ನು ಗುರುತಿಸುವಾಗ ಅಬ್ಧಿಮೇಖಲಾ ಎಂದು ಭೂಮಿಯನ್ನು, ಮೃತ್ತಿಕಾ ಎಂದು ಮಣ್ಣನ್ನು, ಅಮೃತ್ಸಾ ಎಂದು ಉತ್ತಮವಾದ ಮಣ್ಣನ್ನು ಗುರುತಿಸಿದ್ದಾನೆ. ಜೌಗು ಭೂಮಿಯನ್ನು ಕಚ್ಛಾ ಎಂದು, ಕಲ್ಲುಳ್ಳ ಪ್ರದೇಶವನ್ನು ಶರ್ಕರಾವತಿ ಎಂದು, ಹೊಳೆ, ಕೆರೆ, ಬಾವಿ, ಹಳ್ಳಗಳ ನೀರಿನಿಂದ ಬೆಳೆ ಬೆಳೆಯುವ ಪ್ರದೇಶವನ್ನು ನದೀ ಮಾತೃಕವೆಂದು, ಮಳೆ ನೀರಿನಿಂದ ಬೆಳೆ ಬೆಳೆಯುವ ಪ್ರದೇಶವನ್ನು ದೇವಮಾತೃಕವೆಂದು ವಿಭಾಗಿಸಿಕೊಂಡಿದ್ದಾನೆ (ಆಶ್ಚರ್ಯವೇನೆಂದರೆ ನಮ್ಮ ಶಾಸನಗಳಾವುವೂ ಈ ರೀತಿಯ ವಿಂಗಡನೆಯನ್ನು ಮಾಡುವುದಿಲ್ಲ. ಅವು ದೇವ ಮಾತೃಕವನ್ನು ಬೆರ್ದೆಲೆ, ಅಂದರೆ ಬೆದ್ದಲವೆಂದು, ನದೀ ಮಾತೃಕವನ್ನು ಗರ್ದೆ ಅಂದರೆ ಗದ್ದೆ ಎಂದು ವಿಭಾಗಿಸುತ್ತಾರೆ). ಹೊಳೆ ಗದ್ದೆಯನ್ನು ಕ್ಷೇತ್ರವೆಂದು, ಸೊಪ್ಪಿನ ತೋಟವನ್ನು ಶಾಖಶಾಕಿನಂ ಎಂದು, ಉತ್ತಭೂಮಿಯನ್ನು ಹಲವೆಂದು ಕರೆದುಕೊಳ್ಳುತ್ತಾನೆ.

ಒಂದು ಅಕ್ಷೋಹಿಣಿ ಸೈನ್ಯವೆಂದು ಪದೇಪದೆ ಕರೆಯುವುದನ್ನು ನೋಡಿದ್ದೇವೆ. ಅಕ್ಷೋಹಿಣಿ ಎಂದರೆ ಎಷ್ಟು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಒಂದು ಪತ್ತಿ ಎಂದು ಗುಂಪನ್ನು ಮಾಡಲಾಗುತ್ತದೆ. ಅದರಲ್ಲಿ ಒಂದುರಥ, ಒಂದು ಆನೆ, ಮೂರು ಕುದುರೆ, ಐದು ಕಾಲಾಳುಗಳಿರುತ್ತವೆ. ಇಂತಹ ಮೂರು ಪತ್ತಿಗಳನ್ನು ಸೇನಾಮುಖ ಎನ್ನುತ್ತಾರೆ. ಮೂರು ಸೇನಾಮುಖಗಳನ್ನು ಗುಲ್ಮವೆಂದು ಕರೆಯುತ್ತಾರೆ. ಮೂರು ಗುಲ್ಮಗಳು ಸೇರಿ ಒಂದು ಗುಣವೆಂದು ಹೇಳಲಾಗುತ್ತದೆ. ಮೂರು ಗುಣಗಳನ್ನು ವಾಹಿನಿ ಎಂದು ಕರೆಯಲಾಗುತ್ತದೆ. ಮೂರು ವಾಹಿನಿಗಳೆಂದರೆ ಒಂದು ಪೃತನಾ, ಮೂರು ಪೃತನಗಳು ಸೇರಿ ಒಂದು ಚಮೂ ಎಂದು ಕರೆಯಲಾಗುತ್ತದೆ. ಮೂರು ಚಮೂಗಳು ಸೇರಿ ಒಂದು ಅನೀಕಿನಿ ಎನಿಸುತ್ತದೆ. ಇಂತಹ ಹತ್ತು ಅನೀಕಿನಿಗಳು ಸೇರಿ ಒಂದು ಅಕ್ಷೋಯಿಣಿ ಸೈನ್ಯ (21870 ರಥಗಳು, 21870 ಆನೆಗಳು, 65610 ಕುದುರೆಗಳು, 109350 ಕಾಲಾಳುಗಳು) ಎನಿಸಿಕೊಳ್ಳುತ್ತದೆ.

ಇದರ ಜೊತೆ ಅವರು ಬಳಸುವ ಆಯುಧಗಳೆಂದರೆ ಬಿಲ್ಲು (ಕೋದಂಡ), ಕತ್ತಿ(ಖಡ್ಗೆ), ಗುದಿಗೆ(ಮುದ್ಗರ), ಈಳಿಗೆಕತ್ತಿ(ಕರವಾಳಿಕ), ಮಾರುದ್ದದಗುದಿಗೆ (ಭಿಂಡಿವಾಲ), ಮರದದೂಲ(ಪರಿಘಾತ), ಕೊಡಲಿ(ಕುಠಾರ), ಚೂರಿ(ಧೇನುಕಾ), ಗಂಡುಗೊಡಲಿ (ಪರುಶು), ಕೊಂತ(ಕುಂತಃ), ಅಂಚು(ಶ್ರೀಕೋಟ), ಈಟಿ(ತೋಮರ), ಗೂಟ(ಶಂಕು) ಮುಂತಾದವು. ಇಲ್ಲಿ ಸಂಘಟಿತ ಯುದ್ಧ ಸಮುದಾಯ ಮತ್ತು ಅದರ ಆಯುಧಗಳನ್ನು ಮಾತ್ರ ಗುರುತಿಸಲಾಗಿದ್ದು ಗೆರಿಲ್ಲಾ ಯುದ್ಧದ ಬಗ್ಗೆ ವಿವರಣೆ ಇಲ್ಲದೆ ಇರುವುದರಿಂದ ಅವುಗಳ ಬಗ್ಗೆ ಅಮರಶಿಂಹನು ಆಸಕ್ತಿ ವಹಿಸುವುದಿಲ್ಲ.

ಸಮಾಜವನ್ನು ನಾಲ್ಕು ಭಾಗವಾಗಿ ವಿಂಗಡಿಸಲಾಗಿದ್ದು ಅವುಗಳನ್ನು ಅಮರಶಿಂಹನು ಬ್ರಹ್ಮವರ್ಗ, ಕ್ಷತ್ರಿಯ, ವೈಶ್ಯ, ಶೂದ್ರರೆಂದು ವಿಭಾಗಿಸಿರುವುದನ್ನು ದೃಢಪಡಿಸಿದ್ದಾನೆ. ಯಜ್ಞಗಳಲ್ಲಿ ತೊಡಗಿದನು, ಅಧ್ಯಾಪನ ಮಾಡುವವನು, ವೇದವನ್ನು ಓದಿದವರು, ಅಗ್ನಿಯನ್ನು ಆರಾಧಿಸುವವನು ಇವರನ್ನು ಬ್ರಹ್ಮವರ್ಗದಲ್ಲಿ ಗುರುತಿಸುತ್ತಾನೆ. ಕ್ಷತ್ರಿಯ ವರ್ಗದಲ್ಲಿ ರಾಜ್ಯವನ್ನು ಆಳುವವರನ್ನು ಗುರುತಿಸಲಾಗಿದೆ. ಇದರ ಜೊತೆಗೆ ರಾಜನ ಆಡಳಿತಕ್ಕೆ ಅನುಕೂಲ ಮಾಡಿಕೊಡುವ ಇತರ ನೌಕರರನ್ನು ಗುರುತಿಸಲಾಗುತ್ತದೆ. ವೈಶ್ಯವರ್ಗದಲ್ಲಿ ಕೃಷಿ ಮಾಡುವವರನ್ನು, ಪಶುಪಾಲಕರನ್ನು, ವ್ಯಾಪಾರಸ್ಥರನ್ನು, ಇಂತಹ ವೃತ್ತಿಗಳಲ್ಲಿ ಸಹಾಯಕರಾಗಿದ್ದವರನ್ನು ಇಲ್ಲಿ ಗುರುತಿಸಲಾಗುತ್ತದೆ.

ಶೂದ್ರವರ್ಗದಲ್ಲಿ ಸಂಕರ ಜಾತಿಗಳು ಎಂದು ಕರೆಯುವ ಶೂದ್ರರನ್ನು ಗುರುತಿಸುತ್ತಾನೆ. ಕೃಷಿ, ವ್ಯಾಪಾರ, ವಾಣಿಜ್ಯ ವ್ಯವಹಾರಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವವನು ಹಾಗೂ ಶ್ರಮಿಕ ವರ್ಗವನ್ನು ಶೂದ್ರರ ಗುಂಪಿನಲ್ಲಿ ಸೇರಿಸುತ್ತಾನೆ. ಉದಾಹರಣೆ ಎಂದರೆ ಅಕ್ಕಸಾಲಿಗ, ದರ್ಜಿ, ಕುಂಬಾರ, ಬಡಗಿ, ನೇಯ್ಗೆಗಾರ, ಹೆಂಡಮಾರುವವನು, ನಟುವರ ಜಾತಿಯವನು ಇವರೆಲ್ಲ ಇಲ್ಲಿ ಬರುತ್ತಾರೆ. ಇಂತಹ ಶ್ರಮದ ಬದುಕುಗಳನ್ನು ಹೀನವೆಂದು ಇಲ್ಲಿ ಗಣಿಸಲಾಗಿದೆ. ಅವರು ಬಳಸುವ ವಸ್ತುಗಳು ಕೂಡಾ ಆಯಾ ವರ್ಗದ ಆಧಾರದ ಮೇಲೆ ಮೇಲು ಕೀಳುಗಳನ್ನು ಮಾಡಲಾಗಿದೆ. ವೇದಕಾಲದಲ್ಲಿ ಈ ರೀತಿಯ ಶೂದ್ರರು ಎನ್ನುವ ವರ್ಗ ಶ್ರಮಿಕರನ್ನು ಉದ್ದೇಶಿಸಿ ಇತ್ತು. ಕಾಲಾನಂತರ ಸಂಕರ ಸಮುದಾಯಗಳನ್ನು ಶೂದ್ರರು ಅಥವಾ ಚಾಂಡಾಲರನ್ನಾಗಿ ಊರಿನಿಂದ ಹೊರಗೆ ಇರಿಸಲಾಯಿತು. ಅದು ಮುಂದುವರಿದಂತೆಲ್ಲ ಇನ್ನಷ್ಟು ದೌರ್ಜನ್ಯ ಸ್ವರೂಪಿಯಾಯಿತು.

ಇಲ್ಲಿ ಅಮರಶಿಂಹನಿಗಿಂತ ಆ ಹೊತ್ತಿಗೆ ರೂಪುಗೊಳಿಸಲಾಗಿದ್ದ ಸಮಾಜವೊಂದರ ಚಿತ್ರಣವನ್ನು ನಮಗೆ ನೀಡುತ್ತದೆ. ಇದನ್ನು ಅಮರಶಿಂಹನು ವಿಭಾಗೀಕರಣ ಮಾಡುವಾಗ ಮಾತ್ರ ಆತ ಕ್ರಮಬದ್ಧಗೊಳಿಸಿಕೊಳ್ಳುತ್ತಾನೆ. ನಾಲ್ಕನೇ ಶತಮಾನದ ಹೊತ್ತಿಗಾಗಲೇ ಸಮಾಜವೊಂದು ಈ ರೀತಿಯ ಏಣೀಕರಣಕ್ಕೆ ಒಳಗಾಗಿತ್ತು ಎಂಬುದು ಮನದಟ್ಟಾಗುತ್ತದೆ. ಬಳಸಿದ ಹಾಗೂ ಬಳಸುವ ವಸ್ತುಗಳ ವಿವರಗಳನ್ನು ಗಮನಿಸಿದರೆ ಈ ಏಣಿಕರಣದ ವೈಪರೀತ್ಯದ ಅರಿವು ನಮಗಾಗುತ್ತದೆ.

ಇಷ್ಟು ಅಂಶಗಳನ್ನು ಎರಡು ಅಧ್ಯಾಯಗಳಲ್ಲಿ ಹೇಳುವ ಅಮರಶಿಂಹನು ಮೂರನೇ ಅಧ್ಯಾಯದಲ್ಲಿ ಹೆಚ್ಚು ಕಡಿಮೆ ಸಮಗ್ರವಾದ ಪದಗಳಿಗೆ ಅರ್ಥಗಳನ್ನು ಕೊಡಲು ಪ್ರಯತ್ನಿಸಿದ್ದಾನೆ. ಮನುಷ್ಯನ ನಡವಳಿಕೆ, ಅವನ ಕಾರ್ಯಗಳು, ಬದುಕಿನ ಚಿತ್ರಗಳು, ದೈನಂದಿನ ಕಾರ್ಯಗಳು, ಸುತ್ತಮುತ್ತಲಿನ ಪರಿಸರ ಇವೆಲ್ಲವಕ್ಕು ಅರ್ಥವನ್ನು ಹುಡುಕುವ ಪ್ರಯತ್ನವವನ್ನು ಮಾಡಲಾಗಿದೆ. ಹಾಗೆಯೇ ವ್ಯಾಕರಣಕ್ಕೆ ಅವಕಾಶ ಕೊಟ್ಟಿದ್ದಾನೆ.

ಒಟ್ಟಾರೆ ಅಮರಶಿಂಹನ ಈ ಶಬ್ದಕೋಶವು ಏಕಕಾಲಕ್ಕೆ ಎರಡು ಮಹತ್ವದ ವಿಷಯಗಳನ್ನು ತಿಳಿಸುತ್ತದೆ. ಒಂದು ಕಾಲದ ಸಾಂಸ್ಕøತಿಕ ಚರಿತ್ರೆಯನ್ನು ತಿಳಿಸುವುದಲ್ಲದೆ ವರ್ತಮಾನಕ್ಕೆ ಮುಖಾಮುಖಿಗೊಳಿಸಲು ಸಹಾಯಕವಾಗುತ್ತದೆ. ಒಂದು ಕಾಲದ ವ್ಯವಸ್ಥೆಯು ಕಾಲಾನಂತರದಲ್ಲಿ ವಿರೂಪಗೊಂಡ ಮತ್ತು ಸರೂಪಗೊಂಡ ಸ್ಥಿತಿಗತಿಗಳನ್ನು ತೌಲನಿಕವಾಗಿ ಅಧ್ಯಯಿನಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ವರ್ತಮಾನದ ಬೆಳಕುಗಳು ಗೋಚರಿಸಬಹುದು. ಆಹಾರ, ಉಡುಗೆ, ತೊಡುಗೆ, ವಹಿವಾಟುಗಳಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸಬಹುದು.

ಈ ಎಲ್ಲಾ ಕಾರಣದಿಂದ ಅಮರಕೋಶ ಮಹತ್ವದ್ದಾಗಿದೆ. ನಲವತ್ತು ವರ್ಷಗಳ ಹಿಂದೆ ಚಂದ್ರಗುತ್ತಿಯ ಶ್ರೀಮತಿ ಇಬ್ರಾಹಿಂಬಿ ಎನ್ನುವ ಮುಸ್ಲಿಂ ಅಜ್ಜಿಯೊಬ್ಬಳ ಬಾಯಿಂದ ಹಾಡಿನ ರೂಪದಲ್ಲಿ ಕೇಳಿದ್ದ ನನಗೆ ಈ ಕೃತಿಯ ಅಧ್ಯಯನದ ಸಂದರ್ಭದಲ್ಲಿ ಇದೊಂದು ಹಾಡುಗಬ್ಬವಾಗಿತ್ತು ಎಂದು ಊಹಿಸುವುದೇ ಕಷ್ಟಕರವಾಯಿತು. ಅಷ್ಟೊಂದು ವ್ಯಾಪಕಗೊಂಡ ಈ ಕೃತಿ ಕಾಲಾನಂತರದಲ್ಲಿ ಕನ್ನಡದ ವ್ಯಾಕರಣ ಬಳಕೆ ವ್ಯಾಪಕಗೊಂಡ ಮೇಲೆ ನಿಧಾನವಾಗಿ ಮರೆಗೆ ಸರಿಸಲ್ಪಟ್ಟಿರಬೇಕು. ನಂತರ ಹೊಸಹೊಸ ವ್ಯಾಕರಣ ಗ್ರಂಥಗಳು ಬರತೊಡಗಿದಾಗ ಇಂತಹ ಶಾಸ್ತ್ರಗಂಥಗಳು ಹಿಂದಕ್ಕೆ ಸರಿಯತೊಡಗುತ್ತವೆ. ಆದರೆ ಈಗಲೂ ಅಮರಕೋಶದವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅದರ ಮಹತ್ವ ಅರ್ಥವಾಗುತ್ತದೆ.

*ಲೇಖಕರು ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದವರು; ಕುವೆಂಪು ವಿವಿಯಲ್ಲಿ ಎಂ.., ‘ಮಲೆನಾಡಿನ ದೀವರ ಸಾಂಸ್ಕøತಿಕ ಅಧ್ಯಯನ’ ವಿಷಯದಲ್ಲಿ ಪಿ.ಎಚ್.ಡಿ. ಮಾಡಿದ್ದಾರೆ. 12 ಕೃತಿಗಳು ಪ್ರಕಟವಾಗಿವೆ. ಶಿವಮೊಗ್ಗದ ವಿವಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರು.

Leave a Reply

Your email address will not be published.