ಅಮ್ಮನ ಹೆಬ್ಬೆರಳು

ಅಮ್ಮನ ಹೆಬ್ಬೆರಳು

ವಿಷ್ಣುಚಕ್ರವ ಮೀರಿಸಿದೆ

ಕೈಹಿಡಿದು ಒಮ್ಮೆ

ಕಣ್ಣಿಟ್ಟು ನೋಡಬೇಕಿದೆ

ಅದು ಮುಟ್ಟಿ ಮುರಿದ

ಒತ್ತಿ ಉರಿದ ಎಷ್ಟೋ

ಕಥೆಗಳು ಈಗಲೂ

ತೆರೆದುಕೊಂಡಿಲ್ಲ.

ಒಮ್ಮೆ ಬಿಡಿಸಿ ನೋಡಿದರೆ

ಬ್ರಹ್ಮಾಂಡವೇ ಸಿಗಬಹುದು

ದಶಾವತಾರಗಳ ಕಥೆಯನ್ನೂ

ಹಿಂದಿಕ್ಕಿಬಿಡಬಹುದು.

ಅಲ್ಲಲ್ಲಿ ಕತ್ತರಿಸಿದ ರೇಖೆಗಳಿಗೆ

ಮೆತ್ತಿದ ಕಪ್ಪುಮಸಿ

ತೊಳೆದಷ್ಟು ತೆಳುವಾಗುತ್ತ

ಹೊಳೆವ ಸತ್ತ ಚರ್ಮ

ಹಣೆಯಹಸಿ ಕೂದಲನೆತ್ತಿ

ಮುದ್ದಿಸಿ ಕಣ್ತಾಕೀತೆಂದು

ಕಪ್ಪಲದ್ದಿ ತಿಲಕವಿಟ್ಟು

ಗಲ್ಲಹಿಂಡಿದ ಒರಟು

ಚೇಷ್ಟೆ ಹೆಚ್ಚಾದಾಗ ಚಿವುಟಿ

ಒಳಶುಂಟಿ ಕೊಟ್ಟು

ರಸ್ತೆದಾಟುವಾಗ ಆಸರೆಯ

ಗಟ್ಟಿ ಮುಷ್ಟಿಗೆ ಒಳಹೊಕ್ಕು

ಅಪ್ಪನ ಬೆವರಿನ ಹಣವ

ಗಣಿತವಿಲ್ಲದೇ ಎಣಿಸಿ ಉಳಿಸಿ

ತುತ್ತುಣಿಸಿ ನಮ್ಮೆಲ್ಲರ ತಣಿಸಿ

ತೂಗಿದಾ ಕೈ ಬೆರಳು,

ತನ್ನಂತೇ ದಣಿದು ಬೆಂಡಾದ

ಕಾಲ ಬೆರಳಿಗೆ ಆರೈಕೆ ಮಾಡುತ್ತದೆ,

ಆಗಾಗಸುಡು ಎಣ್ಣೆ, ಸುಣ್ಣ,

ಕೆಂಡಕಾವಲಿಗಳ ಮುಟ್ಟಿ ಗೊಣಗುತ್ತ

ಸದ್ದಿಲ್ಲದೇ ಸುಮ್ಮನಾಗುತ್ತ

ಮಲಗುತ್ತಾಳೆ ಕೈಹುದುಗಿಸಿ

ಮುಂಜಾವಿಗೆ ಒಲೆ ಊದಲು

ತನ್ನ ಹಳೆ ಉಗುರ ಕತ್ತರಿಸಿ.

ನಂಜನಗೂಡು ಅನ್ನಪೂರ್ಣ


ಗೋಡೆ

ಕಡೆಗೂ ಕಡೆಗೂ

ಒಂದು ಗೋಡೆ!

ಗೋಡೆ ಆಚೆಗಿನ ಮಂದಿ ಕುಲೀನರು

ಇಚೆಗೆ ಇರುವವರು ಕುಲ ಹೀನರು.

ಇಚೆಗಿನ ಎರಡಕ್ಷರ ಆಚೆಗೆ ನಾಲ್ಕಕ್ಷರ

ಎರಡು ಕಡೆ ಸುಳಿದಾಡುವ ಆಕಳು

ಅಲ್ಲಿ ಗೋ ಆದರೆ ಇಲ್ಲಿ ಬರಿಯ ದನ

ಅವರು ಹೇಳಿದ್ದೆ ಇವರು ಕೇಳೋದು

ಅವರ ಮಾತೆ ಇವರಿಗೆ ವೇದವಾಕ್ಯ.

ಅಲ್ಲಿಯ ಗಂಡು ಇಲ್ಲಿಯ ಹೆಣ್ಣು

ಇವರ ಸಂಬಂಧ

ಈಚೆಗೆ ಪ್ರೇಮವಾದರೆ ಆಚೆಗೆ ಬರೀಯ ಕಾಮ.

ಗೋಡೆ ಇದೆಯಲ್ಲ ಶತ ಶತಮಾನಗಳ

ಕಾಲದಿಂದಲೂ ಸ್ಥಾಯಿ.

ಬೀಳಿಸಲು ಆಗೊಬ್ಬರು ಈಗೊಬ್ಬರು

ಹುಟ್ಟುತ್ತಲೇ ಇರುತ್ತಾರೆ,

ಬೀಳಿಸುತ್ತಾರೆ ಸಹ,

ಅದು ಬೀಳುತ್ತದೆ ಕ್ಷಣಕೆ

ಹೆಣ್ಣು ಹಾವಿನಂತೆ ಪೆÇರೆ ಬಿಚ್ಚಿ

ಮತ್ತೆ ಮತ್ತೆ ಹೊಸದಾಗುತ್ತದೆ.

ಇವೆರೆಡೂ ಕಡೆಯವರನ್ನು,

ಗೋಡೆಯನ್ನು

ಹೊತ್ತು ಮಲಗಿದ್ದ ನೆಲದವ್ವ ಮಾತ್ರ

ನಗುತ್ತಲೇ ಸುಮ್ಮನಿರುತ್ತಾಳೆ ಎಲ್ಲವನ್ನೂ ನೋಡಿ.

ಭಾರತೀಶ ವಿಶಾಲ್


ಧರಣಿ ಮಂಡಳ ಮಧ್ಯದೊಳಗೆ

ಎದೆಯ ತೇವದ ನೆರಳಿನಲಿ

ಜಗವನೆ ಆಲಿಸಲು ಕೂರಿಸುವ ಕಾಯಕ

ಶುರುವಾದದ್ದೆಲ್ಲಿಂದ ಅನವರತ?

ಕಥೆಯೊಂದು ನಡೆದುಬಂದು ಬಾಜೂ ಕೂರುವುದು

ಬಲು ಚೋದ್ಯವಯ್ಯಾ

ಮಹಾ ಮಹಿಮರನು ಮರೆತ ದುಷ್ಕಾಳದ ದಿನಗಳಲ್ಲೂ

ದಿವ್ಯ ಘಳಿಗೆ

ಹುಟ್ಟುತ್ತಲೇ ಬೇರೆಯಾಗಿದ್ದ ಗಿಳಿಗಳೆರಡೂ

ಎದುರು ಬದುರಾಗಿಯೇಬಿಟ್ಟವು; ಸಣ್ಣ ಮಾತೇ?

ಬನ್ನಿ ಕುಳಿತುಕೊಳ್ಳಿ ಬಾಯಾರಿದೆಯೆ?

ಎಂಥ ಅನುನಯ, ಮೃದು ಭಾಷೆ!

ಹಿಡಿಯಿರಿ ಹೊಡೆಯಿರಿ ಕೊಲ್ಲಿರಿ

ಕೊಂದೇಬಿಡುವಂಥ ಗದ್ದಲ, ಕರ್ಕಶದ ಕ್ಲೀಷೆ

ಅದೆಷ್ಟು ಸಲ ಪುನರಾವರ್ತನೆಯಾಯಿತೊ

ಗಿಳಿಗಳೆರಡೂ ಗಲಿಬಿಲಿಗೊಂಡು ಸುಮ್ಮನಾದವು ಕಡೆಗೆ

ಬೆಡಗು ಬರೆದ ಅಲ್ಲಮನ ಹಾಡು

ಕ್ಷಿತಿಜದಲಿ ಕಡಲ ಕೂಡುವುದ ನೋಡು

ಧರಣಿ ಮಂಡಳ ಮಧ್ಯದೊಳಗೆ

ಇದೆ ಇದೆ ಜಂಗಮವು ಹೀಗೆ

ವೆಂಕಟ್ರಮಣ ಗೌಡ

Leave a Reply

Your email address will not be published.