ಆಡಳಿತ ನಡೆಸೋದಕ್ಕೆ ಇವ್ರು ಅಯೋಗ್ಯರು!

ಎಸ್.ಆರ್.ಹಿರೇಮಠ

ಕೆಲವೇ ವರ್ಷಗಳ ಹಿಂದೆ ‘ಬಳ್ಳಾರಿ ರಿಪಬ್ಲಿಕ್’ ಸ್ಥಾಪಿಸಿದ್ದ ಗಣಿ ಲೂಟಿಕೋರರನ್ನು ಜೈಲಿಗಟ್ಟಲು ಕಾರಣರಾದ ಏಕಾಂಗಿ ಹೋರಾಟಗಾರ ಇವರೇನಾ ಎಂದು ಬೆರಗಾಗುವಷ್ಟು ಸರಳ ವ್ಯಕ್ತಿತ್ವ ಎಸ್.ಆರ್.ಹಿರೇಮಠ ಅವರದು. ಅವರು ನೋಡಲಷ್ಟೇ ಹಾಗೆ. ಭ್ರಷ್ಟಾಚಾರ, ಅನ್ಯಾಯ, ಅಕ್ರಮಗಳ ವಿಷಯ ಬಂದರೆ ಯಾರಯಾವ ಮುಲಾಜೂ ಇಲ್ಲದಂತೆ ಸೆಟೆದು ನಿಲ್ಲುವಷ್ಟು ಬಲಿಷ್ಠ, ಕಠಿಣ ಮತ್ತು ನಿಷ್ಟುರಿ. ಅವರು ಕಾಂಗ್ರೆಸ್ಸಿನ ಕೆ.ಆರ್.ರಮೇಶ್ ಕುಮಾರ್, ಜನತಾದಳದ ಎಚ್.ಡಿ.ಕುಮಾರಸ್ವಾಮಿ ಅಕ್ರಮಗಳ ವಿರುದ್ಧವೂ ದನಿ ಎತ್ತಿದ ನಿಷ್ಪಕ್ಷಪಾತಿ. ಭಾರತದ ಸಾಮಾಜಿಕ ಹೋರಾಟದ ಪರಂಪರೆಯಲ್ಲಿ ಅವರದೇ ಒಂದು ಅನನ್ಯ ಮಾದರಿ. ಈ ಸಂಚಿಕೆಯ ಮುಖ್ಯಚರ್ಚೆಗೆ ಪೂರಕವಾಗಿ ಪತ್ರಕರ್ತಸಾಹಿತಿ ಟಿ.ಎಸ್.ಗೊರವರ ಧಾರವಾಡದಲ್ಲಿ ಹಿರೇಮಠ ಅವರನ್ನು ಮಾತನಾಡಿಸಿದ್ದಾರೆ.

ಟಿ.ಎಸ್.ಗೊರವರ

ರಾಜ್ಯ ಸರಕಾರ ಗುತ್ತಿಗೆದಾರರ ಹಿಡಿತದಲ್ಲಿದೆ ಎನ್ನುವ ಬಲವಾದ ಆರೋಪ ಕೇಳಿ ಬರ್ತಾ ಇದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?

ಕೆಲವರಾದ್ರು ಒಳ್ಳೆಯ ಗುತ್ತಿಗೆದಾರರು ಉಳಿದಿದ್ರು. ಅವರು ಕಾರ್ಯ ನಿರ್ವಹಿಸೋದು ಕಷ್ಟ ಆಗಿದೆ. ಗುತ್ತಿಗೆದಾರರ ಸಂಘ ಟೆಂಡರ್ ಪ್ರಕ್ರಿಯೆಯಲ್ಲಿ ಶೇ.40ರಷ್ಟು ಲಂಚಕೊಡಬೇಕಿದೆ ಅಂದ್ರೆ ಅವ್ರು ಹೆಂಗ ಕೆಲಸ ಮಾಡಬೇಕು. ಈ ಕುರಿತು ನೇರವಾಗಿ ಪ್ರಧಾನಮಂತ್ರಿಯವರಿಗೆ ದೂರು ನೀಡಿದ್ದಾರೆ. ಈವರೆಗೂ ಪ್ರಧಾನಿಯವರು ಸ್ಪಂದಿಸಿಲ್ಲ. ಸರಿಯಾದ ಉತ್ತರದಾಯಿತ್ವ ಇಲ್ಲದೇ ಹೋದರೆ ಹೀಗಾಗುತ್ತೆ. ಇವರಿಗೆ ಏನಾದ್ರು ಅನುಭವ ಇದೆಯಾ? ‘ನ ಖಾವೂಂಗಾ, ನ ಖಾನೆ ದೂಂಗ’ ಅಂತ ಹೇಳುವ ಪ್ರಧಾನಮಂತ್ರಿಗಳು ಇಂಥ ಒಂದು ಗಂಭೀರ ಪತ್ರ ಬಿಜೆಪಿ ರೂಲ್ ಮಾಡುವ ರಾಜ್ಯದಿಂದ ಬಂದಿದೆ ಅಂದ್ರಜನರಲಿ ಅದರ್ ವೈಸ್ ಈ ಹಿಂದೆ ನಮ್ಮ ರಾಜ್ಯ ಒಳ್ಳೆದಿತ್ತು. ಅದು ನಿಮಗೆಲ್ಲ ಗೊತ್ತಿದೆ. ಇನ್ನೂ ಕೂಡ ಸುಧಾರಣೆ ಮಾಡುವಂಥ ಸಾಕಷ್ಟು ಅವಕಾಶಗಳಿವೆ. …ಅಂಥ ಒಂದು ರಾಜ್ಯದಿಂದ ದೂರು ಬಂದಿದೆ ಅಂದ್ರ ತಕ್ಷಣ ಸ್ಪಂದಿಸಬೇಕೋ ಬೇಡ್ವೋ.

ಉತ್ತರಾನೂ ಇಲ್ಲ, ಏನೂ ಇಲ್ಲ. ಅದು ಬಿಟ್ಟು ಮೈನಿಂಗ್ ಮಾಫಿಯಾದ ಕಿಂಗ್ ಪಿನ್ ಗಾಲಿ ಜನಾರ್ದನರೆಡ್ಡಿ ಅವರ ಸೋದರನ ಚುನಾವಣೆ ಪ್ರಚಾರಕ್ಕೆ ಹೋಗ್ತಾರ. ಜನಾರ್ದನರೆಡ್ಡಿ ಅವ್ರು 40 ಸಾವಿರ ಕೋಟಿ ರೂಪಾಯಿ ಮಾಡಿದ್ದೆ ಅಂಥ ತಾವೇ ಹೇಳ್ತಾರ. ಇದು ಎಲ್ಲರಿಗೂ ಗೊತ್ತಿರೋ ಸಂಗತಿ. ಈ ಪ್ರಧಾನಮಂತ್ರಿ ಮರ್ಯಾದೆ ಬಿಟ್ಟು ಇವ್ರ ಬ್ರದರ್ ಸೋಮಶೇಖರ್ ರೆಡ್ಡಿ ಅವರ ಚುನಾವಣೆ ಪ್ರಚಾರಕ್ಕೆ ಹೋಗಿ ಮಾತಾಡ್ತಾರೆ. ಸೋಮಶೇಖರ್ ಎಂಥವರಂದ್ರೆ 60 ಕೋಟಿ ರೂಪಾಯಿ ಜಡ್ಜ್‍ಗೆ ಕೊಟ್ಟಿದ್ರು. ಆ ಜಡ್ಜ್‍ನೂ ಜೈಲಿಗೆ ಹೋದ್ರು. ಇನ್ನೊಬ್ಬ ಜಡ್ಜ್ ಅದರೊಳಗ ಇದ್ದ ಅವ್ರು ಆತ್ಮಹತ್ಯೆ ಮಾಡಿಕೊಂಡ್ರು. ಇಂಥ ಭ್ರಷ್ಟರ ಜೊತೆಗೆ ಪ್ರಧಾನಿ ನಿಲ್ತಾರೆ ಅಂದ್ರೆ ಏನು ಹೇಳಬೇಕು.

ಅಂದ್ರೆ ಪ್ರಧಾನಿಯವರಿಗೆ ಜನಕಾಳಜಿ ಇಲ್ಲ ಅಂತಿದಿರಿ…?

ಇವ್ರಿಗೆ ಏನಾದ್ರು ಜನರ ಕಾಳಜಿ ಇದೆ ಅಂತ ನಿಮಗೆ ಅನಿಸ್ತಿದೆಯಾ? ಡಿ ಮಾನಟೈಜೇಸನ್ ಮಾಡಿದ್ರು. ಅದರಿಂದ ಎಷ್ಟೊಂದು ಜನರ ಉದ್ಯೋಗ ಹೋಯ್ತು. ಬ್ಲಾಕ್ ಮನಿ ತರ್ತಿವಿ ಅಂದ್ರು, ನಕಲಿ ನೋಟ್ ಬ್ಯಾನ್ ಮಾಡ್ತಿವಿ ಅಂದ್ರುಯಾವುದೂ ಏನೂ ಆಗಲಿಲ್ಲ. ಅಂದ್ರ ಇವರು ಎಷ್ಟು ಅಜ್ಞಾನಿಗಳಿದ್ದಾರೆ, ಅನನುಭವಿಗಳಿದ್ದಾರೆ, ಇವ್ರ ಉದ್ದೇಶವಾದ್ರೂ ಏನು, ಯಾರಿಗೆ ಲಾಭ ಮಾಡ್ತಿದಾರೆ? ಜಿಎಸ್‍ಟಿ ತಂದ್ರು. ಅದೆಷ್ಟು ಗೊಂದಲಮಯ ಆಯ್ತು. ಏಕಾಏಕಿ ನಾಲ್ಕು ತಾಸು ಲಾಕಡೌನ್ ಮಾಡಿದ್ರು. ಲಕ್ಷ ಲಕ್ಷಗಟ್ಟಲೆ ವಲಸೆ ಕಾರ್ಮಿಕರು ಹೈವೇಯಲ್ಲಿ ನಡೆದು ತಮ್ಮ ಊರು ಸೇರಲು ಪ್ರಯಾಸ ಪಟ್ರು. ಕೆಲವರು ರೈಲ್ವೆ ಹಳಿಯಲ್ಲಿ ಮಲಗಿ ಸತ್ರು.

ಈ ಸರಕಾರದ ಎದೆ ಸೀಳಿ ನೋಡಿದ್ರ ಅಲ್ಲಿ ಸ್ವಲ್ಪಾನೂ ಜನರ ಬಗೆಗೆ ಕರುಣೆ ಕಾಣಿಸಲ್ಲ. ಪಾರ್ಲಿಮೆಂಟ್‍ನಲ್ಲಿ ಎಷ್ಟು ವಲಸೆ ಕಾರ್ಮಿಕರಿದಾರೆ ಅಂತ ಕೇಳಿದ್ರೆ ಗೊತ್ತಿಲ್ಲಂತಾರೆ, ಕೋವಿಡ್‍ನಲ್ಲಿ ಎಷ್ಟು ಜನ ಡಾಕ್ಟರ್ ಸತ್ತರುಅದೂ ಗೊತ್ತಿಲ್ಲ. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಿದಾರೆ. ಈ ಸರಕಾರ ಹೋಗಿ ಮತ್ತೊಂದು ಸರಕಾರ ಬಂದ್ರೆ ಆ ಡ್ಯಾಮೇಜ್ ಸರಿಪಡಿಸೋದಕ್ಕೆ ಬಹಳ ಸಮಯ ಹಿಡಿಯುತ್ತದೆ. ಇದರ ಬಗ್ಗೆ ನಮ್ಮ ಬಸವರಾಜ ಬೊಮ್ಮಾಯಿಯವರಿಗೆ ಐಡಿಯಾನೂ ಇಲ್ಲ, ಅವ್ರಿಗೆ ಅಂಥ ಕಠಿಣ ಬದ್ಧತೆನೂ ಇಲ್ಲ. ಅಶ್ವತ್ಥನಾರಾಯಣ ಅವ್ರೆಲ್ಲ ಹಾಳಾಗಿ ಹೋಗಿರುವ ನಮ್ಮ ಎಕಾನಮಿಯನ್ನು ಹೇಗೆ ಡಿಫೈನ್ ಮಾಡ್ತಾರೆ ನೋಡ್ತಾ ಇದಿರಲ್ಲ. ಕ್ರಿಸ್ತ ಶಿಲುಬೆಗೇರಿಸಿದಾಗ ಹೇಳ್ತಾರಲ್ಲ ಅವ್ರು ಏನು ಮಾಡ್ತಿದಾರೆ ಅದರ ಪರಿವೆ ಅವರಿಗೆ ಇಲ್ಲ ಅಂತಾ. ಹಾಗಾಗಿದೆ ಈಗಿನ ಪರಿಸ್ಥಿತಿ. ಜನರಿಗೆ ನ್ಯಾಯ ಸಿಗೋದು ಬಹಳ ಕಷ್ಟ ಇದೆ. ಆಡಳಿತ ನಡೆಸೋದಕ್ಕೆ ಇವ್ರು ಅಯೋಗ್ಯರಿದಾರೆ.

ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಆಡಳಿತ ವೈಖರಿಯನ್ನು ಹೇಗೆ ವ್ಯಾಖ್ಯಾನ ಮಾಡ್ತೀರಿ?

ಬೊಮ್ಮಾಯಿಯವರು ಚಾಣಾಕ್ಷತನದಿಂದ ಮಾತಾಡ್ತಾರೆ. ಜವಾಬ್ದಾರಿಯಿಂದ ಹೇಗೆ ನುಣುಚಿಕೊಳ್ಳಬೇಕು ಎನ್ನೋದು ಗೊತ್ತಿದೆ ಅವ್ರಿಗೆ. ಸಂಘ ಪರಿವಾರದ ಬಗೆಗೆ ಬಹಳ ಜಾಗೃತರಾಗಿರಬೇಕು ನಾವು. ಈಗ ನೋಡ್ರಿ, ಮತಾಂತರ ಕಾಯ್ದೆ ತಿದ್ದುಪಡಿ ಮಾಡಿದ್ರು. ಜನರ ಗಂಭೀರ, ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಭಾವನಾತ್ಮಕವಾಗಿ ಕೆರಳಿಸುವಂಥ ಇಂಥದ್ದು ಮಾಡ್ತಿದಾರೆ. ಅಗತ್ಯ ವಸ್ತುಗಳ ಬೆಲೆಗಳು ಏರ್ತಾ ಇವೆ. ಇದರ ಬಗೆಗೆ ಸರಿಯಾದ ಕ್ರಮ ಇಲ್ಲ. ಬಡ ರೈತರ ಬೆಳೆ ಹಾನಿ ಆಯ್ತು. ಇದು ಆಗಲಿಕ್ಕೆ ಹವಾಮಾನ ವೈಪರೀತ್ಯ ಕಾರಣ. ಮಾಧವ ಗಾಡ್ಗೀಳ್ ಕಮಿಷನ್ ರಿಪೋರ್ಟ್ ಆಯ್ತು, ಕಸ್ತೂರಿ ರಂಗನ್ ವರದಿ ಆಯ್ತು. ಇದರ ಬಗ್ಗೆ ಏನೂ ಕ್ರಮ ಇಲ್ಲ.

ಬಸವರಾಜ ಬೊಮ್ಮಾಯಿಯವರ ತಂದೆ ರಾಯಿಸ್ಟ್ ಆಗಿದ್ದವರು. ಅವ್ರು ರ್ಯಾಡಿಕಲ್ ಹ್ಯೂಮನಿಸ್ಟ್ ಸಬ್‍ಸ್ಕ್ರೈಬ್ ಮಾಡಿದವ್ರು. ಇವೊತ್ತಿಗೆ ಮಗ ಬಿಜೆಪಿಯಂಥ ಪಕ್ಷ ಸೇರಿದಾರೆ. ಇದಕ್ಕೆ ಹಿ ಮಸ್ಟ್ ಬಿ ಟರ್ನಿಂಗ್ ಆಫ್ ಇನ್ ಹಿಸ್ ಗ್ರೇವ್ ಅಂತಾರ. ನಾ ಹೇಳ್ತಿರೋದು ಅವ್ರು ತಂದೆಮಗ ಅಂತ ಅಷ್ಟೇ ಅಲ್ಲ. ಇಬ್ರೂ ರಾಜಕಾರಣಿಗಳು. ಅವ್ರು ಮುಖ್ಯಮಂತ್ರಿಯಾಗಿದ್ರು, ಇವ್ರೂ ಮುಖ್ಯಮಂತ್ರಿಯಾಗಿದಾರೆ. ಆದ್ರೆ ಬಸವರಾಜ ಅವ್ರು ಅದೇನೂ ಪರಿಕಲ್ಪನೇನೆ ಇಲ್ಲ ಅನ್ನುವ ಹಾಗೆ ವರ್ತನೆ ಮಾಡ್ತಿದಾರೆ.

ಬಿಜೆಪಿ ಸರಕಾರ ಆಡಳಿತಕ್ಕೆ ಬರಲು ಕಾಂಗ್ರೆಸ್ ವೈಫಲ್ಯವೂ ಕಾರಣವಲ್ಲವೇ?

ಹೌದು, ಬಿಜೆಪಿಯವರು ಅಧಿಕಾರಕ್ಕೆ ಬಂದ ಹಾದಿಯ ಬಗೆಗೆ ನಾವು ಎಂದೂ ಮರೆಯಬಾರದು. ಅವ್ರಿಗೆ ಬಹುಮತ ಇರಲಿಲ್ಲ. ನಮ್ಮ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಈ ಭೂಮಿಯನ್ನು ಹದ ಮಾಡಿತು. ಈ ಬಿಜೆಪಿ ಸರಕಾರ ಬಂದ ನಂತರ ಸಮಾಜದಲ್ಲಿ ನೈತಿಕತೆ, ಜವಾಬ್ದಾರಿ, ಪ್ರಜಾಪ್ರಭುತ್ವದ ಪರಿಸ್ಥಿತಿ ಅಧಃಪತನಕ್ಕೆ ಇಳಿತಿದೆ. 2012 ರಲ್ಲಿ ಅಕ್ರಮ ಗಣಿಗಾರಿಕೆ ಶಿಖರಪ್ರಾಯದಲ್ಲಿತ್ತು. ನಾವು ಆಗಸ್ಟ್ 9 ರಂದು ‘ಭ್ರಷ್ಟರೇ ಸಾರ್ವಜನಿಕ ಜೀವನ ಬಿಟ್ಟು ತೊಲಗಿ’ ಅಂತ ಹೋರಾಟ ಶುರು ಮಾಡಿದ್ವಿ. ಜನರ ಪ್ರತಿನಿಧಿಯಾಗಿ ಚುನಾಯಿತರಾದವರು ಸಂವಿಧಾನದ ಚೌಕಟ್ಟಿನಲ್ಲಿ ಜವಾಬ್ದಾರಿಯುತ ಆಡಳಿತ ನಡೆಸಿದರೆ ಎಲ್ಲರಿಗೂ ಒಳಿತು.

ಪ್ರಜಾಪ್ರಭುತ್ವ ಕುಸಿಯಲು ಬಹುಮುಖ್ಯ ಕಾರಣಗಳು ಯಾವುವು?

ಇದಕ್ಕೆ ಹಲವಾರು ಮುಖ್ಯಕಾರಣಗಳಿವೆ. ಬಹುತೇಕ ರಾಜಕಾರಣಿಗಳದ್ದು ಕ್ರಿಮಿನಲ್ ಹಿನ್ನೆಲೆ ಇದೆ. ಅವರ ಕ್ರಿಮಿನಲ್ ವರ್ತನೆಗಳು ಕೂಡ ಜಾಸ್ತಿ ಆಗ್ತಿವೆ. ಈ ಮೊದಲು ಶೇ.20 ರಷ್ಟು ಕ್ರಿಮಿನಲ್ ಹಿನ್ನೆಲೆಯವರು ರಾಜಕೀಯದಲ್ಲಿದ್ದರು. ಈಗ ಅದು ಶೇ.40ಕ್ಕಿಂತ ಜಾಸ್ತಿ ಆಗಿದೆ. ಒಂದು ಕಡೆಗೆ ಕ್ರಿಮಿನಲ್ ಹಿನ್ನೆಲೆ ಇದೆ, ಮತ್ತೊಂದು ಕಡೆ ಅವ್ರು ಕೋಟ್ಯಧೀಶರಾಗ್ತಿದಾರೆ. ಜನಸಾಮಾನ್ಯರು ಚುನಾವಣೆಯ ವೆಚ್ಚ ಭರಿಸುವ ಸ್ಥಿತಿ ಇವತ್ತು ಇಲ್ಲ. ಯಾರಾದರೂ ಸಾರ್ವಜನಿಕ ಸೇವೆ ಮಾಡಬೇಕು ಎನ್ನುವ ಸದುದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಚುನಾಯಿತರಾಗುವುದು ಬಹಳ ಕಷ್ಟ ಇದೆ. ರಾಜಕಾರಣಿಗಳು ತಾವೂ ಭ್ರಷ್ಟರಾಗುತ್ತ ಜನರನ್ನೂ ಭ್ರಷ್ಟ್ರರನ್ನಾಗಿಸ್ತಿದಾರೆ.

2014ರಲ್ಲಿ ಮೋದಿಯವರು  ಅಂತ ಹೇಳುತ್ತಲೇ ಪ್ರಧಾನ ಮಂತ್ರಿಯಾದರು. ಕಾಂಗ್ರೆಸ್  ಸರಕಾರ, ಅದು ಕುಟುಂಬ ರಾಜಕಾರಣ ಮಾಡ್ತಿದೆ ಅಂತ ಲೇವಡಿ ಮಾಡಿದ್ರು. ಆದ್ರೆ ಇವತ್ತು ನೋಡಿದ್ರೆ ಬಿಜೆಪಿಗೂ ಬೇರೆ ಪಕ್ಷಗಳಿಗೂ ಹೋಲಿಸಿದ್ರೆ ಏನೂ ಅಂತಾ ವ್ಯತ್ಯಾಸ ಕಾಣಿಸ್ತಿಲ್ಲ. ಕ್ಷಮಿಸಬೇಕು ನನ್ನ ಶಬ್ದಗಳನ್ನು, ಅವ್ರಿಗೆ ಮೂರು ಶಬ್ದಗಳನ್ನು ಬಳಸ್ತಿನಿ ನಾನು.  ಅಂದ್ರೆ ಅಹಂಕಾರ ಇದೆ ಬಿಜೆಪಿಯವರಿಗೆ.  ಜನರ ಬಗ್ಗೆ, ನೋವಾದವರ ಬಗ್ಗೆ ಏನೂ ಕಳಕಳಿ ಇಲ್ಲ. ಮೂರನೆಯದ್ದು. ಅವ್ರಿಗೆ ಉತ್ಕøಷ್ಟ ಆಡಳಿತವನ್ನು ಕೊಡಲಿಕ್ಕೆ ಅವ್ರ ದೃಷ್ಟಿಕೋನ, ಅವ್ರ ಮಾನಸಿಕತೆ ಸರಿ ಇಲ್ಲ.

ನಾನು ಈ ಸಂಘಪರಿವಾರದ ಸಿದ್ಧಾಂತಕ್ಕೆ ಏನು ಅಂತೀನಿ ಅಂತಂದ್ರೆ . ನಮ್ಮ ದೇಶವನ್ನು ಮುಂದೆ ಒಯ್ಯುವ ಬದಲು ಅವ್ರು ಹಿಂದೆ ಒಯ್ಯಲು ನೋಡ್ತಿದಾರೆ. ಇದು ಬಹಳ ಹಾನಿಕಾರಕ. ಬಡವ ಬಲ್ಲಿದರ ಅಂತರ, ಅಸಮಾನತೆ ಜಾಸ್ತಿ ಆಗ್ತಿದೆ. ಜನರ ಆರೋಗ್ಯ, ಶಿಕ್ಷಣ, ಆದಾಯದ ಬಗೆಗೆ ಸರಕಾರ ಗಮನ ಹರಿಸಬೇಕು. ಈಗ ನೋಡ್ರಿ ಸಾರ್ವಜನಿಕ ಹೆಲ್ತ್ ಸಿಸ್ಟಮ್ ಏನಿದೆ ಕಂಪ್ಲೀಟ್ ಹದಗೆಟ್ಟಿದೆ. ಪಾರ್ಲಿಮೆಂಟರ್ ವರದಿ ಕೊಟ್ಟಾಗಲೂ, ತಜ್ಞರು ಹೇಳಿದ್ರೂ ಕೂಡ ಪಶ್ಚಿಮ ಬಂಗಾಳ ಚುನಾವಣೆ ಪ್ರಚಾರದಲ್ಲಿ ತೊಡಗಿದ್ರು. ಅಲ್ಲಿ ಬಂದ ಜನ ಮಾಸ್ಕ್ ಹಾಕಿರಲಿಲ್ಲ, ಪ್ರಧಾನಿಯವ್ರು ಹಾಕಿರಲಿಲ್ಲ. ಕೊರೊನ ಹೇಗೆ ನಾಗಾಲೋಟದಲ್ಲಿ ಹಬ್ಬಿತು ಅನ್ನೋದು ಎಲ್ಲರಿಗೂ ಗೊತ್ತಿದೆ. ಇಂಥ ಸಂದರ್ಭದಲ್ಲಿ ಪ್ರಧಾನಿಗಳಿಗೆ ಜನರ ಬಗೆಗೆ ಕಾಳಜಿ ಬೇಕು. ಅದು ಬಿಟ್ಟು ನಮ್ಮ ಪ್ರಧಾನಿಮಂತ್ರಿ ವ್ಯಾಕ್ಷಿನೇಷನ್‍ನನ್ನು ಖಾಸಗೀಕರಣ ಮಾಡೋಕೆ ಹೊರಟಿದ್ರು.

ಮೋದಿ ನಂಬರ್ ಒನ್ ಪ್ರಧಾನಮಂತ್ರಿ ಅಂತಾರಲ್ಲ…?

ನೋಡ್ರಿ ಅವ್ರ ಆಡಳಿತವನ್ನು ಗಮನಿಸಿದ್ರೆ ಅವ್ರು ಎಂಥವರು ಅಂತ ಗೊತ್ತಾಗುತ್ತೆ. ರೈತರ ವಿಷಯದಲ್ಲಿ ಏನಾಯ್ತು ಎಲ್ಲರಿಗೂ ಗೊತ್ತಿದೆ. ಉತ್ಸಾಹದಿಂದ ರೈತ ವಿರೋಧಿಯಾದ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ರು. ಇದರಿಂದ ಕೇಂದ್ರ ಸರಕಾರದ ರೈತಪರ ಕಾಳಜಿ ಎಷ್ಟಿದೆ ಅಂತಾ ಗೊತ್ತಾಗುತ್ತೆ. ಅಲ್ರೀ, ಸಣ್ಣ ಹುಡುಗರಿಗೂ ಕೂಡ ಇದು ಸರಿಯಲ್ಲ ಅಂತ ತಿಳಿಯುತ್ತೆ. ಆದ್ರೆ ಆಡಳಿತ ನಡೆಸೋ ಇವ್ರಿಗೆ ಗೊತ್ತಾಗೋದಿಲ್ಲ ಅಂದ್ರೆ ಏನ್ ಹೇಳೋದು. ಒಂದು ವರ್ಷದ ರೈತರ ಐತಿಹಾಸಿಕ ಹೋರಾಟದ ನಂತರ ರೈತರ ಬೇಡಿಕೆಗೆ ಮಣಿಯಬೇಕಾದ ಅನಿವಾರ್ಯತೆ ಬಂದಾಗಲೂ ರೈತರಿಗೆ ಈ ಕಾಯ್ದೆಗಳ ಉಪಯೋಗ ಎಷ್ಟಿದೆ ಎಂಬುದನ್ನು ಮನವರಿಕೆ ಮಾಡಲು ವಿಫಲನಾದೆ ಅಂತಾರೆ ಅಂದ್ರೆ ಇದರಷ್ಟು ಅಸತ್ಯ ಎಲ್ಲಿದೆ?

ಆ ರೈತರನ್ನು ಪಾಕಿಸ್ತಾನಿಗಳು, ನಕ್ಸಲೈಟ್ ಅಂತೆಲ್ಲ ಜರಿದರು. ಕಂದಕಗಳನ್ನು ನಿರ್ಮಾಣ ಮಾಡಿ, ರಸ್ತೆಯಲ್ಲಿ ಮೊಳೆಗಳನ್ನು ಜಡಿದು ದೇಶದ ವೈರಿಗಳಂತೆ ಬಿಂಬಿಸಿದ್ರು. ದೇಶದ ತುಂಬೆಲ್ಲಾ ಇನ್ನೂ ಡೆಮಾಕ್ರಟಿಕ್ ಫ್ರೇಮ್ ವರ್ಕ್ ಇರೋದ್ರಿಂದ ಜನ ವ್ಯಾಪಕ ಹೋರಾಟ ಮಾಡಿದ್ದರಿಂದ ಆ ಕಾಯ್ದೆಗಳನ್ನು ವಾಪಸ್ ತಗೋಬೇಕಾಯ್ತು. ಯಾವಾಗಲೂ ಒಳ್ಳೆಯ ಸರಕಾರ ಅನ್ನಿಸಿಕೊಳ್ಳಬೇಕಾದ್ರೆ ನಿಯತ್ತು ಇರಬೇಕು. ಪಾರದರ್ಶಕತೆ ಇರಬೇಕು. ಈ ಸರಕಾರಕ್ಕೆ ಅದು ಯಾವುದೂ ಇಲ್ಲ.

ಸ್ವಾತಂತ್ರ್ಯೋತ್ತರ ಭಾರತದೊಳಗ ನಡೆದ ದೊಡ್ಡ ಮಟ್ಟದ ರೈತ ಸತ್ಯಾಗ್ರಹವಿದು. ಅದನ್ನು ಗೌರವಿಸಿ ಅವರ ಜೊತೆ ಮಾತುಕತೆ ಮಾಡೋದು ಬಿಟ್ಟು ಒಂದು ವರ್ಷದವರೆಗೂ ಸುಮ್ಮನಿದ್ದರು. ಯಾವಾಗ ಉತ್ತರ ಪ್ರದೇಶ, ಪಂಜಾಬ್ ಮೊದಲಾದ ಕಡೆ ಚುನಾವಣೆಗಳು ಬಂದ್ವು, ಯಾವಾಗ ಇವರು ಸೋಲ್ತಾರೆ ಅನ್ನೋದು ಗೋಡೆ ಮೇಲಿನ ಬರಹದಂತೆ ಕ್ಲಿಯರ್ ಆಯ್ತು ಅವಾಗ ಕಾಯ್ದೆಗಳನ್ನು ಹಿಂಪಡೆದರು. ವಿಚಿತ್ರ ಅಂದರೆ ದಿಢೀರ್‍ನೆ ಪ್ರಧಾನಿ ಬಂದು ನಾವು ನಿರ್ಧಾರ ಮಾಡಿದೆವೆ, ಈ ಮೂರು ಕಾಯ್ದೆಗಳನ್ನು ವಾಪಸ್ ಪಡಿತೇವೆ ಅಂತ ಹೇಳಿದ್ರು. ಅಲ್ಲಾರೀ, ಪ್ರಜಾಪ್ರಭುತ್ವ ಇದು. ಕ್ಯಾಬಿನೇಟ್ ಮೀಟಿಂಗ್ ಕರೀಬೇಕು. ಅಲ್ಲಿ ಚರ್ಚೆ ಆಗಬೇಕು. ಅವೆಲ್ಲ ಬಿಟ್ಟು ಡಿಕ್ಟೇಟರ್ ಹಾಗೆ ಅನೌನ್ಸ್ ಮಾಡೋದು ಇದೆಯಲ್ಲಾ ಅದು ಅವರ ಕಾರ್ಯವೈಖರಿ ತೋರಿಸುತ್ತೆ. ಇದು ದುರದೃಷ್ಟಕರ. ಇವ್ರೆಲ್ಲಾ ಪ್ರಜಾಪ್ರಭುತ್ವವನ್ನು ನಿಶ್ಶಕ್ತಿಗೊಳಿಸ್ತಿದಾರೆ.

ಬೇರೆ ಪಕ್ಷದ ಸರಕಾರ ಆಡಳಿತದಲ್ಲಿದ್ದಿದ್ರೆ ರೈತರ ಜೊತೆ ಇಷ್ಟೊಂದು ಕಟುವಾಗಿ ನಡೆದುಕೊಳ್ಳುತ್ತಿರಲಿಲ್ಲ ಅಂತ ಅನ್ನಿಸುತ್ತಾ?

ಇದಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಏನಾದ್ರು ರೈತರಿಗೆ ಒಳಿತು ಮಾಡಬಹುದಿತ್ತು ಎನ್ನುವ ಭ್ರಮೆ ನಮ್ಮೊಳಗೆ ಬೇಡ. ಇವೇ ಮೂರು ಕಾಯ್ದೆಗಳನ್ನು ಕಾಂಗ್ರೆಸ್‍ನವರೂ ತರುವವರಿದ್ದರು. 1991 ರೊಳಗೆ ಹೊಸ ಆರ್ಥಿಕ ನೀತಿ ಬಂದಾಗ ಅದೆಷ್ಟೋ ರೈತರ ಆತ್ಮಹತ್ಯೆಗಳಾದವು

ಈ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಏನು ಮಾಡಬಹುದು?

ನಾನು ಇದನ್ನು ಬಹಳ ಗಂಭೀರವಾಗಿ ಹೇಳ್ತಿದಿನಿ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಹೈಯಸ್ಟ್ ರಿಸ್ಪಾನ್ಸಿಬಿಲಿಟಿ ಯಾವಾಗಲೂ ನಾಗರಿಕರ ಮೇಲಿರುತ್ತೆ. ಹೇಗೆ 1977 ರಲ್ಲಿ ಇಂದಿರಾಗಾಂಧಿ ಸರಕಾರವನ್ನು ಕೆಳಗಿಳಿಸಿದ್ರು ಅದನ್ನ ಎಲ್ಲರೂ ನೆನಪಿಡಬೇಕು. ಹಾಗೆ ಜನ ಜಾಗೃತರಾಗಬೇಕು. ಇದು ಹೇಳೋದು ಸರಳ. ಆದರೆ ರೈತರು ಇದನ್ನು ತಾಳ್ಮೆಯಿಂದ ಹೋರಾಟ ಮಾಡಿ ಯಶಸ್ವಿಗೊಳಿಸಿದ್ದಾರೆ. ಇದು ದೊಡ್ಡ ಇತಿಹಾಸ. ಈ ದೇಶದ ಆತ್ಮ ಇನ್ನೂ ಜಾಗೃತವಾಗಿದೆ. ನಮ್ಮ ರೈತರ ಹಾಗೆ ದಲಿತರು, ಮಹಿಳೆಯರು, ಕಾರ್ಮಿಕರು, ಯುವಜನರು ಎಲ್ಲ ಸೇರಿ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಶಕ್ತಿಯುತ ಮಾಡಬೇಕು. ಶರಣರು, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಭಗತ್‍ಸಿಂಗ್ ಈ ದೇಶದ ಜನರಲ್ಲಿ ಏನು ನೈತಿಕತೆಯನ್ನು ಬೆಳೆಸಿದ್ರು ಅದನ್ನು ನಮ್ಮ ಪ್ರತಿಯೊಂದು ಹೋರಾಟದಲ್ಲೂ ಮಾಡಬೇಕಿದೆ.

ಇದರಲ್ಲಿ ಮಾಧ್ಯಮಗಳ ಪಾತ್ರ ಇಲ್ಲವೇ…?

ಮಾಧ್ಯಮಗಳ ಅತೀ ಮಹತ್ವದ ಕೆಲಸವೆಂದರೆ ಸತ್ಯವನ್ನು ನಿರ್ಭೀತಿಯಿಂದ, ಯಾವುದೇ ಆಕರ್ಷಣೆಗೆ ಒಳಗಾಗದಂತೆ ಮಂಡಿಸುವುದು. ಇವತ್ತು ಮುಖ್ಯವಾಹಿನಿಯ ಮಾಧ್ಯಮಗಳು ಇದನ್ನ ಮಾಡ್ತಿಲ್ಲ. ಇವು ಅನೈತಿಕತೆಯ ಕಡೆಗೆ ಚಲಿಸ್ತಿವೆ. ಕೆಲವು ಮಾಧ್ಯಮಗಳು ರಾಜಕಾರಣಿಗಳ ಒಡೆತನದಲ್ಲಿವೆ. ಯಾವಾಗ ಮಾಧ್ಯಮ ಹಣವಂತರ ಕೈಗೊಂಬೆ ಆಗುತ್ತದೋ ಆಗ ಅವರು ತಮ್ಮ ಆಲೋಚನೆಗಳನ್ನು ಪ್ರಮೋಟ್ ಮಾಡ್ತಾರೆ. ಕೆಲವು ಮಾಧ್ಯಮಗಳು ಇವಕ್ಕೆ ಹೊರತಾಗಿವೆ. ಅವ್ರು ಜನಹಿತ ಇಟ್ಕೊಂಡು ಕೆಲಸ ಮಾಡ್ತಿದಾರೆ. ಮಾಧ್ಯಮಗಳು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಅದು ಅವರ ಜವಾಬ್ದಾರಿ ಕೂಡ.

ಈ ಮಾಧ್ಯಮಗಳು, ಆಡಳಿತ ವ್ಯವಸ್ಥೆಯಂತೆ ನಮ್ಮ ಪರಿಸರ ಕೂಡ ವಿನಾಶದ ಕಡೆ ಚಲಿಸ್ತಿದೆ

ಹೌದು, ಎಲ್ಲರಿಗೂ ವಿಶೇಷವಾಗಿ ಬಡವರಿಗೆ, ಹಿಂದುಳಿದವರಿಗೆ ಶಿಕ್ಷಣ, ಆರೋಗ್ಯ, ಆದಾಯದ ಜೊತೆಗೆ ಒಳ್ಳೆಯ ಪರಿಸರ ಬೇಕು. ಇವತ್ತು ಪರಿಸರ ಬಹಳಷ್ಟು ಹಾಳಾಗಿದೆ. ಈ ರಾಜಕಾರಣಿಗಳು ಶರಣರು, ಸೂಫಿ ಸಂತರು ಇವರೆಲ್ಲ ಹೇಗೆ ಜವಾಬ್ದಾರಿಯಿಂದ ಜೀವನ ನಡೆಸಿದ್ರು ಅನ್ನೋದನ್ನು ನೋಡಬೇಕು. ಆಗ ದುರಾಸೆ ಬಿಡೋಕೆ ಸಾಧ್ಯ ಇದೆ. ಇಲ್ಲವಾದರೆ ಈ ದುರಾಸೆಯಿಂದ ಪರಿಸರ ಹಾಳಾಗುತ್ತದೆ. ನೋಡ್ತಾ ಇದಿರಿ, ಕ್ಲೈಮೇಟ್ ಹೇಗೆ ಬದಲಾಗ್ತಿದೆ. ನಮ್ಮ ಜೀವನಶೈಲಿಗೂ ಮತ್ತು ಈ ಕ್ಲೈಮೇಟ್ ಬದಲಾಗ್ತಿರೋದಕ್ಕೂ ನೇರ ಸಂಬಂಧ ಇದೆ. ನಮ್ಮ ಸಮಾಜದಲ್ಲಿ ಒಳ್ಳೆಯ ಪರಿಕಲ್ಪನೆ ಇಲ್ಲ. ಇಂಥ ಸಮಾಜ ಹೇಗೆ ಆರೋಗ್ಯಕರವಾಗಿರಬಲ್ಲದು? ಆದರ್ಶ ಸಮಾಜವಾಗಬಲ್ಲದು? ನೋಡ್ರಿ, ಸಂಸ್ಕøತಿ, ಸಮಾಜ ಮತ್ತು ಪ್ರಕೃತಿ ಇವುಗಳ ನಡುವೆ ಸಮನ್ವಯ ಬೇಕು. ನಾವು ಸಾದಾ ಜೀವನಕ್ಕೆ ಹೋಗಲೇಬೇಕು.

ಹೋರಾಟ, ಚಳವಳಿಗಳಿಗೆ ಇದು ಕಾಲವಲ್ಲ ಎನ್ನುವ ಅಭಿಪ್ರಾಯ ಚಾಲ್ತಿ ಇದೆ…?

ನಮ್ಮಲ್ಲಿ ಪ್ರವಚನಕ್ಕಿಂತ ಮಾಡುವ ಕೆಲಸಗಳು ಮುಂಚೂಣಿಗೆ ಬರಬೇಕು. ಗಾಂಧಿ ಹೇಳ್ತಿದ್ರಲಾ ಪರಿವರ್ತನೆ ಅನ್ನೋದು ನಮ್ಮಿಂದಲೇ ಶುರುವಾಗಬೇಕು. ಸೋ ನನ್ನ ಅಭಿಪ್ರಾಯದೊಳಗೆ ಈ ನೆಲೆಯಲ್ಲಿ ಸಾಕಷ್ಟು ಜನ ಕಾರ್ಯಪ್ರವೃತ್ತರಾಗಿದಾರೆ. ಹೋರಾಟದೊಳಗೆ ನೀವು ಬಂದ್ರಿ ಅಂದ್ರ ಅದೊಂದು ದೊಡ್ಡ ವಿಶ್ವವಿದ್ಯಾಲಯ. ಮಾರ್ಟಿನ್ ಲೂಥರ್ ಕಿಂಗ್ ಹೋರಾಟ ಮಾಡದಿದ್ರ ಅಮೆರಿಕದಲ್ಲಿ ಬರಾಕ್ ಓಬಾಮಾ ಎಂದೂ ಅಧ್ಯಕ್ಷ ಆಗ್ತಿರಲಿಲ್ಲ. 1984 ದಿಂದ ನಾವು ಇಲ್ಲಿ ಹೋರಾಟ ಮಾಡ್ತಿದಿವಿ. ಎಲ್ಲದರೊಳಗೂ ಯಶಸ್ವಿ ಆಗಿದ್ದಿವಿ. 13 ವರ್ಷ ಹಳ್ಳಿಯೊಳಗ ಜನರ ಜೊತೆ ಶಾಲೆಯೊಳಗ ಮಲಗಿ, ಅವರ ನಲಿವು, ಕಷ್ಟ, ಸುಖದೊಳಗ ಭಾಗಿ ಆಗಿದಿವಿ. ಆಗ ಜನ ನಮ್ಮ ಜೊತೆಗೆ ಸರಿಯಾಗಿ ಸ್ಪಂದಿಸಿದಾರೆ.

ಆದ್ರೆ ಬಹುತೇಕರು ಭಾಷಣ ಮಾಡ್ತಾರೆ, ಪುಸ್ತಕ ಬರೀತಾರೆ. ಜನರ ಜೊತೆ ಇರೋದಿಲ್ಲ. ಶರಣರು ಹೇಳ್ತಾರಲ್ಲ ನಿಮ್ಮ ನುಡಿಗೆ ಬೆಲೆ ಬರಬೇಕಾದ್ರ ನಡೆಯೊಳಗೂ ಸರಿ ಇರಬೇಕು. ಮೋದಿಯವರಿಗೆ ಏನಾದ್ರು ಅವನತಿ ಬರೋದು ಅವರ ನಡೆ, ನುಡಿ ಬೇರೆ ಇರುವ ಕಾರಣಕ್ಕೆ. ಹೋರಾಟದಲ್ಲಿ ಕಟಿಬದ್ಧತೆ ಬೇಕಾಗುತ್ತದೆ. ನಮ್ಮ ದೇಶದಲ್ಲಿ ಈಗ ಪ್ರಬಲ ಆಂದೋಲನ ಆಗಬೇಕು. ಇಲ್ಲದಿದ್ರೆ ನಮ್ಮ ದೇಶಕ್ಕೆ ಅಂಧಕಾರ ಕವಿಯುತ್ತೆ.

ನೀವು ರಾಜಕಾರಣಿಗಳಿಗೆ ಏನನ್ನು ಹೇಳ ಬಯಸ್ತೀರಿ?

ರಾಜಕಾರಣಿಗಳಿಗೆ ನಾನು ಹೇಳೋದು, ನೀವು ಮೊದಲು ಯಾರು? ಅನ್ನೋದನ್ನು ತಿಳ್ಕೊಳ್ರಿ. ಯಾವ ಜನಾನೂ ನಿಮ್ಮ ಮನೆಗೆ ಬಂದು ಎಂಪಿ ಆಗ್ರಿ, ಎಂಎಲ್‍ಎ ಆಗ್ರಿ ಅಂತ ಹೇಳಿಲ್ಲ. ನಿಮ್ಮ ಒಳ್ಳೆಯತನವನ್ನು ಉಪ್ಪು ಖಾರ ಹಚ್ಚಿ ನೆಕ್ಕಬೇಕಾ ನಾವು? ನಿಮ್ಮ ಮಾತು, ಕಾರ್ಯ ಒಂದಾಗಿರಲಿ. ನಿಮ್ಮ ಪಕ್ಷವನ್ನು ಮತ್ತೊಮ್ಮೆ ಡೆಮಾಕ್ರಟಿಕ್ ಮಾಡಿ, ಅಲ್ಲಿ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ತಂದು ಯಾರು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡ್ತಿದಾರೆ ಅಂತವರಿಗೆ ಅವಕಾಶ ಕೊಡ್ರಿ. ಇದು ಸಾಧ್ಯವಾಗೋದಾದ್ರೆ ನಿಮ್ಮ ಪಕ್ಷದಲ್ಲಿ ಇರ್ರಿ. ಇಲ್ಲ ಅಂದ್ರೆ ಪಕ್ಷ ಬಿಟ್ಟು ಹೊರ ಬರ್ರಿ. ನಮ್ಮಂಥವರಿದ್ದಿವಿ.

ಈ ದೇಶದ ಭವಿಷ್ಯ ನಿಂತಿರೋದು ಬರೀ ಹೋರಾಟಗಾರರಿಂದ ಅಷ್ಟೇ ಇಲ್ಲ. ಸಂವಿಧಾನದ ಮೌಲ್ಯಗಳನ್ನು ಜಾರಿಗೊಳಿಸಲು ರಾಜಕಾರಣಿಗಳ ಪಾತ್ರ ಬಹಳ ಮಹತ್ವದ್ದಿದೆ. ಸಾದಾ ಜೀವನ ಮಾಡ್ಕೊಂಡು ಜನರ ಸೇವೆ ಕಡೆ ನಡೆಯಬೇಕು. ನನ್ನ ಕಡೆಯಿಂದ ಇನ್ನೊಂದು ರೆಕಮೆಂಡೇಶನ್ ಇದೆ. ಸಾಕ್ರೇಟಿಸ್ ಎರಡು ಸಾವಿರದ ಐದನೂರು ವರ್ಷಗಳ ಹಿಂದೆ ಬರೆದ ರಿಪಬ್ಲಿಕ್ ಅಂತ ಒಂದು ಪುಸ್ತಕ ಇದೆ. ಯಾವ ರೀತಿ ಆಡಳಿತ ಇರಬೇಕು, ಆಡಳಿತ ನಡೆಸುವವರಿಗೆ ಅತೀ ಕಡಿಮೆ ಸಂಪತ್ತು ಇರಬೇಕು, ಅವರ ಜೀವನ ಪಾರದರ್ಶಕವಾಗಿರಬೇಕು, ಸಾರ್ವಜನಿಕ ವ್ಯಕ್ತಿಗಿರಬೇಕಾದ ಗುಣಗಳು, ನ್ಯಾಯದ ಕಡೆ ಹೇಗೆ ನಡೆಯಬೇಕು ಅನ್ನೋದನ್ನು ಆ ಪುಸ್ತಕದ ವಿಚಾರಗಳು ಮನವರಿಕೆ ಮಾಡ್ತಾವೆ. ಇವುಗಳನ್ನು ನಮ್ಮ ರಾಜಕಾರಣಿಗಳು ಅಳವಡಿಸಿಕೊಂಡರೆ ಒಂದು ಹೊಸ ರಾಜಕೀಯದ ಸೂರ್ಯೋದಯ ಆಗಬಲ್ಲದು.

Leave a Reply

Your email address will not be published.