ಆರೋಗ್ಯ ಮಂತ್ರಿಯ ಅಗಾಧ ಭ್ರಷ್ಟಾಚಾರ!

ಕೋತಿ ತಾನು ಕೆಟ್ಟಿದ್ದಲ್ಲದೆ, ವನ್ನವನ್ನೆಲ್ಲಾ ಕೆಡಿಸಿತು ಎಂಬ ಗಾದೆ ಮಾತಿದೆ. ಈ ಸುಧಾಕರ್ ತನ್ನ ಜೊತೆಗೆ ಎರಡೂ ಇಲಾಖೆಗಳ ಅನೇಕ ಅಧಿಕಾರಿಗಳನ್ನು ನಿರ್ದೇಶಕರನ್ನು, ಪ್ರಾಧ್ಯಾಪಕರನ್ನು, ಸಹಪ್ರಾಧ್ಯಾಪಕರನ್ನು ಸಿಬ್ಬಂದಿಯನ್ನು ಭ್ರಷ್ಟಗೊಳಿಸುತ್ತಿದ್ದಾರೆ.

ಆರ್.ಪಿ.ವೆಂಕಟೇಶಮೂರ್ತಿ

ನನ್ನ ಪರಿಚಿತ ಕುಟುಂಬದವರ ಮಗ ಹಾಸನದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ, ಬೆಂಗಳೂರಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ, ಈ ಪೋಷಕರು ನನ್ನ ಬಳಿ ಬಂದು ಹಾಸನ ಜಿಲ್ಲೆಯ ಯಾವುದಾದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಕೊಡಿಸಲು ಸಾಧ್ಯವೇ ಎಂದು ಕೇಳಿದ್ದರು. ಆರೋಗ್ಯ ಇಲಾಖೆಯ ಕೆಲವು ಅಧಿಕಾರಿಗಳನ್ನು ವಿಚಾರಿಸಿದಾಗ ತಾಲ್ಲೂಕು ಆಸ್ಪತ್ರೆಯೊಂದರಲ್ಲಿ ಅವಕಾಶ ಮಾಡಿಕೊಡಬಹುದೆಂದು ಹೇಳಿದ್ದರು.

ಈ ವಿದ್ಯಾರ್ಥಿಯ ಬಗ್ಗೆ ನನಗೆ ಗೊತ್ತಿತ್ತು. ಖಾಸಗಿಯಾಗಿ ವೃತ್ತಿ ಆರಂಭಿಸಿದರೂ, ತೀರಾ ಕಡಿಮೆ ಶುಲ್ಕದಲ್ಲಿ ಸೇವೆ ಸಲ್ಲಿಸುವುದಾಗಿ ಹೇಳುತ್ತಿದ್ದ. ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದಾಗ, ತಾತ್ಕಾಲಿಕ ಹುದ್ದೆಯಲ್ಲಿ ನೇಮಕ ಮಾಡಿಕೊಂಡವರನ್ನು ಒಂದೇ ವರ್ಷದಲ್ಲಿ ತೆಗೆದು ಹಣ ಕೊಟ್ಟವರನ್ನು ಖಾಯಂ ಆಗಿ ನೇಮಕ ಮಾಡಲಾಗುತ್ತದೆ ಎಂದು ಈ ಯುವ ವೈದ್ಯನಿಗೆ ಹೇಳಿದರಂತೆ. ಒಂದು ಹುದ್ದೆಗೆ 30 ರಿಂದ 50 ಲಕ್ಷ ರೂ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದೂ ಆತನಿಗೆ ಮಾಹಿತಿ ಸಿಕ್ಕಿದೆ. ಮಗ ಹಾಗೂ ಮಗಳ ವಿದ್ಯಾಭ್ಯಾಸ ಹಾಗೂ ಇಬ್ಬರ ಮದುವೆಗಾಗಿ ಈ ಕುಟುಂಬದವರು ಅಪಾರ ಹಣ ಖರ್ಚು ಮಾಡಿಕೊಂಡಿದ್ದರು. ಸಾಕಷ್ಟು ಸಾಲವನ್ನೂ ಪಡೆದಿದ್ದರು. ಇನ್ನು ಕೆಲಸ ಪಡೆಯಲೂ ಹಣ ಹೊಂದಿಸಲು ಸಾಧ್ಯವೇ ಇಲ್ಲ ಎಂದು ಪೋಷಕರು ಕೈ ಚೆಲ್ಲಿದಾಗ ಈ ಯುವ ವೈದ್ಯ ಹಾಸನದಲ್ಲಿ ಹೊಸದಾಗಿ ಆರಂಭಗೊಂಡ ಖಾಸಗಿ ಆಸ್ಪತ್ರೆಯೊಂದರನ್ನು ಸೇರಿಕೊಂಡಿದ್ದಾನೆ.

ಇದೇ ಯುವಕನ ಮಿತ್ರ ಸ್ನಾತಕೋತ್ತರ ಪದವಿ ಪಡೆದವ, ಈ ಪೋಷಕರ ಬಳಿ ಬಂದು ಖಾಸಗಿ ಲೇವಾದೇವಿದಾರರಿಂದ ತನಗೆ 5 ಲಕ್ಷ ರೂ ಗಳನ್ನು ಸಾಲವಾಗಿ ಕೊಡಿಸಬೇಕೆಂದು ದುಂಬಾಲು ಬಿದ್ದ. ಇಷ್ಟೊಂದು ಹಣ ಏಕೆಂದು ವಿಚಾರಿಸಿದಾಗ, ಮೆಡಿಕಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತನ್ನನ್ನು ಆಯ್ಕೆ ಮಾಡಿರುವುದಾಗಿಯೂ ಸಚಿವರ ಕಡೆಯವರು 30 ಲಕ್ಷ ರೂ. ಡಿಮಾಂಡ್ ಮಾಡಿದ್ದಾರೆಂದೂ, ಬಹಳ ಚೌಕಾಶಿ ಮಾಡಿದ ನಂತರ 15 ಲಕ್ಷ ರೂ ಗೆ ತೀರ್ಮಾನ ಆಯಿತೆಂದು ಹೇಳಿಕೊಂಡ. ಹಾಸನ ಜಿಲ್ಲೆಯ ಸಾಹಿತಿಯೊಬ್ಬರು 50 ಲಕ್ಷ ರೂ ಕೊಟ್ಟು ಮಗಳು ಹಾಗೂ ಅಳಿಯನಿಗೆ ಸಹಾಯಕ ಪ್ರಾಧ್ಯಾಪಕ ಹುದ್ದೆ ಗಿಟ್ಟಿಸಿಕೊಂಡಿದ್ದಾರೆಂಬ ಸುದ್ದಿ ಹಬ್ಬಿದೆ.

ನನ್ನ ಕಿವಿಗೆ ಬಿದ್ದ ಸಂಗತಿಗಳ ಬಗ್ಗೆ ಪರಿಚಿತ ವೈದ್ಯರಲ್ಲಿ ವಿಚಾರಿಸುತ್ತ ಹೋದೆ. ಅವರೆಲ್ಲರ ಮಾತು ಒಂದೇ. ಡಾ.ಸುಧಾಕರ್ ಅಂತಹ ಬಕಾಸುರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಿಂದೆಂದೂ ಬಂದಿರಲಿಲ್ಲ.

ಈ ಸುಧಾಕರ್ ಬಗ್ಗೆ ಬರುತ್ತಿರುವ ಕತೆಗಳು ಒಂದಲ್ಲಎರಡಲ್ಲ. ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿನದ್ದೇ ಒಂದು ದೊಡ್ಡ ಕತೆ. ಈ ಕಾಲೇಜಿನ 52 ಸಹಪ್ರಾಧ್ಯಾಪಕ ಹುದ್ದೆಗೆ 15.3.2021 ರಿಂದ 19.03.2021ರ ತನಕ ಸಂದರ್ಶನ ನಡೆದು 20.9.2021 ರಂದು ತಾತ್ಕಾಲಿಕ ಪಟ್ಟಿ ಪ್ರಕಟಗೊಂಡಿದ್ದು, 10.12.2021 ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇಷ್ಟೊಂದು ವಿಳಂಬ ಯಾಕೆಂದ್ರೆ ವ್ಯವಹಾರ ಕುದುರಿಸಲು. “ಎಂಟು ಕೋಟಿ ನನಗೆ ಕೊಡು ನೀನು 52 ಜನರಿಂದ ಏನಾದರೂ ಮಾಡಿಕೋ”. 52 ಜನರಿಂದ ತಲಾ 30 ಲಕ್ಷ ಅಂದರೂ 15 ಕೋಟಿ ರೂಪಾಯಿ ದಾಟುತ್ತದೆ ಎಂಬುದು ಇವರ ಲೆಕ್ಕಾಚಾರ .

ಈ ಡಾ.ಸುಧಾಕರ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಮಂತ್ರಿಯಾದ ನಂತರ ಮಾತಾಡುವುದನ್ನು ಕಂಡು ಒಬ್ಬ ವಿದ್ಯಾವಂತ, ಜನರ ಬಗ್ಗೆ ಕಾಳಜಿಯುಳ್ಳ ಸೆನ್ಸಿಬಲ್ ಮನುಷ್ಯ ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಂದಿದ್ದಾನೆಂದು ಸಂತೋಷಪಟ್ಟಿದ್ದೆ. ನನ್ನ ಸ್ನೇಹಿತ ಮಾಜಿ ಶಾಸಕರೊಬ್ಬರು, ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ರಚಿಸಿರುವ ಟ್ರಸ್ಟ್ ಮತ್ತು ಆ ಮೂಲಕ ಮಾಡುತ್ತಿರುವ ಜನೋಪಯೋಗಿ ಕೆಲಸಗಳ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇಷ್ಟೆಲ್ಲ ಕೆಲಸ ಮಾಡಲು ಸುಧಾಕರ್ ಅವರಿಗೆ ಹಣ ಎಲ್ಲಿಂದ ಬರುತ್ತದೆಂದು ಆಗ ಯೋಚನೆ ಬಂದಿತ್ತು. ನನಗೆ ಪರಿಚಯದ ಇನ್ನೊಬ್ಬ ಬಿಜೆಪಿ ಶಾಸಕರು, ಸುಧಾಕರ್ ಭಾರೀ ಭ್ರಷ್ಟ, ಬಕಾಸುರ ಎಂದು ಹಿಂದೆಯೇ ಹೇಳಿದ್ದು ನೆನಪಾಯಿತು. ಹಣದ ವಿಚಾರದಲ್ಲಿ ನಾನೇನು ಸಾಚಾ ಅಲ್ಲ ಎಂದು ಹೇಳಿಕೊಳ್ಳುವ ಈ ಶಾಸಕನೇ ಇಂತಹ ಅಭಿಪ್ರಾಯವ್ಯಕ್ತಪಡಿಸುತ್ತಾನೆಂದರೆ

ನನಗೆ ಮನದಟ್ಟಾಯಿತು. ಇನ್ನು ಯಾವ ಆಧಾರಗಳು, ಸಾಕ್ಷ್ಯಗಳು ಬೇಕಿರಲಿಲ್ಲ. ಡಾ.ಸುಧಾಕರ್ ಕುರಿತಾಗಿ ನಮ್ಮ ಪತ್ರಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೊಂದು ಪತ್ರ ಬರೆದು, ಆತನನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ವಿನಂತಿ ಮಾಡಿದೆ. ಈ ಪತ್ರ ಬೊಮ್ಮಾಯಿಯವರಿಗೆ ತಲುಪಿತೋ ಇಲ್ಲವೋ ಗೊತ್ತಿಲ್ಲ. ಅವರ ಸಹೋದರ ಪತ್ರ ಓದಿದ ನಂತರ ಮುಖ್ಯಮಂತ್ರಿ ಗಮನಕ್ಕೆ ತರುವುದಾಗಿ ನನ್ನ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡರಂತೆ.

ಅಂತೂ ಈ ಬಹಿರಂಗ ಪತ್ರ ರಾಜ್ಯದ ವೈದ್ಯರ ವಲಯದಲ್ಲಂತೂ ಭಾರೀ ಸಂಚಲನವನ್ನುಂಟು ಮಾಡಿತು. ಹಾಸನ ಜಿಲ್ಲೆಯ ಅನೇಕ ವೈದ್ಯರು, ನನ್ನ ಪತ್ರವನ್ನು ಮೆಚ್ಚಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ರಾಜ್ಯದ ಬೇರೆ ಭಾಗಗಳಿಂದಲೂ ಪ್ರತಿಕ್ರಿಯೆಗಳು ಬಂದವು.

ನಮ್ಮ ಜಿಲ್ಲೆಯ ಯಾವುದೇ ಪಕ್ಷದ ರಾಜಕೀಯ ಮುಖಂಡರೂ ನಾನು ಸುಳ್ಳು ಬರೆದಿರುವುದಾಗಿ ಹೇಳಲಿಲ್ಲ. ಬದಲಾಗಿ ಬೆಂಗಳೂರಿನ ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಭ್ರಷ್ಟಾಚಾರದ ವಿಚಾರದಲ್ಲಿ ಈ ಸುಧಾಕರ್ ವಿಜಯೇಂದ್ರನ ನಂತರದ ಸ್ಥಾನದಲ್ಲಿದ್ದಾನೆ ಎಂದರು. ಬೆಂಗಳೂರಿನ ಹೆಸರುಘಟ್ಟದ ಬಳಿ ಜಮೀನನ್ನು ಸ್ಥಳೀಯ ನಿವಾಸಿಗಳು ಈ ಮುಖಂಡರಿಗೆ ತೋರಿಸಿ, ಕೊರೊನಾ ವೈರಸ್ ಉಲ್ಬಣಗೊಂಡಾಗ ಎಗರಿಸಿದ ಹಣದಿಂದ ಖರೀದಿ ಮಾಡಿದ್ದು ಎಂದರಂತೆ. ಹಾಗೆಯೇ ಈ ಸಂಪಾದಕನಿಗೆ ಲಂಚದ ಪಾಲು ಸಿಕ್ಕಿದ್ದರೆ ಹೀಗೆ ಬರೆಯುತ್ತಿರಲಿಲ್ಲ ಎಂದು ಒಂದಿಬ್ಬರು ವಾಟ್ಸಾಪ್‍ನಲ್ಲಿ ಬರೆದುಕೊಂಡಿರುವುದೂ ನನ್ನ ಗಮನಕ್ಕೆ ಬಂದಿದೆ.

ಸ್ವತಃ ವೈದ್ಯರಾಗಿರುವ ಡಾ.ಸುಧಾಕರರ ಆಡಳಿತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ನಿರ್ದೇಶಕರು ದಲ್ಲಾಳಿಗಳಂತೆ ಆಗಿದ್ದಾರೆ. ಅಲ್ಲಿಂದ ಕಿತ್ತು ಇಲ್ಲಿಗೆ ಕೊಡುವುದು ದಲ್ಲಾಳಿಗಳ ಕೆಲಸ. ಹಾಗೆಯೇ ಈ ನಿರ್ದೇಶಕರು ಸಹ ಡೀಲರುಗಳಿಂದ ಗುತ್ತಿಗೆದಾರರಿಂದ, ಸಿಬ್ಬಂದಿಗಳಿಂದ ಮತ್ತು ನೇಮಕಾತಿ ಬಯಸುವ ವೈದ್ಯರಿಂದ ವಸೂಲಿಮಾಡಿ ಮಂತ್ರಿಗಳಿಗೆ ನಿಯಮಿತವಾಗಿ ಹಣ ನೀಡುತ್ತಿದ್ದಾರಂತೆ.

ಬಹುಪಾಲು ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶಕರನ್ನು ಪ್ರಭಾರಿಯಾಗಿ ನೇಮಿಸಲಾಗುತ್ತಿದೆ. ಇದರಲ್ಲಿ ಎರಡು ರೀತಿಯ ಲಾಭವಿದೆ. ಹಣ ತೆಗೆದುಕೊಂಡು ಸೀನಿಯಾರಿಟಿಯನ್ನು ನೋಡದೆ ಯಾರನ್ನು ಬೇಕಾದರೂ ನೇಮಕ ಮಾಡಬಹುದು. ಎರಡನೆಯದಾಗಿ ತಮ್ಮನ್ನು ಯಾವಾಗ ಬೇಕಾದರೂ ತೆಗೆದು ಹಾಕಬಹುದು ಎಂಬ ಭಯ ಇರುವುದರಿಂದ ಇವರೆಲ್ಲರೂ ಮಂತ್ರಿಗಳು ಹೇಳಿದ ಹಾಗೆ ಕೇಳುತ್ತಾರೆ.

ಎಲ್ಲಾ ನಿರ್ದೇಶಕರೂ ಆಗಿಂದಾಗ್ಗೆ ಮಂತ್ರಿಗಳಿಗೆ ಮಾಮೂಲಿ ನೀಡಲೇಬೇಕು. ಇಲ್ಲದಿದ್ದರೆ ಅವರಿಗೆ ಉಳಿಗಾಲ ಇಲ್ಲ. ಕಾಲೇಜಿನಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದ್ದರೆ ಹೆಚ್ಚು ಹಣ ನೀಡಬೇಕು. ಹೆಚ್ಚು ಹೆಚ್ಚು ಉಪಕರಣ ಖರೀದಿ ಮಾಡಿದರೆ ಹೆಚ್ಚಿನ ಹಣ ನೀಡಬೇಕು. ವಾಕ್ ಇನ್ ಸಂದರ್ಶನ ನಡೆಸಿ ವೈದ್ಯ ಸಿಬ್ಬಂದಿ ನೇಮಕಾತಿ ಮಾಡಿದರೆ ನಿರೀಕ್ಷೆಗೂ ಮೀರಿ ಹಣ ನೀಡಬೇಕು.

ಪ್ರಾಮಾಣಿಕ ನಿರ್ದೇಶಕರಿಗೆ ಬೆಲೆಯೇ ಇಲ್ಲ. ಕೆಲವು ನಿರ್ದೇಶಕರು ಈ ಮಂತ್ರಿಗಳ ದೆಸೆಯಿಂದಲೇ ಭ್ರಷ್ಟರಾಗಿ ಬದಲಾವಣೆ ಆಗಿದ್ದಾರೆ. ಅರ್ಧದಷ್ಟು ನಿರ್ದೇಶಕರು ಹಣ ಮಾಡುವ ಉದ್ದೇಶದಿಂದಲೇ ಅಧಿಕಾರ ಹಿಡಿದಿದ್ದಾರೆ.

ಮೈಸೂರಿನಲ್ಲಿ ಮಂತ್ರಿಗಳು ಹೇಳಿದ ಮಾತು ಕೇಳಲಿಲ್ಲವೆಂಬ ಕಾರಣದಿಂದ ಖಾಯಂ ನಿರ್ದೇಶಕರನ್ನು ತೆಗೆದು ಹಾಕಿ ಜ್ಯೇಷ್ಠತೆಯೇ ಇಲ್ಲದ ಜೂನಿಯರ್ ಒಬ್ಬರನ್ನು ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ. ಇಲ್ಲಿ ಈ ನಿರ್ದೇಶಕರಿಗಿಂತ ಹಿರಿಯರು 24 ಜನರಿದ್ದಾರೆ. ಬಳ್ಳಾರಿಯಲ್ಲಿ ನಿರ್ದೇಶಕರ ಹುದ್ದೆ ಮ್ಯುಸಿಕಲ್ ಚೇರಿನಂತೆ ಆಗಿದೆ. ಹೆಚ್ಚು ಹಣ ಕೊಟ್ಟವರು ಪ್ರಭಾರಿ ನಿರ್ದೇಶಕರಾಗುತ್ತಿದ್ದಾರೆ. ಕುಮಾರವ್ಯಾಸನ ನಾಡಿನಲ್ಲಿ ಚುನಾವಣಾ ಸಮಯದಲ್ಲಿ ಅಕ್ರಮವಾಗಿ ಹಣ ಶೇಖರಣೆ ಮಾಡಿ ಸಿಕ್ಕಿ ಹಾಕಿಕೊಂಡವರು ನಿರ್ದೇಶಕರ ಹುದ್ದೆಯಲ್ಲಿ ಇದ್ದಾರೆ. ಇವರು ಅಧಿಕಾರದಲ್ಲಿ ಇರುವ ಮಂತ್ರಿಗಳನ್ನು ಓಲೈಸುವುದರಲ್ಲಿ ನಿಸ್ಸೀಮರು. ಶಿವಮೊಗ್ಗದ ಕಾಲೇಜಿನಲ್ಲಿ ಸರ್ಕಾರಿ ಸೇವೆಯಿಂದ 9 ವರ್ಷದ ಹಿಂದೆ ನಿವೃತ್ತಿ ಆಗಿರುವ 69 ವರ್ಷದ ವ್ಯಕ್ತಿ ನಿರ್ದೇಶಕರಾಗಿ ಇದ್ದಾರೆ. ಇದಕ್ಕಿಂತ ದೊಡ್ಡ ಅಕ್ರಮ ಮತ್ತೊಂದಿಲ್ಲ. ಹಣ ಮಾಡುವ ಉದ್ದೇಶದಿಂದ ಮಾತ್ರ ನಿಯಮಬಾಹಿರವಾಗಿ ಇವರನ್ನು ಅಧಿಕಾರದಲ್ಲಿ ಕೂರಿಸಲಾಗಿದೆ.

ಆರೋಗ್ಯ ಇಲಾಖೆಯ ನಿರ್ದೇಶಕರ ಹುದ್ದೆಯನ್ನು ತನಗೆ ನೀಡಬೇಕೆಂದು ಮಹಿಳಾ ಅಧಿಕಾರಿಯೊಬ್ಬರು ಸಚಿವ ಸುಧಾಕರ್ ಬಳಿ ಮನವಿ ಮಾಡುತ್ತಾರೆ. ಈಕೆಯ ಪತಿ ಐ.ಪಿ.ಎಸ್. ಅಧಿಕಾರಿ. 1 ಕೋಟಿ ರೂ. ಕೊಟ್ಟರೆ ಉಂಟು ಇಲ್ಲದಿದ್ದರೆ ಇಲ್ಲ ಎಂಬ ಉತ್ತರ ಬರುತ್ತದೆ. ಆಗ ಈ ದಂಪತಿ ದೊಡ್ಡ ಮಠವೊಂದರ ಸ್ವಾಮೀಜಿ ಬಳಿ ತೆರಳುತ್ತಾರೆ. ಸ್ವಾಮೀಜಿ ಫೋನ್ ಎತ್ತಿಕೊಳ್ಳುತ್ತಾರೆ. ಈ ಮಹಿಳೆಗೆ ಆರೋಗ್ಯ ಇಲಾಖೆಯನ್ನು ನಿಭಾಯಿಸುವ ಶಕ್ತಿ ಇಲ್ಲ ಎಂಬ ಉತ್ತರ ಬರುತ್ತದೆ. “ನೋಡಿ ಈ ಮನುಷ್ಯ ಎಷ್ಟು ದುರಹಂಕಾರಿಯಾಗಿದ್ದಾನೆ. ನನ್ನ ಮಾತಿಗೂ ಈ ರೀತಿ ಎದುರುತ್ತರ ಕೊಡುತ್ತಾನೆ” ಎಂದು ಸ್ವಾಮೀಜಿ ನೊಂದುಕೊಳ್ಳುತ್ತಾರೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳೆಲ್ಲ ಸ್ವಾಯತ್ತ ಸಂಸ್ಥೆಗಳಾದ ಮೇಲೆ ಯಾವುದೇ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಕಾಲೇಜುಗಳ ಹಂತದಲ್ಲೇ ಟೆಂಡರ್ ಕರೆದು ಕೆಟಿಪಿಪಿ ನಿಯಮಾವಳಿಗಳನ್ನು ಪಾಲಿಸಿ ಖರೀದಿಸಲಾಗುತ್ತಿತ್ತು. ಇದಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿ ಇರುವ ಖರೀದಿ ಸಮಿತಿ ಮತ್ತು ಆರ್ಥಿಕ ಸಮಿತಿಗಳಲ್ಲಿ ಅನುಮೋದನೆ ಪಡೆದು ಖರೀದಿ ಮಾಡಲಾಗುತ್ತಿತ್ತು. ನಿರ್ದೇಶಕರ ಮತ್ತು ಕಚೇರಿ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಲಂಚದ ವ್ಯವಹಾರ ನಡೆದರೂ ಗುಣಮಟ್ಟದ ಉಪಕರಣಗಳನ್ನು ಖರೀದಿ ಮಾಡುತ್ತಿದ್ದರು. ಮಂತ್ರಿಗಳ ಕಚೇರಿ ಅμÁ್ಟಗಿ ಇದರಲ್ಲಿ ಕೈ ಆಡಿಸುತ್ತಿರಲಿಲ್ಲ.

ಕೋವಿಡ್ ಸಮಯದಲ್ಲಿ ಎರಡು ರೀತಿಯ ಬದಲಾವಣೆಗಳು ಜಾರಿಗೆ ಬಂದವು. ಮೊದಲನೆಯದಾಗಿ ರಾಜ್ಯ ಮಟ್ಟದಲ್ಲಿ ಎಲ್ಲಾ ಕಾಲೇಜುಗಳಿಗೆ ಬೇಕಾದ ಉಪಕರಣಗಳನ್ನು ಕೇಂದ್ರೀಕೃತವಾಗಿ ಖರೀದಿ ಮಾಡಲು ಪ್ರಾರಂಭಿಸಿದರು. ಮಂತ್ರಿಗಳ ಕಚೇರಿಯಲ್ಲೇ ಎಲ್ಲಾ ವ್ಯವಹಾರಗಳನ್ನು ಅಂತಿಮಗೊಳಿಸಿದರೂ ಟೆಂಡರ್ ಕರೆಯುವ ಅಧಿಕೃತ ವ್ಯವಹಾರವನ್ನು ವೈದ್ಯಕೀಯ ಶಿಕ್ಷಣ ನಿರ್ದೇಶಕರ (ಡಿಎಂಇ) ಮೂಲಕ ಮಾಡಿಸಲಾಯಿತು. ಎರಡನೆಯದಾಗಿ ಕೋವಿಡ್ ಸಮಯದಲ್ಲಿ ತುರ್ತು ಖರೀದಿಯ ನೆಪವನ್ನು ಒಡ್ಡಿ ಅನೇಕ ಉಪಕರಣಗಳ ಖರೀದಿಗೆ ಆರ್ಥಿಕ ಸಂಹಿತೆಯಿಂದ ವಿನಾಯಿತಿ ಪಡೆಯಲಾಯಿತು. ಇದರಿಂದ ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ವಿಪರೀತ ಹೆಚ್ಚಿನ ಹಣಕ್ಕೆ ಖರೀದಿ ಮಾಡಿ ಹೆಚ್ಚಿನ ಕಮಿಷನ್ ಹೊಡೆಯಲು ಅನುವು ಮಾಡಿಕೊಟ್ಟಂತೆ ಆಯಿತು. ಮುಂದೆ ಏನಾದರೂ ತನಿಖೆ ಆದರೆ ಆ ಅಧಿಕಾರಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಂತ್ರಿಗಳು ತಪ್ಪಿಸಿಕೊಳ್ಳುತ್ತಾರೆ. ಡಿಎಂಇ ಅವರಿಗೆ ಇದೆಲ್ಲಾ ಗೊತ್ತಿದ್ದರೂ ಒಪ್ಪಿಕೊಳ್ಳಲೇಬೇಕು. ಏಕೆಂದರೆ ಅವರೂ ಖಾಯಂ ಆಗಿಲ್ಲ, ಪ್ರಭಾರಿಯಾಗೇ ಇದ್ದಾರೆ. ಮಂತ್ರಿಗಳು ಹೇಳಿದಂತೆ ಕೇಳದಿದ್ದರೆ ತೆಗೆದು ಹಾಕುತ್ತಾರೆಂಬ ಭಯ ಇದ್ದೇ ಇದೆ.

ಕೋವಿಡ್ ಸಮಯದಲ್ಲಿ ವಿಪರೀತ ಹೆಚ್ಚಿನ ಬೆಲೆಗೆ ಉಪಕರಣಗಳನ್ನು ಖರೀದಿ ಮಾಡಲಾಯಿತು. ಕೋವಿಡ್ ಮುಗಿದ ಮೇಲೂ ಕಮಿಷನ್ ರುಚಿ ಹತ್ತಿದ್ದ ಮಂತ್ರಿಗಳು ಈಗಲೂ ಕೇಂದ್ರೀಕೃತ ಖರೀದಿಯನ್ನೇ ಮಾಡುವ ಕೆಲಸವನ್ನು ಮುಂದುವರೆಸಿದ್ದಾರೆ.

30 ರಿಂದ 40 ರೂಪಾಯಿಯ ಎನ್95 ಮಾಸ್ಕುಗಳನ್ನು 150 ರಿಂದ 200, 300 ರೂ ಗಳಿಗೆ, 600 ಬೆಲೆಯ ಪಿಪಿಇ ಕಿಟ್ ರೂ.1500 ರಿಂದ ರೂ.2000 –ಹೀಗೆ ಎಲ್ಲಾ ಉಪಕರಣಗಳನ್ನು ದುಪ್ಪಟ್ಟು ಹಣ ನೀಡಿ ಖರೀದಿ ಮಾಡಲಾಗಿದೆ. ಮೊದಮೊದಲು ಕೆಲವು ಕಳಪೆ ಉಪಕರಣಗಳನ್ನೂ ಖರೀದಿ ಮಾಡಲಾಯಿತು. ವೈದ್ಯರಿಂದ ದೂರುಗಳು ಬಂದಿದ್ದರಿಂದ ನಂತರ ಎಲ್ಲವೂ ಉತ್ತಮ ಗುಣಮಟ್ಟದ ಉಪಕರಣಗಳನ್ನು ಖರೀದಿ ಮಾಡಲಾಗುತ್ತಿದೆ. ಕಮಿಷನ್ ಪ್ರಮಾಣ ಕಡಿಮೆ ಆಗುತ್ತದೆ ಅಂತ ಅನಿಸಿದರೂ ಅದು ಸುಳ್ಳು. ಏಕೆಂದರೆ ಹೆಚ್ಚಿನ ಕಮಿಷನ್ ಹೊಡೆಯಲು ಅದೇ ಪ್ರಮಾಣದಲ್ಲಿ ಖರೀದಿ ಬೆಲೆಯನ್ನು ಏರಿಸಲಾಗುತ್ತದೆ. ಉಪಕರಣಗಳ ಡೀಲರುಗಳು ಹೇಳುವಂತೆ ಮೊದಲೇ ಕಮಿಟ್ ಮೆಂಟ್ ಹಣ ಅಂತ ಹತ್ತು ಪಸೆರ್ಂಟ್ ಕೊಡಬೇಕಂತೆ. ನಂತರ ಎಲ್ಲಾ ಮುಗಿದ ಮೇಲೆ ಒಪ್ಪಂದವಾದಷ್ಟು ಹಣವನ್ನು ಮಂತ್ರಿಗಳಿಗೆ ತಲುಪಿಸಬೇಕು. ನಂತರ ಡಿಎಂಇ ಯವರಿಗೆ ಹಣ ಬಿಡುಗಡೆ ಮಾಡಲು ಸಂದೇಶ ಹೋಗುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ದೊಡ್ಡ ಇಲಾಖೆಗಳು. ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕೋವಿಡ್ ಸಾಂಕ್ರಾಮಿಕದ ಮೂರನೇ ಅಲೆ ಭಾರತವನ್ನು ಅಪ್ಪಳಿಸಬಹುದೆಂಬ ಆತಂಕ ಶುರುವಾಗಿದೆ. ಕೋವಿಡ್‍ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಭಾರೀ ಸದ್ದು ಮಾಡುತ್ತದೆ. ಇಂತಹ ಹೊತ್ತಿನಲ್ಲಿ ಭಯಂಕರ ಭ್ರಷ್ಟರನ್ನು ನಿರ್ಣಾಯಕ ಸ್ಥಾನದಲ್ಲಿ ಮುಂದುವರಿಸಿದರೆ ಏನೆಲ್ಲಾ ಅನಾಹುತಗಳು ಆಗಬಹುದೆಂದು ಬಿಡಿಸಿ ಹೇಳಬೇಕಾಗಿಲ್ಲ.

ಕೋತಿ ತಾನು ಕೆಟ್ಟಿದ್ದಲ್ಲದೆ, ವನ್ನವನ್ನೆಲ್ಲಾ ಕೆಡಿಸಿತು ಎಂಬ ಗಾದೆ ಮಾತಿದೆ. ಈ ಸುಧಾಕರ್ ತಾನು ಭ್ರಷ್ಟನಾಗಿರುವುದಲ್ಲದೆ, ಎರಡೂ ಇಲಾಖೆಗಳ ಅಧಿಕಾರಿಗಳನ್ನು ನಿರ್ದೇಶಕರನ್ನು, ಪ್ರಾಧ್ಯಾಪಕರನ್ನು, ಸಹಪ್ರಾಧ್ಯಾಪಕರನ್ನು ಸಿಬ್ಬಂದಿಯನ್ನು ಭ್ರಷ್ಟಗೊಳಿಸುತ್ತಿದ್ದಾರೆ.

ಒಬ್ಬ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರು, ಪ್ರಾಧ್ಯಾಪಕ ಭ್ರಷ್ಟಗೊಂಡನೆಂದರೆ, ಅವರು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವ ಮೌಲ್ಯಗಳನ್ನು ಬಿತ್ತಬಲ್ಲರು? ಅವರಿಂದ ತರಬೇತಿ ಪಡೆದ ವೈದ್ಯರು ಎಂತಹ ಮನಸ್ಥಿತಿಯೊಂದಿಗೆ ಆಚೆ ಬರುವರು? ಈ ಬಗ್ಗೆ ಮುಖ್ಯಮಂತ್ರಿಯಾದವರು ಯೋಚಿಸಬಾರದೆ?

ಈ ಸುಧಾಕರ್ ಮುಖ್ಯಮಂತ್ರಿಯ ಪರಮಾಪ್ತ ವಲಯಲ್ಲಿದ್ದಾರೆಂದು ಹೇಳಲಾಗುತ್ತಿದೆ. ಹಾಗಾಗಿ ಆತನನ್ನು ಸಚಿವ ಸಂಪುಟದಿಂದ ಕೈಬಿಡುತ್ತಾರೆಂದು ಊಹೆ ಮಾಡುವುದು ತಪ್ಪೆಂದು ಕಾಣುತ್ತದೆ.

ಈ ಮಂತ್ರಿಗಳು ಹೀಗೇ ಮುಂದುವರೆದರೆ ವೈದ್ಯಕೀಯ ಶಿಕ್ಷಣ ಇಲಾಖೆಯ ಮರ್ಯಾದೆ ಹರಾಜಾಗುವುದರಲ್ಲಿ ಸಂದೇಹವೇ ಇಲ್ಲ.

*ಲೇಖಕರು ಹಾಸನ ಜಿಲ್ಲೆಯ ರಾಂಪುರ ಗ್ರಾಮದವರು; ಬಿಎಸ್ಸಿ., ಎಲ್.ಎಲ್.ಬಿ. ಮಾಡಿದ್ದಾರೆ, ಜೆಪಿ ಚಳವಳಿಯಲ್ಲಿ, ರೈತ ಹೋರಾಟದಲ್ಲಿ ಪಾಲ್ಗೊಂಡವರು, ಹಸಿರುಭೂಮಿ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರು. ಪ್ರಸ್ತುತ ಹಾಸನದ ‘ಜನತಾಮಾಧ್ಯಮ’ ದಿನಪತ್ರಿಕೆ ಸಂಪಾದಕರು.

Leave a Reply

Your email address will not be published.