ಎಚ್.ಎಸ್.ಶಿವಪ್ರಕಾಶರ ಸಮಗ್ರ ಕವಿತೆಗಳ ಕಟ್ಟು ‘ಹೋಗಿ ಬನ್ನಿ ಋತುಗಳೇ’

ಅರೆಶತಮಾನದ ಕಾಲ ಶಿವಪ್ರಕಾಶರು ನಡೆಸಿದ ಕಾವ್ಯ ಪ್ರಯೋಗಗಳು ಇಂದಿಗೆ ಮಹತ್ವದ ಘಟ್ಟವನ್ನು ತಲುಪಿ ಅವರದೇ ಕಾವ್ಯಮಾರ್ಗವೊಂದು ಸೃಶ್ಟಿಯಾಗಿದೆ. ಅದು ಕಿರಿಯ ತಲೆಮಾರಿಗೆ ಗುರಿಯೂ ಆಗಿದೆ. ಹಾಗೆಯೇ ಅದನ್ನು ದಾಟಬೇಕಾದ ಸವಾಲೂ ಆಗಿದೆ.

ರಂಗನಾಥ ಕಂಟನಕುಂಟೆ

ಹೋಗಿ ಬನ್ನಿ ಋತುಗಳೇ

ನಾಲ್ಕು ದಶಕದ ಕವಿತೆಗಳು

ಎಚ್.ಎಸ್.ಶಿವಪ್ರಕಾಶ್

ಮುದ್ರಣ ವರ್ಷ: 2021

ಪುಟ: 728 ದರ: ರೂ.800

ಪ್ರಕಾಶನ: ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ.

ಸಂಪರ್ಕ: .ಎಂ.ರವಿ, ಕಾರ್ಯದರ್ಶಿ 9980305837

ನೀವು ಉಸಿರಾಡುತ್ತಿರುವುದು ಗಾಳಿಯಲ್ಲ, ನಂಜು’

ಎಚ್.ಎಸ್.ಶಿವಪ್ರಕಾಶ್

ಕವಿತೆ ಬರೆವ ಅಭ್ಯಾಸ ಇರುವುದರಿಂದ ಕಾವ್ಯದ ವಸ್ತುವೈವಿಧ್ಯ, ನುಡಿವಿನ್ಯಾಸ ಹಾಗೂ ಪ್ರಯೋಗ ವೈವಿಧ್ಯಗಳ ಬಗೆಗೆ ತಿಳಿಯಲು ನೆರವಾಗುವ ನನ್ನ ಹಿಂದಿನ ತಲೆಮಾರಿನ ಕವಿಯೆಂದರೆ ಎಚ್.ಎಸ್.ಶಿವಪ್ರಕಾಶ್ ಎಂದು ನಿಸ್ಸಂಶಯವಾಗಿ ಹೇಳಬಹುದು. ಇವರ ಓರಗೆಯಲ್ಲಿ ಎಸ್.ಜಿ.ಸಿದ್ದರಾಮಯ್ಯ, ಕೆ.ವಿ.ತಿರುಮಲೇಶ್ ಪ್ರಮುಖರು. ಹೊಸತಲೆಮಾರಿನ ಕವಿಗಳ ಮೇಲೆ ಈ ಇಬ್ಬರಿಗಿಂತ ಹೆಚ್ಚು ಪ್ರಭಾವ ಬೀರಿರುವ ಕವಿಯೆಂದರೆ ಶಿವಪ್ರಕಾಶರು. ಅಂದರೆ ಅವರು ನಮ್ಮ ತಲೆಮಾರಿನ ಬಹುತೇಕ ಕವಿಗಳಿಗೆ ಕವಿಗುರುವಾಗಿದ್ದಾರೆ.

ಇದನ್ನು ಕವಿ ಮತ್ತು ನಾಟಕಕಾರರಾದ ಕೆ.ವೈ.ನಾರಾಯಣಸ್ವಾಮಿಯವರು ಸಮಗ್ರ ಕವಿತೆಗಳ ಕಟ್ಟಾಗಿರುವ ಈ ‘ಹೋಗಿ ಬನ್ನಿ ಋತುಗಳೇ’ ಕೃತಿಯ ಸಂಪಾದಕರ ತಮ್ಮ ಮಾತಿನಲ್ಲಿ ಸರಿಯಾಗಿಯೇ ಗುರುತಿಸಿದ್ದಾರೆ. ಅಂದರೆ ಅವರು ಕಳೆದ ಅರೆಶತಮಾನದಲ್ಲಿ ಕಾವ್ಯವನ್ನು ಜೀವದ್ರವ್ಯವಾಗಿಸಿಕೊಂಡು ಬರೆಯುತ್ತ ತಮ್ಮದೇ ಆದ ಕಾವ್ಯಮಾರ್ಗವನ್ನು ಸೃಶ್ಟಿಸಿದ್ದಾರೆ. ಹಾಗಾಗಿ ಇವರು ಕಿರಿಯ ತಲೆಮಾರಿನ ಕವಿಗಳಿಗೆ ಬೇಕಾದ ಕವಿಗುರುವಾಗಿದ್ದಾರೆ. ಅವರು ಕರ್ನಾಟಕದಿಂದ ಬಹಳ ಕಾಲ ದೂರವಿದ್ದರೂ ಅನೇಕರು ಅವರನ್ನು ಕಾವ್ಯಗುರುವೆಂದೇ ಭಾವಿಸಿದ್ದಾರೆ. ಇದು ಅವರ ಬಗೆಗೆ ಹೇಳಬಹುದಾದ ಮೊದಲನೆಯ ಮಾತು.

ಇದರ ನಂತರದಲ್ಲಿ ಶಿವಪ್ರಕಾಶರು ರೂಢಿಸಿಕೊಂಡಿರುವ ಕಾವ್ಯದ ನುಡಿಗಟ್ಟು, ಅದರ ವೈವಿಧ್ಯ ಮತ್ತು ತಾತ್ವಿಕತೆಗಳು ಅವರ ವಿಶೇಶ ರೂಹಾಗಿವೆ. ಈ ರೂಹುಗಳನ್ನು ದಾಟಿ ಕಿರಿಯ ತಲೆಮಾರಿನ ಲೇಖಕರು ತಮ್ಮದೇ ಆದ ನುಡಿಗಟ್ಟು ಮತ್ತು ತಾತ್ವಿಕತೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯವೂ ಇದೆ. ಅವರ ಪ್ರಭಾವದಿಂದ ಬಿಡಿಸಿಕೊಂಡು ತಮ್ಮದೇ ಆದ ದಾರಿಯಲ್ಲಿ ಕ್ರಮಿಸಬೇಕಿರುವುದು ಎದ್ದು ಕಾಣಿಸುತ್ತದೆ. ಅಂದರೆ ಅವರು ಕಾವ್ಯಸೃಶ್ಟಿಯಲ್ಲಿ ಸಾಧಿಸಿರುವ ಸಿದ್ದಿ ಒಂದು ಮಾಪುಗೋಲಾಗಿ ಬೆಳೆದಿದ್ದು ಅದನ್ನು ಮೀರಿ ಕನ್ನಡ ಕಾವ್ಯವನ್ನು ಇನ್ನೊಂದು ಹಂತಕ್ಕೆ ಬೆಳೆಸಬೇಕಿರುವ ಸವಾಲು ಕಿರಿಯ ತಲೆಮಾರಿನ ಮೇಲಿದೆ.

ಸ್ವತಹ ಶಿವಪ್ರಕಾಶ್ ಅವರು ನವೋದಯ ಮತ್ತು ನವ್ಯಸಾಹಿತ್ಯ ಪಂಥಗಳ ಪ್ರಮುಖ ಲೇಖಕರ ಪ್ರಭಾವದಿಂದ ಬಿಡಿಸಿಕೊಳ್ಳಲೆಂದೇ ನಡೆಸಿದ ಪ್ರಯತ್ನದ ಫಲವಾಗಿ ಇಂದು ಶಿವಪ್ರಕಾಶ ಕಾವ್ಯಮಾರ್ಗ ಸೃಶ್ಟಿಯಾಗಿದೆ. ಅವರ ‘ಹೋಗಿಬನ್ನಿ ಋತುಗಳೇ’ ಎಂಬ ಇದುವರೆಗಿನ ಕವಿತೆಗಳ ಕಟ್ಟೇ ಎತ್ತಿ ತೋರಿಸುತ್ತಿದೆ. ಇದನ್ನು ಪ್ರಸಿದ್ದ ಚಿಂತಕರಾದ ಕೆ.ವಿ.ನಾರಾಯಣ ಅವರು ತಮ್ಮ ಮುನ್ನುಡಿಯಲ್ಲಿ ವಿವರವಾಗಿಯೇ ದಾಖಲಿಸಿದ್ದಾರೆ. ಎಲ್ಲ ತಲೆಮಾರುಗಳು ಹೀಗೆ ಮಾಡುವುದರಿಂದಲೇ ಸಾಹಿತ್ಯ ಪರಂಪರೆಯೊಂದು ಹೊಸತಾಗಿ ಮತ್ತು ಹುಲುಸು ಬೆಳೆ ತೆಗೆಯಲು ಸಾಧ್ಯ. ಅಂದರೆ ಅರೆಶತಮಾನದ ಕಾಲ ಶಿವಪ್ರಕಾಶರು ನಡೆಸಿದ ಕಾವ್ಯಪ್ರಯೋಗಗಳು ಇಂದಿಗೆ ಮಹತ್ವದ ಘಟ್ಟವನ್ನು ತಲುಪಿ ಅವರದೇ ಕಾವ್ಯಮಾರ್ಗವೊಂದು ಸೃಶ್ಟಿಯಾಗಿದೆ. ಅದು ಕಿರಿಯ ತಲೆಮಾರಿಗೆ ಗುರಿಯೂ ಆಗಿದೆ. ಹಾಗೆಯೇ ಅದನ್ನು ದಾಟಬೇಕಾದ ಸವಾಲೂ ಆಗಿದೆ. ಹಾಗಾಗಿ ಶಿವಪ್ರಕಾಶರ ಕಾವ್ಯ ಕನ್ನಡದ ಕಿರಿಯ ತಲೆಮಾರಿಗೆ ಅನುಸರಿಸಬೇಕಾದ ಮತ್ತು ದಾಟಬೇಕಾದ ಸೃಜನಶೀಲ ಸವಾಲಾಗಿದೆ. ಅವರ ಕಾವ್ಯದ ಬಗೆಗೆ ಹೇಳಬಹುದಾದ ಎರಡನೆಯ ಮಾತು.

ಅವರು ಕವಿಗುರುವಾಗಿ ಬೆಳೆಯಲು ಮತ್ತು ಅವರ ಕಾವ್ಯ ಅನುಸರಣೀಯವಾಗಿ ರೂಪುಗೊಳ್ಳಲು ಇರುವ ಪ್ರಮುಖ ಕಾರಣವೇನು? ಎಂಬ ಪ್ರಶ್ನೆ ಇಲ್ಲಿ ಮುಖ್ಯ. ಇದನ್ನು ಇಲ್ಲಿ ಚುಟುಕಾಗಿ ವಿವರಿಸಿಕೊಳ್ಳಬಹುದು. ತತ್ವಜ್ಞಾನಿಗಳು, ರಾಜಕೀಯ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಲೋಕವನ್ನು ತರ್ಕ, ವಿಶ್ಲೇಶಣೆ, ಮಂಥನಮನನಗಳ ಮೂಲಕ ಗ್ರಹಿಸಲು ಬಯಸುವರು. ತಮ್ಮ ವಿಚಾರಗಳನ್ನು ತಾತ್ವೀಕರಿಸಿ ಮಂಡಿಸುವವರು. ಆದರೆ ಶಿವಪ್ರಕಾಶರಂತಹ ಕವಿಗಳು ಕಾವ್ಯದ ಮೂಲಕವೇ ಇಡೀ ಲೋಕವನ್ನು ಗ್ರಹಿಸಿ ಅನುಸಂಧಾನ ನಡೆಸುವರು. ಅವರ ಕವಿತೆಗಳಲ್ಲಿ ಅಡಕವಾಗಿರುವ ವೈವಿಧ್ಯಮಯವಾದ ಕವಿತೆಯ ವಸ್ತುಗಳೇ ಇದನ್ನು ಸಾಬೀತುಪಡಿಸುತ್ತವೆ.

ಸೂಫಿ, ಶರಣ, ತತ್ವಪದಗಳು, ಪಾಶ್ಯಾತ್ಯ ಕಾವ್ಯಲೋಕದ ಪ್ರೇರಣೆ ಪ್ರಭಾವಗಳನ್ನು ಒಳಗೊಂಡಂತೆ ಬದುಕಿಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನು ಕೂಡ ಕಾವ್ಯದ ಮೂಲಕವೇ ಗ್ರಹಿಸವುದು ಇಲ್ಲಿ ಎದ್ದು ಕಾಣಿಸುತ್ತದೆ. ಹಾಗಾಗಿ ಇವರ ಕಾವ್ಯವನ್ನು ಲೋಕಾನುಸಂಧಾನದ ಕಾವ್ಯವೆಂದೇ ಕರೆಯಬಹುದು. ಅಂದರೆ ತಮ್ಮ ಸುತ್ತಲ ಜಗತ್ತಿನ ಆಗುಹೋಗುಗಳೆಲ್ಲವನ್ನೂ ಕಾವ್ಯದ ಮೂಲಕವೇ ಗ್ರಹಿಸುವ ಮತ್ತು ಆ ಲೋಕದ ಮೂಲಕವೇ ಗಮ್ಯವನ್ನು ಕಂಡುಕೊಳ್ಳುವ ಲೋಕದೃಶ್ಟಿಯಾಗಿ ಕಾವ್ಯ ಸೃಶ್ಟಿಯಾಗುವ ಬಗೆಯಿದು. ಕನ್ನಡದಲ್ಲಿ ಬೇಂದ್ರೆ, ಕುವೆಂಪು, ಗೋಪಾಲಕೃಶ್ಣ ಅಡಿಗ ಮೊದಲಾದವರು ಲೋಕವನ್ನು ಕಾವ್ಯದ ಮೂಲಕವೇ ಗ್ರಹಿಸುವ ಪ್ರಯತ್ನ ಮಾಡಿದ್ದರು. ಅದನ್ನು ಕಾವ್ಯವಾಗಿ ಮರುಸೃಶ್ಟಿಸುವ ಕೆಲಸ ಮಾಡುತ್ತಿದ್ದರು. ಕಿರಂ ನಾಗರಾಜ ಅಂತಹವರು ತಮ್ಮ ಮಾತನ್ನೇ ‘ಕಾವ್ಯ’ವಾಗಿಸುತ್ತಿದ್ದರು. ಅವರ ಮಾತು ಅನುಭಾವವಾಗಿಯೂ ಹೊರಬರುತ್ತಿತ್ತು. ಅದೇ ಅವರ ಮಾತನ್ನು ಸದಾ ಹೊಸತಾಗಿಸಿ ಕುತೂಹಲವನ್ನು ಹುಟ್ಟಿಸುತ್ತಿತ್ತು.

ಕಾವ್ಯವನ್ನು ಲೋಕಗ್ರಹಿಕೆಯ ನೆಲೆಯಾಗಿಸಿಕೊಂಡ ಕವಿಮನಸ್ಸುಗಳಿಗೆ ಬೌದ್ಧಿಕ ಚಟುವಟಿಕೆಗಳು ನಿರರ್ಥಕವೆನ್ನಿಸುವ ಸಾಧ್ಯತೆಯಿದೆ. ಬೌದ್ಧಿಕ ಚಿಂತನೆಗಳು ಜೀವಕಳೆದುಕೊಂಡಾಗ ಅವರಿಗೆ ಕಾವ್ಯವು ಸೃಜನಶೀಲ ಕ್ರಿಯೆಯ ನಿಜದ ಹೊರದಾರಿಯಾಗಿರಲು ಸಾಧ್ಯವಿದೆ. ಎಲ್ಲ ಸಂದರ್ಭಗಳಲ್ಲಿಯೂ ಮನುಶ್ಯರು ತರ್ಕಬದ್ಧವಾಗಿಯೇ ಜೀವಿಸಬೇಕೆಂದೇನಿಲ್ಲ. ತರ್ಕಾತೀತವಾದ ಅನುಭಾವ ಲೋಕದಲ್ಲಿಯೂ ಜೀವಿಸಲು ಸಾಧ್ಯವಿದೆ. ಬಹುಶಃ ಶಿವಪ್ರಕಾಶರಿಗೆ ಬೌದ್ಧಿಕ ಚರ್ಚೆಗಳು ಜಡ ಮತ್ತು ನಿರರ್ಥಕ ಎನ್ನಿಸಿರುವುದರಿಂದಲೇ ಕಾವ್ಯ ಅವರನ್ನು ಸೆಳೆದಂತೆ ವಿಮರ್ಶೆ ಸೆಳೆದಿಲ್ಲ. ಹಾಗಾಗಿ ಅವರಿಗೆ ಕಾವ್ಯವೇ ಗಮ್ಯವೂ ಆಗಿದೆ. ಆ ಗಮ್ಯ ತಲುಪುವ ದಾರಿಯೂ ಆಗಿದೆ.

ಅಂದರೆ ಅವರಿಗೆ ಕಾವ್ಯದ ಮೂಲಕ ಬೇರೆನನ್ನೋ ಹೇಳಬೇಕೆಂಬ ಹಠವಿಲ್ಲ. ಬದಲಿಗೆ ಕಾವ್ಯವನ್ನೇ ಜೀವಿಸುವುದಾಗಿದೆ. ಅವರ ಇದುವರೆಗಿನ ಕಾವ್ಯವನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಸಾಮಾನ್ಯವಾಗಿ ಕಾವ್ಯದ ಮೂಲಕ ನಡೆಸುವ ಲೋಕಾನುಸಂಧಾನ ತರ್ಕಾತೀತವಾಗಿದ್ದು ಅದು ಭಾವನಾಲೋಕವೊಂದನ್ನು ಸೃಶ್ಟಿಸುತ್ತದೆ. ಅಲ್ಲಿ ಕಲ್ಪನಾ ವಿಲಾಸದ ಲಾಸ್ಯವೂ ಇರುತ್ತದೆ. ಇಲ್ಲಿ ಎಲ್ಲ ಹಂಗುಗಳನ್ನು ಗಡಿ ಬೇಲಿಗಳನ್ನು ದಾಟಿ ಜೀವಿಸುವ ಬಗೆ ಕಾಣಿಸುತ್ತದೆ. ಇಲ್ಲಿ ಜನವಿರೋಧಿ ಸಿದ್ಧಾಂತಗಳು ಹುಟ್ಟಿಸುವ ವಿಕೃತಿಗಳಿಗೆ ಮನೋಲೋಕದಲ್ಲಿ ಉದಾತ್ತ ಭಾವನೆಗಳನ್ನು ಕಟ್ಟಿಕೊಳ್ಳುವುದೂ ಇದೆ. ಆ ಮೂಲಕ ಎಲ್ಲವನ್ನೂ ಮೀರುವ ದಿಕ್ಕರಿಸುವ ನೆಲೆಗೆ ತಲುಪಲಾಗುತ್ತದೆ.

ಶಿವಪ್ರಕಾಶ ಅವರ ಕಾವ್ಯವನ್ನು ಇಡಿಯಾಗಿ ಗಮನಿಸಿದರೆ ಈ ಅಂಶ ಸ್ಪಶ್ಟವಾಗುತ್ತದೆ. ದಲಿತಬಂಡಾಯ ಇಲ್ಲವೇ ಇತರೆ ಪ್ರಗತಿಪರ ಆಲೋಚನೆಗಳೊಂದಿಗೆ ಕನ್ನಡದಲ್ಲಿ ಬರೆದಿರುವ ಕವಿಗಳ ಹಾಗೆ ಕಾವ್ಯವನ್ನು ಸಮಾಜಶಾಸ್ತ್ರೀಯ ಚಟುವಟಿಕೆಯಾಗಿಸಲಿಲ್ಲ. ತರ್ಕಬದ್ದವಾದ ನೆಲೆಗಳಿಂದ ಆರಂಭವಾಗುವ ಕವಿತೆಗಳಿದ್ದರೂ ಅವು ಕೊನೆಗೊಳ್ಳುವ ಹೊತ್ತಿಗೆ ಅವು ಮತ್ತೊಂದು ದರ್ಶನದ ನೆಲೆಗೆ ಜಿಗಿಯುತ್ತವೆ. ಹಾಗೆ ಜಿಗಿಯುವ ಕೆಲಸವನ್ನು ಬಹಳ ಉದ್ದೇಶಪೂರ್ವಕವಾಗಿ ಮಾಡಲಾಗುತ್ತದೆ. ಯಾಕೆಂದರೆ ವಿಕೃತಿಗಳನ್ನು ಎದುರಿಸಲು ಕಟ್ಟಿಕೊಳ್ಳುವ ಸೀಮಿತ ಧೋರಣೆಗಳ ಚಿಂತನೆಗಳೂ ಮಠೀಯ ಚಿಂತನೆಗಳ ಹಾಗೆ ಜಡಗೊಳ್ಳಲು ಸಾಧ್ಯವಿದೆ. ಆದ್ದರಿಂದಲೇ ಲೋಕವನ್ನು ಕಾವ್ಯದ ಮೂಲಕವೇ ಗ್ರಹಿಸಲಾಗುತ್ತದೆ. ಆ ಮೂಲಕ ಕಾವ್ಯವನ್ನೇ ಗಮ್ಯವಾಗಿಸಿಕೊಂಡು ಅದರಲ್ಲಿಯೇ ಜೀವಿಸುತ್ತಾರೆ, ಅನುಭವಿಸುತ್ತಾರೆ ಮತ್ತು ಅದನ್ನು ಅನುಭಾವದ ನೆಲೆಗೇರಿಸುತ್ತಾರೆ. ಬೇಂದ್ರೆ, ಮಧುರಚನ್ನ, ಕುವೆಂಪು ಅವರ ನಂತರ ಕಾವ್ಯವನ್ನು ಆ ನೆಲೆಗೇರಿಸಿದ ಪ್ರಮುಖ ಕವಿ ಶಿವಪ್ರಕಾಶರಾಗಿದ್ದಾರೆ. ಅವರ ‘ಸಮಗಾರ ಭೀಮವ್ವ,’ ‘ಶಂಸ್ತಬ್ರಿಜ್’, ‘ನೀರಿನ ಜೋಗಿ’ ಅಂತಹ ಅನೇಕ ಕವಿತೆಗಳಿಂದ ಆರಂಭಗೊಂಡು ಇತ್ತೀಚಿನ ಕವಿತೆಗಳಲ್ಲಿಯೂ ಇದನ್ನು ಕಾಣಬಹುದು.

ಅಂದರೆ, ಶಿವಪ್ರಕಾಶ ಅವರು ನಾಟಕ, ಅನುವಾದ, ವಿಮರ್ಶೆ ಮೊದಲಾದ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದರೂ ಅವರ ಪ್ರಧಾನ ಆಯ್ಕೆ ಕಾವ್ಯವೇ ಆಗಿದೆ. ಅವರದೇ ಮಾತಿನಲ್ಲಿ ಹೇಳುವುದಾದರೆ ‘ಕವಿ ಮೌನ ಶಿವ ಧ್ಯಾನ’ವಾಗಿದೆ. ಅಂದರೆ ಕಾವ್ಯವು ಧ್ಯಾನಸ್ಥ ಮನಸ್ಸನ್ನು ಆವರಿಸಿಕೊಂಡಿರುವುದು. ಅವರ ಆಲೋಚನೆಯೆಲ್ಲವೂ ಕಾವ್ಯವೇ ಆಗಿದೆ. ಹಾಗಾಗಿಯೇ ಅವರು ಮಾತನಾಡಿದರೂ ನಾಟಕಗಳನ್ನು ಬರೆದರೂ ಅವರ ಎಲ್ಲ ಬರೆಹಗಳಲ್ಲಿಯೂ ಕಾವ್ಯದ ಕಸುವು ಎದ್ದು ಕಾಣಿಸುತ್ತದೆ. ಅವರ ಮಾತುಕೃತಿಗಳಲ್ಲಿ ನುಡಿ ರೂಪಕವಾಗಿ ಹೊಸ ಹೊಸ ತಿರುಳನ್ನು ಹುಟ್ಟಿಸುತ್ತದೆ. ಅಂದರೆ ಕಾವ್ಯದ ಮೂಲಕವೇ ಅವರೆಲ್ಲಾ ಪ್ರತಿಭಾ ಶಕ್ತಿಯನ್ನು ಬಸಿದಿದ್ದಾರೆ. ಬದುಕು ಬಾಳುವೆಗಳ ಎಲ್ಲ ಮಗ್ಗುಲಗಳನ್ನು ಶೋಧಿಸಿ ಅಭಿವ್ಯಕ್ತಿಸಲು ಕಾವ್ಯವನ್ನೇ ಪ್ರಧಾನ ಮಾಧ್ಯಮವನ್ನಾಗಿಸಿಕೊಂಡಿದ್ದಾರೆ.

ಅದು ಬುದ್ದಿಪೂರ್ವಕ ಕ್ರಿಯೆಯಾಗಿರುವಂತೆ ಭಾವಪೂರ್ವಕ ಕ್ರಿಯೆಯಾಗಿದೆ. ಹಾಗಾಗಿ ಅದು ‘ಬುದ್ಧಿಭಾವಗಳ ವಿದ್ಯುದಾಲಿಂಗನ’ ವಾಗಿರುವ ಕಾರಣ ತರ್ಕಕ್ಕೆ ಸಿಗುವ ಮತ್ತು ತರ್ಕಾತೀತವಾದ ಭಾವಗಳನ್ನು ಗ್ರಹಿಸಿ ಅನುಭವಿಸಿ ಅದನ್ನು ಓದುಗರದಾಗಿಸಲು ಕಾವ್ಯವು ಬೇರೆಲ್ಲಾ ಪ್ರಕಾರಗಳಿಗಿಂತ ಹೆಚ್ಚು ಅನುಕೂಲಕರವಾಗಿದೆ. ಬುದ್ದಿಯಿಂದ ಲೋಕವನ್ನು ಗ್ರಹಿಸುವುದಕ್ಕೆ ಕೆಲವು ಮಿತಿಗಳಿವೆ. ಹಾಗೆಯೇ ಯಾವಾಗಲೂ ಬುದ್ಧಿ ಮತ್ತು ತರ್ಕಬದ್ಧ ವಿಶ್ಲೇಶಣೆಗಳನ್ನು ನಿರಾಕರಿಸಿ ಭಾವುಕ ಮತ್ತು ಕಲ್ಪನಾಜಗತ್ತಿನಲ್ಲಿ ವಿಹರಿಸುವುದಕ್ಕೂ ಮಿತಿಗಳಿವೆ. ಆದರೆ ಕಾವ್ಯದಲ್ಲಿ ಈ ಎರಡನ್ನೂ ಹದಗೊಳಿಸಿ ದುಡಿಸಿಕೊಳ್ಳುವುದರಿಂದ ಸೃಜನಶೀಲತೆಗೆ, ವಿಶೇಶವಾಗಿ ಕಾವ್ಯ ಕಟ್ಟೋಣದ ಕ್ರಿಯೆಗೆ ಹೆಚ್ಚು ಅನುಕೂಲಗಳಿವೆ. ಶಿವಪ್ರಕಾಶರ ಕಾವ್ಯ ಇವೆರಡನ್ನೂ ಹದವರಿತು ದುಡಿಸಿಕೊಂಡಿರುವುದನ್ನು ಗಮನಿಸಬಹುದು.

ಇಲ್ಲಿ ಇನ್ನೊಂದು ಪ್ರಮುಖ ಸಂಗತಿಯನ್ನು ಗಮನಿಸಬೇಕಿದೆ. ಕವಿಗಳು ಬೇರೆಯವರಿಗೆ ಬರೆಯುತ್ತಾರೋ ಇಲ್ಲವೇ ತಮಗೆ ಬರೆದುಕೊಳ್ಳುತ್ತಾರೋ? ಎಂಬ ಪ್ರಶ್ನೆಯಿದೆ. ಇಂದು ಕನ್ನಡದಲ್ಲಿ ಬೇರೆಯವರಿಗೆ ಬರೆಯುವವರ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಪ್ರಶಸ್ತಿಗಳಿಗಾಗಿ ಬರೆಯುವವರೂ ಸೇರಿದ್ದಾರೆ. ಆದರೆ ನಿಜವಾದ ಕವಿಗಳು ಬದುಕಿನ ಸಂಕೀರ್ಣ ವಿಶಯಗಳನ್ನು ಎದುರುಗೊಂಡು ಶೋಧ ಮಾಡುವವರು, ಬುದ್ಧಿಗೆ ನಿಲುಕದ ಸಂಗತಿಗಳನ್ನು ಕುರಿತು ಬರೆಯುವವರು ಮೊದಲು ತಮಗೇ ಬರೆದುಕೊಳ್ಳುತ್ತಾರೆ. ತಮ್ಮಲ್ಲಿ ತಾವೇ ಪ್ರಶ್ನೆ ಕೇಳಿಕೊಂಡು ಇಲ್ಲವೇ ತಮ್ಮನ್ನು ಕಾಡುವ ವಸ್ತು, ವಿಶಯ, ನೋವು ನಲಿವು ಎಲ್ಲಗಳನ್ನೂ ತಮ್ಮಲ್ಲಿಯೇ ಅನುಭವಿಸುತ್ತ ಅವುಗಳ ನಿಜರೂಪವನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ. ಹಾಗೆ ಅವುಗಳನ್ನು ಮೊದಲು ತಮ್ಮಲ್ಲಿ ಅನುಭವಿಸಿ ಬರೆಯುತ್ತಾರೆ. ಹಾಗೆ ಬರೆದಾಗ ಮಾತ್ರವೇ ಅವುಗಳಲ್ಲಿ ಬುದ್ಧಿಭಾವಗಳ ಕಾವು, ಅದರ ತೀವ್ರತೆ ಸರಿಯಾಗಿ ವ್ಯಕ್ತವಾಗುವುದು. ಆಗ ಮಾತ್ರವೇ ನಿಜವಾದ, ಪ್ರಾಮಾಣಿಕವಾದ ರಚನೆಗಳೂ ಆಗುವುದು.

ಕವಿಗಳು ಮನುಶ್ಯರು ವ್ಯಕ್ತಿಗತವಾಗಿ ಅನುಭವಿಸುವ ಯಾವುದೇ ತಲ್ಲಣಗಳನ್ನು ವಿಚಾರಗಳನ್ನು ತಮ್ಮೊಳಗೆ ಅನುಭವಿಸಿ ಅವನ್ನು ಸರಿಯಗಿ ಬೇರೂರಿಸದಿದ್ದರೆ ಅದು ರಚನೆಗಳಲ್ಲಿಯೂ ಶಕ್ತಿಯುತವಾಗಿ ವ್ಯಕ್ತವಾಗುವುದಿಲ್ಲ. ಅದು ಟೊಳ್ಳಾಗಿರುತ್ತದೆ. ಅಂತಹ ಟೊಳ್ಳಿನ ರಚನೆಗಳು ಭಾವನೆಗಳು ವಿಚಾರಗಳು ಇಂದಿನ ಕನ್ನಡ ಕಾವ್ಯದಲ್ಲಿ ವ್ಯಾಪಕವಾಗಿ ಕಾಣಿಸುತ್ತಿದೆ.

ಆದರೆ ಶಿವಪ್ರಕಾಶರ ಕಾವ್ಯವು ಇದಕ್ಕಿಂತ ಭಿನ್ನವಾದುದು. ಅವರು ಬರೆಯುವ ಮೊದಲು ಅವರು ತಮಗೆ ಬರೆದುಕೊಂಡಿದ್ದಾರೆ. ತಮ್ಮೊಳಗೆ ಅನುಭವಿಸಿದ್ದಾರೆ. ಅದರ ಹಿಂದಿನ ಬುದ್ಧಿಭಾವಗಳನ್ನು ಧಾರಣೆ ಮಾಡಿಕೊಂಡು ಬರೆದಿದ್ದಾರೆ ಎನ್ನಿಸುತ್ತದೆ. ಅದನ್ನು ಅವರ ಕವಿತೆಗಳಲ್ಲಿ ಆಳವಾಗಿ ಅನುಭವಿಸಿದ ಮತ್ತು ಹೊಸ ಹೊಸ ಭಾವಗಳಿಗೆ ಹುಡುಕಾಡಿರುವ ಪ್ರಯತ್ನ ನಿಚ್ಚಳವಾಗಿ ಕಾಣಿಸುತ್ತದೆ. ಹೀಗೆ ನಡೆಸಿದ ಹುಡುಕಾಟ ಕೇವಲ ಬುದ್ಧಿಯದು ಮಾತ್ರವಲ್ಲ. ಅದನ್ನು ತಮ್ಮೊಳಗೆ ಅನುಭವಿಸಿ ಅದಕ್ಕೆ ಜೀವಕೊಟ್ಟಿರುವುದಿದೆ. ಅವರು ಸೂಫಿಗಳು, ತತ್ವಪದಕಾರರು, ಶರಣರು, ಸಂತರ ಬಗೆಗೆ ಬರೆದ ಬಹುತೇಕ ಕವಿತೆಗಳು ಹೀಗೆ ಅನುಭವಿಸಿ ಬರೆದ ಕವಿತೆಗಳೇ ಆಗಿವೆ. ಅವುಗಳಲ್ಲಿ ಕಪಟವಿಲ್ಲ.

ಈ ದೃಶ್ಟಿಯಿಂದ ನೋಡಿದರೆ ಅವರು ನಿಜವಾದ ಅನುಭಾವಿ ಕವಿ. ಇವರನ್ನು ಕುರುಡಾಗಿ ಅನುಸರಿಸಿ ತಮ್ಮನ್ನು ತಾವು ಅನುಭಾವಿ ಕವಿಗಳೆಂದು ಕರೆದುಕೊಳ್ಳುವ ಕಿರಿಯ ಕವಿಗಳೂ ಇದ್ದಾರೆ. ಇದು ಸೃಜನಶೀಲತೆಯ ಅಪ್ರಾಮಾಣಿಕತೆಯನ್ನು ಎತ್ತಿತೋರಿಸುತ್ತದೆ. ಕಾವ್ಯದಲ್ಲಿ ಒಮ್ಮೆ ಅಪ್ರಾಮಾಣಿಕತೆ ನಿಚ್ಚಳವಾಗಿ ಕಾಣಿಸಲಾರಂಭಿಸಿದ ಕೂಡಲೇ ಅಂತಹ ಸಾಹಿತ್ಯ ಟೊಳ್ಳಾಗಿಬಿಡುತ್ತದೆ. ಆದರೆ ಶಿವಪ್ರಕಾಶರು ಅನುಭಾವಿಕ ನೆಲೆಗಳನ್ನು ಅರಿಯುತ್ತ ಅದನ್ನು ಆವಾಹಿಸಿಕೊಂಡು ಬರೆದವರಾಗಿದ್ದಾರೆ. ಅಂದರೆ ಅನುಭಾವಿಕ ಆಶಯವುಳ್ಳ ಕವಿತೆಗಳು ಮಾತ್ರವಲ್ಲದೆ ಬದುಕಿಗೆ ಎದುರಾದ ಯಾವುದೇ ಸಂಕಶ್ಟಗಳನ್ನು ಕಾವ್ಯವಾಗಿಸುವಾಗಲೂ ಅದನ್ನು ಅಂತರಂಗೀಕರಿಸಿಕೊಂಡು ಕಾವ್ಯವಿನ್ಯಾಸಗೊಳಿಸಿದ್ದಾರೆ. ಬುದ್ದಿಭಾವಗಳ ಸಮ್ಮಿಲನ ಅಲ್ಲಿ ಕಾಣಿಸುತ್ತದೆ. ಹಾಗಾಗಿ ಅವರ ಕಾವ್ಯದಲ್ಲಿ ಆಳ, ಅಗಲ ಮತ್ತು ವಿಸ್ತಾರಗಳು ಎದ್ದುಕಾಣಿಸುತ್ತವೆ.

ಅವರಲ್ಲಿ ನನಗೆ ಎದ್ದು ಕಾಣಿಸುವ ಮತ್ತೊಂದು ಪ್ರಮುಖ ಅಂಶವೆಂದರೆ ನಿತ್ಯವನ್ನು ನಿತ್ಯವೂ ನೂತನವಾಗಿಯೇ ಗ್ರಹಿಸುವ ಬಗೆ ಮಹತ್ವದ್ದು. ಇಂದು ಬರೆಯುತ್ತಿರುವ ಅನೇಕ ಲೇಖಕರಿಗೆ ವರ್ತಮಾನವನ್ನು ಅರಿಯುವ ಬಗೆಗಳೇ ತಿಳಿದಿಲ್ಲ. ಆದ್ದರಿಂದಲೇ ಅವರಿಗೆ ವರ್ತಮಾನವನ್ನು ರೂಪಕವಾಗಿ ಗ್ರಹಿಸಿ ಸೃಜನಶೀಲಗೊಳಿಸಲು ಸಾಧ್ಯವಾಗುತ್ತಿಲ್ಲ. ಸವಕಲು ಗ್ರಹಿಕೆಯ ವಿಧಾನಗಳನ್ನು ಅನುಸರಿಸುವುದರಿಂದ ಲೋಕದ ಸೂಕ್ಶ್ಮಗಳು ಕಾವ್ಯಜಗತ್ತನ್ನು ಪ್ರವೇಶಿಸುವುದೇ ಇಲ್ಲ. ಆದರೆ ಶಿವಪ್ರಕಾಶರಿಗೆ ವರ್ತಮಾನವನ್ನು ಬದಲಾಗುತ್ತಿರುವ ವಿದ್ಯಮಾನಗಳನ್ನು ಹೊಸಬಗೆಯಲ್ಲಿ ಗ್ರಹಿಸುತ್ತ ಅದನ್ನು ಕಾವ್ಯವಾಗಿಸುವ ಕಲೆ ಸಿದ್ದಿಸಿದೆ. ಹಾಗಾಗಿಯೇ ಅವರ ಕಾವ್ಯ ‘ನಿಚ್ಚಂ ಪೊಸತಾಗಿ’ಯೇ ಕಾಣಿಸುತ್ತದೆ. ಅವರ ‘ಮಬ್ಬಿನ ಹಾಗೆ ಕಣಿವೆಯಾಸಿ’ ಸಂಕಲನದ ಬಹುತೇಕ ಕವಿತೆಗಳನ್ನು ಹೆಸರಿಸಬಹುದು. ವಿಶೇಶವಾಗಿ ಇಂದಿನ ನವ ವಸಾಹತುಶಾಹಿ À ಕಾಲಘಟ್ಟದ ದುರಂತಗಳನ್ನು ಕವಿತೆಯಲ್ಲಿ ಶಕ್ತವಾಗಿ ಸೆರೆಹಿಡಿದಿದ್ದಾರೆ. ‘ಕ್ಯಾಲಿಬನ್‍ನ ಗದ್ಯಗೀತೆ’ ಎಂಬ ಕವಿತೆಯಲ್ಲಿ ವಸಾಹತುಶಾಹಿಯ ಆಕ್ರಮಣಕಾರಿ ನೀತಿಯನ್ನು ಅದ್ಭುತವಾಗಿ ಮಂಡಿಸಿದ್ದಾರೆ:

ನೀನು ನಮಗೆ ಮಾಡಿದ್ದನ್ನು

ನಾನು ಮಾಡಹತ್ತಿದ್ದೀನಿ ನಮ್ಮ ಜನತೆಗೆ

ನನಗೀಗ ಹಗೆ ನನಗೆ ನಾನೇ

ನಾನು ಪ್ರಾಸ್ಪೆರೋ ಆಗಿ ನನಗೆ ನಾನೇ

ಪ್ರಾಸ್ಪೆರೋ ಆಗಿ ನನಗೆ ನಾನೇ

ಮೃತ್ಯು ಹಗೆ

ಈ ಮೇಲಿನ ಪದ್ಯ ಭಾಗದಲ್ಲಿ ವಸಾಹತುಶಾಹಿ ಆಡಳಿತಕ್ಕೆ ಸಿಕ್ಕು ಅದರಿಂದ ವಿಮೋಚನೆಗೊಂಡು ಸ್ವತಂತ್ರಗೊಂಡ ದೇಶಗಳ ಆಳುವ ವರ್ಗಗಳು ತನ್ನದೇ ದೇಶದ ತನ್ನದೇ ಪ್ರಜೆಗಳನ್ನು ದಮನಿಸುವ ಬಗೆಯನ್ನು ವಿಡಂಬಿಸಲಾಗಿದೆ. ಅಲ್ಲದೆ ವಸಾಹತುಶಾಹಿ ಮತ್ತು ದೇಶೀಯ ಪ್ರಜೆಗಳ ನಡುವಿದ್ದ ಸಂಘರ್ಶ ಇಂದು ಇಲ್ಲವಾಗಿದೆ. ಆದರೆ ತಮ್ಮದೇ ದೇಶದ ಜನರ ನಡುವೆ ಆಂತರಿಕ ಕಲಹಕ್ಕೆ ಎಡೆಮಾಡಿಕೊಟ್ಟಿರುವ ದುರಂತವನ್ನು ಕವಿತೆ ಸೂಚ್ಯವಾಗಿ ವ್ಯಕ್ತಗೊಳಿಸಿದೆ. ಹೀಗೆ ತಮ್ಮ ಕವಿತೆಗಳಲ್ಲಿ ಶಿವಪ್ರಕಾಶರು ಭಿನ್ನ ಮತ್ತು ಸೂಕ್ಶ್ಮ ಲೋಕದೃಶ್ಟಿಯನ್ನು ಮಂಡಿಸುವ ಕಾರಣಕ್ಕಾಗಿಯೇ ಮಹತ್ವದ ಕವಿಯಾಗಿ ಬೆಳೆದಿದ್ದಾರೆ. ಅಂದರೆ ಅನುಭಾವದ ಸಂವೇದನೆಗಳಲ್ಲಿ ಅಮೂರ್ತವಾದ ಸಂಗತಿಗಳನ್ನು ಇಂದ್ರಿಯಾನುಭವಕ್ಕೆ ತರುವ ಹಾಗೆಯೇ ರಾಜಕೀಯ ವಿಚಾರಗಳನ್ನು ಕಾವ್ಯದಲ್ಲಿ ತರುವಾಗಲೂ, ಅದನ್ನು ವಾಚ್ಯವಾಗಿಸದೆ ಧ್ವನಿಪೂರ್ಣವಾಗಿಸಿ ಕಾವ್ಯವಾಗಿಸುತ್ತಾರೆ. ಇದು ಅವರು ಕಾವ್ಯ ಕಟ್ಟುವ ಅಸಲಿ ಕಸುಬುದಾರರು ಎಂಬುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತದೆ.

ಇಲ್ಲಿಯವರೆಗೂ ಅವರ ಹನ್ನೆರಡು ಸಂಕಲನಗಳು ಪ್ರಕಟವಾಗಿದ್ದವು. ಈಗ ಅವೆಲ್ಲವೂ ಒಗ್ಗೂಡಿ ‘ಹೋಗಿ ಬನ್ನಿ ಋತುಗಳೇ’ ಎಂಬ ಸಮಗ್ರ ಸಂಕಲನ ಪ್ರಕಟವಾಗಿದೆ. ಈ ಪ್ರಕಟಣೆ ಅವರ ಕಾವ್ಯವನ್ನು ಇಂದು ಮತ್ತೊಮ್ಮೆ ಓದುವಂತೆ ಒತ್ತಾಯಿಸುತ್ತದೆ. ಅವರ ಕಾವ್ಯವನ್ನು ಯಾವುದೋ ಒಂದು ರೇಖಾತ್ಮಕ ನೆಲೆಯಲ್ಲಿ ಗ್ರಹಿಸಲು ಸಾಧ್ಯವಿಲ್ಲ. ಅದಕ್ಕೆ ವಿವಿಧ ಕೇಂದ್ರಗಳಿರುವುದರಿಂದ ವಿಭಿನ್ನ ಆಯಾಮಗಳಿಂದ ಅಭ್ಯಾಸ ನಡೆಯಬೇಕಿದೆ. ಅಂತಹ ಓದು ಇಂದು ಸಾಧ್ಯವಾಗಲಿ ಎಂಬ ಅಪೇಕ್ಶೆಯಿಂದ ಶಿವಪ್ರಕಾಶರ ಸಮಗ್ರ ಕಾವ್ಯ ಪ್ರಕಟವಾಗಿರುವ ಸಂದರ್ಭದಲ್ಲಿ, ಅದರ ನೆಪವಾಗಿ ಅವರ ಕಾವ್ಯದ ಬಗೆಗೆ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ದಾಖಲಿಸಲಾಗಿದೆ.

ಸಾಹಿತ್ಯದ ವಿದ್ಯಾರ್ಥಿಗಳು ಶಿವಪ್ರಕಾಶರ ಕಾವ್ಯವನ್ನು ಇಂದು ಮತ್ತೊಮ್ಮೆ ಗಂಭೀರವಾಗಿ ಓದುವ ಮೂಲಕ ಕನ್ನಡ ಕಾವ್ಯ ಸಾಧಿಸಿರುವ ಸಿದ್ದಿಯನ್ನು ಒರೆ ಹಚ್ಚಬೇಕಿದೆ. ಆ ಮೂಲಕ ಕವಿಯಾಗಿ ಶಿವಪ್ರಕಾಶರು ಸಾಧಿಸಿರುವ ಸಿದ್ದಿಯನ್ನು ಕಂಡುಕೊಳ್ಳಬೇಕಿದೆ. ಇದನ್ನು ಕಂಡುಕೊಳ್ಳಲು ಶಿವಪ್ರಕಾಶರ ಕಾವ್ಯದ ಓದು ವ್ಯಾಪಕವಾಗಿ ನಡೆಯಲಿ ಎಂಬ ಉದ್ದೇಶದಿಂದ ಈ ಟಿಪ್ಪಣಿ ಬರೆಯಲಾಗಿದೆ.

(ಗಮನಿಸಿ: ಈ ಲೇಖನದಲ್ಲಿ ಶ ಮತ್ತು ಷ ಗಳನ್ನು ಪೂರಕವಾಗಿ ಒಂದಕ್ಕೆ ಮತ್ತೊಂದು ಬದಲಿಯಾಗಿ ಬಳಸಲಾಗಿದೆ; ಇವು ಮುದ್ರಣ ದೋಷಗಳಲ್ಲ. ಲಿಪಿಗೆ ಸಂಬಂಧಿಸಿದಂತೆ ಲೇಖಕರಿಗೆ ಬೇರೆಯದೇ ಅಭಿಪ್ರಾಯವಿರುವುದು ಇದಕ್ಕೆ ಕಾರಣ)

*ಲೇಖಕರು ಮೂಲತಃ ದೊಡ್ಡಬಳ್ಳಾಪುರ ತಾಲ್ಲೂಕು ಕಂಟನಕುಂಟೆಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.., ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಪಿ.ಎಚ್.ಡಿ. ಪಡೆದಿದ್ದಾರೆ. ಪ್ರಸ್ತುತ ಮೈಸೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರು.

Leave a Reply

Your email address will not be published.