ಒಟಿಟಿ ಎಂಬ ಮನರಂಜನೆಯ ಮಾಯಾಲೋಕ

ಪ್ರಸ್ತುತ ಚಾಲ್ತಿಯಲ್ಲಿರುವ 40ಕ್ಕೂ ಅಧಿಕ ಒಟಿಟಿ ವಾಹಿನಿಗಳು ಮುಂದಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಟ್ಟಣ ಪ್ರದೇಶಗಳನ್ನು ಪ್ರವೇಶಿಸಲಿವೆ. 2023 ವೇಳೆಗೆ ದೇಶದ ಒಟಿಟಿ ಮಾರುಕಟ್ಟೆ 37,500 ಕೋಟಿ ರೂ ತಲುಪುವ ಸಾಧ್ಯತೆ ಇದೆ.

ಡಾ..ಎಸ್.ಬಾಲಸುಬ್ರಹ್ಮಣ್ಯ

ಕಳೆದ ಎರಡು ವರ್ಷಗಳಲ್ಲಿ ಮಿಂಚಿನ ವೇಗದಲ್ಲಿ ಬೆಳೆದ ಮನರಂಜನಾ ಮಾಧ್ಯಮವೆಂದರೆ ಒಟಿಟಿ ಎಂಬ ಅಂತರ್ಜಾಲ ಆಧಾರಿತ ಆಧುನಿಕ ತಂತ್ರಜ್ಞಾನ. ಒಟಿಟಿ (ಓವರ್ ದಿ ಟಾಪ್) ಎಂದರೆ ಕೇಬಲ್ ಇಲ್ಲವೇ ಡಿಶ್ ಗಳ ಮೇಲೆ ಅವಲಂಬನೆ ಇಲ್ಲದೆ ನೇರವಾಗಿ ಅಂತರ್ಜಾಲ ಇರುವವರ ಮನೆಗೆ ಇಲ್ಲವೇ ಅಂತರ್ಜಾಲ ಚಂದಾ ಹೊಂದಿರುವ ಸ್ಮಾರ್ಟ್ ಫೆೀನ್ ಗಳಿಗೆ ಲಭ್ಯವಿರುವ ವಿನೂತನ ಸೇವೆಯಿದು. ಕೋವಿಡ್ ತೀವ್ರವಾಗಿದ್ದ ಸಮಯದಲ್ಲಿ ಜನತೆಗೆ ಬೇಕೆಂದಾಗ ಬೇಕಾದಲ್ಲಿ ಅವರಿಷ್ಟಪಡುವ ಮನರಂಜನಾ ಕಾರ್ಯಕ್ರಮಗಳನ್ನು ನೋಡಬೇಕೆಂಬ ಒತ್ತಾಸೆ ಜಾಸ್ತಿಯಾದಾಗ ಮಾಧ್ಯಮ ವೇಗವಾಗಿ ಪಸರಿಸಿತು.

ರಾಜ್ಯಕ್ಕೆ ಮೊದಲ ಟಿ.ವಿ. ಪ್ರಸಾರ ಬೆಂಗಳೂರಿಗೆ ಬಂತು. ಮೈಕ್ರೋವೇವ್ ಸಂಪರ್ಕ ವ್ಯವಸ್ಥೆ ಬಳಸಿಕೊಂಡು ಮದರಾಸಿನಿಂದ ಕಾರ್ಯಕ್ರಮಗಳನ್ನು ಪ್ರಸಾರಿಸಲಾಗುತ್ತಿತ್ತು. ಸಂವಹನ ಉಪಗ್ರಹ ಲಭ್ಯವಾದಂತೆ ದೆಹಲಿ ಕಾರ್ಯಕ್ರಮಗಳು ನೇರವಾಗಿ ಪ್ರಸಾರ ಗೊಳ್ಳುತ್ತಿದ್ದವು. ಕಡಿಮೆ ಶಕ್ತಿಯ ಪ್ರಸಾರ ಪ್ರೇಷಕಗಳು ಜಿಲ್ಲೆಗೊಂದರಂತೆ ಇಡೀ ದೇಶವನ್ನು ಆವರಿಸಿದವು. ಇವೆಲ್ಲ ಭೂಸಂಬಂಧಿತ ಪ್ರಸಾರ ವ್ಯವಸ್ಥೆ. ಆಂಗ್ಲ ಭಾಷೆಯಲ್ಲಿ ಟೆರೆಸ್ಟ್ರಿಯಲ್ ಟ್ರಾನ್ಸ್ ಮಿಶನ್ ಎಂದು ಕರೆಯಲಾಗುವುದು. ಇಲ್ಲಿ ಟಿವಿ ಸಂಕೇತಗಳು ನೇರವಾಗಿ ಇಲ್ಲವೆ ಆಂಟೆನಾ ಮೂಲಕ ನಿಮ್ಮ ಟಿವಿ ಪೆಟ್ಟಿಗೆಯಲ್ಲಿ ಚಿತ್ರಗಳನ್ನು ಮೂಡಿಸುತ್ತಿದ್ದವು. 1990 ಕೊಲ್ಲಿ ಯುದ್ಧದ ಸಮಯದಲ್ಲಿ ಸಂವಹನ ಉಪಗ್ರಹಗಳ ಮೂಲಕ ಟಿವಿ ಸಂಕೇತಗಳು ಜಗತ್ತಿನೆಲ್ಲೆಡೆ ದೊರೆಯಲಾರಂಭಿಸಿದವು. ಕೇಬಲ್ ಆಪರೇಟರ್ ಗಳು ನಗರ ಪ್ರದೇಶಗಳ ಬಹುಪಾಲು ಮನೆಗಳಿಗೆ ಸಂಪರ್ಕ ಕಲ್ಪಿಸಿ ಹಲವಾರು ವಾಹಿನಿಗಳನ್ನು ನೀಡಿದರು. ಹಲವಾರು ಡಿಶ್ ಅಂಟೆನಾಗಳನ್ನು ಒಂದೆಡೆ ಇರಿಸಿ, ಬೇರೆಬೇರೆ ಉಪಗ್ರಹಗಳಿಂದ ವಿವಿಧ ವಾಹಿನಿಗಳ ಸಂಕೇತಗಳನ್ನು ಸಂಗ್ರಹಿಸಿ ಕೇಬಲ್ ಸಂಪರ್ಕದ ಮೂಲಕ ಭಿನ್ನ ಭಾಷೆಯ ವಾಹಿನಿಗಳ ವೈವಿಧ್ಯಮಯ ಕಾರ್ಯಕ್ರಮಗಳು ದೊರೆತವು.

ಇದರ ನಂತರದ ಬಹು ದೊಡ್ಡ ಬೆಳವಣಿಗೆಯೆಂದರೆ, ಕೇಬಲ್ ಆಪರೇಟರ್ಗಳ ಅವಲಂಬನೆಯನ್ನು ಬಿಡಿಸಿದ ಡಿಶ್ ಆಂಟೆನಾ ತಂತ್ರಜ್ಞಾನ. ನಿಮ್ಮ ಮನೆಯ ಮೇಲೆ ಡಿಶ್ ಅಳವಡಿಸಿ ಕೇಬಲ್ ಮುಖಾಂತರ ಸೆಟ್ ಟಾಪ್ ಬಾಕ್ಸ್ಗೆ ಸಂಪರ್ಕಿಸಿ ನೀವು ನೀಡುವ ಚಂದಾ ಆಧಾರಿತ ಡಿಶ್ ಟಿವಿ, ಟಾಟಾ ಸ್ಕೈ, ಏರ್ ಟೆಲ್ ಮುಂತಾದ ಸಂಸ್ಥೆಗಳ ಸೇವೆ. ತಂತ್ರಜ್ಞಾನ ಚಿತ್ರ ಹಾಗೂ ಧ್ವನಿಯ ಸ್ಪಷ್ಟತೆಯನ್ನು ಮತ್ತಷ್ಟು ಉತ್ತಮಗೊಳಿಸಿತು. ಆದರೆ ಎಲ್ಲ ಸೇವೆಗಳ ಮಿತಿ ಎಂದರೆ, ಕಾರ್ಯಕ್ರಮಗಳು ಬಂದಾಗ ಇಲ್ಲವೆ ಮರುಪ್ರಸಾರವಾದಾಗ ಕಾದು ಕುಳಿತು ವೀಕ್ಷಿಸಬೇಕಾಗುವ ಪರಿಮಿತಿ. ಇಲ್ಲವೇ ರೆಕಾರ್ಡ್ ಮಾಡಿ ನೋಡಬೇಕು. ಆದರೆ ಒಟಿಟಿ ಜಾಗತಿಕ ಮನರಂಜನೆಯ ಹೆಬ್ಬಾಗಿಲನ್ನೇ ತೆರೆಯಿತು. ಇಲ್ಲಿ ಕಾದು ಕುಳಿತು ನಿಮ್ಮ ಇಷ್ಟದ ಸುದ್ದಿ, ಸಿನಿಮಾ, ಧಾರಾವಾಹಿಗಳ ವೀಕ್ಷಣೆ ಬದಲು, ನಿಮಗಿಷ್ಟವಾದ ಸಮಯದಲ್ಲಿ ಎಲ್ಲಿ ಬೇಕಾದರಲ್ಲಿ ವೀಕ್ಷಿಸುವ ಸಲಿಗೆಯನ್ನು ವಿನೂತನ ಮಾಧ್ಯಮ ಕಲ್ಪಿಸಿತು. ಮತ್ತೊಂದು ಮಹತ್ತರ ಬದಲಾವಣೆಯೆಂದರೆ ಅಂತರ್ಜಾಲ ಸಂಪರ್ಕ ಇರುವ ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್ ಫೆೀನ್ ಗಳಲ್ಲಿ ಸಹ ಕಾರ್ಯಕ್ರಮಗಳ ವೀಕ್ಷಣೆ ಸಾಧ್ಯವಾಯಿತು. ಟಿವಿ ಸೆಟ್ ಮುಂದೆ ಕುಳಿತೇ ಮನರಂಜನಾ ಕಾರ್ಯಕ್ರಮಗಳನ್ನು ನೋಡುವ ಅನಿವಾರ್ಯತೆ ಈಗ ಇಲ್ಲವಾಯಿತು. ಮನೆಯಿಂದಲೇ ಕೆಲಸ ಮಾಡುವವರಿಗೆ ಇದು ವರದಾನವಾಯ್ತು.

ಜಗತ್ತಿನ 770 ಕೋಟಿ ಜನಸಂಖ್ಯೆಯಲ್ಲಿ ಶೇ.60 ರಷ್ಟು ಜನ ದಕ್ಷಿಣ ಏಷಿಯಾದಲ್ಲೇ ನೆಲೆಸಿದ್ದಾರೆ. ಚೀನಾ, ಭಾರತ, ಪಾಕಿಸ್ತಾನ, ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಬಾಂಗ್ಲಾದೇಶ ಭಾಗದಲ್ಲಿ ಬರುವ ಪ್ರಮುಖ ಜನನಿಬಿಡ ದೇಶಗಳು. ವೇಗವಾಗಿ ಬೆಳೆಯುತ್ತಿರುವ ಮಧ್ಯಮ ವರ್ಗ, ಕಂಪ್ಯೂಟರ್ ಗಳನ್ನು ಬಳಸದೆ ನೇರವಾಗಿ ಸ್ಮಾರ್ಟ್ ಫೆೀನ್ ಮೂಲಕ ಅಂತರ್ಜಾಲ ಬಳಸುವ ನೂತನ ಜನಾಂಗ ಓಟಿಟಿಗೆ ನೇರವಾಗಿ ಬಡ್ತಿ ಪಡೆಯಿತು. ಇದೇ ಅವರಿಗೆ ಕ್ಯಾಮೆರಾ, ಟಿವಿ ಪರದೆ, ಹಾಡು ಕೇಳುವ, ಸುದ್ದಿ ಆಲಿಸುವ, ಸಂದೇಶ ಕಳಿಸುವ ಸಾಧನವಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಶೇ.70 ರಷ್ಟು ಅಂತರ್ಜಾಲ ವ್ಯವಹಾರಗಳೆಲ್ಲ ಮೊಬೈಲ್ ಮೂಲಕವೇ ನಡೆಯುತ್ತಿದೆ ಎಂದರೆ ಆಶ್ಚರ್ಯವೆನಿಸುತ್ತದೆ. ವಯೋಮಾನದವರ ಇನ್ನೊಂದು ಬೇಡಿಕೆ `ತತ್ ಕ್ಷಣದ ತೃಪ್ತಿ‘. ಕಳೆದೆರಡು ವರ್ಷಗಳ ಕೋವಿಡ್ ಸಮಯದಲ್ಲಿ ಚಲನವಲನಗಳ ಬಹುಪಾಲು ನಿರ್ಬಂಧಗಳು ಮನರಂಜನಾ ಮಾದ್ಯಮಗಳತ್ತ ಮುಖ ಮಾಡಲು ಕಾರಣವಾದವು.

ಇನ್ನೂ ಒಂದು ವಿಶೇಷವೆಂದರೆ ಗೂಗಲ್ ಮೇಲಿನ ಅವಲಂಬನೆ ಕಡಿಮೆಯಾಗಿ, ತಮ್ಮ ವೃತ್ತಿಗೆ ಇಲ್ಲವೇ ಹವ್ಯಾಸಗಳಿಗೆ ಪೂರಕವಾದ ಮಾಹಿತಿ ಮೂಲಗಳನ್ನಷ್ಟೇ ವಿಶೇಷವಾಗಿ ಅವಲೋಕಿಸುವ ಪ್ರವೃತ್ತಿ ನೆಟ್ಟಿಗರಲ್ಲಿ ಹೆಚ್ಚುತ್ತಿದೆ. ಅಂದರೆ, ಬೇಕಾದ ಮಾಹಿತಿ ಇಲ್ಲವೇ ಮನರಂಜನಾ ಮೂಲವನ್ನು ನೇರವಾಗಿ ಸಂಪರ್ಕಿಸುವ ಪ್ರವೃತ್ತಿ. ಒಟಿಟಿ ಇಂತಹವರನ್ನೇ ಗುರಿಯಾಗಿಸಿ ನೇರಾನೇರ ಸೇವೆಗಳನ್ನು ನೀಡಲಾರಂಬಿಸಿ ಜನಪ್ರಿಯವಾಗುತ್ತಿರುವ ತಂತ್ರಜ್ಞಾನ.

ಟಿವಿಯಲ್ಲಿ ಬೇರೆಬೇರೆ ಭಾಷೆ ಇಲ್ಲವೇ ಕಾರ್ಯಕ್ರಮಗಳ ವೈವಿಧ್ಯ ವಾಹಿನಿಗಳಿರುವಂತೆ, ಒಟಿಟಿಯಲ್ಲಿ ವರ್ಗೀಕರಣ ಮತ್ತೊಂದು ಮಜಲು ಏರುತ್ತದೆ. ಉದಾಹರಣೆಗೆ ಒಟಿಟಿ ಮೂಲಕ ನೀವು ಸನ್ ಟಿವಿ ಸೇವೆ ಪಡೆಯುತ್ತಿದ್ದರೆ ಎಲ್ಲ ಭಾಷೆಗಳ ಸಿನೆಮಾಗಳನ್ನು ಪ್ರತ್ಯೇಕವಾಗಿ ಪಡೆಯುವುದಲ್ಲದೆ, ದಶಕಗಳ ಅನುಕ್ರಮಣಿಕೆಯಲ್ಲಿ ದಕ್ಷಿಣ ಭಾಷೆಗಳ ಚಿತ್ರಗಳನ್ನು ವಿಂಗಡಿಸಲಾಗಿದೆ. ನಂತರ 1950, 60, 70 ದಶಕಗಳಲ್ಲಿ ನಿರ್ಮಿತವಾದ ಲಭ್ಯ ಸಿನೆಮಾಗಳನ್ನು ಸುಲಭವಾಗಿ ಆಯ್ಕೆ ಮಾಡಿ ವೀಕ್ಷಿಸಬಹುದು.

ಒಟಿಟಿ ತಂತ್ರಜ್ಞಾನ: ಲಭ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಕೇಂದ್ರ ಸರ್ವರ್ ನಲ್ಲಿ ಶೇಖರಿಸಿ ಇಡಲಾಗುವುದು. ವರ್ಗೀಕರಣದ ಅನುಸಾರ ವೀಕ್ಷಕರು ತಮಗೆ ಬೇಕಾದ ಕಾರ್ಯಕ್ರಮಗಳನ್ನು ಆಯ್ಕೆ ಮಾಡಿ ರಿಮೋಟ್ ಮೂಲಕ ಕ್ಲಿಕ್ ಮಾಡಿ ನೋಡಬಹುದು. 70-80 ದಶಕದಲ್ಲಿ ಜನಪ್ರಿಯವಾಗಿದ್ದ ವಿಸಿಆರ್ (ವಿಡಿಯೋ ಕ್ಯಾಸೆಟ್ ರೆಕಾರ್ಡರ್), ವಿಸಿಪಿ(ವಿಡಿಯೋ ಕ್ಯಾಸೆಟ್ ಪ್ಲೇಯರ್) ಗಳಲ್ಲಿ ವಿಡಿಯೋ ಟೇಪ್ ಗಳನ್ನು ವೀಕ್ಷಿಸುವಾಗ ನಡುವೆ ನಿಲ್ಲಿಸಿ ಕೆಲ ಹೊತ್ತಿನ ನಂತರ ವೀಕ್ಷಣೆ ಮುಂದುವರೆಸಬಹುದಿತ್ತು. ಬೇಡದ್ದಿದ್ದ ದೃಶ್ಯಗಳನ್ನ ಬಿಟ್ಟು ಮುಂದೆ ಹೋಗಬಹುದಾಗಿತ್ತು ಇಲ್ಲವೇ ಆಸಕ್ತಿಯುತ ಹಾಡು ಅಥವಾ ದೃಶ್ಯಗಳನ್ನು ನೋಡಲು ಹಿಂದೆ ಹೋಗಿ ನೋಡುವ ಅವಕಾಶಗಳಿತ್ತು. ಎಲ್ಲ ಸೌಲಭ್ಯಗಳು ಈಗ ಒಟಿಟಿಯಲ್ಲಿ ದೊರೆಯುತ್ತವೆ. ನೀವು ನೋಡುತ್ತಿರುವ ಸಿನಿಮಾ ಇಲ್ಲವೆ ಇತರೆ ಕಾರ್ಯಕ್ರಮಗಳನ್ನು (ನೇರ ಪ್ರಸಾರ ಹೊರತುಪಡಿಸಿ) ನಿಲ್ಲಿಸಿ ಕೆಲ ಸಮಯದ ನಂತರ ಪುನಃ ಮುಂದುವರೆಸಬಹುದು. ಪ್ರಸಾರ ನಿಮ್ಮ ರಿಮೋಟ್ ನಲ್ಲಿ ಹೇಳಿದಂತೆ ಕೇಳುತ್ತದೆ. ಎಲ್ಲ ಸುಗಮತೆ ಒಟಿಟಿ ಜನಪ್ರಿಯತೆಗೆ ಇನ್ನೊಂದು ಪ್ರಮುಖ ಕಾರಣ.

ಒಟಿಟಿ ಪ್ರಸಾರದ ಕೇಂದ್ರ ಸರ್ವರ್ ರಕ್ಷಣೆಗೆ ಕಟ್ಟೆಚ್ಚರ ವಹಿಸಲಾಗಿದೆ. ಹ್ಯಾಕರ್ ಗಳಿಂದ ರಕ್ಷಣೆಗಾಗಿ ಹಾಗೂ ಮೂಲ ಕಾರ್ಯಕ್ರಮಗಳ ಪೈರಸಿ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆಗಳಿವೆ. ಬೇಡಿಕೆಗಳಿಗೆ ಅನುಸಾರವಾಗಿ ಸರ್ವರ್ ಗಳ ಸಂಖ್ಯೆ ವೃದ್ಧಿಯಾಗುತ್ತವೆ. ಕೇಂದ್ರ ಸರ್ವರ್ ನಿಂದ ನಿಮ್ಮ ಮನೆಗೆ ಕ್ಷಣ ಮಾತ್ರದಲ್ಲಿ ಕಾರ್ಯಕ್ರಮಗಳ ರವಾನೆಯಾಗುತ್ತವೆ. ಈಗಿನ ಸ್ಮಾರ್ಟ್ ಟಿವಿಗಳು ಅಂತರ್ಜಾಲ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ತಯಾರಾಗಿವೆ. ಅವು ನೇರವಾಗಿ ಅಂತರ್ಜಾಲ ಸಂಕೇತಗಳನ್ನು ಸ್ವೀಕರಿಸಿ ಸಂದೇಶ ಇಲ್ಲವೆ ಚಿತ್ರಗಳನ್ನು ಸ್ವೀಕರಿಸುವ ಸಾಮಥ್ರ್ಯ ಹೊಂದಿವೆ. ಇನ್ನು ಕೆಲ ಟಿವಿಗಳಲ್ಲಿ ವಿಶೇಷ ಸಂಪರ್ಕ ಕಲ್ಪಿಸುವ ಸಾಕೆಟ್ ಗಳನ್ನು ನೀಡಲಾಗಿದೆ. ಅಮೆಜಾನ್ ಪ್ರೈಮ್ ನವರು ನೀಡುವ ಫೈರ್ ಟಿವಿ ಇಲ್ಲವೆ ಕ್ರೋಮೋಕ್ಯಾಸ್ಟ್ ಸಾಧನಗಳ ಮೂಲಕ ಅಂತರ್ಜಾಲ ಸಂಕೇತಗಳನ್ನು ಪಡೆದು, ಟಿವಿಯಲ್ಲಿ ನಿಮಗೆ ಬೇಕಾದ ಒಟಿಟಿ ವಾಹಿನಿಗಳ ಚಂದಾದಾರರಾಗಿ ವೀಕ್ಷಿಸಬಹುದು. ಉಚಿತವಾಗಿ ದೊರೆಯುವ ಯುಟ್ಯೂಬ್ ವಾಹಿನಿಯನ್ನು ವೀಕ್ಷಿಸಲು ಯಾವ ಅಡ್ಡಿಯೂ ಇಲ್ಲ.

ವರ್ಗಿಕರಣ: ಗ್ರಂಥಾಲಯಗಳಲ್ಲಿ ಬಗೆಬಗೆಯ ಪುಸ್ತಕಗಳು ವರ್ಗೀಕೃತವಾಗಿ ದೊರೆಯುವಂತೆ, ಒಟಿಟಿ ವಾಹಿನಿಗಳಲ್ಲಿ ವೈವಿಧ್ಯಮಯ ಮನರಂಜನೆ, ಶಿಕ್ಷಣ, ಆರೋಗ್ಯ, ವ್ಯಾಯಾಮ, ಪ್ರವಾಸ, ಸಂಗೀತ, ಜನಪ್ರಿಯ ಟಿವಿ ಶೋ ಗಳು, ಮಕ್ಕಳ ಕಾರ್ಯಕ್ರಮಗಳು, ಕಥಾಚಿತ್ರ ಹಾಗೂ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು, ಪ್ರವಾಸಿ, ಜೀವನಶೈಲಿ, ಫ್ಯಾಷನ್, ಭಕ್ತಿ ಕಾರ್ಯಕ್ರಮಗಳು ಲಭ್ಯ. ಇವುಗಳನ್ನು ಪುನಃ ಮರುವಿಂಗಡಣೆ ಮಾಡಿ ನಿರ್ದಿಷ್ಟ ಆಸಕ್ತಿಯುತ ಕಾರ್ಯಕ್ರಮಗಳನ್ನು ನೇರವಾಗಿ ನೀವು ನೋಡಬಹುದು. ಹುಡುಕಾಟ ಕಡಿಮೆ, ಅಲ್ಲದೆ ಸಮಯದ ಉಳಿತಾಯ ಸಹ ಸಾಧ್ಯ. ನಿಮಗೆ ಸಿನಿಮಾ ನೋಡುವ ಆಸಕ್ತಿ ಇದ್ದರೆ, ಅಪರಾಧ, ರೋಮ್ಯಾಂಟಿಕ್, ಪತ್ತೇದಾರಿ, ಐತಿಹಾಸಿಕ, ಸಾಂಸಾರಿಕ, ಭಕ್ತಿ ಪ್ರಧಾನ, ವೈಜ್ಞಾನಿಕ, ವ್ಯಕ್ತಿ ಪ್ರಧಾನ (ಬಯೋಪಿಕ್) –ಹೀಗೆ ನೇರವಾಗಿ ಬಗೆಯ ಸಿನೆಮಾಗಳ ಗುಂಪಿಗೆ ಹೋಗಿ ನೀವು ಆಯ್ಕೆ ಮಾಡಬಹುದು.

ಕೋವಿಡ್ ಅವಧಿಯಲ್ಲಂತೂ ಶೈಕ್ಷಣಿಕ ಹಾಗೂ ವ್ಯಾಯಾಮ ಸಂಬಂಧಿ ಕಾರ್ಯಕ್ರಮಗಳು ಬಹು ಜನಪ್ರಿಯವಾಗಿದ್ದವು. ಇದೇ ಟ್ರೆಂಡ್ ಈಗಲೂ ಮುಂದುವರೆದಿದೆ. ಜನಪ್ರಿಯ ಧಾರಾವಾಹಿಗಳನ್ನು ವೀಕ್ಷಿಸುವ ಅಡೆತಡೆಗಳನ್ನು ಒಟಿಟಿ ವಾಹಿನಿಗಳು ಪೂರ್ಣವಾಗಿ ಮರೆಯಾಗಿಸಿವೆ. ನಿಮಗೆ ಬಿಡುವಿದ್ದರೆ ನಿಮ್ಮ ನೆಚ್ಚಿನ ಧಾರಾವಾಹಿಯ ಹತ್ತಾರು ಎಪಿಸೋಡ್ ಗಳನ್ನು ಏಕಕಾಲದಲ್ಲಿ ನೋಡಿ ಮುಗಿಸಬಹುದು. ಟಿವಿ ವಾಹಿನಿಗಳಲ್ಲಿ ಇರುವಂತೆ ಅಧಿಕ ಸಂಖ್ಯೆಯ ಜಾಹೀರಾತುಗಳ ಕಿರಿಕಿರಿ ಇಲ್ಲ. ಓಟಿಟಿ ವಾಹಿನಿಗಳಲ್ಲಿ ಜಾಹೀರಾತುಗಳು ಇದ್ದರೂ ಅವು ಬಹು ಕಡಿಮೆ. ಹೆಚ್ಚುವರಿ ಜಾಹೀರಾತುಗಳು ಬಂದಾಗ ಅವುಗಳನ್ನು ನೀವು ಜಿಗಿಸಬಹುದು. ಬಹು ಹೊತ್ತು ನೀವು ಟಿವಿ ಆನ್ ಮಾಡಿ ರಿಮೋಟ್ ಬಳಸದೆ ಬೇರೆ ಕೆಲಸದಲ್ಲಿ ನಿರತರಾಗಿದ್ದರೆ, ತನ್ನಿಂತಾನೇ ಟಿವಿ ನಿಲ್ಲುತ್ತದೆ. ಅಂದರೆ, ನೀವೊಬ್ಬ ಸಕ್ರಿಯ ವೀಕ್ಷಕರಾಗಿರಬೇಕು.

ಒಟಿಟಿ ವಾಹಿನಿಗಳ ವಿಶೇಷತೆ: ಒಟಿಟಿ ವಾಹಿನಿಗಳು ಹಳೆ ಮತ್ತು ಹೊಸ ಕಾರ್ಯಕ್ರಮಗಳ ಜತೆಗೆ ಟಿವಿ ವಾಹಿನಿಗಳ ನೇರ ಪ್ರಸಾರ ಕಾರ್ಯಕ್ರಮಗಳನ್ನೂ ಬಿತ್ತರಿಸುತ್ತವೆ. ವೀಕ್ಷಕರನ್ನು ಒಟಿಟಿಯತ್ತ ಆಕರ್ಷಿಸಲು ದೀರ್ಘ ಹಾಗೂ ಮಧ್ಯಮಾವಧಿಯ ಧಾರಾವಾಹಿಗಳನ್ನು (ಎಂಟು, 10, 14 ಕಂತುಗಳಲ್ಲಿ) ನಿರ್ಮಿಸಿ ಪ್ರಸಾರ ಮಾಡುತ್ತವೆ. ಇವುಗಳು ಹೊಸ ಪ್ರತಿಭೆಗಳಿಗೆ ನೆರವಾಗಿವೆ. ಫ್ಯಾಮಿಲಿ ಮ್ಯಾನ್, ಮಿರ್ಜಾಪುರ, ಪಾತಾಳಲೋಕ, ಡೆಲ್ಲಿ ಕ್ರೈಮ್ಸ್, ಹರ್ಷದ್ ಮೆಹತಾ ಸ್ಟೋರಿ ಮುಂತಾದ ಧಾರಾವಾಹಿಗಳನ್ನು ಹೆಸರಿಸಬಹುದು. ವಾಹಿನಿಗಳಿಗೆಂದೇ ನೂರಾರು ಕಥಾ ಚಿತ್ರಗಳು ನಿರ್ಮಾಣಗೊಂಡು ಪ್ರಸಾರವಾಗಿವೆ. ಹಲವು ಚಿತ್ರಗಳನ್ನು ಒಟಿಟಿ ವಾಹಿನಿಗಳೇ ನಿರ್ಮಿಸಿದರೆ ಉಳಿದ ಹಲವು ಚಿತ್ರಗಳನ್ನ ಖರೀದಿಸಿ ಪ್ರಸಾರಿಸುತ್ತವೆ. ಕೊರೊನ ಅವಧಿಯಲ್ಲಿ ಚಿತ್ರಮಂದಿರಗಳು ಮುಚ್ಚಿದ್ದಾಗ, ಹಲವಾರು ದೊಡ್ಡ ಬಜೆಟ್ ಸಿನಿಮಾಗಳು ನೇರವಾಗಿ ಓಟಿಟಿ ವಾಹಿನಿಯಲ್ಲಿ ಬಿಡುಗಡೆಗೊಂಡವು.

ಉದಾಹರಣೆಗೆ ಕನ್ನಡದ `ಯುವರತ್ನಹಿಂದಿಯಲ್ಲಿ `ರಾಧೇಮುಂತಾದ ಚಿತ್ರಗಳನ್ನು ಹೆಸರಿಸಬಹುದು. ಇವುಗಳಿಗೆ ಒಂದು ಬೆಲೆ ನಿಗದಿಪಡಿಸಿ ಖರೀದಿಸಲಾಯಿತು. ಲಾಭನಷ್ಟ ಒಟಿಟಿ ವೇದಿಕೆಗೆ ಸೇರಿದ್ದು. ಚಿತ್ರ ರಂಗಕ್ಕೆ ನೀವು ಹೊಸಬರಾದರೆ, ನಿಮ್ಮ ಚಿತ್ರಗಳನ್ನು ವೀಕ್ಷಿಸುವ ಸಂಖ್ಯೆಯ ಆಧಾರದ ಮೇಲೆ ನಿಮಗೆ ಸಂಭಾವನೆ ದೊರೆಯುತ್ತದೆ. ಒಟಿಟಿ ಸಿನೆಮಾಗಳಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದ ಸ್ಟಾರ್ ನಟರು, ಈಗ ಇವುಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಹೊಸಬರಿಗಂತೂ ಓಟಿಟಿ ವೇದಿಕೆಗಳು ವರದಾನವಾಗಿವೆ. ವೇದಿಕೆಗಳ ಇನ್ನೊಂದು ವಿಶೇಷತೆ ಎಂದರೆ ಇಡೀ ಜಗತ್ತೇ ನಿಮಗೆ ಮಾರುಕಟ್ಟೆ. ಯಾರು, ಎಲ್ಲಿ ಬೇಕಾದರೂ ನಿಮ್ಮ ಕಥಾಚಿತ್ರ, ಸಾಕ್ಷ್ಯಚಿತ್ರ ಇಲ್ಲವೇ ಕಿರುಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತವೆ. ಅನೇಕ ಹೆಸರಾಂತ ಸಿನಿಮಾ ನಿರ್ದೇಶಕರು ಈಗ ಒಟಿಟಿ ಚಿತ್ರಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಹಲವರು ದೇಸಿ ಭಾಷೆಗಳಲ್ಲಿ ಒಟಿಟಿ ವೇದಿಕೆಗಳನ್ನು ಮುನ್ನೆಲೆಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ವಾಹಿನಿಗಳನ್ನು ಜನಪ್ರಿಯಗೊಳಿಸಲು ಒಟಿಟಿ ವೇದಿಕೆಗಳು ಬಹು ವಿಧದ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತವೆ. ಉದಾಹರಣೆಗೆ ಓರ್ವ ಅಮೇಜಾನ್ ಪ್ರೈಮ್ ಚಂದಾದಾರ ತನ್ನ ಹತ್ತು ಸ್ನೇಹಿತರ ಜತೆ ಲಾಗಿನ್ ವಿವರಗಳನ್ನು ಹಂಚಿಕೊಂಡು ಕಾರ್ಯಕ್ರಮಗಳನ್ನು ವೀಕ್ಷಿಸಲು ನೆರವಾಗಬಹುದು. ನೆಟ್ ಫ್ಲಿಕ್ಸ್ ಚಂದಾದಾರರು ಸಹ ಟಿವಿ ಇಲ್ಲವೇ ಮೊಬೈಲ್ ಅಥವಾ ಲ್ಯಾಪ್ ಟಾಪ್ ಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತವೆ.

ಡಿಶ್ ಇಲ್ಲವೇ ಕೇಬಲ್ ಸೇವೆಯವರು ನೀಡುವಂತೆ, ಹಲವಾರು ಒಟಿಟಿ ವಾಹಿನಿಗಳನ್ನು ಒಟ್ಟಿಗೆ ನೀಡುವ ಹೊಸ ಸೇವೆಯನ್ನು ಏರ್ಟೆಲ್ ಮತ್ತು ಜಿಯೋ ಸಂಸ್ಥೆಯವರು ನೀಡುತ್ತಿದ್ದಾರೆ. ಉದಾಹರಣೆಗೆ ಜಿಯೋ ಸಂಸ್ಥೆಯವರು 1200 ರೂ ಮಾಸಿಕ ಚಂದಾ ಹಣಕ್ಕೆ 10 ಒಟಿಟಿ ವಾಹಿನಿಗಳು, ಒಂದು ಲ್ಯಾಂಡ್ ಲೈನ್ ಫೆೀನ್ ಹಾಗೂ ಉಚಿತ ಅಂತರ್ಜಾಲ ಸೇವೆ ನೀಡುತ್ತಿದ್ದಾರೆ. ಒಮ್ಮೆ ಸೇವೆ ಪಡೆದನಂತರ, ಪ್ರೈಮ್ ಸೇವೆಗಳು ಬೇಕೆಂದೆನಿಸಿದರೆ, ಮತ್ತಷ್ಟು ಹಣ ನೀಡಿ ಅವುಗಳನ್ನು ಪಡೆಯಬಹುದು. ಯು ಟ್ಯೂಬ್ ಸೇರಿದಂತೆ ಹಲವಾರು ಉಚಿತ ವಾಹಿನಿಗಳು ಸಹ ಸೇವೆಯಲ್ಲಿ ಸೇರಿವೆ.

ಒಟಿಟಿ ವೇದಿಕೆ ಎಷ್ಟು ಜನಪ್ರಿಯವಾಗಿದೆ ಎಂದರೆ ಅಮೆರಿಕೆಯ ಶೇ.50 ರಷ್ಟು ಮಂದಿ ಮಾಸಿಕ 675 ರೂ ನೀಡಿ ನೆಟ್ ಫ್ಲಿಕ್ಸ್ ಗೆ ಚಂದಾದಾರರಾಗಿದ್ದಾರೆ. ಪ್ರೀಮಿಯಂ ಸೇವೆಗೆ ಮಾಸಿಕ 1350 ನೀಡಿದರೆ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ಕೇಬಲ್ ಸೇವೆಗಿಂತ ಇದು ಕಡಿಮೆಯಷ್ಟೇ ಅಲ್ಲ, ವಿಶೇಷವಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ. ಕೋವಿಡ್ ಸಮಯದಲ್ಲಿ ಮನೆಯೊಳಗೆ ಬಂದಿ ಆದಾಗ ಜನತೆಗೆ ಹೊಸ ಮನರಂಜನಾ ಲೋಕವೇ ಹೊರಹೊಮ್ಮಿತು. ದೇಶಿಯ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ವೀಕ್ಷಕರಿಗೆ ಜಾಗತಿಕ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಸಿಸುವ ಸದಾವಕಾಶ ದೊರೆಯಿತು.

ಸ್ಪೇನ್ ಇಲ್ಲವೇ ಕೊರಿಯಾ ದೇಶಗಳಲ್ಲಿ ನಿರ್ಮಾಣಗೊಂಡ ಅನೇಕ ಜನಪ್ರಿಯ ಟಿವಿ ಷೋಗಳು ಇಂದು ಎಲ್ಲೆಡೆ ಮನೆಮಾತಾಗಿವೆ. ದೇಶ ವಿದೇಶಗಳ ಕ್ರಿಯಾತ್ಮಕ ಪ್ರತಿಭೆಗಳು ನಿರ್ಮಿಸಿರುವ ಕಿರುಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು ಜೀವನದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಕನ್ನಡಿಗಳಂತಿವೆ. ಕೆಲವು ಚಿತ್ರಗಳು ವಿವಿಧ ಭಾಷೆಗಳಿಗೆ ಡಬ್ ಆಗಿದ್ದರೆ, ಬಹುತೇಕ ಚಿತ್ರಗಳು ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಹೊಂದಿರುವುದರಿಂದ, ಚಿತ್ರದ ಕಥೆ ನಿಮ್ಮ ಮನಮುಟ್ಟುತ್ತದೆ. ಹೊಸ ಮತ್ತು ಹಳೆಯ ಚಲನಚಿತ್ರಗಳು ಮತ್ತು ಟಿವಿ ಧಾರಾವಾಹಿಗಳನ್ನು ಆಸಕ್ತರು ಪುನಃ ಬೇಕೆಂದಾಗ ನೋಡಬಹುದಾಗಿದೆ.

ಟಿವಿ ವೀಕ್ಷಣೆಗೆ ಭಾರತ ಬಹು ದೊಡ್ಡ ಮಾರುಕಟ್ಟೆ. ಒಟಿಟಿ ವೇದಿಕೆಗಳು ಜನಪ್ರಿಯವಾಗುತ್ತಿದ್ದಂತೆ ಮಧ್ಯಮ ವರ್ಗದ ಬಹುತೇಕ ನಗರವಾಸಿಗಳು ಅಂತರ್ಜಾಲ ಸಂಪರ್ಕಕ್ಕೆ ಬಂದಿದ್ದಾರೆ. ಹೊಸ ಮಾರುಕಟ್ಟೆಯ ಅನ್ವೇಷಣೆಗೆ ಹಲವಾರು ಧುಮಿಕಿದ್ದಾರೆ. ನೆಟ್ ಫ್ಲಿಕ್ಸ್, ಅಮೆಜಾನ್ ಜತೆಗೆ, ಸೋನಿ ಲೈವ್, ಎಂ.ಎಕ್ಸ್.ಪ್ಲೇಯರ್, ಡಿಸ್ನಿ ಹಾಟ್ ಸ್ಟಾರ್, ವೂಟ್, ಜೀ5, ಸನ್ ಟಿವಿ, ಎಎಲ್ ಟಿ ಬಾಲಾಜಿ, ಇರೊಸ್ ನೌ, ಜಿಯೋ ಸಿನಿಮಾ ಮುಂತಾದವು ಪ್ರಮುಖವಾಗಿವೆ.

ಚೀನಾ ಹೊರತುಪಡಿಸಿದರೆ, ಸ್ಮಾರ್ಟ್ ಫೆೀನ್ (76 ಕೋಟಿ) ಗ್ರಾಹಕರನ್ನು ಹೊಂದಿರುವ ಬಹುದೊಡ್ಡ ದೇಶ ನಮ್ಮದು. 65 ಕೋಟಿ ಅಂತರ್ಜಾಲ ಚಂದಾದಾರರು ನಮ್ಮಲ್ಲಿದ್ದಾರೆ. ಪ್ರಸ್ತುತ ನಮ್ಮ ದೇಶದಲ್ಲಿ ಮೂರು ಕೋಟಿ ಒಟಿಟಿ ವಾಹಿನಿಗಳ ಚಂದಾದಾರರಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ 40ಕ್ಕೂ ಅಧಿಕ ಒಟಿಟಿ ವಾಹಿನಿಗಳು ಮುಂದಿನ ವರ್ಷಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಟ್ಟಣ ಪ್ರದೇಶಗಳನ್ನು ಪ್ರವೇಶಿಸಲಿವೆ. 2023 ವೇಳೆಗೆ ದೇಶದ ಒಟಿಟಿ ಮಾರುಕಟ್ಟೆ ಐದು ಬಿಲಿಯನ್ ಡಾಲರ್ (37,500 ಕೋಟಿ ರೂ) ತಲುಪುವ ಸಾಧ್ಯತೆ ಇದೆ ಎಂದು ಮನರಂಜನಾ ಕ್ಷೇತ್ರದ ಪರಿಣತರು ಅಂದಾಜಿಸಿದ್ದಾರೆ.

*ಲೇಖಕರು ವಿಶ್ರಾಂತ ಪತ್ರಿಕೋದ್ಯಮ ಪ್ರಾಧ್ಯಾಪಕರು ಮತ್ತು ಮಾಧ್ಯಮ ತಜ್ಞರು.

Leave a Reply

Your email address will not be published.