ಕರ್ನಾಟಕದಲ್ಲಿ ಜಾರಿಯಲ್ಲಿರುವ ಮೌಢ್ಯ ನಿಷೇಧ ಕಾಯ್ದೆಯಲ್ಲಿ ಏನಿದೆ?

2013ರಲ್ಲಿ ಸಿದ್ದರಾಮಯ್ಯ ಸರ್ಕಾರ ತರಲು ಉದ್ದೇಶಿಸಿದ್ದ ಮೌಢ್ಯ ನಿಷೇಧ ಕಾಯ್ದೆ ನಿರಂತರ ವಾದವಿವಾದ, ಅಡಚಣೆಗಳಿಂದ ನೆನೆಗುದಿಗೆ ಬಿದ್ದಿತ್ತು. ಕೊನೆಗೆ 2020ರಲ್ಲಿ ಯಡಿಯೂರಪ್ಪ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿತು. ಕಾನೂನಿನ ಮುಖ್ಯಾಂಶಗಳನ್ನು ಓದುಗರ ಅವಗಾಹನೆಗಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ.

ಇವುಗಳನ್ನು ನಿಷೇಧಿಸಲಾಗಿದೆ:

 • ಭಾನಾಮತಿ, ಮಾಟಮಂತ್ರ ಮಾಡುವುದು. ಗುಪ್ತ ನಿಧಿ, ನಿಕ್ಷೇಪಗಳ ಅನ್ವೇಷಣೆ, ಅದಕ್ಕಾಗಿ ವಾಮಾಚಾರ ಮಾಡುವುದು.

 • ವ್ಯಕ್ತಿಯ ದೇಹದ ಮೇಲೆ ಅಗೋಚರ ಶಕ್ತಿಯನ್ನು ಆಹ್ವಾನಿಸಲಾಗಿದೆ ಅಥವಾ ವ್ಯಕ್ತಿ ಅಂಥ ಶಕ್ತಿ ಹೊಂದಿದ್ದಾನೆ ಎಂದು ನಂಬಿಸುವುದು.

 • ದೆವ್ವ ಉಚ್ಚಾಟನೆ ಮಾಡುವ ನೆಪದಲ್ಲಿ ವಿವಿಧ ರೀತಿಯ ಹಿಂಸೆ ನೀಡುವುದು.

 • ನಿರ್ದಿಷ್ಟ ವ್ಯಕ್ತಿ ದುರಾದೃಷ್ಟಕ್ಕೆ ಕಾರಣ, ರೋಗಗಳನ್ನು ಹರಡುತ್ತಾನೆ ಎಂದು ಆರೋಪಿಸುವುದು. ಪಾಪಿ ಅಥವಾ ಪಾಪಾತ್ಮ ಎಂದು ಹೇಳುವುದು, ಸೈತಾನ ಅಥವಾ ಸೈತಾನನ ಅವತಾರವೆಂದು ಘೋಷಿಸುವುದು.

 • ಮಂತ್ರ ಪಠಿಸಿ ದೆವ್ವಗಳನ್ನು ಆಹ್ವಾನಿಸುತ್ತೇವೆ ಎಂದು ಹೇಳಿ ಜನರಲ್ಲಿ ಗಾಬರಿ, ಭಯ ಹುಟ್ಟಿಸುವುದು.

 • ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಬದಲು, ದುಷ್ಟ ಮತ್ತು ಅಘೋರಿ ಕೃತ್ಯ ಆಚರಿಸಲು ಪ್ರೇರೇಪಿಸುವುದು.

 • ಬರಿಗೈ ಬೆರಳುಗಳಿಂದ ಶಸ್ತ್ರಚಿಕಿತ್ಸೆ, ಮಹಿಳೆಯ ಗರ್ಭದಲ್ಲಿನ ಭ್ರೂಣದ ಲಿಂಗ ಬದಲಾಯಿಸುವುದಾಗಿ ಹೇಳುವುದು.

 • ತನ್ನಲ್ಲಿ ವಿಶೇಷ ಶಕ್ತಿ ಇದೆ. ಪವಿತ್ರಾತ್ಮದ ಅವತಾರ ಅಥವಾ ಹಿಂದಿನ ಜನ್ಮದಲ್ಲಿ ಪತಿ, ಪತ್ನಿ ಅಥವಾ ಅನೈತಿಕ ಸಂಬಂಧವಿದ್ದ ಪ್ರೇಮಿ ಆಗಿದ್ದೇವೆಂಬ ಭಾವನೆ ಉಂಟು ಮಾಡುವುದು.

 • ಕೊಕ್ಕೆಯಿಂದ ನೇತು ಹಾಕುವುದು (ಸಿಡಿ), ದೇಹಕ್ಕೆ ಚುಚ್ಚಿಕೊಂಡ ಕೊಕ್ಕೆಯ ಮೂಲಕ ರಥ ಎಳೆಯುವುದು.

 • ಮಕ್ಕಳಿಗೆ ಚಿಕಿತ್ಸೆ ಹೆಸರಿನಲ್ಲಿ ಎತ್ತರದಿಂದ ಎಸೆಯುವುದು, ಮುಳ್ಳುಗಳ ಮೇಲೆ ಮಲಗಿಸುವುದು.

 • ಋತುಮತಿ, ಬಾಣಂತಿಯನ್ನು ಒಂಟಿಯಾಗಿರುವಂತೆ ಮಾಡುವುದು, ಬೆತ್ತಲೆ ಸೇವೆ, ಬೆತ್ತಲೆ ಮೆರವಣಿಗೆ.

 • ಪ್ರಾಣಿಯ ಕುತ್ತಿಗೆಯನ್ನು ಕಚ್ಚಿ (ಗಾವು) ಕೊಲ್ಲುವುದು.

 • ಸಾರ್ವಜನಿಕ ಅಥವಾ ಧಾರ್ಮಿಕ ಸ್ಥಳಗಳಲ್ಲಿ ಊಟ ಮಾಡಿ ಬಿಟ್ಟ ಎಲೆಗಳ ಮೇಲೆ (ಮಡೆ ಸ್ನಾನ) ಉರುಳಾಡುವುದು.

 • ಕೆಂಡ ಹಾಯುವ ಪದ್ಧತಿ ಆಚರಿಸುವಂತೆ ಬಲವಂತಪಡಿಸುವುದು.

 • ಬಾಯಿ ಬೀಗ ಪದ್ಧತಿ, ಅಂದರೆ ನಾಲಗೆಯೂ ಸೇರಿದಂತೆ ಒಂದು ದವಡೆಯಿಂದ ಇನ್ನೊಂದು ದವಡೆಗೆ ಕಬ್ಬಿಣದ ಸಲಾಕೆ ತೂರಿಸುವುದು.

 • ಭಾನಾಮತಿ ಹೆಸರಿನಲ್ಲಿ ಮನೆಗಳ ಮೇಲೆ ಕಲ್ಲು ತೂರುವುದು.

 • ನಾಯಿ, ಹಾವು, ಚೇಳು ಕಡಿತಕ್ಕೆ ಔಷಧ ಮಾಡದೇ ಮಂತ್ರ, ತಂತ್ರ, ಗಂಧದೋರ ಮತ್ತು ಅಂತಹ ವಸ್ತುಗಳಿಂದ ಚಿಕಿತ್ಸೆ.

 • ಇವೆಲ್ಲವುಗಳ ಬಗ್ಗೆ ಜಾಹೀರಾತು ನೀಡುವುದು. ಇವುಗಳಿಗೆ ನಿಷೇಧವಿಲ್ಲ:

 • ಧಾರ್ಮಿಕ, ಅಧ್ಯಾತ್ಮಿಕ ಸ್ಥಳಗಳಲ್ಲಿ ಪ್ರದಕ್ಷಿಣೆ, ಯಾತ್ರೆ, ಪರಿಕ್ರಮ ಮತ್ತು ಪೂಜೆ.

 • ಹರಿಕಥೆ, ಕೀರ್ತನೆ, ಪ್ರವಚನ, ಭಜನೆ, ಪ್ರಾಚೀನ ಮತ್ತು ಪಾರಂಪಾರಿಕ ಕಲಿಕೆಗಳು, ಕಲೆಗಳು, ಪದ್ಧತಿ ಮತ್ತು ಅದರ ಪ್ರಸಾರ.

 • ದೈವಾಧೀನರಾದ ಸಂತರ ಪವಾಡದ ಬಗ್ಗೆ ಮಾತನಾಡುವುದು. ಪ್ರಚಾರ ಮಾಡುವುದು, ಸಾಹಿತ್ಯ ಪ್ರಸಾರ.

 • ಮನೆ, ದೇವಾಲಯ, ದರ್ಗಾ, ಗುರುದ್ವಾರ, ಪಗೋಡ, ಚರ್ಚ್ ಅಂಥ ಧಾರ್ಮಿಕ ಸ್ಥಳಗಳಲ್ಲಿ ದೈಹಿಕವಾಗಿ ಹಾನಿ ಉಂಟು ಮಾಡದಿರುವ ಪ್ರಾರ್ಥನೆ, ಉಪಾಸನೆ, ಧಾರ್ಮಿಕ ಆಚರಣೆ.

 • ಧರ್ಮಾಚರಣೆಗೆ ಅನುಸಾರವಾಗಿ ಮಕ್ಕಳ ಕಿವಿಗಳು, ಮೂಗು ಚುಚ್ಚುವುದು, ತಪ್ತ ಮುದ್ರಾಧಾರಣೆ, ಜೈನ ಸಂಪ್ರದಾಯದ ಕೇಶಲೋಚನ.

 • ವಾಸ್ತುಶಾಸ್ತ್ರ ಸಲಹೆ, ಜ್ಯೋತಿಷ್ಯ ಮತ್ತು ಜ್ಯೋತಿಷ್ಯಗಳಿಂದ ಸಲಹೆ. ಉಲ್ಲಂಘನೆಗೆ ಶಿಕ್ಷೆ:

ಮಾಟ, ಮಂತ್ರ, ತಂತ್ರ, ವಾಮಾಚಾರ ಮುಂತಾದವುಗಳಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ.5000 ದಿಂದ ರೂ.50,000 ವರೆಗೆ ದಂಡ ವಿಧಿಸಲಾಗುವುದು.

ಅಧಿಕಾರಿಗಳಿಗೆ ಕಾರ್ಯಾಗಾರ:

ಕಾಯ್ದೆ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು. ಪ್ರತಿ ಆರು ತಿಂಗಳಿಗೊಮ್ಮೆ ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಸಲಾಗುವುದು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಆರು ತಿಂಗಳಿಗೊಮ್ಮೆ ವಿವಿಧ ಜಿಲ್ಲೆಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು.

Leave a Reply

Your email address will not be published.