ಕವಿತೆ

ಅಗ್ಗಿಷ್ಟಿಕೆ

ಮಳೆಯೆ

ಹೊಡೆ ಹೊಡೆದು

ನಿಂತಿದೆ ಸಡ್ಡು ಅಗ್ಗಿಷ್ಟಿಕೆ ನಿನ್ನೆದುರು

ಅಂದುಕೊಂಡೆಯಾ ಅದೇನು ಮಹಾ

ಸೂರ್ಯನೆದುರು

ರಣರಣವೆನ್ನಲರಿಯದ

ಬರಿಯ ಒಂದು ಋತುವನ್ನಾಳುವ

ಜಗವ ಬೆಳಗಲಾರದ

ಅಗ್ಗಿಷ್ಟಿಕೆ

ಅಷ್ಟೇ ಅನ್ನುವಂತಿಲ್ಲ

ಸೂರ್ಯನಿದ್ದರೂ

ನಿನ್ನ ಹಾಜರಿಯಲ್ಲಿಯೂ

ಅಗ್ಗಿಷ್ಟಿಕೆಯದು ಕಣ್ಣು ಜಗಕೆ

ಒಲವಿಗೆ ಉಸಿರಿಗೆ

ಪಟುವಿಗೆ ಶುದ್ಧ ಸಗಣಿ

ಕುಳ್ಳು ಕಪ್ಪನೆಯ ಇದ್ದಿಲು

ಇಷ್ಟೆ ಇಷ್ಟು ಬೆಂಕಿ ಸಾಕು

ನವಿರಾಗಿ ಉರಿದು ನವ ಆಕಾರದ

ರೂಪು ನೀಡಲು

ಸೂರ್ಯನ ಬದಿಗಿರಿಸಿ

ಬೆಳ್ಳಂಬೆಳಗು ಕಣ್ ಬಿಡುವ ಅಗ್ಗಿಷ್ಟಿಕೆಯ

ಹುಟ್ಟು ಅಂಗಳದ ತುದಿಗೆ

ಅರಳುವದು ಹೊರಸಿನ ಬದಿಗೆ

ಜಗದರಮನೆ ಬೆಳಗಲು ಜೀವ

ಒತ್ತೆ ಇಡುವ ತಾಯ್ತನಕೆ ಸವಾಲೆಸೆಯುವ

ಅದರೊಳಗೆ

ಅದೆಷ್ಟು ಜೀವಗಳ ಸಂಚಲನ

ಲೆಕ್ಕವಿಲ್ಲದ ಬಂಧಗಳ ಹೆತ್ತೊಡಲು

ನಿಗಿ ನಿಗಿ ಕೆಂಡವಾದಾಗಲೆ

ಅಪ್ಪ ಅವ್ವ ಅಜ್ಜ ಅಜ್ಜಿ ಅತ್ತೆ ಅಕ್ಕ ಅಣ್ಣ

ಹೀಗೆಯೆ ಜಗದ ಅಗಣಿತ ಕರುಳಬಳ್ಳಿ

ಕತ್ತರಿಸಿ ಬೀಳುವವು

ಭೂಮಾತೆಯೊಡಲಿಗೆ

ಅಗ್ಗಿಷ್ಟಿಕೆಯೆ

ಜಗದ ತಂದೆ ಸೂರ್ಯನಾದರೆ

ನೀ ತಾಯಿ

ಜಗದ ಜೋಗುಳ ನೀ

ನಿರ್ಮಲಾ ಶೆಟ್ಟರ


ಪ್ರೀತಿ ಅಂದ್ರೆ ಹಿಂಗೆ..!

ಮಾಮೂಲಾಗಿ ಚಂದ್ರ ತಾನು

ಇದ್ದ ಭೂಮೀನ್ ಸುತ್ ತಾ

ಹೊಟ್ಟೇಗ್ ಬೆಂಕಿ ಬಿದ್ದಂಗ್

ವರುಣ ಬಿಕ್ಕೀ ಬಿಕ್ಕೀ ಅತ್ತ!

`ವರ್ಸಕ್ಕೆ ಒಂದ್ಸಲ ಮಾತ್ರ

ನಂಗೆ ಈ ಅದೃಷ್ಟ

ಯಾವಾಗ್ಲೂನು ಇವ್ಳ್ ಸುತ್ತಾನೇ

ಸುತ್‍ತ್ತಾನ್ನೋಡು ದುಷ್ಟ!’

ವರುಣ ಹೇಳಿದ್ ಮಾತ್ನ ಕೇಳಿ

ಸೂರ್ಯನೂ ಕಂಗಾಲು

ನನ್ನ್ ಸುತ್ತಾ ಸುತ್ತ್‍ತ್ತಿದ್ರೆ ಇವ್ಳು

ಹಾಕ್ತಾನಿವ ಅಡ್‍ಗಾಲು

`ಸುಟ್ ಬುಡ್ತೀನಿ ನೋಡು ನಿನ್ನ

ನನ್ನ್ ಭೂಮೀಗ್ ಅಡ್ ಬಂದ್ರೆ

ಸುಮ್ ಸುಮ್‍ಕೇನೆ ಯಾಕೆ ಹಿಂಗೆ

ಕೊಡ್ತಿ ನೀನು ತೊಂದ್ರೆ?’

ಉರ್ ಉರ್ರಂತ ಕೋಪದಿಂದ

ಸೂರ್ಯ ತಾನು ಉರಿದ

ಅದ್ನೂ ಬೆಳ್ದಿಂಗ್ಳಾಗ್ಸಿ ಚಂದ್ರ

ಭೂಮಿ ಮೈಮೇಲ್ ಸುರಿದ!

ಬೂತಾಯಮ್ಮ ನೆಗ್ತಾ ಇದ್ಲು

ಈ ಚಂದ್ರ ಬಲು ಪಕ್ಕಾ

`ಪ್ರೀತಿ ಅಂದ್ರೆ ಹಿಂಗೇ ಅಂತ

ವಾಯು ತಣ್ಣಗೆ ನಕ್ಕ

ಕೆ.ಶಿವಶಂಕರ್ ಕಳಸ್ತವಾಡಿ


ದೇವರು

ದೇವರನ್ನು ಹುಡುಕಿ

ನಡೆಯುತ್ತಾರೆ ಎತ್ತರೆತ್ತರ

ಸಾಧು ಸಂತರು

ನಿಲ್ಲುವವರಲ್ಲ ಎಲ್ಲೂ

ಮಂಜಿನ ದಾರಿ ಶಿವಾಲಯಕ್ಕೆ

ಗಾಢಾಂಧಕಾರದ ಗುಹೆ ಗಹ್ವರ

ಉರಿಬಿಸಿಲು ಸುಡುವುದು ಶಿವನನ್ನು

ಮರಳುಗಾಡು ಸುಡುಕೆಂಡ

ಕಾಲಲ್ಲಿ ಏಳುವ ಬೊಬ್ಬೆ

ಏನನ್ನೂ ನೋಡುವುದಿಲ್ಲ ಸಂತರು

ಎತ್ತರವೆನ್ನುವುದು ಗುಡ್ಡ ಬೆಟ್ಟಗಳಿಗೆ

ಒಂಟಿ ಕಾಲಲ್ಲಿ ನಿಂತು ಅವು

ಕಾಲಾಂತರದಿಂದ ಧ್ಯಾನಿಸುತ್ತಿವೆ

ಎತ್ತರದ ಶಿಖರಗಳಲ್ಲಿದ್ದರೆ ದೇವರು

ಸಿಕ್ಕಬೇಕು ಶಿಖರ ತಲುಪುವವರಿಗೆ

ಯಾಕೆ ಅವರು ಬರುತ್ತಾರೆ ಬರಿಗೈಲಿ?

ದೇವರಿರಬಹುದು ಪಾತಾಳದಲ್ಲಿಯೂ

ಯಾರೂ ಅತ್ತ ನಡೆದದ್ದು ಕಾಣಲಿಲ್ಲ

ಬಿದ್ದರೆ ಪಾತಾಳಕ್ಕೆ ಅದು ತಪ್ಪು ಹೆಜ್ಜೆ

ತರ್ಕಕ್ಕೆ ಸಿಕ್ಕುವುದಿಲ್ಲ ದೇವರು

ಅವನು ತರ್ಕದ ವಸ್ತುವಲ್ಲ

ಮಸ್ತಕದಲ್ಲಿ ಎಲ್ಲ ಎನ್ನುತಾರೆ ಅವರು

ಆದರೂ ನಿತ್ಯ ಪಯಣ

ಎತ್ತರೆತ್ತರದ ಸತ್ಯ

ಉಳಿಯುವುದು ಎತ್ತರದಲ್ಲೇ

ಜಿ.ಪಿ.ಬಸವರಾಜು

Leave a Reply

Your email address will not be published.