ಕವಿತೆ

ಬುರ್ಖಾ ಧರಿಸಿ

 

 

 

 

 

 

ಬುರ್ಖಾ ಧರಿಸಿ

ನಾನು ಒಂದು ಪದವಿ ಪಡೆದೆ

ಕಂಪ್ಯೂಟರನ್ನೂ ಕಲಿತೆ

ಇತರರನ್ನು ಸಲೀಸಾಗಿ ಮೀರಿದೆ

 

ಅಮ್ಮಿ ಖುಷಿಯಾದಳು

ಅಬ್ಬಾನು ಬಹಳ ಖುಷಿಪಟ್ಟ

ನಾನು ಏಕಾಂಗಿಯಾಗಿ ಸಿನಾಯ್

ಪರ್ವತವನ್ನು ಎತ್ತಲಿಲ್ಲವೆ?

 

ಜಗತ್ತನ್ನು ಪಾದದಡಿಯಲ್ಲಿ ಹೊಸಕಿಹಾಕಬೇಕೆಂಬುದು

ನನ್ನ ಹೃದಯದ ಬಯಕೆಯಾಗಿತ್ತು

ಪ್ರತಿ ಉಸಿರು ಹೇಳಿತು ವಿಜಯಶಾಲಿಯಾಗು

ಬುರ್ಖಾದೊಳಗಿನ ಅಲೆಗ್ಸಾಂಡರ್‌ನಂತೆ

 

ಮನರಂಜನೆಗೆಂದು ಹೊರಹೊರಟೆ

ಸಿನಿಮಾ ಮಂದಿರದ ಬಳಿ

ನೈತಿಕ ದಳ ತಡೆಯಿತು ನನ್ನನ್ನು

ಕಬ್ಬಿಣದ ಸರಳ ಬೀಸಿ

 

ಹೇ ಹುಡುಗಿ

ಬುರ್ಖಾಗಳನ್ನು ಒಳಬಿಡುವುದಿಲ್ಲ

ಕಪ್ಪು ಹೊಗೆ ಚಿಮ್ಮಿತು ಕರಿ ಮುಖಗವಸಿನಿಂದ

ಬುರ್ಖಾ ಹಾರಿಹೋಯಿತು

 

ಉರ್ದು ಮೂಲ: ಜಮೀಲ ನಿಷತ್

ಕನ್ನಡಕ್ಕೆ: ಮೂಡ್ನಾಕೂಡು ಚಿನ್ನಸ್ವಾಮಿ


ರಿಯೋ ದಿ ಜೆನೆರೋದ ಏಸು ಮೂರ್ತಿ

 

 

 

 

 

ಭೂಗೋಳ ಹೊತ್ತು ಹೊತ್ತು

ನಡಬಗ್ಗಿ ಕುಸಿಯುತ್ತಿರುವ

ಅಟ್ಲಾಸ ಅವನಲ್ಲ

ಅಥವಾ ಭೂಮಿ ಸೇಬಿನ ಹಣ್ಣು

ಅದನ್ನು ಪೂರ್ತಿ ನುಂಗಬೇಕೆಂದು ಹೊರಟ

ಆ ಶತ ಒರಟ

ಸಿಕಂದರನೂ ಅಲ್ಲ

ಈ ದಿಟ್ಟ ನಿಂತುಕೊಂಡಿದ್ದಾನೆ ಸೀದಾ

ಕೋಡುಬೆಟ್ಟದ ಮೇಲೆ

ಕೆಳಗೆ

ನೆಲ ನೀರು ಸಸ್ಯಕುಲ

ಮಿಂಚುಹುಳಗಳ ಹಾಗೆ ಲಕಲಕಲಕ

ಹೊಳೆವ ನೂರಾರು ಕೋಟಿ

ಮಾನವಾಸೆಗಳಿಂದ

ಬೆಳಗಿರುವ ಮಿಣಮಿಣ ಊರು

ಅವನ ಬೆನ್ನಿಗಿವೆ

ತೇಲುಮೋಡಗಳ ಹಿಂದಿರುವ ಅನೂಹ್ಯ

ಕಪ್ಪನೆ ಆಗಸದ ತುಂಬಾ

ಲಕ್ಷಲಕ್ಷ ನಕ್ಷತ್ರಗಳ

ಕಣ್ಣುಮುಚ್ಚಾಲೆ

ತನ್ನ ತಾಯ್ನಾಡು ಸ್ವರ್ಗಕ್ಕೆ

ತಿರುಗಿಸಿ ಬೆನ್ನು

ಕಣ್ಣೆರಡೂ ಮುಚ್ಚಿ

ನೀಳತೋಳುಗಳೆರಡನ್ನೂ ಚಾಚಿ

ಪೂರ್ವ ಪಶ್ಚಿಮಕ್ಕೆ

ಪಾಪಿಷ್ಟ ನಗರಗಳನ್ನೂ

ನಾವು ಕುಲಗೆಡಿಸಿಟ್ಟ ಪ್ರಕೃತಿಯನ್ನೂ

ಕ್ಷಮಿಸಿ ತಬ್ಬಿಕೊಳ್ಳಲು ತಯಾರಾಗಿ

ಬೇಷರತ್ತು ಆತನ ಕರುಣೆ

-ಎಚ್.ಎಸ್.ಶಿವಪ್ರಕಾಶ್

 

Leave a Reply

Your email address will not be published.