ಕಾನೂನಿನ ಬಲದಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವೇ..?

ವಿಜ್ಞಾನಕ್ಕಿಂತ ಮೌಢ್ಯವೆ ಪವಿತ್ರವೆಂದು ನಂಬುವ ಮಾನಸಿಕ ಸ್ಥಿತಿ ಹೊಂದಿದ ಸಮಾಜದಲ್ಲಿ ಕಾನೂನುಗಳು ಬೇಕೇಬೇಕು. ಜನರಲ್ಲಿ ಮೂಢನಂಬಿಕೆ ಮೇಲೆ ಗೌರವ ಇರುವಂತೆ ಕಾನೂನಿನ ಬಗ್ಗೆ ಭಯವೂ ಇದೆ. ಈ ಭಯವನ್ನು ಬಳಸಿಕೊಂಡು ಮೂಢನಂಬಿಕೆ ನಿವಾರಣೆಗೆ ಪ್ರಯತ್ನಿಸಬೇಕು.

ಪ್ರಭು ಖಾನಾಪುರೆ

ಕಾನೂನುಗಳಿವೆ ನಕ್ಷತ್ರಗಳಷ್ಟು, ಅವುಗಳ ಉಪಯೋಗ ಮಾತ್ರ ಬೆರಳೆಣಿಕೆಯಷ್ಟು. ಕಾನೂನಿನ ಬಲದಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವೇ..? ಎಂಬ ಪ್ರಶ್ನೆಗೆ ಇಲ್ಲವೆಂದೆ ಉತ್ತರಿಸಬೇಕಾಗುತ್ತದೆ. ಆದರೆ ಕಾನೂನುಗಳಿದ್ದರೆ ಮೂಢನಂಬಿಕೆ ಹೋಗಲಾಡಿಸುವ ಪ್ರಕ್ರೀಯೆಗೆ ಬಲ ಬರುತ್ತದೆ. ಕಾನೂನುಗಳಿಂದ ಮೂಢನಂಬಿಕೆಗಳನ್ನು ಆಚರಿಸುವವರಿಗೆ ಭಯ ಮತ್ತು ಅವುಗಳ ವಿರುದ್ಧ ಜನ ಜಾಗೃತಿ ಮಾಡುವವರಿಗೆ ಬಲ ಬರುತ್ತದೆ. ಈ ಕಾರಣಕ್ಕೆ ಕಾನೂನಿನ ಅವಶ್ಯಕತೆಯಿದೆ.

ಮೂಢನಂಬಿಕೆ ಒಂದು ರೋಗವೆಂದು ಹೇಳಬಹುದು. ಇದು ಮದ್ದಿಲ್ಲದ ಮಹಾಮಾರಿ. ಕಾರ್ಯ ಕಾರಣದ ಸಂಬಂಧವಿಲ್ಲದ, ತಳಬುಡವಿಲ್ಲದ ನಂಬಿಕೆಗಳೆ ಮೂಢನಂಬಿಕೆಗಳು. ವೈಜ್ಞಾನಿಕ ಮನೋಭಾವ ಮೂಢನಂಬಿಕೆಗಳನ್ನು ಹೋಗಲಾಡಿಸಬಹುದು. ಆದರೆ ಮೂಢನಂಬಿಕೆಗಳು ಎಷ್ಟು ತೀವ್ರವಾಗಿ ಮತ್ತು ಗಟ್ಟಿಯಾಗಿ ಹಬ್ಬುತ್ತವೆಯೋ ಅಷ್ಟು ವೈಜ್ಞಾನಿಕ ಮನೋಭಾವ ಹರಡುವುದಿಲ್ಲ.

ಜಗತ್ತಿನಲ್ಲಿ ನಂಬಿಕೆ ಇಲ್ಲದ ವ್ಯಕ್ತಿಯಾಗಲಿ, ಸಮಾಜವಾಗಲಿ ಇಲ್ಲ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದಿಲ್ಲೊಂದು ನಂಬಿಕೆ ಇದ್ದೇ ಇರುತ್ತದೆ. ವ್ಯಕ್ತಿಗಳು ನಂಬಿರುವ ಎಲ್ಲ ನಂಬಿಕೆಗಳು ಮೂಢನಂಬಿಕೆಗಳೆಂದು ಅಥವಾ ವೈಜ್ಞಾನಿಕವೆಂದು ಹೇಳಲು ಸಾಧ್ಯವಿಲ್ಲ. `ಮೌಢ್ಯ’ ಬೇರೆ, `ನಂಬಿಕೆಬೇರೆ. ನಂಬಿಕೆ ಇರಬಾರದೆಂದಲ್ಲ. ಯಾವ ನಂಬಿಕೆಗಳು ಮೌಢ್ಯವನ್ನು, ಅಜ್ಞಾನವನ್ನು ಬಿತ್ತುತ್ತವೆಯೊ, ಶೋಷಣೆಗೆ ದಾರಿ ಮಾಡಿಕೊಡುತ್ತವೆಯೊ ಅವುಗಳಿಗೆ ಮೂಢನಂಬಿಕೆಯೆಂದು ಕರೆಯುತ್ತೇವೆ.

ಒಂದು ಕಾಲದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ಹುಟ್ಟಿದ ನಂಬಿಕೆಗಳು ಇರುತ್ತವೆ. ಕಾಲ ಗತಿಸಿದ ನಂತರ, ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ಮೇಲೆ ಮೊದಲಿದ್ದ ನಂಬಿಕೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ಕೆಲವರು ಆ ಹಳೆಯ ನಂಬಿಕೆಗಳನ್ನು ಆಚರಿಸಿಕೊಂಡು ಬಂದರೆ ಮುಂದಿನ ದಿನಗಳಲ್ಲಿ ಅವು ಮೂಢ ನಂಬಿಕೆಗಳಾಗುತ್ತವೆ.

ನಂಬಿಕೆಗಳು ಹೇಗೆ ಹುಟ್ಟುತ್ತವೆ ಮತ್ತು ಏಕೆ ಹುಟ್ಟುತ್ತವೆಯೆಂಬುದಕ್ಕೆ ಕಾರಣಗಳನ್ನು ಹುಡುಕುವುದು ದುಸ್ತರವಾದ ಕೆಲಸ. ನಂಬಿಕೆಗಳಿಗೆ ಇಂಥದ್ದೆ ಕಾರಣವೆಂದು ಖಚಿತವಾಗಿ ಹೇಳುವುದು ಸಾಧ್ಯವಾಗದ ಮಾತು. ನಂಬಿಕೆಗಳ, ಮೂಢನಂಬಿಕೆಗಳ ಹುಟ್ಟಿನ ಕಾರಣವನ್ನು ಹುಡುಕುವುದಕ್ಕಿಂತ ಅವು ಬೀರುವ ಕೆಟ್ಟ ಪರಿಣಾಮಗಳನ್ನು ಅರ್ಥಮಾಡಿಕೊಂಡು ಸ್ವೀಕರಿಸುವ ಅಥವಾ ತಿರಸ್ಕರಿಸುವ ಕಾರ್ಯ ನಡೆಯಬೇಕಾಗಿದೆ. ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬುವ ಇಲ್ಲವೆ ತಿರಸ್ಕರಿಸುವ ಸ್ವಾತಂತ್ರ್ಯ ಹಾಗೂ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೆ ಇದ್ದೇ ಇದೆ. ತಾನು ನಂಬಿದ ನಂಬಿಕೆಗಳನ್ನು ಸಾರ್ವಜನಿಕವಾಗಿ ಪ್ರಚುರಪಡಿಸುವುದು, ತನ್ನ ನಂಬಿಕೆಗಳನ್ನು ಸಮಾಜದ ಮೇಲೆ ಹೇರುವುದು, ಇಲ್ಲದ ತರ್ಕ ಮತ್ತು ಕಲ್ಪನೆಗಳನ್ನು ಹುಟ್ಟುಹಾಕಿ ಜನಮಾನಸದಲ್ಲಿ ತುರುಕಿ ಕ್ರಿಯಾಶಕ್ತಿಯನ್ನು ಕುಂದಿಸುವುದು, ಅಲ್ಪತೃಪ್ತರನ್ನಾಗಿ ಮಾಡುವುದು ಸಮಾಜದ್ರೋಹದ ಕೆಲಸವಾಗುತ್ತದೆ.

ವ್ಯಕ್ತಿಯ ಮಾನಸಿಕ ಸಾಮಥ್ರ್ಯವನ್ನು ಕುಂದಿಸುವ, ಕ್ರಿಯಾಶಕ್ತಿಯನ್ನು ಮೊಟಕುಗೊಳಿಸುವ, ಸುಲಿಗೆ ಶೋಷಣೆಗೆ ಅವಕಾಶ ಮಾಡಿಕೊಡುವ, ಅಜ್ಞಾನವನ್ನು, ಮೌಢ್ಯವನ್ನು ಬೆಳೆಸುವ ಯಾವುದೆ ನಂಬಿಕೆಗಳು, ಕಾರ್ಯಗಳು, ಆಚರಣೆಗಳು, ಉತ್ಸವಗಳು ಅಪಾಯಕಾರಿ ಕೆಲಸ ಮಾಡುತ್ತವೆ. ಯಾವುದೇ ನಂಬಿಕೆಗೆ ಮೌಢ್ಯ ಅಂಟಿಕೊಂಡರೆ ಅದಕ್ಕೆ ಮೂಢನಂಬಿಕೆಯೆಂದು ಕರೆಯುತ್ತವೆ.

`ಮೂಢಎಂದರೆ ತಿಳಿವಳಿಕೆಯಿಲ್ಲದವ, ತಿಳಿಗೇಡಿ, ಮೂರ್ಖ, ಅರಿವುಗೇಡಿ, ದಡ್ಡ ಇತ್ಯಾದಿ ಅರ್ಥಗಳುಂಟು. ಯಾವ ನಂಬಿಕೆಗಳು ವ್ಯಕ್ತಿಯ ತಿಳಿವಳಿಕೆಯನ್ನು, ಅರಿವನ್ನು ನಾಶಮಾಡಿ ಮೂರ್ಖರನ್ನಾಗಿ, ದಡ್ಡರನ್ನಾಗಿ ಮಾಡುತ್ತವೆಯೊ, ಅವುಗಳಿಗೆ ಮೂಢನಂಬಿಕೆಗಳೆಂದು ಕರೆಯುತ್ತಾ ಬಂದಿದ್ದಾರೆ.

`ಮೌಢ್ಯಎಂದಿಗೂ ವಿಚಾರಪರವಲ್ಲ. ಇದು ಹಿನ್ನಡೆಯನ್ನು ಬಯಸುತ್ತದೆ. ವಿವೇಚನೆಯನ್ನು ಹೊಸಕಿ ಹಾಕುತ್ತದೆ. ಹೊಸ ತಿಳಿವಳಿಕೆಯನ್ನು ಅಲ್ಲಗಳೆಯುತ್ತದೆ. ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ಹಳೆಯದರ ಹೆಚ್ಚುಗಾರಿಕೆಯನ್ನು ಹಾಡಿ ಹೊಗಳುತ್ತದೆ. ಈ ಎಲ್ಲ ಕಾರಣಕ್ಕಾಗಿ ನಾವು ಮೂಢನಂಬಿಕೆಯನ್ನು ತೊರೆದು ವೈಜ್ಞಾನಿಕ ವಿಚಾರಗಳನ್ನು ಬೆಳೆಸಿಕೊಳ್ಳುವುದು ಅಪೇಕ್ಷಣೀಯ.

`ವೈಜ್ಞಾನಿಕ ವಿಚಾರಎಂದರೇನು? ಪ್ರೀತಿ, ಪ್ರೇಮ, ಭಯ, ಸಂತೋಷ, ದುಃಖ ಇತ್ಯಾದಿ ಭಾವನೆಗಳಿರುವಂತೆ ವಿಚಾರ, ನಂಬಿಕೆ ಕೂಡ ವ್ಯಕ್ತಿಯಲ್ಲಿರುವ ಭಾವನೆಗಳು. ಈ ಭಾವನೆಗಳು ಬುದ್ಧಿ ಮತ್ತು ಮನಸ್ಸಿಗೆ ಸಂಬಂಧಿಸಿದವು. ಇವು ವ್ಯಕ್ತಿಯ ಬದುಕನ್ನು ನಿಯಂತ್ರಿಸುತ್ತವೆ, ವಿಕಾಸಗೊಳಿಸುತ್ತವೆ, ವಿಶಾಲಗೊಳಿಸುತ್ತವೆ. ವ್ಯಕ್ತಿಯಲ್ಲಿರುವ ಈ ಭಾವನೆಗಳೆ ನಂಬಿಕೆಗಳಿಗೆ ಬಹುಮಟ್ಟಿಗೆ ಕಾರಣವಾಗಿರುತ್ತವೆ. ವಾಸ್ತವಿಕತೆ ಮತ್ತು ವಿಚಾರಗಳ ಆಧಾರದ ಮೇಲೆ ರೂಪುಗೊಳ್ಳುವ ನಂಬಿಕೆಗಳೆ ವೈಜ್ಞಾನಿಕ ನಂಬಿಕೆಗಳು. ಸಾಮಾನ್ಯವಾಗಿ ಹಿಂದಿನಿಂದ ನಂಬಿಕೊಂಡು ಬಂದ ಕಾಲಬಾಹಿರವಾದ ನಂಬಿಕೆಗಳು ಸಂಪ್ರದಾಯಗಳಾಗಿ ಮಾರ್ಪಟ್ಟು ಆಚರಣೆಯಲ್ಲಿ ಉಳಿದಿರುತ್ತವೆ. ಇವು ಬಹುಪಾಲು ಮೂಢ ನಂಬಿಕೆಗಳಾಗಿರುವುದು ಗಮನಾರ್ಹ.

ವಿಜ್ಞಾನಎಂದರೇನು ಎಂದು ಅರ್ಥ ಮಾಡಿಕೊಂಡರೆ ವೈಜ್ಞಾನಿಕ ಮನೋಭಾವ ಎಂದರೇನೆಂದು ಅರ್ಥವಾಗುತ್ತದೆ. ಜ್ಞಾನ, ಅಜ್ಞಾನ, ಕುಜ್ಞಾನ, ಸುಜ್ಞಾನ, ವಿಜ್ಞಾನ ಈ ಪದಗಳ ಅರ್ಥ ಗಮನಿಸಬೇಕು. ಜ್ಞಾನವೆಂದರೆ ತಿಳಿವಳಿಕೆ, ಅರಿವು, ಪ್ರಜ್ಞೆ ಇತ್ಯಾದಿ ಅರ್ಥಗಳುಂಟು. ಅಜ್ಞಾನವೆಂದರೆ ಜ್ಞಾನದ ವಿರುದ್ಧಾರ್ಥ ಹೊಂದಿರುವುದು, ತಿಳಿವಳಿಕೆ ಇಲ್ಲದ್ದು, ಅರಿವು ಇಲ್ಲದ ಪ್ರಜ್ಞೆ, ಕುಜ್ಞಾನ, ಕೆಟ್ಟ ಪ್ರಜ್ಞೆ. ವಿಜ್ಞಾನವೆಂದರೆ ವಿಚಾರ ಮೂಲದಿಂದ ಬಂದ ಜ್ಞಾನ.

ಮಾನವ ಅನಾಗರಿಕ ಬದುಕಿನಿಂದ ನಾಗರಿಕತೆಯತ್ತ ಬಹುದೂರ ಕ್ರಮಿಸಿದ್ದಾನೆ. ಅವನ ಬುದ್ಧಿ ವಿಕಾಸಗೊಂಡಿದೆ. ವಿಜ್ಞಾನ ಬೆಳೆದಿದೆ. ಕಲ್ಪನೆಗೂ ಮೀರಿ ಪ್ರಗತಿಯನ್ನು ಸಾಧಿಸಿದ್ದಾನೆ. ಆದರೆ ಮೂಢನಂಬಿಕೆಯ ವಿಷಯದಲ್ಲಿ ಬಹಳ ಹಿಂದೆ ಉಳಿದಿದ್ದಾನೆ. ವಿಜ್ಞಾನ ಬೆಳೆದಷ್ಟು ವೈಜ್ಞಾನಿಕ ಮನೊಭಾವನೆ ಬೆಳೆಸಿಕೊಂಡಿಲ್ಲ. ವಿಜ್ಞಾನ ಪ್ರಗತಿಯ ಎಲ್ಲ ಸವಲತ್ತುಗಳನ್ನು ಪಡೆದುಕೊಂಡು ಭೌತಿಕ ಬೆಳವಣಿಗೆಯನ್ನು ಸಾಧಿಸಿದ್ದಾನೆ. ಆದರೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾನೆ. ವಿಜ್ಞಾನದ ಬೆಳವಣಿಗೆಯಿಂದ ಬುದ್ಧಿ ಬದಲಾಗಿದೆ. ಮನಸ್ಸು ಬದಲಾಗಿಲ್ಲ. ವೈಜ್ಞಾನಿಕ ವಿಚಾರಗಳನ್ನು ಮನಸಾರೆ ಒಪ್ಪಿ ಬದುಕಿನಲ್ಲಿ ಅಳವಡಸಿಕೊಂಡು ಹೊಸ ನಂಬಿಕೆಗಳಿಗೆ ಮನಸ್ಸು ತೆರೆದುಕೊಂಡಾಗ ಮಾತ್ರ ಮನುಷ್ಯ ಮೂಢನಂಬಿಕೆಗಳನ್ನು ಬಿಡಬಲ್ಲ, ಮಡುಗಟ್ಟಿದ ಸಂಪ್ರದಾಯದ ಬಂಧನಗಳನ್ನು ಹರಿದುಕೊಳ್ಳಬಲ್ಲ.

ವಿಜ್ಞಾನದ ವಿಷಯ ಕಲಿಯುವುದು, ವಿಜ್ಞಾನ ಓದುವುದು ಬೇರೆ. ವೈಜ್ಞಾನಿಕ ವಿಚಾರಗಳನ್ನು ಅಳವಡಿಕೊಳ್ಳುವುದು ಬೇರೆ. ವಿಜ್ಞಾನದ ವಿಷಯ ಕಲಿತ ಅಥವಾ ಓದಿದ ಮಾತ್ರಕ್ಕೆ ವೈಜ್ಞಾನಿಕ ಮನೋಭಾವ ಬೆಳೆದಿದೆಯಂತಲ್ಲ. ಸಂಶೋಧನೆಯನ್ನು ಕೈಕೊಂಡು ಹೊಸ ಆವಿಷ್ಕಾರಗಳನ್ನು ಮಾಡಿದರೂ ಹಲವರಲ್ಲಿ ವೈಜ್ಞಾನಿಕ ಮನೋಭಾವ ಇರುವುದಿಲ್ಲ. ವೈಜ್ಞಾನಿಕ ಮನೋಭಾವ ತನಗೆತಾನೇ ಬೆಳೆಯುವುದಿಲ್ಲ, ಬೆಳೆಸಿಕೊಳ್ಳಬೇಕಾಗುತ್ತದೆ. ಇದು ಮನಸ್ಸನ್ನು ಆವರಿಸಿದ ಮೌಢ್ಯದ ಬಂಧನಗಳನ್ನು ಹರಿದುಕೊಂಡಾಗ ಮಾತ್ರ ಸಾಧ್ಯ.

ನಮ್ಮ ಜನರಲ್ಲಿ ಮೌಢ್ಯ ಎಷ್ಟೊಂದು ಮಡುಗಟ್ಟಿದೆಯೆಂದರೆ, ದಾರಿಯಲ್ಲಿ ಬಿದ್ದಿದ್ದ ಬಾಂಬನ್ನು ದಾಟಿ ಹೋಗುತ್ತಾರೆ, ಆದರೆ ಕುಂಕುಮ, ಅರಿಶಿಣ ಹಚ್ಚಿದ ಲಿಂಬೆಹಣ್ಣು ಬಿದ್ದಿದ್ದರೆ ದಾಟಿ ಹೋಗುವುದಿಲ್ಲ. ಅಂತರಿಕ್ಷೆಗೆ ರಾಕೇಟು ಬಿಡುವ ಸಮಯದಲ್ಲಿ ಅದಕ್ಕೆ ಪೂಜೆ ಮಾಡುತ್ತಾರೆ. ಎರಡನೆ ಮಹಾಯುದ್ಧದಲ್ಲಿ ಅಮೆರಿಕಾ ಜಪಾನದ ಮೇಲೆ ಅಣುಬಾಂಬು ಹಾಕಲು ಹೊರಟ ವಿಮಾನಕ್ಕೂ ಪೂಜೆ ಮಾಡಿದ್ದಾರೆ. ವಿಜ್ಞಾನಕ್ಕಿಂತ ಮೌಢ್ಯವೆ ಪವಿತ್ರವೆಂದು ನಂಬುವ ಮಾನಸಿಕ ಸ್ಥಿತಿ ಹೊಂದಿದ ಸಮಾಜದಲ್ಲಿ ಕಾನೂನುಗಳು ಬೇಕೆ ಬೇಕು. ಜನರಲ್ಲಿ ಮೂಢನಂಬಿಕೆ ಮೇಲೆ ಗೌರವ ಇರುವಂತೆ ಕಾನೂನಿನ ಬಗ್ಗೆ ಭಯವೂ ಇದೆ. ಈ ಭಯವನ್ನು ಬಳಸಿಕೊಂಡು ಮೂಢನಂಬಿಕೆ ನಿವಾರಣೆಗೆ ಪ್ರಯತ್ನಿಸಬೇಕೆಂಬುದು ನನ್ನ ಅಭಿಪ್ರಾಯ.

ಮೂಢನಂಬಿಕೆ ನಿಷಿದ್ಧ ಮಾಡುವ ಸ್ವಷ್ಟ ಕಾನೂನು ರಚನೆ ಸಾಧ್ಯವೇ..?. ಎಂದು ಸಾಧ್ಯಾಸಾಧ್ಯತೆಯ ಬಗ್ಗೆ ವಿಚಾರಿಸುವದಕ್ಕಿಂತ ಕಾನೂನು ಜಾರಿಗೊಳಿಸುವ ಕೆಲಸಕ್ಕೆ ನಾಂದಿ ಹಾಡಬೇಕಿರುವುದು ಇಂದಿನ ಅಗತ್ಯವಾಗಿದೆ. ಕಾನೂನುಗಳ ದುರ್ಬಳಕೆ, ಸದ್ಬಳಕೆ ಇದ್ದೇ ಇರುವುದು. ಕೇವಲ ಮೂಢನಂಬಿಕೆ ವಿರುದ್ಧದ ಕಾನೂನುಗಳು ಮಾತ್ರ ದುರ್ಬಳಕೆಯಾಗುತ್ತವೆ ಎಂಬುದು ತಪ್ಪು. ನನಗೆ ಗೊತ್ತಿರುವಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಮೂಢನಂಬಿಕೆ ನಿಷೇಧಿಸುವ ಕಾನೂನು ಜಾರಿಯಾದ ನಂತರ ನಾವು ಬಯಸಿದಷ್ಟು ಪರಿಣಾಮ ಬೀರದಿದ್ದರೂ ಸಾಕಷ್ಟು ಪ್ರಯೋಜನ ಆಗಿದೆ.

ಜ್ಯೋತಿಷ್ಯ, ವಾಸ್ತು, ಬಲಿ, ಮಡೆಸ್ನಾನ, ದೇವದಾಸಿ ಪದ್ಧತಿ ಮತ್ತಿತರ ಹಲವಾರು ಅವೈಜ್ಞಾನಿಕ ಆಚರಣೆಗಳು ನಮ್ಮ ಸಮಾಜದಲ್ಲಿ ನ್ಯಾಯಿಕ, ನೈತಿಕ ಮತ್ತು ತಾರ್ಕಿಕ ಬುನಾದಿಯನ್ನು ಶಿಥಿಲಗೊಳಿಸಿರುವುದು ಎಲ್ಲರೂ ಒಪ್ಪಲೇಬೇಕಾದ ಸಂಗತಿಯಾಗಿದೆ. ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯಲು ಕಾನೂನುಗಳಷ್ಟೇ ಅಲ್ಲ, ಮಾಡಬೇಕಾದೆಲ್ಲ ಪ್ರಯತ್ನಗಳನ್ನು ಮಾಡಬೇಕಾಗಿರುವುದು ಪ್ರಜ್ಞಾವಂತರ ಆದ್ಯ ಕರ್ತವ್ಯವಾಗಿದೆ.

*ಲೇಖಕರು ನಿವೃತ್ತ ಅಧ್ಯಾಪಕರು; ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೌರವಾಧ್ಯಕ್ಷರು, ಹಲವು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮೂಢನಂಬಿಕೆ, ಕಂದಾಚಾರ, ಅಂಧಶ್ರದ್ಧೆ ವಿರುದ್ಧ ಜನಜಾಗೃತಿಗಾಗಿ ಕಲಬುರ್ಗಿ ಜಲ್ಲೆಯಲ್ಲಿ ವಿಜ್ಞಾನ ಜಾಥಾ ಸಂಘಟಿಸಿದ್ದಾರೆ.

Leave a Reply

Your email address will not be published.