ಕಾಯೋಕಿಟ್ಟ ನೀರು ಕಣ್ಣಾಡಿಸ್ತಿದ್ರೆ ಕುದಿಯೋದಿಲ್ಲ!

ಊರು ಬಿಟ್ಟು ಪಟ್ಟಣಗಳನ್ನು ಸೇರಿದ ನಮ್ಮನ್ನು ಸಾಧಕರೆಂದು ಗುರುತಿಸಿ ನಾಗರಿಕ ಪ್ರಪಂಚ ಆಗಾಗ್ಗೆ ಹೊಗಳಿದರೂ, ನನ್ನ ಮಟ್ಟಿಗೆ ನಿಜ ಅರ್ಥದಲ್ಲಿ ಊರಿನಲ್ಲೇ ನೆಲೆನಿಂತ ನನ್ನೂರಿನ ಮಂದಿಯೇ ಇಂದಿಗೂ ಊರಿನ ಅಸ್ತಿತ್ವಕ್ಕೆ ಅದರ ಅಸ್ಮಿತೆಗೆ ಕಾರಣವೂ ಆಧಾರವೂ ಆಗಿರುವುದು ಸತ್ಯ.

ಡಾ.ಕೆ.ಎಸ್.ಮಲ್ಲೇಶ್

ನಾನು ಒಂದರಿಂದ ಆರನೇ ತರಗತಿಯವರೆಗೆ ಓದಿದ್ದು ನಮ್ಮೂರಿನಲ್ಲಿದ್ದ ಶಾಲೆಯಲ್ಲಿಯೇ. ಶಾಲೆಯ ಸಮಯ ಮುಂಜಾನೆ ಏಳೂವರೆಯಿಂದ ಹನ್ನೊಂದರವರೆಗೆ, ಮತ್ತೆ ಮಧ್ಯಾಹ್ನ ಮೂರರಿಂದ ಐದರವರೆಗೆ. ಶನಿವಾರ ಅರ್ಧ ದಿನ, ಭಾನುವಾರ ರಜೆ. ಶಾಲೆಗೆ ಎಷ್ಟು ಹೊತ್ತಿಗೆ ಹೊರಡಬೇಕೆನ್ನುವುದನ್ನು ನಿರ್ಧರಿಸುತ್ತಿದ್ದ ರೀತಿ ಈಗಲೂ ನೆನಪಿನಲ್ಲಿದೆ. ಬೆಳಗಿನ ಹೊತ್ತಾದರೆ ನಮ್ಮ ಮನೆಯ ಒಳ ಅಂಗಳದಲ್ಲಿ ಬೀಳುತ್ತಿದ್ದ ಸೂರಿನ ನೆರಳು ಅಥವಾ ಸೂರ್ಯನ ಬಿಸಿಲಿನ ಅಂಚು, ಮಧ್ಯಾಹ್ನಕ್ಕಾದರೆ ಎದುರು ಮನೆಯ ಕಿಟಕಿಯ ಮಧ್ಯಭಾಗಕ್ಕೆ ಬಿಸಿಲೇರಿದೆಯೆಂದರೆ ಗಂಟೆ ಮೂರಕ್ಕೆ ಹತ್ತಿರವಾದಂತೆ.

ಮುಂಜಾನೆ ಆಗಸದಲ್ಲಿ ಸೂರ್ಯ ಮೂಡಿದ ನಂತರ ಅವನ ಏರುವಿಕೆ ಇಳಿಯುವಿಕೆ, ಗೋಡೆ, ನೆಲಗಳನ್ನು ಆವರಿಸಿ ಕ್ರಮಬದ್ಧ ರೀತಿಯಲ್ಲಿ ವ್ಯತ್ಯಾಸಗೊಳ್ಳುತ್ತಿದ್ದ ಬಿಸಿಲುನೆರಳು, ರೇಷ್ಮೇ ಫಿಲೇಚರ್‍ನಿಂದ ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಸೈರನ್ ಕೂಗು ಇವುಗಳೇ ಹಗಲಿನಿಂದ ರಾತ್ರಿವರೆಗೆ ಹೊತ್ತನ್ನು ಗೊತ್ತುಮಾಡುತ್ತಿದ್ದವು. ಮನೆಯ ಒಂದು ಭಾಗ ದನಗಳ ಕೊಟ್ಟಿಗೆಯಾಗಿ ಅಲ್ಲಿದ್ದ ದನ ಕರು ಕುರಿಗಳ ದನಿಗಳಿಂದಲೂ ಮನೆಮಂದಿಗೆ ಸಮಯದ ಅರಿವಾಗುತ್ತಿತ್ತು. ಮೋಡ ಕವಿದು ಬಿಸಿಲಿಲ್ಲದ ದಿನ ನಮ್ಮ ಕಷ್ಟ ಹೇಳತೀರದು. ವಿದ್ಯುಚ್ಚಕ್ತಿಯೇ ಇಲ್ಲದಿದ್ದಾಗ ಊರಿನವರಿಗೆ ನಸುಕು ಗೊತ್ತಾಗುತ್ತಿದ್ದುದೇ, ಕವಿರತ್ನ ಕಾಳಿದಾಸ ಚಿತ್ರದಲ್ಲಿ ನಮ್ಮ ರಾಜಕುಮಾರ್ ಹಾಡಿದಂತೆ ಬೆಳ್ಳಿ ಮೂಡಿ ಕೋಳಿ ಕೂಗಿದಾಗ.

ನಮ್ಮೂರಿಗೆ ವಿದ್ಯುಚ್ಚಕ್ತಿ ಮೊದಲು ಬಂತೋ ಟ್ರಾನ್ಸಿಸ್ಟರ್ ರೇಡಿಯೋ ಮೊದಲು ಬಂತೋ ಸರಿಯಾಗಿ ನೆನಪಿಲ್ಲ. ಆಗ ಈ ಮಾಹಿತಿಗಳನ್ನು ದಾಖಲಿಸಿಕೊಳ್ಳದಿದ್ದುದಕ್ಕೆ ಅಥವಾ ಆ ಸ್ಪೇಸ್‍ಟೈಮ್‍ನಲ್ಲಿ ಇದೊಂದು ದಾಖಲಿಸಬಹುದಾದ ಇವೆಂಟ್ ಎಂದು ಭಾವಿಸದಿದ್ದಕ್ಕೆ ಕೊಂಚ ಬೇಸರವಿದೆ. ಊರಿಗೆ ಕರೆಂಟು ಬಂದಿಲ್ಲದಿದ್ದರೂ ನಮ್ಮ ಮನೆಯೊಳಗೆ ವೈರಿಂಗ್ ಪಟ್ಟಿಯಿದ್ದದ್ದು ಮಾತ್ರ ನನ್ನನ್ನು ಮೊದಮೊದಲು ಚಕಿತಗೊಳಿಸಿದರೂ ಆನಂತರ ಊರಿಗೆ ಕರೆಂಟು ಬಂದು ಐದಾರು ವರ್ಷಗಳಾದರೂ ನಮ್ಮ ಮನೆಗೆ ಅದು ಬಾರದಿದ್ದುದಕ್ಕೆ, ಸರಿಯಾಗಿ ಹೇಳುವುದಾದರೆ, ಅದನ್ನು ದುಡ್ಡುಕಟ್ಟಿ ಬರಮಾಡಿಕೊಳ್ಳದಿದ್ದುದಕ್ಕೆ, ಅಂತಹ ವೈರಿಂಗ್ ಪಟ್ಟಿಗಳನ್ನು ಈಗಲೂ ಎಲ್ಲಾದರೂ ಕಂಡರೆ ಏಕೋ ಕೋಪ, ಏನೋ ತಾಪ.

ಮನುಷ್ಯನ ಮುಖವನ್ನೇ ಹೋಲುತ್ತಿದ್ದ ರೇಡಿಯೋಗಳು ಕರೆಂಟಿದ್ದ ಮನೆಗಳಿಗೆ ಬಂದು ಸಂಗೀತ ಹಾಡು ವಾರ್ತೆಗಳನ್ನು ಬಿತ್ತರಿಸಿದ್ದು ಹಲವು ಎಳೆಯರ ಮಟ್ಟಿಗೆ ಅದ್ಭುತವೆನಿಸಿತ್ತು. ಯುಗಾದಿ, ಶಿವರಾತ್ರಿ, ಮಾರಮ್ಮನ ಜಾತ್ರೆ ಮತ್ತು ಹಬ್ಬದ ದಿನಗಳಲ್ಲಿ ಊರಿಗೆ ಮೈಕು ಬರುತ್ತಿದ್ದುದು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತಿತ್ತು. ಆ ಮೈಕಿನ ಜೊತೆಗೆ ಉಳಿದ ಸಾಮಾನುಗಳನ್ನು ಜಟಕಾ ಗಾಡಿಯಲ್ಲಿ ನಗರದಿಂದ ತಂದು ಇಳುಕಿ ತಿಂಡಿಗೋ ಅಥವಾ ಏನನ್ನೋ ಮರೆತು ಬಂದುದಕ್ಕೋ ಮೈಕಿನವ ಮತ್ತೆ ನಗರಕ್ಕೆ ಹೊರಟುಬಿಟ್ಟರಂತೂ ನಮ್ಮ ಚಡಪಡಿಕೆ ಹೇಳತೀರದು. ನಮ್ಮ ಪುಣ್ಯಕ್ಕೆ ನಮ್ಮೂರಿನವರೇ ಒಬ್ಬರು ತಾವೇ ಈ ಸಾಧನಗಳನ್ನು ಜೋಡಿಸಿ ಹಾಡು ಹೇಳಿಸುವುದನ್ನು ಕಲಿತಿದ್ದರಿಂದ ನಾವೆಲ್ಲರೂ ಅವರ ಮನೆಗೆ ದೌಡಾಯಿಸುತ್ತಿದ್ದೆವು.

ಉತ್ಸಾಹವಿದ್ದರೂ ತೋರಗೊಡದ ಅವರು ನೊಣಗಳಂತೆ ಸುಳಿದಾಡುತ್ತಿದ್ದ ನಮ್ಮನ್ನು ಗದರಿಸುತ್ತ ನೋಡುವವರ ಕಣ್ಣಿಗೆ ಪ್ರೊಫೆಷನಲ್ ಆಗಿ ಕಾಣುವುದಕ್ಕೆ ಬೇಕಾದ ಕ್ಯಾಸುವಲ್ ಅಪ್ರೋಚ್ ಅನ್ನು ತೋರ್ಪಡಿಸುತ್ತ ಆ ಉಪಕರಣಗಳನ್ನು ಜೋಡಿಸಿ ಧ್ವನಿಗೈಯಿಸಲು ಮುಂದಾಗುತ್ತಿದ್ದರು. ಅಲ್ಲಿದ್ದ ಯಂತ್ರಶ್ರೇಣಿಗಳಿಂದ ಮಾತು ಹಾಡು ಹೇಗೆ ಬರುತ್ತವೆನ್ನುವುದು ಕುತೂಹಲಭರಿತ ಕಗ್ಗಂಟಾಗಿ ನಮ್ಮನ್ನು ಕಾಡಿದರೂ ಅವರನ್ನು ಕಾಡುತ್ತಿಲ್ಲವೆನಿಸುತ್ತಿತ್ತು. ಆ ಕುತೂಹಲ ಹಿಂದೆ ಚಿಕ್ಕವರಿದ್ದಾಗ ಬಂದಿತ್ತೋ ಏನೋ, ಆದರೆ ಈಗಂತೂ ಅವರು ಕುತೂಹಲವಿದ್ದ ಯಾವ ಕುರುಹನ್ನೂ ತೋರದೆ ಬಣ್ಣ ಬಣ್ಣದ ವೈರುಗಳ ತುದಿಗಳನ್ನು ಬಾಯಲ್ಲಿ ಕಚ್ಚಿ ಪ್ಲಾಸ್ಟಿಕ್ಕನ್ನು ಕಿತ್ತು ಹೊರತೆಗೆದು ತಂತಿಯ ತುದಿಗಳನ್ನು ನಿರ್ದಿಷ್ಟ ರಂಧ್ರಗಳಿಗೆ, ಅಲ್ಲಿಂದ ಕಪ್ಪುಬಣ್ಣದ ಡಬ್ಬಗಳ ಹಿಂಬದಿಗೆ ಸಿಕ್ಕಿಸುತ್ತ ಕೊನೆಗೆ ಕಪ್ಪು ತಟ್ಟೆಯನ್ನು ಹಾಕಿ ಹ್ಯಾಂಡಲ್ ಹೊಡೆದು ತಿರುಗಿಸುತ್ತ ಮುಳ್ಳಿದ್ದ ಹಿಡಿಯನ್ನು ಅದರ ಮೇಲಿಟ್ಟಾಗ ಅದು ಕೀರಲು ಧ್ವನಿಯಲ್ಲಿ `ದ್ವಾರಪಾಲರ ಮರಳಿ ಬಳಿಗೈವ ಕೃಪೆಯೋ…’ ಎನ್ನುತ್ತಿದ್ದಂತೆಯೇ ಕಪ್ಪುಡಬ್ಬದ ಬಿರಡೆಯನ್ನು ಮೆಲ್ಲಗೆ ತಿರುಗಿಸುತ್ತಿದ್ದರು.

ಕೂಡಲೇ ಹೊರಗೆ ಕಂಬದ ಮೇಲೆ ವಾದ್ಯೋಪಾದಿಯಲ್ಲಿದ್ದ ಆಕೃತಿಯು, ಸೀರ್ಕಾಳಿ (ಶ್ರೀಕಾಳಿಯಿರಬೇಕು) ಗೋವಿಂದರಾಜನ್ ಧ್ವನಿಯಲ್ಲಿ `ಜಾರತನ ಸದೆಬಡಿವ ಸಂಭ್ರಮದ ನೆಪವೋ, ರಾಮನ ಅವತಾರಎನ್ನುತ್ತಿದ್ದಂತೆಯೇ ನಮ್ಮ ಕುತೂಹಲವೆಲ್ಲವೂ ಹಾಡಿನ ಮಾಧುರ್ಯದೊಂದಿಗೆ ಲೀನವಾಗಿ, ಮನಸ್ಸು ರಾಮಾಯಣದ ಕಡೆ ತಿರುಗಿ ಅಷ್ಟು ದೊಡ್ಡ ಕತೆಯನ್ನು ಐದಾರು ನಿಮಿಷಗಳಲ್ಲಿಯೇ ಹೇಳಲು ಸಾಧ್ಯವಾಗುವಂತೆ ಪ್ರಾಸಬದ್ಧವಾಗಿ eಠಿi ಮಾಡಿದ ಗೀತಕಾರರನ್ನು ಮನಸಾರೆ ವಂದಿಸುತ್ತಿತ್ತು. ಇಠಿಟಿ ಎನ್ನುವುದು ಆಗ ಗೊತ್ತಿಲ್ಲದಿದ್ದರೂ ಹೈಸ್ಕೂಲಿಗೆ ಸೇರಿದ ಹೊಸತರಲ್ಲಿ ಇಂಗ್ಲಿಷ್ ಮೇಷ್ಟ್ರು ಹೇಗೇ ಎಷ್ಟೇ ಹೇಳಿದರೂ ನಮ್ಮ ಧೀಶಕ್ತಿಗೆ ಗೋಚರವಾಗುತ್ತಿದ್ದದ್ದು ಹತ್ತು ವಾಕ್ಯಗಳ ಪ್ರಬಂಧವನ್ನು ಠಿ ಮಾಡುವುದೆಂದರೆ ಅಲ್ಲೇ ಕೊಟ್ಟಿದ್ದ ಆರೋ ಏಳೋ ವಾಕ್ಯಗಳನ್ನು ಕಿತ್ತು ಉಳಿದವನ್ನು ಒಟ್ಟಿಗೆ ಸೇರಿಸಿ ಬರೆಯುವುದು ಎಂದಷ್ಟೇ. ಮಿಡ್ಲ್ ಸ್ಕೂಲಿನ ಮೇಷ್ಟ್ರು ಶಾಲೆಯಲ್ಲಿ ಇಂಗ್ಲಿಷನ್ನು ದಿನಕ್ಕೊಂದು ಗಂಟೆ ಮಾತ್ರ ಹೇಳುತ್ತಿದ್ದುದನ್ನು ಬಿಟ್ಟರೆ ಉಳಿದ ಯಾವ ಸಂದರ್ಭದಲ್ಲೂ ಆಗ ಇಂಗ್ಲಿಷಿನೊಡನೆ ನಮ್ಮ ನಂಟಿರಲಿಲ್ಲ. ಇಂಗ್ಲಿಷಿನ ಶಬ್ದಭಂಡಾರವಾಗಲೀ ಭಾಷಾಸಾಗರವಾಗಲೀ ಒಳಹರಿವೇ ಸಮರ್ಪಕವಾಗಿಲ್ಲದಿದ್ದಾಗ ತುಂಬುವುದೆಂತು?

ವ್ಯಷ್ಟಿ ಸಮಷ್ಟಿಯ ಬದುಕಿನ ಐಚಿಡಿಚಿಣoಡಿಥಿ ಗಳಲ್ಲಿ ಃeoತಿ ಣhe ಡಿಣಥಿ ಐiಟಿ ಸ್ವಲ್ಪ ಮೇಲೆ ಕೆಳಗೆ ಪ್ರತಿವರ್ಷವೂ ಐದಾರು ಬಾರಿ ಜಿಗಿಯುತ್ತಿದ್ದ ಮನೆಯ ಆರ್ಥಿಕ ರೇಖೆಗೂ ಪಾಕೆಟ್ ಕ್ಯಾಲೆಂಡರಿನ ಗೋಚಾರಫಲದಲ್ಲಿ ಏರಿಳಿಯುತ್ತಿದ್ದ ಆದಾಯ ವ್ಯಯಗಳ ದತ್ತಾಂಶಗಳಿಗೂ ಯಾವ ಖeಟಚಿಣಣಥಿಯೂ ಇಲ್ಲದೆ ಅಜಗಜಾಂತರದಷ್ಟು ಅನಿಶ್ಚಯತೆ ಇರುತ್ತಿದ್ದ ವಾಸ್ತವಗಳಿಗೆ ನಮ್ಮದೇ ಎಳೆಯ ರೀತಿಗಳಲ್ಲಿ ಮಿಶ್ರಭಾವನೆಗಳಿಂದ ಸ್ಪಂದಿಸುತ್ತಿದ್ದುದು ಮನೆಗಳಲ್ಲಿ ನಮ್ಮ ನಡೆ. ತರಗತಿಗಳಲ್ಲಿ ನಾವು ಮಾತನಾಡಲು ಬಳಸದೇ ಇದ್ದ ಅನೇಕ ಕನ್ನಡ ಪದಗಳ ಸಂಧಿ ಸಮಾಸಗಳು ಗೊತ್ತಿಲ್ಲದ ಇಂಗ್ಲಿಷ್ ಭಾಷೆಯ ಗೊತ್ತಾಗದ ವ್ಯಾಕರಣದ, ಕಂಡಿಲ್ಲದ ಖಂಡಗಳಲ್ಲಿನ ಬೆಟ್ಟಗುಡ್ಡ ಮರಗಳ, ಇಂದ್ರಿಯಾನುಭವಗಳಿಗೆ ಸಿಲುಕದ ಅನೂಹ್ಯ ವಿಜ್ಞಾನದ ಕಾಲ್ಪನಿಕ ಗೊಂಡಾರಣ್ಯಗಳಲ್ಲಿ ಅಡ್ಡಾಡಿ ವರುವರುಷಕ್ಕೂ ಜ್ಞಾನಸಾಗರಗಳನ್ನು ಈಸಬೇಕಾಗಿದ್ದುದು ನಮ್ಮ ಪಾಡಾಗಿತ್ತು.

ಊರಿನ ಬದುಕಿನ ವ್ಯಾವಹಾರಿಕ ನೀತಿ ನಿಯಮಗಳನ್ನು ಕಲಿತುಕೊಳ್ಳುವುದು ನಮ್ಮ ಬೆಳವಣಿಗೆಯ ಹಂತದಲ್ಲಿ ಒಂದು ಅಲಿಖಿತ ನಿಯಮವಾಗಿತ್ತಲ್ಲದೆ ಈ ಅನಿವಾರ್ಯತೆ ಶೈಕ್ಷಣಿಕ ಪ್ರಗತಿಗೆ  ತನ್ನದೇ ರೀತಿಯ ಸಂಘರ್ಷವನ್ನೊಡ್ಡಿತ್ತು. ಒಟ್ಟಾರೆ ಹೇಳುವುದಾದರೆ, ಹದಿಹರೆಯದ ಬೆಳವಣಿಗೆ ಮೂರ್ತ ಅಮೂರ್ತ ನೆಲೆಗಳಲ್ಲಿ ಅನೇಕ ರೀತಿಯ ಅಲೆಗಳಿಗೆ ಸುಳಿಗಳಿಗೆ ಸಿಕ್ಕಿ ನನ್ನಂತಹ ಕೆಲವರು ಅವುಗಳಿಂದ ಹೊರಬಂದು ಮುಂದಿನ ಓದಿಗಾಗಿ ಪಟ್ಟಣಗಳನ್ನು ಸೇರಿದರೆ ಹಲವರು ಆ ಸೆಳೆತಗಳಲ್ಲೇ ಸಿಕ್ಕಿ ಬಿಡಿಸಿಕೊಳ್ಳಲಾಗದೆ ಶಿಕ್ಷಣವನ್ನು ಮೊಟಕುಗೊಳಿಸಿಕೊಂಡು ಊರಲ್ಲೇ ಬೇರೂರಿದ್ದೂ ಉಂಟು. ಊರು ಬಿಟ್ಟು ಪಟ್ಟಣಗಳನ್ನು ಸೇರಿದ ನಮ್ಮನ್ನು ಸಾಧಕರೆಂದು ಗುರುತಿಸಿ ಹತ್ತಿರದ ನಾಗರಿಕ ಪ್ರಪಂಚ ಆಗಾಗ್ಗೆ ಹೊಗಳಿದರೂ, ನನ್ನ ಮಟ್ಟಿಗೆ ನಿಜ ಅರ್ಥದಲ್ಲಿ ಊರಿನಲ್ಲೇ ನೆಲೆನಿಂತ ನನ್ನೂರಿನ ಮಂದಿಯೇ ಇಂದಿಗೂ ಊರಿನ ಅಸ್ತಿತ್ವಕ್ಕೆ ಅದರ ಅಸ್ಮಿತೆಗೆ ಕಾರಣವೂ ಆಧಾರವೂ ಆಗಿರುವುದು ಸತ್ಯ.

ಎಲ್ಲಿಂದ ಎಲ್ಲಿಗೋ ವಿಷಯಾಂತರವಾಗುತ್ತಿದೆ ಎನ್ನಿಸುತ್ತಿದೆ. ಓದುಗರ ತಾಳ್ಮೆ ಪರೀಕ್ಷಿಸದೆ ವಿಷಯಕ್ಕೆ ಬರುತ್ತೇನೆ. ನಮ್ಮ ಹಳ್ಳಿಯ ಪರಿಸರದ ಮುಗ್ಧ ಮತ್ತು ಅಜ್ಞಾತ ಮನಸ್ಸು, ಇನ್ನಾರು ನಾನೇ, ಒಂದು ದಿನ ಹಸಿವನ್ನೂ ಮರೆತು ಆಟವಾಡಿ ಮಧ್ಯಾಹ್ನ ಮನೆಗೆ ಬಂದು ಸೇರಿದೆ. ಹೊಟ್ಟೆ ತಾಳಹಾಕತೊಡಗಿ ಕೈಕಾಲು ತೊಳೆದುಕೊಂಡು ಸೀದಾ ಅಡುಗೆಮನೆಯೊಳಗೆ ಬಂದಾಗ ಅವ್ವ ಒಲೆಯ ಮುಂದೆ ಕುಳಿತು ಕೊಳವೆಯಿಂದ ಊದುತ್ತಿದ್ದರು. ಹೊಗೆಯ ನಡುವೆ ಎರಡು ಪಾತ್ರೆಗಳು ಒಲೆಯ ಮೇಲಿರುವುದು ಕಂಡಿತು. `ಹೊಟ್ಟೆ ಹಸಿಯುತ್ತಿದೆ, ಅವ್ವ ಬೇಗ ಊಟ ಹಾಕಿಎನ್ನುತ್ತ ಅವರ ಬಳಿ ನಿಂತೆ. `ಸ್ವಲ್ಪ ಹೊತ್ತು ತಾಳು, ಊಟ ಮಾಡಿ ಮತ್ತೆ ಆಟಕ್ಕೆ ತಾನೆ. ಅನ್ನ ಆಗದೆ ಊಟ ಬಡಿಸು ಎಂದರೆ ಹೇಗೆ? ಇನ್ನೊಂದು ಗಳಿಗೆ ಬಿಟ್ಟು ಬಾಎನ್ನುತ್ತಿದ್ದಂತೆ ನಾನು ಆಟದ ಮೈದಾನಕ್ಕೆ ಓಡುತ್ತಿದ್ದೆ.

ಮೈದಾನಕ್ಕೂ ಮನೆಗೂ ಗಡಿಯಾರದ ಆಂದೋಲಕದಂತೆ ಮೂರ್ನಾಲ್ಕು ಬಾರಿ ಎಡತಾಕಿದ ಮೆಲೆ ಮತ್ತೊಮ್ಮೆ ಸೀದಾ ಅಡುಗೆ ಕೋಣೆಗೆ ನುಗ್ಗಿ ಪಾತ್ರೆಯನ್ನು ಬಗ್ಗಿ ನೋಡಿ `ಅವ್ವಾ ಅನ್ನ ಆಗಿದೆ ಎನಿಸುತ್ತೆ, ಬಡಿಸ್ತೀರಾಎಂದಾಗ ಅವರು `ನೀನು ನೋಡಿದೆ ಅಂತ ಪಾತ್ರೆನಲ್ಲಿರೋ ಅಕ್ಕಿ ಅನ್ನ ಆಗ್ಬಿಡತ್ತಾ. ಇನ್ನೂ ಬೇಯ್ಬೇಕು’ ಎಂದದ್ದು ಈಗಲೂ ನೆನಪಿನಲ್ಲಿದೆ. `ಅಯ್ಯೋ, ಎಷ್ಟೊತ್ತಿಗಪ್ಪಾ ಈ ಅನ್ನ ಆಗೋದುಎನ್ನುತ್ತ ಪಾತ್ರೆಯನ್ನು ಪದೇ ಪದೇ ನೋಡಿದ್ದೂ ನೋಡಿದ್ದೇ. ಅಂತೂ ಕೊನೆಗೊಮ್ಮೆ ಅವ್ವ ಪಾತ್ರೆಯಿಂದ ಗಂಜಿಯನ್ನು ಬಸಿಯತೊಡಗಿದಾಗ ಹಸಿವಿನ ಚುರುಚುರು ತಾರಕಕ್ಕೇರಿ `ಅವ್ವ ಬೇಗ ಬಡಿಸಿಎಂದರೆ `ಆಗೋವರೆಗೂ ಇದ್ದು ಆರೋವರೆಗೆ ಇರಲಾರೆಯಾಎನ್ನುತ್ತ ಪಾತ್ರೆಯನ್ನು ಒಲೆಯ ಪಕ್ಕದಲ್ಲಿಟ್ಟು ಮುಚ್ಚಳ ತೆಗೆದು ನನ್ನ ಆತುರಕ್ಕೆ ಅನ್ನ ಮೊಸರು ಬಡಿಸಿದ್ದು ನೆನಪಿದೆ. ಅದನ್ನು ಗಬಗಬನೆ ತಿಂದು ಥ್ಯಾಂಕ್ಸ್ ಹೇಳುವುದಿರಲಿ, ಆಟಕ್ಕೆ ಹೋಗಲು ತಡಮಾಡಿದ್ದಕ್ಕಾಗಿ ಅವ್ವನ ಮೇಲೆ ಮನಸ್ಸಿನಲ್ಲೇ ಕೋಪಿಸಿಕೊಂಡು ಓಡಿದ್ದೆನೆನಿಸುತ್ತದೆ. ಓಡುತ್ತಿದ್ದ ನನ್ನನ್ನು ನೋಡುತ್ತಲೇ ಸಂತಸಗೊಳ್ಳುತ್ತಿದ್ದಿರಬಹುದಾದ ಅವ್ವನನ್ನು ನಾನು ಗಮನಿಸಲಿಲ್ಲವೆನಿಸುತ್ತದೆ.

ಕಾಲಗರ್ಭದಲ್ಲಿ ಇದೆಲ್ಲವನ್ನೂ ಮರೆತು ಕಾಲೇಜಿಗೆ ನಾನು ಸೇರಿದ ಎರಡನೆಯ ವರ್ಷದಲ್ಲಿ ಇದ್ದಕ್ಕಿದ್ದಂತೆ ಅವ್ವ ಅನ್ನ ತಡವಾಗಿ ಬಡಿಸಿದ್ದು ಜ್ಞಾಪಕವಾದದ್ದು ಇಂಗ್ಲಿಷ್ ತರಗತಿಯಲ್ಲಿ. ನಮ್ಮ ಲೆಕ್ಚರರ್ ಪಾಠದ ಸಂದರ್ಭದಲ್ಲಿ `ಂ ತಿಚಿಣಛಿheಜ ಠಿoಣ ಟಿeveಡಿ s’ ಎಂದು ಹೇಳಿ, ಇದರ ಅಂತರಾರ್ಥ ‘ಏನಾದರೂ ಆಗಬಹುದೆಂದು ನೀವು ಕುತೂಹಲದಿಂದ ಕಾಯುತ್ತಿರುವಾಗ ಸಮಯ ನಿಧಾನವಾಗಿ ಹೋದಂತೆ ತೋರುತ್ತದೆ’ ಎಂದಾಗ. ತಕ್ಷಣ ನನಗೆ ಚಿಕ್ಕಂದಿನಲ್ಲಿ ಅವ್ವ ಹೇಳಿದ ಮಾತು ಮತ್ತು ಲೆಕ್ಚರರ್ ಹೇಳಿದ ಗಾದೆ ಎರಡೂ ಒಂದೇ ಅಲ್ಲವೆ ಎನ್ನಿಸಿ ಆಶ್ಚರ್ಯವಾಯಿತು. ಈ ಗಾದೆ ಹೇಳಿದವರ (ಹೇಳಿದ್ದು ಬೆಂಜಮಿನ್ ್ರಂಕ್ಲಿನ್ ಎಂಬ ಭೌತವಿಜ್ಞಾನಿಯಂತೆ) ಮನೆಯಲ್ಲೂ ಊಟಕ್ಕಾಗಿ ನನ್ನಂತೆಯೇ ಆತುರದಿಂದ ಎಗರಾಡಿದ್ದ ಪೆೀರನಿದ್ದನೇ ಎನ್ನಿಸಿ ತಕ್ಷಣದಲ್ಲಿ ಒಂದು ರೀತಿಯ ಅವ್ಯಕ್ತ ಭಾವಸುರುಳಿಯೊಂದು ಆಗ ಮನಃಪಟಲದೊಳಗೆ ಸರಿದಾಡಿತು. ತುಸುದಿನ ಹಾಗೆಯೇ ಅದನ್ನು ಮೆಲುಕುಹಾಕುತ್ತಿದ್ದ ನಾನು ಕಾಲ ಕಳೆದಂತೆ ಅದರ ನೆನಪನ್ನು ಕಳೆದುಕೊಂಡೆ.

ಭೌತವಿಜ್ಞಾನದ ಉಪನ್ಯಾಸಕನಾಗಿ ಬೋಧನೆಗೆ ತೊಡಗಿದ ಮೇಲೆ ಕಾಡಿದ್ದೆಂದರೆ ಕ್ವಾಂಟಂ ಸಿದ್ಧಾಂತ. ಇಪ್ಪತ್ತನೆಯ ಶತಮಾನದಲ್ಲಿ ಅದುವರೆಗೂ ಪ್ರಚಲಿತವಾಗಿದ್ದ ಕ್ಲಾಸಿಕಲ್ ಸಿದ್ಧಾಂತವನ್ನು ಮೂಲೆಗೆ ತಳ್ಳಿ ಭೌತಪ್ರಪಂಚದ ವಿದ್ಯಮಾನಗಳನ್ನು ಸರಿಯಾಗಿ ಅರ್ಥೈಸುತ್ತೇವೆಂದು ಬಂದ ಸಿದ್ಧಾಂತಗಳಲ್ಲಿ ಒಂದು ವಿಶೇಷ ಸಾಪೇಕ್ಷತಾ ಸಿದ್ಧಾಂತ, ಇನ್ನೊಂದು ಈ ಕ್ವಾಂಟಂ ಸಿದ್ಧಾಂತ. ಭೌತ ಪ್ರಪಂಚದಲ್ಲಿನ ಎಲ್ಲವನ್ನು ಸೂಕ್ಷ್ಮ ಮತ್ತು ಸ್ಥೂಲಗಳೆಂದು ವಿಭಜಿಸಬಹುದಲ್ಲವೆ? ಯಾವುದನ್ನು ನೀವು ನೋಡುವುದಕ್ಕೆ ಯಾ ಮುಟ್ಟುವುದಕ್ಕೆ ಸಾಧ್ಯವೋ ಅದನ್ನು ಸ್ಥೂಲವೆನ್ನಿ. ಉಳಿದದ್ದನ್ನೆಲ್ಲ ಸೂಕ್ಷ್ಮವೆನ್ನಿ. ನಿಮ್ಮ ವಿಭಜನೆ ತಕ್ಕಮಟ್ಟಿಗೆ ಸರಿಯಾಗಿಯೇ ಇದೆ ಎಂದು ಎಲ್ಲರೂ ಒಪ್ಪುತ್ತಾರೆ. ಕ್ಲಾಸಿಕಲ್ ಸಿದ್ಧಾಂತದ ನಿಯಮಗಳನ್ನು ಸ್ಥೂಲಕಾಯಗಳು ಪಾಲಿಸುತ್ತವೆಯೇ ಹೊರತು ಸೂಕ್ಷ್ಮಕಾಯಗಳಲ್ಲ. ಸ್ಥೂಲಕಾಯಗಳ ವರ್ತನೆಗಳು ನಮ್ಮೊಳಗೆ ಪ್ರವೇಶಿಸಿ, ಪ್ರತ್ಯಕ್ಷ ಘಟನೆಗಳ ಬಗೆಗೆ ನಮ್ಮ ಬೌದ್ಧಿಕ ಆಳ ಎತ್ತರಗಳಿಗನುಗುಣವಾಗಿ ಉಂಟುಮಾಡುವ ಅನುಭವಸಾರವೇ ನಮ್ಮ ಕಾಮನ್ ಸೆನ್ಸ್. ಕಲ್ಲೊಂದನ್ನು ಎಸೆದಾಗ ಅದು ಗಳಿಗೆಯೊಂದರ ನಂತರ ಒಂದು ಜಾಗದಲ್ಲಿ ಕಂಡರೆ ಮತ್ತೊಂದು ಸಾರಿ ಮೊದಲು ಎಸೆದಂತೆಯೇ ಎಸೆದಾಗ ಅಷ್ಟೇ ಸಮಯದ ನಂತರ ಅಲ್ಲೇ ಕಾಣುತ್ತದೆಯಲ್ಲವೆ? ಅದರ ಸಂವೇಗವೂ (ಟಿಣ) ಮೊದಲಿನಷ್ಟೇ ಇರುತ್ತದೆಯಲ್ಲವೆ? ಆದರೆ ಸೂಕ್ಷ್ಮ ಕಣವನ್ನು ಎರಡು ಬಾರಿ ಒಂದೇ ರೀತಿ ಎಸೆದು ಹುಡುಕಿದರೆ ಬೇರೆ ಬೇರೆ ಜಾಗದಲ್ಲಿ ಕಾಣಸಿಗುವ, ಸಂವೇಗವೂ ಬೇರೆ ಬೇರೆಯಾಗಿರುವ ಸಾಧ್ಯತೆಯುಂಟು. ಆದರೆ ಸ್ಥೂಲಪ್ರಪಂಚದಲ್ಲಿ ವಸ್ತುಗಳ ಜಾಗ ಸಂವೇಗ ಎರಡೂ ನಿರ್ದಿಷ್ಟವಾಗಿರುತ್ತವೆ. ಹೀಗಲ್ಲದಿದ್ದ ಪಕ್ಷದಲ್ಲಿ ಟೆನ್ನಿಸ್ ಆಡಲು ಸಾಧ್ಯವಿತ್ತೆ? ಎದುರಾಳಿಯು ಚೆಂಡನ್ನು ನಿರ್ದಿಷ್ಟವೇಗದಲ್ಲಿ  ಮಾಡಿದನೆಂದಾಗ ಅದು ಯಾವ ಜಾಗದಲ್ಲಿದೆ ಎನ್ನುವುದು ಗೊತ್ತಾಗದಿದ್ದರೆ ರ್ಯಾಕೆಟ್ಟನ್ನು ಬೀಸುವುದಾದರೂ ಎಲ್ಲಿಗೆ? ಹೇಗೆ?

ಕ್ವಾಂಟಂ ಸಿದ್ಧಾಂತದ ಮೂಲ ಪರಿಕಲ್ಪನೆಗಳು ಸೂಕ್ಷ್ಮಪ್ರಪಂಚದಲ್ಲಿನ ಹಲವು ವರ್ತನೆಗಳನ್ನು ಹೊಸ ತಾರ್ಕಿಕ ಚೌಕಟ್ಟಿನಲ್ಲಿ ಬೆಸೆದಿವೆ. ಆಯಸ್ಕಾಂತ ಅಥವಾ ವಿದ್ಯುಚ್ಛಕ್ತಿಯಿರುವಂತಹ ವಲಯಗಳಲ್ಲಿಟ್ಟಾಗ ಅಂತಕ್ರ್ರಿಯೆಯಿಂದಾಗಿ ಒಂದು ಸೂಕ್ಷ್ಮ ಕಣ ತಾನಿರುವ ಸ್ಥಿತಿಯಿಂದ ಬೇರೊಂದು ಸ್ಥಿತಿಗೆ ಬದಲಾಗುತ್ತದೆ. ಈ ಬದಲಾವಣೆ ಹೀಗೆಯೇ ಆಗಬೇಕೆಂಬ ಪರಿಕಲ್ಪನೆ ಕ್ವಾಂಟಂ ಸಿದ್ಧಾಂತದಲ್ಲಿದೆ. ಆದರೆ ಕಣ ತಲುಪಿದ ಸ್ಥಿತಿ ಇಂತಹದೇ ಎಂದು ಉಪಕರಣ ಅಳೆಯುತ್ತದೆಯೇ? ಸದಾ ಸಾಧ್ಯವಿಲ್ಲ. ಪ್ರತಿಯೊಂದು ಉಪಕರಣವೂ ತನ್ನ ರಚನೆಗೆ ತಕ್ಕಂತೆ ಕೆಲವು ನಿರ್ದಿಷ್ಟ ಸ್ಥಿತಿಗಳನ್ನು ಮಾತ್ರ ಅಳೆಯುತ್ತದೆ. ಕಣದ ಸ್ಥಿತಿ ಉಪಕರಣಕ್ಕೆ ಸಾಧ್ಯವಿರುವ ನಿರ್ದಿಷ್ಟ ಸ್ಥಿತಿಗಳಲ್ಲಿ ಒಂದಾಗಿದ್ದರೆ ಇಂತದೇ ಸ್ಥಿತಿಯೆಂದು ಉಪಕರಣ ಅಳೆಯುತ್ತದೆಯೇ ಹೊರತು ಹಾಗಲ್ಲದಿದ್ದಾಗ ಕಣದ ಸ್ಥಿತಿಯನ್ನು ತನ್ನ ನಿರ್ದಿಷ್ಟ ಸ್ಥಿತಿಯೊಂದಕ್ಕೆ ಬದಲಿಸಿಬಿಡುತ್ತದೆ. ಈ ಬದಲಾವಣೆ ಸಂಭಾವ್ಯತೆಯನ್ನು ಆಧರಿಸಿದೆ ಎನ್ನುತ್ತದೆ ಕ್ವಾಂಟಂ ಸಿದ್ಧಾಂತದ ಇನ್ನೊಂದು ಪರಿಕಲ್ಪನೆ.

ಸೂಕ್ಷ್ಮಕಣವೊಂದನ್ನು ಅಂತಕ್ರ್ರಿಯೆಗೆ ಈಡುಮಾಡಿ ಜೊತೆಜೊತೆಗೇ ಉಪಕರಣವನ್ನು ಬಳಸಿ ಅದರ ಸ್ಥಿತಿಯನ್ನು ಪದೇ ಪದೇ ಅಳೆಯುವ ಸನ್ನಿವೇಶವೊಂದನ್ನು ಅಧ್ಯಯನಮಾಡಿದ ವಿಜ್ಞಾನಿಗಳಿಬ್ಬರಿಗೆ ದೊರೆತ ಫಲಿತಾಂಶ ವಿಶೇಷವಾಗಿತ್ತು. ಅಂತಕ್ರ್ರಿಯೆ ಕಣದ ಆರಂಭಿಕ ಸ್ಥಿತಿಯನ್ನು ಬದಲಾಯಿಸಲು ಪ್ರಾರಂಭಿಸುತ್ತದೆ. ಅದರೆ ಸ್ಥಿತಿ ಹೀಗೆ ಬದಲಾಗಲು ಪ್ರಾರಂಭಿಸುತ್ತಿದ್ದಂತೆಯೇ ಕ್ಷಣಕ್ಷಣಕ್ಕೂ ಅಳೆಯತೊಡಗಿದುದರಿಂದ ಉಪಕರಣದ ಪ್ರಭಾವಕ್ಕೆ ಸಿಕ್ಕಿ ಪ್ರತಿಸಾರಿಯೂ ಕಣ ತನ್ನ ಆರಂಭಿಕ ಸ್ಥಿತಿಗೇ ಮರಳುವಂತಾಗುತ್ತದೆ. “ಕ್ವಾಂಟಂ ಜಿೀನೋ ಪರಿಣಾಮ” ಎಂದು ಕರೆದು 1977ರಲ್ಲಿ ಪ್ರಚುರಪಡಿಸಿದವರು ಇ.ಸಿ.ಜಾರ್ಜ್ ಸುದರ್ಶನ್ ಮತ್ತು ಬೈದ್ಯನಾಥ್ ಮಿಶ್ರಾ ಎಂಬ ನಮ್ಮ ದೇಶದ ಸೈದ್ಧಾಂತಿಕ ಭೌತವಿಜ್ಞಾನಿಗಳು.

ಕಣವನ್ನು ಕುಡಿಕೆಯಲ್ಲಿನ ನೀರಿಗೆ, ಅಂತಕ್ರ್ರಿಯೆಯನ್ನು ನೀರನ್ನು ಕಾಯಿಸುವುದಕ್ಕೆ, ಉಪಕರಣದಿಂದ ಅಳೆಯುವುದನ್ನು ಕಣ್ಣಿನಿಂದ ನೋಡುವುದಕ್ಕೆ ಹೋಲಿಸಿ ನೋಡಿದರೆ “ಂ ತಿಚಿಣಛಿ ಎನ್ನುವ ಗಾದೆ, ಸ್ಥಿತಿ ಬದಲಾಯಿಸುವ ಅಂತಕ್ರ್ರಿಯೆಯಿದ್ದೂ ಉಪಕರಣದ ಎಡಬಿಡದ ಅಳೆತಕ್ಕೆ ಸಿಕ್ಕಿದ ಕಣವೊಂದು ತನ್ನ ಪೂರ್ವಸ್ಥಿತಿಯಲ್ಲೇ ಉಳಿದುಬಿಡುತ್ತದೆಯೆನ್ನುವ ವಿಶಿಷ್ಟ ಕ್ವಾಂಟಂ ತತ್ವವಾಗಿ ಕಾಣುತ್ತದೆ.

ನನ್ನ ಅನುಭವದಲ್ಲಿ ಒಂದು ಗಾದೆ ಹೀಗೆ ಮೂರು ಬಾರಿ ವಿಭಿನ್ನ ರೀತಿಯಲ್ಲಿ ಪ್ರಕಟಗೊಂಡು ಈ ಲೇಖನ ಬರೆಯಲು ಪ್ರೇರೇಪಿಸಿದೆ. ಈ ಎಲ್ಲ ಇದೆಗಳ ನಡುವೆ ಇಲ್ಲವಾಗಿರುವುದೆಂದರೆ ತನ್ನ ಹಸಿವನ್ನೂ ಮರೆತು ನನಗೆ ಊಟ ಬಡಿಸಿ ನನ್ನ ತೃಪ್ತಿಯಲ್ಲೇ ತನ್ನ ತೃಪ್ತಿ ಕಾಣುತ್ತಿದ್ದ ನನ್ನವ್ವ.

Leave a Reply

Your email address will not be published.