‘ಕಾವ್ಯವೇ ನನ್ನ ಮಾತೃ ಭಾಷೆ’

ಬಹುಭಾಷಿ ಕನ್ನಡಿಗರ ಮಹತ್ವದ ಹಿನ್ನೆಲೆಯಲ್ಲಿ ಹಿರಿಯ ಕವಿ ಎಚ್.ಎಸ್.ಶಿವಪ್ರಕಾಶರ ಸಂದರ್ಶನವನ್ನು ಸಮಾಜಮುಖಿ ಪತ್ರಿಕೆಗಾಗಿ ಜಯರಾಮ್ ರಾಯಪುರ, ಕಮಲಾಕರ ಭಟ್ ಮತ್ತು ರಾಜೇಂದ್ರ ಪ್ರಸಾದ್ ಮಾಡಿದ್ದಾರೆ. ಶಿವಪ್ರಕಾಶರು ಸ್ವತಃ ಬಹುಭಾಷಿಕ ಹಿನ್ನೆಲೆಯವರು. ಅವರಿಗೆ ಕನ್ನಡ. ಇಂಗ್ಲಿಶ್, ತಮಿಳು, ತೆಲುಗು, ಹಿಂದಿ ಭಾಷೆಗಳ ಜೊತೆಗೆ ಬಂಗಾಳಿ ಮತ್ತು ಅಸ್ಸಾಮಿ ಕೂಡ ಚೆನ್ನಾಗಿ ತಿಳಿದಿದೆ. ಕನ್ನಡ ಮತ್ತು ಇಂಗ್ಲಿಶ್ ಭಾಷೆಗಳಲ್ಲಿ ಸೃಜನಶೀಲ ಸಾಹಿತ್ಯವನ್ನು ಬರೆಯುವ ಜೊತೆಗೆ ತಮಗೆ ತಿಳಿದಿರುವ ಹಲವು ಭಾಷೆಗಳಿಂದ ಒಳ್ಳೆಯ ಸಾಹಿತ್ಯವನ್ನು ಅದರಲ್ಲೂ ಕಾವ್ಯವನ್ನು ಕನ್ನಡ ಜಗತ್ತಿಗೆ `ಮರುರೂಪಗಳ ಮೂಲಕ ನಿರಂತರವಾಗಿ ಪರಿಚಯಿಸುತ್ತಲೇ ಇದ್ದಾರೆ.

ಎಚ್.ಎಸ್.ಶಿವಪ್ರಕಾಶ್

ಜಯರಾಮ್: ಬಾರಿ ಪತ್ರಿಕೆಯ ಮುಖ್ಯಚರ್ಚೆಯಾಗಿ ಇಟ್ಟುಕೊಂಡಿರುವ ವಿಷಯ ಸರಿಯಿದೆ, ಅಗತ್ಯವಿದೆ ಅಂತ ಅನ್ನಿಸುತ್ತದೆಯೇ? ಬಹುಭಾಷಿ ಕನ್ನಡಿಗರ ಕೊಡುಗೆ ಮತ್ತು ಮಹತ್ವದ ಕುರಿತು ನಿಮ್ಮ ಅನಿಸಿಕೆಯೇನು?

ಎಚ್.ಎಸ್.ಶಿವಪ್ರಕಾಶ್: `ಯಾವ ವಿಷಯವು ಸರಿಯಾದ್ದಲ್ಲಅಂತ ನನಗೆ ಅನಿಸುವುದಿಲ್ಲ. ಕೆಲವರ ಮಾತುಗಳಲ್ಲಿ `ಕನ್ನಡದ ಸಂದರ್ಭದಲ್ಲಿಅನ್ನುವ ಮಾತು ಯಾವಾಗಲೂ ಕೇಳಿಬರುತ್ತಿರುತ್ತದೆ. ಹಾಗೆಯೆ `ಕನ್ನಡ ಸಂಸ್ಕೃತಿಅನ್ನುವುದನ್ನ ಕೆಲವು ವಿಷಯಗಳಿಗೆ ನಿಗದಿತಗೊಳಿಸಿ ಹೇಳುವ ಮತ್ತು ಹೇರುವ ಒತ್ತಡಗಳು ಕೂಡ ಸೃಷ್ಟಿ ಆಗುತ್ತಲೇ ಇವೆ.

ಅನಂತಮೂರ್ತಿ ಅವರು ಒಂದು ಲೇಖನದಲ್ಲಿ ಪುಣ್ಯಕೋಟಿಯ ಬಗ್ಗೆ ಬರಹ ಮಾಡಿದಾಗ ಪುಣ್ಯಕೋಟಿ ಎಂಬ ಹಸುವು ಹುಲಿಗೆ ತನ್ನನ್ನು ತಾನು ಅರ್ಪಿಸಿಕೊಂಡು ಹುಲಿಯು ತಾನೇ ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿತು; ಇದು ಕನ್ನಡ ಸಂಸ್ಕೃತಿಯು ಹಿಂಸೆಯನ್ನು ವಿರೋಧಿಸುವ ಬಗೆ ಎನ್ನುವರ್ಥದಲ್ಲಿ ವ್ಯಾಖ್ಯಾನ ಮಾಡಿದರು. ಆದರೆ ಅದು ಹಾಗಲ್ಲ. ಯಾಕಂದರೆ ಗೋವಿನ ಹಾಡಿನ ಹಲವು ಆವೃತ್ತಿಗಳು ನಮ್ಮಲ್ಲಿವೆ. ಅದ್ರಲ್ಲಿ ಅನಂತಮೂರ್ತಿಯವರು ಉಲ್ಲೇಖಿಸಿದ್ದು ಒಂದು ಆವೃತ್ತಿ ಮಾತ್ರ ಮತ್ತು ಅದನ್ನು ಅವರಿಗೆ ಬೇಕಾದ ಹಾಗೆ ವ್ಯಾಖ್ಯಾನಿಸಿದರೆ ಮಾತ್ರ ಅದು ಕನ್ನಡ ಸಂಸ್ಕøತಿಯಾಗುವುದಿಲ್ಲ. ನಾವು ಮುಖ್ಯವಾಗಿ ತಿಳಿಯಬೇಕಿದ್ದು ಇದೇ. “ಕನ್ನಡ ಸಂಸ್ಕೃತಿಅನ್ನುವುದನ್ನು ನಮಗೆ ಬೇಕಾದ ಕೆಲವು ಸಂಗತಿಯನ್ನು ಆರಿಸಿಕೊಂಡು ಅದನ್ನು ಸಂಸ್ಕೃತಿಗೆ ಮಿತಿಗೊಳಿಸುವುದಲ್ಲ. ಅದು ಅಂತಹ ಎಲ್ಲ ಮಿತಿಗಳನ್ನು ದಾಟಿಕೊಂಡ ಹರಹಿನದು. ಕನ್ನಡ ಸಂಸ್ಕೃತಿ ಎನ್ನುವುದು ಕೇವಲ ಗತದ ವಸ್ತುವಲ್ಲ. ಅದನ್ನು ಅಡಿಗರು ಚೆನ್ನಾಗಿ ತಮ್ಮದೊಂದು ಕವಿತೆಯಲ್ಲಿ ಹೇಳುತ್ತಾರೆ..

ಇತ್ತುಗಳ ಧ್ವಜವನ್ನು ಹಿಡಿದೆತ್ತಿ ನಿಲ್ಲು ಮಗು

ಇರದುದರ ಉಪದ್ವ್ಯಾಪ ಬೇಡ ನಿನಗೆ

ಇತ್ತುಗಳ ಧ್ವಜವನ್ನು ಹಿಡಿದೆತ್ತಿ ನಿಲ್ಲುವ ಪ್ರವೃತ್ತಿ ಕೇವಲ ಮೂಲಭೂತವಾದಿ ಜನರಿಗೆ ಮಾತ್ರ ಸೀಮಿತವಲ್ಲ. ನಮ್ಮ ಅನೇಕ ಜನ ಸ್ವಘೋಷಿತ ಪ್ರಗತಿಪರ ಚಿಂತಕರಿಗೂ ಇದೆ. ಉದಾಹರಣೆಗೆ ಕೆಲವರು 12ನೇ ಶತಮಾನದ ಕಲ್ಯಾಣದ ಕ್ರಾಂತಿಗೆ ಮಿತಿಗೊಂಡು ನಿಲ್ಲುತ್ತಾರೆ, ಉಗ್ರ ಭಾಷಾ ಅಭಿಮಾನಿಗಳು ವಿಜಯನಗರದ ಕಾಲವನ್ನು ವೈಭವಿಕರಿಸುತ್ತಾ ನಿಲ್ಲುತ್ತಾರೆ. ಹೀಗೆ ಬಹುತೇಕರು ಬೇರೆ ಬೇರೆ ಕಾಲಘಟ್ಟ, ಬೇರೆ ಬೇರೆ ವಿಚಾರಗಳ ಮಿತಿಗೆ ಒಳಪಟ್ಟು ಅದನ್ನು ಕನ್ನಡ ಸಂಸ್ಕೃತಿ ಎಂದು ನಿರ್ವಚಿಸುತ್ತಾರೆ. ಆದರೆ ಕನ್ನಡ ಸಂಸ್ಕೃತಿ ಎಂಬುದು ಜಗತ್ತಿನ ಸಂಸ್ಕೃತಿಯ ಒಂದು ಭಾಗವಾಗಿದೆ. ಹಾಗಾಗಿ ಮಿತಿಗಳಿಗೆ ಒಳಪಟ್ಟಿರುವ ಕಳಪೆ ಕನ್ನಡ ಸಂಸ್ಕೃತಿಯ ಪರಿಕಲ್ಪನೆಗಳನ್ನು ಕಿತ್ತೆಸೆದು ಹೊಸದಾದ ಒಂದು ಅರ್ಥಗಳನ್ನ ನಾವು ಕಟ್ಟಿಕೊಳ್ಳಬೇಕಿದೆ.

ಜಯರಾಮ್: ಕನ್ನಡ ವೈಚಾರಿಕತೆ ಒಂದು ರೀತಿಯಲ್ಲಿ ಜಾಗತಿಕ ಚಿಂತನೆಗಳಿಂದ ವಿಮುಖ ಆಗ್ತಾ ಇದೆ ಅಂತ ಒಂದು ಆರೋಪ ಇದೆ. ಕನ್ನಡದ ಬಹಳಷ್ಟು ಲೇಖಕರು ಜಾಗತಿಕರಣ ವಿರುದ್ಧ ಈಗಲೂ ಮಾತಾಡುತ್ತಲೇ ಇದ್ದಾರೆ, ಆದರೆ ಬಹಳಷ್ಟು ಅರ್ಥಶಾಸ್ತ್ರಜ್ಞರು ಈಗ ಅದು ಬೇಕಾಗಿದೆ ಅಂತಲೇ ಮಾತಾಡ್ತಾರೆ. ನೀವೇನು ಹೇಳ್ತೀರಿ?

ಎಚ್.ಎಸ್.ಶಿವಪ್ರಕಾಶ್: ಈಗಾಗಲೇ ನಾನು ಕನ್ನಡ ಜಗತ್ತಿನ ಒಂದು ಭಾಗವಾಗಬೇಕು ಅಂತ ಹೇಳಿದೆ. ನಾವು ಜಗತ್ತಿನ ಇತರ ಸಂಸ್ಕೃತಿಗಳಿಗೆ ತೆರೆದುಕೊಳ್ಳದೇ ಹೋದರೆ ನಾವೊಂದು ದ್ವೀಪವಾಗಿ ಉಳಿದುಬಿಡ್ತಿವಿ. ಇತಿಹಾಸದಲ್ಲಿ ಯಾವ ನಾಗರಿಕತೆಗಳು ಹೊರಜಗತ್ತಿನ ಸಂಪರ್ಕಗಳಿಲ್ಲದೆಯೇ ಇದ್ದುವೋ ಅವೆಲ್ಲವೂ ಅಳಿದಿವೆ. ಉದಾ: ಮಾಯನ್ ಇನ್ಕಾ ಸೇರಿದಂತೆ ಕೆಲವು ದಕ್ಷಿಣ ಅಮೆರಿಕಾ ನಾಗರಿಕತೆಗಳನ್ನು ಗಮನಿಸಬಹುದು.

ಯಾವುದನ್ನ ನಾವು ಕಗ್ಗತ್ತಲ ಖಂಡ ಎಂದು ವಸಾಹತು ಶಾಹಿ ಸಾಮ್ರಾಜ್ಯಗಳು ಕರೆದುವೋ ಅಂತಹ ಆಫ್ರಿಕಾದ ಹಲವಾರು ಸಂಸ್ಕೃತಿ/ ನಾಗರೀಕತೆಗಳು ಹೊರಜಗತ್ತಿಗೆ ತೆರೆದುಕೊಂಡಿವೆ. ಭಾರತದಲ್ಲೂ ಕೂಡ ಇದು ಹಲವರು ಶತಮಾನಗಳ ಕಾಲ ನಡೆದಿದೆ. ಗ್ರೀಕ್ ನಾಟಕ ಗಳಲ್ಲಿ ಸಂಸ್ಕೃತದ ಪದಗಳು ಕಂಡಿವೆ, ಸಂಸ್ಕೃತ ನಾಟಕಗಳಲ್ಲಿ ಗ್ರೀಕ್ ಪ್ರಭಾವಗಳು ಉಂಟಾಗಿವೆ.. ಹೀಗೆ ಹಲವು ತರಹದ ಕೊಡುಕೊಳ್ಳುವಿಕೆಗಳು ನಡೆಯುತ್ತಾ ಬಂದಿವೆ. ಅರ್ಥದ ಜಾಗತೀಕರಣ ನಮಗೆ ಅಗತ್ಯವಾಗಿವೆ. ಆದರೆ ಜಾಗತೀಕರಣದ ಮತ್ತೊಂದು ಹಂತವಿದೆ. ಅದು ವಸಾಹತುಶಾಹಿ ಮತ್ತು ಬಂಡವಾಳಶಾಹಿ ನೆಲೆಯದ್ದು. ಇದು ಅಸಮಾನ ಹಂಚಿಕೆಯದ್ದು. ಅಸಮಾನ ಹಂಚಿಕೆಯ ಬಗ್ಗೆ ಮಾತನಾಡಿದ ಮಾಕ್ರ್ಸ್ವಾದಿ ಪ್ರಭುತ್ವಗಳು ನಶಿಸಿ ಹೋದರೂ ಅಸಮಾನ ಹಂಚಿಕೆ ಮುಂದುವರಿದ ರಾಷ್ಟ್ರಗಳು ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳ ನಡುವೆ ಹಾಗೇ ಉಳಿದುಹೋಗಿದೆ. ಅಸಮಾನ ಹಂಚಿಕೆಯನ್ನೇ ಇವತ್ತಿನ ಮಾರುಕಟ್ಟೆ ಪಂಡಿತರು `ಜಾಗತೀಕರಣಅಂತ ಕರೆಯುತ್ತಾರೆ. ಇಂತಹ ಜಾಗತೀಕರಣವನ್ನು ನಾನು `ಗೋಳೀಕರಣಅಂತ ಕರೆಯಲು ಇಚ್ಛಿಸುತ್ತೇನೆ.

ಜಯರಾಮ್: ವೈಚಾರಿಕವಾಗಿ ಬರೆಯಬೇಕು ಅಂತ ಅಂದ್ರೆ ಬರಹಗಾರ ತನ್ನ ಭಾಷೆಯ ಜೊತೆಗೆ ಬೇರೆ ಬೇರೆ ಭಾಷೆಯ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿರಬೇಕು ಅಂತ ಅಂದುಕೊಳ್ತೇವೆ. ಒಬ್ಬ ಹೊಸದಾಗಿ ಸೃಜನಶೀಲ ಬರಹಗಳನ್ನು ಬರೆಯಲು ಶುರು ಮಾಡಿದವ ನನಗೆ ನನ್ನ ಭಾಷೆಯೇ ಸಾಕು, ಬೇರೆಯದೆಲ್ಲ ಓದಲ್ಲ, ಅಲ್ಲಿನ ವಿಚಾರಗಳು ನನಗೆ ಬೇಕಿಲ್ಲ ಅಂತಾನೇ.. ಅವನಿಗೆ ನಿಮ್ಮ ಉತ್ತರವೇನು?

ಎಚ್.ಎಸ್.ಶಿವಪ್ರಕಾಶ್: ನಾನ್ಯಾಕೆ ಉತ್ತರ ಕೊಡಬೇಕು? ಒಳ್ಳೆಯ ಬರಹಗಾರನಿಗೆ ಅಥವಾ ಕವಿಗೆ ಯಾವ ಷರತ್ತೂ ಇಲ್ಲ. ಉದಾಹರಣೆಗೆ ಶಿಶುನಾಳ ಶರೀಫಾ ಯಾವ ಗ್ರಂಥಗಳನ್ನು ಓದಿದ್ದ? ಆತ ಮಹಾಕವಿಯಾಗಿದ್ದ. ಸರ್ವಜ್ಞನಿಗೆ ಯಾವ ಗ್ರಾಂಥಿಕ ಜ್ಞಾನವಿತ್ತು? `ಸರ್ವರೊಳಗೊಂದು ಕಲಿತು ವಿದ್ಯೆಯ ಪರ್ವತವೇ ಆದೆಅಂತಾನೆ. ಇನ್ನು ಕೆಲವರು ಸುಶಿಕ್ಷಿತರಾಗಿ ಒಳ್ಳೆಯ ಕಾವ್ಯವನ್ನ ಬರೆದಿದ್ದಾರೆ. ಕಾಳಿದಾಸನ `ಮೇಘಧೂತಕಾವ್ಯವನ್ನ ಓದಿದರೆ ಅವನು ಇಡೀ ಭರತ ಖಂಡವನ್ನೇ ಸುತ್ತಿ ಅಥವಾ ತಿಳಿದು ಕಾವ್ಯ ಬರೆದಿದ್ದಾನೆ ಅನಿಸತ್ತೆ. ಅದೇ ರೀತಿ ಪಾಬ್ಲೋ ನೆರುಡ, ಅಕ್ಟೊವಿಯೋ ಪಾಸ್ ಒಳ್ಳೆಯ ಕಾವ್ಯವನ್ನ ಬರೆದಿದ್ದಾರೆ. ಅಮೆರಿಕನ್ ಕವಿಯಿತ್ರಿ ಎಮಿಲಿ ಡಿಕನ್ಸನ್ ತನ್ನ ಮೆಸಚುಸೆಟ್ಸ್ ಊರಿನ ಮೂವತ್ತು ಕಿಮಿ ದಾಟಿ ಆಚೆಗೆ ಹೋಗಿರಲಿಲ್ಲ. ಆದರೆ ಆಕೆಯೂ ಮಹಾಕಾವ್ಯ ಬರೆದಳು. ಹೀಗಾಗಿ ಕಾವ್ಯವನ್ನು ಬೇರೆಯುವುದಕ್ಕೆ ಒಂದು ವಸ್ತು ನಿಷ್ಟವಾದ ಜ್ಞಾನ ಅಗತ್ಯ ಅಂತ ನನಗೆ ಅನ್ನಿಸುವುದಿಲ್ಲ. ಅಥವಾ ಅಂತಹಾ ವಸ್ತುನಿಷ್ಟವಾದ ಜ್ಞಾನವಿದ್ದರೆ ಕಾವ್ಯದ ಇನ್ನೊಂದು ಗುಣ ವೈಶಾಲ್ಯ/ ವಿಸ್ತಾರ ಆಗಬಹುದು ಅಥವಾ ಅಲ್ಲಮನ ವಚನಗಳ ತರಹದ ಗಾಢವಾದ ಕಾವ್ಯವಾಗಬಹುದು.

ತಮಿಳು ಕಾವ್ಯ ಮೀಮಾಂಸೆಯಲ್ಲಿ ಐದು ತಿಣೈಗಳನ್ನ ಗುರುತಿಸುತ್ತಾರೆ. ಕಾವ್ಯಕ್ಕಿರುವ ನಿಸರ್ಗದ ಭಿತ್ತಿಗಳು, ನಾಲ್ಕು ಭೂಖಂಡಗಳು ಇತ್ಯಾದಿಗಳನ್ನು ಹೇಳುತ್ತಾರೆ. ಉದಾಹರಣೆಗೆ ನದಿ ತೀರ, ಸಮುದ್ರ ತೀರ, ಪರ್ವತ ಸೀಮೆ, ಸಮತಟ್ಟು ಭೂಮಿ, ಮರಳುಗಾಡು ಈತರಹದ ಭೂ ಪ್ರದೇಶ ಪ್ರೇಮಕಾವ್ಯಕ್ಕೆ ಒಳ್ಳೆಯ ರೂಪಕ ಭಾಷೆಯನ್ನು ಒದಗಿಸುತ್ತವೆ ಅನ್ನುವ ನಂಬಿಕೆ ಸಂಗಂ ಕಾಲದಲ್ಲಿ ಇತ್ತು. ಆದರೆ ಎಮಿಲಿ ಮೂವತ್ತು ಕಿಮಿ ಪರಿಧಿಯಲ್ಲಿ, ಶಿಶುನಾಳ ಶರೀಫಾ ನಾಕೈದು ತಾಲೂಕುಗಳಲ್ಲಿ ಇಡಿ ಲೋಕವನ್ನು ಕಂಡು ಕಾವ್ಯವನ್ನ ರಚಿಸ್ತಾರೆ. ಆಮೇಲೆ ಮತ್ತೊಂದು ನಮ್ಮ ಜನಪದರಲ್ಲಿ ಪುರಾಣಗಳಲ್ಲಿ ಕಥೆಯೊಂದಿದೆ. ಶಿವಪಾರ್ವತಿಯರ ಕೈಯಲ್ಲಿ ವಿಶೇಷವಾದ ಒಂದು ಹಣ್ಣು ಇತ್ತು. ಇಬ್ಬರು ಮಕ್ಕಳಾದ ಗಣೇಶ ಸುಬ್ರಹ್ಮಣ್ಯರಲ್ಲಿ ಯಾರು ಮೊದಲು ಜಗತ್ತನ್ನು ಸುತ್ತಿ ಬರ್ತಾರೋ ಅವರಿಗೆ ಹಣ್ಣು ಸಿಗತ್ತೆ ಅಂತಾರೆ. ಅವಾಗ ಸುಬ್ರಹ್ಮಣ್ಯ ಸುತ್ತಲು ಹೊರಟರೆ, ಗಣೇಶ `ತಂದೆತಾಯಿಯರೇ ಜಗತ್ತುಅಲ್ಲವೇ ಅಂತ ಅವರನ್ನೇ ಸುತ್ತಿ ಹಣ್ಣು ಪಡೆದುಕೊಳ್ತಾನೆ. ವಾಪಸು ಬಂದ ಸುಬ್ರಹ್ಮಣ್ಯ ಸಿಟ್ಟುಗೊಂಡು ಕೈಲಾಸ ಬಿಟ್ಟು ಪಳನಿಯಲ್ಲಿ ಬಂದು ನೆಲೆಸುತ್ತಾನೆ. `ಪಳಂ ನಿಅಂದರೆ `ನೀನೆ ಹಣ್ಣುಅಂತ. ಗಣೇಶ ಸುತ್ತಿ ಹಣ್ಣನ್ನು ಪಡೆದರೆ, ಸುಬ್ರಹ್ಮಣ್ಯ ತಾನೇ `ಹಣ್ಣುಆದ. ಇದನ್ನ ಕಾವ್ಯ ಸೃಷ್ಟಿಗೆ ಎರಡು ಮಾದರಿಗಳಾಗಿ ಇಟ್ಟುಕೊಳ್ಳಬಹುದು ಅಂತ ಅಂದುಕೊಂಡಿದ್ದೀನಿ. ಎರಡರಲ್ಲೂ ಒಳ್ಳೆಯ ಕಾವ್ಯ ಬರಲು ಸಾಧ್ಯ. ತನಗೆ ಸಿಕ್ಕಿರುವ ತಿಣೈ ಅನ್ನು ಕವಿ ಹೇಗೆ ಬಳಸಿಕೊಳ್ಳುತ್ತನೋ ಅದರ ಮೇಲೆ ಅವಲಂಬಿತ.

ಜಯರಾಮ್: ಕೊಡು ಕೊಳ್ಳುವಿಕೆಗಳ ಅನುಸಂಧಾನದ ಮಾದರಿಗಳನ್ನು ಕನ್ನಡ ಲೇಖಕರು ಎಷ್ಟರ ಮಟ್ಟಿಗೆ ತಮ್ಮದಾಗಿಸಿಕೊಂಡಿದ್ದಾರೆ ಮತ್ತು ತಮ್ಮದಾಗಿಸಿಕೊಳ್ಳದೇ ಇರಲು ಅವರಿಗಿದ್ದ ಮಿತಿಗಳು ಏನು?

ಎಚ್.ಎಸ್.ಶಿವಪ್ರಕಾಶ್: ನಮ್ಮ ನವೋದಯ ಕಾಲದ ದೊಡ್ಡ ಬರಹಗಾರರು ವಿಶೇಷವಾಗಿ ಕುವೆಂಪು ಅವರು ಕಿರಿಯರಲ್ಲಿಲ್ಲದ ಅನುಸಂಧಾನವನ್ನು ಪಾಶ್ಚಿಮಾತ್ಯ ಅನುಸಂಧಾನವನ್ನು ಮಾಡ್ತಾ ಇದ್ದರು. ಅದು ಬೇಂದ್ರೆ, ಶಿವರಾಮ ಕಾರಂತರಲ್ಲೂ ಇತ್ತು. ಆದರೆ ನವ್ಯದ ಬರಹಗಾರರಿಗೆ ಬಂದಾಗ ಬಹುತೇಕ ಅವರೆಲ್ಲಾ ಇಂಗ್ಲಿಶ್ ಪ್ರಾಧ್ಯಾಪಕರು ಆಗಿದ್ದರಿಂದ ಹಳಗನ್ನಡ ಕಾವ್ಯವನ್ನು ಓದಿದವರು ನನಗೆ ಕಂಡಿಲ್ಲ. (ಬಹುಶಃ ಅಡಿಗ, ಕೆ.ಎಸ್.ನರಸಿಂಹಸ್ವಾಮಿ ಮತ್ತು ಶಂಕರ್ ಮೊಕಾಶಿ ಪುಣೇಕರ್ ಅವರನ್ನು ಹೊರತು ಪಡಿಸಿ) ಅಥವಾ ವಚನ ಸಾಹಿತ್ಯ ದೊಡ್ಡದಾಗಿ ಇಟ್ಟುಕೊಂಡಿದ್ದ ನವ್ಯರು ಅದನ್ನು ಕೂಡ ನೆಟ್ಟಗೆ ಓದಿದಂತೆ ಕಾಣುವುದಿಲ್ಲ. ಅವರು ತಮ್ಮ ಪರಂಪರೆಯ ಜೊತೆಗೆ ಕೂಡ ಅನುಸಂಧಾನವನ್ನು ಮಾಡಲಿಲ್ಲ. ಆದರೆ ಹೊರಗಿನ ಪರಂಪರೆಗಳ ಜೊತೆಗೆ ಅನುಸಂಧಾನ ಮಾಡಿದಾಗ ಕೂಡ ತುಂಬಾ ಸೆಲೆಕ್ಟಿವ್ ಆಗಿ ಮಾಡಿದ್ರು. ತುಂಬಾ ಸೀಮಿತವಾಗಿತ್ತು. ಅವರು ಅನುಸಂಧಾನ ಮಾಡಿದ್ದು ಕೇವಲ ಪಶ್ಚಿಮ ಯೂರೋಪಿನ ಮತ್ತು ಅಮೆರಿಕಾದ ಸಾಹಿತ್ಯ ಪರಂಪರೆ ಮತ್ತು ದರ್ಶನಗಳ ಜೊತೆಗೆ. ಹೊರ ಜಗತ್ತು ಅಂದರೆ ಪೂರ್ವ ಏಶಿಯಾ, ಮಧ್ಯ ಏಶಿಯಾ ನಾಗರಿಕತೆಗಳ ಜೊತೆಗೆ ಅನುಸಂಧಾನ ಮಾಡಲಿಲ್ಲ. ಯಾವುದು ಇಂಗ್ಲಿಶ್ ಅಂತ ಇತ್ತೋ ಅದರ ಜೊತೆಗೆ ಮಾತ್ರ ತಮ್ಮ ಸಾಹಿತ್ಯದ ತುಲನೆಯನ್ನು ಮಾಡಲು ಪ್ರಯತ್ನಪಟ್ಟರು.

ಮುಂದೆ ನವ್ಯೋತ್ತರ (ನನಗನ್ನಿಸುತ್ತೆ ನವ್ಯ ಇನ್ನು ಪೂರ್ಣವಾಗಿಲ್ಲ ಅನಿಸತ್ತೆ) ದಲ್ಲಿ ಅಷ್ಟು ಆರೋಗ್ಯಕರವಲ್ಲದ ಒಳಮುಖತೆ, ಅಸ್ತಿತ್ವ ರಾಜಕಾರಣ ಅಂದಾಗ ತನ್ನ ವಿಶಿಷ್ಟತೆಯನ್ನ ಹೇಳುವುದೇ ಸಾಹಿತ್ಯ ಅಂತಾಗಿಬಿಟ್ಟಿತು. ಕೆಲವರು ಬರೆಯುವ ಕವಿತೆಗಳು ಅವರ ಪ್ರಾದೇಶಿಕ ಶಬ್ದಕೋಶ ಆಗಿರತ್ತೆ. ಹಾಗೆ ಹೇಳಿದ್ರೆ ಪ್ರಾದೇಶಿಕ ಭಾಷೆ ಬಳಸಬಾರದು ಅಂತಲ್ಲ. ನಮ್ಮ ಬೇಂದ್ರೆ ಅವರು ಬರೆಯಲಿಲ್ಲವೇ.. ಬರಹ ಸಾಧಾರಣೀಯವಾಗದಿದ್ದರೆ ಕಾವ್ಯವಾಗಲು ಸಾಧ್ಯವಿಲ್ಲ.

ಜಯರಾಮ್: ನಮ್ಮಲ್ಲಿನ ಲೇಖಕರು ತಮ್ಮ ಪರಂಪರೆಯ ಜೊತೆಗೆ ಅನುಸಂಧಾನವನ್ನೇ ಮಾಡಿಲ್ಲ ಅಂತ ಹೇಳಿದ್ರಿ. ಆದರೆ ಬಹಳಷ್ಟು ಲೇಖಕರು ಪರಂಪರೆಯ ಹಲವು ಸಂಗತಿಗಳನ್ನು ತೆಗೆದುಕೊಂಡು ತಮ್ಮದೇ ಆದ ಕಾವ್ಯ, ಕಾದಂಬರಿ, ನಾಟಕಗಳನ್ನು ಬರೆದಿದ್ದಾರೆ. ಉದಾಹರಣೆಗೆ ಭೈರಪ್ಪನವರನ್ನೇ ತೆಗೆದುಕೊಳ್ಳಿ.. ಅವರು ಪರಂಪರೆ ಇಟ್ಟುಕೊಂಡೆ `ಪರ್ವವನ್ನು ಬರೆದಿದ್ದಾರಲ್ಲ!

ಎಚ್.ಎಸ್.ಶಿವಪ್ರಕಾಶ್: ಯಾರು ಬರೆದಿದ್ದಾರೆ? ಭೈರಪ್ಪನವರಾ?? ಅವರು ಪೂರ್ವಗ್ರಹಗಳನ್ನು ಬಿಟ್ಟಿದ್ದರೆ ಒಳ್ಳೆಯ ಬರಹಗಾರರು ಆಗುತ್ತಿದ್ದರು. ಅವರ ಪೂರ್ವಗ್ರಹಗಳನ್ನು ಪರಂಪರೆಯ ಅನುಸಂಧಾನ ಎನ್ನಲಾಗದು. ಅವರಲ್ಲಿ ಜನಪದ ಮತ್ತು ಭಕ್ತಿ ಪರಂಪರೆಯ ಅನುಸಂಧಾನ ಕಾಣಲಿಲ್ಲ. ಬೇಂದ್ರೆಯವರು ಪರಂಪರೆಯ ವಿವಿಧ ಮಾರ್ಗಗಳಲ್ಲಿ ಅನುಸಂಧಾನ ಮಾಡಿದ್ರು.

ಜಯರಾಮ್: ವೈದಿಕ ಪರಂಪರೆಯ ಜೊತೆಗಾದರೂ ಅನುಸಂಧಾನ ಮಾಡಿದ್ದಾರಲ್ಲ.., ಎಲ್ಲ ಬರಹಗಾರರು ಎಲ್ಲ ರೀತಿಯ ಪರಂಪರೆಗಳ ಜೊತೆ ಅನುಸಂಧಾನ ಮಾಡಲು ಸಾಧ್ಯವಾಗದೇ ಇರಬಹುದು ಅಲ್ಲವೇ?

ಎಚ್.ಎಸ್.ಶಿವಪ್ರಕಾಶ್: ಉದಾಹರಣೆಗಳನ್ನೆಲ್ಲಾ ಬಿಡಿ. ಅಗಲಿ ಹಾಗೆ ಭಾವಿಸಿದರೂ ಅವರು ನಡೆಸಿದ ಅನುಸಂಧಾನವು ಒಂದು ಜಾಡಿನದು ಮಾತ್ರ ಅದರಲ್ಲೂ ಕೂಡ ಪೂರ್ವಗ್ರಹಗಳನ್ನು ಇಟ್ಟುಕೊಂಡಿದ್ದರು ಎಂಬುದನ್ನು ಮರೆಯಬಾರದು. ಮರಾಠಿಯ ಖಂಡೇಕರ್ ಅವರ ಯಯಾತಿಯನ್ನು ಓದಿ ಅದರೊಟ್ಟಿಗೆ ಕಾರ್ನಾಡರ ಯಯಾತಿಯನ್ನೂ, ಭೈರಪ್ಪನವರ ಕಾದಂಬರಿಗಳನ್ನೂ ಓದಿ ನಾನು ಹೇಳುತ್ತಿರುವ ಪರಂಪರೆಯ ಅನುಸಂಧಾನ ಅರ್ಥವಾಗಬಹುದು.

ಜಯರಾಮ್: ಬೇರೆಲ್ಲಾ ಭಾಷೆಗಳಿಂತ ಜನಪದ, ಲಿಪಿ, ಸಾಹಿತ್ಯ ಇತ್ಯಾದಿ ಪಾರಂಪರಿಕ ಇತಿಹಾಸ ಕನ್ನಡಕ್ಕೆ ಹೆಚ್ಚು ಇದೆ. ಬಗ್ಗೆ ನಿಮಗೆ ಹೆಚ್ಚು ತಿಳಿದಿರುತ್ತದೆ. ಜನಪದದ ವಿಷಯಕ್ಕೆ ಬಂದರೆ ಕನ್ನಡದಲ್ಲಿ 96ಕ್ಕೂ ಹೆಚ್ಚು ಪ್ರಕಾರಗಳು ಇವೆ ಎಂದು ಗುರುತಿಸುತ್ತಾರೆ. ಬೇರೆ ಭಾಷೆಗಳಲ್ಲಿ ಇಷ್ಟು ಪ್ರಕಾರ ಇರೋದು ಅನುಮಾನ. ಇಷ್ಟು ಶ್ರೀಮಂತವಾದ ಜನಪದ ಭಾಷಿಕ ಪರಂಪರೆಯ ಇತಿಹಾಸವನ್ನು ನಮ್ಮ ಲೇಖಕರು ಗುರುತಿಸಿಲ್ಲ ಅಥವಾ ಅನುಸಂಧಾನ ಮಾಡಿಲ್ಲ ಎನ್ನುವ ಮಾತು ಕೇಳಿಬರುತ್ತಲೇ ಇದೆ.. ಕುರಿತು ನಿಮ್ಮ ಅಭಿಪ್ರಾಯವೇನು?

ಎಚ್.ಎಸ್.ಶಿವಪ್ರಕಾಶ್: ಮೊದಲನೆಯದಾಗಿ: ನಮ್ಮ ಭಾರತೀಯ ಅಥವಾ ಕನ್ನಡ ಸಂಸ್ಕೃತಿ ಅತ್ಯಂತ ಶ್ರೀಮಂತವಾದುದು ಎನ್ನುವುದು ಒಂದು ಸಾಮೂಹಿಕ ಅಹಮ್ಮಿನ ಮಾತುಯಾಕಂದರೆ ನಮಗೆ ಬೇರೆ ಸಂಸ್ಕೃತಿಗಳ ಬಗ್ಗೆ ಸಾಕಷ್ಟು ಗೊತ್ತಿಲ್ಲ. ನನ್ನ ತಾಯಿಯವರ ಭಾಷೆ ತಮಿಳು. ಹಾಗಾಗಿ ತಮಿಳಿನ ಸಂಸ್ಕೃತಿ ನೋಡಿದ್ದೀನಿ. ತಮಿಳಿನ ಸಂಗಂ ಸಾಹಿತ್ಯದಂತೆ ಮತ್ತೊಂದಿಲ್ಲ. ಆದರೆ ತಮಿಳಿನಲ್ಲಿ ನಮ್ಮ ವಚನ ಚಳುವಳಿಯಂತದು ಆಗಿಲ್ಲ. ಅಲ್ಲಿಯೂ ಜನಪದವಿದೆ, ಅಲ್ಲಿನ ದೇವಸ್ಥಾನ ಸಂಸ್ಕೃತಿ ಬೇರೆಯದೇ ತೆರೆನಾಗಿದೆ. ಅಸ್ಸಾಮಿನ ಸಂಸ್ಕೃತಿ ನೋಡಿದ್ದೇನೆ. ನಾಟಕ ಸಾಹಿತ್ಯ, ಅಲ್ಲಿನ ಬುಡಕಟ್ಟುಗಳ ಅಭಿವ್ಯಕ್ತಿಗಳಿಂದ ಅದೂ ಕೂಡ ಬಹಳ ವಿಸ್ತಾರವಾಗಿದೆ. ಹಾಗಾಗಿ ನಮ್ಮದೇ ಶ್ರೀಮಂತ ಸಂಸ್ಕೃತಿ ಅಂತ ತಿಳಿಯುವುದು ತಪ್ಪು. ಎಲ್ಲ ಸಂಸ್ಕೃತಿಗಳು ಸಮಾನವಾಗಿವೆ. ನಾವು ತಿಳಿದುಕೊಳ್ಳಲು ಯತ್ನಿಸಿರುವುದಿಲ್ಲ ಅಷ್ಟೇ. ಹೇಗೆ ಹಿಂದೆ ಯುರೋಪಿನವರು ನಮ್ಮ ಬಿಳಿಯರ ಸಂಸ್ಕೃತಿಯೇ ಶ್ರೇಷ್ಠವಾದುದ್ದು, ಕರಿಯರ ಮತ್ತು ಇತರೆ ಮೈ ಬಣ್ಣದ ಜನರನ್ನು ಬದಲಾಯಿಸುವ ಮಹಾನ್ ವ್ಯಕ್ತಿಗಳು ನಾವಾಗಿದ್ದೀವಿ ಅಂತ ಅಂದುಕೊಂಡಿದ್ದರೋ ಹಾಗೆ ಇದೂ ಕೂಡ ಆಗುತ್ತದೆ.

ಎರಡನೆಯದಾಗಿ, ಯಾಕೆ ಅನುಸಂಧಾನ ಮಾಡಿಲ್ಲ ಅಂದರೆ ಕನ್ನಡ ಭಾಷೆಯ, ಸಂಸ್ಕೃತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ವಿಶಾಲವಾಗಿದೆ ಎಂದರೆ ಕನ್ನಡದ ಸರ್ವ ಶಬ್ದ ಸಂಪತ್ತನ್ನು ಒಬ್ಬ ಕವಿ ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಬೇಂದ್ರೆಯವರು ಉತ್ತರ ಕರ್ನಾಟಕದ ಜನಪದದಿಂದ ಪಡೆದುಕೊಂಡಿದ್ದರೆ ಹೊರತು ದಕ್ಷಿಣ ಕರ್ನಾಟಕ ಮಂಟೇಸ್ವಾಮಿ, ಮಲೆ ಮಾದೇಶ್ವರ ಪರಂಪರೆಯಿಂದಾಗಲಿ, ಕರಾವಳಿಯ ತುಳು ಸಂಸ್ಕೃತಿಯಿಂದಾಗಲಿ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲರೂ ಎಲ್ಲವನ್ನು ಒಳಗೊಳ್ಳಲು ಸಾಧ್ಯವಿಲ್ಲ.

ಕಮಲಾಕರ ಭಟ್: ಬಹುಭಾಷಿಕತೆಯನ್ನು ಕನ್ನಡದಲ್ಲಿ ಅರ್ಥ ಮಾಡಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ನೆನಪು ಯಾಕೆ ಆಗುತ್ತದೆ ಅಂದರೆ ನಿಮಗಿರುವ ಭಾಷೆಗಳ ಪರಿಚಯ ಮತ್ತು ಭಾಷೆಗಳ ಕವಿಗಳ ಬರಹಗಾರ ಒಡನಾಟ ಹೆಚ್ಚು ಇರುವುದು ನಿಮಗೆ ಮಾತ್ರ ಅಂದು ಕೊಂಡಿದ್ದಿನಿ. ಕನ್ನಡ ನಾಡಿನ ಇತಿಹಾಸದಲ್ಲಿ ಮತ್ತು ವರ್ತಮಾನದಲ್ಲಿ ಗಡಿನಾಡು ಮತ್ತು ಒಳನಾಡುಗಳಲ್ಲಿ ಕನ್ನಡದೊಂದಿಗೆ ಹಲವು ಭಾಷೆಗಳನ್ನು ಆಡುವ ಜನರಿದ್ದರು, ಈಗಲೂ ಇದ್ದಾರೆ. ಇವನ್ನು ವಿಶೇಷವಾಗಿ ಗಮನಿಸುತ್ತ ಅದರ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಬಹುಭಾಷಿಕತೆಯಿಂದ ಪಡೆದುಕೊಂಡ ಗುಣಲಕ್ಷಣಗಳು ಏನು? ಅಂತಹದ್ದು ಏನಾದರೂ ಇದೆಯೇ?

ಎಚ್.ಎಸ್.ಶಿವಪ್ರಕಾಶ್: ಮೊದಲನೆಯದಾಗಿ, ನಾನು ಇತರ ಭಾಷೆಗಳ ಬಗ್ಗೆ ಹೆಚ್ಚು ಕಲಿಕೆ ತಿಳಿವಳಿಕೆಯಲ್ಲಿ ಆಸಕ್ತಿ ಇಟ್ಟುಕೊಂಡಿರುವುದು ನಿಜ. ಆದರೆ ಬಗ್ಗೆ ನನಗಿಂತಲೂ ಅಧಿಕೃತವಾಗಿ ಮನುದೇವ ದೇವನ್ ಅವರು ಮಾತಾಡಬಹುದು. ಕುರಿತಾಗಿ ಅವರು ಬಹಳ ಮುಂದೆ ಸಾಗಿದ್ದಾರೆ ಅಧ್ಯಯನ ಮತ್ತು ಸಂಶೋಧನೆಗಳ ಹಿನ್ನೆಲೆಯಲ್ಲಿ. ಎರಡನೆಯದಾಗಿ, ಬಹುಭಾಷಿಕತೆಯಿಂದ ಪಡೆದುಕೊಂಡ ಗುಣಲಕ್ಷಣಗಳು ಬಗ್ಗೆ ನನಗೆ ನಿಜವಾಗಿಯೂ ಗೊತ್ತಿಲ್ಲ. ಆದರೆ ಕೆಲವು ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ನಡೆದ ಘಟನೆಗಳು ಬೇರೆ ಭಾಷೆಗಳಲ್ಲಿ ನಡೆದಂತೆ ಕಾಣುವುದಿಲ್ಲ. ಉದಾಹರಣೆಗೆ ವಚನ ಚಳುವಳಿಯ ಕಾಲದಲ್ಲಿ ಅಷ್ಟೊಂದು ಜಾತಿ ವರ್ಗದ ಜನರು, ಮಹಿಳೆಯರಿಂದ ಅಷ್ಟು ಕಡಿಮೆ ಕಾಲದಲ್ಲಿ ವಿಪುಲವಾದ ಬಹುಮುಖಿ ಅಭಿವ್ಯಕ್ತಿ ಹೊರ ಹೊಮ್ಮಿದ್ದು ಸಾಮಾನ್ಯ ಸಂಗತಿಯಲ್ಲ.

ಇಂಗ್ಲಿಶ್ನಲ್ಲಿ ಎಲಿಜಬೇತನ್ ಯುಗವನ್ನು ನಾವು `ಸುವರ್ಣ ಯುಗಅಂತ ಕರಿತೀವಿ. ಆದರೆ ಅಲ್ಲಿ ಶೇಕ್ಸ್ಪಿಯರ್ ಬಿಟ್ಟರೆ ಮತ್ಯಾರೂ ಇಲ್ಲ. ಅಲ್ಲಿನವರು ಇಂಗ್ಲೆಂಡಿನ ಸಂದರ್ಭದಲ್ಲಿ ಮಾರ್ಲೋ ಇನ್ನಿತರರು ಮುಖ್ಯ ಅಂತ ಭಾವಿಸ್ತಾರೆ ಆದರೆ ನಮಗೆ ಹಾಗೆ ಅನಿಸುವುದೇ ಇಲ್ಲ. ಎಲಿಜಬೇತನ್ ಯುಗದಲ್ಲಿ ಶೇಕ್ಸ್ಪಿಯರ್ನಂತಹ ಇನ್ನೊಬ್ಬ ಬರಹಗಾರ ನಮಗೆ ಕಾಣೋಲ್ಲ. ಗ್ರೀಕಿನ ರಂಗಭೂಮಿ ಸುವರ್ಣಯುಗದಲ್ಲಿ ಕೂಡ ಸೋಫೆÇೀಕ್ಲಿಸ್, ಯೂರಿಪಿಡೀಸ್, ಅರಿಸ್ಟೋಫನೆಸ್ ಇನ್ನೊಂದಿಬ್ಬರು ಬಿಟ್ಟರೆ ಸಾಮೂಹಿಕವಾದ ಉನ್ಮೇಶ ಅಲ್ಲೂ ಕಾಣುವುದಿಲ್ಲ. ತಮಿಳಿನ ಸಂಗಂ ಯುಗದಲ್ಲಿ ನೋಡಿದರೆ ಕವಿಗಳು ಇದಾರೆ ಆದರೆ ಸಂಖ್ಯೆ ಅಷ್ಟು ದೊಡ್ಡದಲ್ಲ. ತಮಿಳನ ಭಕ್ತಿ ಯುಗದಲ್ಲಿ ನೋಡಿದ್ರೆ ಶೈವವೈಷ್ಣವ ಭಕ್ತಿಕವಿಗಳ ಸಂಖ್ಯೆ ವಚನಕಾರರಷ್ಟು ಇಲ್ಲ. ಆಮೇಲೆ ಜನಪದ ವೀರಗಾಥೆಗಳು ಬೇಕಾದಷ್ಟು ಎಲ್ಲ ಭಾಷೆಗಳಲ್ಲೂ ಕಂಡು ಬರುತ್ತವೆ. ಆದರೆ ಅವು ಯಾವು ಮಂಟೇಸ್ವಾಮಿ/ ಮಲೆ ಮಾದೇಶ್ವರ ಕಾವ್ಯಗಳಂತೆ ಅನುಭಾವಿಕ ಜನಪದ ಕಾವ್ಯ ಕಥನಗಳು ಕಂಡು ಬಂದಿಲ್ಲ. ನಮ್ಮ ಎಲ್ಲ ಸಂಸ್ಕೃತಿಗಳು ಕೂಡ ಹೊರಗಿನ ಸಂಸ್ಕೃತಿಗಳಿಂದ ಪ್ರಭಾವಿತವಾಗಿವೆ.

ಜಯರಾಮ್: ಕನ್ನಡ ವಿಶಿಷ್ಟ ಸಾಹಿತ್ಯ ಪರಂಪರೆಯ ಬಗ್ಗೆ ಮಾತಾಡುವಾಗ ವಚನಗಳ ಬಗ್ಗೆ ಮಾತಾಡಿದ್ರಿ. ಆದರೆ ಅದಕ್ಕೂ ಪ್ರಾಚೀನವಾದ ಜೈನ ಧರ್ಮದ ಸಾಹಿತ್ಯ ಪರಂಪರೆ ಬಗ್ಗೆ ನೀವು ಮಾತಾಡಲಿಲ್ಲ ಏಕೆ? ಕನ್ನಡ ಜೈನ ಸಾಹಿತ್ಯದ ವಿಸ್ತಾರ ದೊಡ್ಡದಾಗಿದೆ ಅಲ್ಲವೇ?

ಎಚ್.ಎಸ್.ಶಿವಪ್ರಕಾಶ್: ಹಾಗೇನಿಲ್ಲ. ಒಂದನ್ನು ಮಾತ್ರ ನಾನು ಉಲ್ಲೇಖಿಸಿದೆ. ಅಲ್ಲದೆ ಜೈನ ಸಾಹಿತ್ಯದ ಬೇರೆ ಬೇರೆ ಕವಲುಗಳು ಬೇರೆ ಬೇರೆ ಭಾಷೆಗಳಲ್ಲಿ ಅಗಾಧವಾಗಿ ಹರಡಿಕೊಂಡಿವೆ. ಆದರೆ ಕನ್ನಡದಲ್ಲಿ ಬಹು ವಿಶೇಷವಾಗಿ ಕಂಡು ಬರುವುದು ಕಾಯಕವನ್ನು ಬಹುಮುಖ್ಯವಾಗಿರಿಸಿಕೊಂಡು ಬೆಳೆದ ವಚನ ಸಾಹಿತ್ಯ ಪರಂಪರೆ. ಅದು ಎಲ್ಲ ಜಾತಿಗಳ ಜನ ಮತ್ತು ಮಹಿಳೆಯರನ್ನು ಮುನ್ನೆಲೆಗೆ ತಂದು ನಿಲ್ಲಿಸಿದ್ದು ಹಾಗಾಗಿ ವಿಶಿಷ್ಟ ಪರಂಪರೆಯನ್ನು ಉಲ್ಲೇಖಿಸಿದೆ. ಶ್ರೇಷ್ಠತೆ ಎನ್ನುವ ಪೇಟೆ ಧಾರಣೆಯ ಮಾತಿಗೆ ನಾನು ಹೋಗುವುದಿಲ್ಲ.

ಕಮಲಾಕರ ಭಟ್: ವಚನಗಳ ಕಾಲದಲ್ಲಿ ಯಾವುದಾದರು ಅನ್ಯ ಭಾಷೆಯ ಪ್ರಭಾವ ಕಂಡು ಬರುತ್ತದೆಯೇ?

ಎಚ್.ಎಸ್.ಶಿವಪ್ರಕಾಶ್: ಸ್ವಲ್ಪ ಮಟ್ಟಿಗೆ ತಮಿಳು ಸಾಹಿತ್ಯದ ಕೆಲವು ಉಲ್ಲೇಖ ಕಂಡುಬರುತ್ತದೆ. ಆದರೆ ಅದನ್ನು ಪ್ರಭಾವ ಅಂತ ಹೇಳೋಕೆ ಆಗಲ್ಲ. ವಚನಗಳಲ್ಲಿ ಶೈವ ಪುರಾತನರ ಮತ್ತು ಭಕ್ತ ಸಿರಿಯಾಳನ ಉಲ್ಲೇಖವಿದೆ. ತಮಿಳುನಾಡಿನಲ್ಲಿ ಎರಡು ಪರಂಪರೆಗಳಿವೆ. ಒಂದು ಭಕ್ತಿ ಮತ್ತೊಂದು ಸಿದ್ದ ಪರಂಪರೆ. ತಮಿಳುನಾಡಿನ ಭಕ್ತಿ ದೇಗುಲ ಕೇಂದ್ರಿತವಾದದ್ದು, ಆದರೆ ವಚನಾನುಭವದ್ದು ದೇಗುಲ ಕೇಂದ್ರಿತವಾದದ್ದಲ್ಲ. (ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ) ಮುಂದೆ ತಮಿಳು ಸಿದ್ದ ಪರಂಪರೆಯು ಕೂಡ ದೇಗುಲವನ್ನು ನಿರಾಕರಿಸುತ್ತದೆ. ಕರ್ನಾಟಕದ ಹರಿದಾಸ ಪರಂಪರೆ ಕೂಡ ದೇಗುಲ ಕೇಂದ್ರಿತವಾದುದು. ಆದರೆ ವಚನ ಪರಂಪರೆ ಹಾಗಿಲ್ಲ. ಆದರೆ ಕನ್ನಡದ ತತ್ವ ಪದಕಾರರು ಎರಡೂ ನೆಲೆಗಳಲ್ಲಿ ಮುಂದುವರಿಯುತ್ತಾರೆ. ಆದರೆ ಹಳಗನ್ನಡದ ಜೈನ ಸಾಹಿತ್ಯವನ್ನು ನೋಡಿದರೆ ಅಲ್ಲಿ ಹೆಚ್ಚು ಸಂಸ್ಕೃತದ ಪ್ರಾಕೃತದ ಪ್ರಭಾವ ಕಂಡು ಬರುತ್ತದೆ. ಆದರೆ ಅಂತಹ ಪ್ರಭಾವ ವಚನಕಾರರಲ್ಲಿ ಕಂಡು ಬರುವುದಿಲ್ಲ. ತತ್ವ ಪದಕಾರರಿಗೆ ಸೂಫಿ ಪ್ರಭಾವ ಕಂಡು ಬರತ್ತೆ. ಅಧುನಿಕ ಕಾಲದಲ್ಲಿ ಪಾಶ್ಚಿಮಾತ್ಯ ಭಾಷೆಗಳ ಪ್ರಭಾವ ಆಗಿದೆ.

ಕಮಲಾಕರ ಭಟ್: ಬಹುಭಾಷಿಕತೆಯ ಇರುವಿಕೆ (ಪ್ರೆಸೆನ್ಸ್) ಮೌಖಿಕ ಸಾಹಿತ್ಯದಲ್ಲಿ ಹೆಚ್ಚು ಲಿಖಿತ ಸಾಹಿತ್ಯದಲ್ಲಿ ಕಡಿಮೆ ಅನ್ನಬಹುದೇ? ಇದ್ದಲ್ಲಿ ಅದಕ್ಕೆ ಕಾರಣಗಳೇನು?

ಎಚ್.ಎಸ್.ಶಿವಪ್ರಕಾಶ್: ಹಾಗೆ ಹೇಳೋಕೆ ಆಗಲ್ಲ. ಕೆಲವು ದ್ವಿಭಾಷಿಕ ಪ್ರದೇಶಗಳು ನಮ್ಮಲ್ಲಿ ಹೆಚ್ಚು ಇವೆ. ಕೊಳ್ಳೆಗಾಲದ ಗಡಿಗಳಲ್ಲಿ ಕನ್ನಡತಮಿಳು ಎರಡೂ ಭಾಷೆಗಳಿವೆ. ಮಾದೇವನ ಪದಗಳು ಎರಡು ಭಾಷೆಗಳಲ್ಲಿ ಸಿಗುತ್ತವೆ. ಕೋಲಾರದ ಗಡಿಗೆ ಬಂದರೆ ಅಲ್ಲಿ ಕನ್ನಡತೆಲುಗು ಎರಡೂ ಇವೆ. ಕೈವಾರ ನಾರಾಯಣ ತಾತಯ್ಯನವರ ತತ್ವಪದಗಳು ಎರಡೂ ಭಾಷೆಗಳಲ್ಲಿ ಇವೆ. ಅದೇ ಹೈದರಾಬಾದ್ ಕರ್ನಾಟಕದ ಕಡೆಗೆ ಹೋದರೆ ಅನೇಕ ತತ್ವಪದಕಾರರು ಕನ್ನಡ ಉರ್ದು ಭಾಷೆಗಳನ್ನು ಬಳಸುತ್ತಾರೆ ಕಡಕೋಳ ಮಡಿವಾಳಪ್ಪ ಶಿಷ್ಯ ಚಂದುರ್ ಜಲಾಲುದ್ದೀನ್ ಸಾಬ್ ಎರಡೂ ಭಾಷೆಗಳಲ್ಲಿ ತತ್ವ ಪದಗಳನ್ನು ಕಟ್ಟಿದ್ದು ಇದೆ. ಮೈಲಾರಲಿಂಗನ ಭಕ್ತರು ಕನ್ನಡ ಉರ್ದು ತೆಲುಗು ಹೀಗೆ ಬಹುಭಾಷೆಯನ್ನು ಮಾತಾಡುವವರು ಆಗಿದ್ದಾರೆ. ಕರಾವಳಿ ಕರ್ನಾಟಕ ಕೂಡ ಕನ್ನಡತುಳುಮಲೆಯಾಳಂ ಬಹುಭಾಷಿಕತೆಯನ್ನು ಹೊಂದಿದೆ. ಹಾಗೆ ನೋಡಿದರೆ ಮಲೆನಾಡು ಮತ್ತು ದಕ್ಷಿಣದ ಬಯಲು ಸೀಮೆಗಳು ಮಾತ್ರವೇ ಏಕಭಾಷೆಯನ್ನು ಬಳಸುವ ಪ್ರದೇಶಗಳಾಗಿವೆ ಉಳಿದಿವೆ. ಇಲ್ಲೆಲ್ಲಾ ಮೌಖಿಕ ಕಾವ್ಯ ಮತ್ತು ಲಿಖಿತ ಸಾಹಿತ್ಯಗಳು ಏಕ ಮತ್ತು ಬಹುಭಾಷೆಗಳಲ್ಲಿ ಸೃಷ್ಟಿಯಾಗಿವೆ.

ರಾಜೇಂದ್ರ ಪ್ರಸಾದ್: ನಿಮ್ಮ ಕುಟುಂಬದ ವಾತಾವರಣವೇ ಬಹುಭಾಷಿಕ ವಾಗಿತ್ತು. ನಿಮ್ಮ ತಂದೆ ಸಂಸ್ಕೃತ ವಿದ್ವಾಂಸರಾಗಿದ್ದರು, ತಾಯಿ ತಮಿಳು ಭಾಷಿಕ ಹಿನ್ನೆಲೆಯವರು, ನೀವು ಇಂಗ್ಲಿಶ್ ಪ್ರಾಧ್ಯಾಪಕರಾಗಿದ್ದಿರಿ.. ಇದಲ್ಲದೇ ನೀವೇ ಕಲಿತ ಭಾಷೆಗಳು ಕೂಡ ಹಲವು. ಇದೆಲ್ಲ ಹಿನ್ನೆಲೆಗಳು ನಿಮ್ಮ ಓದು, ಬರಹ ಮತ್ತು ಬದುಕಿನ ಮೇಲೆ ಪರಿಣಾಮ ಬೀರಿವೆ ಅಂತ ಅನಿಸಿದೆಯೇ?.. ಬಗ್ಗೆ ವಿವರಿಸಿರಿ..

ಎಚ್.ಎಸ್.ಶಿವಪ್ರಕಾಶ್: ನನ್ನ ಮನೆ ಒಳಗೆ ಹೊರಗೆ ಎರಡೂ ಕಡೆ ಬಹುಭಾಷಿಕತೆ ಇತ್ತು. ನಾನು ಬೆಳೆದಿದ್ದು ರಂಗಸ್ವಾಮಿ ಗುಡಿ ಬೀದಿಯಲ್ಲಿ ಬಳೆಪೇಟೆ ಹತ್ರ. ನಮ್ಮ ಮನೆ ಬೀದಿಯಲ್ಲಿ ಒಂದು ಕಡೆಗೆ ಮರಾಠಿಗರು ಇದ್ರು, ಇನ್ನೊಂದು ದೇವಾಂಗದವರು ಇದ್ರು ತೆಲುಗು ಮಾತಾಡ್ತಾ ಇದ್ರು. ಮನೆಯ ಪಕ್ಕನೆ ಮಾರವಾಡಿಗಳು ಇದ್ರು ಅವರ ಭಾಷೆಯನ್ನು ನಾವು `ಹಿಂದಿಅಂತ ಅಂದುಕೊಂಡಿದ್ದೆವು. ಬಾಲ್ಯದಲ್ಲಿ ಗೋಲಿ, ಲಗೋರಿ, ಕಬ್ಬಡ್ಡಿ ಆಡುವಾಗ ಅಲ್ಲಿದ್ದ ಹುಡುಗರ ಮಾತಿನಲ್ಲಿ ಎಲ್ಲ ಭಾಷೆಗಳು ಇಷ್ಟಿಷ್ಟು ಬರಲು ಕಾರಣವಾಯಿತು. ಇನ್ನು ಇಂಗ್ಲಿಶ್ ಕಲಿಯಲು ನನಗೆ ಕಾರಣವಾಗಿದ್ದು ನಮ್ಮ ಅಪ್ಪ ಅಮ್ಮ ಇಬ್ಬರಿಗೂ ಬರುತ್ತಿರಲಿಲ್ಲ. ಆಮೇಲೆ ಶಾಲೆಯಲ್ಲಿ ಅನ್ಯ ಸಮುದಾಯದ ಉಪಾಧ್ಯಾಯರೊಬ್ಬರು ಶೂದ್ರರು ಇಂಗ್ಲಿಶ್ ಎಲ್ಲ ಎಲ್ಲಿ ಬರುತ್ತದೆ ಎಂದು ಹಂಗಿಸಿದ್ದರು. ಹಾಗಾಗಿ ನಾನು ಇಂಗ್ಲಿಶ್ ಕಲಿಯಲು ಬಹಳಷ್ಟು ಶ್ರಮಪಟ್ಟೆ. ಆದರೆ ಪೂರ್ಣವಾಗಿ ಇಂಗ್ಲಿಷ್ ಅನ್ನು ನಾನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇವತ್ತು ಕಾನ್ವೆಂಟ್ ಮಕ್ಕಳು ಇಂಗ್ಲಿಶ್ ಅನ್ನು ಸುಲಭವಾಗಿ ಒಲಿಸಿಕೊಂಡು ಬಿಡುತ್ತಾರೆ.

ರಷ್ಯನ್ ಓದಿದೆ, ಸ್ಪ್ಯಾನಿಷ್ ತಿಳಿದುಕೊಂಡು ಅದನ್ನು ಓದಿದೆ. ಟಾಗೋರರ ಗೀತಾಂಜಲಿ ಓದುವ ಸಲುವಾಗಿ ಸ್ವಲ್ಪ ಬಂಗಾಳಿ ಕಲಿತೆ. ಅದಾಗ್ಯೂ ನನಗೆ ಸೆಮಿಟಿಕ್ ಭಾಷೆ (ಹೀಬ್ರೂ ಅಥವಾ ಅರೇಬಿಕ್) ಸೈನೋ ಬರ್ಮಿಸ್ ಭಾಷೆ ಒಂದನ್ನು ಕಲಿಯಬೇಕು ಅಂತ, ಹಾಗೆಯೆ ಅಮೆರಿಕನ್ ಇಂಡಿಯನ್ ಅಥವ ಆಫ್ರಿಕಾ ಬುಡಕಟ್ಟಿನ ಭಾಷೆಯನ್ನು ಕಲಿಯಬೇಕು ಅಂತ ಆಸೆಯಿತ್ತು ಆದರೆ ನನ್ನ ಬದುಕು ಬಹಳ ಅಸ್ತವ್ಯಸ್ತವಾಗಿದ್ದರಿಂದ ಅದ್ಯಾವುದೂ ಸಾಧ್ಯವಾಗಲಿಲ್ಲ. ಮುಂದೆ ನಿಮ್ಮಂಥವರು ಅದನ್ನೆಲ್ಲ ಮಾಡಬೇಕು.

ರಾಜೇಂದ್ರ ಪ್ರಸಾದ್: ನೀವು ಬರೆಯಲು ಆರಂಭಿಸಿದ ಕಾಲದಲ್ಲಿ ಕನ್ನಡ ಕವಿಗಳು ಅನುವಾದಕ್ಕೆ ಮುಖ್ಯವಾಗಿ ಇಂಗ್ಲಿಶ್ ಭಾಷೆಯ ಕವಿಗಳನ್ನು ಅರಿಸಿಕೊಳ್ಳುತ್ತಿದ್ದರು, ಆದರೆ ನೀವು ಇಂಗ್ಲಿಶ್ನಿಂದ ಆರಂಭಿಸಿ ಲ್ಯಾಟಿನ್ ಅಮೇರಿಕಾದ ಬೇರೆ ಬೇರೆ ದೇಶ ಭಾಷೆಗಳ ಕವಿಗಳನ್ನು ಆರಿಸಿಕೊಂಡಿರಿ.. ಕಾರಣವೇನು?

ಎಚ್.ಎಸ್.ಶಿವಪ್ರಕಾಶ್: ಪ್ರತಿಯೊಂದು ಭಾಷೆಗೂ ಒಂದು ವಿಶಿಷ್ಟ ಶಕ್ತಿ ಇರುತ್ತದೆ ಜೊತೆಗೆ ಮಿತಿಗಳೂ ಕೂಡ. ಮೊದಲು ನಾನು ನನ್ನ ಮಾತೃ ಭಾಷೆಯಲ್ಲಿ ಮಾತ್ರ ಬರೆಯಬೇಕು ಅಂದುಕೊಂಡಿದ್ದೆ. ಆದರೆ ಈಗ ಅನಿಸತ್ತೆ ನನ್ನ ಮಾತೃ ಭಾಷೆ ಕನ್ನಡವೂ ಅಲ್ಲ ಇಂಗ್ಲಿಶ್ ಕೂಡ ಅಲ್ಲ. ನನ್ನ ಮಾತೃ ಭಾಷೆ ಕಾವ್ಯ. ಅದು ಯಾಕೆ ಜಾಸ್ತಿ ಕನ್ನಡದಲ್ಲಿ ಅಭಿವ್ಯಕ್ತಿಗೊಂಡಿದೆ ಅಂದ್ರೆ ಕರ್ನಾಟಕದಲ್ಲಿ ಇದ್ದುದರಿಂದ ಮೊದಲು ಕನ್ನಡದಲ್ಲಿ ಬರೆದೆ; ಆಮೇಲೆ ಇಂಗ್ಲಿಶ್ನಲ್ಲಿ ಬರೆದೆ. ಇಂಗ್ಲಿಶ್ನಿಂದ ಬಂದ ನವ್ಯ ಕವಿಗಳನ್ನು ನಾನು ಓದಿದಾಗ ಮತ್ತು ಹಾಗೆ ಯೂರೋಪಿನ ಕವಿಗಳನ್ನು ಓದಿದಾಗ ನಮ್ಮಲ್ಲಿ ಇಂಗ್ಲಿಶ್ ಅಂದರೆ ಟಿ.ಎಸ್.ಎಲಿಯಟ್, ಡಬ್ಲ್ಯೂ.ಬಿ.ಯೇಟ್ಸ್ ಅಂತ ಮಾತಾಡುತ್ತಿದ್ದರು. ರಷ್ಯದ ಆನ ಅಹ್ಮತೋವಾ ಟರ್ಕಿ, ಸ್ವೀಡನ್, ಹಂಗೇರಿಯನ್ ಕವಿಗಳನ್ನ ಓದಿದಾಗ ಇಂತಹದ್ದು ಇಂಗ್ಲಿಶ್ನಲ್ಲಿ ಇಲ್ಲವಲ್ಲ ಅನಿಸಿತು. ನವ್ಯ ಕಾವ್ಯದ ವಿವಿಧ ನುಡಿಗಟ್ಟುಗಳು ಏನಿತ್ತು ಅದನ್ನು ಕನ್ನಡಕ್ಕೆ ತರಬೇಕು ಅನ್ನಿಸಿತ್ತು. ಇಲ್ಲಿ ನಮ್ಮ ಭಾಷೆಗಳ ನಡುವೆಯೇ ಅನುವಾದ ಸಾಕಷ್ಟು ಆಗಿಲ್ಲ. ಉದಾಹರಣೆಗೆ ವಚನಗಳ ಅನುವಾದ ನಮ್ಮ ಅಕ್ಕಪಕ್ಕದ ತಮಿಳುತೆಲುಗು ಭಾಷೆಗಳಿಗೆ ಆಗಿಲ್ಲ.

ರಾಜೇಂದ್ರ ಪ್ರಸಾದ್: ಕನ್ನಡದ ಕೆಲವು ಬಹುಮುಖ್ಯವಾದ ಸಾಹಿತಿಗಳ ಮನೆ ಭಾಷೆಯನ್ನು ನೋಡಿದರೆ ಉದಾಹರಣೆಗೆ ಬೇಂದ್ರೆ ಮನೆ ಭಾಷೆ ಮರಾಟಿ, ಮಾಸ್ತಿ ಅವರದ್ದು ತಮಿಳು, ಕಾರ್ನಾಡ್ ಅವರದ್ದು ಕೊಂಕಣಿ ಹೀಗೆ ದ್ವಿಭಾಶಿಕ ಅಥವಾ ಬಹುಭಾಷಿಕರಾಗಿರುವ ಕಾರಣ ಸಾಹಿತ್ಯ ನಡೆನುಡಿಗಳಲಿ ಮತ್ತು ಆಲೋಚನೆಗಳಲ್ಲಿ ಬದಲಾವಣೆ ಏನಾದರೂ ಸಾಧ್ಯವಿದೆಯೇ?

ಎಚ್.ಎಸ್.ಶಿವಪ್ರಕಾಶ್: ನಮ್ಮ ಭಾಷೆಯ ದೊಡ್ಡ ಕವಿ ಕುವೆಂಪು ಅವರು ಬಹುಭಾಶಿಕರಲ್ಲ, ಕೆ.ಎಸ್.ನರಸಿಂಹಸ್ವಾಮಿ ಅವರು ದ್ವಿಭಾಷಿಕರಲ್ಲ. ಬಹುತೇಕರು ಏಕಭಾಶಿಕರು. ಆದರೆ ಇವರೆಲ್ಲರೂ ಇಂಗ್ಲಿಶ್ ಮತ್ತು ಸಂಸ್ಕೃತ ಇತ್ಯಾದಿ ಭಾಷೆಗಳನ್ನು ಓದಿಕೊಂಡು ಅನುಸಂಧಾನ ಮಾಡಿಕೊಂಡಿದ್ದರು. ಕುವೆಂಪು ಅವರ ರಾಮಾಯಣ ದರ್ಶನಂನ ಭಾಷೆಯನ್ನು ನೋಡಿದರೆ, ಅವರು ಯೂರೋಪಿನ ಮತ್ತು ಸಂಸ್ಕೃತದ ಮಹಾಕಾವ್ಯಗಳನ್ನು ಓದಿ ಅನುಸಂಧಾನ ಮಾಡಿಕೊಳ್ಳದೆ ಅಷ್ಟು ಪರಿಪಕ್ವವಾದ ಭಾಷೆ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಬರಹಗಾರರು ಬಹುಭಾಷಿಕ ಹಿನ್ನೆಲೆಯಿಂದ ಬಂದಿದ್ದಾರೆಯೇ ಅನ್ನುವುದಕ್ಕಿಂತ ಬಹುಭಾಷಿಕ ಪರಂಪರೆಗಳನ್ನು ಹೀರಿಕೊಂಡಾಗಲೇ ಕಾವ್ಯಕ್ಕೆ ಹೆಚ್ಚು ಆಯಾಮಗಳು ಸಿಗುತ್ತವೆ ಅಂತ ನನಗೆ ಅನಿಸತ್ತೆ.

Leave a Reply

Your email address will not be published.