ಕೈಕೋಳ

ಕೈಕೋಳಗಳ ಮೆರವಣಿಗೆ ನ್ಯಾಯಾಲಯಕ್ಕೆ ಸಾರ್ವಜನಿಕ ದಾರಿಯಲ್ಲಿ ಮುಂದುವರಿದಿತ್ತು. ಹದಿನೆಂಟು ಕೋಳಗಳು, ಮೂವತ್ತಾರು ಕೋಳ ತೊಟ್ಟವರು. ಹೆಚ್ಚಿನವರ ತಲೆಯ ಮೇಲೆ ಹೊರೆಗಳಿವೆ.

ಮೂಲ ಮಲಯಾಳಂ: ವೈಕಂ ಮುಹಮ್ಮದ್ ಬಷೀರ್

ಕನ್ನಡ ಅನುವಾದ: ಮೋಹನ ಕುಂಟಾರ್

`ಕೈಕೋಳ ನೋಡಿದ್ರಾಎಂದು ನನ್ನ ಜೊತೆಯ ಖೈದಿಯು, ಕೈಗಳನ್ನು ಬಂಧಿಸಿರುವ ಕೋಳವನ್ನು ತೋರಿಸಿಕೊಂಡು ಹೃದಯದ ನೋವಿನಿಂದ ದಯನೀಯವಾಗಿರುವ ತನ್ನ ಕತೆ ಹೇಳಿ ಮುಗಿಸಿದಾಗ, ನನ್ನ ಮನಸ್ಸಿನಲ್ಲಿ ಎಂತಹ ಭಾವನೆಗಳುದಿಸಿದುವು? ವ್ಯಕ್ತಿಯಾಗಿ ನನಗೆ ಗೊತ್ತಿಲ್ಲ. ನನ್ನ ಬಲಕೈಯೊಡನೆ ಆತನನ್ನು ಬಂಧಿಸಲಾಗಿದೆ. ನಾನು ಬರೆದ, ಬರೆಯುವ, ಬರೆಯುವುದಕ್ಕಿರುವ ಈ ಬಲಕೈಗೆ ಕೋಳ ತೊಡಿಸಲಾಗಿದೆ. ಎರಡನೆಯ ಬಳೆಯಲ್ಲಿ ಜೊತೆಗಾರನ ಎಡಗೈ. ಆತನ ತಲೆಯ ಮೇಲೆ ತೆಂಗಿನಕಾಯಿ ತುಂಬಿದ ಗೋಣಿ. ಆ ಭಾರವನ್ನು ಆತುಕೊಂಡಿರುವ ಬಲಗೈ.

ಆತ ಪೂರ್ಣ ನಗ್ನನಾಗಿರಲಿಲ್ಲ. ಹರಿದು ಮಾಸಿದ ದುರ್ಗಂಧ ಬೀರುವ ಒಂದು ಖಾದಿ ಬೈರಾಸವನ್ನು ಸೊಂಟಕ್ಕೆ ಸುತ್ತಲಾಗಿದೆ. ನನ್ನದು ಖಾದಿ ಪಂಚೆ, ಖಾದಿ ಜುಬ್ಬ ಒಂದು ಕಾಲದಲ್ಲಿ ಬಿಳಿಯದಾಗಿತ್ತು. ಮತ್ತೆ ಹರಿದು ಚಿಂದಿಯಾಗಿ ಕೊಳೆಯಲ್ಲಿ ಮುಳುಗಿ ಹೀಗಿರುವುದರಿಂದ ಬೇರೆಯವರು ನನ್ನ ಗುರುತು ಹಿಡಿಯಬಹುದೆಂದು ಭಾವಿಸುವುದು ಕೂಡಾ ಸಾಧ್ಯವಿರಲಿಲ್ಲನನ್ನನ್ನು ನೋವಿನಿಂದ ದೂರ ಮಾಡಿತ್ತು. ಅಪರಿಚಿತವಾದ ನಗರದ ಪೊಲೀಸ್ ಲಾಕಪ್. ಹೆಚ್ಚಿನವರಿಗೆ ನನ್ನ ಗುರುತು ಸಿಕ್ಕಿರಲಿಲ್ಲ. ಹೀಗಿರುವ ಆ ದಿನ ಬಂದೇ ಬಿಟ್ಟಿತು. ಬಿಡುಗಡೆಯ ದಿನವಲ್ಲ. ತೀರ್ಪು ನೀಡುವ ದಿನ. ಒಂಬತ್ತೋ ಹತ್ತೋ ತಿಂಗಳು ಅಲ್ಲಿ ಸೆರೆಮನೆಯಲ್ಲಿ ಕಳೆದೆವು. ಅದು ಲೆಕ್ಕದಲ್ಲಿರುವುದಲ್ಲ.

ಬರುತ್ತಿದೆ ಸರಿಯಾದ ಬಂಧನ! –ಅದರ ನೆರಳು, ನೆರಳು ಬೆಂಕಿಯಾದರೆ ಬೆಂಕಿ ಇನ್ನೇನಾಗಿರಬಹುದು? ಸ್ವಾರಸ್ಯಕರವಾದ ಈ ಯೋಚನೆಯಲ್ಲಿ ಮುಳುಗಿರುವ ನೂರೈವತ್ತರಷ್ಟು ಖೈದಿಗಳು. ಬೆಂಕಿಯ ಒಳಗೆ ಕರಿಯುತ್ತಿದ್ದರೂ ಒಂದು ಗುಣವಿದೆ. ಹೊಟ್ಟೆಗೆ ಸ್ವಲ್ಪ ಆಹಾರ. ಹೊರಗಿದ್ದರೋ? ಬರ, ಯುದ್ಧ. ಆದರೂ ಪೊಲೀಸ್ ಲಾಕಪ್ಪಿಗಿಂತಲೂ ಹೊರಗಿರುವ ಜಗತ್ತಿನಲ್ಲಿ ಉಪವಾಸ ಮಲಗಿ ಸಾಯುವುದರಲ್ಲಿ ಸ್ವಾರಸ್ಯವಿದೆ. `ಯಾರೋ ನಾಯಿ ಅದು?’ `ನಿನ್ನ ಅಮ್ಮನ?’ `ಬಾಯಿ ಮುಚ್ಚು?’ `ಲೇ ನಾನು ಹೇಳಲಿಲ್ಲವೇ,’ `ಇದು ಅಳುವುದಕ್ಕಿರುವ ಸ್ಥಳವಲ್ಲ?’ `ದೇವರು ನಿನ್ನ ತಂದೆಯೇನುಹೀಗೆಹೀಗೆಪೊಲೀಸರು ಖೈದಿಗಳಲ್ಲಿ. ಎಷ್ಟೆಷ್ಟು ಖೈದಿಗಳು! ಎಲ್ಲರೂ ಅಪರಾಧಿಗಳು. ಅಪರಾಧಿಗಳೊಡನೆ ಅವರ ವರ್ತನೆ. ಇದರಲ್ಲಿ ಕ್ರೌರ್ಯವೇನಾದರೂ ಇದೆಯೇ?

ಜಗತ್ತಿನಲ್ಲಿ ಲಕ್ಷೋಪಲಕ್ಷ ಪೊಲೀಸ್ ಲಾಕಪ್ಪುಗಳು. ರಹಸ್ಯವಾಗಿಯೂ ಬಹಿರಂಗವಾಗಿಯೂ ಇರುವ ಪೊಲೀಸರು. ಊಟಕ್ಕೂ ಇನ್ನಿತರ ಯಾವುದಕ್ಕೂ ಸಾಕಾಗದ ಸಂಬಳ. ಒಟ್ಟಿನಲ್ಲಿ ದರಿದ್ರ ಬದುಕು. ಪೊಲೀಸ್ ನನ್ನನ್ನು ಹೊಡೆದು ನಜ್ಜುಗುಜ್ಜಾಗಿಸಿದಾಗಲೂ ಬೈಗುಳಗಳಲ್ಲಿ ನನ್ನನ್ನು ಮುಚ್ಚಿದಾಗಲೂ ನಾನು ಯೋಚಿಸಿದ್ದಿದೆ: ಸಾಧ್ಯವಾದರೆ ಪೊಲೀಸರ ವೇತನ ಹೆಚ್ಚಿಸಬೇಕು! ಆದರೆ ನಾನೇನು ಮಾಡುವುದು? ಬೇರೆ ಖೈದಿಗಳು ಏನನ್ನು ಯೋಚಿಸುತ್ತಿದ್ದಾರೆಂಬುದೂ ನನಗೆ ಗೊತ್ತಿಲ್ಲ. ಯಾವುದೇ ಸರಕಾರವನ್ನು ನೋಡುವುದಕ್ಕಿರುವ ಕನ್ನಡಿಗಳೇ ಪೊಲೀಸರು. ಹೀಗೆ ಇತರರೂ ಯೋಚಿಸಿರುವ ಸಾಧ್ಯತೆಯಿದೆ. ಅಲ್ಲವಾದರೆ ಯೋಚಿಸದೆಯೂ ಇರಬಹುದು.

ಬೇರೆಯವರ ಕುರಿತು ನನಗೇನು ತಿಳಿದಿದೆ? ನಾನು ಯಾರಲ್ಲಿಯೂ ಮಾತನಾಡಿರಲಿಲ್ಲ. ನೂರೈವತ್ತರಷ್ಟು ಜನ ಪುರುಷರು ನಾಲ್ಕು ಲಾಕಪ್ಪು ಕೋಣೆಗಳಲ್ಲಿ ಹಗಲು ರಾತ್ರಿ ಮೌನ ಪಾಲಿಸುತ್ತಿದ್ದಾರೆ. ಮಾತಿಲ್ಲ, ನಗುವಿಲ್ಲ, ಮಂದಹಾಸವಿಲ್ಲ, ಏನೂ ಇಲ್ಲಮೌನ. ಈ ಸ್ಥಿತಿಯಲ್ಲಿದ್ದುದರಿಂದ ನನ್ನ ಬಲಗೈಗೆ ಬಂಧಿಸಿರುವ ಜೊತೆಗಾರನ ಪರಿಚಯ ನನಗಿರಲಿಲ್ಲ! ಆತನಿಗೆ ನನ್ನ ಪರಿಚಯವಿತ್ತು! ಅದು ನನಗೆ ಗೊತ್ತಿರಲಿಲ್ಲ. ಅಂದಿನ ಹಾಗೆ ಕೋಳ ತೊಡಿಸಿ ನ್ಯಾಯಾಲಯಕ್ಕೆ ಸಾರ್ವಜನಿಕ ರಸ್ತೆಯಲ್ಲಿ ಕರೆದೊಯ್ಯುತ್ತಿದ್ದ ದಿನಗಳಲ್ಲೆಲ್ಲ ಬೇರೊಬ್ಬ ಆರೋಪಿಯನ್ನು ನನ್ನ ಕೈಯ ಜೊತೆಗೆ ಬಂಧಿಸಲಾಗಿತ್ತು. ಅಪರಾಧದ ಪರ್ಯಾಯ, ಕೊಲೆ ಪಾತಕಿ, ಲಪಟಾಯಿಸುವವ, ಬೆಂಕಿ ಪೊಟ್ಟಣದ ದರೋಡೆಕೋರ, ಕಳ್ಳ, ಕಿಸೆಗಳ್ಳ, ಕಾಳಸಂತೆ, ನೋಟು ದ್ವಿಗುಣ ದಂಧೆ, ಖೋಟಾನೋಟು ಮುದ್ರಣ, ರಾಜಕೀಯ ಅಪರಾಧಿ. ಯಾರು ಯಾರಾದರೇನು? ನಾನು ಮಾತನಾಡುವುದೆಂದಿಲ್ಲ. ತೀರ್ಪಿನ ಕುರಿತು ಯೋಚಿಸಲೇ ಇಲ್ಲ. ಒಂದು ವೇಳೆ ಸರಿಯಾಗಿ ಹೊಂದುವ ಅಳತೆಯಲ್ಲಿಲ್ಲದ ಕೈಕೋಳ ನನ್ನ ಬಲದ ಕೈಯನ್ನು ಬಲವಾಗಿ ಹಿಡಿದು ಮತ್ತಷ್ಟು ಬಿಗಿಗೊಳಿಸಿ ನೋಯುತ್ತಿದ್ದುದರಿಂದ ಆಗಿರಬಹುದು. ಗುಂಪಾಗಿದ್ದ ಅಪರಾಧಿಗಳಿಗೂ ನೋವಿಲ್ಲ? ನಾನು ವಿಚಾರಿಸಲಿಲ್ಲ. ಏನೇ ಆದರೂ ಅಂದು ನಮ್ಮ ತೀರ್ಪು ಹೊರಬಿತ್ತು.

ನಾನು ಮೊದಲೇ ಯೋಚಿಸಿದ್ದೆ, ಹೆಚ್ಚೆಂದರೆ ಆರು ತಿಂಗಳು. ಇನ್ನೊಬ್ಬ ಆರೋಪಿ ಏನೆಂದು ಯೋಚಿಸಿದ್ದನೋ ನನಗೆ ತಿಳಿದಿಲ್ಲ. ತೀರ್ಪು ಕೇಳಿದಾಗ ನನ್ನ ಪ್ರಜ್ಞೆ ತಪ್ಪಲಿಲ್ಲ. ಒಂದೆರೆಡು ನಿಮಿಷಗಳ ಕಾಲ ಕಣ್ಣು ಕಾಣಿಸುವುದೋ ಕಿವಿ ಕೇಳಿಸುವುದೋ ಸಾಧ್ಯವಿಲ್ಲದಂತಾಯಿತು. ಇನ್ನೊಬ್ಬನಿಗೆ ಏನನ್ನಿಸಿತೋ ನನಗೆ ತಿಳಿಯದು. ಹೆಂಡತಿಯಿದ್ದುದರಿಂದ ಅವಳ ಕುರಿತು ಒಂದು ವೇಳೆ ನೆನಪಾಗಿರಬಹುದು. ಏನೇ ಆದರೂ ಆ ಆರೋಪಿಯ ಬಗೆಗೆ ಸ್ವಾರಸ್ಯಕರವಾದ ಕೆಲವೊಂದು ವಿವರಗಳನ್ನು ತಿಳಿದುಕೊಳ್ಳುವುದು ಅಂದು ನನಗೆ ಸಾಧ್ಯವಾಯಿತು. ಅದಕ್ಕೆ ಅವಕಾಶವುಂಟಾದುದು ಹೇಗೆಂದು ಹೇಳಬಹುದು:

ಕೈಕೋಳಗಳ ಮೆರವಣಿಗೆ ನ್ಯಾಯಾಲಯಕ್ಕೆ ಸಾರ್ವಜನಿಕ ದಾರಿಯಲ್ಲಿ ಮುಂದುವರಿದಿತ್ತು. ಹದಿನೆಂಟು ಕೋಳಗಳು, ಮೂವತ್ತಾರು ಕೋಳ ತೊಟ್ಟವರು. ಹೆಚ್ಚಿನವರ ತಲೆಯ ಮೇಲೆ ಹೊರೆಗಳಿವೆ. ಕಳ್ಳತನ ಮಾಡಿದ ವಸ್ತುಗಳು, ಸಾಕ್ಷ್ಯಗಳು ಸ್ವಂತದ್ದು ಹಾಗೂ ಮತ್ತುಳಿದವರದ್ದು. ಮತ್ತುಳಿದವರ ಭಾರದ ಒಂದಂಶವನ್ನಾದರೂ ನಾನು ವಹಿಸಿಕೊಳ್ಳಬೇಕೆಂಬ ಸಿದ್ಧಾಂತ ಜ್ಯಾರಿಯಲ್ಲಿದೆಯಲ್ಲ. ಯಾಕೋ ಏನೋ ಅದನ್ನು ವಹಿಸಿಕೊಳ್ಳಬೇಕೆಂದು ಪೊಲೀಸ್ ನನ್ನಲ್ಲಿ ಹೇಳಲೂ ಇಲ್ಲ. ಹೇಳಿದ್ದರೂ ನಾನು ಹೊರುತ್ತಿದ್ದೆನೋ ಗೊತ್ತಿಲ್ಲ. ಸಾವೆಂದರೆ ಸಾವು. ಅದುವೇ ಅಂದಿನ ತತ್ವ. ನಾವು ಹಾಗೆ ಮೂವತ್ತಾರು ಮಂದಿ ಆರೋಪಿಗಳಾಗಿ ಕೈಕೋಳ ಧರಿಸಿದವರು ಸಾಲಾಗಿ ನಿಂತಿದ್ದೆವು. ಜೊತೆಗೆ ಕೋವಿ, ಲಾಠಿ ಹಿಡಿದ ಆರು ಜನ ಪೊಲೀಸರು.

ದಾರಿಯಲ್ಲೆಲ್ಲಾದರೂ ಮಾತನಾಡುವ ಹೊಲೆಯನಮಗನ ಕೊರಳನ್ನು ನೀರುಗಾಯಿ ಮಾಡಿಯೇನು! ಹೂಂ, ನಡೆಯೊ ಎಂದು ಅಭ್ಯಾಸದಂತೆ ಪೊಲೀಸನು ಹೇಳುವುದಕ್ಕೂ ಮೊದಲೇ ಒಂದು ಚಿಕ್ಕ ತ್ರಿವರ್ಣ ಧ್ವಜ ಧೀರವಾಗಿ ಹಾರುತ್ತಿರುವ, ಸುಂದರವಾದ ಒಂದು ಕಾರು ಪೊಲೀಸ್ ಸ್ಟೇಷನಿನ ಎದುರುಗಡೆ, ‘ಬುಸ್‍ತ್ಥರ್’ ಎಂದು ಬಂದು ನಿಂತಿತು. ಅದರಿಂದ ಖಾದಿಧಾರಿಗಳಾದ ಇಬ್ಬರು ಗಣ್ಯರು ಇಳಿದರು. ಒಬ್ಬಾತ ಸ್ಥಳೀಯ ಪೊಲೀಸ್ ಇನ್ಸ್‍ಪೆಕ್ಟರ್. ಮತ್ತೊಬ್ಬರು:

ನನ್ನ ಖಾದಿ, ಜೊತೆಯ ಆರೋಪಿ ಮೆಲ್ಲಗೆ ತುಂಬಾ ಮೆಲ್ಲಗೆ ಹೇಳಿದ, `ಒಬ್ಬ ಹಳೆಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನವ. ಪರಿಚಯವಿದೆಯಾ?’

ನಾನು ಹೇಳಿದೆ: ‘ಪರಿಚಯವಿದ್ದಂತೆ ತೋರುತ್ತಿಲ್ಲ..’

ಆ ಹಳೆಯ ಕಾಂಗ್ರೆಸಿಗ ಮತ್ತು ಇನ್ಸ್‍ಪೆಕ್ಟರ್ ಕೈ ಹಿಡಿದು ಕುಲುಕಿ ಏನನ್ನೋ ಮಂತ್ರಿಸಿ `ಆಲ್‍ರೈಟ್!’ ಎಂದು ಹೇಳಿ ಬೀಳ್ಕೊಂಡರು. ಆ ಕಾಂಗ್ರೆಸ್ಸಿಗ ಸುಂದರವಾದ ಆ ಕಾರಿನಲ್ಲಿ ಕುಳಿತ. `ಡ್ರೂಂಭೂ!’ ಎಂದು ಶಬ್ದ ಮಾಡುತ್ತಾ ಪತಾಕೆ ಹಾರಿಸಿಕೊಂಡು ಮುಂದಕ್ಕೆ ಹೋಯಿತು.

`…ಹೂಂ, ನಡೆಯೋ!’ ಎಂದು ಅಭ್ಯಾಸದಂತೆ ಪೊಲೀಸರು ಹೇಳಿದರು. ಕೈಕೋಳಗಳ ಮೆರವಣಿಗೆ ಮುಂದಕ್ಕೆ ಸಾಗಿತು. ಒಳ್ಳೆಯ ಸೂರ್ಯ ಪ್ರಕಾಶ. ಜನಬಾಹುಳ್ಯವಿರುವ ಮುಖ್ಯ ರಸ್ತೆ. ಕೈಕೋಳಗಳು ಬಿಗಿಯುವ ನೋವು. ತೀವ್ರ ಚಳಿ ನರನಾಡಿಗಳ ಮೂಲಕ ನನ್ನ ಮೆದುಳಿಗೆ ತಲುಪಿತು. ಜೊತೆ ಆರೋಪಿಯ ಮೆದುಳಿಗೋ?

ಆತ ಕೇಳಿದ: `ನನ್ನ ಪರಿಚಯವಿದೆಯಾ

ನಾನು ಹೇಳಿದೆ: `ಇಲ್ಲ.’

ಆತ ಹೇಳಿದ: `ನಾನು ಇಲ್ಲಿನ ನಗರದ ಕಾಂಗ್ರೆಸ್….’

`ಕಾಂಗ್ರೆಸ್?’

`ಸೆಕ್ರೆಟರಿ

`ಕೇಸು?’

`ಕಟ್ಟಡ ಧ್ವಂಸ

ಒಳ್ಳೆಯ ಸುದ್ದಿಯಲ್ಲವೇ? ನಗರದ ಕಾಂಗ್ರೆಸ್ ಸೆಕ್ರೆಟರಿ. `ಕಟ್ಟಡ ಧ್ವಂಸ‘. ನನಗೆ ಆಶ್ಚರ್ಯವೆನಿಸಿತು. ಆದರೂ ನಾನೇನೂ ಮಾತನಾಡಲಿಲ್ಲ. ಆತ ನನ್ನ ಕುರಿತು ಕೇಳಿದ: `ನಿಮ್ಮ ಕೇಸು ರಾಜದ್ರೋಹವಲ್ಲವೇ?’

`ಹೌದು

`ಸಣ್ಣ್ಣ ಕತೆಯೋ? ನಾಟಕವೋ?’

`ಎಲ್ಲಾ.. ನಾನು ಎಲ್ಲವೂ!’

ಆತ ಹೇಳಿದ: `ಇಲ್ಲಿಗೆ ಕರೆತಂದ ಅಂದೇ ನಿಮ್ಮನ್ನು ಗೊತ್ತಿತ್ತು.’

ನಾನೇನನ್ನೂ ಹೇಳಲಿಲ್ಲ.

ಆತ ಕೇಳಿದ: `ಬೇರೆ ಲಾಕಪ್ಪಿನಲ್ಲಿ ಎಷ್ಟು ತಿಂಗಳು ಹಾಕಿದರು?’

ನಾನು ಹೇಳಿದೆ: `ಎರಡು

`ಅಲ್ಲಿ ನಿಮಗೆ ಹೊಡೆದರೋ!’

`ಸ್ವಲ್ಪ

`ನನಗೆ ಚೆನ್ನಾಗಿ ಮೂರು ಬಾರಿ ಚಚ್ಚಿದರು

`ಯಾರ ಕಟ್ಟಡ?’

`ಕಾರಿನಲ್ಲಿ ಇನ್ಸ್‍ಪೆಕ್ಟರನ್ನು ಇಳಿಸಿ ಹೋದವನದ್ದು….’

`ಯಾವ ನಾಯಿ ಸೂಳೆ ಮಗನೋ, ಮಾತನಾಡುವುದು?’

ಪೊಲೀಸನೊಬ್ಬ ತಿರಸ್ಕಾರದಿಂದ ಕೇಳಿದ. ಕೋಳ ಧರಿಸಿದವರು ಮೌನವಾದರು. ಮೆರವಣಿಗೆ ಹಾಗೆ ಮುಂದಕ್ಕೆ ಸಾಗಿತು. ಸಮಯ ತುಂಬಾ ಹೊತ್ತು ಕಳೆಯಿತು. ಜೊತೆಗಾರ ನೋವಿನಿಂದ ಕೋಳವನ್ನಲುಗಾಡಿಸಿದ. ನಾನದನ್ನು ಗಮನಿಸಿದೆ. ಮೆಲ್ಲನೆ ಆತ ಹೇಳಿದ:

`ಆ ಹಳೆಯ ಕಾಂಗ್ರೆಸ್ಸಿಗನಿಗೆ ರೈಸ್‍ಮಿಲ್ ಹಾಗೂ ಆಯಿಲ್ ಮಿಲ್ಲ್‍ಗಳಿವೆ.’

`ಹೆಸರು?’

ಆತ ಹೆಸರು ಹೇಳಿದ: `……’

ನನಗೆ ಗುರುತು ಸಿಕ್ಕಿತು.

`ಕೇಳಿದ್ದಿದೆ. ಗಾಂಧೀಜಿ ಈ ಊರಿಗೆ ಬಂದಾಗ ಎರಡು ದಿವಸ ಆತನ ಅತಿಥಿಯಾಗಿದ್ದರು….’

ಹೌದು, ಮಹಾತ್ಮಗಾಂಧಿ ಕುಳಿತ ಸ್ಥಳದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಲಾಗಿದೆ. ಮಾರ್ಬಲ್ ಕಲ್ಲಿನಿಂದ ಮಾಡಿದ ಒಂದು ಪೀಠ. ಮೇಲಿನ ಮಹಡಿಯಲ್ಲಿ ನಡುವಿನ ಕೋಣೆಯ ನಡುವೆ `ಮಹಾತ್ಮ ಗಾಂಧಿ ಇಲ್ಲಿ ಕುಳಿತರುಎಂದು ಸುವರ್ಣಾಕ್ಷರಗಳಲ್ಲಿದೆ. ಆತ ಮುಂದುವರಿಸಿದ:

`ನಿಮ್ಮನ್ನು ಈ ಲಾಕಪ್ಪಿಗೆ ಕರೆತರುವುದಕ್ಕೂ ಒಂಬತ್ತು ದಿವಸಕ್ಕೆ ಮೊದಲು ನನ್ನನ್ನು ಇಲ್ಲಿನ ಇನ್ಸ್‍ಪೆಕ್ಟರ್ ಅರೆಸ್ಟ್ ಮಾಡಿ ಕರೆತಂದ. ನಾನು ಸ್ನಾನ ಮಾಡಲು ಎಣ್ಣೆ ಹಚ್ಚಿಕೊಂಡು ನಿಂತಿದ್ದೆ. ಸಾಯಂಕಾಲದ ಸಮಯ. ನನ್ನ ಹೆಂಡತಿ ನನ್ನ ಸ್ನಾನಕ್ಕಾಗಿ ನೀರು ಕಾಯಿಸುತ್ತಿದ್ದಳು.’

`ಊಂ…’

`ನನ್ನ ಹೆಂಡತಿ ನನಗೆ ಉಟ್ಟುಕೊಳ್ಳಲು ಬಟ್ಟೆಯನ್ನು ತೆಗೆದುಕೊಂಡು ಪೊಲೀಸ್ ಸ್ಟೇಷನಿಗೆ ಹತ್ತಿಪ್ಪತ್ತೈದು ಬಾರಿ ಬಂದಳು. ಕೊಡಲು ಇನ್ಸ್‍ಪೆಕ್ಟರ್ ಸಮ್ಮತಿಸಲಿಲ್ಲ.’

`ಸರಿ

ಆತ ನೋವಿನಿಂದ ಸಂಕಟವನ್ನು ತೋಡಿಕೊಂಡ: ‘ನಾನೊಬ್ಬ ಅಂಬಿಗ ಜಾತಿಯಲ್ಲಿ ಜನಿಸಿದವ. ನನ್ನಲ್ಲಿ ಹಣವಿಲ್ಲ. ಡಿಗ್ರಿಯಿಲ್ಲ. ಹನ್ನೊಂದು ವರ್ಷಗಳ ಕಾಂಗ್ರೆಸ್ ಪಾರಂಪರ್ಯ. ನಾನು ಧಾರಾಳ ಬೆಂಕಿ ಕಿಡಿಯಂಥ ಭಾಷಣ ಮಾಡಿದ್ದಿದೆ.’

`ಹೆಸರು!’

`…….’

`!!!’

`ಕೇಳಿದ್ದಿದೆಯಾ?’

`ಹೂಂ

`ನಾನು ಏಳು ಬಾರಿ ಜೈಲಿಗೆ ಹೋಗಿದ್ದೆ. ನನ್ನ ಹಿತ್ತಿಲು ಮಾರಿ ಕಾರ್ಮಿಕರಿಗೆ ತಿನ್ನಿಸಿದೆ.’

`ಕಾರ್ಮಿಕರಿಗೆ?’

`ಹೌದು. ಕಾಂಗ್ರೆಸ್ಸಿನ ಧ್ವಜದ ಕೆಳಗಿರುವ ಕಾರ್ಮಿಕರಿಗೆ. ನಾನು ಸಂಘಟಿಸಿದೆ. ಕೇಳಿಸಿಕೊಳ್ಳುತ್ತಿದ್ದಿಯಾ?’

`ಹೌದು

`ಕತ್ತಲೆಯ ಲಾಕಪ್ಪಿನಲ್ಲಿ ಹಾಕಿದರು. ಆರಂಭದಲ್ಲಿ ನನ್ನನ್ನು ಬಲಪ್ರಯೋಗಿಸಿ ಬಂಧಿಸಿದಾಗ ಸಾವಿರದಷ್ಟು ಸ್ತ್ರೀ ಪುರುಷರು ತ್ರಿವರ್ಣ ಧ್ವಜ ಹಾಗೂ ಪೆಟ್ರೋಮ್ಯಾಕ್ಸ್‍ನ ಬೆಳಕಿನೊಂದಿಗೆ ಪೊಲೀಸ್ ಸ್ಟೇಷನಿನ ಮುಂಭಾಗದಲ್ಲಿ ಬಂದು ಸೇರಿದರು.’

`ಯಾಕೆ?’

`ನನ್ನನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆಯೊಡನೆ ಸತ್ಯಾಗ್ರಹ ಆರಂಭಿಸಿದರು. ಆದರೆ ರಿಸರ್ವ್ ಪೊಲೀಸ್ ಅವರನ್ನು ಹೊಡೆದು…’

`ಬಳಿಕ?’

`ಪೊಲೀಸ್ ಕಮಿಷನರ್ ಮೇಲಿರುವವರಿಗೆಲ್ಲಾ ತಂತಿ ಕಳುಹಿಸಿದರು…’

`ಕಟ್ಟಡ ಧ್ವಂಸವಲ್ಲವೇ!’

`ಅದನ್ನು ಸರ್ಕಾರವೇ ಮಾಡಿದ್ದು. ಇನ್ಸ್‍ಪೆಕ್ಟರ್. ನಾನು ಯಾರ ಮನೆಯ ಕಟ್ಟಡವನ್ನೂ ನಾಶ ಮಾಡಲಿಲ್ಲ. ಹೇಳಲಿಲ್ಲವೇ, ರೈಸ್‍ಮಿಲ್ಲ್.. ಆಯಿಲ್ ಮಿಲ್ಲ್ಮೂನ್ನೂರರಷ್ಟು ಕಾರ್ಮಿಕರುಹೆಚ್ಚಿನವರೂ ಸ್ತ್ರೀಯರು, ಎಲ್ಲರಿಗೂ ನಾನು ಪರಿಶುದ್ಧವಾದ ಖಾದಿ ತೊಡಿಸಿದೆ. ತ್ರಿವರ್ಣಧ್ವಜದ ಕೆಳಗೆ….’

`ಹೂಂ…’

`ಯುದ್ಧಕ್ಕೆ ಮೊದಲು ಆಳುಗಳಿಗೆ ಕೊಡುತ್ತಿದ್ದುದು ಅಕ್ಕಿ. ಅಂದು ಅಕ್ಕಿಗೆ ಅಂತಹ ಬೆಲೆಯೇನೂ ಇದ್ದಿರಲಿಲ್ಲ. ಯುದ್ಧ ಆರಂಭವಾದುದೇ ಅಕ್ಕಿಗೂ ಭತ್ತಕ್ಕೂ ಬೆಲೆ ಹೆಚ್ಚಿತು. ಆತ ತುಂಬಾ ಅಕ್ಕಿ ದಾಸ್ತಾನು ಮಾಡಿದ್ದ. ಆಳುಗಳಿಗೆ ಅಂದು ಕೂಲಿ ಇದ್ದುದು ಹಣದ ರೂಪದಲ್ಲಿ…’

ಹಾಗೆ ನಾವು ನ್ಯಾಯಾಲಯಕ್ಕೆ ತಲುಪಿದೆವು. ಆತ ಹೇಳಿದ ವಿಷಯ ಮರೆಯಲಿಲ್ಲ. ನ್ಯಾಯಾಲಯದ ಚಟುವಟಿಕೆಗಳಲ್ಲಿ ನಾವು ಮುಳುಗಿದೆವು. ಕೈಕೋಳಗಳನ್ನು ಕಳಚಿದರು. ನಮ್ಮನ್ನು ಪೊಲೀಸ್ ಔಟ್‍ಪೋಸ್ಟ್ ಲಾಕಪ್ಪಿನಲ್ಲಿ ತುಂಬಿದರು. ಕೇಸಿಗೆ ಅನುಗುಣವಾಗಿ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿದರು. ಒಂದು, ಎರಡು, ಮೂರು, ನಾಲ್ಕು, ಕೇಸುಗಳವರೆಗೆ ವಿಸ್ತರಿಸಿದರು. ಹೆಚ್ಚಿನವುಗಳ ಕಾಲಾವಧಿ ಬದಲಾಯಿಸಿದರು. ನಮ್ಮ ತೀರ್ಪು ಹೊರಬಿತ್ತು. ಸಂಜೆ ಸಮೀಪಿಸಿದಾಗ ಜೈಲಿನ ಸ್ಪಷ್ಟವಾದ ನೆನಪುಗಳೊಡನೆ ಕೈಕೋಳಗಳ ಸಹಿತ ಪೊಲೀಸ್ ಲಾಕಪ್ಪಿಗೆ ಮರಳಿದೆವು. ನಾವು ದಣಿದಿದ್ದೆವು. ದುಃಖ ಎಲ್ಲರಿಗೂ ಇದೆ.

ಜೊತೆಗಾರ ನೋವಿನಿಂದ ಹೇಳಿದ: `ತೀರ್ಪು ಕೇಳಿ ನನ್ನ ಹೆಂಡತಿ ನ್ಯಾಯಾಲಯದಲ್ಲಿ ಪ್ರಜ್ಞೆತಪ್ಪಿ ಬಿದ್ದಳು

ನನಗೆ ಯಾರೂ ಇಲ್ಲದೆ ಇರುವುದರಿಂದ ಸ್ವಾರಸ್ಯವಿದೆ.

ಆತ ಕೇಳಿದ: `ಎಷ್ಟು ತಿಂಗಳು?’

ನಾನು ಹೇಳಿದೆ: ಎರಡು ವರ್ಷ ಕಠಿಣ ಜೈಲು ಶಿಕ್ಷೆ. ಸಾವಿರ ರೂಪಾಯಿ ದಂಡಕ್ಕೆ ನಾನೇನು ಮಾಡಿದೆ! ಯಾರನ್ನಾದರೂ ಕೊಂದಿದ್ದೇನೆಯೇ? ಯಾರನ್ನಾದರೂ ನೋಯಿಸಿದ್ದೇನೆಯೋ? ಎರಡೂವರೆ ವರ್ಷ ರಾತ್ರಿ ಏನೆಂಬುದೇ ಗೊತ್ತಾಗಲಿಲ್ಲ. ಒಂದು ನಕ್ಷತ್ರವನ್ನು ಕಾಣಲು ಸಾಧ್ಯವಾಗಲಿಲ್ಲ. ರಾತ್ರಿ ಹಾಗೂ ನಕ್ಷತ್ರಗಳು ದೊಡ್ಡ ವಿಷಯವೆಂದಲ್ಲ. ಆದರೂನನಗೆ ಒಟ್ಟಿನಲ್ಲಿ ಪ್ರಯಾಸವೆನಿಸಿತು. ಲೋಭವಿಲ್ಲದೆ ಒಮ್ಮೆ ಅತ್ತು ಬಿಡಲು ಶ್ರಮಿಸಿದೆ. ಆದರೆ ಕಣ್ಣೀರೆಲ್ಲಿದೆ? ಕೋಳ! ಕೋಳಆಲೋಚನೆಗಳಿಗೂ ಕೋಳ! ಭವಿಷ್ಯ, ಜನರ ಭವಿಷ್ಯ…. ಎಲ್ಲಕ್ಕೂ ಕೈಕೋಳ. ನನ್ನ ಚಿಂತೆಗಳು ಉದುರಿ ಮಗುಚುತ್ತಿದ್ದುವು. ಜೊತೆಗಾರ ಹೇಳಿದ. `ಗೆಳೆಯ, ನಾನು ಮದುವೆಯಾಗಿ ಒಂದೂವರೆ ತಿಂಗಳು ಆಗಲಿಲ್ಲ. ಅದಕ್ಕೂ ಮೊದಲು…’

`?’

`ಮೋಹ ತೀರಲು ನಾನು…’

ನಾನು `ಏನನ್ನೂ ಹೇಳಲಿಲ್ಲ. ನನಗೆಂತಹ ಮೋಹ?’

ಆತ ಕೇಳಿದ: `ನಿಮಗೆ ಹೆಂಡತಿಯಿದ್ದಾಳಾ?’

`ಯಾರೂ ಇಲ್ಲ

`ಇದು ಮೊದಲ ಬಾರಿಯೇನು ಜೈಲಿಗೆ ಹೋಗುವುದು?’

ನಾನೆಂದೆ: `ಇದಕ್ಕೂ ಮೊದಲು ಎರಡು, ಮೂರು ಬಾರಿ ಹೋಗಿದ್ದಿದೆ!’

ಗದ್ಗದಿತವಾಗಿ ಆತ ಹೇಳಿದ: `ಗೆಳೆಯಾನನ್ನ ಹೆಂಡತಿಅವಳು…’

ಆತ ನಡೆಯುತ್ತಾ ಅಳಹತ್ತಿದ. ಬಿಕ್ಕಿ ಬಿಕ್ಕಿಯಲ್ಲ, ಶಬ್ದವುಂಟು ಮಾಡದೆ ನಾವು ಹಾಗೆ ನಡೆದೆವು. ವಿದ್ಯುತ್ ದೀಪಗಳು ಬೆಳಗಿದುವು. ಕಣ್ಣೀರೊರೆಸಲು ಆತ ಕೈಯೆತ್ತಿದ. ಒರೆಸಿದ್ದು ಮಾತ್ರ ನನ್ನ ಕೈಯಿಂದಾಗಿ ಹೋಯಿತು.

`ಕ್ಷಮಿಸಬೇಕು!’ ಆತ ಹೇಳಿದ. ನಾನು ಏನನ್ನೂ ಹೇಳಲಿಲ್ಲ.

ಕೈಕೋಳಗಳ ಮೆರವಣಿಗೆ. ಪೊಲೀಸ್ ಸ್ಟೇಷನ್ ಸಮೀಪಿಸುವುದಕ್ಕಾಯಿತು. ಆತ ಹೇಳಿದ: `ಒಂದು ವೇಳೆ ಹಿಂಸೆಯಾಗಿರಬಹುದು?’

`ಏನು?’

ಕೆಲಸದಾಳುಗಳಿಗೆ ಅಕ್ಕಿಯನ್ನೇ ಕೂಲಿಯಾಗಿ ಕೊಡಬೇಕೆಂದು ನಾವು ಹಠ ಮಾಡಿದೆವು. ಆದರೆ ನಾವೆಲ್ಲ ಉಪವಾಸ ಮಲಗುತ್ತಿದ್ದೆವು. ಆದರೆ ಅದನ್ನಾತ ಮಾಡಿದ. ಭಾರತದಸ್ವಾತಂತ್ರ್ಯದಚಿಹ್ನೆಯಾದಆ ಹಳೆಯ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ನೇತಾರಆತ ಇನ್ಸ್‍ಪೆಕ್ಟರ್‍ಗೆ ಐದುನೂರು ರೂಪಾಯಿ ಲಂಚ ಕೊಟ್ಟು ನನ್ನ ಹೆಸರಲ್ಲಿ ನ್ಯಾಯಾಲಯದಲ್ಲಿ ಸುಳ್ಳು ಮೊಕದ್ದಮೆ ಹೂಡಿದ.

`ಇನ್ಸ್‍ಪೆಕ್ಟರ್ ಈಗ ತೊಟ್ಟಿರುವುದು ಪರಿಶುದ್ಧ ಖಾದಿ!’

ಆತ ಮುಂದುವರಿಸಿದ: ‘ಇನ್ನು ಮುಂದೆ ಎಲ್ಲರೂ ಖಾದಿ ಧರಿಸುವರು. ಘಟನೆಗಳು ಹೀಗೆ ಸಂಭವಿಸಬಹುದು. ಒಂದು ವೇಳೆ ನಾನು ಹೇಳುತ್ತಿರುವುದು ತಪ್ಪಾಗಿರಬಹುದು. ಎಲ್ಲವೂ ತಪ್ಪು. ನಾವು ಆತನ ಮಹಡಿಮನೆಯ ಮುಂದೆ ಸತ್ಯಾಗ್ರಹ ಆರಂಭಿಸಿದೆವು. ಎಲ್ಲದಕ್ಕೂ ಆಯಿತು…’ ಎಂದು ಹೇಳಿಕೊಂಡು ಎಡಕೈ ಎತ್ತಿ, ಸ್ವಂತ ಕೆಲಸವನ್ನು ಮಾತ್ರ ನೆನಪಿಸಿಕೊಂಡು ಜಗತ್ತಿನೊಡನೆ ಎಂಬಂತೆ ತುಂಬಿದ ಕಣ್ಣುಗಳೊಡನೆ ಆತ ಕೇಳಿದ:

`ಕೈಕೋಳನೋಡಿದಿರಾ?’

ವೈಕಂ ಮುಹಮ್ಮದ್ ಬಷೀರ್

ಪಾತುಮ್ಮನ ಆಡು ಮತ್ತು ಬಾಲ್ಯಕಾಲಸಖಿ’, ‘ನನ್ನಜ್ಜನಿಗೊದಾನೆಯಿತ್ತು’, ಎಂಬಿತ್ಯಾದಿ ಕೃತಿಗಳ ಮೂಲಕ ಕನ್ನಡದಲ್ಲಿ ಪರಿಚಿತರಾದ ವೈಕಂ ಮುಹಮ್ಮದ್ ಬಷೀರ್ ಮಲಯಾಳಂನ ಸುಪ್ರಸಿದ್ಧ ಕತೆಗಾರರಲ್ಲೊಬ್ಬರು. ತನ್ನ ಜೀವನಾನುಭವದ ಅನನ್ಯ ಅಭಿವ್ಯಕ್ತಿಯಿಂದಾಗಿ ಬಷೀರ್ ಸಾಹಿತ್ಯ ಎಂದು ಮಲಯಾಳಂನಲ್ಲಿ ಗುರುತಿಸುವಂತಾದುದು ಈಗ ಇತಿಹಾಸ.

1908 ರ ಜನವರಿ 20 ರಂದು ಮಧ್ಯಕೇರಳದ ವೈಕಂ ಸಮೀಪದ ತಲಯೋಲಪ್ಪರಂಬಿನಲ್ಲಿ ಜನಿಸಿದ ಬಷೀರ್ ಪಡೆದ ಅನುಭವ ಅಗಾಧವಾದುದು. ಶಾಲಾ ಶಿಕ್ಷಣಕ್ಕೆ ತಿಲಾಂಜಲಿಯಿತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ಗಾಂಧೀಜಿಯ ಸ್ಪರ್ಶದಿಂದ ಪುಳಕಿತರಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿ ಉಪ್ಪು ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಪರಿಣಾಮವಾಗಿ ಸರಕಾರದ ಕ್ರೂರ ಹಿಂಸೆಗೆ ಒಳಗಾದರು. ಜೈಲುವಾಸವನ್ನೂ ಅನುಭವಿಸಿದರು. ಭಗತ್‍ಸಿಂಗ್, ರಾಜಗುರು ಮೊದಲಾದವರೊಂದಿಗೆ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು. ‘ಉಜ್ಜೀವನಂ’ ಎಂಬ ವಾರಪತ್ರಿಕೆಯನ್ನು ನಡೆಸಿದರು. ಹಡಗಿನಲ್ಲಿ ಪರಿಚಾರಕನಾಗಿ ಅರೆಬಿಯನ್ ಹಾಗೂ ಆಫ್ರಿಕನ್ ಕಡಲತೀರದ ಪ್ರದೇಶಗಳನ್ನು ಸಂದರ್ಶಿಸಿದರು. ಹಿಮಾಲಯದಲ್ಲಿ ಗಂಗಾತೀರದಲ್ಲಿ ಹಿಂದೂ ಸನ್ಯಾಸಿಯಾಗಿ ಸೂಫಿಸಂತನಾಗಿ ಅಲೆದಾಡಿದರು.

ಊರಿಗೆ ಮರಳಿದ ಬಳಿಕ ವಿವಿಧ ಪತ್ರಿಕೆಗಳಿಗೆ ಅನುಭವದ ಕತೆಗಳನ್ನು ಬರೆದರು. ಎರ್ನಾಕುಳಂನಲ್ಲಿ ‘ಬಷೀರ್ ಬುಕ್ ಸ್ಟಾಲ್’ ಎಂಬ ಹೆಸರಿನಲ್ಲಿ ಪುಸ್ತಕದಂಗಡಿ ನಡೆಸಿದರು. 1995 ರ ಜುಲೈ 05 ರಂದು ಬಷೀರ್ ನಿಧನರಾದರು.

ಕನ್ನಡದ ಮುಸ್ಲಿಂ ಸಂವೇದನೆಯ ಸಾಹಿತ್ಯಕ್ಕೆ ಬಷೀರ್ ಸಾಹಿತ್ಯದ ಪ್ರೇರಣೆಯಿದೆ ಎಂಬುದನ್ನು ನೆನಪಿಸಿಕೊಳ್ಳಬಹುದು.

Leave a Reply

Your email address will not be published.