ಕ್ರಿಪ್ಟೋಕರೆನ್ಸಿ ಒಡ್ಡಿರುವ ವಿತ್ತೀಯ ಸವಾಲುಗಳು

ಡಾ.ಸಜ್ಜಿದ್ ಝಡ್ ಚಿನೋಯ್ ಹೇಳುವಂತೆ, ಆರ್ಥಿಕತೆಯ ಮೇಲೆ ಡಿಜಿಟಲ್ ಕರೆನ್ಸಿ ತನ್ನ ಸಂಪೂರ್ಣ ನಿಯಂತ್ರಣ ಸಾಧಿಸಿದಾಗ, ಇಲ್ಲಿ ಚರ್ಚಿಸಿರುವ ಹೊಸ ಸವಾಲುಗಳು ಎದುರಾಗುತ್ತವೆ. ಈ ಪಲ್ಲಟಗಳನ್ನು ಎದುರಿಸಲು ಸಮರ್ಥವಾದ ಆರ್ಥಿಕ ನೀತಿಗಳನ್ನು ಜಾರಿಗೆ ತರಬೇಕಾಗಿದೆ.

ಡಾ.ಸಜ್ಜಿದ್ ಝಡ್ ಚಿನೋಯ್

ವರ್ತಮಾನದ ಜಗತ್ತಿನಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಕ್ರಾಂತಿ ಡಿಜಿಟಲ್ ಹಣದ ಒಂದು ಭಾಗವಾಗಿ ಕ್ರಿಪೆ್ಟೀಕರೆನ್ಸಿ ಈಗ ಸುದ್ದಿ ಮಾಡುತ್ತಿದೆ. ಇದಕ್ಕೆ ಪೂರಕವಾದ ಹಲವಾರು ಅತಿಸೂಕ್ಷ್ಮ ಆರ್ಥಿಕ ವಹಿವಾಟುಗಳು ಕೂಡ ಜನಪ್ರಿಯಗೊಳ್ಳುತ್ತಿವೆ ಎಂದು ವಾದಿಸಲಾಗುತ್ತಿದೆ. ಮೊದಲನೆಯದಾಗಿ, ಡಿಜಿಟಲ್ ಕರೆನ್ಸಿಗಳು ಆರ್ಥಿಕ ಆವಿಷ್ಕಾರವನ್ನು ಉತ್ತೇಜಿಸುವ ಸಾಮಥ್ರ್ಯವನ್ನು ಹೊಂದಿವೆ; ವೇಗ ಮತ್ತು ಅಗ್ಗದ ಪಾವತಿಯ ಮೂಲಕ ದಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಸುರಕ್ಷತೆ (ಸೈಬರ್ ದಾಳಿ ಮತ್ತು ವಂಚನೆ), ಆರ್ಥಿಕ ಪಾರದರ್ಶಕತೆ (ಕಾನೂನು ಬಾಹಿರ ಆರ್ಥಿಕ ಚಟುವಟಿಕೆ ಮತ್ತು ವ್ಯವಸ್ಥೆಯ ನಿಯಂತ್ರಣದಿಂದ ನುಸುಳಿಕೊಳ್ಳುವಿಕೆ) ಮತ್ತು ಆರ್ಥಿಕ ಶಕ್ತಿ ಬಳಕೆಯ (ಕ್ರಿಪೆ್ಟೀಸ್‍ನ್ನು ಅಗತ್ಯಕ್ಕಿಂತ ಹೆಚ್ಚಿನ ಆರ್ಥಿಕ ಶಕ್ತಿಗೆ ದುರ್ಬಳಕೆ ಮಾಡಿಕೊಳ್ಳುವುದು) ಕುರಿತಾಗಿ ಅಡ್ಡಿಆತಂಕಗಳನ್ನು ಸಹ ಸಾರ್ವಜನಿಕವಾಗಿ ಚರ್ಚಿಸಲಾಗುತ್ತಿದೆ. ಇದಲ್ಲದೆ, ಪ್ರಸಕ್ತ ಖಾಸಗಿಯಾಗಿ ನೀಡಲಾಗುತ್ತಿರುವ ಕ್ರಿಪೆ್ಟೀಗಳು, ಬಹುತೇಕ ಊಹಾತ್ಮಕ ಸ್ವತ್ತುಗಳಾಗಿ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ, ಗ್ರಾಹಕ ರಕ್ಷಣೆ ಮತ್ತು ನಿಯಂತ್ರಣ ಚೌಕಟ್ಟುಗಳನ್ನು ಬಲಪಡಿಸುವ ಅಗತ್ಯವೂ ಸಹ ಪ್ರಮುಖವಾಗಿದೆ.

ಪ್ರಸಕ್ತ ಇದರ ಕುರಿತಾಗಿ ಉನ್ನತ ಮಟ್ಟದ ಚರ್ಚೆಯಾಗುತ್ತಿದ್ದರೂ ಸಹ, ಖಾಸಗಿಯಾಗಿ ನೀಡಲಾಗುತ್ತಿರುವ ಕ್ರಿಪೆ್ಟೀಕರೆನ್ಸಿಗಳಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಬಹಳ ಕಡಿಮೆ ನಿರೀಕ್ಷೆಯಿದೆಯೆನ್ನಬಹುದು. ಆದರೂ ಕೂಡ, ಸದ್ಯಕ್ಕೆ ಊಹಾತ್ಮಕ ಸ್ವತ್ತುಗಳಾಗಿರುವ ಕ್ರಿಪೆ್ಟೀಸ್, ಕಾಲಾನಂತರ, ಜನಮನ್ನಣೆ ಪಡೆದು ವಿನಿಮಯದ ಶಕ್ತ ಮಾಧ್ಯಮವಾಗಿ ಮಾರ್ಪಟ್ಟರೆ ಏನಾಗಬಹುದು? ಹಾಗೆಯೇ, ವಿತ್ತೀಯ, ಹಣಕಾಸು ಮತ್ತು ವಿನಿಮಯ ದರ ನೀತಿಗಳ ಮೇಲೆ ಇದರ ಪರಿಣಾಮವೇನಾಗಬಹುದು? ಈ ಹಿನ್ನೆಲೆಯಲ್ಲಿ, ಕ್ರಿಪೆ್ಟೀ ಕರನ್ಸಿಯಿಂದಾಗಬಹುದಾದ ಬೃಹತ್ ಆರ್ಥಿಕ ಪಲ್ಲಟಗಳ ಕುರಿತು ನಾನಿಲ್ಲಿ ಚರ್ಚಿಸುತ್ತೇನೆ.

ಈ ವಿಷಯದಲ್ಲಿ ಕಡಿಮೆ ಮಾಹಿತಿ ಹೊಂದಿರುವವರ ಅನುಕೂಲಕ್ಕಾಗಿ ನಾನು ಈ ಪ್ರಶ್ನೆಯಿಂದ ಆರಂಭಿಸುತ್ತೇನೆಖಾಸಗಿಯಾಗಿ ಚಲಾಯಿಸುವ ಡಿಜಿಟಲ್ ಕರೆನ್ಸಿಯು, ಅಕಸ್ಮಾತ್ ಅಧಿಕೃತ ಕರೆನ್ಸಿಯೊಂದಿಗೆ ಸ್ಪರ್ಧಿಸುವಂತಾದರೆ, ಆರ್ಥಿಕ ನೀತಿಯ ಮೇಲೆ ಏನು ಪರಿಣಾಮ ಬೀರಬಹುದು? ಈ ಪ್ರಕ್ರಿಯೆಯನ್ನು, ಸರಳ ಭಾಷೆಯಲ್ಲಿ ಡಾಲರೈಸೇಶನ್ಎಂದು ಹೆಸರಿಸಬಹುದು.

ಲ್ಯಾಟಿನ್ ಅಮೆರಿಕಾ ದೇಶಗಳ ಆರ್ಥಿಕತೆಯು ಸರಿಸುಮಾರು ಡಾಲರೈಸ್ಆಗಿಹೋಗಿದೆ. ಅಂದರೆ, ಅಲ್ಲಿನ ದೇಶವಾಸಿಗಳು ತಮ್ಮ ದೇಶಿಯ ಕರೆನ್ಸಿಯ ಮೌಲ್ಯದಲ್ಲಿ ನಂಬಿಕೆ ಕಳೆದುಕೊಂಡಿದ್ದರಿಂದ, ತಮ್ಮ ಆರ್ಥಿಕ ವ್ಯವಹಾರದ ಭದ್ರತೆ ಮತ್ತು ಸ್ಥಿರತೆಗಾಗಿ ಅಮೆರಿಕನ್ ಡಾಲರ್‍ಗಳಲ್ಲಿ ವಹಿವಾಟು ಮಾಡಲು ಪ್ರಾರಂಭಿಸಿದ್ದಾರೆ. ಇದು ದೇಶೀಯ ಹಣಕಾಸು ನೀತಿಯ ಮೇಲೆ ದುಷ್ಪರಿಣಾಮ ಬೀರಲಾರಂಭಿಸಿದೆ. ಏಕೆಂದರೆ, ರಾಷ್ಟೀಯ ಬ್ಯಾಂಕುಗಳು ಇವುಗಳ ಮೇಲೆ ಬಡ್ಡಿದರಗಳನ್ನು ಹೊಂದಿಸಲು ಮತ್ತು ವಿದೇಶಿ ಕರೆನ್ಸಿಯನ್ನು ಅಧಿಕೃತ ಹಣವಾಗಿ ಪರಿವರ್ತಿಸಲು ಸಾಧ್ಯವಿಲ್ಲ. ಇದರಿಂದಾಗಿ, ಅಮೆರಿಕನ್ ಡಾಲರ್ ನ ಮುಂದೆ, ಈ ದೇಶಗಳ ವಿತ್ತೀಯ ನೀತಿಯ ಸಾಮಥ್ರ್ಯ ದುರ್ಬಲವಾಗಿ ಕಾಣಿಸುತ್ತಿದೆ. ವಾಸ್ತವವಾಗಿ, ಈ ದೇಶಗಳ ಆರ್ಥಿಕತೆಗಳು, ಅಮೆರಿಕಾದ ಹಣಕಾಸು ನೀತಿಯನ್ನು ಆಮದು ಮಾಡಿಕೊಳ್ಳುತ್ತಿವೆ.

ಅದರಂತೆಯೇ, ಖಾಸಗಿಯಾಗಿ ನೀಡುವ ಡಿಜಿಟಲ್ ಕರೆನ್ಸಿಗಳು, ಒಂದು ವೇಳೆ ವಿನಿಮಯದ ಮಾಧ್ಯಮವಾಗಿ ವ್ಯಾಪಕವಾಗಿ ಅಳವಡಿಕೆಯಾದಲ್ಲಿ ಅದೇ ಪರಿಣಾಮ ಬೀರುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರಗಳಲ್ಲಿ ಅವುಗಳ ಪ್ರಭಾವ ಹೆಚ್ಚಾದಂತೆ, ಆರ್ಥಿಕ ವಲಯಗಳ ವಿವಿಧ ಆವರ್ತಗಳು ಹಾಗು ಅಂತಾರಾಷ್ಟ್ರೀಯ ಆರ್ಥಿಕ ಆಘಾತಗಳಿಗೆ ಪ್ರತಿಕ್ರಿಯಿಸುವಲ್ಲಿ ದೇಶೀಯ ವಿತ್ತೀಯ ನೀತಿಗಳ ವರ್ಚಸ್ಸು, ಸಹಜವಾಗಿ ಕಡಿಮೆಯಾಗುತ್ತದೆ.

ಈ ದೆಸೆಯಲ್ಲಿ, ಮುಖ್ಯ ಪ್ರಶ್ನೆಯೆಂದರೆ, ವಿನಿಮಯದ ಮಾಧ್ಯಮವಾಗಿ ಕ್ರಿಪೆ್ಟೀಕರೆನ್ಸಿಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವ ಸಾಧ್ಯತೆಗಳೇನು? ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ, ಜಿ3 (ಅಮೆರಿಕಾ, ಜರ್ಮನಿ ಹಾಗು ಜಪಾನ್) ದೇಶಗಳ ಸಮೂಹದ ಸೆಂಟ್ರಲ್ ಬ್ಯಾಂಕಿನ ಬ್ಯಾಲೆನ್ಸ್ ಶೀಟ್‍ಗಳ ಅಭೂತಪೂರ್ವ ವಿಸ್ತರಣೆಯಿಂದಾಗಿ, ಅಧಿಕೃತ ಕರೆನ್ಸಿಗಳ ಅಪಮೌಲ್ಯ ಉಂಟಾದ್ದರಿಂದ, ಬಿಟ್‍ಕಾಯಿನ್ ಪ್ರಭಾವದ ಕುರಿತಾಗಿ ಭಯ ಆರಂಭವಾಯಿತು. ಆದ್ದರಿಂದ, ಈ ಬ್ಯಾಂಕಿನ ಸಂಸ್ಥಾಪಕರು, ಮುಂದಿನ ದಿನಗಳಲ್ಲಿ ಬಿಟ್‍ಕಾಯಿನ್, ಒಂದು ಪರ್ಯಾಯ ವಿನಿಮಯ ಮಾಧ್ಯಮವಾಗಿ ವಿಕಸನಗೊಳ್ಳಲಿದೆ ಎನ್ನುವ ಮುನ್ಸೂಚನೆಯಿಂದ, ಅದರ ಪೂರೈಕೆ ಹಾಗು ಬಳಕೆಯ ಮೇಲೆ ಕಡಿವಾಣ ಹಾಕಿದರು. ಆದರೆ, ಮೂಲತಃ ಅದರ ಒಟ್ಟಾರೆ ಪೂರೈಕೆಯು ಒಂದು ಅಸ್ಥಿರ ಪ್ರಕ್ರಿಯೆಯಾಗಿರುವುದರಿಂದ, ಅದರ ಬೇಡಿಕೆಯ ಆಘಾತಗಳು ಬೆಲೆಯ ಚಂಚಲತೆಗೆ ಕಾರಣವಾಗುತ್ತಿವೆ. ಇದರ ಪರಿಣಾಮವಾಗಿ, ಪ್ರಸಕ್ತ, ಬಿಟ್‍ಕಾಯಿನ್ ವಿನಿಮಯಕ್ಕೆ ಸೂಕ್ತವಲ್ಲದ ಮಾಧ್ಯಮವಾಗಿ ಮಾರ್ಪಟ್ಟಿದೆ ಹಾಗು ಕೇವಲ ಊಹಾತ್ಮಕ ಆಸ್ತಿಯಾಗಿ ಪ್ರಚಲಿತದಲ್ಲಿದೆ.

ಈ ಸಮಸ್ಯೆಯನ್ನು ಪರಿಹರಿಸಲು, “ಸ್ಟೇಬಲ್‍ಕೋಯಿನ್ಗಳನ್ನು ಪರಿಚಯಿಸಲಾಗಿದೆ ಹಾಗೂ ಅದರ ಮೌಲ್ಯವನ್ನು ವಿನಿಮಯ ದರಕ್ಕೆ ಅನುಗುಣವಾಗಿ ಅಧಿಕೃತ ಕರೆನ್ಸಿಗೆ ಜೋಡಿಸಲಾಗಿದೆ. ಈ ಸ್ಟೇಬಲ್‍ಕಾಯಿನ್‍ಗಳು ಹೆಚ್ಚಿನ ಬೆಲೆ ಸ್ಥಿರತೆಯನ್ನು ಒದಗಿಸುವ ಮೂಲಕ, ವಿನಿಮಯದ ಕಾರ್ಯಸಾಧ್ಯ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ವೇಗವಾಗಿ ವೃದ್ಧಿಗೊಳ್ಳುತ್ತಿವೆ. ಆದರೆ, ಇದು ವಿತ್ತೀಯ ನೀತಿಗೆ ಗಂಭೀರ ಅಪಾಯವನ್ನು ಉಂಟುಮಾಡಲಿದೆಯೇ? ಇದಕ್ಕೆ ಉತ್ತರ, ಡಿಜಿಟಲ್ ಕರೆನ್ಸಿ ಪರ್ಯಾಯ ವಿನಿಮಯ ಮಾಧ್ಯಮವಾಗಿ ಬೆಳೆಯುವುದರ ಮೇಲೆ ಅವಲಂಬಿಸಿದೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಗಮನ ಸೆಳೆದಂತೆ, ಕ್ರಿಪೆ್ಟೀಗಳನ್ನು ಸ್ಥಾಪಿತ ಉದ್ದೇಶಗಳಿಗಾಗಿಮಾತ್ರ ಬಳಸಿದರೆ, ಅಂದರೆ, ಕೇವಲ ದೇಶದೊಳಗಿನ ಆರ್ಥಿಕ ವಿನಿಮಯ ಮತ್ತು ರವಾನೆಗಳಿಗೆ ಅನ್ವಯಿಸಿದರೆ, ಇವುಗಳನ್ನು ತ್ವರಿತವಾಗಿ ಸ್ಥಳೀಯ ಅಧಿಕೃತ ಕರೆನ್ಸಿಗಳಿಗೆ ಪರಿವರ್ತಿಸಲು ಸುಲಭವಾಗುತ್ತದೆ ಹಾಗು ವಿತ್ತೀಯ ನೀತಿಗಳ ಮೇಲೆ ಇವುಗಳ ವ್ಯತಿರಿಕ್ತ ಪರಿಣಾಮಗಳು ಕೂಡ ಕಡಿಮೆಯಾಗುತ್ತದೆ.

ಇದಕ್ಕೆ ಬದಲಾಗಿ, ಕೇಂದ್ರೀಯ ಬ್ಯಾಂಕುಗಳ ನೀತಿ ರೂಪಿಸುವವರು, ಡಿಜಿಟಲ್ ಕರೆನ್ಸಿ, ಜಾಗತಿಕ ವಿತ್ತೀಯ ವ್ಯವಸ್ಥೆಗೆ ಹೆಚ್ಚು ತೀವ್ರವಾದ ಸವಾಲೊಡ್ಡಲಿದೆಯೆಂದು ಭಯಪಡುತ್ತಾರೆ. 2019ರ ಪತ್ರಿಕಾ ಲೇಖನವೊಂದರಲ್ಲಿ, ಬ್ರನ್ನರ್‍ಮೀರ್, ಜೇಮ್ಸ್ ಮತ್ತು ಲ್ಯಾಂಡೌ ವಿಶ್ಲೇಷಿಸಿದಂತೆ, ಜಾಗತಿಕ ಇಕಾಮರ್ಸ್ ಅಥವಾ ಸಾಮಾಜಿಕ ಜಾಲತಾಣಗಳನ್ನು ನಡೆಸುತ್ತಿರುವ ಬೃಹತ್ ಟೆಕ್ ಕಂಪನಿಗಳು ತಮ್ಮ ವೇದಿಕೆಗಳ ಜಾಗತಿಕ ಗ್ರಾಹಕರಿಗೆ ತಮ್ಮದೇ ಆದ ಡಿಜಿಟಲ್ ಕರೆನ್ಸಿಗಳನ್ನು ವಿತರಿಸುವ, ಅದನ್ನು ಖಾತೆಯನ್ನಾಗಿಸುವ ಮತ್ತು ವಿನಿಮಯ ಮಾಧ್ಯಮವನ್ನಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ. ಯಾಕೆಂದರೆ, ಡಿಜಿಟಲ್ ಕರೆನ್ಸಿಗಳು ಇತರ ಡೇಟಾ ಮತ್ತು ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟಿರುವುದರಿಂದ ಹಾಗೂ ಸ್ವಯಂಬಲವರ್ಧನೆಯ ಸಾಧ್ಯತೆಯು ಹೆಚ್ಚಿರುವುದರಿಂದ, ಸಹಜವಾಗಿ ಇದರ ಅಳವಡಿಕೆ ತ್ವರಿತವಾಗಿರುತ್ತದೆ. ಹೀಗಾದಲ್ಲಿ, ಡಿಜಿಟಲ್ ಕರೆನ್ಸಿಗಳು ದೊಡ್ಡ ಪ್ರಮಾಣದಲ್ಲಿ ವಹಿವಾಟು ಮಾಡಿ ಅಧಿಕೃತ ಕರೆನ್ಸಿಗಳೊಂದಿಗೆ ಸಕ್ರಿಯವಾಗಿ ಸ್ಪರ್ಧಿಸುವ ನಿರೀಕ್ಷೆಯಿದೆ.

ಈ ಮೇಲಿನ ಲೇಖನದಲ್ಲಿ ಸೂಚಿಸಿದಂತೆ, ಜಾಗತಿಕ ಆರ್ಥಿಕ ಚಟುವಟಿಕೆಯನ್ನು ಅಂತಿಮವಾಗಿ ಡಿಜಿಟಲ್ ಕರೆನ್ಸಿ ಪ್ರದೇಶಗಳಾಗಿ ಮರುಸಂಘಟಿಸಬಹುದಾಗಿದೆ. ಮುಂದೆ, ಅದು ರಾಷ್ಟ್ರೀಯ ಗಡಿಗಳನ್ನು ಮೀರಿ ತನ್ನ ಪ್ರಾಬಲ್ಯಗಳಿಸಲಿದೆ. ಅಲ್ಲದೆ, ಅವುಗಳ ಮಾಲೀಕರು ನೀಡಲಿರುವ ತಮ್ಮದೇ ಆದ ಡಿಜಿಟಲ್ ಕರೆನ್ಸಿ ಮತ್ತು ಜಾಲಗಳಿಗೆ ಅನ್ವಯಿಸುವಂತೆ ಖಾತೆಗಳನ್ನು ಹೊಂದಬಹುದಾಗಿದೆ. ಈ ಪ್ರಕಾರ, ಡಿಜಿಟಲ್ ಕರೆನ್ಸಿ ಪ್ರದೇಶಗಳ ಗಾತ್ರವು ವಿಸ್ತರಿಸಿದಂತೆ, ದೇಶಿಯ ಆರ್ಥಿಕತೆಯು ಕುಬ್ಜಗೊಳ್ಳಲಿದೆ.

ಈ ಬೆಳವಣಿಗೆಯು ವಿತ್ತೀಯ ನೀತಿಗೆ ಹೇಗೆ ಬೆದರಿಕೆ ಹಾಕುತ್ತದೆ? ಖಾಸಗಿಯಾಗಿ ನೀಡಲಾಗುವ ಈ ಗ್ಲೋಬಲ್ ಸ್ಟೇಬಲ್‍ಕಾಯಿನ್‍ಗಳುಅಧಿಕೃತ ಕರೆನ್ಸಿಗೆ ಜೋಡಿಸಲ್ಪಟ್ಟಿರುವುದರಿಂದ, ಈ ಡಿಜಿಟಲ್ ಕರೆನ್ಸಿ ಮಾಲೀಕರು ಸ್ವತಂತ್ರ ಹಣಕಾಸು ನೀತಿಯನ್ನು ರೂಪಿಸುವ ಅವಕಾಶ ಇನ್ನೂ ಲಭ್ಯವಿಲ್ಲ. ಆದರೆ, ಒಂದು ವೇಳೆ ಈ ಕರೆನ್ಸಿಗಳು ಕಾಲಾನಂತರದಲ್ಲಿ ವಿಶ್ವಾಸಾರ್ಹತೆ ಮತ್ತು ಸ್ವೀಕಾರವನ್ನು ಪಡೆದರೆ, ಅಧಿಕೃತ ಕರೆನ್ಸಿಗಳ ನಿಯಂತ್ರಣದಿಂದ ಮುಕ್ತಿ ಪಡೆದು, ತಮ್ಮದೇ ವಿತ್ತೀಯ ನೀತಿಯನ್ನು ಸೃಷ್ಟಿಸಲು ಉತ್ತೇಜನ ಸಿಗುತ್ತದೆ.

ಅಕಸ್ಮಾತ್ ಇದು ಸಂಭವಿಸಿದಲ್ಲಿ, ಸ್ವತಂತ್ರ ಹಣಕಾಸು ನೀತಿಯನ್ನು ರೂಪಿಸಲು ಖಾಸಗಿ ನೆಟ್‍ವರ್ಕ್ ಡಿಜಿಟಲ್ ಕರೆನ್ಸಿ ಮಾಲಕರಿಗೆ ಎಲ್ಲಾ ಆಯ್ಕೆಗಳು ಮುಕ್ತವಾಗಲಿವೆ. ದೇಶಿಯ ಆರ್ಥಿಕತೆಯ ದೃಷ್ಟಿಕೋನದಿಂದ, ಇದನ್ನು ಡಾಲರೈಸೇಶನ್ಎನ್ನಬಹುದು. ಆದರೆ, ಇಲ್ಲಿ ಅಮೆರಿಕಾದ ಸೆಂಟ್ರಲ್ ಬ್ಯಾಂಕುಗಳ ನಿಯಂತ್ರಣವಿರುವುದಿಲ್ಲ, ಬದಲಾಗಿ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಎಚ್ಚರಿಸಿದಂತೆ, ಲಾಭ ಗಳಿಕೆಯಲ್ಲಿ ಉತ್ಸಾಹ ತೋರುವ ಖಾಸಗಿ ಡಿಜಿಟಲ್ ಕರೆನ್ಸಿ ನೆಟ್‍ವರ್ಕ್ ಮಾಲೀಕರು ಸಂಪೂರ್ಣ ನಿಯಂತ್ರಣ ಸಾಧಿಸಲಿದ್ದಾರೆ. ಈ ಡಿಜಿಟಲ್ ಕರೆನ್ಸಿ ನೆಟ್‍ವರ್ಕ್ ಗಳಿಗೆ, ವಿತ್ತೀಯ ನೀತಿಯ ಏರುಪೇರುಗಳನ್ನು ನಿರ್ವಹಿಸಲು ಯಾವುದೇ ಬಾಹ್ಯ ಆರ್ಥಿಕ ಬೆಂಬಲವಿಲ್ಲದಿರುವುದರಿಂದ, ಅವುಗಳು ಪರಿಸ್ಥಿತಿಗೆ ಹೇಗೆ ಸ್ಪಂದಿಸುತ್ತವೆ ಎನ್ನುವುದಕ್ಕೆ ಅನುಗುಣವಾಗಿ, ದೇಶಗಳ ಆರ್ಥಿಕತೆಯ ಭವಿಷ್ಯವು ಖಾಸಗಿ ಸಂಸ್ಥೆಗಳ ಕೈ ಸೇರಲಿವೆ. ಈ ಪ್ರಕ್ರಿಯೆ, ವಿತ್ತೀಯ ನೀತಿಯ ಅಸ್ತಿತ್ವವಾದಕ್ಕೆ ಕಾರಣವಾಗಬಹುದು.

ದೇಶದ ಹಣಕಾಸಿನ ನೀತಿಯ ಮೇಲೆ ಇದರಿಂದಾಗಬಹುದಾದ ಪರಿಣಾಮವೇನು? ಇದರ ಪರಿಣಾಮ ಬಹುತೇಕ ನೇರವಾಗಿರುತ್ತದೆ. ಡಿಜಿಟಲ್ ಕರೆನ್ಸಿಯ ಪ್ರಭಾವ ಹೆಚ್ಚಿದಂತೆ, ಸರಕಾರಗಳ ಏಕಸ್ವಾಮ್ಯ ದಲ್ಲಿರುವ ಅಧಿಕೃತ ಕರೆನ್ಸಿಯ ಆದಾಯ ನಷ್ಟ ಉಂಟಾಗುತ್ತದೆ. ಇದರೊಂದಿಗೆ, ಕ್ರಿಪೆ್ಟೀಕರೆನ್ಸಿಗಳು ಆದಾಯ ತೆರಿಗೆ ವಂಚನೆಯ ಅವಕಾಶಗಳನ್ನು ಸುಗಮಗೊಳಿಸಬಹುದಾದ ಸಾಧ್ಯತೆ ಇರುವುದರಿಂದ, ದೇಶಗಳ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ಹೀಗೆ, ಕ್ರಿಪೆ್ಟೀಸ್‍ಗಳ ಪ್ರಾಬಲ್ಯ ಹೆಚ್ಚಿದಂತೆ, ವಿತ್ತೀಯ ನೀತಿಯ ನಿಯಂತ್ರಣ ಕಡಿಮೆಯಾಗುತ್ತದೆ. ಆದರೆ, ತದ್ವಿರುದ್ಧವಾಗಿ, ವಿತ್ತೀಯ ನೀತಿಯು ಆರ್ಥಿಕ ಆಘಾತಗಳಿಗೆ ಪ್ರತಿಕ್ರಿಯಿಸಬೇಕಾದ ಜವಾಬ್ದಾರಿಯು ಹೆಚ್ಚಾಗಲಿದೆ. ಇದು ಕೋವಿಡ್ ನಂತರದ ಜಗತ್ತಿನಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸಬಹುದು. ಈ ಸಾಂಕ್ರಾಮಿಕ ರೋಗವು ಪ್ರಪಂಚದಾದ್ಯಂತ ಅತ್ಯಧಿಕ ಆರ್ಥಿಕ ಹೊರೆಯನ್ನು ಸೃಷ್ಟಿಸಿದೆ. ವಿಶೇಷವಾಗಿ ಉದಯೋನ್ಮುಖ ಮಾರುಕಟ್ಟೆಗಳಲ್ಲಿ, ಸದ್ಯ ವಿತ್ತೀಯ ನೀತಿಯ ಕಾರ್ಯನಿರ್ವಹಣೆ ಅಗತ್ಯವಿರುವಾಗ, ಇದು ತನ್ನ ಪ್ರಸ್ತುತತೆ ಕಳೆದುಕೊಳ್ಳುವ ಸಾಧ್ಯತೆಯಿದೆ.

ಅಂತಿಮವಾಗಿ, ರೂಪಾಯಿಯ ಮೇಲೆ ಇದರ ಪರಿಣಾಮವೇನಾಗ ಬಹುದು? ಕ್ರಿಪೆ್ಟೀಗಳನ್ನು ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಸೀಮಿತ ಗೊಳಿಸಿದ್ದಲ್ಲಿ, ಹಾಗೂ ಅವುಗಳ ಬೇಡಿಕೆವಹಿವಾಟುಗಳನ್ನು ವಿನಿಮಯ ಅಥವಾ ಊಹಾತ್ಮಕ ಉದ್ದೇಶಗಳಿಗಾಗಿ ಮುಂದುವರಿಸಿದ್ದಲ್ಲಿ, ಅದು ಕೇವಲ ಬಂಡವಾಳದ ಹೊರಹರಿವಿನಂತೆ ಕಾರ್ಯನಿರ್ವಹಿಸುತ್ತದೆ. ಪ್ರತಿಯಾಗಿ, ಕ್ರಿಪೆ್ಟೀಸ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ವ್ಯವಹಾರ ಪ್ರಾರಂಭಿಸಿದರೆ, ಅವು ಬಂಡವಾಳದ ಒಳಹರಿವನ್ನು ಪ್ರೇರೇಪಿಸುತ್ತವೆ. ಈ ತದ್ವಿರುದ್ಧಗಳು ಬಂಡವಾಳ ಖಾತೆಯ ಅಸ್ಥಿರತೆಯನ್ನು ಹೆಚ್ಚಿಸುತ್ತದೆ. ವಿಶೇಷವಾಗಿ, ಉದಯೋನ್ಮುಖ ಮಾರುಕಟ್ಟೆಗಳ ವಿತ್ತೀಯ ನೀತಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.

ಇದು ಕರೆನ್ಸಿ ಮಾರುಕಟ್ಟೆಯ ಮೇಲೂ ನೇರವಾಗಿ ಪರಿಣಾಮ ಬೀರಲಿದೆ. 2021 ರ ಜಾಗತಿಕ ಹಣಕಾಸು ಸ್ಥಿರತೆಯ ವರದಿಯಲ್ಲಿ ಹೇಳಿರುವಂತೆ, ಸ್ಥಳೀಯ ರೂಪಾಯಿಬಿಟ್‍ಕಾಯಿನ್ ಮಾರುಕಟ್ಟೆ, ಡಾಲರ್ಬಿಟ್‍ಕಾಯಿನ್ ಮಾರುಕಟ್ಟೆ ಮತ್ತು ರೂಪಾಯಿಡಾಲರ್ ಮಾರುಕಟ್ಟೆಯ ನಡುವೆ ತ್ರಿಕೋನ ಸಂಪರ್ಕ ಕಲ್ಪಿಸಬೇಕಾದ ಅಗತ್ಯವಿದೆ. ಪರಿಣಾಮವಾಗಿ, ರೂಪಾಯಿಬಿಟ್‍ಕಾಯಿನ್ ಮಾರುಕಟ್ಟೆಗಳಲ್ಲಿನ ಅಸ್ಥಿರತೆಗಳು, ಸಹಜವಾಗಿ ರೂಪಾಯಿಡಾಲರ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿ ಸಮಸ್ಯೆಗಳನ್ನು ತೆರವುಗೊಳಿಸಲು ಸಹಾಯಕವಾಗುತ್ತದೆ.

ತಜ್ಞರು ಹೇಳುವಂತೆ, ಆರ್ಥಿಕತೆಯ ಮೇಲೆ ಬೃಹತ್ ಪರಿಣಾಮ ಉಂಟುಮಾಡಬಲ್ಲ ಕ್ರಿಪೆ್ಟೀ ಅಳವಡಿಕೆಯು ಬಹಳ ಸಂಕೀರ್ಣವಾಗಿದೆ. ಸದ್ಯಕ್ಕೆ, ಕ್ರಿಪೆ್ಟೀಸ್‍ಗಳು ಊಹಾತ್ಮಕ ಸ್ವತ್ತುಗಳಾಗಿ ಜನಸಾಮಾನ್ಯರಿಗೆ ಆಕರ್ಷಣೀಯವಾಗಿ ಕಾಣಿಸುತ್ತಿದೆ. ಆದರೆ, ಈ ಡಿಜಿಟಲ್ ಕರೆನ್ಸಿಗಳು ಭವಿಷ್ಯದಲ್ಲಿ ಕಾರ್ಯಸಾಧಕ ವಿನಿಮಯ ಮಾಧ್ಯಮಗಳಾಗಿ ಪರಿವರ್ತನೆಯಾದಾಗ, ನಿಜವಾದ ಸವಾಲುಗಳು ಎದುರಾಗಲಿವೆ. ಇವುಗಳನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಪೂರಕ ಆರ್ಥಿಕ ನೀತಿಗಳನ್ನು ಸಿದ್ಧಪಡಿಸುವ ಅಗತ್ಯವಿದೆ.

*ಲೇಖಕರು ಜೆಪಿ ಮೋರ್ಗಾನ್ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಭಾರತದ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂಲ: ದಿ ಇಂಡಿಯನ್ ಎಕ್ಸ್‍ಪ್ರೆಸ್ ಅನು: ಡಾ.ಜ್ಯೋತಿ

Leave a Reply

Your email address will not be published.