ಕ್ರಿಮಿನಲ್ ಹಿನ್ನೆಲೆಯ ರಾಜಕಾರಣಿ ಆಯ್ಕೆ ಮಾಡಿದವರಿಗೆ ಯಾವ ಶಿಕ್ಷೆ?

ಚುನಾವಣೆಯಲ್ಲಿ ಕ್ರಿಮಿನಲ್ ಅಪರಾಧದ ಹಿನ್ನೆಲೆಯವರನ್ನು ತಡೆಯುವಲ್ಲಿ ಮತದಾರರ ಪಾತ್ರವು ನ್ಯಾಯಾಲಯ ಮತ್ತು ಸರ್ಕಾರದಷ್ಟೇ ಮಹತ್ವದ್ದು ಮತ್ತು ನಿರ್ಣಾಯಕವೂ ಕೂಡಾ.

ರಮಾನಂದ ಶರ್ಮಾ

ರಾಜಕಾರಣದಲ್ಲಿನ ಅಪರಾಧೀಕರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದೇಶದ ಸುಪ್ರೀಂ ಕೋರ್ಟು ಇನ್ನೊಮ್ಮೆ ಬಲವಾಗಿ ಚಾಟಿಯನ್ನು ಬೀಸಿದೆ, ಛೀಮಾರಿ ಹಾಕಿದೆ ಮತ್ತು ಸಂಬಂಧಪಟ್ಟ ರಾಜಕೀಯ ಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಆರ್.ಎಫ್.ನಾರಿಮನ್ ಮತ್ತು ಬಿ.ಆರ್.ಗವಾಯಿ ವಿಭಾಗೀಯ ಪೀಠವು ಎರಡು ಮಹತ್ವದ ಅದೇಶ ನೀಡಿದ್ದು, ದೇಶಾದ್ಯಂತ ಮುಖ್ಯವಾಗಿ ರಾಜಕೀಯ ವಲಯದಲ್ಲಿ ಶಾಕ್ ಮತ್ತು ಸಂಚಲನ ಮೂಡಿಸಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, 13.02.2020 ರಂದು ಸುಪ್ರೀಮ್ ಕೋರ್ಟು ರಾಜಕೀಯ ಪಕ್ಷಗಳು ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಎರಡು ದಿನಗಳೊಳಗಾಗಿ ಅವರ ಕ್ರಿಮಿನಲ್ ಪ್ರಕರಣಗಳ ಪೂರ್ವಾಪರಗಳ ಸಂಪೂರ್ಣ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಎಂದು ತಾಕೀತು ಮಾಡಿತ್ತು. ತಮ್ಮ ಕ್ರಿಮಿನಲ್ ಹಿನ್ನೆಲೆಯ ಬಗೆಗೆ 48 ಗಂಟೆಗಳು ಅಥವಾ ನಾಮಪತ್ರ ಸಲ್ಲಿಸುವ ಎರಡುವಾರ ಮೊದಲು ಪ್ರಕಟಿಸಬೇಕು ಎಂದು ಆದೇಶ ನೀಡಿತ್ತು. ಅಭ್ಯರ್ಥಿಗಳಾಗಲೀ ಅಥವಾ ರಾಜಕೀಯ ಪಕ್ಷಗಳಾಗಲಿ ಈ ಆದೇಶಕ್ಕೆ ಕವಡೆ ಕಿಮ್ಮತ್ತು ನೀಡದಿರುವುದರಿಂದ ನ್ಯಾಯಾಂಗ ನಿಂದನೆ ಅಡಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಾಗಿತ್ತು.

ಸುಪ್ರೀಮ್ ಕೋರ್ಟಿನ ವಿಭಾಗೀಯ ಪೀಠ ರಾಜಕೀಯ ಪಕ್ಷಗಳ ಜಾರಿಕೊಳ್ಳುವ ನಿಲುವು, ತನ್ನ ಆದೇಶದ ಬಗೆಗೆ ನಿರ್ಲಕ್ಷ್ಯ, ಕ್ಯಾಜುವಲ್ ಅಪೆ್ರೀಚ್ ಮತ್ತು ಅಸಡ್ಡೆಯನ್ನು ಗಂಭೀರವಾಗಿ ಪರಿಣಮಿಸಿದೆ. ತನ್ನ ಹಿಂದಿನ ಆದೇಶವನ್ನು ಪಾಲಿಸದ 8 ರಾಜಕೀಯ ಪಕ್ಷಗಳಿಗೆ 1 ಲಕ್ಷದಿಂದ 5 ಲಕ್ಷದ ವರೆಗೆ ದಂಡ ವಿಧಿಸಿದ್ದಲ್ಲದೇ, ತನ್ನ ಆದೇಶವನ್ನು ಪರಿಷ್ಕರಣೆ ಮಾಡಿ ಅಭ್ಯರ್ಥಿ ಆಯ್ಕೆ ಮಾಡಿ 48 ಗಂಟೆಯೊಳಗೆ ಅಂಥವರ ಕ್ರಿಮಿನಲ್ ಹಿನ್ನೆಲೆಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಮತ್ತು ಪಕ್ಷದ ವೆಬ್‍ಸೈಟ್‍ನಲ್ಲಿ ಮತ್ತು ಎರಡು ಪತ್ರಿಕೆಗಳಲ್ಲಿ ಅದನ್ನು ಪ್ರಕಟಿಸಬೇಕು ಎಂದು ಆದೇಶಿಸಿದೆ. ನ್ಯಾಯಾಲಯದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಮ್ ಕೋರ್ಟು, ರಾಜಕೀಯದ ಮೊಗಸಾಲೆಯಲ್ಲಿ ಅಪರಾಧಿಗಳು, ಅಪರಾಧದ ಹಿನ್ನೆಲೆಯವರು ಓಡಾಡಿಕೊಂಡಿರುವ ಕೆಟ್ಟ ಪದ್ಧತಿಗೆ ಮಂಗಳಹಾಡುವ ಅನಿವಾರ್ಯತೆಯನ್ನು ಮತ್ತು ಇಚ್ಛೆಯನ್ನು ವ್ಯಕ್ತ ಮಾಡಿದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಚುನಾವಣಾ ಆಯೋಗವು ತಪ್ಪಿತಸ್ಥ ಪಕ್ಷಗಳಿಗೆ ಅವುಗಳ ಚುನಾವಣಾ ಚಿಹ್ನೆಯನ್ನೆ ರದ್ದು ಗೊಳಿಸುವ ಬಗೆಗೆ ಎಚ್ಚರಿಸಿದ್ದು, ಎರಡು ಪಕ್ಷಗಳು ಸುಪ್ರೀಮ್ ಕೋರ್ಟಗೆ ಬೇೀಷರತ್ ಕ್ಷಮೆ ಯಾಚಿಸಿದ್ದವು. ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ವಿವರಗಳು ಮತ್ತು ಮಾಹಿತಿಗಳು ಮತದಾರರಿಗೆ ಸುಲಭವಾಗಿ ನಿಲುಕುವಂತೆ ಚುನಾವಣಾ ಯಾಪ್ (ಂಚಿಠಿ) ಅಭಿವೃದ್ಧಿ ಪಡಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಮ್ ಕೋರ್ಟು ನಿರ್ದೇಶಿಸಿದೆ ಮತ್ತು ತನ್ನ 72 ಪುಟಗಳ ತೀರ್ಪಿನಲ್ಲಿ ಚುನಾವಣಾ ಆಯೋಗ ವಿಳಂಬವಿಲ್ಲದೇ ಈ ನಿರ್ದೇಶನಗಳ ಉಲ್ಲಂಘನೆಯನ್ನು ನ್ಯಾಯಾಲಯದ ಗಮನಕ್ಕೆ ತರುವಂತೆ ಹೇಳಿದೆ. ರಾಜಕಾರಣದಲ್ಲಿ ಏನು ಮಾಡಿದರೂ ನಡೆಯುತ್ತದೆ ಎನ್ನುವುದನ್ನು ಸಹಿಸಲು ಅಸಾಧ್ಯ ಎಂದು ಅಭಿಪ್ರಾಯ ಪಟ್ಟಿದೆ. ಹಾಗೆಯೇ ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹೈಕೋರ್ಟ್ ಅನುಮತಿ ಇಲ್ಲದೇ ಕೈಬಿಡುವಂತಿಲ್ಲ ಎಂದೂ ಆದೇಶಿಸಿದೆ. ತನ್ನ 2020 ಫೆಬ್ರವರಿ 13ರ ತೀರ್ಪನ್ನು ನೆನಪಿಸುತ್ತಾ, ಕ್ರಿಮಿನಲ್ ಹಿನ್ನೆಲೆಯ ಹೊರತಾಗಿಯೂ ಅಂಥವರನ್ನು ಹೇಗೆ ಆಯ್ಕೆ ಮಾಡಲಾಯಿತು ಎನ್ನುವುದನ್ನು ರಾಜಕೀಯ ಪಕ್ಷಗಳು ವಿವರಿಸುವಂತೆ ಕೇಳಿದೆ.

ಬೆಚ್ಚಿ ಬೀಳಿಸಿದ ಸಂಖ್ಯೆ

ರಾಜಕಾರಣದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಏರುತ್ತಿರುವುದನ್ನು ನ್ಯಾಯಾಲಯ ಗಂಭೀರವಾಗಿ ಗಮನಿಸಿದ್ದು, ಇದು ಈ ನಿರ್ದೇಶನದ ಹಿಂದೆ ಇದೆ ಎಂದು ಹೇಳಲಾಗುತ್ತದೆ. ಜಾಲತಾಣ ಮತ್ತು ಮಾಧ್ಯಮಗಳ ಮಾಹಿತಿಯ ಪ್ರಕಾರ 2004 ರಲ್ಲಿ 24% ಸಂಸದರರಿಗೆ ಅಪರಾಧ ಹಿನ್ನೆಲೆ ಇದ್ದರೆ, 2009ರಲ್ಲಿ ಇದು 30% ಇತ್ತು. 2014ರಲ್ಲಿ 34% ಗೆ ಏರಿದರೆ, 2019ರಲ್ಲಿ ಇದು 43% ಇತ್ತು. ಇವು ವಿಚಾರಣೆಯ ವಿವಿಧ ಹಂತಗಳಲ್ಲಿ ಇವೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಒಟ್ಟೂ ಸಂಸದರು ಮತ್ತು ಶಾಸಕರ ಸಂಖ್ಯೆ 4896 ಇದ್ದು ಅದರಲ್ಲಿ 1765 ಸದಸ್ಯರು 3045 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದು ಒಟ್ಟೂ ಸದಸ್ಯರ ಸಂಖ್ಯೆಯ 26% ಎಂದು ಹೇಳಲಾಗುತ್ತದೆ.

ಇದರಲ್ಲಿ 116 ಸಂಸದರು ಭಾಜಪದವರಿದ್ದರೆ, 29 ಸಂಸದರು ಕಾಂಗ್ರೆಸ್ ಪಕ್ಷದವರು. ಅತಿ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಮತ್ತು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ತಮಿಳುನಾಡು, ಬಿಹಾರ ಮತ್ತು ಪಶ್ಚಿಮ ಬಂಗಾಲ ರಾಜ್ಯಗಳು ಇವೆಯಂತೆ. ಕರ್ನಾಟಕದಲ್ಲಿ 82 ಸದಸ್ಯರ ವಿರುದ್ಧ ಪ್ರಕರಣಗಳು ಇದ್ದು, 137 ಪ್ರಕರಣಗಳು ಬಾಕಿ ಇವೆಯಂತೆ. ಇಂಥ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ತುಂಬಾ ಕಡಿಮೆ ಇದ್ದು, ಇದು ಸುಮಾರು 6% ಇದೆ ಎಂದು ಅಂದಾಜು ಮಾಡಲಾಗಿದೆ. ಅತ್ಯಾಚಾರ ಮತ್ತು ಮರ್ಡರ್ ಅಂಥ ಪ್ರಕರಣಗಳೂ ಬಾಕಿ ಇವೆ.

ನಮ್ಮ ಕಾನೂನು ವ್ಯವಸ್ಥೆಯಲ್ಲಿ ಅಪರಾಧವು, ನ್ಯಾಯಾಲಯದಲ್ಲಿ ಸಾಬೀತು ಆಗುವವರೆಗೆ, ಅವನು ಅಥವಾ ಅವಳು ನಿರಪರಾಧಿ ಎಂದೇ ಭಾವಿಸಲಾಗುತ್ತದೆ. ಚಾಣಾಕ್ಷ ರಾಜಕಾರಣಿಗಳು ಈ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಪ್ರಕರಣದ ತಾರ್ಕಿಕ ಅಂತ್ಯವನ್ನು ಮುಂದೂಡಿ ತಮ್ಮ ಚುನಾವಣಾ ರಾಜಕೀಯವನ್ನು ಅಡೆ ತಡೆ ಇಲ್ಲದೇ ಅನುಭವಿಸುತ್ತಾರೆ. ಅಕಸ್ಮಾತ್ ಆರೋಪ ಸಾಬೀತಾಗಿ ಎರಡು ಅಥವಾ ಮೂರು ವರ್ಷ ಜೈಲು ಶಿಕ್ಷೆಯಾದರೆ ಶಾಸಕರು ಅಥವಾ ಸಂಸದರು ತಮ್ಮ ಸದಸ್ಯತ್ವನ್ನು ಕಳೆದುಕೊಳ್ಳುತ್ತಾರೆ. ಈ ನಿಬಂಧನೆ, ಪ್ರಕರಣ ತಾರ್ಕಿಕ ಅಂತ್ಯ ಕಾಣುವವರೆಗೆ ಅಪರಾಧಿ ಎಂದಿದ್ದರೆ ರಾಜಕಾರಣದ ಅಪರಾಧೀಕರಣ ಈ ಮಟ್ಟವನ್ನು ತಲುಪುತ್ತಿರಲಿಲ್ಲ ಎನ್ನುವ ಕೆಲವು ಕಾನೂನು ಪಂಡಿತರ ಅಭಿಪ್ರಾಯದಲ್ಲಿ ಅರ್ಥವಿಲ್ಲದಿಲ್ಲ. ಹಾಗೆಯೇ ಇಂಥ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುತ್ತಿದ್ದವು.

ಕ್ರಿಮಿನಲ್ ಅಪರಾಧದ ಹಿನ್ನೆಲೆಯುಳ್ಳವರನ್ನು ಚುನಾವಣಾ ಕಣದಿಂದ ಹೊರಗಿಡಲು ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಲು ಸರ್ಕಾರದಿಂದ ನಿರೀಕ್ಷಿತ ಪ್ರತಿಕ್ರಿಯೆ ಬರಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ಯಾರೂ ಮುಂದಾಗುವುದಿಲ್ಲ. ಇದು ತಮ್ಮ ಸಂಬಳ ಸೌಲಭ್ಯವನ್ನು ಹೆಚ್ಚಿಸಿಕೊಳ್ಳುವ ಕ್ರಮವಾಗಿರದೇ ಸುಮಾರು 43% ಸದಸ್ಯರ ರಾಜಕೀಯ ಭವಿಷ್ಯದ ಚರಮಗೀತೆಯನ್ನು ಬರೆಯುವ ಕ್ರಮವಾಗಿದ್ದು, ಅವರಿಂದ ಸ್ಪಂದನೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ.

ರಾಜಕಾರಣದ ಅಪರಾಧೀಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಮ್ ಕೋರ್ಟು ಇದನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗೆಗೆ ಸಾರ್ವತ್ರಿಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಆದರೆ, ಜನರು ಚಿಕಿತ್ಸೆಗಿಂತ ನಿಯಂತ್ರಣ ಪರಿಣಾಮಕಾರಿ ಎಂದು ಭಾವಿಸುತ್ತಿದ್ದು, ಕ್ರಿಮಿನಲ್ ಹಿನ್ನೆಲೆಯವರು ಚುನಾವಣಾ ಅಖಾಡಕ್ಕೆ ಇಳಿಯದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಬಯಸುತ್ತಿದ್ದಾರೆ. ಒಮ್ಮೆ ಚುನಾವಣಾ ಅಖಾಡವನ್ನು ಪ್ರವೇಶಿಸಿದರೆ, ಅವರು ಆಡುವ ಆಟವೇ ಬೇರೆ ಇರುತ್ತದೆ ಮತ್ತು ವ್ಯವಸ್ಥೆಯನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಾರೆ. ದಾಖಲಾದ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವವರೆಗೆ, ಚುನಾವಣೆಯಲ್ಲಿ ಸ್ಪರ್ಧಿಸಲಾಗದು ಎನ್ನುವ ಸರಳ ಕಾನೂನು ಮಾಡಿದರೆ ಈ ವ್ಯವಸ್ಥೆಯನ್ನು ಸರಿದಾರಿಗೆ ಹತ್ತಿಸಬಹುದು ಮತ್ತು ಕ್ರಿಮಿನಲ್‍ಗಳನ್ನು ಮಟ್ಟ ಹಾಕಬಹುದು..

ಇಂಥ ರಾಜಕಾರಣಕ್ಕೆ ಯಾರು ಕಾರಣ?

ಸಂಸತ್ ಕಾನೂನು ಮಾಡಬಹುದು, ನ್ಯಾಯಾಲಯಗಳು ಅವರನ್ನು ನಿರ್ಬಂಧಿಸಬಹುದು. ಇವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಟಿಕೆಟ್ ನೀಡಿ ಅವಕಾಶ ಕಲ್ಪಿಸಬಹುದು. ಇವರಿಗೆ ಟಿಕೆಟ್ ನೀಡುವುದರ ಹಿಂದೆ ಈ ಪಕ್ಷಗಳಿಗೆ, ಅವರ ಬೆಂಬಲಿಗರಿಗೆ ಅವರದೇ ಆದ ಕಾರಣಗಳು ಇರುತ್ತವೆ. ಅದರೆ, ಮತದಾರ ಮನಸ್ಸು ಮಾಡಿದರೆ ಇವು ಯಾವುದೂ ಅಗತ್ಯವಿಲ್ಲ. ಅವರಿಗೆ ಮತನೀಡಿ ಆರಿಸಿ ಕಳಿಸುವವರು ಅಥವಾ ತಿರಸ್ಕರಿಸುವವರು ಮತದಾರರೇ ಎನ್ನುವುದನ್ನು ಮರೆಮಾಚಲಾಗದು. ಈ ದಿನಗಳಲ್ಲಿ ಬಹುತೇಕ ಪ್ರತಿಯೊಬ್ಬ ಮತದಾರನಿಗೆ ತನ್ನ ಕ್ಷೇತ್ರದಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳ ಭೂತ, ವರ್ತಮಾನ, ಇತಿಹಾಸ ಮತ್ತು ಕ್ರಿಮಿನಲ್ ಹಿನ್ನೆಲೆಯ ಪೂರ್ವಾಪರ ಸಂಪೂರ್ಣವಾಗಿ ತಿಳಿದಿರುತ್ತದೆ. ಆದರೂ, ಅಂಥವರನ್ನೇ ಪ್ರಚಂಡ ಬಹುಮತದಿಂದ ಆರಿಸಿ ಕಳಿಸಿದ ನೂರಾರು ಉದಾಹರಣೆಗಳು ಇರುವಾಗ, ಈ ಬೆಳವಣಿಗೆಗೆ ಯಾರನ್ನು ದೂರುವುದು?

ಜೈಲಿನಿಂದಲೇ ಚುನಾವಣೆ ಎದುರಿಸಿ, ಮತದಾರರನ್ನು ಭೇಟಿಮಾಡದೇ, ಅವರಿಗೆ ಮುಖ ತೋರಿಸದೇ, ಪ್ರಜ್ಞಾವಂತರನ್ನು ದಂಗು ಬಡಿಸಿ, ಚುನಾವಣಾ ವ್ಯವಸ್ಥೆಗೇ ಸಡ್ಡು ಹೊಡೆದು ಪ್ರಚಂಡ ಬಹುಮತದಿಂದ ಆರಿಸಿ ಬಂದಿರುವ ಉದಾಹರಣೆಗಳು ಕಣ್ಮುಂದೆ ಇರುವಾಗ ಮತದಾರರೇ ಅಪರಾಧಿಗಳು ಎನ್ನಬಹುದಲ್ಲವೇ? ಕ್ರಿಮಿನಲ್ ಹಿನ್ನೆಲೆಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಪಕ್ಷವನ್ನು, ಅವರಿಗೆ ಬೆಂಬಲ ನೀಡಿದವರನ್ನು ಈ ಕಾನೂನು ಅಥವಾ ನ್ಯಾಯಾಲಯದ ಆದೇಶದ ಅನ್ವಯ ಶಿಕ್ಷಿಸಬಹುದು. ಆದರೆ, ಅವರನ್ನು ಶಾಸನಸಭೆಯಲ್ಲೋ, ಸಂಸತ್ತಿನಲ್ಲೋ ತಮ್ಮ ಅಮೂಲ್ಯ ಮತದಿಂದ ಪ್ರತಿಷ್ಠಾಪಿಸಿದವರಿಗೆ ಶಿಕ್ಷೆ ಏಕಿಲ್ಲ? ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳುವವರಿಗೆ ಏನೆನ್ನಬೇಕು? ಜೈಲಿನಿಂದ ನಾಮಪತ್ರ ಸಲ್ಲಿಸಿ, ಜೈಲಿನಿಂದಲೇ ಚುನಾವಣೆಯಲ್ಲಿ ಹೋರಾಡಿ ಜಯಗಳಿಸಿದಾಗ ಅವರ ಬಗೆಗೆ ಹೆಮ್ಮೆ ಪಟ್ಟು ಕೊಂಡಾಡಿ ಸಂಭ್ರಮಿಸಿದವರು ನಮ್ಮಲ್ಲಿ ಇಲ್ಲವೇ? ಅವರು ಗೆದ್ದುಬಂದು ಬೀಗಿದಾಗ ಅವರನ್ನು ಬಾರಾ ಖೂನ್ ಮಾಫ್ಕೆಟೆಗರಿಗೆ ಸೇರಿಸುವವರು ಯಾರು?

ಕ್ರಿಮಿನಲ್ ಹಿನ್ನೆಲೆಯವರ ವಿರುದ್ಧ ಮೊಳಕೆಯೊಡೆಯುತ್ತಿರುವ ಆಕ್ರೋಶ ಸಾಧನಾ ಶೂನ್ಯರಬಗೆಗೂ ವ್ಯಕ್ತವಾಗುವ ಕಾಲ ಸನ್ನಿಹಿತವಾಗಿದೆ. ತಮ್ಮ ಅಧಿಕಾರ ಅವಧಿಯಲ್ಲಿ ಏನನ್ನೂ ಮಾಡದೇ ಯಾವುದೋ ಪಕ್ಷದ ಹೆಸರು, ಯಾವುದೋ ನಾಯಕರ ಭಾವಚಿತ್ರವನ್ನು ತೋರಿಸಿ ಚುನಾವಣೆಯಲ್ಲಿ ಗೆಲ್ಲುವ ಸಾಧನಾ ಶೂನ್ಯರು ಕ್ರಿಮಿನಲ್ ಹಿನ್ನೆಲೆಯವರಿಗಿಂತ ಭಿನ್ನರಲ್ಲ. ಇವರು ಸಾಧನೆ ಮಾಡಿತೋರಿಸುವವರ ಅವಕಾಶವನ್ನು ಕಿತ್ತು ತೆಗೆಯುವದರೊಂದಿಗೆ, ತಮ್ಮ ಮತಕ್ಷೇತ್ರದ ಅಭಿವೃದ್ಧಿಯ ಗಡಿಯಾರವನ್ನು ಹಿಂದೆ ತಿರುಗಿಸುತ್ತಾರೆ ಮತ್ತು ತೆರಿಗೆದಾರನ ತೆರಿಗೆಯನ್ನು ಪೆೀಲು ಮಾಡುತ್ತಾರೆ.

ಗಣನೀಯ ಪ್ರಮಾಣದ ಜನಪ್ರತಿನಿಧಿಗಳು ಕ್ರಿಮಿನಲ್ ಅಪರಾಧದ ಹಿನ್ನೆಲೆಯ ಪಟ್ಟಿಯಲ್ಲಿ ಇರುವುದರಿಂದ, ಈ ನಿಟ್ಟಿನಲ್ಲಿ ಸರ್ಕಾರ ಏನಾದರೂ ಕ್ರಮ ತೆಗೆದುಕೊಂಡರೆ, ಅವರೇ ಹಿಟ್ ವಿಕೆಟ್ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸರ್ಕಾರ ಇವರನ್ನು ಚುನಾವಣಾ ಕಣದಿಂದ ಹೊರಗಿಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಿಲ್ಲ ಎಂದು ರಾಜಕೀಯದ ಎಳೆಗೂಸುಗಳೂ ಹೇಳುತ್ತಾರೆ. ಆಕಸ್ಮಾತ್ ಪ್ರಯತ್ನವಾದರೂ ಅದರಲ್ಲಿ ನುಣುಚಿಕೊಳ್ಳುವ ಒಳದಾರಿಗಳನ್ನು ಇಟ್ಟೇ ಇಡುತ್ತಾರೆ. ಅಂತೆಯೇ ನಮ್ಮ ರಾಜಕೀಯ ವ್ಯವಸ್ಥೆ ಅಪರಾಧಿಗಳ ಒಡ್ಡೋಲಗ ಆಗದಂತೆ ತಡೆಯುವ ಹೆಚ್ಚಿನ ಜವಾಬ್ದಾರಿ ಅಂತಿಮವಾಗಿ ಪ್ರಜೆಗಳೇ, ಮತದಾರರೇ ಪ್ರಭುಗಳಾಗಿರುವ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿಯೇ ಅಡಕವಾಗಿದೆ. ಅವರೇ ಮಾರ್ಗದರ್ಶಕರು. ಯಾರನ್ನು ಕೂರಿಸಬೇಕು, ಯಾರನ್ನು ಕಿತ್ತೆಸೆಯಬೇಕು ಎನ್ನುವುದು ಅವರ ಕೈಯಲ್ಲಿ ಇದೆ. ಕಾನೂನಿಗಿಂತ, ಇವರೇ ಹೆಚ್ಚು ಶಕ್ತಿಶಾಲಿಗಳು ಮತ್ತು ಪರಿಣಾಮಕಾರಿಗಳು ಕೂಡಾ.

Leave a Reply

Your email address will not be published.