ಗಂಡಾಳ್ವಿಕೆ ಮೌಲ್ಯಗಳನ್ನು ಸಮರ್ಥಿಸುವ ಗುರುಪ್ರಸಾದರ ‘ಕಾಯಾ’

ಕಾದಂಬರಿಕಾರರು ಸ್ವತಃ ವೈದ್ಯರು. ಅವರಿಗೆ ವ್ಯದ್ಯಕೀಯ ಲೋಕದ ಅಪಾರವಾದ ಜ್ಞಾನ ಹಾಗೂ ಪಾಂಡಿತ್ಯ ಇದ್ದಿರಬಹುದು. ಆದರೆ ಅದನ್ನು ಕಾದಂಬರಿ ಎಂಬ ಸೃಜನಶೀಲ ಪ್ರಕಾರದೊಳಗೆ ಭಾಷಿಕವಾಗಿ ಹೆಣೆಯುವ, ಸಂಯೋಜಿಸುವ, ಕಲಾತ್ಮಕಗೊಳಿಸುವ ಹಾಗೂ ಪಾತ್ರಗಳ ಗುಣಸ್ವಭಾವಗಳು ಒಡೆದು ಕಾಣುವಂತೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಕನ್ನಡ ಕಾದಂಬರಿ ಪರಂಪರೆಯಲ್ಲಿ ಈ ‘ಕಾಯಾ’ ಅತ್ಯಂತ ಸಾಧಾರಣ ಮಟ್ಟದ ಕೃತಿಯಾಗಿ ನಿಲ್ಲುತ್ತದೆ.

ಸುಭಾಷ್ ರಾಜಮಾನೆ

ಕಾಯಾ

(ಕಾದಂಬರಿ)

ಗುರುಪ್ರಸಾದ ಕಾಗಿನೆಲೆ

ವರ್ಷ: 2021, ಪುಟ: 344

ದರ: 350

ಪ್ರ: ಅಂಕಿತ ಪುಸ್ತಕ

ಈಚೆಗೆ ಪ್ರಕಟವಾಗಿರುವ ಗುರುಪ್ರಸಾದ ಕಾಗಿನೆಲೆಯವರ ‘ಕಾಯಾ’ ಕಾದಂಬರಿಯನ್ನು ಓದಿದೆ. ಸೃಜನಶೀಲ ಕೃತಿಗಳನ್ನು ಹಲವು ದೃಷ್ಟಿಕೋನಗಳಿಂದ ಓದಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಮೂರು ವಿಧಾನಗಳನ್ನು ಗುರುತಿಸಬಹುದು. 1. ಸಾಹಿತ್ಯ ಕೃತಿಯೊಂದರ ಕಟ್ಟುವಿಕೆಯ ಜೊತೆಯಲ್ಲಿಯೇ ಅದರ ನಿಲುವುಗಳು ಕೂಡ ತಳಕು ಹಾಕಿಕೊಂಡಿರುತ್ತವೆ. ಕಾದಂಬರಿಯ ಒಡಲೊಳಗಿನಿಂದಲೇ ಅದನ್ನು ಬಗೆದು ನೋಡುವ ಕ್ರಮವಾಗಿರುತ್ತದೆ. 2. ಓದುಗರಿಗೆ ಕಾದಂಬರಿಯು ನೀಡುವ ಅನುಭವದ ನೆಲೆಯಿಂದ ನೋಡುವ ಕ್ರಮವು ಕೂಡ ಚಾಲ್ತಿಯಲ್ಲಿದೆ. ಇದರ ಮೂಲಕ ಓದುಗರ ಅಥವಾ ವಿಮರ್ಶಕರ ನಿಲುವುಗಳು ವ್ಯಕ್ತವಾಗುತ್ತವೆ. 3. ಇದರಾಚೆಗೆ ಕೃತಿಯೊಂದು ತನ್ನ ಕಾಲಘಟ್ಟವನ್ನು ಮೀರಿ ಲೋಕದೊಂದಿಗೆ ಯಾವ ಬಗೆಯ ನಂಟನ್ನು ಹೊಂದಿದೆ ಎಂಬುದನ್ನು ಕೂಡ ನೋಡಲು ಸಾಧ್ಯವಿರುತ್ತದೆ. ಇಂತಹ ಒತ್ತಾಸೆಗಳಿಗೆ ಆ ಕೃತಿಯು ಇಂಬು ನೀಡುತ್ತಿದೆಯೇ ಎನ್ನುವ ಪ್ರಶ್ನೆಗಳು ಅದಕ್ಕೆ ಲಗತ್ತಾಗಿರುತ್ತವೆ. ಈ ಹಿನ್ನೆಲೆಯಲ್ಲಿ ‘ಕಾಯಾ’ ಕಾದಂಬರಿಯನ್ನು ಗಮನಿಸಬಹುದಾಗಿದೆ.

ನ್ಯೂಯಾರ್ಕ್‍ನಲ್ಲಿ ವಾಸವಾಗಿರುವ ಕರ್ನಾಟಕದ ಡಾ.ಭೀಮ್ ಮಲೀಕ್ ಎಂಬ ಪ್ಲಾಸ್ಟಿಕ್ ಸರ್ಜನ್‍ಗೆ ಲೀಸಾ ಸಾಲಿಂಜರ್ ಲೀಗಲ್ ನೋಟಿಸನ್ನು ಕಳಿಸಿರುತ್ತಾಳೆ. ಮಲೀಕನಿಗೆ ಬಂದು ಅಪ್ಪಳಿಸುವ ಈ ಆಘಾತಕಾರಿ ಸುದ್ದಿಯೊಂದಿಗೆ ಕಾದಂಬರಿ ಶುರುವಾಗುತ್ತದೆ. ಈ ವೈದ್ಯ ಮಹಾಶಯ ಲೀಸಾಳ ಮೊಲೆಗಳನ್ನು ಸಮರೂಪದಲ್ಲಿ ಸರ್ಜರಿ ಮಾಡಲಿಲ್ಲ ಹಾಗೂ ತನ್ನ ದೇಹದ ಅಂಗಾಂಗಗಳನ್ನು ಮುಟ್ಟಿ ಅನುಚಿತವಾಗಿ ನಡೆದುಕೊಂಡನೆಂಬುದು ಲೀಸಾಳ ಮುಖ್ಯ ಆರೋಪವಾಗಿರುತ್ತದೆ. ಆಕೆಯ ಬಳಿ ಇದಕ್ಕೆ ಬೇಕಾದ ಪ್ರಧಾನ ಸಾಕ್ಷಿಯಾದ ಒಂದು ವಿಡಿಯೋ ಅನ್ನು ಕೂಡ ಇಟ್ಟುಕೊಂಡಿದ್ದಳೆಂಬುದು ಮುಂದೆ ತಿಳಿಯುತ್ತದೆ. ಈ ಪ್ರಕರಣವು ಮಲೀಕ್‍ನ ಜೀವನವನ್ನು ಬೆಂಬಿಡದೇ ಕಾಡುತ್ತದೆ ಹಾಗೂ ಆತನ ಬದುಕಿನಲ್ಲಿ ಬಂದು ಹೋಗುವ ಮಹಿಳೆಯರನ್ನು ಸಹ ಒಂದಲ್ಲ ಒಂದು ಬಗೆಯಲ್ಲಿ ಪೀಡಿಸುತ್ತಲೇ ಹೋಗುತ್ತದೆ.

ಕಾದಂಬರಿಯು ಮನುಷ್ಯ ದೇಹದ ಓರೆಕೋರೆಗಳನ್ನು ಸರಿಪಡಿಸಲೆಂದು ವೈದ್ಯಕೀಯ ಲೋಕವು ತಂದೊಡ್ಡಿರುವ ಪ್ಲಾಸ್ಟಿಕ್ ಸರ್ಜರಿಯೆಂಬ ಸೌಂದರ್ಯ ಉದ್ದೀಪಕದ ಮಾಯಾಲೋಕವನ್ನು ತೆರೆದಿಡುತ್ತದೆ. ತನ್ನನ್ನು ತಾನು ಮನುಷ್ಯ ದೇಹಗಳನ್ನು ನಯ ನಾಜೂಕಿನಿಂದ ಕಟೆಯುವ ಶಿಲ್ಪಿಯೆನ್ನುವ ಅತಿರೇಕದ ಅಹಮ್ಮಿನಿಂದ ಬೀಗುವ ಮಲಿಕ್ ಕಾದಂಬರಿಯ ಕೇಂದ್ರ ಪಾತ್ರವಾಗಿದ್ದಾನೆ. ಈತನ ಕೈಚಳಕಕ್ಕೆ ಸಿಕ್ಕು ಪರಿಮಳ, ಹನಿ ಮಠದ ಹಾಗೂ ಸಮಾಂತಾ ತಂತಮ್ಮ ದೇಹಗಳ ಐಸಿರಿಯನ್ನು ಸಂವರ್ಧಿಸಿಕೊಂಡು ಆತ್ಮರತಿಯಿಂದ ಉಬ್ಬಿ ಹೋಗುತ್ತಾರೆ. ಆದರೆ ಇವರು ತಮ್ಮ ಸಹಜವಾದ ಮತ್ತು ಅಂತರಂಗದ ಚೆಲುವಿನಿಂದ ಶೋಭಿಸುವ ದೇಹಗಳನ್ನು ನಿರಾಕರಿಸುತ್ತಾರೆ; ಬಹಿರಂಗದ ಥಳಕು ಬಳುಕಿನ ತೋರಿಕೆಗೆ ಬಿದ್ದು ಪಡಬಾರದ ಪಡಿಪಾಟಲುಗಳನ್ನು ಅನುಭವಿಸುತ್ತಾರೆ.

ಕೃತಕ ಸೌಂದರ್ಯಕ್ಕೆ ಮಾರು ಹೋಗುವ ಇವರು ತಮ್ಮ ಹುಚ್ಚುತನಕ್ಕೆ ತಾವೇ ಬಲಿಪಶುಗಳಾಗುತ್ತಾರೆ; ಅಂತಹ ಸಂದರ್ಭಗಳಲ್ಲಿ ತಮ್ಮ ಬದುಕಿನ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಕಾದಂಬರಿಯು ಇಂತಹ ಸನ್ನಿವೇಶಗಳಲ್ಲಿ ಗಂಡು ಹೆಣ್ಣಿನ ಸಂಬಂಧಗಳನ್ನು ಬಿಡುಬೀಸಾಗಿ ಸ್ಥಾಪಿತ ಚೌಕಟ್ಟುಗಳಲ್ಲಿಯೇ ನೋಡುತ್ತದೆ. ಮಹಿಳೆಯರನ್ನು ಗಂಡಸರ ಲೈಂಗಿಕ ತೃಷೆಯನ್ನು ತಣಿಸುವ ಭೋಗ ವಸ್ತುಗಳಂತೆ ಚಿತ್ರಿಸುತ್ತದೆ. ಜೈವಿಕ ನೆಲೆಗಟ್ಟಿನಿಂದ ಗಂಡು ಹೆಣ್ಣುಗಳ ನಡುವಿನ ತಾರತಮ್ಯಗಳನ್ನು ಪುಷ್ಟೀಕರಿಸುತ್ತದೆ.

ಈ ಕಾದಂಬರಿಯು ದೇಹ ಮತ್ತು ಮನಸ್ಸಿನ ನಡುವಿನ ಸಮತೋಲನವು ತುಂಡಾಗಿ ಹೋಗಿರುವುದರ ಪರಿಣಾಮಗಳನ್ನು ಬಿಚ್ಚಿಡುತ್ತದೆ. ಬಹುತೇಕ ಓದುಗರಿಗೆ ಅಪರಿಚಿತವಾಗಿರುವ ವೈದ್ಯಕೀಯ ಲೋಕದ ವಿಸ್ಮಯಗಳನ್ನು ಮನುಷ್ಯ ಸಂಬಂಧಗಳ ನೆಲೆಯಿಂದ ಪರಿಚಿತಗೊಳಿಸುತ್ತದೆ. ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳು ತಾವು ತೆಗೆದುಕೊಂಡ ನಿರ್ಧಾರಗಳಿಂದಾಗಿ ತಮ್ಮ ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದೆಗುಂದದೆ ಸ್ವೀಕರಿಸುತ್ತವೆ ಎನ್ನುವ ಹಾಗೆ ಚಿತ್ರಿಸಲಾಗಿದೆ.

ತನ್ನನ್ನು ಎಚ್‍ಐವಿ ಪಾಸಿಟಿವ್ ಎಂದು ಗುರುತಿಸಿಕೊಳ್ಳುವ ಕಸ್ತೂರಿ, ಆಕೆಯ ಮಗಳು ಸಮಾಂತಾ, ಮಲೀಕನ ಹೆಂಡತಿ ಪರಿಮಳ, ಆತ್ಮಹತ್ಯೆ ಮಾಡಿಕೊಳ್ಳುವ ಹನಿ ಮಠದ ಇವರೆಲ್ಲರೂ ಗಂಡಸರ ಕಾರಣದಿಂದಲೇ ಇನ್ನಿಲ್ಲದ ಹಿಂಸೆ, ನೋವು, ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಆದರೂ ಕಾದಂಬರಿಯು ಡಾ. ಮಲೀಕ್ ತನ್ನ ವೃತ್ತಿ ಧರ್ಮವನ್ನು ಮೀರಿ ಮಹಿಳೆಯರೊಂದಿಗೆ ಅನುಚಿತವಾಗಿ ಅಥವಾ ಅನೈತಿಕವಾಗಿ ನಡೆದುಕೊಂಡನೆಂದು ಹೇಳುವುದಿಲ್ಲ. ಕೊನೆಯಲ್ಲಿ ಆತ ಜೈಲಿಗೆ ಹೋಗುವ ಸಂದರ್ಭ ಬಂದಾಗ ಲೀಸಾಳ ಕುತಂತ್ರಕ್ಕೆ, ದುಡ್ಡಿನ ದಾಹಕ್ಕೆ ಬಲಿಯಾದ ಧೋರಣೆ ತಳೆಯುತ್ತದೆ. ಆಗ ಈ ಮಹಿಳಾ ಮಣಿಗಳು ಮಲೀಕನ ಬಗ್ಗೆ ಅನುಕಂಪ ತೋರುವವರಾಗಿ ರೂಪಾಂತರಗೊಳ್ಳುತ್ತಾರೆ. ಇದರಿಂದಾಗಿ ಈ ಕಾದಂಬರಿಯು ಪರೋಕ್ಷವಾಗಿ ಪುರುಷ ಪ್ರಧಾನ ಮೌಲ್ಯಗಳನ್ನು ಸಮರ್ಥಿಸುತ್ತದೆ.

ಮಹಿಳೆಯರು ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ಸಪೂರವಾಗಿ ತೋರ್ಪಡಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯ ವ್ಯಾಮೋಹಕ್ಕೆ ಬೀಳುವುದನ್ನು ಹಾಗೂ ದೇಹಮನಸ್ಸುಗಳ ಮೇಲಾಗುವ ದುಷ್ಪರಿಣಾಮಗಳನ್ನು ಎತ್ತಿ ತೋರಿಸುವುದೇ ಕಾದಂಬರಿಯ ಮುಖ್ಯ ಥೀಮ್ ಆಗಿದೆ. ಆದರೆ ವಿಚಿತ್ರವೆಂದರೆ ಕಾದಂಬರಿಯ ನಿಲುವುಗಳು ಮಹಿಳಾ ಪಾತ್ರಗಳ ವಿರುದ್ಧವಾಗಿವೆ. ಮಲೀಕನ ವಿರುದ್ಧ ಪ್ರಕರಣ ದಾಖಲಿಸುವ ಹಾಗೂ ಚಾರಿತ್ರ್ಯವಧೆ ಮಾಡಲು ಬೆದರಿಕೆಯೊಡ್ಡುವ ಲೀಸಾ ಸಾಲಿಂಜರ್‍ಳನ್ನು ಖಳನಾಯಕಿ ಎಂದೇ ಬಿಂಬಿಸುತ್ತದೆ.

ಮಲೀಕನ ದೃಷ್ಟಿಯಲ್ಲಿ ಕಾದಂಬರಿಯ ನಿರೂಪಕ ಹೇಳುವ “ಲೀಸಾಳ ದೂರು ನೆನಪಿಗೆ ಬಂತು. ಆಕೆಯ ಕೃತಕ ಮೊಲೆಗಳು ತೊನೆದಾಡುವುದಿಲ್ಲವಂತೆ, ಬ್ರಾ ಹಾಕದೇ ಜಾಗಿಂಗ್ ಹೋದರೂ ಹಾಗೆ ನಿಂತಿರುತ್ತಂತೆ. ತೊನೆದಾಡಬೇಡವೆಂದೇ ಅಷ್ಟಷ್ಟು ಪ್ಯಾಡು ಕೊಟ್ಟುಕೋತಾರೆ, ವಿಧವಿಧದ ಸ್ಪೋಟ್ರ್ಸ್ ಬ್ರಾ ಹಾಕಿಕೋತಾರೆ ಈ ಹೆಂಗಸರು. ಪಕ್ಕದಲ್ಲೊಮ್ಮೆ ನೋಡಿದ. ಸಮಾಂತಾ ಕೂಡ ಮೂರಡಿ ಹಾರುತ್ತಿದ್ದರೂ ತಾನು ಸೃಷ್ಟಿಸಿದ್ದ ಯಾವಂಗವೂ ತನ್ನಂತಾನೇ ಅಲ್ಲಾಡುತ್ತಿರಲಿಲ್ಲ. ಏಕಶಿಲಾ ವಿಗ್ರಹದಂತೆ, ಬಟ್ಟೆಯಂಗಡಿಯ ಬೆತ್ತಲೆ ಬೊಂಬೆಯಂತೆ ಮೇಲಿಂದ ಕೆಳಗಿನ ತನಕ ಒಂದೇ ತೊನೆದಾಟ, ಒಂದೇ ತುಯ್ದಾಟ. ಒಂದೇ ಕುಣಿದಾಟ. ಮೂಟೆಯೊಳಗೆ ಜೋಳ ಪೇರಿಸಿ ಒತ್ತಟ್ಟು ಮಾಡಿದಂತೆ. ಕುಣಿದದ್ದು ಸುಸ್ತಾಯಿತೇನೋ, ಪಕ್ಕ ಬಂದಳು. ಆ ಕಡೆ ತಿರುಗಿ ಮಲಗಿದಳು” (ಪು. 30) ಈ ಮಾತುಗಳನ್ನು ಗಮನಿಸಿದರೆ ಕಾದಂಬರಿಯ ನಿಲುವು ಹೆಣ್ಣಿನ ವಿಷಯದಲ್ಲಿ ಎಷ್ಟೊಂದು ಪೂರ್ವಗ್ರಹಪೀಡಿತವಾಗಿದೆ ಎಂಬುದು ತಿಳಿಯುತ್ತದೆ. ಇಲ್ಲಿ ಬಳಕೆಯಾಗಿರುವ ಭಾಷೆಯು ಕೂಡ ಎಷ್ಟೊಂದು ಅಸೂಕ್ಷ್ಮವಾಗಿದೆ. ಹೆಣ್ಣೆಂದರೆ ಕೇವಲ ದೇಹವೆಂದು ಪರಿಭಾವಿಸುವುದರಲ್ಲಿಯೇ ಭಾಷಿಕ ರಾಜಕಾರಣವಿದೆ. ಈ ಕಾದಂಬರಿಯನ್ನು ನಿಕಟವಾಗಿ ಓದಿದರೆ ಇಂತಹ ಹಲವು ನಿದರ್ಶನಗಳನ್ನು ಗುರುತಿಸಿ ಹೇಳಬಹುದಾಗಿದೆ.

ಕಾದಂಬರಿಯಲ್ಲಿ ಡಾ.ಮಲಿಕ್ ತನ್ನನ್ನು ತಾನು ಆತ್ಮಾವಲೋಕನ ಮಾಡಿಕೊಳ್ಳುವುದಿಲ್ಲ. ಆತ ಪರಿಮಳಾಳನ್ನು ಮದುವೆಯಾಗಿದ್ದರೂ ಸಮಾಂತಾಳ ಜೊತೆಯಲ್ಲಿ ಮಲಗಬಹುದು; ಅದು ಆತನಿಗೆ ಅನೈತಿಕ ಎಂದೆನಿಸುವುದಿಲ್ಲ. ಕಾದಂಬರಿಯ ನಿರೂಪಣೆಯು ಸಹ ಅದರ ಬಗ್ಗೆ ಕುರುಡಾಗಿದೆ. ಈ ಹಿನ್ನೆಲೆಯಲ್ಲಿ ಕಾದಂಬರಿಯು ಕಸ್ತೂರಿಯ ಬಗ್ಗೆ, “ಹದಿನೆಂಟು ವರ್ಷದ ಹುಡುಗಿ ಕಸ್ತೂರಿ, ಕಸ್ತೂರಿ ರಂಗನ್ ಆಗಿ ನ್ಯೂಯಾರ್ಕಿಗೆ ಏಕ್ದಂ ಬಂದಿದ್ದು ಶಫಾಕತ್ ಅಲಿ ಖಾನ್ ಎಂಬ ಮುದ್ದು ಹುಡುಗನಿಗೆ ಮುತ್ತು ಕೊಟ್ಟಿದ್ದರಿಂದಲೇ ಎಂದು ರಾಜಾರಾಯರು ತಂತಮಗೇ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಕಸ್ತೂರಿಯದ್ದು ಇದೊಂದೇ ಮಿಸ್‍ಬಿಹೇವಿಯರ್ ಆಗಿರಲಿಲ್ಲ. ಸಂತೇಪೇಟೆಯಲ್ಲಿ ಸುಕನ್ಯಾ ಬುಕ್ ಹೌಸಿನ ಮಾಲೀಕರ ಮಗ ಶ್ರೀಪತಿಯ ಜತೆ ಡಬಲ್ ರೈಡ್ ಬಂದದ್ದು, ಜಗನ್ಮೋಹನ ಪ್ಯಾಲೇಸಿನ ಆವರಣದ ಹುಲ್ಲಿನ ಮೇಲೆ ಮಲಗಿ ಉಂಡೆಸೌತೆಕಾಯಿಯನ್ನು ಕಾಗೆ ಎಂಜಲು ಮಾಡಿ ಉಪ್ಪಾರಗೇರಿಯ ಕ್ರಿಕೆಟ್ ಕ್ಯಾಪ್ಟನ್ ರಾಮಲಿಂಗುವಿನ ಜತೆ ಹಂಚಿಕೊಂಡದ್ದುಹೀಗೆ ಹಲವು ಸುದ್ದಿಗಳು ಕೇಳಿ ಬರುತ್ತಿದ್ದವು” (ಪು. 23) ಎಂದು ನಿರೂಪಿಸುತ್ತದೆ.

ಕೃತಿಯ ನಿರೂಪಕ ಹೆಣ್ಣೊಬ್ಬಳು ಬೇರೆ ಗಂಡಸರೊಂದಿಗೆ ನಡೆದುಕೊಳ್ಳುವುದನ್ನು ಮಿಸ್‍ಬಿಹೇವಿಯರ್ ಎಂಬ ಲಕ್ಷ್ಮಣ ರೇಖೆಯನ್ನು ಎಳೆಯುತ್ತಾನೆ. ಕಸ್ತೂರಿಯ ಗಂಡ ಆಕೆಯನ್ನು ವಿನಾಕಾರಣವಾಗಿ ತೊರೆದು ಹೋದಾಗ ತನ್ನ ಇರುವಿಕೆಯನ್ನು ಸ್ಥಾಪಿಸಿಕೊಳ್ಳಲು ಪುನಃ ಅವಳು ಮತ್ತೊಬ್ಬ ಗಂಡಸನ ಕಡೆಗೆ ವಾಲಬೇಕಾಗುತ್ತದೆ. ಹೆಣ್ಣಿನ ಅಸ್ಮಿತೆಯು ಗಂಡಿನ ಮೂಲಕವೇ ವ್ಯಕ್ತವಾಗಬೇಕೆ? ಮಹಿಳೆಯರು ಗಂಡಸಿನ ಆಸರೆಗಾಗಿ ಸುತ್ತಿಕೊಳ್ಳುವ ಬಳ್ಳಿಯಾಗದೇ ಸ್ವತಂತ್ರ ಗಿಡವಾಗಿ ಬೆಳೆಯಲಾರರೆ? ಇಂತಹ ಪ್ರಶ್ನೆಗಳಿಗೆ ಕಾದಂಬರಿಯು ನಿರುತ್ತರವಾಗಿದೆ. ಏಕೆಂದರೆ ಕಾದಂಬರಿಯು ಆಧುನಿಕ ಕಾಲಘಟ್ಟದಲ್ಲಿಯೂ ಸಾಂಪ್ರದಾಯಿಕ ಹಾಗೂ ಗಂಡಾಳ್ವಿಕೆಯ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ.

ಕಾದಂಬರಿ ಎಂಬ ಪ್ರಕಾರವೇ ಹಲವು ಪಾತ್ರಗಳ, ಹಲವು ಘಟನೆಗಳ ಹಾಗೂ ಹಲವು ದೃಷ್ಟಿಕೋನಗಳ ಕಲಾತ್ಮಕ ರಚನೆಯಾಗಿರುತ್ತದೆ. ಅದು ಏಕಕಾಲದಲ್ಲಿ ಹಲವು ದಿಕ್ಕುಗಳಿಂದ ನೋಡುವಂತೆ ಮಾಡುವುದರಿಂದ ಅದರೊಳಗೆ ಸಂಕೀರ್ಣವಾದ ಆಯಾಮಗಳು ಸೇರಿಕೊಳ್ಳುತ್ತವೆ. ಕಾದಂಬರಿಯಲ್ಲಿ ಕಥನದ ನಿರೂಪಣೆ, ಆಶಯ, ತಂತ್ರಗಾರಿಕೆ, ಶೈಲಿ ಹಾಗೂ ಕಲಾತ್ಮಕತೆಇವುಗಳೆಲ್ಲ ಒಂದರೊಳಗೊಂದು ಯಾವ ರೀತಿಯಲ್ಲಿ ಸಂಯೋಜನೆಗೊಂಡಿವೆ ಎಂಬುದು ಅತ್ಯಂತ ಮಹತ್ವದ ಸಂಗತಿಯಾಗಿರುತ್ತದೆ. ಈ ನಿಟ್ಟಿನಿಂದ ನೋಡಿದರೆ ‘ಕಾಯಾ’ ಕಾದಂಬರಿಯು ಆರಂಭದಲ್ಲಿ ಕೊಂಚ ಕುತೂಹಲ ಮತ್ತು ಭರವಸೆಯನ್ನು ಮೂಡಿಸುತ್ತದೆ. ಕಥನ ಮುಂದೆ ಸಾಗಿದಂತೆ ನಿರಾಸೆಯಾಗುತ್ತದೆ.

ಲೀಸಾ ಸಾಲಿಂಜರಳ ದೂರು ಕೇವಲ ಕಥನವನ್ನು ಮುಂದುವರೆಸುವುದಕ್ಕಷ್ಟೇ ಬಳಕೆಯಾಗಿರುವುದು; ಯಾಕೆಂದರೆ ಈ ಪ್ರಕರಣದ ಪ್ರಸ್ತಾಪ ಮತ್ತೆ ಬರುವುದು ಕಾದಂಬರಿಯ ಕೊನೆಯ ಘಟ್ಟದಲ್ಲಿ; ಈ ನಡುವೆ ಕಾದಂಬರಿಯ ಕಥನದಲ್ಲಿ ಕಸ್ತೂರಿಯ ಜೀವನ, ಮಲೀಕನ ಹೆಂಡತಿ ಪರಿಮಳಾಳ ಹಿನ್ನೆಲೆ, ಸಮಾಂತಾಹನಿ ಮಠದಳ ಸಂಬಂಧಗಳ ಸುದೀರ್ಘವಾದ ವಿವರಣೆಗಳಿವೆ. ಕಸ್ತೂರಿ, ಪರಿಮಳಾ ಹಾಗೂ ಸಮಾಂತಾ ಇವರು ಬೇರೆ ಗಂಡಸರೊಂದಿಗೆ ಮದುವೆಯಾಗುವ ಅನಿವಾರ್ಯಕ್ಕೆ ಬೀಳುವ ವಿವರಗಳಿವೆ. ಕಾದಂಬರಿಯು ಬಹುತೇಕವಾಗಿ ಘಟನೆಗಳ ವರ್ಣನೆ ಹಾಗೂ ವಿವರಣಾತ್ಮಕ ಜಾಡನ್ನು ಹಿಡಿದಿರುವುದರಿಂದ ಕೃತಿಯ ಬಂಧವು ದುರ್ಬಲವಾಗಿದೆ. ಹಾಗಾಗಿ ಇದರ ಓದು ಬೇಸರವನ್ನು ಮೂಡಿಸುತ್ತದೆ.

ಸಾಹಿತ್ಯದ ಬೇರೆ ಪ್ರಕಾರಗಳಿಗೆ ಹೋಲಿಸಿದರೆ ಕಾದಂಬರಿಯಲ್ಲಿ ಹೆಚ್ಚು ಸ್ಪೇಸ್ ಇರುತ್ತದೆ ಎನ್ನುವ ನಂಬಿಕೆ ಅನೇಕ ಕಾದಂಬರಿಕಾರರಲ್ಲಿ ಇರಬಹುದು. ಹಾಗಂತ ಕಾದಂಬರಿಯೊಳಗೆ ಏನನ್ನು ಬೇಕಾದರೂ ತುಂಬಬಹುದಾದ ಚೀಲವೆಂದು ಪರಿಭಾವಿಸುವುದು ಅಷ್ಟು ಔಚಿತ್ಯಪೂರ್ಣವಲ್ಲ. ಕಾದಂಬರಿಯು ಹಲವು ಕತೆಗಳ ಗುಚ್ಛವಲ್ಲ; ಸಣ್ಣ ಕತೆಯ ವಿಸ್ತøತ ರೂಪವೂ ಅಲ್ಲ; ಪ್ರಧಾನವಾದ ಆಶಯದೊಂದಿಗೆ ಬೇರೆ ಬೇರೆ ಘಟನೆಗಳ ಹಾಗೂ ಪಾತ್ರಗಳ ಸಂಬಂಧವು ಯಾವ ಯಾವ ರೀತಿಯಲ್ಲಿ ಹೆಣೆದುಕೊಂಡಿರುತ್ತದೆ ಎಂಬುದು ಮುಖ್ಯವಾಗಿರುತ್ತದೆ. ಈ ನೆಲೆಗಟ್ಟಿನಿಂದ ನೋಡಿದರೆ ‘ಕಾಯಾ’ ಕಾದಂಬರಿಯ ಪಾತ್ರಗಳ ಜೀವನಾನುಭವವು ಅವು ಎದುರುಗೊಳ್ಳುವ ಬಿಕ್ಕಟ್ಟುಗಳಿಂದ ಒಡಮೂಡಿದ್ದು ಅಂತ ಅನ್ನಿಸುವುದಿಲ್ಲ. ಕಾದಂಬರಿಕಾರರು ಪಾತ್ರಗಳನ್ನು ಅವುಗಳ ಪಾಡಿಗೆ ಬಿಟ್ಟಿರುವಂತೆ ಕಾಣುವುದಿಲ್ಲ; ಪಾತ್ರಗಳು ಹಲವು ಸನ್ನಿವೇಶಗಳಲ್ಲಿ ಕೀಲು ಕೊಟ್ಟ ಬೊಂಬೆಗಳಂತೆ ನಿಯಂತ್ರಣಕ್ಕೆ ಒಳಪಟ್ಟಿವೆ.

ಕಾದಂಬರಿಕಾರರು ಸ್ವತಃ ವೈದ್ಯರು. ಅವರಿಗೆ ವ್ಯದ್ಯಕೀಯ ಲೋಕದ ಅಪಾರವಾದ ಜ್ಞಾನ ಹಾಗೂ ಪಾಂಡಿತ್ಯ ಇದ್ದಿರಬಹುದು. ಆದರೆ ಅದನ್ನು ಕಾದಂಬರಿ ಎಂಬ ಸೃಜನಶೀಲ ಪ್ರಕಾರದೊಳಗೆ ಭಾಷಿಕವಾಗಿ ಹೆಣೆಯುವ, ಸಂಯೋಜಿಸುವ, ಕಲಾತ್ಮಕಗೊಳಿಸುವ ಹಾಗೂ ಪಾತ್ರಗಳ ಗುಣಸ್ವಭಾವಗಳು ಒಡೆದು ಕಾಣುವಂತೆ ಮಾಡುವುದರಲ್ಲಿ ವಿಫಲರಾಗಿದ್ದಾರೆ. ಕಾದಂಬರಿಯಲ್ಲಿ ಬರುವ ಎಷ್ಟೋ ವೈದ್ಯಕೀಯ ವಿವರಗಳು ಹೊರಗಿನಿಂದ ತುರುಕಿದ್ದು ಎಂದೆನಿಸುತ್ತದೆ. ಕಾದಂಬರಿಯ ಕೊನೆಯ ಅಧ್ಯಾಯ ‘ಬೆರಳ್ಮಡಿಸ್, ನೀಳ ಬೆರಳ್ನಿಮಿರ್’ ವೈದ್ಯಕೀಯಕ್ಕೆ ಸಂಬಂಧಿಸಿದ ಉಪನ್ಯಾಸವಾಗಿದೆ. ಇದು ಕೃತಿಯ ಶಿಲ್ಪದಿಂದ ಹೊರಗೇ ಉಳಿಯುತ್ತದೆ. ಕಾದಂಬರಿಯ ಕಡೆಯ ಘಟ್ಟದಲ್ಲಿ ಕಸ್ತೂರಿ ಎಚ್‍ಐವಿ ಪಾಸಿಟಿವ್ ಅಲ್ಲವೆಂದು ತಿಳಿದಾಗ ನಿರೂಪಕ ನೀಡುವ ವಿವರಣೆಗಳು ಕೂಡ ಓದುಗರಿಗೆ ನೀಡುವ ಸಮಜಾಯಿಷಿಗಳಂತೆ ಕಾಣುತ್ತವೆ.

ಪ್ಲಾಸ್ಟಿಕ್ ಸರ್ಜರಿಯ ಸೌಕರ್ಯಗಳು ದೈಹಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರೇರಣೆ ನೀಡುತ್ತವೆಯೋ ಅಥವಾ ಮನುಷ್ಯನ ಮನಸ್ಸು ಈ ಸೌಂದರ್ಯಕ್ಕಾಗಿ ತುಡಿಯುತ್ತದೆಯೋ ಎಂಬುದು ಜಿಜ್ಞಾಸೆಯ ವಿಚಾರವಾಗಿದೆ. ಆದರೆ ಕಾದಂಬರಿಯು ಇಂತಹ ಹುಡುಕಾಟ ಹಾಗೂ ಶೋಧದ ದಾರಿಯಲ್ಲಿ ಸಾಗುವುದಿಲ್ಲ. ಸೌಂದರ್ಯವೆಂದರೆ ಮಹಿಳೆಯರ ಮುಖ ಹಾಗೂ ದೇಹಕಾಂತಿಯನ್ನು ಹೆಚ್ಚಿಸಿಕೊಳ್ಳುವ ಮತ್ತು ಅದರಿಂದ ಉದ್ಭವಿಸುವ ಸಮಸ್ಯೆಬಿಕ್ಕಟ್ಟಗಳಿಗೆ ಈ ಕಾದಂಬರಿ ಸೀಮಿತಗೊಂಡಿದೆ. ಈ ಹಿನ್ನೆಲೆಯಲ್ಲಿ ‘ಕಾಯಾ’ ಕಾದಂಬರಿ ಮಹಿಳೆಯರ ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ ಕೃತಿಯಾಗಿದೆ. ಆದರೆ ಮಹಿಳಾ ಪಾತ್ರಗಳು ಪುರುಷರ ದೃಷ್ಟಿಕೋನದಿಂದಲೇ ತಮ್ಮ ದೈಹಿಕ ಸೌಂದರ್ಯದ ಮಾನದಂಡಗಳನ್ನು ರೂಪಿಸಿಕೊಂಡಿವೆ.

ಇಲ್ಲಿಯ ಎಲ್ಲ ಮಹಿಳೆಯರು ಪುರುಷರ ಕಣ್ಣ ಕನ್ನಡಿಯಲ್ಲಿ ತಮ್ಮನ್ನು ನೋಡಿಕೊಳ್ಳುತ್ತಾರೆಯೇ ಹೊರತು ತಮ್ಮದೇ ಕಣ್ಣ ಕನ್ನಡಿಯಲ್ಲಿ ನೋಡಿಕೊಳ್ಳುವುದಿಲ್ಲ. ಈ ಸಂಗತಿ ಲೋಕದ ವಾಸ್ತವವೇ ಹೌದು. ಇದನ್ನು ತಿರುವು ಮುರುವು ಮಾಡಿ ನೋಡಿದ್ದರೆ ಈ ಕಾದಂಬರಿಯು ಸವೆದು ಹೋಗಿರುವ ದಾರಿಯನ್ನು ತೊರೆದು ಭಿನ್ನವಾದ ಹಾಗೂ ಹೊಸ ದೃಷ್ಟಿಕೋನವನ್ನು ಮಂಡಿಸಿದಂತಾಗುತ್ತಿತ್ತು. ಅಂತಹ ಸಾಧ್ಯತೆಗಳನ್ನು ಕಾದಂಬರಿಯು ಬಿಟ್ಟುಕೊಟ್ಟಿದೆ.

ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುವ ಕೃತಕ ವಸ್ತುಗಳ ವ್ಯಾಪಾರವು ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ. ಇಲ್ಲಿ ನಡೆಯುವ ಮೋಸ ಹಾಗೂ ವಂಚನೆಗಳನ್ನು ಕಾದಂಬರಿ ಬಯಲಿಗೆಳೆಯುತ್ತದೆ. ಮಹಿಳೆಯರನ್ನು ಅವರವರ ದೇಹದೊಳಕ್ಕೆ ಬಂಧಿಸಿಡುವ ಚೌಕಟ್ಟಿಗೆ ಕಟ್ಟಿಹಾಕಲು ಪುರುಷ ಪ್ರಧಾನ ವ್ಯವಸ್ಥೆ ಕಾರಣವಾಗಿರುತ್ತದೆ. ಹೊಸ ಸೌಂದರ್ಯ ಸಾಧನಗಳ ಪೇಟೆಂಟ್ ಪಡೆಯಲು ಭಾರಿ ಪೈಪೋಟಿ ನಡೆಸುವುದನ್ನು ಹಾಗೂ ಅದರಿಂದ ಲಾಭಕೋರತನಕ್ಕೆ ಹಪಾಹಪಿಸುವ ವೈದ್ಯಕೀಯ ಕಂಪನಿಗಳ ಜಾಲಗಳ ಕುರಿತು ಕಾದಂಬರಿಯ ನಿಲುವು ಸ್ಪಷ್ಟವಾಗುವುದಿಲ್ಲ. ಡಾ.ಮಲೀಕ್ ಇಂತಹದೊಂದು ಸೌಂದರ್ಯ ಸಾಧನದ ಪೇಟೆಂಟನ್ನು ತನ್ನದೆಂದು ರುಜುವಾತುಪಡಿಸಿಕೊಳ್ಳಲು ಮುಂದಾಗುತ್ತಾನೆ; ಅದಕ್ಕೆ ಆತನ ಮಾಜಿ ಹೆಂಡತಿ ಪರಿಮಳಾನೇ ಸಹಾಯ ಮಾಡಲು ಬದ್ಧಳಾಗುತ್ತಾಳೆ. ತನಗೂ ಲಾಭ ದೊರೆಯಬಹುದೆಂಬ ದುರಾಸೆಗೆ ಇಳಿಯುತ್ತಾಳೆ.

ಸಾಹಿತ್ಯ ಕೃತಿಯೊಂದನ್ನು ಓದುವುದೆಂದರೆ ಕೇವಲ ಸಂತೋಷ ಅಥವಾ ಮನರಂಜನೆಗಷ್ಟೇ ಸೀಮಿತವಾಗಿರುವುದಿಲ್ಲ. ಅದು ನಮ್ಮ ಸುತ್ತಲಿನ ಜಗತ್ತನ್ನು ಮತ್ತಷ್ಟು ನಿಕಟವಾಗಿ ಅರಿಯುವುದಕ್ಕೆ ಸಹಾಯ ಮಾಡಬೇಕು; ಮನುಷ್ಯ ವ್ಯಾಪಾರಗಳ ಗೋಜಲನ್ನು ಅಥವಾ ಸಂಕೀರ್ಣತೆಯನ್ನು ಬಿಡಿಸಿ ನೋಡಲು ಹೊಳವುಗಳನ್ನು ನೀಡಬೇಕೆಂಬ ಅಪೇಕ್ಷೆಯು ಇರುತ್ತದೆ. ಅದು ನಮ್ಮದಲ್ಲದ ಅನುಭವಕ್ಕೆ ಪಾತ್ರ, ವಸ್ತು, ದೃಶ್ಯ ಹಾಗೂ ಭಾಷೆಇವುಗಳ ಮೂಲಕ ಸಮಕಾಲೀನ ಲೋಕದೊಂದಿಗೆ ಸಂವಾದಿಸುವ ತಿಳಿವನ್ನು ನೀಡಬಹುದು. ಈ ನಿಟ್ಟಿನಲ್ಲಿ ‘ಕಾಯಾ’ ಕಾದಂಬರಿ ನಮ್ಮದೇ ವಾಸ್ತವ ಲೋಕಕ್ಕೆ ಮುಖಾಮುಖಿಯಾಗುವ ಹಾಗೆ ಮಾಡುತ್ತದೆ. ಇದು ಸಮಸ್ಯೆಗಳನ್ನು ನೇರಾನೇರ ಬೆರಳು ಮಾಡಿ ತೋರಿಸುತ್ತದೆ; ಓದುಗರನ್ನು ಮತ್ತಷ್ಟು ಗೊಂದಲಕ್ಕೆ ಕೆಡವುತ್ತದೆ; ಯಾವುದರ ಬಗ್ಗೆಯು ಪರವೂ ಅಲ್ಲದ ವಿರೋಧವೂ ಅಲ್ಲದ ಖಚಿತವಾದ ನಿಲುವುಗಳನ್ನು ವ್ಯಕ್ತಪಡಿಸುವುದಿಲ್ಲ.

ಕಾದಂಬರಿಯ ಅಂತ್ಯವನ್ನು ಉದ್ದೇಶಪೂರ್ವಕವಾಗಿಯೇ ಸುಖಾಂತ್ಯಗೊಳಿಸಲಾಗಿದೆ. ಗಂಭೀರವಾದ ಸಮಸ್ಯೆಯನ್ನು ಅಲ್ಲಲ್ಲಿ ತಮಾಷೆಯ ಮಟ್ಟಕ್ಕೆ ಇಳಿಸಲಾಗಿದೆ. ಲೀಸಾ ಸಾಲಿಂಜರ್, ಮೆಲಿಸ್ಸಾ ಹಾಗೂ ಬಾಲಚೆಕ್ ಇವರನ್ನು ಹೊರತು ಪಡಿಸಿದರೆ ಬಹುತೇಕವಾಗಿ ಉಳಿದೆಲ್ಲ ಪಾತ್ರಗಳನ್ನು ಒಳ್ಳೆಯತನದಿಂದಲೇ ಚಿತ್ರಿಸಲಾಗಿದೆ. ಕಾದಂಬರಿಯು ಮನುಷ್ಯ ಲೋಕದ ವೈವಿಧ್ಯಮಯ ವ್ಯಾಪಾರಗಳನ್ನು ಬಹುಸ್ತರೀಯ ನೆಲೆಯಲ್ಲಿ ಬೆದಕಿ ನೋಡುವ ಸವಾಲುಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಕನ್ನಡ ಕಾದಂಬರಿ ಪರಂಪರೆಯಲ್ಲಿ ಈ ‘ಕಾಯಾ’ ಅತ್ಯಂತ ಸಾಧಾರಣ ಮಟ್ಟದ ಕೃತಿಯಾಗಿ ನಿಲ್ಲುತ್ತದೆ.

Leave a Reply

Your email address will not be published.