ಗಾರ್ದಭ ವಿವಾಹ!

ಮದುವೆ ಏನೋ ಮುಗಿದಿತ್ತು. ಮಳೆ ಬಂತೋ ಇಲ್ಲೋ ಗೊತ್ತಿಲ್ಲ. ಒಂದು ವಾರ ರಜೆ ಕೇಳಿದ್ದ ವಿರುಪಾಕ್ಷಿಗೆ ಹದಿನೈದು ದಿನ ರಜೆ ಸಿಕ್ಕಿತು. ಆದರೆ, ಅದು ಆಸ್ಪತ್ರೆಯ ಬೆಡ್ ರೆಸ್ಟ್ ರೂಪದಲ್ಲಿ.

ಮಲ್ಲಿಕಾರ್ಜುನ ಶೆಲ್ಲಿಕೇರಿ

ಬೇಸಿಗೆಯ ಆ ದಿನಗಳಲ್ಲಿ ವಿರುಪಾಕ್ಷಿಯು ತಮ್ಮ ಬಾಸ್‍ಗೆ ಹೇಳಿ ಒಂದು ವಾರ ರಜೆ ಪಡೆದು ಊರಲ್ಲಿಯ ಗೆಳೆಯನ ಮದುವೆಯನ್ನು ಮುಗಿಸಿ ಬರುವ ಹವಣಿಕೆ ವಾರದಿಂದಲೂ ಮಾಡುತ್ತಿದ್ದನು. ಬಾಸ್ ಮಾತ್ರ ಅಡಿಟ್ ನೆಪ ಹೇಳಿ ಯಾವುದೆ ಕೆಲಸವು ಪೆಂಡಿಂಗ್ ಇರಬಾರದೆಂದು ಎಲ್ಲ ಕೆಲಸ ಕೂಡಲೆ ಆಗಬೇಕೆಂದು ತಿಳಿಸಿ ಆತನಿಗೆ ರಜೆ ನೀಡಲು ಸದ್ಯಕ್ಕೆ ಸಾಧ್ಯವಿಲ್ಲವೆಂದು ಹೇಳಿದ್ದರು.

ಮೇಲೆ ಸುರಿವ ಕೆಂಡದಂತಹ ಬಿಸಿಲು. ಎಲ್ಲ ಕಡೆ ಸಾಕಷ್ಟು ಮಳೆಯಾಗಿ ಸ್ವಲ್ಪ ತಂಪನ್ನುಂಟು ಮಾಡಿದ್ದರೆ ಇವನಿದ್ದ ಊರಲ್ಲಿ ಮಾತ್ರ ಮಳೆಯು ಮುಖವನ್ನೆ ತೋರಿಸಿಲ್ಲ. ಇಂತಹ ವಾತಾವರಣದಲ್ಲಿ ಇವನ ಕಚೇರಿಯಲ್ಲಿ ಕೆಲಸದ ಭರಾಟೆ. ಈ ಬಾರಿಯಾದರೂ ರಜೆ ಮಂಜೂರಿ ಮಾಡಿಸಿಕೊಂಡೆ ಬರಬೇಕೆಂದು ಬಾಸ್ ಛೇಂಬರಿಗೆ ಹೋದಾಗ ಅದಾಗಲೆ ಆತನ ಸಹೋದ್ಯೋಗಿಗಳಾದ ಪರಮೇಶಿ, ಮುರಾರಿ, ಮೆಣಸಿನಕಾಯಿ, ಒಣರೊಟ್ಟಿ ಬಾಸ್ ಹತ್ತಿರ ಯಾವುದೋ ವಿಷಯದ ಬಗ್ಗೆ ವಿಚಾರ ಮಾಡುತ್ತಿದ್ದರು.

ವಿರುಪಾಕ್ಷಿ ಕಂಡ ಬಾಸ್, “ನೀವೆಲ್ಲ ಹೇಳೂದು ಸರಿಯಪ್ಪ, ನನಗೇನೋ ಡೌಟು. ಅಲ್ರಿ ವಿರುಪಾಕ್ಷಿ ಕತ್ತೆ ಮದುವಿ ಮಾಡಿದರ ಮಳೆ ಬರತೈತಿ ಅಂತಾರಲ್ಲ ಇವರು. ನೀವೆನಂತರಿ ಇದಕ”À. ಇದೇನಪ್ಪ ಊರಲ್ಲಿ ಚಡ್ಡಿ ಗೆಳೆಯನ ಮದುವೆಗೆ ಹೋಗುವ ಗಜಿಬಿಜಿಯಲ್ಲಿ ತಾನಿರುವಾಗ ಇವರೇನು ಕತ್ತೆ ಮದುವೆ ಸುದ್ದಿ ಎತ್ತುತ್ತಿದ್ದಾರಲ್ಲ ಎಂದು ಮನಸಿನಲ್ಲಿ ಯೋಚಿಸುತ್ತಾ ಕೊನೆಗೆ ತಾನೆ, “ಎಲ್ಲಾ ಕಡಿನೂ ಮಳೆ ಸಲುವಾಗಿ ಮಾಡಲಿಕ್ಕ ಹತ್ಯಾರಂತ ಕೇಳಿನಿ ಸರ್”

ಹೌದು, ನಿಮದೆಲ್ಲಾ ಮದುವಿ ಅಗಿದೆಯಲ್ಲ. ಮತ್ತ ಇದರ ಅವಶ್ಯಕತೆ ಏನೈತಿ. ಆಯ್ತು. ನೀವು ಹೇಳಿದಂಗ ಆಗಲಿ ಇದಕ್ಕ ನಾನು ಒಪ್ಕೋತಿನಿ. ನೀವೆಲ್ಲ ವಿರುಪಾಕ್ಷಿ ಮುಂದಾಳುತನದಾಗ ಮಾಡಾಕ ರೆಡಿ ಅದಿರಲ”್ಲ ಎಂದು ಬಾಸ್ ಹೇಳಿದಾಗ ಅದಕ್ಕೆ ಒಣ ರೊಟ್ಟಿ,

ನಾವಂತೂ ರೆಡಿ. ನೀವು ಮಾತ್ರ ಯಾವದಾದರೂ ಕಾರಣ ಹೇಳಿ ತಪ್ಪಿಸಿ ಕೊಂಡಿರಿ ಸರ. ನಿಮ್ಮ ಕುಟುಂಬದ ಮದುವಿ ಅಂತ ತಿಳಕೊಂಡು ಬರಬೇಕ್ರಿ ಮತ್ತ” ಎಂದು ಅವರ ಮಾತಿನ ಬಾಣವನ್ನು ಅವರಿಗೆ ತಿರುಗಿ ಬಿಟ್ಟಾಗ “ಏಯ್, ನಿಮ್ಮ ಕೆಲಸ ನೀವ ನೋಡ್ಕೊ ಹೋಗ್ರಿ” ಎಂದ ಕೂಡಲೆ ಎಲ್ಲರೂ ಹೊರಗೆ ಬರುತ್ತಿರುವಾಗ ವಿರುಪಾಕ್ಷಿ ಏನೋ ಹೇಳಲು ಬಾಯಿ ತೆಗೆಯುವಷ್ಟರಲ್ಲಿ ಎಲ್ಲರೂ ಅವನನ್ನು ದಬ್ಬಿಕೊಂಡು ಹೊರಗೆ ಬಂದುಬಿಟ್ಟರು. ಮಧ್ಯಾಹ್ನ ಲಂಚ್ ವೇಳೆಯಲ್ಲಿ ಎಲ್ಲರೂ ಮತ್ತೆ ಸೇರಿದಾಗ ಒಂದು ತೀರ್ಮಾನಕ್ಕೆ ಬಂದು ಆ ಸಾಯಂಕಾಲವೆ ಎರಡು ಕತ್ತೆಗಳಿಗೆ ಅನ್ವೇಷಣೆ ಮಾಡಲು ನಿರ್ಧರಿಸಲಾಯಿತು.

ಸಂಜೆ ಆಫೀಸ ವೇಳೆ ನಂತರ ಪರಿಚಿತ ಮಡಿವಾಳ ಮಾದೇವನ ಹತ್ತಿರ ಹೋಗಿ ವಿಚಾರಿಸಿದಾಗ, “ಅಲಾ ಇವನ, ಎಂತಾ ಕೆಲಸ ಆತ್ರಿ ಸಾಹೇಬ್ರ, ನನ್ನ ಕಡೆ ಇರುವುದು ಎರಡು, ಅವು ಹೆಣ್ಗತ್ತಿ. ಗಂಡ ಒಂದಿದ್ರ ಜೋಡಿನ ಕಳಿಸತಿದ್ಯಾ. ಅದರಾಗ ಈ ವರ್ಷ ಮಳಿ ಬರಲಾರದಕ ಈ ಮಳಿಗಾಲದಾಗ ಅವಕೂ ಭಾಳ ಡಿಮ್ಯಾಂಡ್ ಆಗೇದ. ಹಿಂಗಾಗಿ ಇಗಾಗಲೇ ನಾಲ್ಕೈದು ಸಂಘದೋರು ಸಂಚಕಾರಕಿ ಕೊಟ್ಟ ಹೋಗ್ಯಾರ. ಅದಕ ಮುಂದಿನ ಶನಿವಾರತನಕ ಯಾವುದು ಸಿಗಂಗಿಲ್ರಿ ಸಾಹೇಬ್ರ”

ಹಂಗ ಅನಬ್ಯಾಡೊ ಮಾದೇವ. ನಾವು ಶುಕ್ರವಾರ ಮಾಡುವರಿದ್ದಿವಿ. ಹಂಗ ಜ್ಯೋತಿಷಿ ಕೇಳ್ಕೊಂಡ ಬಂದಿವಿ ಭಾಳ ಉತ್ತಮ ದಿನ ಐತೆಂತ ಹೇಳ್ಯಾರ. ಅದಕ ಛಲೋ ದಿನ ಅಂತ ಆವತ್ತ ಇಟ್ಟಗೊಂಡಿವಿ. ಹೆಂಗಾರ ಅಡ್ಜಸ್ಟ್ ಮಾಡಬಿಡಪಾ” ಎಂದ ವಿರುಪಾಕ್ಷಿಗೆ,

ಅದೆಂಗಾಗೈತ್ರಿ ಸಾಹೇಬ್ರ, ಎಲ್ಲಾ ದಿನ ಗೊತ್ತ ಮಾಡಿ ಕೊಟ್ಟಾರ. ಅವತ್ತ ನಿಮಗೂ ಹೆಂಗ ಕೊಡಾಕ ಆಗತೈತಿ. ಅಷ್ಟ ಅಲ್ಲದ, ಊರಾಗ ನಮ್ಮವು ಭಾಳ ಛಂದ. ಲಗ್ನದಾಗ ಕನ್ಯಾ ಛಂದ ಇರದ ಇದ್ರ ಸರಿ ಅನಸ್ತದ ಏನ್ರಿ. ಅದ್ರಾಗ ನಮ್ಮವು ಕೈ ತೊಳೆದ ಮುಟ್ಟಬೇಕ, ಹಂಗ ಸಾಕೇನ್ರಿ. ಒಮ್ಮಿ ನೋಡಿದರ ಮತ್ತ ಮತ್ತ ನೋಡಬೇಕ ಅನ್ನೂಂವಂಗ ಅದಾವ್ರಿ ಸಾಹೇಬ್ರ. ಹಿಂಗಾಗಿ ಭಾಳ ಡಿಮಾಂಡ್ ಆಗೇತ್ರಿ. ಅದ್ಕ ನಾನು ಈ ಬ್ಯಾಸ್ಗಿ ಮುಗಿಯೊದೊಳಗ ಇನ್ನೊಂದೆರೆಡು ಮರಿ ತರಬೇಕಂತ ವಿಚಾರ ಮಾಡೇನಿ. ಆದ್ರ ಯಾರೋ ಒಬ್ರು ಹೇಳಿದ್ರು, ಮರಿ ತಂದ್ರ ತ್ರಾಸ ಆಗತೈತಿ. ಯಾರಾದ್ರೂ ಬಾಲ್ಯ ವಿವಾಹ ಅಂತ್ಹೇಳಿ ಕೇಸ್ ಗೀಸ್ ಹಾಕ್ಯಾರ ದೊಡ್ಡುವ ತಗೊಂಡ ಬಾ ಅಂತಂದ್ರು. ಹೆಚ್ಚ ರೊಕ್ಕ ಹೋದ್ರೂ ಅಡ್ಡಿಯಿಲ್ಲ. ಇನ್ನೊಂದ ವಾರದಾಗ ತರ್ತೀನಿ. ನಿವiಗ ಅಷ್ಟ ಅರ್ಜಂಟ್ ಇದ್ರ ಅಡ್ವಾನ್ಸ ಕೊಟ್ಟ ಹೋಗ್ರಿ. ಬೇಕಾದ್ರ ನಾಳೀನ ಹೊಸದ ತಂದ ಬಿಡ್ತಿನಿ”

ಅದಕ್ಕೆ ಪರಮೇಶಿ, “ಇದೇನು ವಿರುಪಾಕ್ಷಿ, ಸಂಗೀತ ಕಛೇರಿ ನಡಸ್ರಿ ಅಂದ ನೀವ ಹಾಡ್ರಿ ಅಂದಂಗಾತಲ ಇದು. ನಾವೇನ ಮದ್ವಿಗೆಂತ ಕೇಳಿದ್ರ ಇಂವ ಹೊಸದಾಗಿ ತರ್ತಿನಿ ಅಂತಾನ”

ನೀ ಸುಮ್ನಿರು ಪರಮಿ, ನಾಯೆಲ್ಲಾ ವಿಚಾರಸತಿನಿ. ಮಾದೇವ ಶುಕ್ರವಾರ ಹೇಳಿದ್ದಾರಂತಲ್ಲ. ಅವ್ರಿಗೆ ಎಷ್ಟೊತ್ತಿಗೆ ಬೇಕಂತೆ”

ಮದ್ಯಾನ ಸಾಡೆ ಬಾರಕ ಛಲೋ ಮುಹೂರ್ತ ಐತಂತ. ಅದನ ಮುಗಿಸಿ ಸಂಜಿ ಮುಂದ ತಂದ ಬಿಡ್ತಾರ”

ಹಂಗಿದ್ರ ಛಲೋನ ಆಯ್ತಲೋ ಮಾರಾಯಾ. ನಾವು ಗೋಧೂಳಿ ಮುಹೂರ್ತ ಅಂದ್ರ ಸಂಜಿಗೆ ಮಾಡಾಕ ಹತ್ತೇವಿ. ಸಂಜಿ ಮುಂದ ದೌಡ ಬಂದ್ರ ನಮಗ ಕಳಿಸಬಿಟ್ರ ಮದುವಿ ಮಾಡಿ ರಾತ್ರಿ ಕಳಿಸಿ ಬಿಡ್ತೀವಿ. ನಿನಗೂ ಹೆಚ್ಚು ದುಡಿದಂಗ ಆಗತೈತಿ. ಒಪ್ಕೊಂಡ ಬಿಡು ಮಾರಾಯಾ”

ಚಾರ್ಜ ಭಾಳ ಆಗತೈತಿ ಸಾಹೇಬ್ರ. ಒಂದ ಸಾವಿರ ನೋಡ್ರಿ”

ಭಾಳ ಆಗತ್ತಲ ಮಾರಾಯಾ, ಸ್ವಲ್ಪ ಕಮ್ಮಿ ಮಾಡಲಾ..”

ಹೆಂಗ್ರಿ ಸಾಹೇಬ್ರ, ಮುಂಜಾನಿಯಿಂದ ದುಡಿದಿರತೈತಿ. ಅಂತಾದರಲ್ಲಿ ಮತ್ತ ಡ್ಯೂಟಿ ಮಾಡೂದಂದ್ರ ಹಗರ ಕೆಲಸ ಏನ್ರಿ. ಏನ ನೀವ ಪರಿಚಯದವರಂತ ಕಮ್ಮಿ ಹೇಳಿನ್ರಿ. ಅಲ್ದ ನಮ್ಮವು ಭಾಳ ಛಂದ ಅದವು” ಮತ್ತೆ ಆತ ವರ್ಣಿಸತೊಡಗಿದಾಗ ಪಶುಪತಿ “ಸರಿ ಬಿಡಪ, ನೀನ ಹೇಳಿದ ರೇಟ್ ಇರಲಿ”

ಸಾಹೇಬ್ರ, ಅವತ್ತ ನೀವ ಅದನ ವಾಪಸ ಕಳಿಸೋ ಮುಂದ ಛಲೋತಂಗ ದೃಷ್ಟಿ ತಗದ ಕಳಸರಿ. ಓಣ್ಯಾಗ ಎಷ್ಟ ಮಂದಿ ಕಣ್ಣ ಬಿದ್ದಿರತಾವೊ ಯಾರಿಗೊತ್ತು. ಇಲ್ಲಂದ್ರ ಅದು ಜಡ್ಡಿಗೆ ಬಿದ್ರ ನನ್ನ ಕೆಲಸ ಮೂರಾಬಟ್ಟೆ ಆಗ್ತದ” ಎಂದಾಗ ಬೇರೆ ದಾರಿ ಇಲ್ಲದ, “ಸರಿಯಪ್ಪ ನೀ ಹೇಳಿದಂಗ ಆಗಲಿ. ಈಗ ಗಂಡಿಗೇನು ಮಾಡೂದು. ನಿನಗ ಯಾವದಾದರೂ ಗೊತ್ತತನ ಮಾದೇವ” ಎಂದು ವಿರೂಪಾಕ್ಷಿ ಕೇಳಿದಾಗ “ಅದೆಲ್ಲ ನಮ್ಮ ಮಾವಂದ ಎರಡ ಅದಾವ. ಆದ್ರ ಜೋಡಿ ಸರಿ ಬೀಳಾಂಗಿಲ್ಲ ಸಾಹೇಬ”

ಅಯ್ಯೋ ಮಾರಾಯಾ ಜೋಡಿ ಸರಿ ಯಾರ ನೋಡ್ತಾರ, ಮದ್ವಿ ಒಂದ ಆದ್ರ ಸಾಕಪಾ” ಎಂದು ಒಣರೊಟ್ಟಿ ಹೇಳಿದಾಗ “ಅದೆಂಗ ಆಗತೈತ್ರಿ. ಕನ್ಯಾ ಛಂದ ಇದ್ರ ವರನೂ ಛಂದ ಇರಬೇಕಲ್ರಿ. ನಿಮ್ಮ ಮಗ ಛಂದ ಇದ್ದ ಎಂತಾದರ ಕನ್ಯಾ ತರ್ತಿರೇನ ಹೆಂಗ. ಹಂಗೆಲ್ಲ ಆಗಾಂಗಿಲ್ಲ ಸಾಹೇಬ್ರ. ನೋಡಾಕ ಛಂದ ಇದ್ರ ಅಂದ್ರ ಅದೊಂದು ಮದ್ವಿರಿಯಪಾ. ಅಂದಾಂಗ ನೆನಪಾತು. ನಿಮಗ ಅಗಸಿಮನಿ ರಾಮಣ್ಣ ಗೊತ್ತಲ್ಲ. ಅವ್ನ ಹತ್ರ ಹೋದ್ರ ಮಾತ್ರ ನಿಮ್ಮ ಕೆಲಸ ಆಗತೈತಿ. ಅವಂದ ಮಾತ್ರ ನಮ್ಮ ರಾಣಿಗೆ ಪಸಂದ ಜೋಡಿ ಆಕ್ಕೈತಿ.”

ಹೌದನ, ಆದ್ರ ಅವನ ಮನಿ ನಾವ್ಯಾರು ನೋಡಿಲ್ಲ. ನೀನಬಂದಿದ್ರ ಚಲೋ ಮಾದೇವ”

ಇಲ್ರಿ, ನನಗ ಭ್ಹಾಳ ಕೆಲಸ ಅದ. ನನ್ನ ಮಗನ ಕಳಿಸ್ತೀನಿ. ಅಂವ ನಿಮಗ ಅವನ ಮನಿ ತೋರಿಸ್ತಾನ. ಆದ್ರ ಬಾಳ ಹುಷಾರಿಂದ ಸಣ್ಣ ಸಂದಿಗುಂಟ ಹೋಗಬೇಕ. ಬಾಳ ರಾಡಿ, ಸಗಣಿ ತುಂಬಿರತದ, ಕಾಲ ಜಾರಿ ಬಿದ್ರ ತ್ರಾಸ ಮತ್ತ..” ಎಂದು ತನ್ನ ಮಗನನ್ನು ಕರೆದು ಇವರಿಗೆಲ್ಲ ರಾಮಣ್ಣನ ಮನೆ ತೋರಿಸಲಿಕ್ಕೆ ಹೇಳಿ ಆತ ತನ್ನ ಕೆಲಸಕ್ಕೆ ಹೋದಾಗ ಇವರೆಲ್ಲ ಹುಡುಗನ ಬೆನ್ನು ಹಿಂದೆ ನಡೆಯ ಹತ್ತಿದರು.

ನಿಜ. ಮಾದೇವ ಹೇಳಿದ್ದಕ್ಕಿಂತ ಭಯಂಕರವಾಗಿತ್ತು ಆ ಮನೆಗೆ ಹೋಗುವ ಸಂದಿ. ಅಕ್ಕ ಪಕ್ಕದ ಮನೆಗಳ ಗೋಡೆಯನ್ನು ಹಿಡಿದುಕೊಂಡು, ಮೂಗು ಮುಚ್ಚಿಕೊಂಡು ಹೋಗಬೇಕಾದರೆ ಎಲ್ಲರಿಗೂ ಈ ಕೆಲಸಕ್ಕೆ ಯಾಕಾದರೂ ಕೈ ಹಾಕಿದೇವೊ ಎನ್ನುವಂತಾಗಿತ್ತು. ಸಂದಿಗುಂಟ ಒಂದು ಚಿಕ್ಕ ಮೋರಿ. ಅದರಲ್ಲಿ ಕೆಸರು. ಗಂಜಲು ಸೇರಿಕೊಂಡು ಅಸಾಧಾರಣ ವಾಸನೆ. ತುಂಬಾ ನಾಜೂಕಿನಿಂದ ಗೋಡೆಗೆ ಆತುಕೊಂಡು ಹೋಗುವದರಲ್ಲಿ ಆಯ ತಪ್ಪಿದ ವಿರುಪಾಕ್ಷಿ ಸಗಣಿ ಮೇಲೆ ಕಾಲಿಟ್ಟ. ತಕ್ಷಣವೆ ಕಾಲು ಜಾರಿ ಒಂದು ಕಾಲು ಮೋರಿ ಮೇಲೆ, ಇನ್ನೊಂದು ಕಾಲು ಮೋರಿಯಲ್ಲಿ. ಕೆಸರೆಲ್ಲ ಮೈ ಮೇಲೆ. ಎಲ್ಲರೂ ಅವನನ್ನು ಮೇಲೆತ್ತುವಲ್ಲಿ ಸಾಕು ಸಾಕಾಯಿತು. ವಿರುಪಾಕ್ಷಿ “ನೋಡ್ರಪಾ, ನನಗಂತೂ ಅಲ್ಲಿಗೆ ಬರಲಿಕ್ಕೆ ಆಗೊಲ್ಲ. ಇಂತ ವೇಷದಾಗ ಹೋದ್ರ ನಾಯಿ ಬೆನ್ನ ಹತ್ತದ ಇರಾಂಗಿಲ್ಲ. ಅಲ್ದ ಮೈಯೆಲ್ಲ ನೋವು”

ಅಯ್ಯಯೋ ಹಂಗ ಮಾತ್ರ ಅನ್ನಬ್ಯಾಡ ವಿರುಪಾಕ್ಷಿ. ನೀನಅ ಮುಖ್ಯಸ್ಥ.. ನೀನ ಹಿಂಗಂದ್ರ ಹೆಂಗ. ಹೆಂಗೂ ಅವನ ಮನಿ ಸಮೀಪ ಬಂದಿವಿ. ಹೇಳಿ ಹೋಗೋಣ ಮಾರಾಯ” ಎಂದಾಗ ಗೆಳೆಯರು ಹಾಗೂ ಸಹೋದ್ಯೋಗಿಗಳ ಮಾತಿಗೆ ಮಣಿದ. ಅದರೆ ಮನೆ ಹತ್ತಿರ ಹೋದಾಗ ಅಂಗಳದಲ್ಲಿ ಮಲಗಿದ್ದ ನಾಯಿಯೊಂದು ಇವರನ್ನು ನೋಡಿ ಬೊಗಳ ಹತ್ತಿತು. ನಾಯಿ ಬೊಗಳಿದನ್ನು ಕೇಳಿ ರಾಮಣ್ಣ ಮನೆಯಿಂದ ಹೊರಗೆ ಬಂದು “ಯಾರ್ರಿ, ಯಾರ ಬೇಕಾಗಿತ್ತ. ಎನಿದೆಲ್ಲ ಮೈಯೆಲ್ಲಾ ರಾಡಿ” ಎಂದು ಕೇಳುವಷ್ಟರಲ್ಲಿ ಮಾದೇವನ ಮಗ “ಮಾಂವ, ಇವರೆಲ್ಲ ನಿನ್ನ ಹತ್ರ ಬಂದಾರ. ಗಂಡ ಕತ್ತಿ ಬೇಕಂತ. ಅದ್ಕ ಅಪ್ಪ ಕಳಿಸ್ಯಾನ” ಎಂದು ಅವನ ಉತ್ತರಕ್ಕೂ ಕಾಯದೆ ಹೋಗಿ ಬಿಟ್ಟ. “ಹೋ.. ಹೋ.. ಹಾಂಗ, ಬರ್ರಿ ಬರ್ರಿ ಸಾಹೇಬ್ರ. ಯಾಕ್ರಿ ಸಾಹೇಬ್ರ ಜಾರಿ ಬಿದ್ರೆನ. ಬಾಳ ಸಣ್ಣ ಸಂದಿ ಐತ್ರಿ. ಅಲ್ದ ರಾಡಿಯಾಗಿ ಅಡ್ಡಾಡಕ ಬಾಳ ತ್ರಾಸ ಆಗೇದ ಇಲ್ಲಿ. ಹೌದ ನಿಮಗ ಯಾವತ್ತ ಬೇಕಾಗಿತ್ತು.”

ಶುಕ್ರವಾರ ಸಂಜಿಗಿ”

ಶುಕ್ರವಾರ ಸಂಜೆಗೆ ಅಂದ್ರ ಕಷ್ಟ ಆತಲ್ರಿ ಸರ್. ಅವತ್ತು ಇಬ್ಬರು ಹೇಳಿ ಹೋಗ್ಯಾರ. ಆಯ್ತರಿ. ಹೆಂಗೂ ಸಂಜೆಕ ಅಂತಿರಲ್ಲ. ಹೆಂಗಾದ್ರೂ ಅಡ್ಜಸ್ಟ್ ಮಾಡೋಣ ಬಿಡ್ರಿ. ಹೌದು ಕನ್ಯಾ ಯಾವದು ಹೇಳ್ರಿ.” ಅದಕ್ಕೆ ವಿರುಪಾಕ್ಷಿ “ಅದ ರಾಮಣ್ಣ, ಮಾದೇವಂದು ಹೇಳೀದಿವಿ”

ಹಂಗ್ರ್ಯಾ, ಜೋಡಿ ಪಸಂದೈತಿ ಬಿಡ್ರಿ. ಹೋದ ವರ್ಷ ಈ ಜೋಡಿ ಮದವಿ ಮಾಡಿದಕ ಎಂತಾ ಮಳಿ ಆಯ್ತ ಅಂತಿನಿ. ನನ್ನ ಜೀವನದಾಗ ನೋಡಿರಲಿಲ್ಲ ಅಂತಾ ಮಳಿ. ಅದಕ ಈ ಜೋಡಿಗೆ ಭಾಳ ಮಂದಿ ಹೇಳ್ತಾರ”

ಅದೇನು ಸರಿ ರಾಮಣ್ಣ ರೇಟ್ ಹೇಳಲಿಲ್ಲ” ವಿರುಪಾಕ್ಷಿ ಕೇಳಿದಾಗ, “ಎರಡ ಸಾವಿರ ಕೊಡ್ರಿ ಸಾಹೇಬ್ರ”

ಇದೇನು ರಾಮಣ,್ಣ ಮಾದೇವಕ್ಕಿಂತ ಹೆಚ್ಚ ಆತಲಾ ನಿಂದ”

ಹೌದ್ರಿ ಸರ್, ನಮ್ದು ಗಂಡು. ಮಾದೇವಂದು ಹೆಣ್ಣು. ಎರಡು ಒಂದೇ ರೇಟ್ ಅಂದ್ರ ಹೆಂಗ್ರಿ. ವರ ಅಂದ್ರ ಸ್ವಲ್ಪ ವಜನ ಜಾಸ್ತಿ ಅಲ್ಲೇನ್ರಿ”

ಆಯ್ತು ಬಿಡಪಾ, ಅವತ್ತ ಸಂಜೆಗೆ ನೀವ ಗುಡಿ ಕಡೆ ಹೊಡಕೊಂಡ ಬಂದ ನೋಡಾಕ ಛಂದ ಮಾಡಬೇಕ ನೋಡಪಾ” ಎನ್ನುತ್ತಾ ಅಲ್ಲಿಯ ವಾಸನೆ ತಾಳಲಾರದೆ ಅಡ್ವಾನ್ಸ್ ಕೊಟ್ಟು ಎಲ್ಲರೂ ಮನೆ ಸೇರುವದೊಳಗೆ ಸುಸ್ತೋ ಸುಸ್ತು.

ಮದುವೆಯ ಆ ದಿನ ಅಂದರೆ ಶುಕ್ರವಾರ ಸಾಯಂಕಾಲ ಗುಡಿಯ ಮುಂದೆ ಭಾಜಾ ಭಜಂತ್ರಿಯೊಂದಿಗೆ ಎಲ್ಲರೂ ಹೆಂಗಳೆಯರೊಂದಿಗೆ ಸೇರಿಯಾಗಿತ್ತು. ಮದುಮಕ್ಕಳನ್ನು ಮಾದೇವ ಹಾಗೂ ರಾಮಣ್ಣ ತಂದಿದ್ದು ಆಗಿತ್ತು. ಅವು ಸಿಂಗಾರಗೊಂಡು ಬರಬೇಕು ಅಷ್ಟೆ. ಗುಡಿಯ ಹಿಂದೆ ಅವುಗಳನ್ನು ಸಿಂಗರಿಸುತ್ತಿದ್ದ ವಿರುಪಾಕ್ಷಿ, ನಾರಾಯಣ, ಪರಮೇಶಿ, ಮುರಾರಿ ಒಣರೊಟ್ಟಿ ಮುಂದಿನ ಕಾರ್ಯಕ್ಕೆ ಅವಸರ ಮಾಡುತ್ತಿದ್ದರು. ಹಣೆ, ಬೆನ್ನು, ಕಾಲು ಎಲ್ಲವನ್ನು ಶೃಂಗರಿಸುತ್ತಿದ್ದರು. ಅಷ್ಟರಲ್ಲಿ ಪಶುಪತಿ ವಿರುಪಾಕ್ಷಿ, ಬೆನ್ನಿನ ಮೇಲಿನ ವಸ್ತ್ರವನ್ನು ಹಿಂದಕ್ಕೆ ತೆಗೆದುಕೊಂಡು ಬಾಲದ ಕೆಳಗಡೆ ಕಟ್ಟಬೇಕು ನೋಡುಎಂದಾಗ ಆದಷ್ಟು ಬೇಗ ಮುಗಿಸಿ ಮನೆಗೆ ಹೋಗಬೇಕೆಂದು ಅವಸರಿಸುತ್ತಿದ್ದ ವಿರುಪಾಕ್ಷಿ ಜೂಲಿನ ಎರಡು ಲಾಡಿಯ ತುದಿ ಹಿಡಿದು ಬಾಲ ಮೇಲಕ್ಕೆತ್ತಿ ಕಟ್ಟುತ್ತಿದ್ದ. ವಿರುಪಾಕ್ಷಿಯ ಕೈ ಸ್ಪರ್ಶದಿಂದ ಕಚಗುಳಿಯಿಟ್ಟಂತಾಗಿ ಗಂಡು ಕತ್ತೆ ಪಟ್ ಅಂತ ಎರಡು ಕಾಲನ್ನು ಏಕಕಾಲಕ್ಕೆ ಮೇಲಕೆತ್ತಿ ಹಿಂದೆ ಜಾಡಿಸಿದಾಗ ವಿರುಪಾಕ್ಷಿ “ಅಯ್ಯೋ ಸತ್ತೆ” ಎನ್ನುತ್ತಾ ಕೆಳಗೆ ಬಿದ್ದ. ಹಣೆಯನ್ನು ಸಿಂಗರಿಸುತ್ತಿದ್ದ ಎಲ್ಲರೂ ಅತ್ತ ನೋಡಿದಾಗ ವಿರುಪಾಕ್ಷಿಯ ಮೂಗು ಒಡೆದು, ಮುಖ ಬುರುಬರುನೆ ಪೂರಿ ಉಬ್ಬುವ ಹಾಗೆ ಉಬ್ಬ ಹತ್ತಿತು. ಎಲ್ಲರಲ್ಲೂ ಗೊಂದಲ.

ಏನು ಮಾಡೂದು ಈಗ ಎಂತ ಫಜೀತಿ ಆತಿದು. ಮೊದಲ ದವಾಖಾನಿಗೆ ನಡಿರಿ. ಭಾಳ ಪೆಟ್ಟ ಹತ್ತೆತಿ” ಎನ್ನುತ್ತ ಅವನನ್ನು ಎತ್ತಿಕೊಂಡು ಸಮೀಪದ ಕ್ಲಿನಿಕ್ ಕಡೆ ಅವಸರದಲ್ಲಿ ನಡೆದರು. ವಿರುಪಾಕ್ಷಿ ಹೆಚ್ಚು ಕಡಿಮೆ ಮೂರ್ಛಾವಸ್ಥೆಯಲ್ಲಿದ್ದನು.

ಇತ್ತ ಅಲ್ಲಿಯೆ ಇದ್ದವರು ಹಾಗೋ ಹೀಗೋ ವಧುವರರನ್ನು ಸಿಂಗರಸಿ ಯಾದಿ ಮೇಲೆ ಶಾದಿ ಅನ್ನು ಹಾಗೆ ಬೇರೆ ಯಾವುದು ಕೆಲಸ ಮಾಡದೆ ಅಂತೂ ಇಂತೂ ಮಾಂಗಲ್ಯ ಧಾರಣೆ ಮಾಡಿ ಮದುವೆ ಮುಗಿಸಿದರು. ವಧು ವರರ ಅನ್ವೇಷಣೆ ಎಷ್ಟು ಕಷ್ಟಾಗಿತ್ತೋ, ಆದರೆ ಮದುವೆ ಮಾತ್ರ ಕೆಲವೇ ನಿಮಿಷದಲ್ಲಿ ಮುಗಿದಿತ್ತು.

ಮದುವೆ ಏನೋ ಮುಗಿದಿತ್ತು. ಮಳೆ ಬಂತೋ ಇಲ್ಲೋ ಗೊತ್ತಿಲ್ಲ. ಒಂದು ವಾರ ರಜೆ ಕೇಳಿದ್ದ ವಿರುಪಾಕ್ಷಿಗೆ ಹದಿನೈದು ದಿನ ರಜೆ ಸಿಕ್ಕಿತು. ಆದರೆ, ಅದು ಆಸ್ಪತ್ರೆಯ ಬೆಡ್ ರೆಸ್ಟ್ ರೂಪದಲ್ಲಿ. ಅತ್ತ ಗೆಳೆಯನ ಮದುವೆಗೂ ಇಲ್ಲ. ಇತ್ತ ಗಾರ್ದಭ ವಿವಾಹಕ್ಕೂ ಇಲ್ಲ.

*ಲೇಖಕರು ಕೆ..ಎಸ್. ಅಧಿಕಾರಿ; ಪ್ರಸ್ತುತ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆಯ ಹಿರಿಯ ಅಧಿಕಾರಿಯಾಗಿ ಬಾಗಲಕೋಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವಾರು ಕಥೆ, ಕವನ, ಲೇಖನ, ಹಾಸ್ಯ ಬರಹಗಳು ಪ್ರಕಟವಾಗಿವೆ.

Leave a Reply

Your email address will not be published.