ಗುತ್ತಿಗೆದಾರರ ಸರ್ಕಾರದಲ್ಲಿ ಜನತಂತ್ರ ವ್ಯವಸ್ಥೆ ನಿರ್ಜೀವ!

ಕರ್ನಾಟಕ ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ಬೃಹತ್ ಮೊತ್ತದ ಗುತ್ತಿಗೆಗಳಲ್ಲಿ ಬೇನಾಮಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ನಿಯಂತ್ರಣ ಮಾಡಬೇಕಾದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ತಾವೇ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಮತ್ತು ಪಾಲು ಪಡೆಯುತ್ತಿರುವುದರಿಂದ ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳುವ ಅಘೋಷಿತ ಒಪ್ಪಂದ ರಾಜ್ಯದಲ್ಲಿ ಜಾರಿಯಲ್ಲಿದೆ!

ರಮೇಶ್ ಬಾಬು

ಕಾಮಗಾರಿಗಳು ಸಮಾಜಮುಖಿಯ ಒಂದು ಭಾಗ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೆ ಕಾಮಗಾರಿಗಳ ಮೂಲಕ ಅಭಿವೃದ್ಧಿ ಮತ್ತು ನಾಗರಿಕತೆಯ ಬೆಳವಣಿಗೆ ಸಾಧ್ಯ ಹಾಗೂ ಇದು ಎಂದಿಗೂ ಚಲನಶೀಲವಾಗಿರಬೇಕು. ಸರ್ಕಾರವೇ ನೇರವಾಗಿ ಎಲ್ಲಾ ಕಾಮಗಾರಿಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲದ ಕಾರಣ ಗುತ್ತಿಗೆದಾರರ ಮೂಲಕ ಕಾಮಗಾರಿಗಳನ್ನು ಸಾಕಾರಗೊಳಿಸಿ ತನ್ನ ರಾಜಸ್ವದ ಮೂಲಕ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುತ್ತದೆ. ರಾಜರ ಕಾಲದಲ್ಲಿ ಬ್ರಿಟಿಷ್ ಸರ್ಕಾರದ ಕಾಲದಲ್ಲಿ ಮಾಡಲಾಗಿರುವ ಕೆರೆಕಟ್ಟೆಗಳು, ಕೋಟೆಗಳು, ಕಟ್ಟಡಗಳು, ರಸ್ತೆಗಳು, ಸಮುದಾಯ ಮಂದಿರಗಳು ಇಂದಿಗೂ ಅವುಗಳ ಗುಣಮಟ್ಟ ಮತ್ತು ದೀರ್ಘಕಾಲದ ಬಾಳಿಕೆಗಾಗಿ ನಮಗೆ ಸ್ಮಾರಕಗಳಾಗಿ, ಕಣ್ಣ ಮುಂದಿನ ದಾಖಲೆಗಳಾಗಿ ಕಾಣುತ್ತವೆ.

ಇತ್ತೀಚೆಗೆ ಕರ್ನಾಟಕದ ಗುತ್ತಿಗೆದಾರರ ಸಂಘಗಳ ಒಕ್ಕೂಟವು ರಾಜ್ಯದ ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಪರ್ಸೆಂಟೇಜ್ ದಂಧೆಯನ್ನು ಲಿಖಿತವಾಗಿ ಈ ದೇಶದ ಪ್ರಧಾನ ಮಂತ್ರಿಗಳಿಗೆ ಮನವಿ ಮೂಲಕ ದಾಖಲಿಸಿದ್ದು, ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿದೆ. ಅಂದಮಾತ್ರಕ್ಕೆ ಎಲ್ಲಾ ಗುತ್ತಿಗೆದಾರರು ಸತ್ಯಹರಿಶ್ಚಂದ್ರನ ಸಂತತಿಯವರೆಂದು ಭಾವಿಸಬೇಕಾಗಿಲ್ಲ. ತಮ್ಮ ಕಾರ್ಯಸಾಧನೆಗೆ ಕೆಲವು ಗುತ್ತಿಗೆದಾರರು ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ.

ಕರ್ನಾಟಕದಲ್ಲಿ 1947 ರಿಂದ ಇಲ್ಲಿಯವರೆಗೆ 23 ಜನ ಮುಖ್ಯಮಂತ್ರಿಗಳನ್ನು ಕಂಡಿರುತ್ತೇವೆ. ಹಿಂದಿನ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು ಅವರನ್ನು ಹೊರತುಪಡಿಸಿ 1980ರ ವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಭ್ರಷ್ಟಾಚಾರದ ಆರೋಪಗಳು ಬಂದಿರಲಿಲ್ಲ. ಅರಸುರವರ ಮೇಲೆ ಬಂದಂತಹ ಆರೋಪದ ತನಿಖೆಗಾಗಿ ನ್ಯಾಯಮೂರ್ತಿ ಗ್ರೋವರ್ ಆಯೋಗವನ್ನು ರಚಿಸಲಾಯಿತಾದರೂ, ಆಯೋಗದ ವರದಿ ಮೂಲೆ ಸೇರಿದ ಕಟುಸತ್ಯ ನಮ್ಮ ಮುಂದೆ ಇದೆ. ತದನಂತರ ಬಂದ ಮುಖ್ಯಮಂತ್ರಿಗಳಲ್ಲಿ ವೀರೆಂದ್ರ ಪಾಟೀಲ್ ಮತ್ತು ಜೆ.ಹೆಚ್.ಪಟೇಲ್ ಅವರನ್ನು ಹೊರತುಪಡಿಸಿ ಉಳಿದ ಬಹುತೇಕ ಎಲ್ಲಾ ಮುಖ್ಯಮಂತ್ರಿಗಳು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ವರ್ಗಾವಣೆ ದಂಧೆ, ಗುತ್ತಿಗೆ ದಂಧೆ, ಒತ್ತಡ ಲಾಬಿಗಳಿಗೆ ಅನುಕೂಲ ಮಾಡಿರುವ ಆರೋಪಗಳನ್ನು ಹೊಂದಿರುತ್ತಾರೆ.

ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಗುತ್ತಿಗೆಗಳಿಗೆ ಸಂಬಂಧಪಟ್ಟಂತೆ ಗರಿಷ್ಠ ಮಟ್ಟದ ಭ್ರಷ್ಟಾಚಾರದ ಆರೋಪ ಗುತ್ತಿಗೆದಾರರ ಸಂಘಗಳಿಂದಲೇ ಬಂದಿದ್ದು, ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ಹಾಗೂ ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳು ಜಾಣ ಕಿವುಡಿಗೆ ಶರಣಾಗಿದ್ದಾರೆ.

ಮಾಧ್ಯಮಗಳಲ್ಲಿ ದಾಖಲೆ ಸಮೇತ ಭ್ರಷ್ಟಾಚಾರದ ಪ್ರಕರಣಗಳು ವರದಿಯಾಗುತ್ತಿದ್ದರೂ, ಜನಪ್ರತಿನಿಧಿಗಳು ಸರ್ಕಾರವನ್ನು ಪ್ರಶ್ನೆ ಮಾಡುವ ಪ್ರವೃತ್ತಿಯನ್ನು ಕೈಬಿಟ್ಟಿದ್ದಾರೆ. ಬೆರಳೆಣಿಕೆಯ ಜನಪ್ರತಿನಿಧಿಗಳು ಧ್ವನಿಯೆತ್ತಿದರೂ ಅದಕ್ಕೆ ಜನಸಾಮಾನ್ಯರ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿ ದೊರಕುತ್ತಿಲ್ಲ. ಬಹುತೇಕ ಕರ್ನಾಟಕದ ಎರಡೂ ಸದನಗಳಿಗೆ ಜಾತಿ ಮತ್ತು ಹಣದ ದಂಧೆಯ ಕಾರಣಕ್ಕಾಗಿ ಸದಸ್ಯರ ಆಯ್ಕೆಗಳು ನಡೆಯುತ್ತಿರುವುದರಿಂದ, ಇಂತಹ ಸದಸ್ಯರು ರಾಜ್ಯ ಸರ್ಕಾರದ ಕಾಮಗಾರಿಗಳಲ್ಲಿ ಪರೋಕ್ಷವಾಗಿ ಗುತ್ತಿಗೆದಾರರು ಆಗಿರುವುದರಿಂದ, ಹಣವೊಂದೇ ಅವರಿಗೆ ದಂಧೆಯಾಗಿದೆ. ಇದು ಕೇವಲ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿರುವುದಿಲ್ಲ. ಸದನಗಳಲ್ಲಿ ಸಾರ್ವಜನಿಕ ವಿಷಯಗಳ ಮೇಲೆ ಗಂಭೀರ ಚರ್ಚೆಗಳು ಇದೇ ಕಾರಣಕ್ಕೆ ನಡೆಯುತ್ತಿಲ್ಲ.

ಕರ್ನಾಟಕ ರಾಜ್ಯದಲ್ಲಿ ರೇಷ್ಮೆ ಇಲಾಖೆಯಂತಹ ಸಣ್ಣ ಇಲಾಖೆಯಿಂದ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಇಲಾಖೆವರೆಗೆ ಸುಮಾರು 42 ಇಲಾಖೆಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ರಾಜ್ಯದ ಬಜೆಟ್ ಹಂಚಿಕೆಯಲ್ಲಿ ಹೆಚ್ಚು ಅನುದಾನಗಳನ್ನು ಪಡೆಯುವ ಇಲಾಖೆಗಳ ಖಾತೆಗಳನ್ನು ಪಡೆಯಲು ಮಂತ್ರಿಗಳಲ್ಲಿ ಪೈಪೋಟಿ ಇರುತ್ತದೆ. ಶಾಸಕರ ವರ್ಚಸ್ಸು ಮತ್ತು ಅನುಭವದ ಮೇಲೆ ಖಾತೆ ಹಂಚಿಕೆ ಮಾಡುವ ದಿನಗಳು ಕಣ್ಮರೆಯಾಗಿವೆ. ತಮ್ಮ ಜಾತಿ ಹಾಗೂ ಹಣಬಲದ ಮೇಲೆ ಖಾತೆ ಪಡೆಯುವ ಮತ್ತು ಹಣ ಮಾಡುವ ಪ್ರವೃತ್ತಿ ಲಜ್ಜೆಯಿಲ್ಲದೆ ನಡೆಯುತ್ತಿದೆ. ತಮ್ಮ ಶಾಸಕ ಸ್ಥಾನಕ್ಕೇ ರಾಜಿನಾಮೆ ನೀಡಿ ಪಕ್ಷಾಂತರ ಮಾಡಿ ಹಣದ ಬಲದ ಮೇಲೆ ಮತ್ತೆ ಚುನಾವಣೆಗೆ ಹೋಗುವವರನ್ನು ಜನರು ಮರು ಆಯ್ಕೆ ಮಾಡುತ್ತಿರುವುದು ಪ್ರಜಾಪ್ರಭುತ್ವದ ಅಣಕವಾಗಿರುತ್ತದೆ. ಇಂತಹ ಪಕ್ಷಾಂತರಿಗಳ ಹಣದ ಮೂಲವೇ ಗುತ್ತಿಗೆ!

ಕರ್ನಾಟಕದಲ್ಲಿ ಭ್ರಷ್ಟಾಚಾರವನ್ನು ಸಾರ್ವತ್ರೀಕರಣ ಮಾಡುವ ಪ್ರವೃತ್ತಿ ಬಹಿರಂಗವಾಗಿ ಲಜ್ಜೆರಹಿತವಾಗಿ ನಡೆಯುತ್ತಿದೆ. ಮೊದಮೊದಲು ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಕೆಲವು ಇಲಾಖೆಗಳಲ್ಲಿ ಮಾತ್ರ ಶೇಕಡ ಒಂದರಿಂದ ಎರಡರಷ್ಟು ಹಣವನ್ನು ಲಂಚವಾಗಿ ಸರ್ಕಾರಿ ಅಧಿಕಾರಿಗಳು ಕದ್ದು ಮುಚ್ಚಿ ಪಡೆಯುತ್ತಿದ್ದರು. ತದನಂತರ ಇಂತಹ ದಂಧೆ ರಾಜಕಾರಣಿಗಳಿಗೂ ವ್ಯಾಪಿಸಿತು. ನಿಧಾನವಾಗಿ ಲಂಚದ ಪ್ರಮಾಣ ಕೆಲವು ಇಲಾಖೆಗಳಲ್ಲಿ ಶೇಕಡ ಐದಕ್ಕೆ ತಲುಪಿತು.

ಉದಾಹರಣೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣದಲ್ಲಿ ಶೇಕಡ ಐದರ ಲಂಚದ ಪರಿಪಾಠವಿದ್ದರೆ, ಕಟ್ಟಡ ನಿರ್ಮಾಣದಲ್ಲಿ ಶೇಕಡ ಎರಡರ ಲಂಚವನ್ನು ನೀಡಲಾಗುತ್ತಿತ್ತು. 80ರ ದಶಕದ ನಂತರ ಎಲ್ಲಾ ಗುತ್ತಿಗೆಗಳಲ್ಲಿ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಶೇಕಡವಾರು ಲಂಚ ಪಡೆಯುವ ಪ್ರವೃತ್ತಿ ಎಲ್ಲಾ ಇಲಾಖೆಗಳಲ್ಲಿ ಪ್ರಾರಂಭವಾಯಿತು. ಕರ್ನಾಟಕದಲ್ಲಿ ಭ್ರಷ್ಟಾಚಾರ ಕಡಿವಾಣ ಮಾಡಲು ಲೋಕಾಯುಕ್ತ ಸಂಸ್ಥೆ ಸ್ಥಾಪನೆಯಾದರೂ, ದಿನೇ ದಿನೇ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟ ಹಾಗೂ ಲಂಚದ ಪ್ರಮಾಣ ಹೆಚ್ಚಾಯಿತು. ಲೋಕಾಯುಕ್ತ ಸಂಸ್ಥೆಯು ಮಾಧ್ಯಮಗಳಲ್ಲಿ ಹೆಚ್ಚು ಸದ್ದು ಮಾಡಿದ್ದನ್ನು ಬಿಟ್ಟರೆ, ಲೋಕಾಯುಕ್ತ ಸಂಸ್ಥೆಯ ಮೇಲೆ ಭ್ರಷ್ಟಾಚಾರದ ಆರೋಪ ಅಂಟಿಕೊಂಡಿತು.

ಸಾಂವಿಧಾನಿಕವಾಗಿ ರಾಜ್ಯ ಸರ್ಕಾರದ ಕಾರ್ಯಾಂಗದ ನೌಕರರನ್ನು ತುಂಬಲು ಸ್ಥಾಪಿತವಾಗಿರುವ ಕರ್ನಾಟಕ ಲೋಕಸೇವಾ ಆಯೋಗವೇ ಕಳಂಕಿತ ಸಂಸ್ಥೆಯಾಗಿ ಭ್ರಷ್ಟ ವ್ಯವಸ್ಥೆಗೆ ಸಾಕ್ಷಿಯಾಯಿತು. ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತ ಬಹುತೇಕ ಸರ್ಕಾರಿ ನೌಕರರು ಸ್ವಜನ ಪಕ್ಷಪಾತದ ಮೂಲಕ ಹಾಗೂ ಭ್ರಷ್ಟಾಚಾರದ ಮೂಲಕ ಗುತ್ತಿಗೆದಾರರೊಂದಿಗೆ ಷಾಮೀಲಾದರು. ಕರ್ನಾಟಕ ರಾಜ್ಯ ಹಿಂದೆಂದೂ ಕಾಣದ ಗರಿಷ್ಠ ಮಟ್ಟದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಕಾಮಗಾರಿಯನ್ನೆ ಮಾಡದೆ ಬಿಲ್ ಪಡೆದ ಪ್ರಕರಣಗಳು ಬಹಿರಂಗವಾಗಿವೆ. ಆರೋಪದ ತನಿಖೆಯ ಹಾದಿತಪ್ಪಿಸಲು ದಾಖಲೆಗಳ ಕೊಠಡಿಗೆ ಬೆಂಕಿ ಇಟ್ಟ ಮತ್ತು ಬೆಂಕಿ ಇಡುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ಸುದ್ದಿಯಾದ ಕೆಲವು ದಿನ ಜನಸಾಮಾನ್ಯರು ಗೊಣಗುವುದು ಬಿಟ್ಟರೆ, ಭ್ರಷ್ಟರ ಭಂಡತನವೇನೂ ಕುಗ್ಗಿಲ್ಲ. ನೌಕರರ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಭಾಗಿಯಾಗುತ್ತಿದ್ದ ಜನಪ್ರತಿನಿಧಿಗಳು, ಗುತ್ತಿಗೆಗಳಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಭಾಗಿಯಾಗುವುದರ ಮೂಲಕ ಹಣದ ಜಾಳನ್ನು ಸುಲಭವಾಗಿ ಕಂಡುಕೊಂಡಿದ್ದಾರೆ.

ಕರ್ನಾಟಕದಲ್ಲಿ ಟೆಂಡರ್‍ಗಳನ್ನು ಪಾರದರ್ಶಕವಾಗಿ ನಡೆಸಲು ಇಪ್ರೊಕ್ಯೂರ್‍ಮೆಂಟ್ ಕಾಯ್ದೆ ಜಾರಿಗೊಳಿಸಲಾಗಿದೆ. ಐದು ಲಕ್ಷ ರೂಪಾಯಿಗಳ ಮೇಲ್ಪಟ್ಟ ಕಾಮಗಾರಿಗಳನ್ನು ಟೆಂಡರ್ ಮುಖಾಂತರ ನಡೆಸುವುದು ಕಡ್ಡಾಯಗೊಳಿಸಲಾಯಿತು. ತುಂಡು ಗುತ್ತಿಗೆಯ ಕಾಮಗಾರಿಗಳನ್ನು ನಿಷೇಧ ಮಾಡಲಾಗಿತ್ತು. ಯಾವುದೇ ಗುತ್ತಿಗೆದಾರ ಒಂದು ಕಾಮಗಾರಿಯ ಟೆಂಡರ್ ಪಡೆಯಲು ಅನೇಕ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಆದರೆ ಇಂದು ಕರ್ನಾಟಕದಲ್ಲಿ ಈ ಎಲ್ಲಾ ನಿಯಮಾವಳಿಗಳು ದಾರಿ ತಪ್ಪಿಸುವ ನಿಯಮಾವಳಿಗಳಾಗಿದ್ದು, ಗುತ್ತಿಗೆದಾರರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪರ್ಸೆಂಟೇಜ್ ಹಣವನ್ನು ನೀಡದೆ ಇದ್ದರೇ, ಪ್ರಾಥಮಿಕ ಹಂತದಲ್ಲೇ ಅವರ ಟೆಂಡರ್ ಅನ್ನು ತಿರಸ್ಕರಿಸುವ ಪರಿಪಾಠ ಜಾರಿಯಲ್ಲಿರುತ್ತದೆ. ಟೆಂಡರ್ ಅಂಗೀಕಾರಕ್ಕೆ ಮುಂಚೆ ಹಲವು ಹಂತಗಳ ಪರಿಶೀಲನೆ ಇದ್ದು, ಹೊಂದಾಣಿಕೆಯಾಗಿ ಗುತ್ತಿಗೆದಾರರು ಹಣ ನೀಡದೇ ಇದ್ದರೆ, ಅರ್ಹ ಗುತ್ತಿಗೆದಾರರನ್ನು ತಿರಸ್ಕರಿಸಿ ಬೇರೆಯವರಿಗೆ ಗುತ್ತಿಗೆ ನೀಡಲಾಗುತ್ತದೆ.

ಒಂದೊಂದು ಇಲಾಖೆಯ ಒಂದೊಂದು ಗುತ್ತಿಗೆ, ಸದರಿ ಗುತ್ತಿಗೆಯ ಒಟ್ಟಾರೆ ಹಣ, ಪಾವತಿ ಮಾಡುವ ವಿಧಾನ, ಹಣ ಪಾವತಿಯಾಗುವ ಸಮಯ ಇವುಗಳಿಗೆ ಅನುಗುಣವಾಗಿ ಲಂಚದ ಪ್ರಮಾಣವನ್ನು ನಿಶ್ಚಯ ಮಾಡಲಾಗುತ್ತದೆ. ಶಾಲೆಗಳಿಗೆ ಸರಬರಾಜು ಮಾಡುವ ಸರ್ಕಾರಿ ಪುಸ್ತಕಗಳ ಮುದ್ರಣದಿಂದ ಹಿಡಿದು ಜಲಸಂಪನ್ಮೂಲ ಇಲಾಖೆಯ ನೀರಾವರಿ ಯೋಜನೆಗಳವರೆಗೆ ಗುತ್ತಿಗೆದಾರರು ಶೇಕಡವಾರು ಲಂಚ ನೀಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶಾಲಾ ಮಕ್ಕಳ ಬಿಸಿಯೂಟದ ತತ್ತಿಯಿಂದ ಹಾಸಿಗೆ, ದಿಂಬು, ಸರ್ಕಾರಿ ಆಸ್ಪತ್ರೆಗಳ ಶವಸಾಗಾಣೆಯವರೆಗೆ ಗುತ್ತಿಗೆ ವ್ಯವಸ್ಥೆಯನ್ನು ಜಾರಿ ಮಾಡಿ ಲಂಚ ಪಡೆಯಲಾಗುತ್ತಿದೆ. ಇದರ ಮುಂದುವರೆದ ಭಾಗವೇ ಬಿಟ್‍ಕಾಯಿನ್ ಪ್ರಕರಣ. ಸರ್ಕಾರದ ಶಾಸಕಾಂಗ ಮತ್ತು ಕಾರ್ಯಾಂಗ ಗುತ್ತಿಗೆ ಲಾಬಿಗೆ ಶರಣಾಗಿದ್ದು, ಕರ್ನಾಟಕದ ರಾಜ್ಯ ಸರ್ಕಾರವನ್ನು ಗುತ್ತಿಗೆದಾರರೆ ಪರೋಕ್ಷವಾಗಿ ನಡೆಸುತ್ತಿದ್ದಾರೆ. ಜನತಂತ್ರದ ವ್ಯವಸ್ಥೆಯಲ್ಲಿ ಸರ್ಕಾರಗಳು ಗುತ್ತಿಗೆದಾರರ ಕಪಿಮುಷ್ಟಿಗೆ ಸಿಲುಕಿದರೆ, ಕಾರ್ಯಾಂಗವೇ ಗುತ್ತಿಗೆದಾರರಿಗೆ ಶರಣಾದರೆ ಅಲ್ಲಿ ಪ್ರಜಾಪ್ರಭುತ್ವ ಎಂಬುದು ನಿರ್ಜೀವವಾಗುತ್ತದೆ.

ಕದ್ದು ಮುಚ್ಚಿ ಸರ್ಕಾರಿ ನೇಮಕಾತಿಯಲ್ಲಿ, ವರ್ಗಾವಣೆಯಲ್ಲಿ ಕಮೀಷನ್ ಪಡೆಯುತ್ತಿದ್ದ ಹಲವು ಶಾಸಕರು, ಗುತ್ತಿಗೆಯ ವ್ಯವಸ್ಥೆಯಲ್ಲಿ ಅಕ್ರಮ ಹಣದ ಹೊಳೆಯನ್ನೇ ಕಂಡಿದ್ದಾರೆ. ಕರ್ನಾಟಕ ಸರ್ಕಾರದ ಕೆಲವು ಉನ್ನತ ಅಧಿಕಾರಿಗಳು ಬೃಹತ್ ಮೊತ್ತದ ಗುತ್ತಿಗೆಗಳಲ್ಲಿ ಬೇನಾಮಿ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ನಿಯಂತ್ರಣ ಮಾಡಬೇಕಾದ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ತಾವೇ ಹಗರಣಗಳಲ್ಲಿ ಭಾಗಿಯಾಗಿರುವುದರಿಂದ ಮತ್ತು ಪಾಲು ಪಡೆಯುತ್ತಿರುವುದರಿಂದ ಒಬ್ಬರಿಗೊಬ್ಬರು ರಕ್ಷಣೆ ಮಾಡಿಕೊಳ್ಳುವ ಅಘೋಷಿತ ಒಪ್ಪಂದ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ. ಬೆರಳೆಣಿಕೆಯಷ್ಟು ಸಜ್ಜನ ಮಂತ್ರಿಗಳು ಮತ್ತು ಶಾಸಕರು ಇದ್ದರೂ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ.

ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ” ಎಂಬ ಗಾದೆ ಮಾತಿನಂತೆ ಭ್ರಷ್ಟರು ಪೈಪೋಟಿಗೆ ಬಿದ್ದು, ರಾಜ್ಯದ ಗುತ್ತಿಗೆ ಕಾಮಗಾರಿಗಳಲ್ಲಿ ದೋಚುತ್ತಿದ್ದಾರೆ. ಗುತ್ತಿಗೆಯ ಅಕ್ರಮಗಳು ಪ್ರತಿದಿನ ವಿರಾಜಮಾನವಾಗಿ ಸುದ್ದಿಯಾಗುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆಯುತ್ತಿಲ್ಲ. ಗುತ್ತಿಗೆ ದಂಧೆಯ ಫಲಾನುಭವಿಗಳು ಚುನಾವಣೆಗಳಲ್ಲಿ ಅದ್ಭುತ ಜಯಗಳಿಸುವುದರ ಮೂಲಕ ಮತದಾರರ ಆದ್ಯತೆಯೂ ಪ್ರಶ್ನೆಯಾಗಿ ಕಾಡುತ್ತಿದೆ. ನ್ಯಾಯಾಲಯಗಳಿಂದಲೂ ಪೂರ್ಣ ಪ್ರಮಾಣದ ಪರಿಹಾರ ದೊರೆಯದಂತಾಗಿದೆ.

ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ 42 ಇಲಾಖೆಗಳಲ್ಲೂ ಒಂದೊಂದು ರೀತಿಯ ಗುತ್ತಿಗೆ ದಂಧೆಗೆ ಅವಕಾಶ ನೀಡಲಾಗಿದೆ. ಈ ಮೂಲಕ ಅಕ್ರಮ ಹಣ ಸಂಪಾದನೆಗೆ ದಾರಿ ಮಾಡಿಕೊಡಲಾಗಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಹತ್ತಾರು ಸಾವಿರ ಕೋಟಿ ರೂಪಾಯಿಗಳ ಗುತ್ತಿಗೆಗಳನ್ನು ನಿಯಮಾವಳಿ ಮೀರಿ ದೊಡ್ಡ ದೊಡ್ಡ ಗುತ್ತಿಗೆದಾರರಿಗೆ ಹಂಚಿಕೆ ಮಾಡಿ ಹಣ ಪಡೆದಿರುವ ಆರೋಪವನ್ನು ಬಿಜೆಪಿ ಶಾಸಕರೇ ಬಹಿರಂಗವಾಗಿ ಪ್ರಸ್ತಾಪಿಸಿದರು. ಪ್ರಧಾನ ಮಂತ್ರಿಗಳಿಗೆ ನೀಡಿದ ಲಿಖಿತ ದೂರಿಗೆ ಅನುಗುಣವಾಗಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಬದಲಾವಣೆ ಮಾಡಲಾದ ಸುದ್ದಿ ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ.

ಲೋಕೋಪಯೋಗಿ ಇಲಾಖೆಯ ರಸ್ತೆ ನಿರ್ಮಾಣ ಕಾಮಗಾರಿ, ಇಂಧನ ಇಲಾಖೆಯ ವಿದ್ಯುತ್ ಖರೀದಿ ವ್ಯವಹಾರ, ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮೀಣ ರಸ್ತೆ ನಿರ್ಮಾಣ ಹಾಗೂ ಪಂಚಾಯಿತಿ ಅನುದಾನ ಹಂಚಿಕೆ, ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಅನುದಾನ ಹಂಚಿಕೆ, ಸಾರಿಗೆ ಇಲಾಖೆಯ ಬಸ್ ಖರೀದಿ ವ್ಯವಹಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಟೆಂಡರ್‍ಶೂರ್ ಕಾಮಗಾರಿ, ನಗರಾಭಿವೃದ್ಧಿ ಇಲಾಖೆಯ ಸ್ಮಾರ್ಟ್‍ಸಿಟಿ ಯೋಜನೆಗಳು, ವಸತಿ ಇಲಾಖೆಯ ಲೇಔಟ್ ನಿರ್ಮಾಣದ ಯೋಜನೆಗಳು, ಪಶುಸಂಗೋಪನೆಯ ಆಹಾರ ಖರೀದಿ ಯೋಜನೆಗಳು, ಆರೋಗ್ಯ ಇಲಾಖೆಯ ಕೋವಿಡ್ ನಿರ್ವಹಣೆಯ ವ್ಯವಹಾರಗಳು ಮತ್ತು ಕೈಗಾರಿಕಾ ಇಲಾಖೆಯ ಭೂಮಿ ಹಂಚಿಕೆ ವ್ಯವಹಾರಗಳು ರಾಜ್ಯದ ಗುತ್ತಿಗೆ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ದೊಡ್ಡ ಮಟ್ಟದ ದಂಧೆಗೆ ಅವಕಾಶ ಕಲ್ಪಿಸಿವೆ. ಈ ಇಲಾಖೆಗಳು ಆಡಳಿತ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪ್ರಮುಖ ಇಲಾಖೆಗಳಾಗಿದ್ದು, ಬಹುತೇಕ ಗುತ್ತಿಗೆದಾರರ ತೆಕ್ಕೆಗೆ ಸರಿದಿದ್ದು, ರಾಜ್ಯ ಸರ್ಕಾರ ನೇರವಾಗಿ ಗುತ್ತಿಗೆದಾರರ ನಿಯಂತ್ರಣಕ್ಕೆ ಒಳಪಟ್ಟಿದೆ.

ಸರ್ಕಾರದ ಗುತ್ತಿಗೆಗಳು ಎಷ್ಟು ಲಾಭದಾಯಕ ಎನ್ನುವುದು ಗಾಬರಿ ಬೀಳಿಸುವ ದಂಧೆÉಯಾಗಿದೆ. ಶೇಕಡ ಒಂದರಿಂದ ಎರಡರಷ್ಟು ಲಂಚ ಪಡೆಯುತ್ತಿದ್ದ ಶಾಸಕಾಂಗ ಮತ್ತು ಕಾರ್ಯಾಂಗದ ಪ್ರತಿನಿಧಿಗಳು, ಸರ್ಕಾರದ ಹಂಚಿಕೆ, ಕಾಮಗಾರಿ, ಕಾಮಗಾರಿಯ ಟೆಂಡರ್ ಅನುಮೋದನೆ, ಭಾಗóಶಃ ಹಣ ಬಿಡುಗಡೆ, ಗುಣಮಟ್ಟದ ಪರಿಶೀಲನೆ, ಕಾಮಗಾರಿಯ ಖಾತರಿ, ಅಂತಿಮ ಹಣದ ಪಾವತಿ, ಬ್ಯಾಂಕ್ ಖಾತರಿಯ ಹಣ ಬಿಡುಗಡೆ ಈ ರೀತಿ ಎಲ್ಲಾ ಹಂತಗಳಲ್ಲಿ ಗುತ್ತಿಗೆದಾರರಿಂದ ಹಣ ಪಡೆಯುತ್ತಿದ್ದಾರೆ. ವಿಪರ್ಯಾಸವೆಂದರೆ ಇಂತಹ ಗುತ್ತಿಗೆಗಳ ಗುರುತಿಸಿ ಅವುಗಳಿಗೆ ಅನುಮೋದನೆ ನೀಡಲು ಪ್ರಾರಂಭ ಹಂತದಲ್ಲೆ ದಂಧೆ ನಡೆಯುತ್ತಿದೆ. ಜನಪ್ರತಿನಿಧಿಗಳು ಅಥವಾ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಉಪಯುಕ್ತ ಕಾಮಗಾರಿಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವ ಬದಲು, ಗುತ್ತಿಗೆದಾರರೆ ಯಾವ ಇಲಾಖೆಯಲ್ಲಿ ಯಾವ ಬಾಬಿಗೆ ಹಣ ಇದೆ ಮತ್ತು ಎಷ್ಟು ದಿನಗಳಲ್ಲಿ ಅಂತಹ ಅನುದಾನದ ಹಣವನ್ನು ಬಳಸಬಹುದೆಂಬ ಮಾಹಿತಿ ಪಡೆದು, ಅವರೇ ಅದಕ್ಕೆ ಅನುಗುಣವಾಗಿ ಕಾಮಗಾರಿಗಳ ಪ್ರಸ್ತಾವನೆಯನ್ನು ಸಲ್ಲಿಸಿ ಅನುಮೋದನೆ ಪಡೆದು, ಟೆಂಡರ್ ಕರೆದು ಅನುಮೋದಿಸಲು ತಮ್ಮದೇ ಯೋಜನೆಗಳನ್ನು ತಯಾರು ಮಾಡುತ್ತಾರೆ.

ಇದಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಅಥವಾ ಟೆಂಡರ್‍ಗಳನ್ನು ನಿರ್ಣಯ ಮಾಡಿ, ಅದರ ಆಧಾರದ ಮೇಲೆ ಟೆಂಡರ್ ಪೂರ್ವದಿಂದ ಕಾಮಗಾರಿಯ ನಂತರ ಭದ್ರತಾ ಠೇವಣಿಯನ್ನು ವಾಪಸ್ಸು ಪಡೆಯುವವರೆಗೆ ಲಂಚದ ಶೇಕಡವಾರು ಪ್ರಮಾಣವನ್ನು ನಿಗದಿಪಡಿಸಿ ಗುತ್ತಿಗೆದಾರರಿಂದ ವಸೂಲಿ ಮಾಡಲಾಗುತ್ತದೆ. ಇದು ಒಂದು ರೀತಿಯಲ್ಲಿ ಹತ್ತು ರೂಪಾಯಿ ಹೂಡಿಕೆ ಮಾಡಿ ನೂರು ರೂಪಾಯಿ ವಾಪಸ್ಸು ಪಡೆಯುವ ದಂಧೆÉಯಾಗಿದ್ದು, ಗುತ್ತಿಗೆದಾರರು ಅಧಿಕಾರಿಗಳಿಂದ ಜನಪ್ರತಿನಿಧಿಗಳವರೆಗೆ ಒಂದೊಂದು ಗುತ್ತಿಗೆಗೆ ಒಂದೊಂದು ಪ್ರಮಾಣದ ಲಂಚ ನೀಡಿ ಖರ್ಚು ಮಾಡಿದ ಹಣದ ಐದರಿಂದ ಹತ್ತು ಪಟ್ಟು ಲಾಭ ಪಡೆಯುವ ದಂದೆ ಮಾಡುತ್ತಿದ್ದಾರೆ.

ಬಹಳಷ್ಟು ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಗುತ್ತಿಗೆದಾರರನ್ನು ನಿರಂತರವಾಗಿ ಸಾಕಿ ಪೋಷಿಸುತ್ತಿದ್ದು, ಇಂತಹ ಗುತ್ತಿಗೆದಾರರಿಗೆ ತಮ್ಮ ಚುನಾವಣೆಯ ಇಡೀ ವ್ಯವಸ್ಥೆಯ ಜವಾಬ್ದಾರಿಯನ್ನು ನೀಡುತ್ತಾರೆ. ಶಾಸಕರೆಂದರೆ ಶಾಸನ ರಚನಾಕಾರರೆಂಬ ವಾಸ್ತವ ಅಳಿಸಿಹೋಗಿದೆ. ಯಾರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗುತ್ತಿಗೆದಾರರನ್ನು ನಿಭಾಯಿಸಲು ಸಾಧ್ಯವೋ ಅಂತವರು ಮಾತ್ರ ರಾಜಕಾರಣದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ಗುತ್ತಿಗೆದಾರರು, ಕೆಲವೊಂದು ಕಡೆ ತಾವೇ ಜನಪ್ರತಿನಿಧಿಗಳಾಗಿ ಸದನ ಪ್ರವೇಶ ಮಾಡುತ್ತಿದ್ದಾರೆ. ಸರ್ಕಾರದೊಂದಿಗೆ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಪಡೆಯುವ ಅಥವಾ ಹಣಕಾಸು ವ್ಯವಹಾರದ ಕರಾರನ್ನು ಹೊಂದಿರುವ ಯಾರೇ ಆದರೂ ನಿಯಮಾವಳಿ ಅನ್ವಯ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದರೆ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ತಮ್ಮ ಸರ್ಕಾರದ ಜೊತೆಗಿನ ಹಣಕಾಸು ವ್ಯವಹಾರಗಳನ್ನು ಬೇನಾಮಿಯಾಗಿ ಪರಿವರ್ತಿಸಿ ಹಲವು ಗುತ್ತಿಗೆದಾರರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಗುಣಮಟ್ಟದ ಅಥವಾ ಮೌಲ್ಯಯುತ ಕಾಮಗಾರಿಗಳನ್ನು ಮಾಡುವ ಗುತ್ತಿಗೆದಾರರು ಅತಿ ಹೆಚ್ಚು ಕಮೀಷನ್ ಕಾರಣಕ್ಕಾಗಿ ಸರ್ಕಾರಿ ಗುತ್ತಿಗೆಗಳಿಂದ ವಿಮುಖರಾಗಿ ಖಾಸಗಿ ಕಾಮಗಾರಿಗಳಿಗೆ ವಲಸೆ ಹೋಗಿದ್ದಾರೆ. ಅತಿ ಹೆಚ್ಚು ಕಮೀಷನ್ ನೀಡಿ ಕಾಮಗಾರಿ ಮಾಡಿದರೆ ಅವರಿಂದ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ. ಇದರ ಆಯಷ್ಸು ಮೂರರಿಂದ ಆರು ತಿಂಗಳು ಮಾತ್ರ. ಗುಣಮಟ್ಟದ ಕಾಮಗಾರಿಗಾಗಿ ಪಾರದರ್ಶಕದ ನಿರ್ವಹಣೆಗಾಗಿ ರಾಜ್ಯಸರ್ಕಾರ ತಂದಿರುವ ಎಲ್ಲಾ ಕಾನೂನುಗಳು ಕಮೀಷನ್ ದಂಧೆಯ ಕಂಬಳಿಯನ್ನು ಹೊದ್ದು ಬೆಚ್ಚಗೆ ಮಲಗಿವೆ.

ಒಟ್ಟಾರೆಯಾಗಿ ಕರ್ನಾಟಕದಲ್ಲಿ ಗುತ್ತಿಗೆದಾರರ ಸಂಘದ ಒಕ್ಕೂಟವು ಮಾಡಿರುವ ಶೇಕಡ ಐದರಿಂದ ಶೇಕಡ ಐವತ್ತರವರೆಗಿನ ಕಮೀಷನ್ ದಂಧೆಯ ಆರೋಪಗಳಲ್ಲಿ ವಾಸ್ತವಗಳಿದ್ದು, ಮಾಧ್ಯಮಗಳಲ್ಲಿ ಸುದ್ದಿಯಾದರೂ ದಪ್ಪ ಚರ್ಮದ ಸರ್ಕಾರ ಏನೂ ಆಗಿಲ್ಲದಂತೆ ಗಾಢ ನಿದ್ದೆಗೆ ಜಾರಿರುತ್ತದೆ. ಗುತ್ತಿಗೆ ವ್ಯವಹಾರವು ಕರ್ನಾಟಕದಲ್ಲಿ ದೊಡ್ಡಮಟ್ಟದ ದಂದೆಯಾಗಿದ್ದು, ಗುತ್ತಿಗೆ ಲಾಬಿ ರಾಜ್ಯಸರ್ಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿರುತ್ತದೆ. ಭ್ರಷ್ಟಾಚಾರ ತಡೆಯಬೇಕಾಗಿದ್ದ ಲೋಕಾಯುಕ್ತ ಸಂಸ್ಥೆ ಶಾಸನಬದ್ಧ ಅಧಿಕಾರವನ್ನು ಕಳೆದುಕೊಂಡರೆ ಭ್ರಷ್ಟಾಚಾರ ನಿಗ್ರಹದಳ ರಾಜ್ಯ ಸರ್ಕಾರದ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಟ್ಟಾರೆಯಾಗಿ ರಾಜ್ಯಸರ್ಕಾರ ಗುತ್ತಿಗೆದಾರರ ಕಪಿಮುಷ್ಟಿಗೆ ಸಿಲುಕಿದ್ದು, ಜನತಂತ್ರದ ಮೂಲ ಆಶಯಗಳಿಗೆ ಪೆಟ್ಟು ಬಿದ್ದಿದೆ. ಕಮೀಷನ್ ದಂದೆ ನಿಲ್ಲದ ಹೊರತು, ಗುತ್ತಿಗೆದಾರರ ನಿಯಂತ್ರಿಸದ ಹೊರತು ನಮ್ಮ ರಾಜ್ಯಕ್ಕೆ ಮತ್ತು ಜನತಂತ್ರಕ್ಕೆ ಭವಿಷ್ಯವಿಲ್ಲ.

*ಲೇಖಕರು ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯರು.

Leave a Reply

Your email address will not be published.