ಗುತ್ತಿಗೆ ಲಾಬಿಯೂ ಸರ್ಕಾರದ ಕಮಿಷನ್ ದಂಧೆಯೂ!

ಲಂಚ ಎಂದು ಪಡೆಯಲಾಗುತ್ತಿರುವ ಕಮಿಷನ್ ಅನ್ನು ಅಧಿಕೃತಗೊಳಿಸಿದರೆ, ಈ ಎಲ್ಲಕ್ಕೂ ಕೊನೆ ಹಾಡಬಹುದೇನೊ? ಇದು ಮೇಲ್ನೋಟಕ್ಕೆ ಅವಾಸ್ತವಿಕ ಸಲಹೆ ಎನ್ನಿಸಿದರೂ, ಸುಲಭವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ. ಅಮೆರಿಕಾದಲ್ಲಿ ರಕ್ಷಣಾ ಒಪ್ಪಂದದಲ್ಲಿ ಭಾಗಿಯಾಗುವ ಮಧ್ಯವರ್ತಿಗಳಿಗೆ `ಚಿಟಿ ಈಎಂದು ನೀಡಲಾಗುತ್ತದೆ!

ಸದಾನಂದ ಗಂಗನಬೀಡು

ನನಗೆ ರಾಜಕೀಯ ಪ್ರಜ್ಞೆ ಆರಂಭವಾಗಿದ್ದು ಸುಮಾರು ಆರು ಅಥವಾ ಏಳನೆ ತರಗತಿಯಲ್ಲಿದ್ದಾಗ ಎನ್ನಬಹುದು. ಆಗ ದಲಿತ ಸಂಘರ್ಷ ಸಮಿತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಹೀಗಾಗಿ ನಮ್ಮ ತಂದೆ ಹಾಗೂ ಅಣ್ಣ ದಲಿತ ಸಂಘಟನೆಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದ್ದರು. ಮೊದಲಿನಿಂದಲೂ ಓದಿನ ಹಸಿವಿದ್ದ ನನ್ನಣ್ಣ ಮನೆಗೆ `ಲಂಕೇಶ್ ಪತ್ರಿಕೆತರುತ್ತಿದ್ದ. ಆಗ ನಮ್ಮ ಮನೆಗೆ ಮನೆವಾರ್ತೆಗೆ ಹಾಕಿಸಿಕೊಳ್ಳುತ್ತಿದ್ದದ್ದು `ತರಂಗವಾರಪತ್ರಿಕೆ. ಆದರೆ, ಸಂಘಟನೆಯ ಸಭೆಗಳಿಗೆ ತೆರಳುತ್ತಿದ್ದ ನನ್ನಣ್ಣ ಕೈಯಲ್ಲಿ ದುಡ್ಡು ಕೊಟ್ಟು ಖರೀದಿಸಿದ `ಲಂಕೇಶ್ ಪತ್ರಿಕೆಯನ್ನು ತರುತ್ತಿದ್ದ. ನಾನಾಗ ಕುತೂಹಲಕ್ಕಾಗಿ ಅದರಲ್ಲಿನ `ಕಣ್ಣಾಮುಚ್ಚಾಲೆಯನ್ನು ಓದುತ್ತಿದ್ದೆ. ಅದು ನನ್ನನ್ನು ಆಕರ್ಷಿಸಿದ ನಂತರ ಇಡೀ ಪತ್ರಿಕೆಯನ್ನು ಓದಲು ಶುರು ಮಾಡಿದೆ.

ನಾನು ಲಂಕೇಶ್ ಪತ್ರಿಕೆಯನ್ನು ಓದಲು ಶುರು ಮಾಡುವ ಹೊತ್ತಿಗೆ ರಾಮಕೃಷ್ಣ ಹೆಗಡೆ ಅವರು `ರೇವಜೀತು ಹಗರಣಹಾಗೂ `ಬಾಟ್ಲಿಂಗ್ ಹಗರಣದ ನೈತಿಕ ಹೊಣೆ ಹೊತ್ತು ಮೌಲ್ಯಾಧಾರಿತ ರಾಜಕಾರಣದ ಮಂತ್ರ ಜಪಿಸಿ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ಸಂದರ್ಭದಲ್ಲಿ ಕ್ಯಾಪಿಟೇಷನ್ ಲಾಬಿಯ ಕುರಿತೂ ಪತ್ರಿಕೆಗಳಲ್ಲಿ ಜೋರು ಚರ್ಚೆ ನಡೆಯುತ್ತಿದ್ದವು.

ನಾನು ಪ್ರೌಢಾವಸ್ಥೆಗೆ ತಲುಪುವ ಹೊತ್ತಿಗೆ ಆಳುವ ಸರ್ಕಾರಗಳನ್ನು ಕ್ಯಾಪಿಟೇಷನ್ ಲಾಬಿ ನಿಯಂತ್ರಿಸತೊಡಗಿತ್ತು. ಅದಕ್ಕೆ ಕಾರಣವೂ ಇತ್ತು: ಹಲವಾರು ಕ್ಯಾಪಿಟೇಷನ್ ಕುಳಗಳು ಆಳುವ ಸರ್ಕಾರ ಹಾಗೂ ವಿರೋಧ ಪಕ್ಷಗಳೆರಡರಲ್ಲೂ ರಾರಾಜಿಸುತ್ತಿದ್ದರು. ಆದರೆ, ಕ್ಯಾಪಿಟೇಷನ್ ಲಾಬಿಗೂ ಮುನ್ನ ಸರ್ಕಾರಗಳು ಅಸ್ತಿತ್ವಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದದ್ದು ಲಿಕ್ಕರ್ ಲಾಬಿ ಎಂದು ತದನಂತರವೇ ನನಗೆ ತಿಳಿದು ಬಂದಿದ್ದು.

ಸ್ವಾತಂತ್ರ್ಯಾನಂತರ ಆಳುವ ಸರ್ಕಾರಗಳು ಮಾಡಿದ ಮೊದಲ ತಪ್ಪು ಜನರಿಗೆ ದುಡ್ಡು ಹಂಚಿ ಮತ ಪಡೆಯಲು ಮುಂದಾಗಿದ್ದು. ಇದನ್ನು ಕಾಂಗ್ರೆಸ್ ಪಕ್ಷದಿಂದ ಮೊದಲ್ಗೊಂಡು ಜನತಾ ಪರಿವಾರದವರೆಗೆ ಪ್ರತಿಯೊಂದೂ ಪಕ್ಷಗಳು ತಮ್ಮ ಶಕ್ತ್ಯಾಸಾರ ಮಾಡಿರುವುದಕ್ಕೆ ಇತಿಹಾಸದ ಪುಟಗಳಲ್ಲೇ ದಾಖಲೆ ದೊರೆಯುತ್ತದೆ. ಆದರೆ, ಹೀಗೆ ಖರ್ಚು ಮಾಡುತ್ತಿದ್ದ ಪಕ್ಷಗಳು ಅದನ್ನು ಎಷ್ಟು ದಿನಗಳ ಕಾಲ ತಮ್ಮ ಮನೆಯ ಸಂಪತ್ತನ್ನು ಸುರಿದು ಮಾಡಲು ಸಾಧ್ಯ? ಹೀಗಾಗಿ ಆಳುವ ಸರ್ಕಾರಗಳೇ ತಮ್ಮ ಚುನಾವಣಾ ವೆಚ್ಚವನ್ನು ಹೊರುವ ಲಾಬಿಗಳನ್ನು ಸೃಷ್ಟಿ ಮಾಡಿದವು. ಮೊದಲಿಗೆ ಕೈಗಾರಿಕೋದ್ಯಮಿಗಳು ನೀಡುತ್ತಿದ್ದ ದೇಣಿಗೆಗಳು ನಂತರ ಚುನಾವಣಾ ವೆಚ್ಚವನ್ನು ಭರಿಸುವ ಹಂತಕ್ಕೆ ತಲುಪಿದವು. ಹೀಗೆ ಮೊದಲಿಗೆ ಚುನಾವಣಾ ವೆಚ್ಚ ಭರಿಸುವಷ್ಟು ಲಾಭವಿದ್ದ ಉದ್ಯಮ ಲಿಕ್ಕರ್ ಉದ್ಯಮ. ಈ ಉದ್ಯಮ ತನ್ನ ಕೈಲಾದಷ್ಟು ದಿನ ಎಲ್ಲ ರಾಜಕೀಯ ಪಕ್ಷಗಳ ಚುನಾವಣಾ ವೆಚ್ಚವನ್ನು ಭರಿಸಿತು.

ಇದರ ಬೆನ್ನಿಗೇ ಶಿಕ್ಷಣದ ಖಾಸಗೀಕರಣಕ್ಕೆ ಆಳುವ ಸರ್ಕಾರವೇ ಹಸಿರು ನಿಶಾನೆ ತೋರಿದ ನಂತರ ದೇಶಾದ್ಯಂತ ಕ್ಯಾಪಿಟೇಷನ್ ಲಾಬಿ ತಲೆಯೆತ್ತಿ ನಿಂತಿತು. ಹಲವು ಜನಪ್ರತಿನಿಧಿಗಳೇ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳ ಒಡೆಯರಾದರು. ಜನಪ್ರತಿನಿಧಿಗಳೇ ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿದ್ದರಿಂದ ಡೊನೇಷನ್ ಲಾಬಿಯೂ ಮಿತಿ ಮೀರಿ ಬೆಳೆಯಿತು. ಇದರೊಂದಿಗೆ ಅನಧಿಕೃತ ಶಿಕ್ಷಣ ಸಂಸ್ಥೆಗಳೂ ಕೂಡಾ. ಇಂದು ಹಲವು ದಿಗ್ಗಜ ರಾಜಕಾರಣಿಗಳೇ ಭಾರಿ ಶಿಕ್ಷಣ ಸಂಸ್ಥೆಗಳ ಯಜಮಾನಿಕೆ ಹೊಂದಿದ್ದಾರೆ. ಅಷ್ಟರ ಮಟ್ಟಿಗೆ ಕ್ಯಾಪಿಟೇಷನ್ ಲಾಬಿಯ ಪಾಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾಮಧೇನುವಾಗಿ ಬದಲಾಗಿವೆ.

ಇದಾದ ನಂತರ ಚಾಲ್ತಿಗೆ ಬಂದಿದ್ದು ಗುತ್ತಿಗೆದಾರರ ಲಾಬಿ. ತಮ್ಮ ಇಷ್ಟಾನಿಷ್ಟದ ಪಕ್ಷಗಳಿಗೆ ನಿಷ್ಠರಾಗಿರುವ ಗುತ್ತಿಗೆದಾರರು, ತಮ್ಮ ಆಯ್ಕೆಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸರ್ಕಾರಿ ಗುತ್ತಿಗೆಯ ಸಿಂಹಪಾಲನ್ನು ಪಡೆಯತೊಡಗಿದವು. ಅದಕ್ಕೆ ಪ್ರತಿಯಾಗಿ ಆಳುವ ಪಕ್ಷಕ್ಕೆ ನಿರ್ದಿಷ್ಟ ಪ್ರಮಾಣದ ಕಮಿಷನ್ ನೀಡತೊಡಗಿದರು. ಅದರಿಂದ ಆಳುವ ಸರ್ಕಾರ ತನ್ನ ಚುನಾವಣಾ ವೆಚ್ಚವನ್ನು ಭರಿಸುವಷ್ಟು ಪಕ್ಷನಿಧಿಯನ್ನು ಸಂಚಯಿಸಿಕೊಳ್ಳಲು ಸಾಧ್ಯವಾಯಿತು. ಗುತ್ತಿಗೆ ಲಾಬಿ ಎಷ್ಟು ಪ್ರಭಾವಶಾಲಿ ಎಂಬುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಸ್ಪಷ್ಟ ನಿದರ್ಶನ. ಮೊದಲಿಗೆ ಕೇವಲ ಗುತ್ತಿಗೆದಾರರು ಮಾತ್ರವಾಗಿದ್ದ ಅವರು, ನಂತರ ಪ್ರಧಾನಿ ಪಟ್ಟದವರೆಗೆ ಮೇಲೇರಿ ಹೋಗಿದ್ದರ ಹಿಂದಿರುವ ಗುತ್ತಿಗೆ ಲಾಬಿಯ ಪ್ರಭಾವವನ್ನು ಅಳೆಯಬಹುದು.

2000 ಇಸವಿಯ ಹೊತ್ತಿಗೆ ಈ ಮೂರೂ ಲಾಬಿಯನ್ನು ಬಡಿದು ಬಾಯಿಗೆ ಹಾಕಿಕೊಂಡಿದ್ದು ರಿಯಲ್ ಎಸ್ಟೇಟ್ ಲಾಬಿ. 1991ರಲ್ಲಿ ಜಾರಿಯಾದ ಜಾಗತೀಕರಣದಿಂದ ರೈತನ ಜಮೀನಿಗೆ ಅಸಾಧಾರಣ ಬೇಡಿಕೆ ಸೃಷ್ಟಿಯಾಯಿತು. ಇದರಿಂದ ಹಳ್ಳಿಗಳಲ್ಲಿ, ನಗರದ ಹೊರ ವಲಯಗಳಲ್ಲಿ ಕೇವಲ ಕಮಿಷನ್ ಮಧ್ಯವರ್ತಿಗಳಾಗಿದ್ದವರೆಲ್ಲ ದಿಢೀರನೆ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಬದಲಾದರು. ಕಳೆದ 20 ವರ್ಷಗಳ ಅವಧಿಯಲ್ಲಿ ರಿಯಲ್ ಎಸ್ಟೇಟ್ ಲಾಬಿ ಎಷ್ಟು ಪರಿಣಾಮಕಾರಿಯಾಗಿ ಬೆಳೆದು ನಿಂತಿದೆಯೆಂದರೆ, ಚುನಾಯಿತ ಪ್ರತಿನಿಧಿಗಳ ಪೈಕಿ ಶೇ. 50ಕ್ಕೂ ಹೆಚ್ಚು ಮಂದಿ ಶಾಸನ ಸಭೆ ಮಾತ್ರವಲ್ಲದೆ, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಿಗೆ ಆಯ್ಕೆಯಾಗುತ್ತಿರುವುದಕ್ಕೆ ನಾವಿಂದು ಮೂಕ ಸಾಕ್ಷಿಯಾಗಿದ್ದೇವೆ.

ಆದರೆ, ಈ ನಾಲ್ಕು ಲಾಬಿಗಳ ಪೈಕಿ ಗುತ್ತಿಗೆ ಲಾಬಿಯೇ ಯಾವುದೇ ರಾಜಕೀಯ ಪಕ್ಷದ ಪಾಲಿಗೆ ನಿತ್ಯ ಕಾಮಧೇನು. ನಿಯಮಿತ ಪ್ರಮಾಣದ ಕಮಿಷನ್ ಈ ಲಾಬಿಯಿಂದ ಬಹುತೇಕ ಎಲ್ಲ ಪಕ್ಷಗಳಿಗೂ ದೊರೆಯುವುದರಿಂದ ಈ ಲಾಬಿ ಇನ್ನೂ ಪ್ರಭಾವಶಾಲಿಯಾಗಿಯೇ ಉಳಿದುಕೊಂಡು ಬಂದಿದೆ. 2018ರಲ್ಲಿ ರಾಜ್ಯದ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, “ಕಾಂಗ್ರೆಸ್ ಸರ್ಕಾರ 10% ಸರ್ಕಾರಎಂದು ಸಾರ್ವಜನಿಕ ಸಮಾವೇಶದಲ್ಲಿ ನೇರವಾಗಿ ಟೀಕಿಸಿದ್ದರು. ಆಗ ಆಡಳಿತಾರೂಢವಾಗಿದ್ದ ಕಾಂಗ್ರೆಸ್ ಸರ್ಕಾರ, ಅದಕ್ಕೆ ದಾಖಲೆಗಳನ್ನು ಒದಗಿಸುವಂತೆ ನರೇಂದ್ರ ಮೋದಿಗೆ ಸವಾಲೆಸೆಯಿತಾದರೂ ಅದು ಕ್ಷೀಣವಾಗಿತ್ತು. ಹೀಗಾಗಿ ನರೇಂದ್ರ ಮೋದಿ ತಮ್ಮ ಆರೋಪವನ್ನು ಸಾಬೀತು ಮಾಡಬೇಕಾದ ಪ್ರಮೇಯವೇ ಬರಲಿಲ್ಲ. ಕಾಂಗ್ರೆಸ್ ಸರ್ಕಾರ ಕೂಡಾ ಆ ಚುನಾವಣೆಯಲ್ಲಿ ಕೇವಲ 80 ಸ್ಥಾನ ಪಡೆದು ಅಧಿಕಾರದಿಂದ ಕೆಳಗಿಳಿಯಿತು.

ಇದೀಗ ಬಿಜೆಪಿ ಸರ್ಕಾರದ ಸರದಿ. ಸ್ವತಃ ರಾಜ್ಯ ಗುತ್ತಿಗೆದಾರರ ಸಂಘವೇ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಶೇ. 40ರಷ್ಟು ಲಂಚದ ಬೇಡಿಕೆ ಇಡಲಾಗುತ್ತಿದೆಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ರವಾನಿಸಿದೆ. ಈ ಪತ್ರದ ಬೆನ್ನಿಗೇ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಸ್ವತಃ ರಾಜ್ಯ ಗುತ್ತಿಗೆದಾರರ ಸಂಘವೇ ಆಡಳಿತಾರೂಢ ಬಿಜೆಪಿ ಸರ್ಕಾರ ಶೇ. 40ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದೆ ಎಂದು ಆರೋಪಿಸಿರುವುದರಿಂದ ವಿಷಯ ಗಂಭೀರ ಸ್ವರೂಪ ಪಡೆದಿದೆ. ಇದರ ಬೆನ್ನಿಗೇ ರಾಜ್ಯ ಸರ್ಕಾರ ಆರೋಪದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ವಿರೋಧ ಪಕ್ಷಗಳು ಎಂದಿನಂತೆ ಈ ವಿಷಯವನ್ನಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಹಣಿಯಲು ಮುಂದಾಗಿದೆ. ಆದರೆ, ನಮ್ಮಲ್ಲಿನ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ವಯ ಲಂಚ ಪಡೆದವರಷ್ಟೇ ಲಂಚ ನೀಡಿದವರೂ ತಪ್ಪಿತಸ್ಥರು. ಹೀಗಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಶೇ. 40ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಆರೋಪ ಅದಕ್ಕೇ ತಿರುಗುಬಾಣವಾದರೂ ಅಚ್ಚರಿಯಿಲ್ಲ. ಕಾರಣ: ರಾಜ್ಯ ಸರ್ಕಾರದ ವಿರುದ್ಧ ಶೇ. 40ರಷ್ಟು ಲಂಚದ ಬೇಡಿಕೆ ಇಟ್ಟಿರುವ ಆರೋಪ ಮಾಡಿರುವ ರಾಜ್ಯ ಗುತ್ತಿಗೆದಾರರ ಸಂಘವು ತನ್ನ ಆರೋಪಕ್ಕೆ ನಿರ್ದಿಷ್ಟ ಪ್ರಕರಣದ ಸಾಕ್ಷಿ ಒದಗಿಸಬೇಕಾಗುತ್ತದೆ. ಹಾಗೆ ನಿರ್ದಿಷ್ಟ ಪ್ರಕರಣದ ಸಾಕ್ಷಿ ಒದಗಿಸಿದ ಕೂಡಲೇ, ಆ ಪ್ರಕರಣದಲ್ಲಿ ಭಾಗಿಯಾಗಿರುವ ಗುತ್ತಿಗೆದಾರನೂ ಕೂಡಾ ತಪ್ಪಿತಸ್ಥನಾಗುತ್ತಾನೆ. ಇದರಿಂದ ರಾಜ್ಯ ಗುತ್ತಿಗೆದಾರರ ಸಂಘವು ಮಾಡಿರುವ ಆರೋಪವು ಎರಡು ಅಲುಗಿನ ಕತ್ತಿಯಾಗಿ ಮಾರ್ಪಾಡಾಗಿದೆ.

ಇಂದು ಚುನಾವಣಾ ವೆಚ್ಚ ರಾಜಕೀಯ ಪಕ್ಷಗಳು ಕೇವಲ ಪಕ್ಷದ ನಿಧಿಯಿಂದ ಭರಿಸುವಷ್ಟು ಅಲ್ಪಪ್ರಮಾಣದ್ದಾಗಿ ಉಳಿದಿಲ್ಲ. ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಯೊಬ್ಬ ಕನಿಷ್ಟ ಪಕ್ಷ 40 ರಿಂದ 50 ಕೋಟಿ ರೂಪಾಯಿ ವ್ಯಯಿಸಬೇಕಾದ ಆತಂಕಕಾರಿ ದಿನಗಳಿಗೆ ಈಗಿನ ಚುನಾವಣಾ ರಾಜಕೀಯ ತಲುಪಿಯಾಗಿದೆ. ಈ ಪೈಕಿ ಮತದಾರರಿಗೆ ಆಮಿಷವೊಡ್ಡಲು ಬಳಕೆಯಾಗುವ ಹಣದ ಪ್ರಮಾಣವೇ ಶೇ. 75ಕ್ಕೂ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಮತದಾರರೊಂದಿಗೆ ಮಾಧ್ಯಮಗಳ `ಪೇಯ್ಡ್ ನ್ಯೂಸ್ಕೂಡಾ ಸೇರಿಹೋಗಿರುವುದರಿಂದ ಅವುಗಳನ್ನೂ ತಣಿಸಬೇಕಾದ ಇಕ್ಕಟ್ಟಿಗೆ ಪ್ರತಿ ಪಕ್ಷದ ಅಭ್ಯರ್ಥಿಗಳೂ ಈಡಾಗಿದ್ದಾರೆ. ಹೀಗಾಗಿಯೇ ಕೇವಲ 20 ವರ್ಷಗಳ ಅವಧಿಯಲ್ಲಿ ಶೇ. 150ರಿಂದ ಶೇ. 200ರಷ್ಟು ಚುನಾವಣಾ ವೆಚ್ಚ ದುಪ್ಪಟ್ಟಾಗಿದೆ. ಇದಕ್ಕೆ ಪ್ರಮುಖ ಕಾರಣ ಮತದಾರರನ್ನು ಭ್ರಷ್ಟರನ್ನಾಗಿಸಿರುವುದು.

ಯಾವುದೇ ಪಕ್ಷದ ಅಭ್ಯರ್ಥಿ ತಾನೇ 40ರಿಂದ 50 ಕೋಟಿ ರೂಪಾಯಿ ವ್ಯಯಿಸುವಷ್ಟು ಶಕ್ತನಾಗಿರುವುದಿಲ್ಲ. ಆಗ ಆತನ ಬೆನ್ನಿಗೆ ನಿಲ್ಲುವುದೇ ಪಕ್ಷನಿಷ್ಠ ಗುತ್ತಿಗೆದಾರರ ಲಾಬಿ. ಅಭ್ಯರ್ಥಿಯೊಬ್ಬನ ಚುನಾವಣಾ ವೆಚ್ಚದ ಶೇ. 50ಕ್ಕೂ ಹೆಚ್ಚು ಪಾಲನ್ನು ಭರಿಸುವುದೇ ಈ ಗುತ್ತಿಗೆದಾರರ ಲಾಬಿ. ಹೀಗೆ 40ರಿಂದ 50 ಕೋಟಿ ರೂಪಾಯಿ ವ್ಯಯಿಸಿ ಚುನಾಯಿತನಾಗುವ ವ್ಯಕ್ತಿ ಸಹಜವಾಗಿಯೇ ತನ್ನ ಚುನಾವಣಾ ವೆಚ್ಚ ಭರಿಸಿದ ಗುತ್ತಿಗೆದಾರರಿಗೆ ಮೊದಲ ಆದ್ಯತೆಯಲ್ಲಿ ಸರ್ಕಾರಿ ಗುತ್ತಿಗೆಗಳನ್ನು ಕೊಡಿಸಿಕೊಡಬೇಕಾಗುತ್ತದೆ. ಹೀಗೆ ಪಡೆದ ಗುತ್ತಿಗೆಗಳಲ್ಲೂ ಈವರೆಗೆ ಸ್ಪಲ್ಪ ಪ್ರಮಾಣದ ಕಮಿಷನ್ ನೀಡುವ ಪರಿಪಾಠ ಇದ್ದೇ ಇತ್ತು. ಅದನ್ನು ಬಹುತೇಕ ಗುತ್ತಿಗೆದಾರರು ಆಡಳಿತಾತ್ಮಕ ವೆಚ್ಚ ಎಂದೇ ಸರಿದೂಗಿಸಿಕೊಂಡು ಬರುತ್ತಿದ್ದರು. ಆದರೆ, `ಆಡಳಿತಾತ್ಮಕವೆಚ್ಚವಿಂದು ಶೇ. 40ಕ್ಕೇರಿರುವುದರಿಂದಲೇ ಗುತ್ತಿಗೆದಾರರು ಆಘಾತಕ್ಕೊಳಗಾಗಿರುವುದು ಎದ್ದು ಕಾಣುತ್ತಿದೆ.

ಗುತ್ತಿಗೆಯಲ್ಲಿ ನಡೆಯುವ ಅಕ್ರಮ, ಕಳಪೆ ಕಾಮಗಾರಿ, ಲಂಚ ತಡೆಯಲು ಸಾಧ್ಯವಿಲ್ಲವೇ ಇಲ್ಲ ಎಂಬುದು ಜನಜನಿತ ಮಾತು. ಆದರೆ, ಲಂಚ ಎಂದು ಪಡೆಯಲಾಗುತ್ತಿರುವ ಕಮಿಷನ್ ಅನ್ನು ಅಧಿಕೃತಗೊಳಿಸಿದರೆ, ಈ ಎಲ್ಲಕ್ಕೂ ಕೊನೆ ಹಾಡಬಹುದೇನೊ? ಇದು ಮೇಲ್ನೋಟಕ್ಕೆ ಅವಾಸ್ತವಿಕ ಸಲಹೆ ಎನ್ನಿಸಿದರೂ, ಸುಲಭವಾಗಿ ಕಾರ್ಯರೂಪಕ್ಕೆ ತರಲು ಸಾಧ್ಯವಿದೆ. ಅಮೆರಿಕಾದಲ್ಲಿ ರಕ್ಷಣಾ ಒಪ್ಪಂದದಲ್ಲಿ ಭಾಗಿಯಾಗುವ ಮಧ್ಯವರ್ತಿಗಳಿಗೆ `iಚಿsoಟಿ ಈಎಂದು ನೀಡಲಾಗುತ್ತದೆ. ಇದು ಅಧಿಕೃತವಾಗಿರುವುದರಿಂದ ಅಲ್ಲಿ ಲಂಚ ನೀಡಿಕೆ ಆರೋಪದ ಕುರಿತು ಯಾವುದೇ ಬೊಬ್ಬೆ ಏಳುವುದಿಲ್ಲ.

ಭಾರತದಲ್ಲಿ ಲಂಚ ಮತ್ತು ಭ್ರಷ್ಟಾಚಾರ ಬೇರು ಮಟ್ಟಕ್ಕಿಳಿದಿರುವುದರಿಂದ ಅದರ ನಿರ್ಮೂಲನೆ ಅಸಾಧ್ಯ ಎನ್ನುವಂಥ ಪರಿಸ್ಥಿತಿ ಇದೆ. ಲಂಚ ಮತ್ತು ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲಾಗದ ಕಾರಣಕ್ಕೇ ಇಲ್ಲಿ ಪ್ರತಿ ವರ್ಷವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಪ್ಪು ಕುಬೇರರು ಸೃಷ್ಟಿಯಾಗುತ್ತಿದ್ದಾರೆ. ಅದರ ಬದಲು ಈಗ ಕಮಿಷನ್ ಎಂದು ಪಡೆಯಲಾಗುತ್ತಿರುವ ವೆಚ್ಚವನ್ನು `ಆಡಳಿತಾತ್ಮಕ ವೆಚ್ಚಎಂದು ಮಾರ್ಪಾಡು ಮಾಡಿ, ಆಯಾ ಕ್ಷೇತ್ರದ ಶಾಸಕರು ಅಧಿಕೃತವಾಗಿ ಇಂತಿಷ್ಟು ಕಮಿಷನ್ ಪಡೆಯಲು ಅರ್ಹರು ಎಂದು ಕಾನೂನನ್ನು ತಿದ್ದುಪಡಿ ಮಾಡಬೇಕಿದೆ.

ಇದು ಮೊದಲಿಗೆ ತೀವ್ರ ವಿರೋಧಕ್ಕೆ ಕಾರಣವಾದರೂ, ಸ್ವತಃ ಮತದಾರನನ್ನೇ ಭ್ರಷ್ಟನನ್ನಾಗಿಸಿರುವುದರಿಂದ ಆ ವಿರೋಧ ದೀರ್ಘಕಾಲ ಉಳಿಯಲಾರದು. ಅಲ್ಲದೆ, ಜನಪ್ರತಿನಿಧಿಗಳು, ಗುತ್ತಿಗೆದಾರರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತಿತರ ವ್ಯವಹಾರಸ್ಥರು ಕಪ್ಪು ಹಣ ಸಂಗ್ರಹಿಸಿಡುವ ಹೊರೆಯೂ ತಪ್ಪುತ್ತದೆ. ಪ್ರತಿ ವ್ಯವಹಾರವೂ ಪಾರದರ್ಶಕವಾಗುವುದರಿಂದ ಸರ್ಕಾರಕ್ಕೂ ನಿರ್ದಿಷ್ಟ ಪ್ರಮಾಣದ ಆದಾಯ ತೆರಿಗೆ, ವೃತ್ತಿ ತೆರಿಗೆ ಎಲ್ಲವೂ ಹರಿದು ಬರುತ್ತದೆ. ಇದರಿಂದ ದೇಶದ ಅಭಿವೃದ್ಧಿಶೀಲ ಕಾರ್ಯಕ್ರಮಗಳಿಗೆ ಆದಾಯ ದೊರೆತಂತೆಯೂ ಆಗುತ್ತದೆ.

ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಲು ಸಾಧ್ಯವಿಲ್ಲದ ಹಂತ ತಲುಪಿರುವುದರಿಂದ ಅದನ್ನು ಸಾಂಸ್ಥೀಕರಣಗೊಳಿಸುವುದರಲ್ಲೇ ಜಾಣತನವಿದೆ. ಲಂಚದ ಮೂಲಕ ತೆರಿಗೆ ರಹಿತವಾಗಿ ಕಪ್ಪು ಕುಬೇರರ ಖಜಾನೆ ಸೇರುವ ಹಣವು ಸಾಂಸ್ಥೀಕರಣದಿಂದ ತೆರಿಗೆಯ ರೂಪದ ಒಂದು ಪಾಲು ಸರ್ಕಾರದ ಖಜಾನೆಯನ್ನೂ ಸೇರುವಂತಾಗುತ್ತದೆ.

ಸಂಬಳ ಮಾತ್ರವಲ್ಲದೆ ಗಿಂಬಳದ ಮೂಲಕವೂ ಜನಪ್ರತಿನಿಧಿಗಳು, ಅಧಿಕಾರಿಗಳ ಕಿಸೆ ಸೇರುವ ಮೊತ್ತವನ್ನು ಬೇಕಿದ್ದರೆ `iಛಿಟಟಚಿಟಿ ಟಿಛಿಎಂದು ವರ್ಗೀಕರಿಸಬಹುದು. ಒಂದೇ ವ್ಯತ್ಯಾಸವೆಂದರೆ, ಮೊದಲಿಗೆ ತೆರಿಗೆರಹಿತವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಿಸೆ ಸೇರುತ್ತಿದ್ದ ಲಂಚದ ಹಣ, ಮುಂದಿನ ದಿನಗಳಲ್ಲಿ ತೆರಿಗೆ ಸಹಿತವಾಗಿ, ಅದರಲ್ಲೂ ಸಂಬಳದ ಹೊರತಾಗಿ ದೊರೆಯುವ ಆದಾಯವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಿಸೆಯನ್ನು ಸೇರುವಂತಾಗುತ್ತದೆ. ಇದರಿಂದ ಕಪ್ಪು ಕುಳಗಳನ್ನು ಬೇಟೆಯಾಡಬೇಕಾದ ಅನಗತ್ಯ ಶ್ರಮ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆಗಳಿಗೆ ಇಲ್ಲವಾಗುತ್ತದೆ. ರಾಜ್ಯಮಟ್ಟದಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳವನ್ನು ಬರ್ಖಾಸ್ತುಗೊಳಿಸಿ, ಅದಕ್ಕೆ ನಿಯೋಜಿಸಿರುವ ಸಿಬ್ಬಂದಿಯನ್ನು ಸಾರ್ವಜನಿಕ ರಕ್ಷಣೆಗೆ ಬಳಸಿಕೊಳ್ಳಬಹುದಾಗಿದೆ. ಇನ್ನು ಲೋಕಾಯುಕ್ತವನ್ನಂತೂ ಶಾಶ್ವತವಾಗಿ ಬಂದ್ ಮಾಡಬಹುದಾಗಿದೆ. ಇದರಿಂದ ಅಲ್ಲಿಗೆ ಸಿಬ್ಬಂದಿಗಳಿಗೆ ವಿನಿಯೋಗಿಸಲಾಗುತ್ತಿರುವ ಕೋಟ್ಯಂತರ ರೂಪಾಯಿಯ ಸಂಬಳ ಸಾರಿಗೆ ರಾಜ್ಯ ಸರ್ಕಾರಕ್ಕೆ ಉಳಿಯುತ್ತದೆ.

ಗುತ್ತಿಗೆದಾರರು ಮುಂದೆಂದೂ ತಮ್ಮಿಂದ ಶೇ. 40ರಷ್ಟು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಆರೋಪಿಸಬಾರದಿದ್ದರೆ ಮೇಲೆ ಹೇಳಿದ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸಬೇಕಾದ ಅಗತ್ಯವಿದೆ!

*ಲೇಖಕರು ಪತ್ರಿಕೋದ್ಯಮದ ಸೆಳೆತದಿಂದ ಕಾರ್ಪೊರೇಟ್ ಕಂಪನಿ ತೊರೆದು `ಅಗ್ನಿವಾರಪತ್ರಿಕೆಯೊಂದಿಗೆ ಪತ್ರಕರ್ತ ಬದುಕು ಶುರು ಮಾಡಿದವರು; ಕತೆಗಾರರು, ಲೇಖಕರು, `ಮಾಸ್ಟೀಕರುಸಂಶೋಧನಾ ಕೃತಿ ಪ್ರಕಟಗೊಂಡಿದೆ.

Leave a Reply

Your email address will not be published.