ಘನ ಕರ್ನಾಟಕ ಸರ್ಕಾರ ಗುತ್ತಿಗೆಗೆ ಲಭ್ಯವಿದೆಯೇ..?

ಕರ್ನಾಟಕ ಸರ್ಕಾರ ವರ್ಷದಿಂದ ವರ್ಷಕ್ಕೆ ತನ್ನ ಕಾರ್ಯವೈಖರಿಯ ಮೇಲೆ ಹಿಡಿತ ಕಳೆದುಕೊಂಡು ಶಿಥಿಲಗೊಳ್ಳುತ್ತಿರುವ ಹಾಗೆ ಕಾಣಿಸುತ್ತಿದೆ. ಯಾರು ಮಂತ್ರಿಮುಖ್ಯಮಂತ್ರಿಯಾದರೂ ಯಾರು ಅಧಿಕಾರಿಯಾದರೂ ಆಡಳಿತಯಂತ್ರ ದಿವಾಳಿಯಾಗುತ್ತಿರುವ ಸ್ಪಷ್ಟ ಲಕ್ಷಣಗಳೇ ಕಾಣಿಸುತ್ತಿದೆ. ಮೊದಲು ಸರ್ಕಾರಿ ಗುತ್ತಿಗೆಗಳು ಹಾಗೂ ಸರ್ಕಾರಿ ಹುದ್ದೆಗಳು ಮಾರಾಟಕ್ಕೆ ಇಟ್ಟಂತೆ ಕಂಡುಬಂದರೆ ಇದೀಗ ಸರ್ಕಾರವೇ ಗುತ್ತಿಗೆಗೆ ಲಭ್ಯವಿದೆಯೇನೋ ಎಂಬ ಭಾವನೆ ಮೂಡಿಸುತ್ತಿದೆ. ಈಗ ಖಾಸಗಿಯಾಗಿ ನಡೆಯುತ್ತಿರುವ ಈ ಹರಾಜು ಪ್ರಕ್ರಿಯೆ ಮುಂದೆ ಸಾರ್ವಜನಿಕವಾಗಿ ನಡೆಯಲೆಂದು ನಾವು ಬಯಸುವಂತಿದೆ.

  • ಕರ್ನಾಟಕ ಸರ್ಕಾರ ಗುತ್ತಿಗೆದಾರರ ಹಿಡಿತದಲ್ಲಿಯೇ..? ಹತ್ತಿಪ್ಪತ್ತು ಗುತ್ತಿಗೆದಾರರು ಬಯಸಿದ ಕೆಲಸಗಳನ್ನಷ್ಟೇ ಟೆಂಡರ್ ಮಾಡುವ ಸ್ಥಿತಿಗೆ ತಲುಪಿದೆಯೇ..?

  • 30-40% ಕಮಿಷನ್ ಕಾರಣದಿಂದ ಹಾಗೂ ರಾಜಕಾರಣಿಅಧಿಕಾರಿ ಕಿರುಕುಳದಿಂದ ಬೇಸತ್ತು ಗುಣಮಟ್ಟದ ಗುತ್ತಿಗೆದಾರರೆಲ್ಲಾ ರಾಜ್ಯಸರ್ಕಾರದ ಗುತ್ತಿಗೆ ಬಿಟ್ಟು ದೂರ ಸರಿದಿದ್ದಾರೆಯೇ..? ಇದೇ ಕಾರಣದಿಂದ ಕೇವಲ ಕಳಪೆ ಗುತ್ತಿಗೆದಾರರಷ್ಟೇ ಉಳಿದಿದ್ದಾರೆಯೇ..?

  • ಕ್ಲಿಷ್ಟಬಹು ಇಲಾಖೆಯ ಸಮನ್ವಯದ ಗುತ್ತಿಗೆ ಕಾಮಗಾರಿ ನಿರ್ವಹಣೆ ಮಾಡುವವರಿಲ್ಲದೆ ನಮ್ಮ ಸರ್ಕಾರಗಳು ಬೀದಿಬದಿಯ ಚಪ್ಪಡಿ ಕಲ್ಲನ್ನು ಬದಲಿಸಿ ಹಣ ವ್ಯಯಹಂಚಿಕೆಗಳಿಕೆ ಮಾಡಲು ನಿಂತ ಹಾಗಿದೆಯೇ..?

ಮೊದಲು ತಮ್ಮ ಕ್ಷಮತೆ ಕಳೆದುಕೊಂಡ ಸರ್ಕಾರಗಳು ಈಗ ಗುತ್ತಿಗೆದಾರರ ಕ್ಷಮತೆಯನ್ನು ಇಲ್ಲವಾಗಿಸಿ ನಮ್ಮ ಸಾರ್ವಜನಿಕ ಕಾಮಗಾರಿಗಳನ್ನು ನಗೆಪಾಟಲಾಗಿಸಿವೆ. ಉಳಿದ ಬೆರಳೆಣಿಕೆಯಷ್ಟು ಗುತ್ತಿಗೆದಾರರ ಕಬಂಧಬಾಹುವಿನಲ್ಲಿ ಸಿಲುಕಿರುವ ಘನ ಕರ್ನಾಟಕ ಸರ್ಕಾರವೇ ಗುತ್ತಿಗೆಗೆ ಲಭ್ಯವಿದೆಯೆಂಬ ಮಾತು ಅತಿಶಯೋಕ್ತಿ ಎಂದು ಅನ್ನಿಸದಾಗಿದೆ. ಇದು ನಮ್ಮ ಜನರಿಗೆ ಅರಿವಿದೆಯೇ..? ಇದು ಹೀಗೆಯೇ ಮುಂದುವರೆದರೆ ಏನಾಗಬಹುದು..? ಇದಕ್ಕೆ ಪರಿಹಾರವಿದೆಯೇ..? ಪರಿಹಾರ ಕೊಡುವವರಾರು..

Leave a Reply

Your email address will not be published.