ಚುಕ್ಕಿ ರಂಗೋಲಿ

ಮನೆಯ ಡೋರ್ ಲಾಕ್ ತೆಗೆದ ಕಿರಣ ಮತ್ತು ಗೆಳೆಯ ಶ್ರೀನಿವಾಸ ಏನಾದರೂ ಸುಳಿವು ದೊರೆತೀತೆಂದು ಮನೆಯೆಲ್ಲಾ ತಡಕಾಡತೊಡಗಿದರು. ರಾಜೀವ ಮಾತ್ರ ಶಾಂತಳಿಲ್ಲದ ಮನೆಯೊಳಗೆ ಹೋಗಲು ಮನಸಾಗದೆ, ಬಾಗಿಲ ಹೊರಗೇ ನಿಂತು, ಬೆಳಗ್ಗೆ ತಾನೇ ಶಾಂತ, ತನ್ನ ಕೈಯಾರೆ ಬಿಡಿಸಿದ್ದ ಚುಕ್ಕಿ ರಂಗೋಲಿಯನ್ನೇ ದಿಟ್ಟಿಸಿ ನೋಡತೊಡಗಿದ.

ಎಂ.ಕುಸುಮ

ಹಬ್ಬದ ನಂತರ ಉಳಿಕೆಯಾದ ಹಳಸಿದ ಭೂರಿಭೋಜನವನ್ನೇನು ಮಾಡುವುದೆಂದು ಶಾಂತಳಿಗೆ ಚಿಂತೆಯಾಗಿತ್ತು. ಮನೆಯ ಪಕ್ಕದಲ್ಲೇ ಸುರಿದರೆ, ಬೀದಿ ನಾಯಿಗಳ ಖಾಯಂ ಆವಾಸಸ್ಥಾನ ಏರ್ಪಡುವ ಸಂಭವವಿತ್ತು. ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಮುನಿಸಿಪಾಲಿಟಿಯ ಕಸದ ವಾಹನದಲ್ಲಿ ಹಾಕೋಣವೆಂದರೆ ಅಷ್ಟೆಲ್ಲಾ ವಿವಿಧ ತಿನಿಸುಗಳು ಹಾಳಾಗಿದ್ದರ ಕುರಿತು ಮನದಲ್ಲಿ ಏಳುವ ವ್ಯಥೆಯ ತರಂಗಗಳು ಅವಳ ನೆಮ್ಮದಿಗೆಡಿಸಿದ್ದವು. ಯಾಕೆ ಬರಲಿಲ್ಲ? ಆಹ್ವಾನ ನೀಡಿದ್ದ ಎಲ್ಲಾ ನೆಂಟರು, ಇಷ್ಟರು? ಕೋರೋನಾದ ಭಯ ಇನ್ನೂ ಇದೆಯೇ? ಇಷ್ಟೇ ಜನರು ಪಕ್ಕಾ ಬರುವರೆಂದು ಲೆಕ್ಕಹಾಕಿ ಮಾಡಿಸಿದ್ದೆಲ್ಲಾ ಹಾಳಾಯ್ತಲ್ಲ? ಹಿಂದೆ ಹೀಗೆ ಆಗಿದ್ದೇ ಇಲ್ಲಅದಕ್ಕೇ ಮೊದಲ ಬಾರಿಗೆ, ಹೀಗೆ ನಿರ್ಧಾರ ಮಾಡುವುದೆಂದು ತಿಳಿಯದೆ ಶಾಂತ ಚಡಪಡಿಸುತ್ತಿದ್ದಳು.

ಶಾಂತಇನ್ನೂ ಎಷ್ಟೊತ್ತು ರಂಗೋಲಿ ಹಾಕುತ್ತಾ ಕೂರುವೆ? ಬೇಗ ಬಾ, ಕಾಫಿ ಕೊಡು.” ಯಾಜಮಾನರ ಧಾವಂತದ ನುಡಿ ಕೇಳಿ, ಶಾಂತಳ ಮನದಲ್ಲಿ ಜಿಗುಪ್ಸೆ ಮೂಡಿತು. ಅಲ್ಲಾನೆನ್ನೆ ಅಷ್ಟೆಲ್ಲಾ ಆತಿಥ್ಯ, ಔತಣಕೂಟದ ಮೇಲ್ವಿಚಾರಣೆಯಲ್ಲಿ ಓಡಾಡಿ ದಣಿದಿದ್ದೇನೆ, ಅವರೇ ಕಾಫಿ ಮಾಡಿ ನನಗೂ ಕೊಟ್ಟಿದ್ದರೆ ಆಚಾತುರ್ಯವೇನಾಗುತ್ತಿತ್ತು? ನನ್ನನ್ನೂ ಒಂದು ಜೀವಿ ಎಂದು ಈ ಗಂಡು ಪರಿಗಣಿಸುವುದು ಯಾವಾಗ? ನಾನೇನು ದಣಿವೇ ಆಗದ ರೋಬೋಟೇ? ಜೀವವಿರುವವರೆಗೂ ಈ ‘ಹೆಂಡತಿ’ ಎಂಬ ಪದಕ್ಕೆ ಜೋತುಬಿದ್ದು, ಗಾಣದೆತ್ತಾಗಬೇಕೆ? ತಾಳಿಯ ಜೊತೆಗೇ ಗಂಟುಬಿದ್ದ ಇಂತಿಪ್ಪ ಜವಾಬ್ದಾರಿಗಳನ್ನು ಇಲ್ಲಿಯವರೆಗೆ ‘ಕಮಕ್ಕಿಮಕ್’ ಅನ್ನದೇ ಹೊರುತ್ತಿರುವ ತನ್ನ ಮೇಲೆ ತನಗೇ ಕನಿಕರಮೂಡಿತು. ಓದಿ, ಕೆಲಸ ಹಿಡಿದು ಸಂಬಳ ತರುತ್ತಿರುವ ನನಗೇ ಹೀಗಾದರೆ ಉಳಿದ ಪಾಪದ ಹೆಣ್ಣುಮಕ್ಕಳ ಗತಿಯೇನೆಂದು ಆ ಕ್ಷಣದಲ್ಲೂ ಚಿಂತೆಮೂಡಿತು. “ನೀವೇ ಕಾಫಿಗೆ ನೀರಿಡಿ, ಬಂದೆ,” ಶಾಂತಳ ನುಡಿಗೆ ಆ ಕಡೆಯಿಂದ ಯಾವ ಜವಾಬೂ ಬರಲಿಲ್ಲ.

ತನ್ನಿಷ್ಟದ ಚುಕ್ಕಿ ರಂಗೋಲಿಯನ್ನು ಹಾಕಿ ಮುಗಿಸಿ ಮನೆಯೊಳಗೆ ಕಾಲಿಟ್ಟಾಗಲೂ ಪತಿದೇವ ಅಲ್ಲಾಡದೆ ಕುಳಿತಲ್ಲೇ ಪ್ರತಿಷ್ಠಾಪನೆಯಾಗಿ, ಪೇಪರ್ ಓದುತ್ತಿರುವುದನ್ನು ನೋಡಿದಾಗ ಒಮ್ಮೆಲೇ ಉಮ್ಮಳವೆದ್ದು, ನನಗ್ಯಾರೂ ಇಲ್ಲ ಎಂದೆನಿಸಿ, ಅಮ್ಮನ ನೆನಪಾಯ್ತುಅಮ್ಮ, ನೀನೂ ಹೀಗೇ ಬೆಂದಿದ್ದೆಯೇನಮ್ಮ? ಹೆಣ್ಣಾಗಿ ಹುಟ್ಟಿದ ಒಂದೇ ಕಾರಣದಿಂದ? ಮನದಲ್ಲಿ ಮೂಡಿದ ಪ್ರಶ್ನೆಗೆ ಉತ್ತರ ಹುಡುಕುವ ಗೋಜಿಗೆ ಹೋಗದೆ, ಅಡುಗೆಮನೆಯೊಳಗೆ ಕಾಲಿಟ್ಟಳು. ವಯಸ್ಸು ಐವತ್ತಾರದರೂ ನನಗೂ ಈ ದಿನನಿತ್ಯದ ಗಾಣದ ಜವಾಬ್ದಾರಿಯಿಂದ ಮುಕ್ತಿ ಹೋಗಲಿ, ಚೂರಾದರೂ ಸ್ವಾತಂತ್ರ್ಯ ಬೇಡವೇ? ಇಚ್ಛೆಯಾದಾಗ ಕುಳಿತು, ಅರಕೆಯಾದಾಗ ಎದ್ದು, ಕಾಲು ಚಾಚುವ ಸ್ವಚ್ಛಂದತೆ ಯಾಕೆ ಬೇಡ? ನಾನು ನನ್ನಮ್ಮನ ಕಾಲಕ್ಕೂ ಮಗಳ ಜಮಾನಕ್ಕೂ ಸಲ್ಲದ ತ್ರಿಶಂಕುವಾದೆನೇ? ಯೋಚನೆಯಲ್ಲೇ ಕಳೆದು ಹೋದ ಶಾಂತಳಿಗೆ, ಮುಗಿಸಬೇಕಾದ ಕೆಲಸಗಳ ಪಟ್ಟಿ ನೆನಪಾಗಿ ಆತುರಾತುರವಾಗಿ ಗ್ಯಾಸ್‍ಲೈಟರ್ ಕೈಗೆತ್ತಿಕೊಂಡಳು.

*

ರಾಜೀವನಿಗೆ ಶಾಂತ ಅಡುಗೆಮನೆಯೊಳಗೆ ಹೊಕ್ಕ ಕಾಲುಗಂಟೆ ಕಳೆದುಹೋಗಿದ್ದರೂ, ಇನ್ನ ಕಾಫಿ ತರಲಿಲ್ಲ ಎಂಬ ಬೇಸರ ಮೂಡಿ, ಪೇಪರ್ ಬಿಸಾಕಿ, ಎದ್ದು ನಿಂತ ಈ ‘ಆಧುನಿಕ’ ಮಹಿಳೆಯರೇ ಹೀಗೆನಾವೂ ಸಂಬಳ ಗಳಿಸುತ್ತೇವೆಂಬ ಹಮ್ಮು, ಅಲ್ಲಾ, ನಿನ್ನೆಯಿಂದ ನಾನೂ ಎಲ್ಲಾ ಕಡೆ ಓಡಾಡಿ ಓಡಾಡಿ ಸುಸ್ತಾಗಿದ್ದೇನೆ, ಒಂದು ಕಾಫಿ ಕೊಡಲೂ ಇಷ್ಟು ಧಿಮಾಕು ತೋರುತ್ತಿದ್ದಾಳಲ್ಲಾ, ಬರಬರುತ್ತಾ ಯಾಕೋ ಸ್ತ್ರೀವಾದಿಯಾಗುತ್ತಾ, ಮನೆಯ ಶಾಂತ ವಾತಾವರಣವನ್ನೇ ಕದಡಿ, ಹೆಸರಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾಳೆ ಎಂದುಕೊಳ್ಳುತ್ತಾ, “ಶಾಂತಾ, ಎನ್ಮಾಡುತ್ತಿದ್ದೀಯಾ ಇನ್ನೂ?” ಎಂದು ಅಡುಗೆಮನೆಯೊಳಗೆ ಹಣಿಕಿ ಹಾಕಿದ. ಅಲ್ಲೆಲ್ಲಿ ಶಾಂತಾ? ಇನ್ನೂ ಸ್ಟೋವ್ ಕೂಡ ಹಚ್ಚಿಲ್ಲ. ಒಮ್ಮೆಗೇ ಪಿತ್ತ ನೆತ್ತಿಗೇರಿ, ರಾಜೀವ ಗುಟುರು ಹಾಕತೊಡಗಿದ, “ಬರಬರುತ್ತಾ ತುಂಬಾ ಸೋಮಾರಿಯಾಗ್ತಿದ್ದೀಯಾ, ಶಾಂತಾ…”

ಬಾತ್‍ರೂಂ, ಟಾಯ್ಲೆಟ್ ಎಲ್ಲಾ ಕಡೆ ನೋಡಿ, ಶಾಂತ ಕಾಣದೆ, ಪಿತ್ತ ಅಡರಿ, ಆತಂಕ ಕಾಡತೊಡಗಿತುಎಲ್ಲಿ ಹೋದಳು? ಹೇಳದೆಕೇಳದೆ? ಕಾಂಪೌಂಡ್ ಹತ್ತಿರವೇನಾದರೂ ನಿಂತು ಪಕ್ಕದಮನೆ ಗೆಳತಿಯೊಂದಿಗೆ ಹರಟುತ್ತಿದ್ದಾಳೋ?

ಇರಲಾರದುಅವಳಿಗೂ ಒಂಬತ್ತೂವರೆಗೆ ಆಫೀಸ್‍ಗೆ ಹೋಗಲಿಕ್ಕಿದೆಆಗಲೇ ಏಳುವರೆಯಾಯ್ತುಒಮ್ಮೆಗೇ ಎದೆಬಡಿತ ಹತೋಟಿ ಮೀರಿ ಬಡಿಯತೊಡಗಿತು. ಮನೆಯಲ್ಲೇ ಎಲ್ಲಾದರೂ ಪ್ರಜ್ಞೆ ತಪ್ಪಿ ಬಿದ್ದರಬಹುದಾ, ಅವಘಡವೇನಾದರೂ ನಡೆದೇ ಹೋಯ್ತೇ?… ನೇರ ಹೋಗಿ, ಮಗ ಕಿರಣನ ರೂಂ ಬಾಗಿಲು ಬಡಿಯತೊಡಗಿದ. “ಏಯ್ ಕಿರಣ, ಎಷ್ಟೊತ್ತು ಮಲಗೋದು? ಬಾ ಎದ್ದು, ನಿಮ್ಮಮ್ಮ ಎಲ್ಲಿದ್ದಾಳೆ ನೋಡು.”

ಹತ್ತು ನಿಮಿಷ ಕಳೆದು, ಕಣ್ಣುಜ್ಜುತ್ತಾ ಬಂದ ಕಿರಣ, “ಏನಪ್ಪಾ ನಿನ್ನ ಗೋಳು? ನಾನು ನಿನ್ನೆ ಫ್ರೆಂಡ್ಸ್‍ನ್ನೆಲ್ಲಾ ಕಳಿಸಿ, ಮಲಗಿದಾಗ ರಾತ್ರಿ ಎರಡೂವರೆಯಾಗಿತ್ತು ಗೊತ್ತಾ? ಒಂದಿನನಾದರೂ ಸರಿಯಾಗಿ ಮಲಗೋಕೆ ಬಿಡಲ್ವಲ್ಲಾ…” ರಾಜೀವನ ಆತಂಕ ಒಮ್ಮೆಲೇ ಸಿಟ್ಟಾಗಿ ಮಾರ್ಪಾಡಾಯಿತು. “ಅಲ್ಲೋ, ಮಲಗೋದು ದಿನಾ ಇದ್ದದ್ದೇ! ನಿಮ್ಮಮ್ಮ ಇಲ್ಲೇ ರಂಗೋಲಿ ಹಾಕ್ತಿದ್ಲಪ್ಪ, ಅಡುಗೆಮನೆಯೊಳಗೆ ಹೋಗಿದ್ದು, ನಾನೇ ಕಣ್ಣಾರೆ ನೋಡಿದೆ, ಈಗ ಎಲ್ಲೂ ಕಾಣ್ತಾ ಇಲ್ಲ.” ವಿಷಯ ಕೇಳಿ, ಕಿರಣನ ನಿದ್ದೆಯ ಮಂಪರು ಅಡರಿ, ಅರೆಕ್ಷಣದಲ್ಲೇ ವರ್ತಮಾನಕ್ಕೆ ಮುಖಾಮುಖಿಯಾದ, ಮರುಕ್ಷಣ ಹೊಟ್ಟೆಹಿಡಿದುಕೊಂಡು ಪಕಪಕನೆ ನಗತೊಡಗಿದೆ. “ಅಲ್ಲಪ್ಪಾ, ಅಮ್ಮ ಏನು ಟೀನೇಜ್ ಹುಡುಗೀನಾ, ಎಲ್ಲೋ ಓಡಿಹೋಗೋಕೆ? ಸ್ವಲ್ಪ ಸರಿಯಾಗಿ ನೋಡಬಾರದಾ? ಸುಮ್ಮನೆ ಟೆನ್ಷನ್ ಮಾಡ್ತೀಯಾನೋಡ್ತೀನಿ ತಾಳು” ಎಂದ.

ಇಬ್ಬರೂ ಗಡಿಬಿಡಿಯಿಂದ ಮನೆಯಿಡೀ ಹುಡುಕತೊಡಗಿದರು. ಎಲ್ಲಾ ಶಾಂತಳ ಸುಳಿವಿಲ್ಲ. ಮನೆಯ ಮುಂದಿನ ಸುಂದರ ಚುಕ್ಕಿ ರಂಗೋಲಿ, ಸ್ವಲ್ಪ ಹೊತ್ತಿನ ಮುಂಚೆ ಅವಳಲ್ಲೇ ಇದ್ದುದ್ದಕ್ಕೆ ಸಾಕ್ಷಿಯಾಗಿತ್ತು. ರಂಗೋಲಿ ಹಿಟ್ಟಿನ ಡಬ್ಬ ವರಾಂಡದಲ್ಲೇ ಇದ್ದದ್ದು, ಶಾಂತಳು ಮನೆಯೊಳಗೆ ಬಂದಿದ್ದಕ್ಕೆ ಪುರಾವೆ ಹೇಳಿತು. ಆದರೆ ಅಡುಗೆಮನೆ ಮಾತ್ರ ಎಂದಿಲ್ಲದ ಹಾಗೆ ಭಣಗುಟ್ಟುತ್ತಿತ್ತು. ಅಲ್ಲಿಂದ ಕಾಫಿಯ ಸುವಾಸನೆ ಬಾರದೆ, ಒಗ್ಗರಣೆಯ ಘಮಲು ಹರಡದೆ, ಎಲ್ಲೆಡೆ ತಬ್ಬಲಿಭಾವ ತುಂಬಿನಿಂತಿತ್ತು. ಈಗ ಕಿರಣ ನಿಜಕ್ಕೂ ಗಾಬರಿಯಾದ. “ಅಪ್ಪಾ, ಪೇಪರ್ ಹಿಡಿದರೆ, ನಿನಗೆ ಈ ಲೋಕವೇ ಗೊತ್ತಾಗೊಲ್ಲ, ಯಾರಾದ್ರೂ ಅಮ್ಮನ್ನ ಕಿಡ್ನಾಪ್ ಮಾಡಿದ್ರೋ ಹೇಗೆ?” ರಾಜೀವನಿಗೆ ಹೃದಯ ಬಾಯಿಗೆ ಬಂದಂತಾಗಿ ಕೈಕಾಲು ನಡುಗತೊಡಗಿತು. “ಅದ್ಹೋಗೋ ಕಿರಣ? ನಾನಿಲ್ಲೇ ಬಾಗಿಲ ಎದುರಲ್ಲೇ ಕುಳಿತಿದ್ದೀನಿಯಾರಾದ್ರು ಒಳನುಗ್ಗಿದ್ರೆ ಗೊತ್ತಾಗುತ್ತಿರಲಿಲ್ವೇನೋ?” ಎಂದನು.

ಕೊನೆಗೆ ಕಿರಣನೇ ಅಪ್ಪನನ್ನು ಸಮಾಧಾನಿಸಿದ. “ತಡಿಯಪ್ಪಾ, ಹೆದರಬೇಡ, ಅಮ್ಮನ ಮೊಬೈಲ್‍ಗೆ ಕಾಲ್ ಮಾಡ್ತೀನಿ, ನಮ್ಮನ್ನೆಲ್ಲಾ ಫೂಲ್ ಮಾಡೋಕೆ ಅಮ್ಮ ಎಲ್ಲೋ ಅವಿತರಬೇಕು.” ಶಾಂತಳÀ ಮೊಬೈಲ್ ಟಿವಿ ಪಕ್ಕದಲ್ಲೇ ರಿಂಗಣಿಸಿದಾಗ, ಇಬ್ಬರ ಹಣೆಯೂ ಬೆವರತೊಡಗಿತು. ಕಿರಣ ತಕ್ಷಣ ಮೊಬೈಲ್ ಓಪನ್ ಮಾಡಿ, ಕಾಲ್ ರಿಜಿಸ್ಟರ್ ಚೆಕ್ ಮಾಡತೊಡಗಿದ. ಅಬ್ಬಾ! ಸದ್ಯ! ಈ ಅಮ್ಮ ಸ್ಕ್ರೀನ್ ಲಾಕ್ ಮಾಡಿಲ್ಲಆದ್ರೂ ಸ್ಕ್ರೀನ್ ಲಾಕ್ ಮಾಡುವ ವಿಷಯವೇನಿರುತ್ತೆ, ಅಮ್ಮನ ಹತ್ತಿರ? ಅವಳು ಮಾತನಾಡುವುದೇನಿದ್ರೂ ತನ್ನ ಆಫೀಸ್‍ನವರ ಸಂಗಡ, ಕಚೇರಿ, ಕಡತದ ವಿಷಯ ತಾನೇಇತ್ತೀಚೆಗೆ ಅವಳ ಒಬ್ಬಿಬ್ಬರು ಬಾಲ್ಯದ ಗೆಳತಿಯರು ಆವಾಗಾವಾಗ ಅಪರೂಪಕ್ಕೊಮ್ಮೆ ಫೋನ್ ಮಾಡ್ದಾಗ, ಮೊಬೈಲ್ ಹಿಡಿಯುತ್ತಿದ್ದಳು. ನಿಜವಾಗಿಯೂ ಈ ಸೋಶಿಯಲ್ ಮೀಡಿಯಾ ತಿಳಿದು, ಕಲಿಯುವಷ್ಟು ಟೈಮ್ ಎಲ್ಲಿತ್ತು, ಅಮ್ಮನಿಗೆ? ಸದಾ ಮನೆಯ, ನಮ್ಮೆಲ್ಲರ ಪೋಷಣೆಯಲ್ಲೇ ಅವಳ ಸಮಯ ಹಾರಿಹೋಗುತ್ತಿತ್ತು.

ಎಷ್ಟೊಂದು ಬಾರಿ ಈ ಮೊಬೈಲ್ ವಿಷಯಕ್ಕೆ ತನ್ನನ್ನು ಎಡತಾಗಿದ್ದಳು… “ಕಿರಣ, ಈ ವಾಟ್ಸ್‍ಪ್ ಹೇಗೋ ಕಳಿಸೋದು? ನನ್ನ ಮೊಬೈಲ್‍ಗೂ ಹಾಕ್ಕೋಡೋ…” ತಾನು ಮಾತ್ರ “ಆಯ್ತಮ್ಮ ಅದಕ್ಕೆಲ್ಲಾ ಡಾಟಾ ಹಾಕ್ಬೇಕು, ಹಾಗೆ ಬರೊಲ್ಲ, ನಾಳೆ ಕಾಲೇಜಿನಿಂದ ಬಂದು ಹಾಕ್ಕೋಡ್ತೀನಿ”, ಎಂದಿದ್ದ. ಆ ನಾಳೆ, ಒಂದು ವರ್ಷ ಕಳೆದುಹೋದರೂ ಬಂದಿರಲಿಲ್ಲ. ಒಂದೆರಡು ಬಾರಿ ಕೇಳಿ, ಕೇಳಿ ಅಮ್ಮನೂ ಸುಮ್ಮನಾಗಿದ್ದಳು. “ತನಗೆ ಟಿವಿ ಸೀರಿಯಲ್ ನೋಡಲೇ ಸಮಯವಿಲ್ಲ. ಇನ್ನು ಇದೊಂದು ವಾಟ್ಸ್‍ಪ್ ಏನೋ, ಎಂಥೋ, ಹೋಗಲಿ ಬಿಡು, ಎಂದು ತನ್ನನ್ನೇ ಸಮಾಧಾನಿಸಿಕೊಂಡಾಗ ಎದುರಲ್ಲೇ ನಿಂತಿದ್ದ ಅವನಿಗೆ ಏನೂ ಅನಿಸಿರಲಿಲ್ಲ. ಛೇ, ತಾನ್ಯಾಕಷ್ಟು ಹೃದಯಹೀನನಾಗಿದ್ದೆಅಮ್ಮನಿಗೂ ಮನಸ್ಸಿದೆ, ಅವಳದೇ ಆದ ಆಸೆಗಳಿವೆಈ ಹೊಸ ಜನರೇಶನ್‍ನ ಸ್ಮಾರ್ಟ್ ಗೆಜೆಟ್‍ಗಳನ್ನು ಅವಳಿಗೆ ಪರಿಚಯಿಸುವ ಜವಾಬ್ದಾರಿ, ತಾಳ್ಮೆ ತನಗೆ ಇರಬೇಕಿತ್ತಲ್ಲವೇ, ಎನ್ನಿಸಿ ಕಿರಣನಿಗೆ ಅಪರಾಧಿ ಪ್ರಜ್ಞೆ ಕಾಡತೊಡಗಿತು. “ಅಪ್ಪ, ಅಕ್ಕನಿಗೆ ಫೋನ್ ಮಾಡೋಣ್ವ? ಅಮ್ಮ ಅವಳಿಗೆ ಏನಾದ್ರು ಹೇಳಿರ್ಬೋದಾ?” ಬೆಂಗಳೂರಿನಲ್ಲಿ ಮೆಡಿಕಲ್ ಓದುತ್ತಿದ್ದ ಅಕ್ಕ ಉಮಾಳಿಗೆ, ಪರೀಕ್ಷೆಗಳ ಕಾರಣದಿಂದ ನೆನ್ನೆಯ ಹಬ್ಬದೂಟಕ್ಕೆ ಬರಲಾಗಿರಲಿಲ್ಲ.

ತಡಿಯೋ ಕಿರಣ, ಈಗಲೇ ಬೇಡ, ಉಮಾ ಗಾಬರಿ ಬಿದ್ದಾಳು. ಸ್ವಲ್ಪ ಸುತ್ತಮುತ್ತ ಎಲ್ಲರನ್ನೂ ವಿಚಾರಿಸಿ ಬಾ, ನಂತರ ಉಮಾಳನ್ನು ಕೇಳೋಣ”, ರಾಜೀವ ನುಡಿದ. ನಂತರದ ಎರಡು ಗಂಟೆಗಳಲ್ಲಿ ಅಪ್ಪಮಗ ಇಬ್ಬರೂ ಶಾಂತಳ ಎಲ್ಲಾ ನೆಂಟರುಗೆಳತಿಯರಿಗೆಲ್ಲಾ ಫೋನ್ ಮಾಡಿ ಅವರಿಗೇನಾದ್ರೂ ಅವಳ ಕುರಿತು ಗೊತ್ತಾ, ಅವರಲ್ಲಿಗೆ ಏನಾದ್ರು ಬಂದಿದ್ದಾಳೋ, ಎಂದು ವಿಚಾರಿಸತೊಡಗಿದರು. ವಿಷಯ ತಿಳಿದ ಪರಿಚಯಸ್ಥರೆಲ್ಲರೂ ಅಚ್ಚರಿ ಪಡತೊಡಗಿದರು. “ಏನ್ರೀ ರಾಜೀವ್, ನೆನ್ನೆ ತಾನೇ ನಮ್ಮೆನ್ನೆಲ್ಲಾ ಅಷ್ಟೊಂದು ಸಡಗರದಿಂದ ಆದರಿಸಿ, ಸತ್ಕಾರ ನೀಡಿ, ನಗುನಗುತ್ತಿದ್ದರು, ಶಾಂತ. ಇದೇನ್ರೀ ಕಥೆ?” ಎಂದಾಗ, ರಾಜೀವನ ಗಂಟಲು ಕಟ್ಟಿ, ಗದ್ಗದಿಸಿದ. “ಸಾರ್, ಏನೂಂಥ ನನಗೂ ಗೊತ್ತಾಗುತ್ತಿಲ್ಲ,” ಕೊನೆಗೆ ಕೆಲವರು “ಯಾವುದಕ್ಕೂ ಒಂದು ಪೊಲೀಸ್ ಕಂಪ್ಲೆಂಟ್ ಕೊಟ್ಬಿಡಿ”, ಎಂದಾಗ ಭೂಮಿಯೇ ಬಾಯ್ಬಿಟ್ಟಂತಾಗಿ, ತಲೆಸುತ್ತಿಬಂದು ಸೋಫಾದಲ್ಲೇ ಕುಸಿದು ಕುಳಿತ, ರಾಜೀವ. “ಶಾಂತಾ, ನೀರೂ…” ಎಂದು ಕೂಗಿ ಕರೆದಿತ್ತು, ಮನ; ಆದರೆ ನಾಲಿಗೆ ಹೊರಳದೆ ಒಣಗತೊಡಗಿತು.

ಶಾಂತಶಾಂತ”, ರಾಜೀವನ ಮನ ಹಲುಬತೊಡಗಿತು. ನನಗಾಗಿ, ಮನೆಗಾಗಿ ಎಷ್ಟೆಲ್ಲಾ ತ್ಯಾಗ ಮಾಡಿದ್ದಾಳೆ, ಅವಳನ್ನ ನಾನು ಯಾವಾಗ ನೆಮ್ಮದಿಯಾಗಿಟ್ಟಿದ್ದೆ? ಹೆಸರಿಗೆ ತಕ್ಕಂತೆ ಶಾಂತಪ್ರವೃತ್ತಿಯವಳಾದ ಹೆಣ್ಣು ತನ್ನ ಬಾಳಸಂಗಾತಿಯಾದಾಗ, ನೀನು ಎಷ್ಟು ಪುಣ್ಯವಂತ ಎಂದು ಗೆಳೆಯರೆಲ್ಲಾ ಕರುಬಿದ್ದರೂ, ನಾನು ಮಾತ್ರ ಅವಳ ಬೆಲೆಯನ್ನು ಅರಿಯದೆ, ನನ್ನ ಸೇವೆಗಾಗಿಯೇ ಬಂದವಳೆಂದು ಬಿಂದಾಸ್ ಆಗಿ, ನನ್ನದೇ ಕನಸಿನಲೋಕದಲ್ಲಿದ್ದೆ, ಮದುವೆಯ ನಂತರದ ದಿನಗಳಲ್ಲಿ ನನ್ನ ಮಕ್ಕಳ ತಾಯಿಯಾಗಿ ಜವಾಬ್ದಾರಿಯನ್ನ ಚಕಾರವೆತ್ತದೆ ಹೊತ್ತು, ಹೊರಗೂ ದುಡಿಯುತ್ತಾ, ನೋಡನೋಡುತ್ತಲೇ ಪ್ರೌಢಳಾಗಿ ಬಿಟ್ಟಳು. ಆಗಾಗ ಅವಳ ಗೊಣಗು, ಸಿಡುಕು ಕಿವಿ ಮೇಲೆ ಬಿದ್ದರೂ, ಕೇಳಲೇ ಇಲ್ಲವೆಂಬಂತೆ ಮೌನಿಯಾಗಿರುತ್ತಿದ್ದೆ. ಹೇಗಿದ್ದರೂ ಕೊನೆಗೆ ಅವಳು ನಿಭಾಯಿಸಿಯೇ ತೀರುತ್ತಾಳೆಂಬ ಭರವಸೆ, ನಂಬಿಕೆ! ಶಾಂತಳಿಗಿಂತ ಎಂಟುವರ್ಷ ದೊಡ್ಡವನಾಗಿ, ಅವಳ ಗಂಡನಾಗಿ ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸಲಿಲ್ಲ ಎಂದು ಈಗ ನಾನೇ ಒಪ್ಪಿಕೊಳ್ಳುವೆ!

ಶಾಂತಶಾಂತಎಲ್ಲಿದ್ದೀಯಾ, ಯಾಕೆ ಈ ಪರೀಕ್ಷೆ? ಬೇಗ ಬಂದುಬಿಡುದೇವರೇ, ಇದೊಂದು ಕೆಟ್ಟ ಕನಸಾಗಿರಬಾರದೇ?” ಮುಖಮುಚ್ಚಿ ಕುಳಿತ ರಾಜೀವನ ಕಣ್ಣಿಂದ ಕಣ್ಣೀರು ಧಾರೆಯಾಗಿ ಹರಿಯಿತು. ತಾಯಿಯೊಡಲನ್ನು ಮೊದಲ ಬಾರಿಗೆ ತೊರೆದ ಮಗುವಿನಂತೆ ರಾಜೀವ ಅಸಹಾಯಕನಾದ. ಅಪ್ಪನೆಡೆಗೆ ಧಾವಿಸಿ ಬಂದ ಕಿರಣ ದಂಗುಬಡಿದ, “ಇದೇನಪ್ಪಾ? ಮಗುವಿನಂತೆ ಅಳುತ್ತಿದ್ದೀರಾ? ಅಮ್ಮ ಇನ್ನೆಲ್ಲಿ ಹೋಗಿರ್ತಾಳೆ? ಏನಾದ್ರೂ ಪಕ್ಕದ ರಸ್ತೆಯ ಅಂಗಡಿಯಿಂದ ಅಡುಗೆಸಾಮಾನು ಬೇಕಾಗಿತ್ತಾ? ಅಲ್ಲಿಗೆ ಹೋಗಿರ್ಬೋದುನೋಡಿ ಬರ್ತೀನಿ, ತಾಳಿ”, ಎಂದು ಆಶ್ವಾಸನೆಯನ್ನಿತ್ತು ಹೊರಟ.

ರಾಜೀವನ ಮನದ ತುಂಬಾ ಶಾಂತಳು ನವವಧುವಾಗಿ ತನ್ನೆದುರು ಪ್ರಥಮಬಾರಿಗೆ ನಿಂತಾಗಿನ ಚಿತ್ರಣವೇ ಕಣ್ಣೆದುರು ಬಂದಂತಾಯಿತು. ಎಷ್ಟು ಸ್ನಿಗ್ಧ, ಮುಗ್ಧ ಸೌಂದರ್ಯ, ನನ್ನ ಅಪ್ಪಅಮ್ಮ ಬದುಕಿರುವವರೆಗೂ ಅವರ ಎಲ್ಲಾ ಆಚಾರವಿಚಾರಗಳಿಗೆ ಹೊಂದಿಕೊಂಡು ಇದ್ದಳು. ಕೆಲವೊಮ್ಮೆ ತಾನೇ ಅಮ್ಮನ ಗೊಡ್ಡು ಸಂಪ್ರದಾಯಕ್ಕೆ ಸಿಡಿಮಿಡಿಗೊಂಡಾಗ, ನನ್ನನ್ನೇ ಸಮಾಧಾನಿಸುತ್ತಿದ್ದಳು.

ದೊಡ್ಡವರ ಮನಸು ನೊಂದರೆ, ನಮಗೆ ನೆಮ್ಮದಿಯಿರುತ್ತಾ?” ಅಗೆಲ್ಲಾ, ‘ಇವಳೂ ನನ್ನ ಅಮ್ಮನಂತಯೇ ಹಳೆಕಾಲದ ಜಮಾನದವಳು, ಒಂಚೂರೂ ತಾರ್ಕಿಕ ಬುದ್ಧಿ ಬೇಡವೇ? ಎಂಬ ಹೀಯಾಳಿಕೆಯ ಭಾವವೇ ನನ್ನಲ್ಲಿ ತುಂಬಿರುತ್ತಿತ್ತು.

ಶಾಂತನೀನಿದ್ದಿದ್ದರಿಂದಲೇ ನನ್ನದೂ ಒಂದು ಬದುಕಾಗಿತ್ತು. ನೆಮ್ಮದಿಯಿಂದ ಇದ್ದ ಕುಟುಂಬವಾಗಿತ್ತು. ನೀನು ಮನೆಯ ಒಳಗೂ ಹೊರಗೂ ದುಡಿದ್ದಿದ್ದರಿಂದಲೇ ಮಗಳಿಗೆ ಅವಳಿಷ್ಟದ ಮೆಡಿಕಲ್ ಸೀಟು ದೊರೆಯುವಂತಾಯ್ತು ಅಷ್ಟಕ್ಕೂ ನಿನಗಾಗಿ ಏನನ್ನು ಕೇಳಿದ್ದೇ ಇಲ್ಲ ನೀನು…? ಎಂದೂ ದುಬಾರಿಯ ಸೀರೆ, ಒಡವೆಗಾಗಿ ನನ್ನನ್ನು ಗೋಳು ಹೊಯ್ದುಕೊಂಡಿರಲಿಲ್ಲ. ಆದರೂ ಟಿ.ವಿ. ನ್ಯೂಸ್ ಪೇಪರ್‍ನಲ್ಲಿ ಯಾವುದಾದರೂ ಸೀರೆ, ಒಡವೆಯ ಜಾಹೀರಾತು ಬಂದಾಗ, ನೀನು ಅದನ್ನೇ ಆಸೆಯಿಂದ, ಕಣ್ಣರಳಿಸಿ ನೋಡುತ್ತಿದ್ದದ್ದು ನನಗೆ ಗೊತ್ತಿರದ ವಿಷಯವೇನಲ್ಲಆದರೆ ನಾನು ಅದಕ್ಕೆ ಯಾವುದೇ ಮಹತ್ವ ನೀಡಿರಲೇ ಇಲ್ಲ. ಯಾಕೆ ಹಾಗಾಗಿದ್ದೆ ನಾನು? ನಾನು ಶಾಂತಳಿಗೆ ತಕ್ಕ ಪತಿಯಾಗಲಿಲ್ಲವೇ? ಅವಳಿಗೂ ಸಣ್ಣಪುಟ್ಟ ಕನಸುಗಳಿರುತ್ತಿವೆಯೆಂಬುದನ್ನು ಹೇಗೆ ಮೂಲೆಗೆ ಸವರಿಹಾಕಿದೆ ನಾನು?” ಉತ್ತರ ಅವನಿಗೂ ಹೊಳೆಯದೇ, ರಾಜೀವ ಸುಸ್ತಾದ

ಮಗ ಈಗ ಬಂದಾನು, ಆಗ ಬಂದಾನೆಂದು ಬಾಗಿಲೆಡೆ ನೋಡಿದ್ದೇ ಬಂತು, ಅಷ್ಟರಲ್ಲೇ ಕೆಲಸದ ನಿಂಗವ್ವ ಬಂದು ಮನೆಯ ಕಸ ಹೊಡೆಯತೊಡಗಿದಳು.

ಅವಳುಟ್ಟಿದ್ದು ಶಾಂತನದ್ದೇ ಸೀರೆ. ಹಸಿರೊಡಲ ಸೀರೆ ಎಷ್ಟು ಹಳೆಯದಾದರೂ ನಾನು ಕೊಟ್ಟ ಮೊದಲ ಉಡುಗೊರೆಯೆಂಬ ಮಮಕಾರದಿಂದ ಬಿಡದೇ ಉಡುತ್ತಿದ್ದಳು. ಕೊನೆಗೆ ನಾನೇ, “ಈ ಸೀರೆ ಉಟ್ಟಿದ್ದು ನೋಡಿ,ನೋಡಿ ಬೇಜಾರಾಗಿದೆ, ಆ ಕೆಲಸದ ನಿಂಗವ್ವನಿಗಾದರೂ ಕೊಡಬಾರದೇ?”, ಎಂದಿದ್ದೆ. ಆಗ ಶಾಂತ, ಏನೋ ಹೇಳಲು ಬಾಯಿ ತೆರೆದವಳು, ಮತ್ತೆ ಸುಮ್ಮನಾಗಿದ್ದಳು.

ಹಳೆಯದ್ದೆಲ್ಲಾ ಸಿನಿಮಾ ರೀಲಿನ ತರಹ ಮನಃಪಟಲದ ತುಂಬಾ ಆವರಿಸಿ ರಾಜೀವ ನಿತ್ರಾಣನಾದ. ಆಫೀಸಿಗೆ ರಜೆಗಾಗಿ ಇಮೇಲ್ ಕಳಿಸಿ, ತಲೆ ಹಿಡಿದು ಕುಳಿತ. ಆಗಲೇ ಹೊಟ್ಟೆ ಚುರುಗುಟ್ಟುತ್ತಿತ್ತು, ಪಾಪ ಅಂದಿನಿಂದ ಈವರೆಗೂ ಎಂದೂ ಯಾವುದಕ್ಕೂ ನಿರಾಳವಾಗಿ ಕುಳಿತು ಶಾಂತ ಉಂಡು ಉಟ್ಟು ಆನಂದಿಸಿದ್ದೇ ಇಲ್ಲಅಥವಾ ತಾನದಕ್ಕೆ ಅವಕಾಶ ನೀಡಿರಲಿಲ್ಲ. ಹೋದ ತಿಂಗಳು ತಾನೇ ತನ್ನ ಗೆಳತಿಯು ಅವಳ ಕುಟುಂಬ ಸಮೇತ ಉತ್ತರಭಾರತದ ಟೂರ್ ಮಾಡಿ ಬಂದಿದ್ದನ್ನು, ಆಗ್ರಾದ ತಾಜ್ ಮಹಲ್ ಸೌಂದರ್ಯದ ವರ್ಣನೆ ಮಾಡಿದ್ದನ್ನು ಹೇಳಿ ನಾವೂ ಆಗ್ರಾಗೆ ಹೋಗಿಬರೋಣವೆಂದು ಮೊದಲಬಾರಿಗೆ ಬೇಡಿಕೆಯಿಟ್ಟಿದ್ದಳು.

ಆಫೀಸ್ ಕಡತಗಳ ವಿಲೇವಾರಿಯ ಗೋಜಲಿನಲ್ಲಿ ಮುಳುಗಿದ್ದ ನಾನು ಮುಖ ಸಿಂಡರಿಸಿ, “ಹೌದೇನು? ಈ ವಯಸ್ಸಿನಲ್ಲಿ ತಾಜ್ಮಹಲ್ ನೋಡಿ ಮಾಡೋದೇನಿದೆ,? ಎಂದಿದ್ದೆ. ವಿವರ್ಣವಾದ ಅವಳ ಮುಖವನ್ನು ನೋಡಿಯೂ ನೋಡದಂತೆ ಬೇಗಬೇಗನೆ ತಿಂಡಿ ಮುಗಿಸಿ ಆಫೀಸಿಗೆ ಧಾವಿಸಿದ್ದೆಶಾಂತ ಎಂತಹ ಅಪರಾಧ ಮಾಡಿಬಿಟ್ಟೆ ನಾನು, “ಅಲ್ಲಾ ನೀನು ಒಮ್ಮೆಯಾದರೂ ನನಗೆ ಗದರಿಸಿ ಹೇಳಿದ್ದರೆ ಸಾಕಿತ್ತು. ನೀನಿಲ್ಲದಿರುವುದನ್ನು ನನಗೆ ಒಪ್ಪಿಕೊಳ್ಳಲೇ ಆಗುತ್ತಿಲ್ಲ. ಬಂದುಬಿಡು ಶಾಂತ…” ಹೀಗೆ ಎಷ್ಟು ಹೊತ್ತು ಕುಳಿತಿದ್ದನೋ ರಾಜೀವಕೊನೆಗೆ ಮಗ ಕಿರಣ ಬಂದು ಮೈಯಲುಗಿಸಿದಾಗಲೇ ಎಚ್ಚರಾಗಿದ್ದು. ಬುದ್ಧಿಗೆ ಏನೂ ಹೊಳೆಯದೆ, ಮಂಕಾಗಿತ್ತು. ಕಿರಣನ ದನಿಯಲ್ಲಿ ಆತಂಕ ತುಂಬಿತ್ತು. ಅವನು ಹುಡುಕಲು ಹೋಗಿ ಆಗಲೇ ಎರಡು ಗಂಟೆ ಕಳೆದಿತ್ತು. “ಅಪ್ಪ, ಸುತ್ತಮುತ್ತ ಎಲ್ಲ ಕಡೆ ವಿಚಾರಿಸಿ ಬಂದೆ. ಯಾರೂ ಬೆಳಗ್ಗೆಯಿಂದ ಅಮ್ಮನ್ನ ಎಲ್ಲೂ ನೋಡಿಲ್ಲ, ಏನೂ ಗೊತ್ತಾಗಲಿಲ್ಲಎಂದ. ಅಷ್ಟರಲ್ಲಾಗಲೇ ವಿಷಯ ತಿಳಿದು, ಕೆಲಸದ ನಿಂಗವ್ವ ಅಲ್ಲೇ ಬಂದು ಕುಳಿತಳು.

ಪಕ್ಕದ ಮನೆ ರಂಗಜ್ಜಿಯೂ ಬಂದರು. “ರಾಜೀವಪ್ಪ, ನಮ್ಮ ಶಾಂತ ಚಿನ್ನದಂತವಳು. ನೀನು ಗಾಬರಿಯಾಗಬೇಡ, ಏನೋ ಆಚಾತುರ್ಯವಾಗಿರಬಹುದುಧೈರ್ಯವಾಗಿರುಎಂದರು. ಗೆಳೆಯ ಶ್ರೀನಿವಾಸನೂ ವಿಷಯ ತಿಳಿದು ಬೈಕ್ನಲ್ಲಿ ಧಾವಿಸಿಬಂದ. “ನಡಿಯೋ ರಾಜೀವ, ಮೊದಲು ಪೆÇಲೀಸ್ ಕಂಪ್ಲೇಂಟ್ ಕೊಡೋಣ. ಇಂತಹ ವಿಷಯಗಳಲ್ಲಿ ತಡಮಾಡಬಾರದುಎಂದ. ಠಾಣೆಯ ಪೇದೆ ರಾಜೀವನನ್ನೇ ಗುಮಾನಿಯಿಂದ ನೋಡುತ್ತಾ ವಿಚಾರಿಸತೊಡಗಿದಾಗ ಅವನ ನಾಲಿಗೆಯ ಪಸೆಯೇ ಆರಿ ಹೋಯ್ತು. “ದೇವರೇ, ಇದೆಂತಹ ಪರೀಕ್ಷೆ, ಶಾಂತ, ಏಕೆ ನನಗೀ ಶಿಕ್ಷೆ ಕೊಟ್ಟೆ?” ರಾಜೀವ ಮನದಲ್ಲೇ ಹಲುಬ ತೊಡಗಿದ.

ಠಾಣೆಯಲ್ಲಿ ಶಾಂತಳು ಕಳೆದುಹೋಗಿರುವ ಕುರಿತು ಕಂಪ್ಲೇಂಟ್ ಕೊಟ್ಟಾಗ ರಾಜೀವನ ಹೃದಯವೇ ಕಳಚಿ ಬಿದ್ದಂತಾಗಿತ್ತು. ಪೇದೆಯು ಶಾಂತಳ ಇತ್ತೀಚೆಗಿನ ಫೆÇೀಟೋ ಕೇಳಿದಾಗ ಮಗ ಕಿರಣ ತನ್ನ ಮೊಬೈಲ್ನಲ್ಲಿ ಹುಡುಕತೊಡಗಿದ. ಅಂತೂ ಮಗಳು ಉಮಾಳನ್ನು ಮೂರು ವರ್ಷದ ಹಿಂದೆ ಮೆಡಿಕಲ್‍ಗೆ ಕಳುಹಿಸುವಾಗ, ಮಗಳ ಜೊತೆ ನಿಂತು ಅವಳು ತೆಗೆಸಿಕೊಂಡಿದ್ದ ಫೆÇೀಟೋ ಸಾಕಷ್ಟು ಹುಡುಕಿ, ತೆಗೆದು ಕೊಟ್ಟಾಗ, ಪೇದೆಯ ತೀಕ್ಷ್ಣ, ವಕ್ರನೋಟದಿಂದ, ನಾನು ಕೊಲೆಯನ್ನೇ ಮಾಡಿದ್ದೇನೆನೋ ಅನ್ನಿಸಿದಂತಾಗಿ ಬಿಳುಚಿಕೊಂಡ. “ಶಾಂತ, ನೀನು ಎಲ್ಲಿದ್ದರೂ, ಬಂದು ಬಿಡು. ನಾನು ಆ ಮೊದಲಿನ ರಾಜೀವನಾಗಿ ಇರೋಲ್ಲ, ನಿನ್ನನ್ನು ಹೂವಿನಂತೆ, ರಾಣಿಯಂತೆ ನೋಡಿಕೊಳ್ಳುತ್ತೇನೆ. “ರಾಜೀವನಿಗೆ ದುಃಖ ತಡೆಯಲಾಗದೆ ಬಿಕ್ಕಳಿಸತೊಡಗಿದಾಗ, ಸ್ನೇಹಿತ ಶ್ರೀನಿವಾಸನೇ ಸಮಾಧಾನಿಸಿ, ಅವರನ್ನು ಹೋಟೆಲ್‍ಗೆ ಕರೆದೊಯ್ದು ತಿಂಡಿ ಕೊಡಿಸಿ ಸಮಾಧಾನಿದ. “ರಾಜೀವ ಏನೋ ಆಗಿಹೋಯ್ತು, ಸ್ವಲ್ಪ ನಿರಾಳವಾಗಿ ಕುಳಿತು ನೆನ್ನೆಯಿಂದ ಅತ್ತಿಗೆ ನಿನ್ನ ಹತ್ತಿರ ಏನಾದರೂ ವಿಶೇಷವಾಗಿ ಮಾತನಾಡಿದ್ದು ನೆನಪಾದರೆ, ನೆನಪಿಸಿಕೋ. ಏನಾದರೂ ಗೆಳತಿಯ ಊರಿಗೆ ಹೋಗುವ ಮಾತನಾಡಿದ್ದು ಉಂಟಾ? ಅವರಿಗೆ ಏನಾದರೂ ನೀನು ಹೊಡೆದಿದ್ದು ಬೈದದ್ದು ಉಂಟಾ?”

ಛೆ, ಛೇ ಶ್ರೀನಿವಾಸ, ನಾನು ಅವಳ ಹೊಟ್ಟೆ ಉರಿಸಿರಬಹುದು, ಆದರೆ ಎಂದೂ ಅವಳ ಮೇಲೆ ಕೈ ಎತ್ತಿಲ್ಲಎಂದ. “ನೋಡು ರಾಜೀವ, ಈ ಹೆಂಗಸರು ಬಹಳ ಸೂಕ್ಷ್ಮ ಪ್ರವೃತ್ತಿಯವರು. ಕೈಯೆತ್ತಿ ಹೊಡೆಯಲೇ ಬೇಕಾಗಿಲ್ಲ, ನಿನ್ನ ನಿರ್ಲಕ್ಷ್ಯವೇ ಸಾಕು ಅವರ ಮನಸ್ಸು ಮುರಿಯೋಕೆಎಂದಾಗ ರಾಜೀವ ಗಳಗಳನೆ ಅತ್ತ. “ನೋಡೋ, ನಿನಗೆ ಬೇಜಾರು ನೋಡೋದು ನನ್ನ ಉದ್ದೇಶ ಅಲ್ಲನೀನು ನನ್ನ ಗೆಳೆಯ, ನೀನೇನೆಂದು ನನಗೂ ಗೊತ್ತು. ಆದರೆ ಈಗ ಸಂದರ್ಭ ಹೀಗಾಗಿದೆ. ಸ್ವಲ್ಪ ಹೋದವಾರದಿಂದ ನಡೆದ ಘಟನೆಗಳನ್ನು ನೆನಪಿಸಿಕೋ, ಏನಾದರೂ ಸುಳಿವು ಸಿಗಬಹುದು. ಮನೆಗೆ ಹೋಗಿ ಮತ್ತೊಮ್ಮೆ ಏನಾದರೂ ಚೀಟಿಕಾಗದ ಬರೆದಿಟ್ಟಿದ್ದಾರೇನೋ ನೋಡೋಣಎಂದ. ಮನೆಗೆ ಬಂದಾಗ ಶಾಂತಳೇ ಮುಚ್ಚಟೆಯಿಂದ ಬೆಳೆಸಿದ್ದ ಪಾರಿಜಾತ ಸುತ್ತಮುತ್ತಲೆಲ್ಲಾ ಹೂ ಉದುರಿಸಿದ್ದು, ಯಜಮಾನಿಗಾಗಿ ಶೋಕಿಸಿದಂತಿತ್ತು. “ನೀನೇ ಬೆಳೆಸಿದ ಈ ಪಾರಿಜಾತದ ಮೇಲೆ ಕಾಲಿಟ್ಟು, ಎಲ್ಲಿಗೆ ಹೋಗಿಬಿಟ್ಟೆ ಶಾಂತ?” ರಾಜೀವ ಮತ್ತೆ ಮನದಲ್ಲೇ ಹಲುಬತೊಡಗಿದ.

ಮನೆಯ ಡೋರ್ ಲಾಕ್ ತೆಗೆದ ಕಿರಣ ಮತ್ತು ಗೆಳೆಯ ಶ್ರೀನಿವಾಸ ಏನಾದರೂ ಸುಳಿವು ದೊರೆತೀತೆಂದು ಮನೆಯೆಲ್ಲಾ ತಡಕಾಡತೊಡಗಿದರು. ರಾಜೀವ ಮಾತ್ರ ಶಾಂತಳಿಲ್ಲದ ಮನೆಯೊಳಗೆ ಹೋಗಲು ಮನಸಾಗದೆ, ಬಾಗಿಲ ಹೊರಗೇ ನಿಂತು, ಬೆಳಗ್ಗೆ ತಾನೇ ಶಾಂತ, ತನ್ನ ಕೈಯಾರೆ ಬಿಡಿಸಿದ್ದ ಚುಕ್ಕಿ ರಂಗೋಲಿಯನ್ನೇ ದಿಟ್ಟಿಸಿ ನೋಡತೊಡಗಿದ. ಬೆಳಗ್ಗೆ ತಾನಿಲ್ಲೇ ನಿಂತು ಈ ರಂಗೋಲಿಯ ಅಂದಚಂದ ಆಸ್ವಾದಿಸಿದ್ದರೆ ಈ ಕ್ಷಣದ ಪರಿಸ್ಥಿತಿ ಬರುತ್ತಿರಲಿಲ್ಲ, ಎಂದೆನಿಸಿ ಕಣ್ಣು ಮಂಜಾಯಿತು. ಮಂಜಾದ ಕಣ್ಣುಗಳಿಂದ ರಂಗೋಲಿಯ ಆ ಚುಕ್ಕಿಗಳು, ಅವುಗಳ ಸಾಲುಗಳು, ಒಂದಕ್ಕೊಂದು ಜೋಡಿಸಿ ಎಳೆದ ಎಳೆಗಳು, ಏನೋ ಹೇಳುತ್ತಿವೆಯೆಂದು ಭಾಸವಾಗಿ ಬವಳಿಬಿದ್ದ.

Leave a Reply

Your email address will not be published.