ಜರ್ಮನಿಯಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಸರ್ಕಾರ ಖಚಿತ

ಚುನಾವಣೆಗಳು ನಡೆದ ಎರಡು ತಿಂಗಳ ನಂತರವಾದರೂ ಜರ್ಮನಿಯಲ್ಲಿ ಹೊಸ ಒಕ್ಕೂಟ ಸರ್ಕಾರ ಅಧಿಕಾರಕ್ಕೆ ಬರುವಂತೆ ಕಾಣುತ್ತಿದೆ. ಓಲೋಫ್ ಶುಲ್ಜ್‍ರವರ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ(ಎಸ್‍ಡಿಪಿ) ತನ್ನ ಮಿತ್ರ ಪಕ್ಷಗಳಾದ ಫ್ರೀ ಡೆಮಾಕ್ರೆಟಿಕ್ ಪಕ್ಷ (ಎಫ್‍ಡಿಪಿ) ಮತ್ತು ಗ್ರೀನ್ ಪಕ್ಷಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಎಸ್‍ಡಿಪಿಯ ಓಲೋಫ್ ಶುಲ್ಜ್ ಛಾನ್ಸೆಲರ್ ಆಗಲಿದ್ದರೆ, ಎಫ್‍ಡಿಪಿಯ ಕ್ರಿಶ್ಚಿಯನ್ ಲಿಂಡರ್ ವಿತ್ತ ಮಂತ್ರಿಯಾಗಿ ಹಾಗೂ ಗ್ರೀನ್ ಪಕ್ಷದ ರಾಬರ್ಟ್ ಹೆಬೆಕ್ ಪರಿಸರ ಆರ್ಥಿಕತೆಯ ಮಂತ್ರಿಯಾಗಲಿದ್ದಾರೆ. ಈ ಮೂರೂ ಪಕ್ಷಗಳ ನಡುವಿನ ಒಡಂಬಡಿಕೆ 2030 ರವರೆಗೆ ಕಲ್ಲಿದ್ದಲು ಬಳಕೆ ನಿಲ್ಲಿಸುವುದು ಹಾಗೂ 2040 ರೊಳಗೆ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆ ನಿಲ್ಲಿಸುವುದನ್ನೂ ಒಳಗೊಂಡಿದೆ. ಎಫ್‍ಡಿಪಿ ಬೇಡಿಕೆಯಂತೆ ಐರೋಪ್ಯ ಒಕ್ಕೂಟದೊಡನೆಯ ಹಣಕಾಸಿನ ವಿಲೀನಕ್ಕೂ ಸದ್ಯಕ್ಕೆ ತಡೆ ಹಾಕಲಾಗಿದೆ.

16 ವರ್ಷಗಳ ನಂತರ ಏಂಗೆಲಾ ಮೆರ್ಕೆಲ್‍ರವರ ಜರ್ಮನ್ ಆಡಳಿತ ಯುಗ ಮುಗಿಯಲಿದೆ. ಈ ಸಂದರ್ಭದಲ್ಲಿ ಮೆರ್ಕೆಲ್ ಕೇವಲ ಜರ್ಮನಿಯನ್ನು ಬಲಿಷ್ಠಗೊಳಿಸಿದ್ದೇ ಅಲ್ಲದೆ ಐರೋಪ್ಯ ಒಕ್ಕೂಟವನ್ನು ಉಳಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಈ ಐರೋಪ್ಯ ಒಕ್ಕೂಟದ ಮುಂದಿನ ದಾರಿಯನ್ನು ಜರ್ಮನ್ ಛಾನ್ಸೆಲರ್ ಆಗುವ ಯಾರಾದರೂ ನಿರ್ಧರಿಸಬೇಕಿದೆ. ಮೂರು ದಶಕಗಳ ನಂತರ ಅಧಿಕಾರಕ್ಕೆ ಬರಲಿರುವ ಎಸ್‍ಡಿಪಿ ಯಾವ ನಿರ್ಧಾರ ತೆಗೆದುಕೊಳ್ಳುವುದು ಎಂಬುದರ ಮೇಲೆ ಇದು ನಿರ್ಭರವಾಗಲಿದೆ.

ಹೊಸ ಸಮ್ಮಿಶ್ರ ಸರ್ಕಾರಕ್ಕೆ ತನ್ನ ಉಳಿವು ಸಾಧಿಸುವುದರ ಜೊತೆಗೆ ಇನ್ನೂ ಉಲ್ಬಣಾವಸ್ಥೆಯಲ್ಲಿರುವ ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟುವ ಹಾಗೂ ಲಾಕ್‍ಡೌನ್ ಕಾರಣಗಳಿಂದ ಜರ್ಝರಿತವಾಗಿರುವ ಅರ್ಥ ವ್ಯವಸ್ಥೆಯನ್ನು ಸುಧಾರಿಸುವುದೇ ಪ್ರಮುಖ ಕಾರ್ಯಸೂಚಿಗಳಾಗಲಿವೆ.

ಜೋ ಬೈಡೆನ್ ಅವರಪ್ರಜಾಪ್ರಭುತ್ವ ಶೃಂಗಸಭೆ

ತಾವು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‍ರವರು ಪ್ರಜಾಪ್ರಭುತ್ವ ದೇಶಗಳ ಶೃಂಗಶಭೆಯನ್ನು ಇದೇ ಡಿಸೆಂಬರ್ 9 ಮತ್ತು 10 ರಂದು ನಡೆಸಲು ಹೊರಟಿದ್ದಾರೆ. ವರ್ಚುಯಲ್ ಆಗಿ ನಡೆಯಲಿರುವ ಈ ಸಭೆಗೆ ಈಗಾಗಲೇ 110 ದೇಶಗಳ ಅಧ್ಯಕ್ಷಪ್ರಧಾನಿಗಳಿಗೆ ನಿಮಂತ್ರಣ ನೀಡಲಾಗಿದೆ. ಈ ಸಭೆಯಲ್ಲಿ ಮುಖ್ಯವಾಗಿ (1) ಸರ್ವಾಧಿಕಾರಿ ಧೋರಣೆಯಿಂದ ನಮ್ಮನ್ನು ನಾವು ಸಂರಕ್ಷಿಸಿಕೊಳ್ಳುವುದು (2) ಭ್ರಷ್ಟಾಚಾರದ ವಿರುದ್ಧ ಹೋರಾಡುವುದು (3) ಮಾನವೀಯ ಹಕ್ಕುಗಳನ್ನು ಬಲಪಡಿಸುವುದರ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಇದೇ ಸಮಯದಲ್ಲಿ ಸರ್ಕಾರೇತರ ನಾಗರಿಕ ಸಂಸ್ಥೆಗಳನ್ನು ಕೂಡಾ ಒಳಗೊಂಡು ವಿಶ್ವಾದ್ಯಂತ ಪ್ರಜಾಪ್ರಭುತ್ವವನ್ನು ಬಲಪಡಿಸಲು ಬೇಕಾದ ಕಾರ್ಯಸೂಚಿಯ ಬಗ್ಗೆಯೂ ಸಹಾ ಚರ್ಚೆಯಾಗಲಿದೆ.

ಆದರೆ ಈ ಪ್ರಜಾಪ್ರಭುತ್ವ ಶೃಂಗಸಭೆಯಲ್ಲಿ ಯಾರು ಭಾಗವಹಿಸುತ್ತಾರೆ ಎಂಬುದಕ್ಕಿಂತಲೂ ಯಾರನ್ನು ಕರೆಯಲಾಗಿಲ್ಲ ಎಂಬುದೇ ವಿವಾದಕ್ಕೆ ಗ್ರಾಸವಾಗಿದೆ. ಚೀನಾ, ರಷ್ಯಾ, ಟರ್ಕಿ ಮತ್ತಿತರ ಸರ್ವಾಧಿಕಾರಿ ದೇಶಗಳನ್ನು ಶೃಂಗಸಭೆಯಿಂದ ಹೊರಗಿಡುವ ಬಗ್ಗೆ ಒಮ್ಮತವಿದ್ದರೆ ಅಮೆರಿಕದ ಮಿತ್ರರಾಷ್ಟ್ರಗಳಾದ ಸೌದಿ ಅರೇಬಿಯಾ, ಯುಎಇ, ಪಾಕಿಸ್ತಾನಕ್ಕೆ ಆಹ್ವಾನ ನೀಡಬೇಕೋ ಬೇಡವೋ ಎಂಬ ವಿಷಯದಲ್ಲಿ ಒಮ್ಮತ ಮೂಡದಾಗಿದೆ. ಆದರೆ ಪಾಕಿಸ್ತಾನಕ್ಕೆ ಆಹ್ವಾನ ನೀಡಲಾಗಿದೆಯಾದರೂ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ದೇಶಗಳಿಗೆ ನಿಮಂತ್ರಣ ನೀಡಲಾಗಿಲ್ಲ. ಆಫ್ಘಾನಿಸ್ತಾನಕ್ಕೆ ಹೇಗೆಯೂ ಆಹ್ವಾನ ನೀಡುವಂತಿಲ್ಲ. ಟೈವಾನ್ ದೇಶಕ್ಕೆ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನೀಡಲಾಗುವ ಆಹ್ವಾನಕ್ಕೆ ಚೀನಾ ತಕರಾರು ಎತ್ತಿದೆ. ಈ ಶೃಂಗಸಭೆಯು ಕೃತಕ ರೀತಿಯಲ್ಲಿ ದೇಶಗಳ ನಡುವೆ ಒಡಕು ಮೂಡಿಸುತ್ತಿದೆ ಎಂದು ಚೀನಾ ಆಕ್ಷೇಪಣೆಯೆತ್ತಿದೆ.

ಈ ಶೃಂಗಸಭೆಯಿಂದ ನಿಜವಾಗಿಯೂ ಪ್ರಜಾಪ್ರಭುತ್ವ ಬಲಗೊಳ್ಳುವುದೇ ಹಾಗೂ ಪ್ರಜಾಪ್ರಭುತ್ವವೇ ಸರ್ವಶ್ರೇಷ್ಠ ಆಡಳಿತ ವಿಧಾನ ಎಂಬುದು ಸಾಬೀತಾಗುವುದೇ ಎಂಬುದನ್ನೂ ನೋಡಬೇಕಿದೆ. ಭಾಗವಹಿಸುವ ಎಲ್ಲ ದೇಶಗಳಲ್ಲಿ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳ್ಳುವಂತೆ ಯಾವ ಮಾದರಿ ಸಿದ್ಧವಾಗಬಹುದು ಎಂಬುದೂ ಕುತೂಹಲಕಾರಿಯಾಗಿದೆ.

ಗ್ಲಾಸ್ಗೋ ಸಿಓಪಿ-26 ಪರಿಣಾಮಗಳು

ವಿಶ್ವಸಂಸ್ಥೆಯ ಅಡಿಯಲ್ಲಿನ ಫ್ರೇಮ್‍ವರ್ಕ್ ಕನ್ವೆನ್ಶನ್ ಫಾರ್ ಕ್ಲೈಮೇಟ್ ಚೇಂಜ್ (ಯುಎನ್‍ಎಫ್‍ಸಿಸಿಸಿ) ನಡೆಸುವ 26 ನೇ ಕಾನ್ಫೆರೆನ್ಸ್ ಆಫ್ ಪಾರ್ಟೀಸ್ (ಸಿಓಪಿ-26) ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ ನಡೆಯಿತು. ಬಹುನಿರೀಕ್ಷೆಯ ಈ ಶೃಂಗಸಭೆ ಭೂಮಿಯ ತಾಪಮಾನ ಹೆಚ್ಚಳದ ವಿಷಯಗಳನ್ನು ಚರ್ಚೆಗೆ ಹಾಗೂ ನ್ಯಾಯನಿರ್ಣಯಕ್ಕೆ ತಂದಿತೆಂದು ಹೇಳಿದರೆ ತಪ್ಪಾಗಲಾರದು. ವಿಶ್ವದ ಪ್ರಮುಖ ರಾಷ್ಟ್ರಗಳೆಲ್ಲವೂ ಭಾಗವಹಿಸಿದ್ದ ಈ ಸಭೆಯಲ್ಲಿ ಕಲ್ಲಿದ್ದಲು ಬಳಕೆಯನ್ನು ನಿಲ್ಲಿಸಬೇಕೆಂಬ ಬಗ್ಗೆ ಗುರುತರ ನಿರ್ಣಯ ಕೈಗೊಳ್ಳಲಾಗಿದೆ.

ಮುಖ್ಯವಾಗಿ ಭೂಮಿಯ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವುದನ್ನು ತಡೆಯುವ ಬಗ್ಗೆ ಚರ್ಚಿಸಲಾಯಿತು. ಈ ತಾಪಮಾನ ಹೆಚ್ಚಳವನ್ನು ತಡೆಯಬೇಕೆಂದರೆ ಸದಸ್ಯ ರಾಷ್ಟ್ರಗಳು ಯಾವ ತ್ಯಾಗ ಬಲಿದಾನಗಳಿಗೆ ಸಿದ್ಧರಿರಬೇಕು ಎಂಬುದೂ ಚರ್ಚೆಗೆ ಬಂದಿತ್ತು. 2030 ರೊಳಗೆ ಜಾಗತಿಕವಾಗಿ ಹೊಗೆ ಪ್ರಮಾಣವನ್ನು ಶೇಕಡಾ 45 ರಷ್ಟು ಕಡಿಮೆ ಮಾಡುವುದು ಹಾಗೂ 2050 ರವರೆಗೆ ಈ ಮಲಿನಹೊಗೆ ಪ್ರಮಾಣವನ್ನು ಶೇಕಡಾ ನೂರಷ್ಟು ಕಡಿಮೆ ಮಾಡಬೇಕು ಎಂಬ ವಿಷಯದಲ್ಲಿ ಒಮ್ಮತ ಮೂಡಿದಂತೆ ಕಂಡಿತು. ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾಗುವುದನ್ನು ತಡೆಯುವುದು ಹಾಗೂ ಯಾವುದೇ ಕಾರಣಕ್ಕೂ ಇದು 2 ಡಿಗ್ರಿ ಸೆಲ್ಶಿಯಸ್ ಆಗದಂತೆ ತಡೆಯಬೇಕೆಂದೂ ನಿರ್ಣಯಿಸಲಾಯಿತು.

ಬಹುತೇಕ ರಾಷ್ಟ್ರಗಳು ಈ ನಿರ್ಣಯದ ಪರವಾಗಿ ನಿಂತರೂ ಅಮೆರಿಕ, ಆಸ್ಟ್ರೇಲಿಯಾ, ಚೀನಾ ಹಾಗೂ ಸೌದಿ ಅರೇಬಿಯಾ ದೇಶಗಳು ಈ ನಿರ್ಣಯವನ್ನು ಬೆಂಬಲಿಸಿ ತಮ್ಮ ದೇಶೀಯ ಕಾರ್ಯಸೂಚಿ ಸಲ್ಲಸದೇ ಉಳಿದಿದ್ದು ದುರದೃಷ್ಟಕರವಾಗಿ ಗಮನ ಸೆಳೆಯಿತು. ಚೀನಾ ಮತ್ತು ಭಾರತ ಕಲ್ಲಿದ್ದಲು ಬಳಕೆಯನ್ನು ಕಡಿಮೆಗೊಳಿಸಲು ಒಪ್ಪಿದರೂ ಸಂಪೂರ್ಣವಾಗಿ ಕಲ್ಲಿದ್ದಲು ಬಳಕೆ ನಿಷೇಧವನ್ನು ಬೆಂಬಲಿಸಿಲ್ಲ.

ಅಭಿವೃದ್ಧಿ ಹೊಂದಿದ ದೇಶಗಳು ಹವಾಮಾನ ರಕ್ಷಣೆಯ ಬಗ್ಗೆ ಕೂಗೆತ್ತಿದರೆ, ಅಭಿವೃದ್ಧಿಶೀಲ ದೇಶಗಳು ‘ಹವಾಮಾನ ನ್ಯಾಯ’ದ ವಿಷಯದಲ್ಲಿ ಕೂಗೆತ್ತಿದವು. ಇಷ್ಟು ವರ್ಷ ಎಲ್ಲ ರೀತಿಯ ಕೈಗಾರೀಕರಣದ ಫಲ ಹೊಂದಿರುವ ರಾಷ್ಟ್ರಗಳು ಈಗ ಬಡರಾಷ್ಟ್ರಗಳ ಅಭಿವೃದ್ಧಿಗೆ ಮಾರಕ ನೀತಿಗಳನ್ನು ಹೇರಲು ಹೊರಟಿವೆ ಎಂದೂ ಆಪಾದಿಸಲಾಯಿತು.

ನಿಕಾಹ್ ಮಾಡಿಕೊಂಡ ಮಲಾಲಾ

ನೊಬೆಲ್ ಪ್ರಶಸ್ತಿ ವಿಜೇತೆ ಪಾಕಿಸ್ತಾನದ ಮಲಾಲಾ ಯೂಸುಫ್‍ಜಾಯಿ ಇಂಗ್ಲೆಂಡಿನ ಬರ್ಮಿಂಗ್‍ಹ್ಯಾಮ್ ನಗರದಲ್ಲಿನ ತಮ್ಮ ಮನೆಯಲ್ಲಿ ನಡೆದ ನಿಕಾಹ್ ಸಮಾರಂಭದಲ್ಲಿ ಪಾಕಿಸ್ತಾನದ ಅಸ್ಸರ್ ಮಲಿಕ್‍ರವರನ್ನು ಮದುವೆಯಾಗಿದ್ದಾರೆ. ಕೇವಲ 15 ವರ್ಷದವಳಿದ್ದಾಗ ಪಾಕಿಸ್ತಾನ ತಾಲಿಬಾನ್ ಗುಂಡೇಟಿಗೆ ಗುರಿಯಾಗಿದ್ದ ಮಲಾಲಾ ಅಂದಿನಿಂದಲೂ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಉದ್ಯೋಗದ ಪರವಾಗಿ ದನಿಯೆತ್ತಿದ್ದಾರೆ. ಮುಸ್ಲಿಮ್ ಹೆಣ್ಣುಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ವಿಷಯದಲ್ಲಿ ಅತ್ಯಂತ ಗಟ್ಟಿದನಿಯಾಗಿರುವ ಮಲಾಲಾಗೆ ಹಲವು ಪ್ರಶಸ್ತಿ ಪುರಸ್ಕಾರ ಸಂದಿವೆ.

ಕೆಲಕಾಲಗಳವರೆಗೆ ಮದುವೆಯೆಂಬ ವ್ಯವಸ್ಥೆಯನ್ನೇ ಧಿಕ್ಕರಿಸಿದ್ದ ಮಲಾಲಾ ದಿಢೀರ್ ಆಗಿ ಮದುವೆಯ ಘೋóಷಣೆ ಮಾಡಿದ್ದು ಮಲಾಲಾ ಬೆಂಬಲಿಗರಲ್ಲಿ ಸಂತಸಕ್ಕೆ ಎಡೆಮಾಡಿದೆ. ಹಲವು ಬಗೆಯ ತಿರಸ್ಕಾರ, ಅಪಹಾಸ್ಯ ಹಾಗೂ ನಿಂದನೆಗೆ ಒಳಗಾಗಿರುವ ಈ ಮುಸ್ಲಿಮ್ ಹೆಣ್ಣುಮಗಳು ತಮ್ಮ ವೈವಾಹಿಕ ಜೀವನದಲ್ಲಿ ಸುಖಕಾಣಲಿ ಎಂದು ಇವರು ಹಾರೈಸುತ್ತಿದ್ದಾರೆ.

Leave a Reply

Your email address will not be published.