ಜ್ಞಾನಪೀಠ ಪುರಸ್ಕøತ ಕೊಂಕಣಿ ಸಾಹಿತಿ ದಾಮೋದರ ಮೌಜೋ

ಯಾವುದೇ ಊರಿಗೆ ಹೋದರೂ ಹತ್ತಾರು ಯುವ ಲೇಖಕರನ್ನುಹೋರಾಟಗಾರರನ್ನು ಕೆಲವೇ ಕ್ಷಣಗಳಲ್ಲಿ ಒಂದೆಡೆ ಸೇರಿಸಿ ಭವಿತವ್ಯದ ಚರ್ಚೆಗೆ ಕುಳಿತುಕೊಳ್ಳುವ ಕಲೆ ಅವರಿಗೆ ಚೆನ್ನಾಗಿಯೇ ಕರಗತವಾಗಿದೆ. ಇದರಿಂದಾಗಿಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಸಂಭ್ರಮಿಸುವ ಜನ ದೇಶಾದ್ಯಂತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಕಂಡುಬಂದದ್ದು.

ಸಂಗಮೇಶ ಮೆಣಸಿನಕಾಯಿ

ಕೊಂಕಣಿ ಸಾಹಿತಿ ದಾಮೋದರ ಮೌಜೋ ಅವರಿಗೆ 57ನೆಯ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನಾನಾ ವಯೋಮಾನದ ಲೇಖಕರು ಮತ್ತು ಹೋರಾಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಗೈದರು.

ಕೊಂಕಣಿ ಎಂಬ ಒಂದು ಚಿಕ್ಕ ಆದರೆ ಸಾಂವಿಧಾನಿಕ ಮಾನ್ಯತೆಗಾಗಿ ಬಹುಹೋರಾಟ ಮಾಡಿದ ಭಾಷೆಯ ಲೇಖಕನೊಬ್ಬ ಭೌಗೋಳಿಕ ಗಡಿಭಾಷೆಯ ಸೀಮೆಯನ್ನು ಮೀರಿ ಸಂಚಲನ ಮೂಡಿಸಿರುವ ಪರಿಯ ಫಲಿತಾಂಶವೇ ಈ ಅಭಿನಂದನೆಗಳ ಮಹಾಪೂರ. ಭಾರತದ ಸಾಹಿತ್ಯಲೋಕದಲ್ಲಿ 1961ರಿಂದಷ್ಟೇ ಸ್ಥಾನ ಪಡೆದ ಕೊಂಕಣಿಗೆ ಎರಡನೆಯ ಜ್ಞಾನಪೀಠ ತಂದುಕೊಟ್ಟ ಹೆಗ್ಗಳಿಕೆ ಮೌಜೊ ಅವರದು. ಇದಕ್ಕೂ ಮುನ್ನ 2006ರಲ್ಲಿ ರವೀಂದ್ರ ಕೇಳೆಕರ್ ಕೊಂಕಣಿ ಮೂಲಕ ಸಾಹಿತ್ಯಕ್ಕೆ ನೀಡಿದ ಕೊಡುಗೆಗಾಗಿ ಈ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು.

ಎಪ್ಪತ್ತೇಳರ ಮಾಗಿದ ಪ್ರಾಯದಲ್ಲೂ ಮೌಜೊ, ಮಾಜೋರ್ಡಾ ಎಂಬ ದಕ್ಷಿಣ ಗೋವೆಯ ಬೀಚ್‍ಗಳ ಹಳ್ಳಿಯಿಂದ ಭಾರತದ ಯಾವುದೇ ಹಳ್ಳಿಗೂ ತಕ್ಷಣ ಹೊರಟುಬರಬಲ್ಲರು. ಇಪ್ಪತ್ತೊಂದು ಪುಸ್ತಕಗಳ ಬರಹ ಅವರನ್ನು ದಣಿಸದೇ ಮತ್ತೆ ಉತ್ಸಾಹದ ಸೆಲೆಯನ್ನು ಸ್ಫುರಿಸುತ್ತಿದೆ. 1971ರಿಂದ ಸಣ್ಣಕತೆ, ಮಕ್ಕಳಿಗಾಗಿ ಕತೆ ಪುಸ್ತಕಕಾದಂಬರಿ ಬರೆದುಕೊಂಡಿದ್ದ ಮೌಜೊ, 1975ರಲ್ಲಿ `ಕಾರ್ಮೆಲಿನ್ಮೂಲಕ ಕಾದಂಬರಿ ಪ್ರಕಾರಕ್ಕೆ ಹೊರಳಿದರು.

ಗೋವೆ ಎಂಬ ಬಹುಭಾಷಿಕ ರಾಜ್ಯದ ಈ ಬಿ.ಕಾಂ. ಪದವೀಧರ ಸಾಹಿತಿಗೆ ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಭಾಷೆಗಳ ಮೇಲೆ ಮನೆಭಾಷೆ ಕೊಂPಣಿಯಷ್ಟೇ ಹಿಡಿತವಿದೆ. ಪ್ರಾಥಮಿಕ ಶಿಕ್ಷಣವನ್ನು ಮರಾಠಿ ಮತ್ತು ಪೋರ್ತುಗಿಸ್ ಭಾಷೆಯಲ್ಲಿ ಪಡೆದರೆ, ಹೈಸ್ಕೂಲ್ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರು. ಮರಾಠಿಯಲ್ಲಿ ಬರೆದಿದ್ದರೆ ಗೋವಾಮಹಾರಾಷ್ಟ್ರದಲ್ಲಿ ಹೆಸರು ಗಳಿಸಬಹುದಿತ್ತು; ಹಿಂದಿಯಲ್ಲಿ ಬರೆದಿದ್ದರೆ ಉತ್ತರ ಭಾರತದಲ್ಲೂ ಹೆಸರು ಮಾಡಬಹುದಿತ್ತು; ಇಂಗ್ಲಿಷ್‍ನಲ್ಲಿ ಬರೆದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗಬಹುದಿತ್ತು. ಆದರೆ ಗೋವಾ ಪ್ರತ್ಯೇಕ ರಾಜ್ಯ, ಕೊಂಕಣಿಗೆ ಸಾಂವಿಧಾನಿಕ ಮಾನ್ಯತೆಗಾಗಿ ನಡೆದ ಹೋರಾಟಗಳಲ್ಲಿ ಅವಿರತವಾಗಿ ಸೆಣಸಿದ ಮೌಜೊ, ಮಾತೃಭಾಷೆಗೇ ವಿಧೇಯರಾಗಿ ಉಳಿದುಕೊಂಡು, ಅದೇ ಭಾಷೆಯ ಮೂಲಕ ಭಾರತದ ಮೇರು ಲೇಖಕರಾಗಿ ಹೊರಹೊಮ್ಮಿದ್ದಾರೆ.

ಗೋವಾದ ಜನರಿಂದ ಪ್ರೀತಿಯಿಂದ `ಭಾಯ್ಎಂದೇ ಕರೆಯಲ್ಪಡುವ ಮೌಜೊ, ತಾನು ಬೆಳೆಯುತ್ತಲೇ ಇತರ ಲೇಖಕರನ್ನು ಬೆಳೆಸುತ್ತ ಬಂದ ಸಹೃದಯಿ. ಅಂತೆಯೇ ಗೋವಾದಲ್ಲಿ ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಉನ್ನತಿಗಾಗಿ ಕೆಲಸ ಮಾಡುತ್ತಿರುವ ಕೊಂಕಣಿ ಭಾಷಾ ಮಂಡಲ್‍ನ ಅಧ್ಯಕ್ಷರಾಗಿ, ಕೊಂಕಣಿ ಪ್ರೊಜೆಚೊ ಅವಾಜ್ ಎಂಬ ಚಳವಳಿಯ ಸ್ಥಾಪಕ ಸದಸ್ಯರಾಗಿ, ಅಸ್ಮಿತಾಯಿ ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿಯಾಗಿ, ಗೋವಾ ಆರ್ಟ್ ಅಂಡ್ ಲಿಟರರಿ ಫೆಸ್ಟಿವಲ್‍ನ ಸಹಸ್ಥಾಪಕರಾಗಿ, ಪೆನ್ ದಕ್ಷಿಣ ಭಾರತದ ಸ್ಥಾಪಕ ಸದಸ್ಯರಾಗಿ ಸಕ್ರಿಯರಾಗಿದ್ದಾರೆ.

ಇತರ ಬಹುತೇಕ ಜ್ಞಾನಪೀಠ ಪ್ರಶಸ್ತಿ ಪುರಸ್ಕøತರಂತೆ ವಿಶ್ವವಿದ್ಯಾಲಯಗಳ ಸುಭದ್ರ ನೌಕರಿಯ ಬದುಕು ದಾಮೋದರ ಅವರದಲ್ಲ. ಸಾಹಿತಿಯಾಗಿ ಹಲವು ವಿದೇಶಗಳಿಂದ ಆಹ್ವಾನಿತರಾಗಿ ಫ್ರ್ಯಾಂಕ್‍ಫರ್ಟ್ ಬುಕ್ ಫೇರ್, ಚೀನ, ಅರಬ್ ದೇಶಗಳಿಗೆ ಭೇಟಿ ನೀಡಿದ್ದಾರೆ.

ಕೊಂಕಣಿಯಲ್ಲಿ ಸಣ್ಣಕತೆ, ಕಾದಂಬರಿ, ಜೀವನ ಚರಿತ್ರೆ ಬರೆಯುತ್ತಲೇ ತೆಲುಗಿನ ವೋಲ್ಗಾ ಅವರ ಬಹುಚರ್ಚಿತ ಕಾದಂಬರಿ `ವಿಮುಕ್ತವನ್ನು ಕೊಂಕಣಿಗೆ ಅನುವಾದಿಸಿದ್ದಾರೆ. `ಇಂಕ್ ಆಫ್ ಡಿಸೆಂಟ್ಎಂಬ ವಿಮರ್ಶಾ ಕೃತಿಯನ್ನೂ ಇಂಗ್ಲಿಷ್‍ನಲ್ಲಿ ಬರೆದಿದ್ದಾರೆ.

`ಕಾರ್ಮೆಲಿನ್ಕಾದಂಬರಿ ಸಾಹಿತ್ಯ ಅಕಾದೆಮಿಯಿಂದ ಇಂಗ್ಲೀಷ್ ಮತ್ತು 13 ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ಉಳಿದಂತೆ ಹಲವಾರು ಕಥಾ ಸಂಕಲನಗಳು, ಕಾದಂಬರಿಗಳು ಇಂಗ್ಲಿಷ್, ಮರಾಠಿ ಸೇರಿದಂತೆ ಹಲವು ಭಾಷೆಗಳಿಗೆ ಅನುವಾದಗೊಂಡಿವೆ.

ಕತೆಗಾರ ಮೌಜೊ ಅವರ ಲೇಖನಿ ಸಿನಿಮಾ ಕ್ಷೇತ್ರಕ್ಕೂ ಒಲಿದು ಅಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ತಂದುಕೊಂಟ್ಟಿದೆ. `ಅಲೀಶಾಎಂಬ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾಗೆ ಚಿತ್ರಕತೆಸಂಭಾಷಣೆ, `ಶಿತೂಮತ್ತು `ಮರಿಯಾಎಂಬ ಕೊಂಕಣಿ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಈ ಎರಡೂ ಚಿತ್ರಗಳು 25 ವಾರಗಳವರೆಗೆ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿವೆ. ತಮ್ಮ ಕಾದಂಬರಿ `ಸೂದ್ಗೆ ತಾವೇ ಚಿತ್ರಕತೆ ಬರೆದಿದ್ದರು ಮೌಜೊ. ಇವರೇ ಸಂಭಾಷಣೆ ಬರೆದಿರುವ `ಎನೆಮಿ?’ ಚಿತ್ರ ಸಿಲ್ವರ್ ಪೀಕಾಕ್ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ.

ಭದ್ರತೆಯಲ್ಲಿ ಬದುಕು

ಜನಿಸಿದ್ದು ಗೌಡ ಸಾರಸ್ವತ ಬ್ರಾಹ್ಮಣರ ಕುಟುಂಬದಲ್ಲಿ ಆದರೂ ಮೌಜೊ ಬೆಳೆದದ್ದು ಕ್ಯಾಥೊಲಿಕ್ ಚರ್ಚ್‍ನ ವಾರ್ಡ್‍ನಲ್ಲಿ. ಮುಂಬಯಿಯಲ್ಲಿ ಬಿ.ಕಾಂ. ಡಿಗ್ರಿ ಪಡೆದು ಹಳ್ಳಿಗೆ ಹಿಂತಿರುಗಿ, ಕುಟುಂಬದವರು ನಡೆಸುತ್ತಿದ್ದ ಅಂಗಡಿಯ ವ್ಯವಹಾರವನ್ನು ಮುಂದುವರಿಸಿದರು. ಅಂಗಡಿಯಲ್ಲಿ ಕುಳಿತಾಗ ಕಿವಿಗೆ ಬೀಳುತ್ತಿದ್ದ ಘಟನೆಗಳು ಕತೆಗಳ ರೂಪದಲ್ಲಿ ಹೊರಬೀಳತೊಡಗಿದವು. ಇವರ ಕತೆಕಾದಂಬರಿಗಳು ನೊಂದವರ ದನಿಯಾಗತೊಡಗಿದವು. ಒಂದೆಡೆ ಭಾಷೆಗಾಗಿ ಹೋರಾಟ, ಇನ್ನೊಂದೆಡೆ ಬದುಕಿಗಾಗಿ ಆರ್ತನಾದ. ವೈಚಾರಿಕ ಪ್ರಜ್ಞೆ ಬೆಳೆದಂತೆ ಮೂಲಭೂತವಾದಿಗಳ ವಿರುದ್ಧ ಬಹಿರಂಗವಾಗಿ ಮಾತನಾಡತೊಡಗಿದರು.

ಕನ್ನಡದೊಂದಿಗೆ ಸಂಬಂಧ

ಮೌಜೊ ಅವರ ಕಾದಂಬರಿ `ಕಾರ್ಮೆಲಿನ್‘, ಸಾಹಿತ್ಯ ಅಕಾದೆಮಿಯಿಂದ ಕನ್ನಡದಲ್ಲಿ ಪ್ರಕಟವಾಗಿದೆ. ಇತ್ತೀಚೆಗಷ್ಟೇ `ಜೀವ್ ದೀವಂ ಕೈ ಚ್ಯಾ ಮಾರುಮ್ಕಾದಂಬರಿ ಕನ್ನಡದಲ್ಲಿ ಪ್ರಕಟವಾಗಿದೆ. ಶಾ.ಮಂ.ಕೃಷ್ಣರಾಯರು `ದಾಮೋದರ ಮೌಜೊ ವಾಚಿಕೆಎಂಬ ಕೃತಿಯನ್ನು ಕನ್ನಡದಲ್ಲಿ ಸಂಪಾದಿಸಿದ್ದಾರೆ.

ಸಂಶೋಧಕ ಡಾ.ಎಂಎಂ ಕಲಬುರ್ಗಿ ಅವರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಮೌಜೊ, ಕಲಬುರ್ಗಿ ಅವರ ನೇತೃತ್ವದಲ್ಲಿ ನಡೆದ 2,500 ವಚನಗಳ ಅನುವಾದದ ಯೋಜನೆಯಲ್ಲಿ ಕೊಂಕಣಿ ಅನುವಾದದ ಕೃತಿಯನ್ನು ಮತ್ತೋರ್ವ ಸಂಶೋಧಕಿ ಗೀತಾ ಶೆಣಯ ಅವರೊಂದಿಗೆ ಸಂಪಾದನೆ ಮಾಡಿದ್ದಾರೆ. ಈ ಅನುವಾದದ ಹೊಣೆ ಹೊತ್ತಿದ್ದ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಗುರುತಿಸುವಂತೆ ಮೌಜೊ ಅವರು 12ನೆಯ ಶತಮಾನದ ಶರಣರ ವಚನಗಳ ಅನುಭವ ಮತ್ತು ಅನುಭಾವವನ್ನು ಕೊಂಕಣಿಗೆ ಅನುವಾದಿಸುವ ಕೆಲಸವನ್ನು ಸಮರ್ಥವಾಗಿ ಮಾಡಿದ್ದಾರೆ.

ವಚನಗಳು ವಿಶ್ವದ ಯಾವುದೇ ಶ್ರೇಷ್ಠ ಸಾಹಿತ್ಯದ ಸಾಲಿಗೆ ಸೇರುವ ಸಾರ್ವಕಾಲಿಕ ಗುಣ ಹೊಂದಿವೆ ಎನ್ನುವ ಮೌಜೊ, “ಕೊಂಕಣಿ ಭಾಷಿಕರು ಗೋವಾದಿಂದ ಸ್ಥಳಾಂತರಗೊಂಡಾಗ ನಮಗೆ ಆಶ್ರಯ ನೀಡಿದ್ದು ಕನ್ನಡಿಗರುಎಂದು ಕೃತಜತೆಯಿಂದ ಸ್ಮರಿಸುತ್ತಾರೆ. ಕುವೆಂಪು, ಅನಂತಮೂರ್ತಿ, ಎಸ್.ಎಲ್.ಬೈರಪ್ಪ, ವಿವೇಕ್ ಶಾನಭಾಗ್ ಕೃತಿಗಳ ಇಂಗ್ಲಿಷ್ ಅನುವಾದಗಳನ್ನು ಓದಿಕೊಂಡಿದ್ದಾರೆ.

ಬಹುಶಃ ಇದೇ ಕಾರಣಕ್ಕೆ ಇರಬೇಕು. ಗೌರಿ ಲಂಕೇಶ್ ಹತ್ಯೆಯ ಆರೋಪಿಗಳು, ಮೌಜೊ ಅವರೂ ಹಿಟ್ ಲಿಸ್ಟ್‍ನಲ್ಲಿರುವ ಮಾಹಿತಿಯನ್ನು ಬಾಯಿಬಿಡುತ್ತಲೇ ಕರ್ನಾಟಕದ ಎಸ್..ಟಿ., ಗೋವಾದ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರ ಪರಿಣಾಮವಾಗಿ ಮೌಜೊ ಅವರಿಗೆ ಗೋವಾ ಸರಕಾರ 2018ರಿಂದ ಗನ್‍ಮ್ಯಾನ್ ಭದ್ರತೆಯನ್ನು ಒದಗಿಸಿದೆ. ಗೋವಾ ಅಷ್ಟೇ ಅಲ್ಲ ಇಡೀ ದೇಶದಲ್ಲಿ ಬಹುತ್ವವನ್ನು ಉಳಿಸಲು ಹೋರಾಡುತ್ತಿರುವ ಅಗ್ರಗಣ್ಯ ಲೇಖಕರಲ್ಲಿ ಒಬ್ಬರಾಗಿರುವ ಭಾಯ್, ಹಿಂದೂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ, ಸಾಹಿತ್ಯ ಅಕಾದೆಮಿಯ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಲ್ಲದೇ, ದಕ್ಷಿಣಾಯನ ಚಳವಳಿಯ ಮುಂಚೂಣಿಯಲ್ಲಿ ನಿಂತು ಉತ್ತರದಕ್ಷಿಣ ರಾಜ್ಯಗಳ ಲೇಖಕರಹೋರಾಟಗಾರರ ಮಧ್ಯೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ.

ಹಾಗೆ ನೋಡಿದರೆ ಮೌಜೊ ಅವರೊಳಗಿನ ಲೇಖಕನಿಗಿಂತ ಹೋರಾಟಗಾರನೇ ಹಿರಿಯನಾಗಿದ್ದಾನೆ. ಅವರ ಮೊದಲ ಕೃತಿ ಪ್ರಕಟವಾದದ್ದು 1971ರಲ್ಲಿ. ಆದರೆ 1967ರಲ್ಲಿಯೇ ಸ್ವತಂತ್ರಗೊಂಡಿದ್ದ ಗೋವಾದ ರಾಜಕೀಯ ಸ್ಥಾನಮಾನ ನಿರ್ಧರಿಸಲು ನಡೆದ `ಓಪಿನಿಯನ್ ಪೊಲ್ನಲ್ಲಿ ಭಾಗವಹಿಸಿದ್ದರು. `ಗೋವಾದ ಗುರುತು ವಿಶಿಷ್ಟವಾಗಿದೆ. ನೆರೆಯ ಮಹಾರಾಷ್ಟ್ರಕ್ಕೆ ನಮ್ಮನ್ನು ವಿಲೀನಗೊಳಿಸಬೇಕಿಲ್ಲ’ ಎಂಬ ಜಾಗೃತಿ ಆಂದೋಲನವನ್ನೇ ಶುರು ಮಾಡಿದರು. ಅಂದಿನ ಹೋರಾಟದ ಪ್ರವೃತ್ತಿ ಇಂದಿಗೂ ಹಾಗೆಯೇ ಇದೆ.

ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ಭದ್ರತೆಯಲ್ಲೇ ಬದುಕು ನಡೆದಿದ್ದರೂ ಇವರ ಮುಖದಲ್ಲಿ ಅದ್ಯಾವುದರ ಚಿಂತೆಕಳವಳ ಕಾಣಿಸದು. ಕಲಬುರ್ಗಿ ಹತ್ಯೆಯ ನಂತರ ಏಕಸಂಸ್ಕøತಿಯ ಹೇರಿಕೆ ವಿರುದ್ಧ ಸಮರ ಸಾರಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಳಿವಿಗಾಗಿ ನಗುಮೊಗದೊಂದಿಗೆ ಹೋರಾಡುತ್ತಿದ್ದಾರೆ. ಈ ಹೋರಾಟದ ಮಗ್ನತೆಯಲ್ಲಿ ಅವರಿಗೆ ಮಡಗಾಂವ್, ಧಾರವಾಡ, ಬೆಂಗಳೂರು, ಮುಂಬಯಿ, ಹೈದರಾಬಾದ್, ದಂಡಿ ಎಲ್ಲವೂ ಒಂದೇ ಆಗಿವೆ, ಗನ್‍ಮ್ಯಾನ್ ಭದ್ರತೆ ಅವರ ಪ್ರಯಾಣಕ್ಕೆಸಂಚಾರಕ್ಕೆ ಭಾರ ಅನ್ನಿಸುತ್ತಿದ್ದರೂ, ತಡೆ ಏನಾಗಿಲ್ಲ.

ಯಾವುದೇ ಊರಿಗೆ ಹೋದರೂ ಹತ್ತಾರು ಯುವ ಲೇಖಕರನ್ನುಹೋರಾಟಗಾರರನ್ನು ಕೆಲವೇ ಕ್ಷಣಗಳಲ್ಲಿ ಒಂದೆಡೆ ಸೇರಿಸಿ ಭವಿತವ್ಯದ ಚರ್ಚೆಗೆ ಕುಳಿತುಕೊಳ್ಳುವ ಕಲೆ ಅವರಿಗೆ ಚೆನ್ನಾಗಿಯೇ ಕರಗತವಾಗಿದೆ. ಇದರಿಂದಾಗಿಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿ ಘೋಷಣೆಯಾಗುತ್ತಲೇ ಸಂಭ್ರಮಿಸುವ ಜನ ದೇಶಾದ್ಯಂತ ಅಷ್ಟೇ ಅಲ್ಲ, ವಿದೇಶಗಳಲ್ಲೂ ಕಂಡುಬಂದದ್ದು.

Leave a Reply

Your email address will not be published.